ಶ್ರೀನಿವಾಸ ಪ್ರಭು ಅಂಕಣ- ಸೀದಾ ಮಂಗಳೂರು ಬಸ್ ಹತ್ತಿಬಿಟ್ಟೆ

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

48

ಸಮುದಾಯ ತಂಡ ಕನ್ನಡ ರಂಗಭೂಮಿಗೆ ನೀಡಿರುವ ಕೊಡುಗೆ ಅನನ್ಯವಾದುದು. ಅನೇಕ ಅರ್ಥಪೂರ್ಣ,ಸಮಾಜಮುಖಿ ನಾಟಕಗಳು ಸಮುದಾಯ ತಂಡದ ವತಿಯಿಂದ ಪ್ರದರ್ಶನಗೊಂಡಿದ್ದು ಜಾಗೃತ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದವು.ಸಮುದಾಯ ತಂಡ 70— 80 ರ ದಶಕದಲ್ಲಿ ಅನೇಕ ಜಾಥಾಗಳನ್ನು ನಡೆಸುವುದರ ಜೊತೆಗೆ ರಾಜ್ಯಮಟ್ಟದ ರಂಗ ತರಬೇತಿ ಶಿಬಿರಗಳನ್ನೂ ಆಯೋಜಿಸುತ್ತಿದ್ದರು.ಆ ವೇಳೆಗಾಗಲೇ ಬಾದಲ್ ಸರ್ಕಾರ್, ಬಿ.ವಿ.ಕಾರಂತ ಮೇಷ್ಟ್ರುಹಾಗೂ ಪ್ರಸನ್ನ ಅವರುಗಳು ನಡೆಸಿಕೊಟ್ಟಿದ್ದ ಇಂಥ ತರಬೇತಿ ಶಿಬಿರಗಳು ಅಭೂತಪೂರ್ವವಾದ ಯಶಸ್ಸನ್ನು ಗಳಿಸಿದ್ದವು.

81 ರ ರಾಜ್ಯಮಟ್ಟದ ಶಿಬಿರ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲೇರಿತು.ನನಗೆ ಬಹಳ ತೃಪ್ತಿ—ಸಮಾಧಾನ—ಸಂತಸಗಳನ್ನು ತಂದುಕೊಟ್ಟ ಶಿಬಿರವಿದು.ಕುಂಬಳಗೋಡಿನಲ್ಲಿ ನಡೆದ ಈ ಶಿಬಿರದ ನಿರ್ವಹಣೆಯ ಹೊಣೆಯನ್ನು ಗಂಗಾಧರ ಸ್ವಾಮಿಯವರು ವಹಿಸಿಕೊಂಡಿದ್ದರು. ಸಮುದಾಯದ ಸಕ್ರಿಯ ಕಾರ್ಯಕರ್ತರಾಗಿದ್ದ ಸಿ.ಕೆ.ಗುಂಡಣ್ಣ ಹಾಗೂ ಸಿಜಿಕೆ ಅವರು ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿದ್ದರು.

ಎಲ್ಲಕ್ಕಿಂತ ಮುಖ್ಯವಾದ ಸಂಗತಿಯೆಂದರೆ ಅದಾಗಲೇ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದ ಹಾಗೂ ಮುಂದಿನ ದಿನಗಳಲ್ಲಿ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ದೊಡ್ಡ ಹೆಸರುಗಳಾದ ಅನೇಕ ಪ್ರತಿಭಾಶಾಲಿಗಳು ಆ ಶಿಬಿರದಲ್ಲಿ ಭಾಗವಹಿಸಲು ಆಗಮಿಸಿದ್ದರು. ಲಿಂಗದೇವರು ಹಳೆಮನೆ, ಐ.ಕೆ.ಬೊಳುವಾರ್ , ಜಿ.ಎನ್.ಮೋಹನ್ , ಪಿಚ್ಚಳ್ಳಿ ಶ್ರೀನಿವಾಸ್ ….ಇವು ಈಗ ನೆನಪಿರುವ ಕೆಲವು ಹೆಸರುಗಳು. ಇವರುಗಳ ಜತೆಗೆ ಮಂಗಳೂರಿನ ಯಕ್ಷಗಾನ ಕಲಾವಿದರೂ ಆದ ‘ರಂಗಭೂಮಿ’ಯ ಆನಂದ ಗಾಣಿಗ, ಮೋಹನಚಂದ್ರ, ಕುಂದಾಪುರದ ಜಿ.ವಿ.ಕಾರಂತ ಮೊದಲಾದವರೂ ಶಿಬಿರದಲ್ಲಿದ್ದರು.

ದಿನವಿಡೀ ರಂಗಭೂಮಿಯ ಕುರಿತು ಚರ್ಚೆ—ಸಂವಾದಗಳು,ವ್ಯಾಯಾಮ—ಆಟಗಳು,ಸ್ಫೂರ್ತ ವಿಸ್ತರಣಗಳು,ಅಭಿನಯ—ಅದರಲ್ಲೂ ವಿಶೇಷವಾಗಿ ವಾಚಿಕಕ್ಕೆ ಸಂಬಂಧ ಪಟ್ಟ ಹಾಗೆ—ಪ್ರಾತ್ಯಕ್ಷಿಕೆಗಳು…ಇವೆಲ್ಲವುಗಳಲ್ಲಿ ಶಿಬಿರಾರ್ಥಿಗಳು ಅತ್ಯುತ್ಸಾಹದಿಂದ ಪಾಲುಗೊಳ್ಳುತ್ತಿದ್ದರು.ಸ್ಫೂರ್ತವಿಸ್ತರಣೆಯ (improvisation) ಮೂಲಕವೇ ಒಂದು ಪುಟ್ಟ ನಾಟಕವನ್ನು ಸಿದ್ಧಪಡಿಸಲು ಎಲ್ಲರೂ ಒಮ್ಮತದಿಂದ ತೀರ್ಮಾನಿಸಿದೆವು.

ಆ ಸ್ಫೂರ್ತವಿಸ್ತರಣಕ್ಕೆ ನಮಗೆ ಒದಗಿ ಬಂದದ್ದು ಹಿಂದಿಯ ಪ್ರಸಿದ್ಧ ನಾಟಕ—”ಅಂಧೇರ್ ನಗರಿ ಚೌಪಟ್ ರಾಜ”. ಚೌಕಟ್ಟು ಮಾತ್ರ ಮೂಲನಾಟಕದ್ದು;ಹೂರಣ ಸಂಪೂರ್ಣವಾಗಿ ಬೇರೆ! ಅಂದಿನ ಕರ್ಣಾಟಕದ ರಾಜಕೀಯ ಸನ್ನಿವೇಶವನ್ನೂ ಆಗ ನಡೆದ ಒಂದಷ್ಟು ‘ರಂಜನೀಯ’ ಪ್ರಸಂಗಗಳನ್ನೂ ಬಳಸಿಕೊಂಡು ಒಂದು ಸೊಗಸಾದ ವಿಡಂಬನಾತ್ಮಕ ಪ್ರಹಸನವನ್ನು ಶಿಬಿರಾರ್ಥಿಗಳೊಂದಿಗೆ ಸಿದ್ಧಪಡಿಸಿದೆ.ಬಹುಶಃ ‘ಕತ್ತಲ ರಾಜ್ಯ’ವೆಂದು ಆ ಪ್ರಹಸನಕ್ಕೆ ನಾಮಕರಣ ಮಾಡಿದ್ದಾಗಿ ನೆನಪು…ಇದನ್ನು ಕುಂಬಳಗೊಡಿನಲ್ಲಿ ಬೀದಿ ನಾಟಕವಾಗಿ ಪ್ರದರ್ಶಿಸಿದಾಗ ಅಲ್ಲಿನ ಪ್ರೇಕ್ಷಕರು ಅಪಾರವಾಗಿ ಮೆಚ್ಚಿಕೊಂಡರಲ್ಲದೇ ಪ್ರಹಸನದ ಪಾತ್ರಗಳನ್ನು ನಿಜ ಜೀವನದ—ರಾಜಕೀಯ ಕ್ಷೇತ್ರದ ವ್ಯಕ್ತಿಗಳೊಂದಿಗೆ ಸಮೀಕರಿಸಿಕೊಂಡು ಮತ್ತಷ್ಟು ಖುಷಿ ಪಟ್ಟರು.ಕುಂಬಳಗೋಡಿನ ಬೀದಿಗಳಲ್ಲಿ ಪ್ರದರ್ಶನಗಳಾದ ಮೇಲೆ ಅಲ್ಲಿಯ ymca ಆವರಣದಲ್ಲಿ ಹಾಗೂ ಬೆಂಗಳೂರಿನ ಹಲವು ಹತ್ತೆಡೆಗಳಲ್ಲೂ ಈ ಪ್ರಹಸನದ ಯಶಸ್ವೀ ಪ್ರದರ್ಶನಗಳಾದವು.ಬೇರೆ ಬೇರೆ ಊರುಗಳಿಂದ ಬಂದಿದ್ದ ಶಿಬಿರಾರ್ಥಿಗಳು ತಂತಮ್ಮ ಊರುಗಳಿಗೆ ಮರಳಿದ ಮೇಲೆ ತಂತಮ್ಮ ತಂಡಗಳ ವತಿಯಿಂದಲೂ ಈ ಪ್ರಹಸನವನ್ನು ಸಿದ್ಧ ಪಡಿಸಿಕೊಂಡು ಹಲವೆಡೆ ಯಶಸ್ವಿಯಾಗಿ ಪ್ರದರ್ಶಿಸಿದರಂತೆ!ಇದನ್ನೊಂದು ಪೂರ್ಣಪ್ರಮಾಣದ ನಾಟಕವಾಗಿ ಬೆಳೆಸಿ ರಂಗದ ಮೇಲೆ ತರಬೇಕೆಂದು ಆಗಲೇ ನಿರ್ಧರಿಸಿಕೊಂಡು ‘ಮಂಡೂಕರಾಜ್ಯ’ವೆಂದು ನಾಮಕರಣವನ್ನೂ ಮಾಡಿಟ್ಟೆ.

ಕುಂಬಳಗೋಡಿನ ಈ ಶಿಬಿರವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಹೆಮ್ಮೆ—ಖುಷಿಯಿಂದ ಬೀಗುತ್ತಾ ಬೆಂಗಳೂರಿಗೆ ಮರಳಿದವನಿಗೆ ಮತ್ತೊಂದು ಖುಷಿಯ ಸಂಗತಿ ಕಾದಿತ್ತು:ಜಿ.ವಿ.ಅಯ್ಯರ್ ಅವರು ತುರ್ತಾಗಿ ಬಂದು ಕಾಣುವಂತೆ ಹೇಳಿದ್ದಾರೆ! ಓಹೋ! ಕೊನೆಯ ಗಳಿಗೆಯಲ್ಲಿ ಅವರ ಮನಸ್ಸು ಬದಲಾಗಿರಬಹುದು; ನನಗೇ ಶಂಕರರ ಪಾತ್ರ ನೀಡಲು ಅವರು ನಿರ್ಧರಿಸಿರಬಹುದು ಎಂದು ಮನಮನದಲ್ಲೇ ಸಂಭ್ರಮಿಸತೊಡಗಿದೆ! ಪ್ರಯೋಜನವಿಲ್ಲವೆಂದು ಅರಿವಾಗಿದ್ದರೂ ‘ಇರಲಿ..ಇನ್ನೊಂದು ಸಲ ಪರೀಕ್ಷಿಸಿಯೇ ಬಿಡೋಣ..ಅಕಸ್ಮಾತ್ ಫಲ ನೀಡಿಬಿಟ್ಟರೆ!’ ಎಂಬ ದೂರದಾಸೆಯಿಂದ ಮತ್ತೆರಡು ಬಾಟಲ್ ದ್ರಾಕ್ಷಾಕಲ್ಪ ತಂದು ಸೇವಿಸತೊಡಗಿದೆ. ಜಯನಗರದ ಶಾರೀರಿಕ ಶಿಕ್ಷಾಕೇಂದ್ರದಲ್ಲಿ ಡಂಬಲ್ ಎತ್ತಿ ತಿರುಗಿಸತೊಡಗಿದೆ. ಶೂಟಿಂಗ್ ಶುರುವಾಗುವ ವೇಳೆಗೆ ಒಂದಿಷ್ಟು ಚರ್ಬಿ ಬೆಳೆದೇಬಿಟ್ಟರೆ!!

ಇಷ್ಟೆಲ್ಲಾ ಪೂರ್ವಸಿದ್ಧತೆ ಮಾಡಿಕೊಂಡು ಅಯ್ಯರ್ ಅವರು ಹೇಳಿದ ದಿನ ಅವರನ್ನು ಭೇಟಿಯಾಗಲು ಆರ್ ಪಿ ಸಿ ಲೇ ಔಟ್ ನಲ್ಲಿದ್ದ ಅವರ ಮನೆಗೆ ಹೋದೆ.ಅಯ್ಯರ್ ಅವರು ಬಹಳ ಆತ್ಮೀಯತೆಯಿಂದ ಸ್ವಾಗತಿಸಿದರು.” ಬಾರಯ್ಯಾ..ನಿನಗೊಂದು ಬಹಳ ಮುಖ್ಯವಾದ ಜವಾಬ್ದಾರಿ ಹೊರಿಸಬೇಕೂಂತ ಅಂದುಕೊಂಡಿದ್ದೀನಯ್ಯಾ..ಕಾರಂತ ನಿನ್ನ ಬಗ್ಗೆ ತುಂಬಾ ಹೇಳಿದಾನೆ ..ಹಿಂದಿ ಭಾಷೆ ನಾಟಕದಲ್ಲೆಲ್ಲಾ ಸೊಗಸಾಗಿ act ಮಾಡಿದೆ ಅಂತ ನಿನ್ನ ಬಗ್ಗೆ ತುಂಬಾ ಹೇಳಿದ”… ಓಹೋ! ಅಲ್ಲಿಗೆ ಶಂಕರರ ಪಾತ್ರ ನನಗೇ ಇರಬೇಕು!..”ನಾನು ಆದಿ ಶಂಕರ ಅನ್ನೋ ಸಿನೆಮಾ ಮಾಡ್ತಿದೀನಯ್ಯಾ..ಪೂರ್ತಿ ಸಿನೆಮಾ ಸಂಸ್ಕೃತ ಭಾಷೆಯಲ್ಲಿರುತ್ತೆ..ಅದರಲ್ಲಿ ಒಂದು ಮುಖ್ಯ ಪಾತ್ರಕ್ಕೆ ನಿನ್ನನ್ನ ಯೋಚನೆ ಮಾಡಿದೀನಯ್ಯಾ…”
‘ಒಂದು’ ಮುಖ್ಯ ಪಾತ್ರ ಅಂದರೆ ಬಹುಶಃ ಶಂಕರರ ಪಾತ್ರವಲ್ಲವೇನೋ..ಮನಸ್ಸು ಸಣ್ಣಗೆ ಖಿನ್ನವಾಗತೊಡಗಿತು. “ನನ್ನ ಸಿನೆಮಾದಲ್ಲಿ ಎರಡು ಮುಖ್ಯ ಪಾತ್ರಗಳು ಬರುತ್ತವೆ..ಜ್ಞಾನ ಮತ್ತು ಮೃತ್ಯು ಅಂತ.ಶಂಕರರ ಪಾತ್ರ ಬಿಟ್ಟರೆ ಇವೇ ತುಂಬಾ ಮುಖ್ಯ ಪಾತ್ರಗಳು…ಮೊದಲಿಂದ ಕೊನೇವರೆಗೂ ಶಂಕರರ ಜೊತೆಯಲ್ಲೇ ಇರುವಂಥ ಪಾತ್ರಗಳು..ಅಂದರೆ ಶೂಟಿಂಗ್ ನಡೆಯೋ ಅಷ್ಟು ದಿನವೂ ನೀನು ನಮ್ಮ ಜೊತೇಲೇ ಇರಬೇಕು…ಕಾಲಟಿಯಿಂದ ಹಿಡಿದು ಬದರಿ—ಕೇದಾರದವರೆಗೂ ಹೋಗಿ ಶೂಟಿಂಗ್ ಮಾಡಿಕೊಂಡು ಬರಬೇಕು..ಹೋಗಿ ಬರೋ ತನಕ ಬೇರೆ ಎಲ್ಲಾನೂ ಮರೆತುಬಿಡಬೇಕಾಗುತ್ತೆ. ನಿನ್ನ ಒಪ್ಪಿಗೆ ಇದೆಯೋ ಇದಕ್ಕೆ?”

ಪ್ರಾರಂಭದಲ್ಲಿ ನಿರಾಸೆಯಾದರೂ ನಾನೇ ಸಮಾಧಾನ ಮಾಡಿಕೊಂಡೆ: ವ್ಯಾಪಾರೀ ಚಿತ್ರರಂಗವನ್ನು ಬಿಟ್ಟು ಸಂಪೂರ್ಣ ವಿಭಿನ್ನ ಮಾರ್ಗದಲ್ಲಿ ಪ್ರಾಯೋಗಿಕ—ಅರ್ಥಪೂರ್ಣ ಚಿತ್ರ ನಿರ್ಮಾಣ—ನಿರ್ದೇಶನಕ್ಕೆ ಇಳಿದಿರುವ ಹಿರಿಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡಲು ಅವಕಾಶ ದೊರೆಯುತ್ತಿದೆ..ಒಳ್ಳೆಯ ಪಾತ್ರದ ಜತೆಗೆ ಸಮಗ್ರ ಭಾರತದ ಪ್ರವಾಸಕ್ಕೆ ದೊರೆಯುತ್ತಿರುವ ಸುವರ್ಣಾವಕಾಶ ಇದು! “ಆಗಲಿ ಗುರುಗಳೇ..ನೀವು ಹೇಳಿದ ಪಾತ್ರವನ್ನು ನಿರ್ವಹಿಸಲು ನಾನು ಸಿದ್ಧನಿದ್ದೇನೆ” ಎಂದೆ. “ಸಧ್ಯ! ಅರ್ಧ ಹೊರೆ ಇಳೀತು ಕಣಯ್ಯಾ. ಈ ಜ್ಞಾನ ಮತ್ತು ಮೃತ್ಯು ಅನ್ನೋ ಪಾತ್ರಗಳು ಸದಾ ಶಂಕರರ ನೆರಳಾಗಿ ಬರುತ್ತಿರುತ್ತವೆ ಕಣಯ್ಯಾ..ನೀನು ‘ಜ್ಞಾನ’; ನಾಗಾಭರಣ ‘ಮೃತ್ಯು’.ಜ್ಞಾನ ಶಂಕರರ ಎಲ್ಲ ತಿಳುವಳಿಕೆ—ಕಾಣ್ಕೆ—ಸಾಧನೆ ಹಾಗೂ ಸಿಧ್ಧಿಗಳಿಗೆ ಸಂಕೇತವಾಗಿ ಕಾಣಿಸಿಕೋತಾನೆ;ಮೃತ್ಯು ಅವರಿಗೆ ಆಗಾಗ್ಗೆ ಕವಿಯುವ ಕತ್ತಲು..ಗೊಂದಲ..ಅಜ್ಞಾನ..ಮಬ್ಬುಗಳನ್ನು ಸಂಕೇತಿಸುತ್ತಾನೆ..ಮೃತ್ಯುವನ್ನು ದೂರ ಅಟ್ಟುವವನು ಜ್ಞಾನ..ಜ್ಞಾನ ಆವರಿಸಿಕೊಂಡಾಗ ಮೃತ್ಯುವಿಗೆ ಎಡೆಯಿಲ್ಲ..”
ಹೀಗೆ ಅಯ್ಯರ್ ಅವರು ಸುಮಾರು ಹೊತ್ತು ತಾವು ಸೃಷ್ಟಿಸಿದ್ದ ಈ ಎರಡು ಪಾತ್ರಗಳ ಅಂತರಂಗವನ್ನು ನನ್ನೆದುರು ತೆರೆದಿಟ್ಟರು. ನಿಜಕ್ಕೂ ತುಂಬಾ ವಿಶಿಷ್ಟವಾದ ಪರಿಕಲ್ಪನೆ ಇದು ಅನ್ನಿಸಿತು ನನಗೆ.’ಆದಿ ಶಂಕರ ‘ ಚಿತ್ರದ ಚಿತ್ರಕಥೆ—ಸಂಭಾಷಣೆಗಳ ಒಂದು ಪ್ರತಿಯನ್ನು ನನ್ನ ಕೈಗಿತ್ತ ಅಯ್ಯರ್ ಅವರು , “ಬಹಳ ಕಷ್ಟದಲ್ಲಿ ಈ ಚಿತ್ರ ಮಾಡ್ತಿದೀನಯ್ಯಾ..ಇಂಥಾ ಚಿತ್ರಕ್ಕೆ..ಅದೂ ಸಂಸ್ಕೃತ ಚಿತ್ರಕ್ಕೆ ನಿರ್ಮಾಪಕರು ಎಲ್ಲಿ ಸಿಗ್ತಾರೆ? ಏನೋ nfdc ಯವರು ಬೆಂಬಲಕ್ಕೆ ನಿಂತಿದ್ದರಿಂದ ಈ ಚಿತ್ರ ಮಾಡೋ ಧೈರ್ಯ ಮಾಡಿ ಮುನ್ನುಗ್ತಿದೀನಿ..ನಿಮ್ಮೆಲ್ಲರ ಸಹಕಾರ—ಬೆಂಬಲ ಬೇಕು ಕಣಯ್ಯಾ.ವಿಶೇಷವಾದ ಸಂಭಾವನೆಯ ನಿರೀಕ್ಷೆ ಇಟ್ಟುಕೋಬೇಡ….ಕೊಡೋ ಸ್ಥಿತೀಲಿಲ್ಲ ನಾನು..ಈಗ ಸ್ವಲ್ಪ advance ಅಂತ ಕೊಟ್ಟಿರ್ತೀನಿ..ಮುಂದೆ ಉಳಿದದ್ದು ನೋಡೋಣ” ಎಂದವರೇ 500 ರೂಪಾಯಿಗಳಿಗೆ ಒಂದು ಚೆಕ್ ಬರೆದುಕೊಟ್ಟರು.ಅದೇ ಮೊದಲು..ಅದೇ ಕೊನೆ..’ಮುಂದೆ ಉಳಿದದ್ದು ನೋಡುವ’ ಪ್ರಸಂಗ ಬರಲೇ ಇಲ್ಲ! ಅಯ್ಯರ್ ಅವರ ಬವಣೆಗಳ ಪ್ರತ್ಯಕ್ಷ ದರ್ಶನವಾದ ಮೇಲೆ ನಾನೂ ಆ ಬಗ್ಗೆ ಮಾತಾಡಲು ಹೋಗಲಿಲ್ಲ!

ಬಹುಶಃ ಇದಾದ ಒಂದು ವಾರದಲ್ಲೇ “ಆದಿ ಶಂಕರ” ಚಿತ್ರದ ಚಿತ್ರೀಕರಣಕ್ಕಾಗಿ ನಮ್ಮ ಸಮಗ್ರ ಭಾರತ ಯಾತ್ರೆ ಆರಂಭವಾಗಿಯೇ ಹೋಯಿತು.ಒಂದು ದೊಡ್ಡ ಬಸ್ ನಲ್ಲಿ ಎಲ್ಲ ಕಲಾವಿದರೂ ತಂತ್ರಜ್ಞರೂ ಸಂಭ್ರಮ—ಉತ್ಸಾಹಗಳಿಂದ ‘ಚಿತ್ರ ಯಾತ್ರೆ’ ಆರಂಭಿಸಿದೆವು. ಹಲವು ವರ್ಷಗಳಿಂದ ಕಂಡ ಕನಸು ಸಾಕಾರಗೊಳ್ಳುತ್ತಿದೆಯೆಂಬ ಸಾರ್ಥಕ ಭಾವದ ಮಿಂಚು ಅಯ್ಯರ್ ಅವರ ಕಣ್ಣುಗಳಲ್ಲಿ ಹೊಳೆಯುತ್ತಿತ್ತು.ಚಿತ್ರೀಕರಣ ಆರಂಭವಾದುದು ಶಂಕರರ ಜನ್ಮಸ್ಥಳವಾದ ಕೇರಳದ ಕಾಲಟಿಯಲ್ಲಿ. ಬಹುಶಃ ಮುಹೂರ್ತದ ಸಂದರ್ಭಕ್ಕೇ ಇರಬೇಕು—ಬೆಂಗಳೂರಿನಿಂದ YNK ಹಾಗೂ ಡಾ॥ವಿಜಯಾ ಅವರು ಆಗಮಿಸಿದ್ದೊಂದು ವಿಶೇಷ. YNK ಅವರು ಅನೇಕ ಸಂದರ್ಭಗಳಲ್ಲಿ ನನಗೆ ನೀಡಿದ ಮಾರ್ಗದರ್ಶನವನ್ನೂ ನೆರವನ್ನೂ ಹಿಂದಿನ ಪುಟಗಳಲ್ಲಿ ದಾಖಲಿಸಿದ್ದೇನೆ.ಅಂತೆಯೇ ನನಗೆ ಹಾಗೂ ನನ್ನಂಥ ಅನೇಕ ಕಿರಿಯರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನಗಳನ್ನು ನೀಡಿ ತಿದ್ದಿದವರು ಡಾ॥ವಿಜಯಾ. ಸಾಹಿತ್ಯ—ರಂಗಭೂಮಿ—ಪತ್ರಿಕಾ ರಂಗ— ಮಾಧ್ಯಮ—ಸಿನೆಮಾ…ಹೀಗೆ ಅನೇಕ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಕನ್ನಡ ಸಾಂಸ್ಕೃತಿಕ ಲೋಕದ ಒಂದು ಪ್ರಮುಖ ಪ್ರೇರಕ ಶಕ್ತಿಯಾದ ಡಾ॥ವಿಜಯಾ ಅವರು ನಮ್ಮೆಲ್ಲರ ಪಾಲಿಗೆ ಪ್ರೀತಿಯ ‘ವಿಜಯಮ್ಮ’.ತಪ್ಪುಗಳಾದಾಗ ಯಾವುದೇ ಮುಲಾಜಿಲ್ಲದೆ ನಿಷ್ಠುರವಾಗಿ ಸಿಡಿಯುವ ಈ ವಿಜಯಮ್ಮ ಅಷ್ಟೇ ಶುದ್ಧಾಂತಃಕರಣಿ; ಪ್ರಖರ ವಿಚಾರವಾದಿ. ಅನೇಕ ಸಂದರ್ಭಗಳಲ್ಲಿ ನಾನು ಇವರಿಂದ ಮಾರ್ಗದರ್ಶನವನ್ನು ಪಡೆದಿದ್ದೇನೆ.ಮುಂದಿನ ಪುಟಗಳಲ್ಲಿ ಇನ್ನಷ್ಟು ವಿವರಗಳನ್ನು ದಾಖಲಿಸುತ್ತೇನೆ.
ಕಾಲಟಿಯಿಂದ ಪ್ರಾರಂಭವಾದ ನಮ್ಮ ಚಿತ್ರೀಕರಣ ಪ್ರವಾಸ ಹಲವಾರು ದಿನಗಳ ಕಾಲ ಯಾವ ಅಡೆತಡೆಯೂ ಇಲ್ಲದೆ ಸಾಗಿತು.

ನಮ್ಮ ತಂಡದಲ್ಲಿ ಅನೇಕ ನುರಿತ ಹಿರಿಯ ಕಲಾವಿದರಿದ್ದರು.ಶಂಕರರ ತಾಯಿಯ ಪಾತ್ರದಲ್ಲಿ ಎಲ್.ವಿ.ಶಾರದಾ ಅವರು,ತಂದೆಯ ಪಾತ್ರದಲ್ಲಿ ಹಿಂದಿ ಚಿತ್ರರಂಗದ ಹಿರಿಯ ನಟ ಭರತ್ ಭೂಷಣ್ ಅವರು,ಸುರೇಶ್ವರಾಚಾರ್ಯರಾಗಿ ದೆಹಲಿಯ ಎಂ.ವಿ.ನಾರಾಯಣ ರಾವ್ ಅವರು,ಹಸ್ತಾಮಲಕನಾಗಿ ವಿ.ಆರ್.ಕೆ.ಪ್ರಸಾದ್ ಅವರು,ಕುಮಾರಿಲ ಭಟ್ಟರಾಗಿ ಶ್ರೀಪತಿ ಬಲ್ಲಾಳರು ಅಭಿನಯಿಸುತ್ತಿದ್ದರು.ಬಾಲ ಶಂಕರನಾಗಿ ಗೋಪಿ(ಈಗ ಪ್ರಸಿದ್ಧ ಭರತನಾಟ್ಯ ಕಲಾವಿದ),ಬಾಲ ಜ್ಞಾನನಾಗಿ ಅಯ್ಯರ್ ಅವರ ಸುಪುತ್ರ ರಾಘು,ಬಾಲ ಮೃತ್ಯುವಾಗಿ ನಾಗಾಭರಣನ ಸೋದರ ಅಭಿನಯಿಸುತ್ತಿದ್ದರು.

ಮಧುಅಂಬಟ್ ಛಾಯಾಗ್ರಹಣದ ಹೊಣೆ ಹೊತ್ತಿದ್ದರೆ ಕೃಷ್ಣಮೂರ್ತಿಯವರು ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.ರಂಗನಾಥ ಶರ್ಮರು ಹಾಗೂ ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಸಂಭಾಷಣೆಗಳನ್ನು ರಚಿಸಿದ್ದಲ್ಲದೆ ಕಲಾವಿದರ ಉಚ್ಚಾರಣೆಯನ್ನು ತಿದ್ದುವುದರಲ್ಲಿಯೂ ನೆರವಾಗುತ್ತಿದ್ದರು.ಸಂಗೀತ ನಿರ್ದೇಶನ ಬಾಲಮುರಳಿ ಕೃಷ್ಣರದ್ದಾದರೆ ಹಿನ್ನೆಲೆ ಸಂಗೀತ ಬಿ.ವಿ.ಕಾರಂತರದು! ಹೀಗೆ ಮಹಾ ಪ್ರತಿಭಾಶಾಲಿಗಳ ತಂಡವೇ ಅಯ್ಯರ್ ಅವರ ಈ ದೊಡ್ಡ ಸಾಹಸದಲ್ಲಿ ಅವರಿಗೆ ಬೆಂಬಲವಾಗಿ ನಿಂತಿತ್ತು.

ಬಹುಶಃ ಕುದುರೆಮುಖದ ಆಜುಬಾಜಿನಲ್ಲಿ ಶೂಟಿಂಗ್ ನಡೆಸುತ್ತಿದ್ದ ಸಮಯ…ಅಲ್ಲಿಯೇ ಉಭಯಭಾರತಿಯವರು ಶಂಕರರಿಗೆ ಹಾಗೂ ಅವರ ಶಿಷ್ಯರಿಗೆ ಊಟ ಬಡಿಸುವ ದೃಶ್ಯದ ಚಿತ್ರೀಕರಣ ನಡೆಯಬೇಕಿತ್ತು.ಉಭಯಭಾರತಿಯವರ ಪಾತ್ರಕ್ಕೆ ಶಂಕರ ಪಾತ್ರಧಾರಿ ಸರ್ವದಮನ ಬ್ಯಾನರ್ಜಿಯವರು ತಮ್ಮ ಒಬ್ಬ ಗೆಳತಿಯನ್ನೇ ಕರೆಸಿದ್ದರು. ಇಲ್ಲಿಯೇ,”ಯಾಕೋ ಏನೋ ಸರಿ ಹೋಗುತ್ತಿಲ್ಲ..ಸಣ್ಣಗೆ ಅಸಮಾಧಾನ ಹೊಗೆಯಾಡುತ್ತಿದೆ” ಎಂದು ನನಗೆ ತೀವ್ರವಾಗಿ ಅನ್ನಿಸತೊಡಗಿತ್ತು.

ಈ ಕುರಿತಾಗಿ ನಾನು ಭರಣನೊಟ್ಟಿಗೆ ಮಾತಾಡಿದ್ದೂ ಉಂಟು..ನಮಗೇಕೆ ಇಲ್ಲದ ಗೊಡವೆ ಎಂದು ಸುಮ್ಮನಾದ್ದೂ ಉಂಟು! ಈ ನಡುವೆಯೇ ಒಂದು ಅವಗಢ ನಡೆದುಹೋಯಿತು: ಅಯ್ಯರ್ ಅವರು ಒಂದೆಡೆ ಆಯತಪ್ಪಿ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡುಬಿಟ್ಟರು. ಅದೆಂಥಾ ಅಸಾಧ್ಯ ನೋವು ಅವರನ್ನು ಬಾಧಿಸುತ್ತಿತ್ತೆಂದರೆ ತಡೆಯಲಾರದೆ ಅಮ್ಮಾ..ಶಂಕರಾ..ಎಂದು ಚೀರುತ್ತಿದ್ದರು.ಕೂಡಲೇ ಶೂಟಿಂಗ್ ರದ್ದುಮಾಡಿ ಅಯ್ಯರ್ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯುವುದೆಂದು ತೀರ್ಮಾನವಾಯಿತು. ತಂಡದವರನ್ನೆಲ್ಲಾ ಊರಿಗೆ ಕಳಿಸಿ ನಾವೂ ಮೂರು ನಾಲ್ಕು ಜನ ಅಯ್ಯರ್ ಅವರನ್ನು ambulance ನಲ್ಲಿ ಕರೆದುಕೊಂಡು ಹೊರಟೆವು.

ವ್ಯಾನ್ ಒಮ್ಮೆ ಸಣ್ಣದಾಗಿ ಕುಲುಕಿದರೂ ಅವರಿಗೆ ವಿಪರೀತ ನೋವು ಬಾಧಿಸುತ್ತಿತ್ತು..’ಅಮ್ಮಾ’..’ಶಂಕರಾ’..ಎಂಬ ಚೀತ್ಕಾರಗಳು ಹೊರಹೊಮ್ಮುತ್ತಿದ್ದವು.ಹೇಗೋ ಕಷ್ಟಪಟ್ಟುಕೊಂಡು ನಿಧಾನವಾಗಿ ಗಾಡಿ ಚಲಿಸುತ್ತಾ ಮಣಿಪಾಲ ಮುಟ್ಟುವ ವೇಳೆಗೆ ಸಾಕು ಸಾಕಾಗಿಹೋಗಿತ್ತು. ಮಣಿಪಾಲ್ ಆಸ್ಪತ್ರೆಯಲ್ಲಿ ಅಯ್ಯರ್ ಅವರಿಗೆ ಚಿಕಿತ್ಸೆ ಆರಂಭವಾಯಿತು.ಗೆಳೆಯ ವಿ.ಆರ್.ಕೆ.ಪ್ರಸಾದ,”ನಾನು ಅಪ್ಪಾಜಿಯ ಜತೆಯಲ್ಲಿ ಇಲ್ಲಿರುತ್ತೇನೆ.ಹೇಗೂ ಅವರ ಮನೆಯವರೂ ಇಲ್ಲೇ ಇದ್ದಾರೆ..ನೀವುಗಳು ಇಲ್ಲಿ ಇದ್ದರೂ ಏನೂ ಪ್ರಯೋಜನವಿಲ್ಲ..ಊರಿಗೆ ಹೋಗಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಿರಿ..ಅಪ್ಪಾಜಿ ಗುಣಮುಖರಾಗಿ ಶೂಟಿಂಗ್ ನಡೆಸಲು ಸಿದ್ಧರಾದ ಕೂಡಲೇ ಹೇಳಿ ಕಳಿಸುತ್ತೇನೆ” ಎಂದು ನುಡಿದು ನಮ್ಮನ್ನು ಬೆಂಗಳೂರಿಗೆ ಕಳಿಸಿಕೊಟ್ಟ.

ಅಯ್ಯರ್ ಅವರು ಇದ್ದ ಸ್ಥಿತಿಯಲ್ಲಿ ಅವರು ಪೂರ್ತಿ ಚೇತರಿಸಿಕೊಂಡು ಚಿತ್ರೀಕರಣ ನಡೆಸಲು ಶಕ್ತರಾಗುವುದಕ್ಕೆ ಕನಿಷ್ಠ ಎರಡು ತಿಂಗಳಾದರೂ ಬೇಕೆಂಬುದು ನಮ್ಮ ದೃಢ ನಂಬಿಕೆಯಾಗಿತ್ತು.ಹಾಗಾಗಿ ಎಸ್.ಕೆ.ಶ್ರೀಧರನ ಆಹ್ವಾನದ ಮೇಲೆ ಮಂಗಳೂರಿನಲ್ಲಿ ಒಂದು ತರಬೇತಿ ಶಿಬಿರ ನಡೆಸಲು ಹೊರಟುಬಿಟ್ಟೆ.ಶಿಬಿರದ ನಡುವೆ ಏನೋ ಕಾರ್ಯನಿಮಿತ್ತ ಒಂದು ದಿನದ ಮಟ್ಟಿಗೆ ಬೆಂಗಳೂರಿಗೆ ಬರಬೇಕಾಯಿತು.

ಅಂದಿಗೆ ಅಯ್ಯರ್ ಅವರಿಗೆ ಪೆಟ್ಟುಬಿದ್ದು ಇಪ್ಪತ್ತು ದಿನಗಳಾಗಿದ್ದಿರಬೇಕು..ಮಂಗಳೂರು ಶಿಬಿರ ಮುಗಿದ ಮೇಲೆ ಮತ್ತೂ ಒಂದೆಡೆ ಹೋಗಿ ಶಿಬಿರ ನಡೆಸಿಬಿಡಬೇಕೆಂದು ಮನದಲ್ಲೇ ಯೋಚಿಸುತ್ತಿದ್ದೆ.ಅಂದು ಬೆಂಗಳೂರಿಗೆ ಬಂದವನು ಸಂಜೆ ಗೆಳೆಯರನ್ನು ಭೇಟಿಯಾಗಿ ಬರಲು ಕಲಾಕ್ಷೇತ್ರಕ್ಕೆ ಹೋದೆ.ಕಲಾಕ್ಷೇತ್ರದ ಮೆಟ್ಟಿಲ ಮೇಲೆ ಕುಳಿತಿದ್ದಾಗ ನನ್ನ ಕಣ್ಣ ಮುಂದಿನಿಂದ ಹಾದು ಹೋದ ಕಾರ್ ನಲ್ಲಿ ನೀಳಗಡ್ಡದ ವ್ಯಕ್ತಿಯೊಬ್ಬರು ಕುಳಿತಿದ್ದು ಕಂಡು,”ಅರೆ! ಯಾರೋ ನಮ್ಮ ಅಯ್ಯರ್ ಅವರ ಥರಾನೇ ಇದಾರಲ್ಲಾ” ಎಂದುಕೊಂಡೆ. ಒಂದೆರಡು ಕ್ಷಣಗಳಲ್ಲೇ ಕಾರ್ ನಿಂದ ಕೆಳಗಿಳಿದು ಕಲಾಕ್ಷೇತ್ರದತ್ತ ಬರತೊಡಗಿದ ಆ ವ್ಯಕ್ತಿಯನ್ನು ಕಂಡು ನಾನು ದಂಗುಬಡಿದು ಹೋದೆ! ಅವರು ಅಯ್ಯರ್ ತರಹ ಇದ್ದವರಲ್ಲ..ಸಾಕ್ಷಾತ್ ಅಯ್ಯರ್ ಅವರೇ! ಆಸರೆಗೆ ಕೈಲಿ ಒಂದು ಕೋಲು ಹಿಡಿದು ನಿಧಾನವಾಗಿ ನಡೆದುಬರುತ್ತಿದ್ದಾರೆ! ತಕ್ಷಣವೇ ಮಂಗಳೂರು ಶಿಬಿರದ ನೆನಪು ನುಗ್ಗಿಬಂತು.ಇನ್ನೊಂದು ವಾರದ ತರಬೇತಿ ಉಳಿದಿದೆ; ಶಿಬಿರದ ಅಂಗವಾಗಿ ಒಂದು ನಾಟಕವನ್ನೂ ಸಿದ್ಧ ಪಡಿಸಬೇಕಿದೆ!ಅದಕ್ಕಾಗಿ ಟೌನ್ ಹಾಲ್ ಬುಕ್ ಆಗಿ ಹೋಗಿದೆ! ಈಗ ಅಯ್ಯರ್ ಅವರು ನಾಳೆ ನಾಡಿದ್ದರಲ್ಲಿ ಶೂಟಿಂಗ್ ಗೆ ಹೊರಡಬೇಕೆಂದು ಬಿಟ್ಟರೆ?
ಮೆಲ್ಲನೆ ಅವರ ಕಣ್ಣು ತಪ್ಪಿಸಿ ಒಳನಡೆದೆ.ನಂತರ ಅಲ್ಲಿದ್ದ ಗೆಳೆಯರಿಂದ ತಿಳಿದ ವಿಷಯವಿಷ್ಟು: ಅಯ್ಯರ್ ಅವರು ವಾಸ್ತವವಾಗಿಯೇ ಒಂದೆರಡು ದಿನಗಳಲ್ಲೇ ಶೂಟಿಂಗ್ ಪ್ರಾರಂಭಿಸುವವರಿದ್ದಾರೆ! ಆ ಕುರಿತು ಸುದ್ದಿ ತಲುಪಿಸುವ ಸಲುವಾಗಿಯೇ ಕಲಾಕ್ಷೇತ್ರಕ್ಕೆ ಬಂದಿದ್ದಾರೆ! ಒಂದಿಷ್ಟು ಯೋಚಿಸಿದ ಬಳಿಕ ನಾನು ಅಲ್ಲಿಯೇ ಒಂದು ಕಾಗದ ಪೆನ್ಸಿಲ್ ಹೊಂದಿಸಿಕೊಂಡು ,”ನನ್ನ ಪೂರ್ವ ನಿರ್ಧರಿತ ಕಾರ್ಯಕ್ರಮಗಳಿಗಾಗಿ ಮಂಗಳೂರಿಗೆ ಹೋಗುತ್ತಿದ್ದೇನೆ…

8—9 ದಿನಗಳೊಳಗೆ ಬೆಂಗಳೂರಿಗೆ ಬಂದುಬಿಡುತ್ತೇನೆ” ಎಂದು ಬರೆದು ಕಾಗದವನ್ನು ಅವರಿಗೆ ತಲುಪಿಸುವಂತೆ ಹೇಳಿ ನನ್ನ ಗೆಳೆಯರ ಕೈಗಿತ್ತು ಸೀದಾ ಮಂಗಳೂರು ಬಸ್ ಹತ್ತಿಬಿಟ್ಟೆ!ಅಯ್ಯರ್ ಅವರನ್ನು ಮುಖತಃ ಭೇಟಿಯಾಗುವಷ್ಟು ಧೈರ್ಯವಿರಲಿಲ್ಲ ನನಗೆ! ನನ್ನ ಕಾಗದ ಕಲಾಕ್ಷೇತ್ರದೊಳಗಿದ್ದ ಅಯ್ಯರ್ ಅವರಿಗೆ ತಲುಪಿದ್ದೇ ತಡ ಅವರು ಹೊರಗೋಡಿಬಂದರಂತೆ! “ಎಲ್ಲಯ್ಯಾ ಅವನು ಆ ಶ್ರೀನಿವಾಸ ಪ್ರಭೂ?”ಎಂದು ತುಂಬಾ ವಿಚಾರಿಸಿದರಂತೆ! ಏನೇ ಆದರೂ ಕನಿಷ್ಠ ಎರಡು ತಿಂಗಳು ಹಾಸಿಗೆ ಬಿಟ್ಟೇಳುವುದಿಲ್ಲ ಎಂದುಕೊಂಡಿದ್ದ ಅಯ್ಯರ್ ಅವರು 20—22 ದಿನಗಳಲ್ಲಿ ಚೇತರಿಸಿಕೊಂಡು ಶೂಟಿಂಗ್ ಗೆ ಸಿದ್ಧರಾದದ್ದು ಒಂದು ಪವಾಡವೇ ಸರಿ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಬೆರಗಾಗಿ ಹೋದರಂತೆ! ಅವರ ಮಾತಿನಲ್ಲೇ ಹೇಳುವುದಾದರೆ: “ಅಯ್ಯರ್ ಅವರ ಮನೋಬಲವಷ್ಟೇ ಅವರಿಗೆ ಈ ಮಟ್ಟಿನ ಚೈತನ್ಯ ತುಂಬಿರುವುದು;ಇಲ್ಲದಿದ್ದರೆ ಇದು ಕಲ್ಪನೆಗೂ ನಿಲುಕದ ಸಂಗತಿ”!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

May 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: