ಪಿ ಪಿ ಉಪಾಧ್ಯ ಸರಣಿ ಕಥೆ 3 – ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು…

ಪಿ ಪಿ ಉಪಾಧ್ಯ

3

ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು

ಅಂತೂ ಒಂದು ದಿನ ಶಾಮಣ್ಣನೇ ಬಹಳ ಕಷ್ಟಪಟ್ಟು ವಿಷಯವನ್ನೆತ್ತಿದರೆ ಮೊದಲಿಗೆ ತಮ್ಮಣ್ಣ ತಮಾಷೆ ಮಾಡಿದ ಏನು ಶಾಮಣ್ಣನವರಿಗೆ ಉಮೇದು ಬಂದಿದೆಯೋ ಹೇಗೆ' ಎಂದು. ಆ ಮಾತು ಮತ್ತದರ ಧಾಟಿ ಕೇಳಿ ಅಳು ಮೋರೆ ಹಾಕಿದ ಶಾಮಣ್ಣನನ್ನು ಕಂಡು ಅವನಿಗೇ ಬೇಜಾರಾಗಿಇಲ್ಲ ಮಾರಾಯ.. ನಾನೇನಾದರೂ ನಿನಗೆ ಹೇಳಿಕೊಟ್ಟು ಅದೆಲ್ಲಾದರೂ ನಿಮ್ಮಪ್ಪನಿಗೆ ತಿಳಿದರೆ ನನಗೆ ಮುಂದೆ ಈ ಊರಿನಲ್ಲಿ ಇರಸ್ತಿಕೆ ಉಂಟೋ ..’ ಎಂದು ತನ್ನ ನಿಜವಾದ ಹೆದರಿಕೆಯನ್ನು ತೋಡಿಕೊಂಡಿದ್ದ. ಅಷ್ಟರಲ್ಲಿ ಹೇಳುವ ತಮ್ಮಣ್ಣನಿಗಿಂತ ಕೇಳುವ ಆತುರ ಮತ್ತು ಅಗತ್ಯ ಹೆಚ್ಚಾಗಿದ್ದ ಶಾಮಣ್ಣ ಅವಸರಿಸಿದರು. ಇಲ್ಲ ತಮ್ಮಣ್ಣ. ಯಾರಿಗೂ ಗೊತ್ತಾಗದ ಹಾಗೆ ಹೋದರಾಯ್ತಪ್ಪ' ಎಂದವರು ಈಗ ನನಗೂ ಸ್ವಲ್ಪ ಧೈರ್ಯ ಬಂದಿದೆ’ ಎಂದೂ ಸೇರಿಸಿದರು.

ಮುಂದೆ ಆಗಾಗ್ಗೆ ತಮ್ಮಣ್ಣನ ಜೊತೆಗೆ ಲಕ್ಷ್ಮೀಯ ಮನೆಗೆ ಹೋಗಿ ಬರುವುದನ್ನು ರೂಢಿಸಿಕೊಂಡವ ಕೆಲವೇ ದಿನಗಳಲ್ಲಿ ಆ ಲಕ್ಷ್ಮೀ ಬೇಸರವೆನಿಸಿ ಅಲ್ಲ ತಮ್ಮಣ್ಣ ನಿನಗೆಲ್ಲ ಗೊತ್ತು ಎನ್ನುತ್ತೀಯ.. ಈ ಲಕ್ಷ್ಮೀಯನ್ನು ಬಿಟ್ಟು ಬೇರೆ ಯಾರೂ ಇಲ್ಲವೇ? ಇವಳಿಗೂ ವಯಸ್ಸಾಯ್ತು. ಜೊತೆಗೆ ಅದೆಂತದು ವಾಸನೆ ಮಾರಾಯ.. ಎಷ್ಟು ಹೇಳಿದರೂ ಬಾಯಿಗೆ ಒಂದು ಹನಿ ನೀರೂ ಹಾಕುವುದಿಲ್ಲ ಎಂದು ಕಾಣುತ್ತದೆ' ಎಂದು ತನ್ನ ಆಸೆಯನ್ನು ಇನ್ನೂ ಪ್ರಕಟವಾಗಿಯೇ ತೋಡಿಕೊಂಡರು. ಹೋ ಶಾಮಣ್ಣನವರೂ ಪಳಗಿದ ಹಾಗೆ ಕಾಣುತ್ತದೆ’ ಎಂದು ಬಾಯಿಯಲ್ಲಿ ಹೇಳಿದರೂ ತಮ್ಮಣ್ಣ ಆವತ್ತೇ ಕಾರ್ಯಪ್ರವರ್ತನಾಗಿದ್ದ.

ಹುಡುಗ ಶಾಮಣ್ಣನಿಗೆ ಎಲ್ಲಿಂದಾದರೂ ಒಂದು ಹುಡುಗಿಯನ್ನು ಗಂಟು ಹಾಕಬೇಕೆನ್ನುವ ಪ್ರಯತ್ನದಲ್ಲಿ ತೊಡಗಿದ. ತನಗೆ ಗೊತ್ತಿದ್ದ ನಾಲ್ಕಾರು ಕಡೆ ವಿಚಾರಿಸಿ ಅಂತೂ ನಾಲ್ಕೆöÊದು ಮೈಲಿ ದೂರದ ಆನೆಗುಡ್ಡೆಯ ಪಕ್ಕದಲ್ಲಿ ಒಂದು ಹಾಡಿಯಲ್ಲಿ ಮನೆ ಮಾಡಿಕೊಂಡಿದ್ದ ಗಿರಿಜ ಎನ್ನುವ ಹೆಂಗಸಿನ ಮಗಳನ್ನು ಗಂಟು ಹಾಕಿಸಿದ. ಆ ಹುಡುಗಿ ಐದಾರು ಕ್ಲಾಸು ಕಲಿತವಳು.

ಅಬ್ಬೆಯ ಬಡತನ ಅದಕ್ಕಿಂತ ಹೆಚ್ಚಾಗಿ ಜೀವನದಲ್ಲಿ ಹೊಸತನ್ನು ಕಾಣಬೇಕೆಂಬ ಆತುರದಲ್ಲಿ ಹತ್ತು ಹನ್ನೆರಡನೇ ವಯಸ್ಸಿನಲ್ಲಿಯೇ ಊರ ದನ ಮೇಯಿಸುವ ಹುಡುಗರ ಜೊತೆಗೆ ದಟ್ಟ ಹಾಡಿಯ ಮರಗಳ ಅಡ್ಡದಲ್ಲಿ ತನ್ನ ಆತುರವನ್ನು ಪೂರೈಸಿಕೊಳ್ಳತೊಡಗಿದ್ದಳೆನ್ನುವ ಸುದ್ದಿ ಊರೆಲ್ಲ ಹರಡಿದ್ದರಿಂದ ಶಾಲೆಯನ್ನೂ ಬಿಡಬೇಕಾಗಿ ಬಂದ ಆಕೆ ಖಾಯಂ ಮನೆಯಲ್ಲಿಯೇ ಉಳಿಯುವಂತೆ ಆಗಿತ್ತು.

ಮನೆಯಲ್ಲಿಯೇ ಉಳಿದಳೆಂದಾಕ್ಷಣ ತುಡಿಯುವ ವಯಸ್ಸಿನಲ್ಲಿ ಮನಸ್ಸು ಕೇಳುವುದೇ. ಅದೂ ಶಾಲೆಗೆ ಹೋಗುವ ದಿನಗಳಲ್ಲಿ ತುಸುವಾದರೂ ಉಪಯೋಗಿಸುತ್ತಿದ್ದ ಶಾಲೆಯ ಕೆಲಸದ ಸಮಯವೂ ಈಗ ಲಭ್ಯವಿರುವಾಗ! ಅಂತಹ ದಿನಗಳಲ್ಲಿಯೇ ತಮ್ಮಣ್ಣನ ಕಿವಿಗೆ ಬಿದ್ದ ಆಕೆಯ ಸುದ್ದಿ ಶಾಮಣ್ಣನನ್ನು ಅಲ್ಲಿಗೆ ಕರೆತರುವಂತೆ ಮಾಡಿದ್ದು. ಆಗ ಶ್ಯಾಮನಿಗೆ ಹತ್ತೊಂಭತ್ತೋ ಇಪ್ಪತ್ತೋ. ಆಕೆಗೆ ಹದಿನಾಲ್ಕೋ ಹದಿನೈದೋ. ಒಂದು ವಿಷಯದಲ್ಲಿ ಮಾತ್ರ ತಮ್ಮಣ್ಣನೂ ನಿಯತ್ತಿನವನೇ. ತನ್ನ ಗೆಳೆಯನಿಗೆ ಜೊತೆ ಮಾಡಿದವ ತಪ್ಪಿಯೂ ಆ ಹುಡುಗಿಯತ್ತ ನೋಡುತ್ತಿರಲಿಲ್ಲ. ಅಷ್ಟೊಂದು ತೆವಲಾದರೆ ಇನ್ನೂ ಹರೆಯವನ್ನು ಪೂರ್ತಿಯಾಗಿ ದಾಟದ ಅವಳಮ್ಮ ಗಿರಿಜನೊಂದಿಗೇ ಕಾಲ ಕಳೆದಾನು – ರಾತ್ರಿಗಳನ್ನೂ ಸೇರಿ. ಅಂತೂ ಅವಳ ಮಗಳ ಜೊತೆಗಲ್ಲ.

ಗಿರಿಜಳ ಮಗಳೂ ತುಸು ನಿಯತ್ತನ್ನು ತೋರಿಸಲು ಸುರು ಮಾಡಿದ್ದಳು. ಮಾಮೂಲಿಯಾಗಿ ಬರಲು ಪ್ರಾರಂಭಿಸಿದ್ದ ಶಾಮಣ್ಣನವರಿಗೆ ಮಾತ್ರ ತನ್ನನ್ನು ಮೀಸಲಾಗಿಟ್ಟುಕೊಳ್ಳಲು ಪ್ರಾರಂಭಿಸಿದಳು. ಮೊದ ಮೊದಲು ಅದಕ್ಕೂ ತಾಯಿಯ ಅಭ್ಯಂತರವಿತ್ತು. ಮಗಳೇ ನಮ್ಮಂತಹವರೆಲ್ಲ ಒಬ್ಬರನ್ನೇ ನಂಬಿಕೊಂಡರೆ ಆಗುತ್ತದೆಯೇ... ಪ್ರಾಯ ಇದ್ದಾಗ ದುಡಿದುಕೊಳ್ಳಬೇಕು. ಅವರೇ ಆಗಬೇಕು ಇವರೇ ಆಗಬೇಕು ಎಂದರೆ ಆಗುವ ಮಾತಲ್ಲ' ಎಂದು ಮಗಳನ್ನು ಈಚೆಗೆ ಸೆಳೆಯುವ ಪ್ರಯತ್ನ ಮಾಡಿದರೂ ಕ್ರಮೇಣ ಶಾಮಣ್ಣನ ಸ್ಥಾನ ಮಾನ ಮತ್ತು ಆಸ್ತಿ ಪಾಸ್ತಿಗಳ ಬಗ್ಗೆ ತಿಳಿಯುತ್ತಿದ್ದಂತೆಪರವಾಯಿಲ್ಲ ಮಗಳು ದೊಡ್ಡ ಕುಳವನ್ನೇ ಹಿಡಿದಿದ್ದಾಳೆ.. ಕಡೆಯವರೆಗೆ ನಡೆಸಿಕೊಂಡು ಹೋದಾರು’ ಎಂದು ಕೊಂಡು ಸುಮ್ಮನಾದಳು.

ಸುರು ಸುರುವಿಗೆ ಶಾಮಣ್ಣನಿಗೆ ತಮ್ಮ ಈ ಚಟವನ್ನು ಮುಂದುವರಿಸಿಕೊಂಡು ಹೋಗಲು ಕಷ್ಟವಾಗಿತ್ತು. ಅಪ್ಪನ ಹದ್ದಿನ ಕಣ್ಣನ್ನು ತಪ್ಪಿಸಿಕೊಂಡು ಹೋಗುವುದು ಮೊದಲನೆಯ ಕಷ್ಟವಾದರೆ ಎರಡನೆಯದ್ದು ಇನ್ನೂ ಕಷ್ಟವಾದದ್ದು. ಅದು ಮೊದ ಮೊದಲು ಬರೀ ಭೇಟಿಯ ದಿನಗಳಿಗೆ ಮಾತ್ರ ಕಾಸು ಕೊಟ್ಟರೆ ಸಾಕು ಎಂದಿದ್ದುದು ಆಕೆ ಪೂರ್ತಿಯಾಗಿ ತನ್ನನ್ನೇ ನಂಬಿಕೊಂಡಿದ್ದಾಳೆಂದಾದಾಗ ಅವಳ ಪೂರ್ತಿ ಜವಾಬ್ದಾರಿಯನ್ನು ತಾನೇ ಹೊತ್ತುಕೊಂಡು ಆಕೆಯ ಕುಟುಂಬವನ್ನು ನಿಭಾಯಿಸಲು ಬೇಕಾದ ಆರ್ಥಿಕ ಹೊರೆಯನ್ನು ಹೊರಬೇಕಾಗಿ ಬಂದದ್ದು. ಅಷ್ಟು ಹೊತ್ತಿಗೆ ಋಷಿ ಪಂಚಮಿಯ ಅವಸ್ಥೆಯನ್ನು ತಲುಪುತ್ತಿದ್ದ ಗಿರಿಜನೂ ಮಗಳ ಸಂಪಾದನೆಯಲ್ಲೇ ಬದುಕಬೇಕಾಗಿದ್ದುದರಿಂದ ಸ್ವಂತ ಯಜಮಾನಿಕೆಯ ಹೊಣೆ ಮತ್ತು ಅಧಿಕಾರ ಇನ್ನೂ ಕೈಗೆ ಬರಬೇಕಿದ್ದ ಶ್ಯಾಮಣ್ಣನಿಗೆ ಕಷ್ಟವೇ ಆಗಿತ್ತು. ದಿನ ಬಿಟ್ಟು ದಿನವೋ ವಾರಕ್ಕೊಮ್ಮೆಯೋ ಆ ಮನೆಯ ಹೊಸ್ತಿಲನ್ನು ತುಳಿಯುವಾಗ ಆಗಲೇ ಹಚ್ಚಿಟ್ಟಿರುತ್ತಿದ್ದ ಹೊಗೆ ಕಾರುವ ಚಿಮಿಣಿ ದೀಪದ ಬೆಳಕಿನಲ್ಲಿ ಆ ತಾಯಿಯ ಆಸೆಯ ಕಣ್ಣುಗಳೇ ಪ್ರಖರವಾಗಿ ಕಾಣಿಸುತ್ತವೆ. ಅವುಗಳನ್ನು ದಾಟಿದ ಮೇಲೆಯೇ ಮಿನುಗು ಕಣ್ಣುಗಳ ಅವಳ ಮಗಳ ಭೇಟಿ. ಆದರೆ ಅದೆಲ್ಲಿತ್ತೋ ಶಾಮಣ್ಣನಿಗೆ ಆ ಧೈರ್ಯ. ಅಪ್ಪನ ಹೆದರಿಕೆಯ ಹೊರತಾಗಿಯೂ ಅದನ್ನು ನಿಭಾಯಿಸಿಯೇ ಬಿಟ್ಟಿದ್ದರು.

ಆ ಅಪ್ಪನಿಗೆ ಇದರ ಅರಿವು ಇದ್ದಿರಲಿಲ್ಲವೆಂದಲ್ಲ. ತಮ್ಮಂತಹ ಸ್ಥಿತಿವಂತರ ಮಕ್ಕಳು ಮಾಡಬಹುದಾದ ಸರ್ವೇ ಸಾಮಾನ್ಯ ಚಟುವಟಿಕೆಗಳಲ್ಲಿ ಇದೂ ಒಂದು ಎಂದು ಎಣಿಸಿದವರು ಅವರು. ತಾನೊಬ್ಬ ಹಾಗೆ ಮಾಡಲಿಲ್ಲವೆಂದಾಕ್ಷಣ ತನ್ನ ಮಗನೂ ಮಾಡಬಾರದು ಎನ್ನುವ ಜಾಯಮಾನ ಅವರದಲ್ಲ. ಹಾಗಾಗಿ ಗೊತ್ತಿದ್ದೂ ಗೊತ್ತಿಲ್ಲದವರಂತೆ ಸುಮ್ಮನೇ ಇದ್ದುಬಿಟ್ಟರು. ಅದರ ಸುಳಿವು ಹತ್ತಿದ್ದ ಶಾಮನಿಗೆ ಇದ್ದದ್ದೂ ಸಲೀಸಾಯ್ತು.
ಕಷ್ಟಕ್ಕೆ ಬಂದದ್ದು ಮದುವೆ ಮಾಡಿಕೊಂಡು ಹೆಂಡತಿ ಮನೆಗೆ ಬಂದ ಮೇಲೆಯೇ. ಆ ಮಹಾರಾಯಿತಿ ಜೊತೆಗೇ ತೆಗೆದುಕೊಂಡು ಬಂದ ದೊಡ್ಡಸ್ತಿಕೆಯನ್ನು ರಾತ್ರಿಯ ಹೊತ್ತೂ ತೋರಿಸತೊಡಗಿದಾಗ ಶಾಮಣ್ಣ ಬೇಸತ್ತಿದ್ದರು. ಗಿರಿಜನ ಮಗಳ ಜೊತೆಗೆ ಸಿಗುತ್ತಿದ್ದ ಮಿಲನ ಸುಖ ಈ ಕಟ್ಟಿಕೊಂಡ ಹೆಂಡತಿಯ ದೊಡ್ಡಸ್ತಿಕೆ ಭಾರದಡಿ ಹೂತು ಹೋಗುತ್ತಿರುವಾಗ ಅತ್ತಿದ್ದ.

ಅಪ್ಪನಿಗೆ ಗೊತ್ತಾಗಿಯೂ ಸುಮ್ಮನಿದ್ದಾರೆಂದಾದಾಗ ರಾಜಾ ರೋಷವಾಗಿಯೇ ಆಣೆಗುಡ್ಡೆಯ ಪಕ್ಕದ ಹಳ್ಳಿಗೆ ಹೋಗುತ್ತಿದ್ದರೂ ಶಾಮಣ್ಣನ ಮನಸ್ಸಿನ ಮೂಲೆಯಲ್ಲಿ ಅಳುಕು ಇಲ್ಲದಿರಲಿಲ್ಲ. ಅಲ್ಲಿ ಸರಸ್ವತಿಯ ಜೊತೆ ಸೇರುವಾಗ ತಮ್ಮಂತಹವರಿಗೆಲ್ಲ ಇದು ಸಾಮಾನ್ಯ. ಅಂತಹ ಚಿಂತೆಯ ಅಗತ್ಯವೇನೂ ಇಲ್ಲ ಎಂದು ಪದೇ ಪದೇ ಹೇಳಿಕೊಂಡರೂ ಅಪರಾಧೀ ಪ್ರಜ್ಞೆಯೊಂದು ಕಾಡುತ್ತಲೇ ಇರುತ್ತಿತ್ತು. ಸಮಾಜ ತಮ್ಮ ಸಿರಿವಂತಿಕೆಯನ್ನು ಕಂಡು ಒಪ್ಪಿಕೊಂಡರೂ ಕಾನೂನು ಒಪ್ಪದ ದಾರಿಯಲ್ಲಿ ತಾನು ನಡೆಯುತ್ತಿದ್ದೇನೆ ಎನ್ನುವ ಭಾವನೆ ಮನಸ್ಸಿಗೆ ಪದೇ ಪದೇ ತಟ್ಟುತ್ತಿತ್ತು. ಏನಿದ್ದರೂ ಇದೆಲ್ಲ ಮದುವೆಯಾಗುವವರೆಗೆ ಮಾತ್ರ. ನಂತರ ಸರಸ್ವತಿಗೊಂದು ಖಾಯಂ ವ್ಯವಸ್ಥೆ ಮಾಡಿ ಇತ್ತ ಮುಖ ಹಾಕುವುದನ್ನು ನಿಲ್ಲಿಸಿ ಬಿಡಬೇಕು ಎಂದುಕೊಂಡದ್ದೂ ಹೌದು. ಮತ್ತೆ ಅದನ್ನು ಕಣ್ಣೀರು ಹಾಕುತ್ತ ಎದುರಿಗೆ ಮಂಡಿಯೂರಿ ಕುಳಿತು ಕೇಳುತ್ತಿದ್ದ ಸರಸ್ವತಿಯೊಂದಿಗೆ ಹೇಳಿದ್ದೂ ಆಗಿತ್ತು.

ಆದರೆ ಮದುವೆಯಾಗಿ ಆ ಜರತಾರಿ ಸೀರೆ ಮತ್ತು ಅದಕ್ಕಿಂತ ತೂಕದ ಚಿನ್ನವನ್ನು ಹೇರಿಕೊಂಡು ಮನೆಯೊಳಗೆ ಕಾಲಿಟ್ಟ ಕಮಲಮ್ಮ ಅವರ ಎಲ್ಲ ಲೆಕ್ಕಾಚಾರಗಳನ್ನೂ ತಲೆ ಕೆಳಗೆ ಮಾಡಿದ್ದರು. ಎಲ್ಲವೂ ತಾನು ಹೇಳಿದಂತೆಯೇ ನಡೆಯಬೇಕೆನ್ನುವ ಆ ಹಠಮಾರೀ ಹೆಣ್ಣಿನೊಂದಿಗೆ ಏಗುವಾಗ ಆ ಮುಗ್ಧ ಹೆಣ್ಣು ಸರಸ್ವತಿ ತಾನು ವರ್ಷಕ್ಕೆರಡು ಬಾರಿ ಕೊಡುತ್ತಿದ್ದ ವಾಯಿಲ್ ಸೀರೆಗಳನ್ನೇ ಚಿನ್ನ ಪಾವನವೆಂದು ಉಟ್ಟುಕೊಂಡು ತನಗಾಗಿ ಕಾಯುತ್ತಿದ್ದುದೇ ನೆನಪಾಗುತ್ತಿತ್ತು. ಅದೂ ರಾತ್ರಿ ಸರಸ್ವತಿಯೊಂದಿಗಿನ ತನ್ನ ಅನುಭವದ ಗುಂಗಿನಲ್ಲಿ ಆಟವಾಡಲು ಎಳೆಸಿದಾಗ ಮರದ ಕೊರಡಾಗುತ್ತಿದ್ದ ಹೊಸ ಹೆಂಡತಿ ಅವರಲ್ಲಿ ನಿರಾಸೆಯ ಅಲೆಗಳನ್ನೇ ಎಬ್ಬಿಸಿದ್ದಳು. ಅಷ್ಟೇ ಅಲ್ಲ ಗಂಡ ಹೆಂಡತಿ ಒಂದಾಗಬೇಕಿದ್ದ ಅತೀ ಖಾಸಗೀ ಕ್ಷಣಗಳಲ್ಲೂ ತನ್ನದೇ ಹಠ ನಡೆಯಬೇಕೆನ್ನುವ ಅವಳ ವರ್ತನೆಯಿಂದಾಗಿ ತೀರ ಬೇಸತ್ತಿದ್ದರು.

ಮನೆಯಲ್ಲಿಯೇ ಸಿಗಬೇಕಾದದ್ದು ಮತ್ತು ಸಿಗುತ್ತದೆ ಎಂದು ನಿರೀಕ್ಷಿಸಿದ್ದು ಸಿಗದೇ ಹೋದಾಗ ಅವರ ನಿರ್ಧಾರವೆಲ್ಲ ತಲೆಕೆಳಗಾಗಿ ಹೆಂಡತಿ ಮನೆಗೆ ಬಂದ ತಿಂಗಳಿಗೇ ಸರಸ್ವತಿಯ ಮನೆ ದಾರಿ ಮತ್ತೆ ಹಿಡಿದಿದ್ದರು.

|ಇನ್ನು ನಾಳೆಗೆ |

‍ಲೇಖಕರು Admin

May 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: