ಜೋಗಿ ಮೆಚ್ಚಿದ ರಾಜೇಶ್ ಶೆಟ್ಟಿಯ ʼಡ್ರಾಮಾ ಕಂಪೆನಿʼ

ಜೋಗಿ

ರಾಜೇಶ್ ಶೆಟ್ಟಿ ಕತೆಗಳನ್ನು ನಾನು ಅವರು ಬರೆದಾಗೆಲ್ಲ ಓದುತ್ತಾ ಬಂದಿದ್ದೇನೆ. ಅವರು ಬರೆಯುವ ಕತೆಗಳು ಎಷ್ಟೋ ಸಲ ನಾನು ಬರೆಯಬೇಕಾಗಿದ್ದ ಕತೆಗಳಂತೆಯೋ ನಾನು ಬರೆದು ಮರೆತುಹೋದ ಕತೆಗಳಂತೆಯೋ ಕಾಣಿಸುತ್ತವೆ. ಇದಕ್ಕೆ ಕಾರಣ ಅವರ ಶೈಲಿಯಾಗಲೀ, ಕತೆ ಹೇಳುವ ಕ್ರಮವಾಗಲೀ ಅಲ್ಲ. ಆ ಕತೆಗಳಲ್ಲಿ ಬರುವ ಪಾತ್ರಗಳನ್ನು ನಾನು ಎಲ್ಲೋ ಭೇಟಿಯಾಗಿದ್ದೇನೆ, ಅವರ ಜೊತೆ ಕೆಲವು ಹೊತ್ತು ಕಳೆದಿದ್ದೇನೆ ಅನ್ನಿಸುವುದು.

ಇಂಥ ಅನಿಸಿಕೆ ನನಗೆ ಐಸಾಕ್ ಬಾಬೆಲ್ ಕತೆಗಳನ್ನು ಓದುವಾಗಲೂ ಬರುತ್ತಿತ್ತು. ರಷ್ಯಾದ ಐಸಾಕ್ ಒಂದೂವರೆ, ಎರಡು ಪುಟಗಳಲ್ಲೇ ಹೊಸ ಜಗತ್ತನ್ನು ಕಾಣಿಸಬಲ್ಲವನಾಗಿದ್ದ. ಅತ್ಯಂತ ಕ್ರೌರ್ಯವನ್ನು ಕೂಡ ಸರಳವಾಗಿ ಹೇಳಿಬಿಡುತ್ತಿದ್ದ. ಆ ಕಾಲದ ರಷ್ಯಾದಲ್ಲಿ ಆಗುತ್ತಿದ್ದ ಬದಲಾವಣೆಗಳಲ್ಲಿ ಒಂದು ಉತ್ಕಟವಾದ ಮತ್ತಿನ ಜತೆ ಸಮೀಕರಿಸಿ ಹೇಳುತ್ತಿದ್ದ.

ರಾಜೇಶ್ ಅಂಥದ್ದನ್ನೇ ಇಲ್ಲೂ ಮಾಡಿದ್ದಾರೆ. ಅವರ ಕತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವುದು ಭಯ ಹುಟ್ಟಿಸುವ ಮನೋಲೋಕ. ಅವರ ಎಲ್ಲಾ ಕತೆಗಳೂ ಮನಸ್ಸಿನ ಒಳಗೆ ನಡೆಯುವ ಕಥಾನಕಗಳೇ. ಹಳ್ಳಿಯಿಂದ ನಗರಕ್ಕೆ ಬಂದು ಮತ್ತೆ ಮರಳಲಾರದ ಜಾನ್ಹವಿಯಾಗಲೀ, ಗಣೇಶ ಬೀಡಿ ಮತ್ತು ಮೆಟ್ರೋ ಬೀಡಿ ಸೇದುತ್ತಿದ್ದ ಪರಮದ್ವೇಷಿಗಳಾಗಲೀ, ಮಹಿಷಾಸುರನ ವೇಷ ಹಾಕಿಕೊಂಡು ತನ್ನ ಕೊನೆಯನ್ನು ತಾನೇ ಕಂಡುಕೊಳ್ಳಲು ಹೊರಟ ಮುರಿದ ಪ್ರೇಮದ ಹತಾಶ ಜೀವವಾಗಲೀ ಮತ್ತೆ ಮತ್ತೆ ಹುಡುಕುತ್ತಿರುವುದು ತನ್ನೊಳಗಿನ ಜಗತ್ತನ್ನೇ.

ಒಳಗಿನ ಜಗತ್ತಿನ ರೂಪಕವಾಗಿ ರಾಜೇಶ್ ಶೆಟ್ಟಿ, ಹೊರಜಗತ್ತಿನ ವಿವರಗಳನ್ನು ಬಳಸಿಕೊಳ್ಳುವುದನ್ನು ಕೂಡ ನಾವು ಈ ಕತೆಯಲ್ಲಿ ಕಾಣಬಹುದು. ಇದ್ದಕ್ಕಿದ್ದಂತೆ ಎದುರಾಗುವ ಜಗತ್ತೊಂದು ತನ್ನ ಮೇಲೆ ಮಗುಚಿಬಿದ್ದ ಆಘಾತ ಮತ್ತು ಅಚ್ಚರಿಗಳನ್ನು ಅವರು ಸೊಗಸಾಗಿ ನಿಭಾಯಿಸುತ್ತಾರೆ. ಕತೆಯನ್ನು ಕಟ್ಟುವ ಅವರ ಕ್ರಮದಲ್ಲಿ ಓಟವೂ ಇದೆ, ವಿರಾಮವೂ ಇದೆ. ಯಾವುದೇ ಕತೆ ಅಲ್ಲಲ್ಲಿ ಕೊಂಚ ನಿಂತು, ಕಣ್ಣಿಗೆ ಕಣ್ಣುಕೊಟ್ಟು ಮಾತಾಡಿ, ನಂತರ ಮುಂದೆ ಸಾಗಬೇಕು. ಅದು ಆ ಕತೆಯನ್ನು ಆಪ್ತವಾಗಿಸುತ್ತದೆ.

ಹುಟ್ಟಿದ ಊರನ್ನು ಬಿಟ್ಟು ಬರುವ ಸಂಕಟ ಮತ್ತು ಬಿಟ್ಟು ಬಂದ ನಂತರ ಮರಳಿ ಊರಿಗೆ ಹೋಗುವ ಸಂಕಟ- ಈ ಎರಡೂ ಅವರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ಅವರ ಕತೆಗಳ ತುಂಬ ಊರುಬಿಟ್ಟವರೇ ಇದ್ದಾರೆ. ಹಾಗೆ ಊರು ತೊರೆದವರು, ಮತ್ತೆ ಊರು ಸೇರುವ ಹೊತ್ತಿಗೆ ಎಲ್ಲವೂ ಬದಲಾಗಿರುತ್ತದೆ ಅಥವಾ ಹಾಗೆ ಅನ್ನಿಸತೊಡಗುತ್ತದೆ.

ತನ್ಮಯತೆಯಿಂದ ನೋಡುವ ಸಿನಿಮಾದಲ್ಲಿ ಇದ್ದಕ್ಕಿದ್ದಂತೆ ಎದುರಾಗುವ ಮಧ್ಯಂತರದ ಹದಿನೈದು ನಿಮಿಷಗಳ ಬಿಡುವು, ನಮ್ಮನ್ನು ಕತೆಯಿಂದ ಒಂದು ಸಲ ದೂರ ಒಯ್ದುಬಿಡುವಂತೆ, ನಂತರದ ಕತೆಗಳೆಲ್ಲ ಎಂದೋ ಕೇಳಿದ ಕತೆಯ ಮುಂದುವರಿಕೆಯಂತೆ ಅನ್ನಿಸುತ್ತದಲ್ಲ, ಅಂಥದ್ದೇ ಭಾವವನ್ನು ಬದುಕು ಕೂಡ ಎಷ್ಟೋ ಸಲ ಕೊಡುತ್ತಿರುತ್ತದೆ. ಇಲ್ಲಿಯ ತನಕ ಬದುಕಿದ್ದು ತನ್ನ ಬದುಕೇ ಅಲ್ಲ ಅನ್ನಿಸಿ ನಡೆದ ಘಟನೆಗಳನ್ನೆಲ್ಲ ರೀವೈಂಡ್ ಮಾಡಿ ನೋಡಿಕೊಳ್ಳುವಂಥಾಗುತ್ತದೆ. ಅದನ್ನು ರಾಜೇಶ್ ಶೆಟ್ಟಿ ಕತೆಗಳ ನಾಯಕರು ಮತ್ತೆ ಮತ್ತೆ ಎದುರಿಸುತ್ತಾರೆ.

ಇಲ್ಲಿ ಬರುವ ಎಲ್ಲಾ ಕತೆಗಳ ಮುಖ್ಯಪಾತ್ರಗಳ ದುರಂತ, ಅಯಾಚಿತವಾಗಿಯೇ ಬರುವುದನ್ನು ನಾವು ಗಮನಿಸಬಹುದು. ಚಂದ್ರಹಾಸ ಕತೆಯ ನಾಯಕ ಒಂದು ಹೊಸ ಫೋನ್ ಕೊಳ್ಳುತ್ತಾನೆ. ಅವನಿಗೆ ಸಿಕ್ಕ ಸಿಮ್ ಒಬ್ಬ ಸೂಪರ್ ಸ್ಟಾರ್ ಬಳಸಿ ಎಸೆದದ್ದಾಗಿರುತ್ತದೆ. ಅವನ ಕರೆಗಳೆಲ್ಲ ಈತನಿಗೆ ಬರತೊಡಗುತ್ತವೆ. ಅಂಥ ಕರೆಗಳಲ್ಲಿ ಒಂದು ಆಕರ್ಷಕ ಕರೆ ಅವನ ಬದುಕನ್ನೇ ಬದಲಾಯಿಸುತ್ತದೆ.

ತನ್ನ ಹುಡುಕಾಟ ಫಲಿಸದ ನಿಜಗುಣ, ತನ್ನ ಪ್ರೇಮವನ್ನು ಕಳಕೊಂಡ ಕೋಳಿ ಅಂಕದ ಹೆಗಡೆ, ತಾನು ಮಹಿಷಾಸುರನಾಗುವ ದಿನಕ್ಕೆ ಕಾಯುತ್ತಿದ್ದ ಮೃತ್ಯುಂಜಯ, ಜಾಹ್ನವಿಯಂತೆಯೇ ಆಗುವ ಯತ್ನದಲ್ಲಿ ಕಳೆದುಹೋಗುವ ಕಿಟ್ಟಿ, ಕರೆಸಿಕೊಂಡು ಸೇಡು ತೀರಿಸಿಕೊಳ್ಳುವ ಪಾರ್ವತಿ- ಹೀಗೆ ಒಂದೊಂದು ಪಾತ್ರಗಳೂ ನಮ್ಮನ್ನು ಬದುಕಿನ ಅಂಚಿಗೆ ಒಯ್ಯುತ್ತವೆ.

ನವ್ಯದ ಆರಂಭದಲ್ಲಿ ಶಾಂತಿನಾಥ ದೇಸಾಯಿ ಮನುಷ್ಯನ ಅಂತರಂಗದ ಶೋಧದ ಕತೆಗಳನ್ನು ಬರೆಯುತ್ತಿದ್ದರು. ಯಶವಂತ ಚಿತ್ತಾಲರ ಶಿಕಾರಿ ಕಾದಂಬರಿಯ ಜಗತ್ತು ಒಳಗಿನದ್ದು, ವಿವರ ಹೊರಗಿನದು. ಹೀಗೆ ಹೊರಗಿನ ವಿವರಗಳನ್ನಿಟ್ಟುಕೊಂಡು ಒಳಗಿನ ಜಗತ್ತನ್ನು ತೋರುವ ಕಥನಶೈಲಿಯನ್ನು ರಾಜೇಶ್ ಶೆಟ್ಟಿ ಬಹಳ ಸಮರ್ಥವಾಗಿ ರೂಢಿಸಿಕೊಂಡಿದ್ದಾರೆ. ಅವರ ಕಥಾಪಯಣದ ಮೊದಲ ಹೆಜ್ಜೆ ಇದು. ಈ ಮೊದಲ ಪ್ರಯತ್ನವೇ ಅವರ ಪ್ರತಿಭೆ ಮತ್ತು ಶಕ್ತಿಯನ್ನು ತೋರುತ್ತವೆ.

‍ಲೇಖಕರು Admin

January 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: