ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ : ‘Elegant eight’ – ಆ ಗೆಳತಿಯರ ಸಾಂಗತ್ಯ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ – 148

ಮನೆ ಮಾರುವುದೆಂದು ನಿರ್ಧಾರವಾದ ಮೇಲೆ ಒಂದು ರೀತಿಯ ವಿಷಾದ ಮನೆಯಲ್ಲಿ ಆವರಿಸಿಕೊಂಡುಬಿಟ್ಟಿತ್ತು. ನಮಗೇ ಅರಿವಿಲ್ಲದಂತೆ ಮಾತುಗಳು ಕಡಿಮೆಯಾಗಿ ಕೊರೆಯುವ ಮೌನ ಆವರಿಸಿಕೊಂಡು ಯಾಂತ್ರಿಕವಾಗಿ ದಿನಗಳು ಉರುಳತೊಡಗಿದವು. ಈ ಮಧ್ಯೆ ತನ್ನ ಓದಿನ ಕಾರಣಕ್ಕೆ ಮನೆ ಮಾರುವ ನಿರ್ಧಾರ ಮಾಡಿ ಅಪ್ಪ ಅಮ್ಮ ಒಳಗೊಳಗೇ ಸಂಕಟಪಡುತ್ತಿದ್ದಾರೆ ಎಂದು ರಾಧಿಕಾ ಹಳಹಳಿಸತೊಡಗಿದಳು. ಅವಳಿಗೆ ಸಮಾಧಾನ ಮಾಡಿ ಸಂತೈಸುವುದೇ ಪ್ರಯಾಸದ ಕೆಲಸವಾಗಿಹೋಯಿತು. ಅನಿರುದ್ಧನದು ಮತ್ತೊಂದು ಬಗೆಯ ಮೂಕ ಸಂಕಟ. ಮಹಾ ಸ್ನೇಹಜೀವಿಯಾದ ಅವನು ಅಲ್ಲಿ ತನ್ನದೇ ಬಳಗವನ್ನು ಕಟ್ಟಿಕೊಂಡಿದ್ದ. ಅವರೆಲ್ಲರಿಗೂ ಅನಿರುದ್ಧನೆಂದರೆ ಅಚ್ಚುಮೆಚ್ಚು. ಅವನ ಬಳಗದಲ್ಲಿ ಎಲ್ಲ ವರ್ಗಗಳಿಗೆ ಸೇರಿದ ಹುಡುಗರಿದ್ದರು. ಯಾರಲ್ಲಿಯೂ ತರತಮವೆಣಿಸದ ಅನಿರುದ್ಧ ಓದಿನಲ್ಲಿ ಹಿಂದುಳಿದಿದ್ದ ತನ್ನ ಗೆಳೆಯರಿಗೆ ಬಿಡುವಿನ ಸಮಯದಲ್ಲಿ ಪಾಠ ಹೇಳಿಕೊಡುತ್ತಿದ್ದ. ಅವರ ಸಣ್ಣ ಪುಟ್ಟ ವ್ಯಾಜ್ಯಗಳನ್ನೂ ಸಮಸ್ಯೆಗಳನ್ನೂ ಪರಿಹರಿಸಿ ಸಂತೈಸುತ್ತಿದ್ದ. ಹಾಗಾಗಿ ಅಲ್ಲಿನ ಸುತ್ತಮುತ್ತಲಿನವರಿಗೆಲ್ಲಾ ಅನಿರುದ್ಧನೆಂದರೆ ಬಲು ಪ್ರೀತಿ. ಈಗ ತನ್ನ ಪ್ರೀತಿಯ ಗೆಳೆಯರನ್ನೆಲ್ಲಾ ತೊರೆದು ದೂರ ಹೋಗಬೇಕೆಂದರೆ ಅವನಿಗೆ ಕಷ್ಟವಾಗದೇ ಇರುತ್ತದೆಯೇ? ಅವನೆಂದೂ ವಿಶೇಷವಾಗಿ ತನ್ನ ಭಾವನೆಗಳನ್ನು ಪ್ರಕಟಿಸಿದವನಲ್ಲ. ಆದರೆ ಒಳಗೊಳಗೇ ಸಾಕಷ್ಟು ಒದ್ದಾಡುತ್ತಿದ್ದಾನೆಂಬುದು ನಮ್ಮ ಅರಿವಿಗೆ ಬರುತ್ತಿತ್ತು. ಒಂದು ದಿನ ಅವನಿಗೆ ಅದೇನೆನ್ನಿಸಿತೋ , ನನ್ನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅತ್ತುಬಿಟ್ಟ. ಅವನ ಈ ಅನಿರೀಕ್ಷಿತ ವರ್ತನೆಯಿಂದ ತಬ್ಬಿಬ್ಬಾಗಿ ಮತ್ತಷ್ಟು ತಪ್ಪಿತಸ್ಥ ಭಾವಕ್ಕೆ ಜಾರಿದ ನನಗೆ ಅವನನ್ನು ಸರಿಯಾಗಿ ಸಂತೈಸಲೂ ತೋಚಲಿಲ್ಲ. ನಿಧಾನವಾಗಿ ಕಣ್ಣೊರೆಸಿಕೊಂಡು ತಾನೇ ಸಮಾಧಾನ ಮಾಡಿಕೊಂಡು ಕೆಳಗಿಳಿದು ಹೋದವನು ಮತ್ತೆಂದೂ ಮನೆಯ ವಿಷಯ ಮಾತಾಡಲಿಲ್ಲ.

ಎಷ್ಟೇ ನೋವಾದರೂ ಶೋಕಿಸುತ್ತಾ ಸುಮ್ಮನೆ ಕೂರುವ ಸಮಯ ಅದಾಗಿರಲಿಲ್ಲ. ರಾಧಿಕಾಳನ್ನು ಕಳಿಸಿಕೊಡಲು ವ್ಯವಸ್ಥೆ ಮಾಡಿಕೊಳ್ಳಬೇಕು; ನಾವು ಹೊಸ ಗೂಡೊಂದನ್ನು ಕಟ್ಟಿಕೊಳ್ಳಬೇಕು ; ಎಲ್ಲಕ್ಕಿಂತ ಮುಖ್ಯವಾಗಿ ಈ ಅನಿವಾರ್ಯ ಬದಲಾವಣೆಯನ್ನು ಒಪ್ಪಿಕೊಳ್ಳಲು ಮನಸ್ಸನ್ನು ಹದಗೊಳಿಸಬೇಕು!

ಹೆಗಡೆಯವರಿಂದ ಒಂದಷ್ಟು ಹಣವನ್ನು ಮುಂಗಡವಾಗಿ ಪಡೆದು ರಾಧಿಕಾಳ ಕಾಲೇಜಿಗೆ ಹಾಗೂ ಹಾಸ್ಟೆಲ್ ಗೆ ಕಟ್ಟಬೇಕಾಗಿದ್ದ ಶುಲ್ಕಗಳನ್ನು ಕಟ್ಟಿ ಮುಖ್ಯ ಕೆಲಸವನ್ನು ಪೂರೈಸಿದೆವು. ಅವಳು ಹೊರಡಲು ಬೇಕಾಗಿದ್ದ ವೀಸಾ ಇತ್ಯಾದಿಗಳಿಗೆ ಒಂದೆಡೆ ಓಡಾಡುತ್ತಾ ನಾವು ನೆಲೆಯೂರಲು ಪರ್ಯಾಯ ವ್ಯವಸ್ಥೆಯ ಕೆಲಸವನ್ನೂ ಆರಂಭಿಸಿದೆವು. ಸಾಕಷ್ಟು ಬಡಾವಣೆಗಳಲ್ಲಿ ಅಲೆದು ಹತ್ತಾರು ಅಪಾರ್ಟ್ ಮೆಂಟ್ ಗಳನ್ನು ನೋಡಿದರೂ ಯಾಕೋ ಯಾವುದೂ ಮನಸ್ಸಿಗೆ ಹಿಡಿಸಲೇ ಇಲ್ಲ! ಪ್ರಾರಂಭದಲ್ಲಂತೂ ಈವರೆಗೆ ವಾಸವಿರುವ ಪುಟ್ಟ ಕನಸಿನರಮನೆಯ ತುಲನೆಯಲ್ಲಿ ಒಂದಷ್ಟು ಮನೆ—ಫ್ಲ್ಯಾಟ್ ಗಳನ್ನು ತಿರಸ್ಕರಿಸಿಬಿಟ್ಟೆವು! ಬಹಳಷ್ಟು ಫ್ಲ್ಯಾಟ್ ಗಳು ‘ಮೂರು ಬೆಡ್ ರೂಂ’ ಎಂಬ ತಲೆಬರಹ ಹೊತ್ತಿದ್ದರೂ ಅಲ್ಲಿದ್ದದ್ದು ಪುಟ್ಟ ಗೂಡುಗಳಂತಹ ಕೋಣೆಗಳು! ಮತ್ತಷ್ಟು ಫ್ಲ್ಯಾಟ್ ಗಳಿಗೆ, ನಾವು ಮನೆಯಲ್ಲಿ ಎಗ್ಗಿಲ್ಲದೆ ಪೇರಿಸಿಕೊಂಡಿದ್ದ ಸಾಮಾನು ಸರಂಜಾಮುಗಳನ್ನೂ ರಾಧಿಕಾಳ ಕಲಾಕೃತಿಗಳನ್ನೂ ವಸ್ತುವಿಶೇಷಗಳನ್ನೂ ತುಂಬಿಕೊಳ್ಳುವ ಕ್ಷಮತೆಯೇ ಇರಲಿಲ್ಲ! ಈ ಹುಡುಕಾಟದ ಸಮಯದಲ್ಲಿ ಒಂದೇ ಒಂದು ಜಾಗವನ್ನು ನೋಡಲೂ ಅನಿರುದ್ಧ ಬರಲೇ ಇಲ್ಲ. ‘ನೀವು ನೋಡಿ ತೀರ್ಮಾನಿಸಿ…ನಾನು ಎಲ್ಲಿಗೂ ಬರುವುದಿಲ್ಲ. ನನಗೆ ಸರಿಹೋಗುವುದಿಲ್ಲ’ ಎಂದು ನೇರವಾಗಿ ಹೇಳಿಬಿಟ್ಟ.

ಈ ಹುಡುಕಾಟದ ನಡುವೆಯೇ ರಾಧಿಕಾ ಲಂಡನ್ ಗೆ ಹೊರಡುವ ದಿನ ಬಂದೇಬಿಟ್ಟಿತು. ಈಗಿನ ಮಕ್ಕಳಿಗೆ ಅದೇನು ಧೈರ್ಯವೋ ಕಾಣೆ…ಒಬ್ಬಳನ್ನೇ ದೂರದ ಪರದೇಶಕ್ಕೆ ಕಳಿಸುತ್ತಿದ್ದೇವಲ್ಲಾ ಎಂದು ನಾವು ಆತಂಕ ಪಟ್ಟುಕೊಳ್ಳುತ್ತಿದ್ದರೆ ಅವಳು ನಮಗೇ ಸಮಾಧಾನ ಹೇಳುತ್ತಿದ್ದಳು: ‘ನೀವೇನೂ tension ತೊಗೊಬೇಡಿ ಮಮ್ಮಿ—ಡ್ಯಾಡಿ….ಧೈರ್ಯವಾಗಿರಿ. ನಾನು ಎಲ್ಲಾ ಮ್ಯಾನೇಜ್ ಮಾಡ್ತೀನಿ. ಮೇಲ್ನೋಟಕ್ಕೆ ನಾನು timid and soft ಅನ್ನಿಸಬಹುದು. ಒಳಗೆ ನಾನು ತುಂಬಾ strong ಇದೀನಿ. ನಗ್ ನಗ್ತಾ ಖುಷಿಯಾಗಿ ನನ್ನನ್ನ ಕಳಿಸಿಕೊಡಿ..ನನ್ನ ಬಗ್ಗೆ ನಿಮಗೆ proud feel ಆಗೋ ಥರಾ ಮಾಡ್ತೀನಿ’. ಅವಳೇನೋ ಸಲೀಸಾಗಿ ಹೇಳಿಬಿಟ್ಟಳು—tension ತೊಗೋಬೇಡಿ’ ಎಂದು. ಹೊಸದಾಗಿ ತೆಗೆದುಕೊಳ್ಳುವುದಕ್ಕೇನಿತ್ತು ಅಲ್ಲಿ? tension , ಒಂದು ತೆರನಾದ ಭಯ ಎದೇಲಿ ಗೂಡು ಕಟ್ಟಿಕೊಂಡಾಗಿತ್ತು ಆ ವೇಳೆಗಾಗಲೇ! ಅವಳಿಗೆ ಅಲ್ಲಿ ಊಟ ತಿಂಡಿ ಸರಿಹೋಗುತ್ತೋ ಇಲ್ಲವೋ ಅನ್ನುವುದು ಎಲ್ಲಕ್ಕಿಂತ ದೊಡ್ಡ ಆತಂಕ ನಮಗೆ! ‘ಸಾವಿರಾರು ಜನ ಬೇರೆ ಬೇರೆ ದೇಶಗಳಿಗೆ ಹೋಗಿ ಡಿಗ್ರಿ ತೊಗೊಂಡು ಬಂದಿಲ್ವಾ ಡ್ಯಾಡಿ? ಅವರಲ್ಲಿ ನಾನೂ ಒಬ್ಬಳಾಗ್ತೀನಿ ಅಷ್ಟೇ!’ ಸರಿಯೇ. ಒಪ್ಪಬೇಕಾದ ಮಾತೇ. ಆದರೆ ಅಪ್ಪ ಅಮ್ಮನ ಸಂಕಟ ಆತಂಕಗಳು ಇಂಥ ಸಮಾಧಾನದ ಮಾತುಗಳಿಂದ ಕಡಿಮೆ ಆಗುವುದಿಲ್ಲವಲ್ಲಾ! ಅದು ಮಕ್ಕಳಿಗೆ ಅರ್ಥವಾಗೋ ಅಂಥದ್ದೂ ಅಲ್ಲ!

ಹೋದತಕ್ಷಣಕ್ಕೆ ಅನುಕೂಲವಾಗಲಿ ಎಂದು ಒಂದಷ್ಟು ಸಿದ್ಧ ಆಹಾರ ಪದಾರ್ಥಗಳನ್ನು ತಂದದ್ದಾಯಿತು; ಲಂಡನ್ ಛಳಿಗೆ ರಕ್ಷಣೆಯಾಗಿರಲಿ ಎಂದು ಒಂದಷ್ಟು ಥರ್ಮಲ್ ವೇರ್, ಉಲ್ಲನ್ ಸ್ವೆಟರ್ ಗಳನ್ನು ಖರೀದಿಸಿ ತಂದದ್ದಾಯಿತು. ಎಲ್ಲವನ್ನೂ ಸೇರಿಸಿ ಸೂಟ್ ಕೇಸ್ ಗಳ ತೂಕ ನೋಡಿದರೆ ಇದ್ದ ಮಿತಿಗಿಂತ 12 ಕೆ ಜಿ ಜಾಸ್ತಿ ಇದೆ! ರಾಧಿಕಾಳಂತೂ ನಾವು ಆರಿಸಿ ಆರಿಸಿ ತಂದಿದ್ದ ಆಹಾರ ಪದಾರ್ಥಗಳ ಅಷ್ಟೂ ಪ್ಯಾಕ್ ಗಳನ್ನು ಎತ್ತಿಟ್ಟುಬಿಟ್ಟಳು. ಇದ್ದದ್ದರಲ್ಲಿ ಪರವಾಗಿಲ್ಲ ಅನ್ನಿಸುವಂಥ ಮತ್ತಷ್ಟು ವಸ್ತುಗಳನ್ನು ತೆಗೆದಿಟ್ಟು ತೂಕ ಸರಿ ಮಾಡಿದ್ದಾಯಿತು. ಫ್ಲೈಟ್ ಇದ್ದದ್ದು ಬೆಳಗಿನ ಜಾವಕ್ಕೆ. ಮಗಳನ್ನು ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿ ಬೀಳ್ಕೊಟ್ಟು ಕಣ್ಣೊರೆಸಿಕೊಳ್ಳುತ್ತಾ ಭಾರವಾದ ಹೃದಯದೊಂದಿಗೆ ಮನೆಗೆ ಮರಳುವ ವೇಳೆಗೆ ಬೆಳಕು ಹರಿದಿತ್ತು. ರಜೆ ಇಲ್ಲದ ಕಾರಣಕ್ಕೆ ರಂಜನಿ ಕಾಲೇಜ್ ಗೆ ಹೋಗಲೇಬೇಕಿತ್ತು.

ಒಂದು ರೀತಿಯಲ್ಲಿ ಅವಳು ಹೋಗುವುದೇ ಒಳ್ಳೆಯದಿತ್ತು. ಯಾಕೆಂದರೆ ಈ ಜೋಡಿ ದುಃಖದ ಸಮಯದಲ್ಲಿ ಅವಳಿಗೆ ಸಮಾಧಾನ ಹೇಳಿ ಸಂತೈಸುವ ಸಾಮರ್ಥ್ಯವಿದ್ದದ್ದು ಅವಳ ಕಾಲೇಜಿನ ಆತ್ಮೀಯ ಗೆಳತಿಯರಿಗೆ ಮಾತ್ರ! ‘Elegant eight’ —ಇದು ಆ ಗೆಳತಿಯರ ಗುಂಪಿನ ಅನ್ವರ್ಥನಾಮ! ಸತ್ಯ ಹೇಳುತ್ತೇನೆ—ಅಂತಹ ಗೆಳೆತನವನ್ನು, ಹಾಗೆ ಸಮಯಕ್ಕೆ ಒದಗುವ ಸಮಾನಮನಸ್ಕ ಗೆಳತಿಯರನ್ನು, ಎಂಥ ಸಮಯದಲ್ಲೂ ತಪ್ಪು ತಿಳುವಳಿಕೆಗೆ ಅವಕಾಶವಾಗದಂತೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ—ನಿಸ್ವಾರ್ಥದಿಂದ ಸಹಕರಿಸುವ, ನೆರವಾಗುವ ಪರಿಯನ್ನು ನಾನಂತೂ ಎಲ್ಲಿಯೂ ಕಂಡಿಲ್ಲ! ರಂಜನಿ, ನಿರ್ಮಲಾ, ಶೈಲಜಾ, ಕಲಾ, ಉಷಾ, ಫಿಲೋಮಿನಾ, ಉಮಾ ಮತ್ತು ಲತಾ….ಅಸೂಯೆ ಹುಟ್ಟಿಸುವಷ್ಟು ಗಾಢ—ಆಪ್ತ ಗೆಳೆತನ ಈ ಅಷ್ಟ ಧೀಮಂತ ಮಹಿಳೆಯರದು! ಆ ಗೆಳತಿಯರ ಸಾಂಗತ್ಯ—ಸಹಕಾರ—ಸಂತೈಕೆಗಳಿಲ್ಲದಿದ್ದರೆ ಬಹುಶಃ ರಂಜನಿ ಆ ಸಮಯದಲ್ಲಿ ಚೇತರಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಇರಲಿ. ರಂಜನಿಯನ್ನು ಹಾಗೂ ಮಗರಾಯನನ್ನು ಅವರವರ ಕಾಲೇಜ್ ಗಳಿಗೆ ಕಳಿಸಿ ಉಸ್ ಎಂದು ಹಾಲ್ ನಲ್ಲಿದ್ದ ಸೋಫಾದ ಮೇಲೆ ಕುಳಿತೆ. ಸುತ್ತ ಕಣ್ಣು ಹಾಯಿಸಿದೆ. ಆ ಹಾಲ್ ಅನ್ನು ರಂಜನಿ ಅತಿ ಸುಂದರವಾಗಿ ಸಿಂಗರಿಸಿದ್ದಳು. ಹಾಗೇ ಸುತ್ತ ಕಣ್ಣು ಹಾಯಿಸುತ್ತಾ ಅಲ್ಲಿ ನಡೆದ ಗೆಳೆಯರೊಂದಿಗಿನ ಗೋಷ್ಠಿಗಳನ್ನು ನೆನಪಿಸಿಕೊಳ್ಳುತ್ತಾ, ‘ಇನ್ನು ಅದೆಲ್ಲಾ ಕನಸಿನ ಮಾತು’ ಅಂದುಕೊಳ್ಳುತ್ತಿದ್ದವನಿಗೆ ರಾಧಿಕಾ ಬಿಟ್ಟು ಹೋಗಿದ್ದ ಪದಾರ್ಥಗಳೆಲ್ಲಾ ಅಲ್ಲಲ್ಲಿ ಚದುರಿ ಬಿದ್ದಿರುವುದು ಕಣ್ಣಿಗೆ ಬಿದ್ದು ವಿಪರೀತ ಸಂಕಟವಾಗಿ ಹೋಯಿತು. ಅವೆಲ್ಲವೂ ಒಟ್ಟಾಗಿ ನನ್ನನ್ನು ಅಣಕಿಸುತ್ತಿರುವಂತೆ ಭಾಸವಾಗಿ ಉಕ್ಕಿಬಂದ ದುಃಖವನ್ನು ತಡೆಯಲಾರದೇ ಬಿಕ್ಕಿಬಿಕ್ಕಿ ಅತ್ತುಬಿಟ್ಟೆ.

ರಾಧಿಕಾಳನ್ನು ಕಳಿಸಿಕೊಟ್ಟ ಮೇಲೆ ಹೆಚ್ಚು ತೀವ್ರವಾಗಿ ಮನೆ ಹುಡುಕಲು ಪ್ರಾರಂಭಿಸಿದೆವು. ದಕ್ಷಿಣ ಬೆಂಗಳೂರಿನಲ್ಲೇ ನೆಲೆಸುವುದು ಆಗ ನಮ್ಮ ಇಚ್ಛೆಯಾಗಿದ್ದರೂ ನಮ್ಮ ಅಭಿರುಚಿಗೆ ತಕ್ಕಹಾಗೆ ನಮ್ಮ ಕೈಗೆಟುಕುವ ಬೆಲೆಯಲ್ಲಿ ಯಾವ ಮನೆಯೂ ಸಿಗುವಂತಿರಲಿಲ್ಲ. ಒಂದುವೇಳೆ ಸಿಗುವಂತಿದ್ದರೂ ಅನಿರುದ್ಧ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜ್ ನಲ್ಲಿ ಓದುತ್ತಿದ್ದದರಿಂದ ಅವನಿಗೆ ಓಡಾಟ ಕಷ್ಟವಾಗಿಬಿಡುತ್ತಿತ್ತು.ನಾವು ನಮ್ಮ ಮನೆಯನ್ನು ಬಿಟ್ಟುಕೊಡಲು ನಿರ್ಧಾರವಾಗಿದ್ದ ಗಡುವಿನ ದಿನವೂ ಸಮೀಪಿಸುತ್ತಿತ್ತು. ಕೊನೆಗೆ ಹೆಬ್ಬಾಳದಿಂದ ಮುಂದೆ ರಿಂಗ್ ರೋಡ್ ನ ಬಲಕ್ಕೆ ಇರುವ ವೀರಣ್ಣ ಪಾಳ್ಯ ಬಡಾವಣೆಯಲ್ಲಿರುವ ಅಬೋಧ್ ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ನಲ್ಲಿ ನಮಗೆ ಎಟುಕುವ ಬೆಲೆಯಲ್ಲಿ, ನಮ್ಮ ಅಗತ್ಯಗಳಿಗೆ ತಕ್ಕಂತೆ ಇದ್ದ ಫ್ಲ್ಯಾಟ್ ಅನ್ನು ಮೂರ್ತಿ ಭಾವ ಸೂಚಿಸಿದರು. ನಮಗೂ ಆ ಫ್ಲ್ಯಾಟ್ ತುಂಬಾ ಇಷ್ಟವಾಗಿ ಅದನ್ನೇ ಖರೀದಿಸುವುದೆಂದು ತೀರ್ಮಾನವಾಯಿತು.

ಇದೇ ಸಮಯದಲ್ಲಿ ನಾನು ಟಿ.ಎನ್. ಸೀತಾರಾಂ ಅವರ ಮಹಾಪರ್ವ ಧಾರಾವಾಹಿಯಲ್ಲಿ ಇನ್ಸ್ ಪೆಕ್ಟರ್ ಆಗಿ ಅಭಿನಯಿಸುತ್ತಿದ್ದೆ. T N S ಅವರ ಧಾರಾವಾಹಿಗಳಲ್ಲಿ ಅಭಿನಯಿಸುವುದೆಂದರೆ ನನಗೆ ಯಾವಾಗಲೂ ಖುಷಿಯ ವಿಷಯ. ಮನುಷ್ಯ ಸಂಬಂಧಗಳ ನಡುವಿನ ಸೂಕ್ಷ್ಮಾತಿಸೂಕ್ಷ್ಮ ಎಳೆಗಳನ್ನು ಅವರು ಬಿಡಿಸಿ ತೋರಿಸುವುದೊಂದು ಮನಸೆಳೆಯುವ ಅಂಶವಾದರೆ ನಮ್ಮ ಭಾವಕೋಶದೊಳಗಿನ ದ್ವಂದ್ವ—ತಲ್ಲಣಗಳನ್ನು ಗ್ರಹಿಸಿ ಅನಾವರಣಗೊಳಿಸುವುದು ಮತ್ತೊಂದು ಗಮನಾರ್ಹ ಸಂಗತಿ. ಅಂತೆಯೇ ಸಮಾಜಮುಖಿಯಾಗಿ ಚಿಂತಿಸುತ್ತಾ ವ್ಯಷ್ಟಿ—ಸಮಷ್ಟಿಗಳ ನಡುವಿನ ಸಂಬಂಧದ ಬಿರುಕು—ಘರ್ಷಣೆಗಳನ್ನೂ ವ್ಯವಸ್ಥೆಯ ನ್ಯೂನತೆಗಳನ್ನೂ ಯಾವುದೇ ಮುಲಾಜಿಲ್ಲದೆ ಟೀಕಿಸುವ—ಮೊನಚಾದ ಮಾತುಗಳಿಂದ ಇರಿಯುವ ಪರಿಯೂ ಅಷ್ಟೇ ಗಮನ ಸೆಳೆಯುವ ಅಂಶ. ಮಹಾಪರ್ವದ ನನ್ನ ಪಾತ್ರಕ್ಕೆ ಎರಡು ಸಂಸಾರಗಳು. ಆ ಎರಡು ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದವರು ಅತ್ಯುತ್ತಮ ಅಭಿನೇತ್ರಿಯರಾದ ಜಯಲಕ್ಷ್ಮಿ ಪಾಟೀಲ್ ಹಾಗೂ ರಶ್ಮಿ. ಖ್ಯಾತ ಗಾಯಕಿಯೂ ಕಂಠದಾನ ಕಲಾವಿದೆಯೂ ಆಗಿರುವ ಸ್ಪರ್ಶ (ಪ್ರಸಿದ್ಧ ಸಾಹಿತಿ ಎಂ ಆರ್ ಕಮಲ ಅವರ ಸುಪುತ್ರಿ) ನನ್ನ ಮಗಳ ಪಾತ್ರವನ್ನು ನಿರ್ವಹಿಸಿದ್ದಳು.

ನಾನು ಬಹಳವಾಗಿ ಇಷ್ಟಪಟ್ಟು ಅಭಿನಯಿಸಿದ ಪಾತ್ರಗಳಲ್ಲಿ ಮಹಾಪರ್ವದ ಇನ್ಸ್ ಪೆಕ್ಟರ್ ನ ಪಾತ್ರವೂ ಒಂದು. ಅತ್ಯಂತ ನಿಷ್ಠ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿ ವ್ಯವಸ್ಥೆಯಲ್ಲಿ ಎದುರಿಸುವ ಸಮಸ್ಯೆಗಳು ಒಂದೆಡೆಗಾದರೆ ಎರಡು ದೋಣಿಗಳ ಪಯಣದಲ್ಲಿ ಕೌಟುಂಬಿಕ ಬದುಕಿನಲ್ಲಿ ಎದುರಾಗುವ ಗಂಭೀರ ಸವಾಲುಗಳು ಮತ್ತೊಂದೆಡೆಯಿಂದ ಕಾಡುತ್ತಾ ಹೈರಾಣಾಗಿ ಹೋಗುವ ಪಾತ್ರ ನನ್ನದಾಗಿತ್ತು. ಮನೆಯ ವಿಚಾರವಾಗಿ ಕಾಡುತ್ತಿದ್ದ ಚಿಂತೆಗಳೆಲ್ಲವನ್ನೂ ಬದಿಗೊತ್ತಿ ಪಾತ್ರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡು ಅಭಿನಯಿಸುವಂತೆ ಉತ್ತೇಜಿಸಿದ್ದು ಸೀತಾರಾಂ ಅವರ ಸಮರ್ಥ ನಿರ್ದೇಶನ ಹಾಗೂ ಅವರ ಸೊಗಸಾದ ಪಾತ್ರ ಪರಿಕಲ್ಪನೆ. ನಾನು ಅಭಿನಯಿಸಿದ, ಬಹುಕಾಲ ನಾನು ನೆನೆಯುವ ಪ್ರಮುಖ ಪಾತ್ರಗಳಲ್ಲಿ ಮಹಾಪರ್ವದ ಇನ್ಸ್ ಪೆಕ್ಟರ್ ನ ಪಾತ್ರ ಅಗ್ರಪಂಕ್ತಿಯಲ್ಲಿ ನಿಲ್ಲುತ್ತದೆ.

। ಮುಂದುವರೆಯುವುದು ।

‍ಲೇಖಕರು Admin

3 October, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading