ಶ್ರೀನಿವಾಸ ಪ್ರಭು ಅಂಕಣ- ಹೌದು ಅಪ್ಪ ಅಂದರೆ ಆಕಾಶವೇ!!!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

4

ಮರುದಿನವೇ ಅಮ್ಮ-ವಿಜಯಕ್ಕ ಬೆಳಗಿನ ಬಸ್‌ ಗೇ ಹೊರಟುಬಿಟ್ಟರು. ‘ಶನಿವಾರ ಸಾಯಂಕಾಲದ ಬಸ್‌ ಗೆ ಹೊರಟು ಬಂದು ಬಿಡು ಬಸವಾ ಪಟ್ಟಣಕ್ಕೆ. ಸೋಮವಾರ ಬೆಳಿಗ್ಗೆ ಫಸ್ಟ್‌ ಬಸ್‌ ಗೆ ವಾಪಸ್‌ ಬರಬಹುದು. ಸ್ಕೂಲೂ ತಪ್ಪೋಲ್ಲ’ ಎಂದು ರಮಿಸಿ ಹೊರಟರು. ಅದಾದ ಒಂದೆರಡು ದಿನಕ್ಕೆ ಇರಬೇಕು, ಸಂಜೆ ಸಂತೆಮಾಳದ ಬದಿಗೇ ಇದ್ದ ಮರಳು ಗುಡ್ಡೆಯಲ್ಲಿ ಆಟವಾಡುತ್ತಿದ್ದೆ. ಪ್ರಭು ಎಂದು ಯಾರೋ ಕೂಗಿದ ಹಾಗಾಯಿತು.

ತಿರುಗಿ ನೋಡಿದರೆ ನನ್ನ ತಂದೆಯವರು ಕೈಲಿ ಒಂದೆರಡು ಚೀಲಗಳನ್ನು ಹಿಡಿದು ನಿಂತಿದ್ದರು. ‘ಅಣ್ಣಾ’ ಎಂದು ಕೂಗುತ್ತಾ ಹೋಗಿ ತಬ್ಬಿಕೊಂಡೆ. ಹೊರಟೆ. ‘ಹುಷಾರಾಗಿದೀಯಾ’ ಅಂದರು ಅಣ್ಣ. ಹೂಂ ಎಂದು ತಲೆಯಾಡಿಸಿದೆ. ‘ಮನೇಗೆ ಬರ್ತೀಯಾ ಇಲ್ಲಾ ಇನ್ನೂ ಸ್ವಲ್ಪ ಆಟವಾಡಿಕೊಂಡು ಬರ್ತಿಯಾ?’ ಅಂದರು. ಬರ್ತೀನಿ ಎಂದವನೇ ಅವರ ಕೈಹಿಡಿದುಕೊಂಡು ಹೊರಟೆ. ಅವರಿಗೆ ಕೊಣನೂರಿನಲ್ಲಿ ಏನೋ ಕೆಲಸವಿದ್ದ ಪ್ರಯುಕ್ತ ಬಂದಿದ್ದರಂತೆ. ಮನೆಗೆ ಬಂದವರೆ ಕೈಕಾಲು ತೊಳೆದುಕೊಂಡು ಚಿಕ್ಕಜ್ಜ-ಅಜ್ಜಿಯರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಹಾಗೇ ಹಜಾರದಲ್ಲಿ ಮಾತಿಗೆ ಕುಳಿತರು.

ನಾನು ಅಲ್ಲೇ ಇದ್ದ ಉಯ್ಯಾಲೆಯ ಮೇಲೆ ಮಲಗಿಕೊಂಡು ನನ್ನ ಪಾಡಿಗೆ ನಾನು ಹಾಡು ಹೇಳಿಕೊಳ್ಳುತ್ತಿದ್ದೆ. ಆಗ ‘ಸಂಗಂ’ ಚಿತ್ರದ ಹಾಡುಗಳು ಬಹು ಜನಪ್ರಿಯವಾಗಿದ್ದ ಸಮಯ. ‘ಮೈ ಕ್ಯಾಕರು ರಾ ಮುಂಜೆ ಉಠ್ಠಾ ಬಿಲ್ಬಿವಾ’ ಎಂದು ತನ್ಮಯವಾಗಿ ಹಾಡುತ್ತಿದ್ದೆ. ಏನೋ ಮಾತಾಡುತ್ತಿದ್ದ ಅಣ್ಣ ಮಾತು ನಿಲ್ಲಿಸಿ, ‘ಪ್ರಭು…ಅದೇನು ಹಾಡು ಹೇಳ್ತಿರೋದು ನೀನು? ಇನ್ನೊಂದ್ಸಲ ಹೇಳು’ ಅಂದರು. ನಾನು ಮತ್ತೆ ಅಷ್ಟೇ ತನ್ಮಯತೆಯಿಂದ ಹಾಡಿಯೇ ಹಾಡಿದೆ. ‘ಮೈ ಕ್ಯಾ ಕರು ರಾ ಮುಂಜೆ ಉಠ್ಠಾ ಬಿಲ್ಬಿವಾ’ ಅಣ್ಣ ಜೋರಾಗಿ ನಕ್ಕು ಬಿಟ್ಟರು. ನನಗೆ ಒಂಥರಾ ಕಸಿವಿಸಿಯಾಯಿತು. ಅಣ್ಣ ನಗುತ್ತಲೇ ‘ದಡ್ಡತ್ವಾವ ಚ್ಛಿನ್ನ ಪ್ರತಿಯೋಗಿ’ ಎಂದರು. ಅದು ಅವರ ಅತ್ಯಂತ ಪ್ರೀತಿಯ ಬೈಗುಳ.

ನಮ್ಮ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚು ಸಲ ಆ ಪ್ರೀತಿಯ ಬೈಗುಳವನ್ನು ತಿಂದ ಹೆಮ್ಮೆ ನನ್ನದು! ‘ಹಾಡನ್ನು ತಪ್ಪು ತಪ್ಪಾಗಿ ಹೇಳ್ತಿದೀಯಾ ಮರಿ.. ಅದು ‘ಮೈ ಕ್ಯಾ ಕರು ರಾ ಮುಝೆ ಬುಡ್ಡಾ ಮಿಲ್‌ ಗಯಾ ಅಂತ. ಎಲ್ಲಿ ಈಗ ಸರಿಯಾಗಿ ಹೇಳು ನೋಡೋಣ’ ಎಂದು ಮೂರು ನಾಲ್ಕು ಸಲ ಹೇಳಿಸಿ ತಿದ್ದಿದರು. ಹಾಡನ್ನೇನೋ ತಿದ್ದಿಕೊಂಡೆ. ಆದರೂ ನನ್ನ ಎದೆ ಧಸಕ್‌ ಎಂದಿತು. ಇದೇ ವಿಷಯವಾಗಿ ರಾಂಭಿಗೂ ನನಗೂ ಒಂದು ಪಂದ್ಯ ಏರ್ಪಟ್ಟಿತ್ತು. ‘ಬುಡ್ಡಾ ಮಿಲ್‌ ಗಯಾ’ ಅಂತ ಅವನು; ಉಠ್ಠಾ ಮಿಲ್ಬಿವಾ ಅಂತ ನಾನು ಐದೈದು ಹೊಸಾ ಬೇರೆ ಬೇರೆಯ ಮ್ಯಾಚಸ್‌ಗಳ ಪಂಥ! ಲೇ ರಾಂಭಿ, ನಮ್ಮಪ್ಪ ಹಿಂದಿ ಮೇಷ್ಟ್ರು, ನಾನು ಹೇಳ್ತಿರೋದೇ ಸರಿ. ನಾನೇ ಗೆಲ್ಲೋದು’ ಎಂದು ಬಡಾಯಿ ಕೊಚ್ಚಿಕೊಂಡಿದ್ದೆ. ಹೋಯಿತು… ಐದು ಬೇರೆ ಬೇರೆ ಮುಖ ಚಿತ್ರದ ಮ್ಯಾಚಸ್‌ ಹೋಯಿತು… ವಿಪರೀತ ಸಂಕಟವಾಗಿ ಹೊಟ್ಟೆ ತೊಳಸಿಕೊಂಡು ಬಂತು.

ಅಷ್ಟರಲ್ಲಿ ನನ್ನ ಚಿಕ್ಕಜ್ಜಿ, ‘ತುಂಬಾ ಹಾಡು ಕಲ್ತಿದಾನೆ ಪ್ರಭು.. ರಾಮನ ಅವತಾರವ ಪೂರ್ತಿ ಹೇಳ್ತಾನೆ!’ ಅಂದರು. ‘ಆಯ್ತು, ಹೇಳೋ ಮರಿ… ಅದನ್ನೂ ಕೇಳೇ ಬಿಡೋಣ’ ಅಂದರು ಅಣ್ಣ. ‘ರಾಮನ ಅವತಾರ ರಘುಕುಲ ಸೋಮನ ಅವತಾರ’ ವಿಪರೀತ ದೊಡ್ಡ ಹಾಡು. ನಾನೂ ಉತ್ಸಾಹದಿಂದ ದೊಡ್ಡ ದನಿಯಲ್ಲಿ ಹಾಡಿದೆ. ನಡು ನಡುವೆ ಒಂದೆರಡು ಸಲ ಅಣ್ಣ ನಕ್ಕರೂ ಹಾಡು ನಿಲ್ಲಿಸಲು ಹೇಳಲಿಲ್ಲ. ಹಾಡು ಮುಗಿದ ಮೇಲೆ ಪ್ರೀತಿಯಿಂದ, ‘ಚೆನ್ನಾಗಿ ಹಾಡ್ತೀಯಾ. ಒಂದೆರಡು ಕಡೆ ತಪ್ಪಾಯ್ತು ಅಷ್ಟೇ. ‘ಲೇಸಿಗೆ ರೈತಹ ಜಾತರು ಮೂವರು’ ಅಂತ ಹಾಡಿದೆಯಲ್ಲಾ, ಅದು ‘ಲೇಸಿಗರೈ ಸಹಜಾತರು ಮೂವರು’ ಅಂತ ಹಾಡಬೇಕು; ಆ ಮೇಲೆ ಕೌಸಲ್ಯೆಯ ಬಸಿರನು ತುಕುಣೀತ’ ಅಂತ ಹಾಡಿದೆಯಲ್ಲಾ, ಅದೂ ತಪ್ಪು. ‘ಕೌಸಲ್ಯೆಯ ಬಸಿರೆನಿತು ಪುನೀತ’ ಅಂತ ಇರಬೇಕು. ಗೊತ್ತಾಯ್ತಾ? ಎಂದು ನಯವಾಗಿ ಪ್ರೀತಿಯಿಂದ ತಿದ್ದಿದರು.. ತಿದ್ದಿಕೋತೀನಿ ಅಂತ ನಾನು ತಲೆಯಾಡಿಸಿದೆ. ಸಧ್ಯ! ಈ ಹಾಡಿಗೆ ಸಂಬಂಧಪಟ್ಟ ಹಾಗೆ ಯಾರ ಜೊತೆಗೂ ಪಂಥ ಕಟ್ಟಿರಲಿಲ್ಲ.! ಬಚಾವ್!‌

ಮರುದಿನ ಸಂಜೆಯ ವೇಳೆಗೆ ಅಣ್ಣನ ಗೆಳೆಯರು ಮೂರ್ನಾಲ್ಕು ಮಂದಿ ಮನೆಗೆ ಬಂದರು, ಅಣ್ಣನನ್ನು ಮಾತಾಡಿಸಿಕೊಂಡು ಹೋಗುವುದಕ್ಕೆಂದು. ನಾನೂ ಉಯ್ಯಾಲೆಯ ಮೇಲೆ ಕೂತು ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆ. ಸ್ವಾತಂತ್ರ್ಯ ಹೋರಾಟ, ಗಾಂಧೀಜಿ, ಅಸ್ಪೃಶ್ಯತೆ, ಹಿಂದಿ ಭಕ್ತಿ, ಚರಕ… ಇತ್ಯಾದಿಯಾಗಿ ಸುಮಾರು ಹೊತ್ತು ಚರ್ಚೆ ನಡೆದಿತ್ತು. ಆ ಸಂದರ್ಭ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದೆಯಾದರೂ ಆ ವಿಷಯಗಳನ್ನು ಅರ್ಥಮಾಡಿಕೊಂಡು ಅರಗಿಸಿಕೊಳ್ಳುವುದು ಈ ‘ದಡ್ಡತ್ವಾವ ಚ್ಛಿನ್ನ’ನ ಬುದ್ಧಿಮತ್ತೆಗೆ ಮೀರಿದ್ದಾಗಿತ್ತು.

ಈ ನನ್ನ ಕಥನವನ್ನು ಪ್ರಾರಂಭ ಮಾಡುವ ವೇಳೆಗೆ ಅಣ್ಣನ ವ್ಯಕ್ತಿತ್ವದ ವಿವಿಧ ಮಗ್ಗುಲುಗಳನ್ನು ಪರಿಚಯಿಸುವಂಥ ಪ್ರಸಂಗ-ಮಾತುಕತೆ-ವಿಚಾರಗಳನ್ನು ದಾಖಲಿಸಬೇಕೆನ್ನುವ ಹಂಬಲ ತೀವ್ರವಾಗಿ ಕಾಡಿತು. ಅಮ್ಮ, ವಿಜಯಕ್ಕ, ನಳಿನಕ್ಕ, ಕುಮಾರಣ್ಣಯ್ಯರೊಂದಿಗೆ ಚರ್ಚಿಸಿ ಒಂದಷ್ಟು ವಿಚಾರಗಳನ್ನು ಕಲೆ ಹಾಕಿದೆ. ಅಣ್ಣನ ಬಗ್ಗೆ, ನಮ್ಮ ವಂಶ ಪರಂಪರೆಯ ಬಗ್ಗೆ ವಿಶೇಷ ಮಾಹಿತಿಗಳನ್ನು ನನಗೆ ನೀಡಿದವರು ನಮ್ಮ ರಾಜು- ಡಾ.ಸಿ.ಎನ್.‌ ರಾಮಚಂದ್ರನ್.‌ ಅವರ ನೆನಪಿನ ಶಕ್ತಿಯಂತೂ ಅಗಾಧವಾದುದು. ಅಣ್ಣನ ಜೊತೆಗೇ ಅವರ ಬಾಲ್ಯದ ಸಾಕಷ್ಟು ಸಮಯ ಕಳೆದಿದ್ದು, ತಮ್ಮ ನೆನಪಿನ ಬುತ್ತಿಯಿಂದ ಅನೇಕ ಸ್ವಾರಸ್ಯಕರ ಸಂಗತಿಗಳನ್ನು ಹೊರತೆಗೆದು ನನ್ನೊಟ್ಟಿಗೆ ಹಂಚಿಕೊಂಡಿದ್ದಾರೆ. ಅದೆಲ್ಲವನ್ನೂ ಸಂಕ್ಷಿಪ್ತವಾಗಿ ತಮ್ಮ ಮುಂದೆ ನಿವೇದಿಸುತ್ತಿದ್ದೇನೆ.

ಕೇರಳಾಪುರದ ರಾಮಾಶಾಸ್ತ್ರಿಗಳು ನನ್ನ ಅಜ್ಜ-ನನ್ನ ತಂದೆಯವರ ತಂದೆ. ಮದುವೆ-ಮುಂಜಿ-ದೇವತಾ ಕಾರ್ಯಗಳನ್ನು ಮಾಡಿಸುತ್ತಾ ಪೌರೋಹಿತಿಕೆಯಲ್ಲಿ ತೊಡಗಿದ್ದ ಅವರು ರಾಮಾಜೋಯಿಸರೆಂದೇ ಪ್ರಸಿದ್ಧರು. ಮುಂದೆ ಆಗುವುದನ್ನು ಮೊದಲೇ ಗ್ರಹಿಸುವ ಅತೀಂದ್ರಿಯ ಶಕ್ತಿ ಅವರಿಗಿತ್ತು ಎಂದು ಅವರನ್ನು ಹತ್ತಿರದಿಂದ ನೋಡಿದವರು ಸ್ಮರಿಸಿಕೊಳ್ಳುತ್ತಿದ್ದರಂತೆ.

ಒಮ್ಮೆ ಒಂದು ಮದುವೆ ಮಾಡಿಸಲೆಂದು ಪಕ್ಕದ ಊರಿಗೆ ಹೋಗಿದ್ದ ಸಂದರ್ಭ; ಮದುವೆಯ ಕಾರ್ಯ- ಕಲಾಪಗಳು ಭರದಿಂದ ಸಾಗುತ್ತಿವೆ; ಆಗಲೇ ಯಾರೋ ಗಾಳಿಯಲ್ಲಿ ‘ಅಯ್ಯೋ, ಈವಯ್ಯ ಇಲ್ಲಿ ಮದುವೆ ಮಾಡಿಸ್ತಿದಾನೆ ಈಗ; ಸ್ವಲ್ಪದರಲ್ಲೇ ಈವಯ್ಯಾನೇ ಇಲ್ಲೇ ಶ್ರಾದ್ಧಾನೂ ಮಾಡಿಸಬೇಕಾಗುತ್ತೆ ಅಂತ ಪಾಪ ಅವಂಗೆ ಗೊತ್ತೇ ಇಲ್ಲ ನೋಡು’ ಎಂದು ಅವರ ಕಿವಿಯ ಬಳಿ ಮಾತಾಡಿಕೊಂಡು ನಕ್ಕಂತಾಯಿತಂತೆ. ‘ಅಯ್ಯೋ! ಇದೆಂಥಾ ಶಕುನವಾಯಿತು ಎಂದು ಒಳಗೊಳಗೇ ಮರುಗುತ್ತಾ ವಿವಾಹ ಕಾರ್ಯವನ್ನು ಮುಗಿಸಿದರಂತೆ ಅಜ್ಜ. ಮರುದಿನವೇ ಮದುವೆ ಗಂಡಿಗೆ ಗೂಳಿಯೊಂದು ಭಯಂಕರವಾಗಿ ತಿವಿದು ಆತ ಅಸುನೀಗಿದನಂತೆ. ‘ಶಕುನ ನುಡಿದಂತೆಯೇ ಆಯಿತಲ್ಲ’ ಎಂದು ಹಲುಬುತ್ತಾ ರಾಮಜ್ಜ ಹೋಗಿ ಅವನ ಶ್ರಾದ್ಧ ಕರ್ಮಗಳನ್ನು ಮುಗಿಸಿ ಬಂದರಂತೆ.

ಮತ್ತೊಮ್ಮೆ ಊರಿಗೆ ಬರಗಾಲ ಬಂದಾಗ ಇದ್ದ ಹೊಳೆಯ ನೀರಿನಲ್ಲೇ ತಾಸುಗಟ್ಟಲೆ ನಿಂತು ಜಪ-ತಪಗಳನ್ನು ಮಾಡಿ ಮಳೆ ತರಿಸಿದ್ದರಂತೆ! ಈ ಘಟನೆಗಳ ಸತ್ಯಾಸತ್ಯತೆ ಏನೇ ಇದ್ದರೂ, ಅಜ್ಜನ ಔದಾರ್ಯ ಪರೋಪಕಾರ ಗುಣಗಳ ಬಗ್ಗೆ ಮಾತ್ರ ತುಂಬಾ ಅಭಿಮಾನದಿಂದ ಗೌರವದಿಂದ ಮಾತಾಡುತ್ತಿದ್ದುದು ಮಾತ್ರ ಪರಮ ಸತ್ಯ. ಇಂಥಾ ರಾಮಾಶಾಸ್ತ್ರಿಗಳಿಗೆ ನಾಲ್ಕು ಜನ ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು. ಆ ಹೆಣ್ಣು ಮಗಳೇ ಪದ್ಮ, ರಾಜು ಅವರ ತಾಯಿ. ಅವರ ನೆನಪಿಗಾಗಿಯೇ ನನ್ನ ತಂಗಿಗೆ ಪದ್ಮಿನಿ ಎಂದು ಹೆಸರಿಟ್ಟಿದ್ದು ಎಂದು ಅಮ್ಮ ಜ್ಞಾಪಿಸಿಕೊಳ್ಳುತ್ತಾರೆ. ಗಂಡು ಮಕ್ಕಳಲ್ಲಿ ಮೊದಲನೆಯವರು ಶ್ರೀವತ್ಸ ಜೋಯಿಸರು.

ವೇದ-ಶಾಸ್ತ್ರಗಳನ್ನು ಅಧ್ಯಯನ ಮಾಡಿ ತಮ್ಮ ತಂದೆಯವರ ಜೋಯಿಸ ವೃತ್ತಿಯನ್ನೇ ಮುಂದುವರೆಸಿಕೊಂಡು ಬಂದವರು. ಎರಡನೆಯವರು ಶಂಕರ ದೊಡ್ಡಪ್ಪ ಎಂದು ನಾವು ಕರೆಯುತ್ತಿದ್ದ ಚೆನ್ನಕೇಶವ ಅವಧಾನಿಗಳು. ಅವರು ದೊಡ್ಡ ವಿದ್ವಾಂಸರು, ವೇದ ಶಾಸ್ತ್ರ ಪಾರಂಗತರು. ಮೂರನೆಯವರೇ ನಮ್ಮ ತಂದೆ. ನಾಲ್ಕನೆಯವರು ರಾಮಯ್ಯನವರು. ರುದ್ರಪಟ್ಟಣದ ರಾಮಯ್ಯ, ಮೇಷ್ಟ್ರು ಎಂದೇ ಪ್ರಸಿದ್ಧರಾದ ಇವರು ಹಳ್ಳಿಯ ಮಕ್ಕಳಿಗೆ ಶಿಕ್ಷಣವನ್ನು ನೀಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಇಂದು ಅತ್ಯಂತ ಉನ್ನತ ಸ್ಥಾನಗಳಲ್ಲಿರುವ ಅನೇಕ ಮಹನೀಯರು, ‘ರುದ್ರಪಟ್ಟಣದ ರಾಮಯ್ಯ ಮೇಷ್ಟ್ರಿಲ್ಲದೇ ಹೋಗಿದ್ರೆ ನಾವೆಲ್ಲಾ ಹಳ್ಳೀಲೇ ದನ ಕಾಯ್ಕೊಂಡೇ ಇರಬೇಕಾಗಿತ್ತು’ ಎಂದು ಪೂಜ್ಯ ಭಾವದಿಂದ ಚಿಕ್ಕಪ್ಪನನ್ನು ನೆನಪಿಸಿಕೊಳ್ಳುತ್ತಾರೆ.

ಇನ್ನು ತಂದೆಯವರ ವಿಚಾರಕ್ಕೆ ಮರಳುವುದಾದರೆ: ಗಾಂಧೀಜಿಯವರ ಪರಮ ಭಕ್ತರಾಗಿದ್ದ ಅಣ್ಣ, ಅವರ ವಿಚಾರಧಾರೆ-ತತ್ವಗಳೆಲ್ಲವನ್ನು ತಮ್ಮ ಬದುಕು ಬರಹಗಳಲ್ಲಿ ಅಳವಡಿಸಿಕೊಳ್ಳುವ ನಿರಂತರ ಯತ್ನದಲ್ಲಿದ್ದರು. ‘ನಮ್ಮ ದೇಶದಿಂದ ಅಸ್ಪೃಶ್ಯತೆ ಎಂಬ ಪಿಡುಗು ತೊಲಗಬೇಕು; ಸರ್ವಸಮಾನತೆ ನಮ್ಮ ಸಮಾಜದಲ್ಲಿ ಸ್ಥಾಪಿತವಾಗಬೇಕು’ ಎಂದು ಕನಸು ಕಾಣುತ್ತಾ ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಆ ವಿಚಾರವಾಗಿ ಭಾಷಣ ಮಾಡುತ್ತಿದ್ದರು.

ಗೆಳೆಯರ ಗುಂಪು ಕಟ್ಟಿಕೊಂಡು ಗಾಂಧೀತತ್ವಗಳನ್ನು ಅಳವಡಿಸಿಕೊಳ್ಳಲು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು. ಹಿಂದಿ ಭಾಷೆ ಹಾಗೂ ಸಾಹಿತ್ಯಗಳ ಪ್ರಚಾರ, ಚರಕದಿಂದ ನೂಲು ತೆಗೆಯುವುದು, ಮೆರವಣಿಗೆಗಳಲ್ಲಿ ದೇಶಪರ ಘೋಷಣೆಗಳನ್ನು ಕೂಗುತ್ತಾ ಭಾಗವಹಿಸುವುದು.. ಇವೆಲ್ಲಾ ಸ್ವಾತಂತ್ರ್ಯ ಪೂರ್ವದ ದೇಶ ಭಕ್ತನ ದೇಶ ಸೇವೆಯ ಪ್ರಮುಖ ಕರ್ತವ್ಯ-ಕಾರ್ಯ ಕ್ಷೇತ್ರಗಳಾಗಿದ್ದವು.

1945-46ನೇ ಇಸವಿ.. ಆಗ ಅಣ್ಣ ಚಿಕ್ಕಮಗಳೂರಿನಲ್ಲಿದ್ದರು. ಅಣ್ಣನ ತಮ್ಮ ರಾಮಯ್ಯ ಹಾಗೂ ರಾಜು ಅಣ್ಣನ ಜೊತೆಯಲ್ಲೇ ಇದ್ದು ಓದುತ್ತಿದ್ದರು. ಆಗ ಮನೆಯಲ್ಲಿ ನೂಲು ತೆಗೆಯಲೆಂದು ಮೂರು ಚರಕಗಳಿದ್ದವು. ಒಂದು ರಾಜುವಿಗೆ ಇನ್ನೊಂದು ನಮ್ಮ ಚಿಕ್ಕಪ್ಪನಿಗೆ ಮತ್ತೊಂದು ಅಣ್ಣ-ಅಮ್ಮನಿಗೆ. ಚರಕಾದಿಂದ ನೂಲು ತೆಗೆದು ಲಡಿ ಮಾಡಿ ಖಾದಿ ಪ್ರಚಾರ ಸಭೆಗೆ ಕೊಡುತ್ತಿದ್ದರಂತೆ. ’80 ನೇ ನಂಬರ್‌ ನೂಲು ತೆಗೆಯೋದು ತುಂಬಾ ಕಷ್ಟ. ನೀವು ತೆಗೆಯೋ ನೂಲು ಆ ಗುಣಮಟ್ಟದ್ದಾಗಿ ತುಂಬಾ ಚೆನ್ನಾಗಿರುತ್ತೆ’ ಎಂದು ಖಾದಿ ಪ್ರಚಾರ ಸಭೆಯವರು ಪ್ರಶಂಸೆ ಮಾಡ್ತಿದ್ದರಂತೆ. ಚರಕದಿಂದ ನೂಲು ತೆಗೆಯುವುದು ದೇವರ ಪೂಜೆಯಷ್ಟೇ ಪುಣ್ಯದ ಕೆಲಸ ಎಂಬುದು ಅಣ್ಣನ ನಂಬಿಕೆಯಾಗಿತ್ತು. ಚಿಕ್ಕಮಗಳೂರಿನ ಕೋಟೆಯಲ್ಲಿ ಒಂದು ಕಡೆ ದಿನಕ್ಕೆ ೨-೩ ತಾಸು ಹಿಂದಿ ಪಾಠ ಹೇಳಿಕೊಡುತ್ತಿದ್ದಂತೆ ಅಣ್ಣ.

ಆಮೇಲೆ ಸಂಜೆ ಪೇಟೆಯಲ್ಲಿ ಒಬ್ಬರ ಮನೆಯ ಅಟ್ಟದ ಮೇಲೆ ಪ್ರವೇಶಿಕಾ-ವಿಶಾರದಾ ಪರೀಕ್ಷೆಗಳಿಗೆ ಕಟ್ಟಿದ್ದ ಹುಡುಗರಿಗೆ ಎರಡು ತಾಸು ಪಾಠ! ಹಿಂದಿ ಕಾವ್ಯ ಭಾಗಗಳನ್ನು, ನಾಟಕಗಳನ್ನು ಎಷ್ಟು ತನ್ಮಯತೆಯಿಂದ , ಭಾವಾವೇಶದಿಂದ, ನಾಟಕೀಯವಾಗಿ ಬೋಧಿಸುತ್ತಿದ್ದರೆಂದರೆ ಅಣ್ಣನ ಪಾಠ ಕೇಳಲು ಪರೀಕ್ಷೆಗೆ ಕಟ್ಟದ ಬೇರೆಯವರೂ ಬಂದು ಕೂರುತ್ತಿದ್ದರಂತೆ! ರಾಣಾ ಪ್ರತಾಪ್‌ ಸಿಂಹ ನಾಟಕದಲ್ಲಿ ಶಕ್ತಿಸಿಂಹ ‘2 ನೀಲ್‌ ಘೋಡೇ ಕೇ ಸವಾರ್‌’ ಎಂದು ಕೂಗಿಕೊಂಡು ಬರುವ ದೃಶ್ಯವನ್ನು ಅದೆಷ್ಟು ಸಮರ್ಥವಾಗಿ ಅಭಿನಯಿಸಿಯೇ ತೋರುತ್ತಿದ್ದರೆಂದರೆ ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ ಎನ್ನುತ್ತಾರೆ ರಾಜು. ಇದಿಷ್ಟೇ ಅಲ್ಲದೆ ಮನೆಯಲ್ಲೂ ಸಹ ಹಿಂದಿ ನಾಟಕ-ಕವಿತೆಗಳ ಭಾವಪೂರ್ಣ ವಾಚನ ಆಗಾಗ್ಗೆ ನಡೆಯುತ್ತಲೇ ಇರುತ್ತಿತ್ತು.

ಅಮ್ಮ ಕೂಡಾ ಮಹಿಳಾ ಸಮಾಜಕ್ಕೆ ಹೋಗಿ ಹೆಣ್ಣು ಮಕ್ಕಳಿಗೆ ಹಿಂದಿ ಪಾಠ ಹೇಳಿಕೊಡುತ್ತಿದ್ದರಂತೆ, ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗುವ ಜವಾಬ್ದಾರಿ ರಾಜುವಿನದಾಗಿತ್ತು! ಸ್ವಾತಂತ್ರ್ಯ ಬಂದರೂ ಮೈಸೂರು ಸಂಸ್ಥಾನ ಅರಸರ ವಶದಲ್ಲೇ ಇತ್ತು. ಆಗ ಚೆಂಗಲರಾಯರೆಡ್ಡಿ ಅವರ ನೇತೃತ್ವದಲ್ಲಿ, ‘ನೀವು ರಾಜ ಪ್ರಮುಖರಾಗಿ ಇಲ್ಲೂ ಪ್ರಜಾಪ್ರಭುತ್ವವನ್ನು ತನ್ನಿ’ ಎಂಬ ಚಳುವಳಿ ಬಹಳ ತೀವ್ರವಾಗಿ ನಡೆಯುತ್ತಿತ್ತಂತೆ. ಇದೇ ಸಂಬಂಧವಾಗಿ ಅನೇಕ ಮೆರವಣಿಗೆಗಳೂ ನಡೆಯುತ್ತಿದ್ದವು.

ಚಳುವಳಿಗಳಲ್ಲಿ ಭಾಗವಹಿಸುತ್ತಿದ್ದ ಅನೇಕರನ್ನು ಬೆಂಗಳೂರು-ಮೈಸೂರುಗಳಿಂದ ಕರೆತಂದು ಚಿಕ್ಕಮಗಳೂರಿನ ಜೈಲುಗಳಲ್ಲಿ ಇಟ್ಟಿದ್ದ ಸಂದರ್ಭ ಅದು. ಅಣ್ಣ ಭಾಗವಹಿಸುತ್ತಿದ್ದ ಮೆರವಣಿಗೆ ಏನಾದರೂ ಜೈಲು ಮಾರ್ಗವಾಗಿ ಹೋಗುವುದಿದ್ದರೆ ಅಣ್ಣ ಜೊತೆಯವರಿಗೆ ಸೂಚನೆ ಕೊಡುತ್ತಿದ್ದರಂತೆ: ‘ಜೈಲು ಹತ್ತಿರ ಬಂದಾಗ ಜೋರಾಗಿ ಘೋಷಣೆ ಕೂಗಬೇಡಿ. ಅದು ಜೈಲಿನೊಳಗೆ ಇರೋ ಖೈದಿಗಳಿಗೆ ಕೇಳಿಸಿ ಅವರೂ ತುಂಬಾ ಉತ್ಸಾಹದಿಂದ ಜೈಲಿನ ಬೇಲಿಗಳನ್ನೇ ಮುರಿದು ಆಚೆ ಬಂದು ಬಿಡಬಹುದು. ಆಗ ಅದು ನಾವು ನಂಬಿರುವ ಗಾಂಧಿ ತತ್ವಕ್ಕೆ ವಿರುದ್ಧವಾದ ಕ್ರಿಯೆಯಾಗಿ ಬಿಡುತ್ತದೆ. ಆ ಕಾರಣ ಜೈಲು ಬಳಿ ಬಂದಾಗ ಮೆಲ್ಲಗೆ ಘೋಷಣೆ ಕೂಗಿ ದಾಟಿದ ಮೇಲೆ ಎಷ್ಟು ಜೋರಾಗಿ ಬೇಕಾದರೂ ಕೂಗಬಹುದು!’

ಪದೇ ಪದೇ ಅಣ್ಣ ಉದ್ಧರಿಸುತ್ತಿದ್ದ ಹಿಂದಿ ಕವಿತೆಯೊಂದರ ಸಾಲುಗಳಿವು: ‘ಅರೆ ಭಗವಾನ ಕಹಾ-ವಹ್‌ ತೋ ಹುವಾ ಸದಿಯೋಂಸೆ ರಾಖ್‌ ಕೀ ಢೇರೀ/ ವರ್ ನಾ ಕ್ಯಾ ಸಮತಾ ಸಂಸ್ಥಾಪನ್‌ ಮೇ ಲಗ ಥೀ ಇತನೀ ದೇರಿ!’ ‘ಎಲ್ಲಿದ್ದಾನೆ ಭಗವಂತ? ಶತಶತಮಾನಗಳಿಂದ ಬಿದ್ದಿರುವ ಬೂದಿಯ ಗುಡ್ಡೆಯಾಗಿದ್ದಾನೆ ಅವನು ಇಲ್ಲದಿದ್ದರೆ ಸರ್ವಸಮಾನತೆ ಸ್ಥಾಪನೆಯಾಗಲು ಇಷ್ಟು ಕಾಲವಾದರೂ ಏಕೆ ಬೇಕಿತ್ತು?’

 ದೇವರಿಲ್ಲ ಎನ್ನುವಷ್ಟರ ಮಟ್ಟಿಗೆ ನಾಸ್ತಿಕರಾಗಿದ್ದ ಅವರಿಗೆ ಸ್ವಸ್ಥ ಸಮಾಜವೊಂದರಲ್ಲಿ, ಸರ್ವ ಸಮಾನ ಭಾವ ತುಂಬಿರುವ ದೇಶದಲ್ಲಿ ಸುಂದರವಾಗಿ ಅರಳುವ ಬದುಕನ್ನು ಕಾಣುವ ಹಂಬಲವಿತ್ತು. ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುತ್ತಾ, ದೇಶದ ಪ್ರತಿಯೊಬ್ಬ ಪ್ರಜೆಯೂ ಸುಶಿಕ್ಷಿತನಾಗಬೇಕು ಎಂದು ಹಂಬಲಿಸುತ್ತಾ ಗಾಂಧೀಜಿಯವರ ಪರಮ ಭಕ್ತರಾಗಿ ಸ್ವಾತಂತ್ರ್ಯೋತ್ತರದಲ್ಲಿ ರಾಮರಾಜ್ಯದ ಕನಸು ಕಾಣುತ್ತಿದ್ದರು ಅಣ್ಣ.

ಹೀಗೆ ಅಣ್ಣನ ಬಗ್ಗೆ ಕೇಳುತ್ತಾ ಹೊಸ ಹೊಸ ವಿಷಯಗಳನ್ನು ಗ್ರಹಿಸುತ್ತಾ ಹೋದ ಹಾಗೆ ಕವಿದುಕೊಂಡಿದ್ದ ಪೊರೆಗಳು ಸರಿದು ಹೋದಂತೆ ಭಾಸವಾಗತೊಡಗಿತು. ಆ ಕಾಲಕ್ಕೆ ಎಷ್ಟು ಆಧುನಿಕರಾಗಿದ್ದರು ನಮ್ಮಪ್ಪ ಎಂಬ ಹೆಮ್ಮೆ-ಗರ್ವದ ಭಾವ ಮನಸ್ಸನ್ನು ಆವರಿಸಿಕೊಂಡಿತು. ಎಣೆಯಿಲ್ಲದ ವಿಸ್ತಾರ ಆಗಸದ ಮೋಡಗಳ ಅಂಚಿಗೇ ತಾಗಿಕೊಂಡಂತಿದ್ದ ಬೆಳ್ಳಿಗೆರೆಗಳು, ಹಲವು ಹತ್ತು ಬಗೆಯ ಬಣ್ಣದ ಗೆರೆಗಳು ನಿಚ್ಚಳ ಕಾಣತೊಡಗಿದವು.

ಹೌದು ಅಪ್ಪ ಅಂದರೆ ಆಕಾಶವೇ!!!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Avadhi

June 17, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. C.N. Ramachandran

    Prabhu, ತುಂಬಾ ಮನೋಜ್ ಯ ವಾಗಿ ಬಂದಿದೆ. ನೆನಪುಗಳು ಮರುಕಳಿsiduvu. ಧನ್ಯವಾದಗಳು. ರಾಜು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: