ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ – 150
ಅಬೋಧ್ ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ನ ನಮ್ಮ ಮನೆ, ವಿನ್ಯಾಸಗಾರ ಸಂಪತ್ ಅವರ ಸೃಜನಾತ್ಮಕ ಕೌಶಲ್ಯದಿಂದ ಸಂಪೂರ್ಣವಾಗಿ ಸಜ್ಜಾಯಿತು; ನಮ್ಮ ಹೊಸ ಕನಸುಗಳ ಬಿತ್ತನೆಗೆ ‘ಹದ ನೆಲ’ವಾಯಿತು. ಬಸವೇಶ್ವರ ನಗರದ ಮನೆಯಿಂದ ಸಾಮಾನು ಸರಂಜಾಮುಗಳೆಲ್ಲವನ್ನೂ ಸಾಗಿಸಿಕೊಂಡು ತಂದು ಹೊಸ ಮನೆಯಲ್ಲಿ ಜೋಡಿಸಿಕೊಂಡು ಸಂಸಾರ ಆರಂಭಿಸಿದೆವು.
‘ಬಾನಜಗಲಿ’ಯ ದಿವ್ಯ ಟಾನಿಕ್ ನಿಂದ ಸಾಕಷ್ಟು ಚೇತರಿಸಿಕೊಂಡಿದ್ದ ರಂಜನಿ ಹೊಸಮನೆಯನ್ನು ಹೊಸ ಬಗೆಯಲ್ಲಿ ಸಿಂಗರಿಸಲು ಉತ್ಸಾಹದಿಂದ ತೊಡಗಿಕೊಂಡಳು. ಮಗಳು ರಾಧಿಕೆ ದೂರದ ಲಂಡನ್ ನಲ್ಲಿ ಹೊಸ ಬದುಕಿಗೆ ಹೊಂದಿಕೊಳ್ಳುತ್ತಾ ಚಿತ್ರಕಲೆಯ ಕಲಿಕೆಯಲ್ಲಿ ಮುಳುಗಿಹೋಗಿದ್ದಳು; ಇಂಜಿನಿಯರಿಂಗ್ ಪದವಿಗೆ ತಯಾರಿ ನಡೆಸುತ್ತಿದ್ದ ಮಗ ಅನಿರುದ್ಧ ಎಂದಿನ ತನ್ನ ಸ್ಥಿತಪ್ರಜ್ಞೆಯ ಮನೋಧರ್ಮವನ್ನು ಹಾಗೇ ಜತನದಿಂದ ಕಾಪಾಡಿಕೊಂಡು ಬಂದಿದ್ದ! ನಮ್ಮೆಲ್ಲ ಪೂರ್ವತಯಾರಿಗಳೂ ಮುಗಿದಮೇಲೆ ನವಂಬರ್ ತಿಂಗಳ ಎರಡನೆಯ ವಾರದಲ್ಲಿ ಗೃಹಪ್ರವೇಶ ಮಾಡುವುದೆಂದು ತೀರ್ಮಾನವಾಯಿತು.
ಈ ಶುಭ ಅವಸರಕ್ಕೆ ಹೊಂದಿಕೊಂಡಂತೆಯೇ ಬಂದ ಮತ್ತೊಂದು ಸಂಭ್ರಮವೆಂದರೆ ಅಮ್ಮನ 80 ನೇ ವರ್ಷದ ಹುಟ್ಟುಹಬ್ಬ ಅರ್ಥಾತ್ ಸಹಸ್ರ ಚಂದ್ರ ದರ್ಶನದ ಶುಭಾಚರಣೆ. ಕುಟುಂಬದ ಸದಸ್ಯರೆಲ್ಲರೂ ಸಂಭ್ರಮದಿಂದ ಪಾಲ್ಗೊಂಡು ನವಂಬರ್ 8 ನೇ ತಾರೀಖು ಪ್ರೀತಿಯ ಅಮ್ಮನ 80 ನೇ ಹುಟ್ಟುಹಬ್ಬವನ್ನು ನಾಗರಾಜ ಭಾವನವರ ಸಮರ್ಥ ಸಾರಥ್ಯದಲ್ಲಿ ಆಚರಿಸಿದೆವು. ದೂರದ ಅಮೆರಿಕೆಯಲ್ಲಿದ್ದ ನನ್ನ ತಂಗಿ ಪದ್ಮಿನಿ ಹಾಗೂ ಲಂಡನ್ ನಲ್ಲಿದ್ದ ಮಗಳು ರಾಧಿಕೆ ಅಲ್ಲಿಂದಲೇ ಅಮ್ಮನೊಟ್ಟಿಗೆ ಮಾತಾಡಿ ಶುಭಹಾರೈಸಿ ಆಶೀರ್ವಾದ ಪಡೆದರು.ಮರುದಿನ, 9 ನೇ ತಾರೀಖು ಮತ್ತೆ ಪ್ರೀತಿಯ ನಾಗರಾಜ ಭಾವನವರ ದಿವ್ಯ ಮಾರ್ಗದರ್ಶನದಲ್ಲಿ ಗೃಹ ಪ್ರವೇಶದ ಸಮಾರಂಭವನ್ನು ವಿಧಿವತ್ತಾಗಿ ಆಚರಿಸಿದೆವು. ಕೇವಲ ನಮ್ಮ ಎರಡು ಕುಟುಬವರ್ಗದವರಷ್ಟೇ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಹೊಸಮನೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು ಪ್ರೀತಿ ಆತ್ಮೀಯತೆಗಳ ಸುಮಧುರ ಗಂಧ ಹಾಗೂ ಗುರುಹಿರಿಯರ ಶುಭಹಾರೈಕೆಗಳ ಶ್ರೀರಕ್ಷಾಕವಚ.
ಹೊಸಮನೆಯಿಂದ ಕಾಲೇಜಿಗೆ ಹೋಗಿಬರಲು ರಂಜನಿ—ಅನಿರುದ್ಧರಿಗೆ ಹೆಚ್ಚಿನ ಅನುಕೂಲವಾಗಲೆಂಬ ಕಾರಣಕ್ಕೆ ಸಾರಥಿಯೊಬ್ಬರನ್ನು ಈ ಮೊದಲೇ ನೇಮಿಸಿಕೊಂಡಾಗಿತ್ತು. ಶಿಸ್ತು—ಸಮಯಪ್ರಜ್ಞೆಗಳ ಕೊರತೆಯಿದ್ದ ಚಾಲಕರು ಪದೇ ಪದೇ ಬದಲಾಗುತ್ತಿದ್ದರೂ ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದೆವು. ಒಂದೆರಡು ತಿಂಗಳುಗಳಲ್ಲಿ ಹೊಸ ಮನೆ—ಹೊಸ ವಾತಾವರಣ—ಪರಿಸರಗಳಿಗೆ, ಹೊಸ ಲಯ ಶೃತಿಗಳ ಜೀವನಕ್ರಮಕ್ಕೆ ಹೊಂದಿಕೊಂಡು ಬದುಕಿನ ಬಂಡಿಯನ್ನು ನಡೆಸತೊಡಗಿದೆವು.
ಕಾಲದೋಟದಲ್ಲಿ ಈಗ ಕೊಂಚ ಹಿಂದೆ ಹೋಗಿ, ದಾಖಲಿಸಲು ಮರೆತು ಬಿಟ್ಟಿದ್ದ ಕೆಲ ಮುಖ್ಯಸಂಗತಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.
2010—11 ರ ಆಜುಬಾಜಿನಲ್ಲಿ ಸಿದ್ಧವಾದ—ನಾನು ಪಾತ್ರವಹಿಸಿದ್ದ ಎರಡು ಮುಖ್ಯ ಚಿತ್ರಗಳೆಂದರೆ ಬಿ.ಸುರೇಶರ “ಪುಟ್ಟಕ್ಕನ ಹೈವೇ” ಹಾಗೂ ಸುಚೇಂದ್ರ ಪ್ರಸಾದರ “ಪ್ರಪಾತ”. ಈ ಎರಡೂ ಚಿತ್ರಗಳು ವಿಭಿನ್ನ ವಸ್ತು—ನಿರೂಪಣೆಗಳ ಕಾರಣಕ್ಕೆ ವಿಶೇಷ ಗಮನ ಸೆಳೆದ ಚಿತ್ರಗಳು. “ಪುಟ್ಟಕ್ಕನ ಹೈವೇ” ಚಿತ್ರ, ಪ್ರಸಿದ್ಧ ಸಾಹಿತಿ—ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ “ಪುಟ್ಟಕ್ಕನ ಮೆಡಿಕಲ್ ಕಾಲೇಜು” ಎಂಬ ಕಥೆಯನ್ನು ಆಧರಿಸಿ ನಿರ್ಮಿತವಾದದ್ದು. ಸೊಗಸಾದ ಚಿತ್ರಕಥೆಯನ್ನು ಸಿದ್ಧಪಡಿಸಿದ್ದ ಬಿ.ಸುರೇಶ ಅವರೇ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದರು. ಪ್ರಕಾಶ್ ರೈ ಹಾಗೂ ಶೈಲಜಾ ನಾಗ್ ಅವರು ಸೇರಿ ನಿರ್ಮಿಸಿದ್ದ ಈ ಚಿತ್ರಕ್ಕೆ ಹಂಸಲೇಖಾ ಅವರು ಸಂಗೀತ ಸಂಯೋಜನೆ ಮಾಡಿದ್ದರು; ಪ್ರಸಿದ್ಧ ಛಾಯಾಗ್ರಾಹಕ ಹೆಚ್ ಎಂ ರಾಮಚಂದ್ರ ಅವರು ಛಾಯಾಗ್ರಾಹಣದ ಹೊಣೆ ಹೊತ್ತಿದ್ದರು.ಹೊಸ ಹೈವೇಗಾಗಿ ಸರ್ಕಾರ ನೆಲ ಪಡೆದುಕೊಳ್ಳಲು ಆರಂಭಿಸಿದಾಗ, ಅದಾಗಲೇ ಅಣೆಕಟ್ಟಿನ ಕಾರಣಕ್ಕೆ ತಮ್ಮ ಮೂಲ ನೆಲೆ ಕಳಕೊಂಡು ಸರ್ಕಾರವೇ ಕೊಟ್ಟಿರುವ ಜಾಗದಲ್ಲಿ ಕೃಷಿ ಮಾಡುತ್ತಾ ಬದುಕಿರುವ ಪುಟ್ಟಕ್ಕ ಹೋರಾಡಿ ನೆಲ ಉಳಿಸಿಕೊಳ್ಳಲು ಪ್ರಯತ್ನಿಸುತ್ತಾಳೆ. ಆದರೆ ಅನಕ್ಷರಸ್ಥೆಯಾದವಳ ಮಾತನ್ನು ಎಂದಿನಂತೆ ವ್ಯವಸ್ಥೆಯು ಆಲಿಸುವುದೇ ಇಲ್ಲ.
ಈ ಹೋರಾಟದಲ್ಲಿ ತನ್ನದು ಅನ್ನುವುದೆಲ್ಲವನ್ನೂ ಕಳಕೊಂಡ ಪುಟ್ಟಕ್ಕ ಸ್ವಾಭಿಮಾನದಿಂದ ಹೊಸ ಬದುಕು ಕಟ್ಟಿಕೊಳ್ಳಲು ತನ್ನದೇ ದಾರಿಯಲ್ಲಿ ನಡೆಯುತ್ತಾಳೆ.ಪ್ರಬುದ್ಧ ನಟಿ ಶೃತಿ ಅವರು ಚಿತ್ರದ ಕೇಂದ್ರ ಪಾತ್ರವನ್ನು ನಿರ್ವಹಿಸಿದ್ದರು. ಉಳಿದ ಮುಖ್ಯ ಪಾತ್ರಗಳನ್ನು ನಿರ್ವಹಿಸಿದವರೆಂದರೆ ಪ್ರಕಾಶ್ ರೈ, ಅಚ್ಯುತ್‌ಕುಮಾರ್, ನಾನು, ನೀನಾಸಂ ಸತೀಶ, ವೀಣಾ ಸುಂದರ್, ಸಿಹಿಕಹಿ ಚಂದ್ರು, ರಾಜಶೇಖರ ನಾಯ್ಡು ಮುಂತಾದವರು.
ನಾನು ಅಭಿನಯಿಸಿದ ಪಾತ್ರದ ಹೆಸರು ಶಿವನಿಚ್ಛೆ ಸಿದ್ಧಯ್ಯ, ಗ್ರಾಮಪಂಚಾಯ್ತಿ ಅಧ್ಯಕ್ಷ. ಪ್ರತಿ ಮಾತಿಗೂ ‘ಶಿವನಿಚ್ಛೆ’ ಎನ್ನುವ ಕಾರಣಕ್ಕೆ ಸಿದ್ದಯ್ಯ ಎಂಬ ಹೆಸರಿನ ಮುಂದೆ ಬಿರುದಿನಂತೆ ಆ ಪದ! ಜಾಣತನದಿಂದ ಮಾತಾಡುವ ಸಿದ್ದಯ್ಯ, ಸದಾ ಶ್ರೀಮಂತರ ಜೊತೆಗೆ ಇರುವವನು. ಹೈವೇ ಮಾಡುವವರಿಂದ ತನ್ನ ನೆಲ ಉಳಿಸಿಕೊಂಡು ಬಡವರ ನೆಲ ನುಂಗುವವನು. ಇಂತಹ ಒಬ್ಬ ಚತುರ ಸಮಯಸಾಧಕನ —ಒಂದು ತರಹೆ ‘ಕೆಟ್ಟ ಮನುಷ್ಯ’ನ ‘ಒಳ್ಳೆಯ ಪಾತ್ರ’ ನನಗೆ ದೊರೆತದ್ದು ಖುಷಿಯ ಸಂಗತಿಯೇ. ಬಿ. ಸುರೇಶ ಸದಾ ಸಮಾಜಮುಖಿಯಾಗಿ ಚಿಂತಿಸುವ ಸೃಜನಶೀಲ ಹಾಗೂ ಸಂವೇದನಾಶೀಲ ಬರಹಗಾರ ಹಾಗೂ ನಿರ್ದೇಶಕ. ತನ್ನ ನಾಟಕ—ಧಾರಾವಾಹಿ—ಚಿತ್ರಗಳ ಮೂಲಕ ಅವರು ನೀಡುವ ಒಳನೋಟಗಳು— ನಡೆಸುವ ಸಾಮಾಜಿಕ ಪರಿವೇಷಗಳ ಸೂಕ್ಷ್ಮಾವಲೋಕನ, ಪಾತ್ರಗಳ ಎಲ್ಲ ಛಾಯೆಗಳನ್ನೂ ಅನಾವರಣಗೊಳಿಸುವ ಕ್ರಮ…ಎಲ್ಲವೂ ನನಗೆ ಪ್ರಿಯ. ‘ಪುಟ್ಟಕ್ಕನ ಹೈವೇ’ ಕೂಡಾ ಇಂಥ ಹಲ ಒಳನೋಟಗಳ ಒಂದು ಸಾಂದರ್ಭಿಕ , ಅರ್ಥಪೂರ್ಣ ಚಿತ್ರವೆಂಬ ಪ್ರಶಂಸೆಗೆ ಪಾತ್ರವಾಯಿತು. ಇಂಥ ಒಳ್ಳೆಯ ಚಿತ್ರದಲ್ಲಿ ಭಾಗಿಯಾದದ್ದು, ಶೃತಿ ಹಾಗೂ ಪ್ರಕಾಶ್ ರೈ ಅವರಂತಹ ಪ್ರಬುದ್ಧ ಕಲಾವಿದರೊಂದಿಗೆ ತೆರೆ ಹಂಚಿಕೊಂಡದ್ದ್ದು ನನಗೆ ಸಂತಸ ನೀಡಿದ ಸಂಗತಿಗಳು.
2010—11 ರ ಅವಧಿಯ ಶ್ರೇಷ್ಠ ಕನ್ನಡ ಚಿತ್ರ ಎಂಬ ರಾಷ್ಟ್ರ ಪ್ರಶಸ್ತಿಯನ್ನು ಪುಟ್ಟಕ್ಕನ ಹೈವೇ ಚಿತ್ರ ಗಳಿಸಿಕೊಂಡದ್ದೂ ಸಹಾ ಹೆಮ್ಮೆಯ ವಿಷಯ. ಇನ್ನು ನಾನಾಗಲೇ ಉದ್ಧರಿಸಿದ ಎರಡನೆಯ ಚಿತ್ರ “ಪ್ರಪಾತ”ಕ್ಕೆ ಬರೋಣ. ಈ ಚಿತ್ರವನ್ನು ಪರಿಭಾವಿಸಿ, ರಚಿಸಿ , ನಿರ್ದೇಶಿಸಿ ತೆರೆಗೆ ತಂದವರು ಸುಪ್ರಸಿದ್ಧ—ಸಂವೇದನಾಶೀಲ ನಟ ಸುಚೇಂದ್ರ ಪ್ರಸಾದ್. ಭಾರತೀಯ ಜ್ಞಾನಪರಂಪರೆಯನ್ನು ಅಸಡ್ಡೆ—ಅನಾದರಗಳಿಂದ ಕಾಣುವ ಪ್ರವೃತ್ತಿ —ಮನೋಧರ್ಮಗಳ ಬಗ್ಗೆ ಸುಚೇಂದ್ರಪ್ರಸಾದ್ ಅವರಿಗೆ ಸಿಟ್ಟು, ಅಸಮಾಧಾನ. ಈ ಬೌದ್ಧಿಕ ಅಧಃಪಾತವನ್ನು ಬಿಂಬಿಸುವ ಸಲುವಾಗಿಯೇ ಚಿತ್ರಕ್ಕೆ ‘ಪ್ರಪಾತ’ವೆಂದು ನಾಮಕರಣ ಮಾಡಿದ್ದು ಎಂದು ನೆನೆಯುತ್ತಾರೆ ಸುಚೇಂದ್ರಪ್ರಸಾದ್. ಅವರೊಟ್ಟಿಗೆ ಮಾತನಾಡಿದಾಗ ಈ ಚಿತ್ರಕ್ಕಾಗಿ ಸುಮಾರು ಒಂದು ದಶಕದ ಕಾಲ ಅವರು ನಡೆಸಿದ ಸಂಶೋಧನೆ, ಮಾಹಿತಿ ಸಂಗ್ರಹಕ್ಕಾಗಿ ನಡೆಸಿದ ಹುಡುಕಾಟ, ಖಚಿತತೆ—ನಿಖರತೆಗಳ ಸಲುವಾಗಿ ನಡೆಸಿದ ಹಲವು ಹತ್ತು ಸಂದರ್ಶನಗಳು…ಎಲ್ಲವನ್ನೂ ವಿವರವಾಗಿ ಹಂಚಿಕೊಂಡರು.
ಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ಜಗನ್ನಾಥ ರಾವ್ ಬಹುಳೆಯವರ “ಭಾರತೀಯ ವೈಮಾನಿಕ ಶಾಸ್ತ್ರ—ಅಚ್ಚರಿಗಳ ಆಗರ” ಎಂಬ ಲೇಖನ ಸುಚೇಂದ್ರರನ್ನು ಬಹುವಾಗಿ ಆಕರ್ಷಿಸುತ್ತದೆ. ಸಾವಿರಾರು ವರ್ಷಗಳ ಹಿಂದೆ ಭಾರದ್ವಾಜ ಮುನಿಗಳು ವೈಮಾನಿಕ ಶಾಸ್ತ್ರವನ್ನು ಕುರಿತು ಕೃತಿ ರಚಿಸಿದ್ದರಂತೆ. ಹಕ್ಕಿಯಂತೆ ಹಾರುವ ಯಂತ್ರವೇ ವಿಮಾನವೆಂದು ವ್ಯಾಖ್ಯಾನಿಸುತ್ತಾ ಹೋಗುವ ಈ ಕೃತಿ ಅನೇಕ ಸೋಜಿಗಗಳನ್ನು ತೆರೆದಿಟ್ಟಿತ್ತಂತೆ. ಅದಕ್ಕಿಂತ ಸೋಜಿಗದ ಸಂಗತಿ ಎಂದರೆ ಆನೇಕಲ್ ಸುಬ್ರಾಯ ಶಾಸ್ತ್ರಿ ಎನ್ನುವ ಒಬ್ಬ ಅವಿದ್ಯಾವಂತ ವ್ಯಕ್ತಿ ಭಾರದ್ವಾಜ ಮುನಿ ಪ್ರಣೀತ “ವೈಮಾನಿಕ ಶಾಸ್ತ್ರ” ಕೃತಿಗೆ ವೆಂಕಟಾಚಲ ಶಾಸ್ತ್ರಿಗಳಿಂದ ಭಾಷ್ಯವನ್ನು ಬರೆಸುತ್ತಾರೆ! ಹೀಗೆ ಭಾಷ್ಯವನ್ನು ಬರೆಸುವುದು ಅವರೊಂದು ಬಗೆಯ ಧ್ಯಾನಸ್ಥ ಸ್ಥಿತಿಯಲ್ಲಿರುವ ಸಮಯದಲ್ಲಿ! ಈ ಭಾಷ್ಯದ ಒಂದು ಪ್ರತಿ ಓರಿಯಂಟಲ್ ಲೈಬ್ರರಿಯಲ್ಲಿ ಇದೆ ಎನ್ನುತ್ತಾರಾದರೂ ಯಾರಿಗೂ ಅದರ ಕುರಿತಾಗಿ ಹೆಚ್ಚಿನ ಮಾಹಿತಿಯಿಲ್ಲ; ಅದಕ್ಕಿಂತ ಮುಖ್ಯವಾಗಿ ಆ ಕೃತಿಯನ್ನು ಹುಡುಕಿ ತೆಗೆದು ಪರಿಶೀಲಿಸುವ, ಅದರ ವೈಜ್ಞಾನಿಕ ಮಹತ್ವದ ಬಗ್ಗೆ ಅರಿವು ಮೂಡಿಸುವ ಮನಸ್ಸಾಗಲೀ ಆಸಕ್ತಿಯಾಗಲೀ ಯಾರಿಗೂ ಇಲ್ಲ. ವಿಮಾನ ಶಾಸ್ತ್ರದ ಬಗ್ಗೆ ಅಧ್ಯಯನ ಮಾಡಿ ಸಂಶೋಧನೆಗಳನ್ನು ನಡೆಸುತ್ತಿರುವ ಅನೇಕ ಆಧುನಿಕ ವಿಜ್ಞಾನಿಗಳೇ ನಮ್ಮ ಪ್ರಾಚೀನ ಪರಂಪರೆಯ, ವಿಮಾನ ವಿಜ್ಞಾನವನ್ನು ಕುರಿತ ಇಂಥದೊಂದು ಅಪೂರ್ವ ಕೃತಿಯ ಬಗ್ಗೆ ತೃಣಮಾತ್ರವೂ ಆಸಕ್ತಿ ತೋರದೆ ‘ಅದರಲ್ಲಿ ಯಾವುದೇ ಹುರುಳಿಲ್ಲ’ ಎಂಬಂತಹ ಅಪ್ರಬುದ್ಧ ಆತುರದ ತೀರ್ಮಾನಗಳಿಗೆ ಬಂದುಬಿಟ್ಟಿದ್ದಾರೆ.
ಈ ಎಲ್ಲ ಸಂಗತಿಗಳ ತಳಹದಿಯ ಮೇಲೆ ‘ಪ್ರಪಾತ’ ಚಿತ್ರದ ಶಿಲ್ಪವನ್ನು ಕಟ್ಟಿದ್ದಾರೆ ಸುಚೇಂದ್ರಪ್ರಸಾದ್. ಚಿತ್ರದಲ್ಲಿ ನಮ್ಮ ಪರಂಪರಾಗತ ಜ್ಞಾನಶಾಖೆಗಳ ಬಗ್ಗೆ—ಪ್ರಬುದ್ಧ ಬೌದ್ಧಿಕತೆಯ ಬಗ್ಗೆ ಅಪಾರ ಗೌರವ ಎದ್ದು ಕಾಣುತ್ತದೆ; ಅಂತೆಯೇ ಈ ಕುರಿತಾಗಿ ತಲಸ್ಪರ್ಶಿ ಜ್ಞಾನವಿಲ್ಲದ ಆಧುನಿಕ ವಿಜ್ಞಾನಿಗಳ ಉಡಾಫೆ—ತಾತ್ಸಾರಗಳ ಬಗೆಗಿನ ಸಿಟ್ಟು ಸಂಕಟಗಳೂ ಧ್ವನಿತವಾಗುತ್ತವೆ.
ಇಂತಹ ಉಡಾಫೆ ಮನೋಧರ್ಮದ ಒಬ್ಬ ವಿಜ್ಞಾನಿಯ ಪಾತ್ರವನ್ನೇ ನಾನು ಚಿತ್ರದಲ್ಲಿ ನಿರ್ವಹಿಸಿದ್ದು. ಚಿತ್ರದ ಇತರ ತಾರಾಗಣದಲ್ಲಿದ್ದವರು ದತ್ತಣ್ಣ, ಕೆ ಎಸ್ ಎಲ್ ಸ್ವಾಮಿ, ಸೇತುರಾಂ, ಶರಪಂಜರ ಶಿವರಾಂ, ಅಮನ್ , ವಿದ್ಯಾಮೂರ್ತಿ ಮುಂತಾದವರು. ಇಂತಹದೊಂದು ಅರ್ಥಪೂರ್ಣ ಹಾಗೂ ವಿಚಾರ ಪ್ರಚೋದಕ ಚಿತ್ರವನ್ನು ನಿರ್ಮಿಸಿದರೂ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಲಿಲ್ಲ ಅನ್ನುವುದು ಮತ್ತೂ ನೋವಿನ ಸಂಗತಿ. ಚಿತ್ರ ಸಹೃದಯರಿಗೆ ತಲುಪಿ ದೊಡ್ಡಮಟ್ಟದಲ್ಲಿ ಚರ್ಚೆ ಮಂಥನಗಳಿಗೆ ಗ್ರಾಸವಾಗಬೇಕಿದ್ದರೂ ಅದು ಸಾಧ್ಯವಾಗದ ಬಗ್ಗೆ ಸುಚೇಂದ್ರ ಪ್ರಸಾದ್ ಅವರಿಗೆ ನೋವಿದೆ. ಆದರೂ ನಿರಾಶರಾಗದ ಅವರು ನೂರಾರು ಸಂಘ ಸಂಸ್ಥೆಗಳಿಗೆ ತಾವೇ ಚಿತ್ರವನ್ನು ತೆಗೆದುಕೊಂಡು ಹೋಗಿ ಪ್ರದರ್ಶಿಸಿ ಸಂವಾದಗಳನ್ನು ನಡೆಸಿದ್ದಾರೆ; ಜನರಲ್ಲಿ ಈ ವಿಷಯದ ಕುರಿತಾಗಿ ಅರಿವು ಮೂಡಿಸಲು ಯತ್ನಿಸಿದ್ದಾರೆ. ಅನೇಕ ಆಸಕ್ತ ಸಂಸ್ಥೆಗಳವರು ಈಗಲೂ ಪ್ರದರ್ಶನ ನೀಡಲು ಆಹ್ವಾನಿಸುತ್ತಿದ್ದಾರೆ ಅನ್ನುವುದೇ ಕಿಂಚಿತ್ ಸಮಾಧಾನದ ಸಂಗತಿ ಎಂದು ನಿಡುಸುಯ್ಯುತ್ತಾರೆ ಸುಚೇಂದ್ರ ಪ್ರಸಾದ್.
ಈ ಫ್ಲ್ಯಾಷ್ ಬ್ಯಾಕ್ ನಿರೂಪಣೆಯ ನಂತರ ಮೂಲ ಕಥಾಭಾಗಕ್ಕೆ ಮರಳುತ್ತೇನೆ.ಆಗಾಗ್ಗೆ ಪುಸ್ತಕದಂಗಡಿಗಳಿಗೆ ಹೋಗಿ ಕೆಲ ಪುಸ್ತಕಗಳನ್ನು ಖರೀದಿ ಮಾಡಿ ತರುವುದು ನನ್ನ ಹಾಗೂ ರಂಜನಿಯ ಅಭ್ಯಾಸ. ಹಾಗೊಮ್ಮೆ ಗಾಂಧಿನಗರದ ಸಪ್ನಾ ಬುಕ್ ಸ್ಟಾಲ್ ಗೆ ಹೋಗಿದ್ದಾಗ ಅಲ್ಲಿ ದೊಡ್ಡೆಗೌಡರ ಭೇಟಿಯಾಯಿತು. ದೊಡ್ಡೆಗೌಡರು ಸಪ್ನಾ ಪುಸ್ತಕ ಮಳಿಗೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರು. ಕನ್ನಡ ಭಾಷೆ—ಸಾಹಿತ್ಯ—ಸಂಸ್ಕೃತಿಗಳ ಬಗ್ಗೆ ಅಪಾರ ಗೌರವ, ಕಾಳಜಿ ಅವರಿಗೆ.
ಸಾಲುಸಾಲು ಕನ್ನಡ ಪುಸ್ತಕಗಳನ್ನು ಸಪ್ನಾ ಸಂಸ್ಥೆಯ ವತಿಯಿಂದ ಪ್ರಕಟಿಸುತ್ತಾ ಕನ್ನಡ ಪುಸ್ತಕ ಮಾರಾಟಕ್ಕೆ ವಿಶೇಷ ಚಾಲನೆ ನೀಡುವಂತಹ ಪುಸ್ತಕ ಸಂತೆಯ ಮಾದರಿಯ ಕಾರ್ಯಕ್ರಮಗಳನ್ನು ನಡೆಸುತ್ತಾ ಕನ್ನಡ ಸಾಹಿತಿಗಳಿಗೆ—ಕನ್ನಡ ಮನಸ್ಸುಗಳಿಗೆ ಬಲು ಪ್ರೀತಿಪಾತ್ರರಾದವರು ದೊಡ್ಡೆಗೌಡರು. ನಗುಮೊಗದ, ಸದಾ ಉತ್ಸಾಹದಿಂದ ಪುಟಿಯುವ ದೊಡ್ಡೆಗೌಡರು ಒಳ್ಳೆಯ ವಾಗ್ಮಿ ಕೂಡಾ. ಅಂದು ಅವರನ್ನು ಭೇಟಿಯಾದಾಗ ಇದ್ದಕ್ಕಿದ್ದ ಹಾಗೆ ನನ್ನ ನಾಟಕಗಳ ಪ್ರಕಟಣೆಯ ಬಗ್ಗೆ ಏಕೆ ಅವರನ್ನು ಕೇಳಬಾರದು ಎಂಬ ವಿಚಾರ ತಲೆಯಲ್ಲಿ ಸುಳಿದುಬಿಟ್ಟಿತು! ನನ್ನೆಲ್ಲ ಸಂಕೋಚಗಳನ್ನೂ ಬದಿಗೊತ್ತಿ ಕೇಳಿಯೇಬಿಟ್ಟೆ: ” ನಾನು ರಚಿಸಿರುವ ಹಲವಾರು ನಾಟಕಗಳಿವೆ; ನಿಮ್ಮ ಪ್ರಕಾಶನ ಸಂಸ್ಥೆಯ ವತಿಯಿಂದ ಪ್ರಕಟಿಸಬಹುದೇ?”. ದೊಡ್ಡೆಗೌಡರು ಒಂದು ಕ್ಷಣ ಮೌನವಾಗಿದ್ದರು. ಇನ್ನೇನು ಬಾಯಿ ತೆರೆಯಬೇಕು, ಅಷ್ಟರಲ್ಲಿ ರಂಜನಿ, “ಪ್ರಭು ಬರೆದಿರುವ ಅಡಿಗೆ ಪುಸ್ತಕ ಕೂಡಾ ಪ್ರಕಟಿಸಬಹುದು..ಅಷ್ಟೊಂದು ಬಗೆ ಬಗೆಯ ರೆಸಿಪಿಗಳನ್ನ ಬರೆದಿಟ್ಟಿದಾರೆ” ಎಂದಳು! ಆ ತಕ್ಷಣವೇ ದೊಡ್ಡೆಗೌಡರು,”ಹೌದೇ? ಮೊದಲು ತಂದುಕೊಡಿ..ಪ್ರಿಂಟ್ ಗೆ ಕಳಿಸಿಯೇ ಬಿಡೋಣ” ಎಂದುಬಿಡುವುದೇ! ವಾಸ್ತವವಾಗಿ ನಾನು ಸಿದ್ಧಪಡಿಸಿಕೊಂಡಿದ್ದ ನನ್ನ ಬಗೆಬಗೆಯ ಪಾಕವಿಧಾನದ ಪುಸ್ತಕ ನಮ್ಮ ಕಾರ್ ನಲ್ಲಿಯೇ ಇತ್ತು. ಶೂಟಿಂಗ್ ನಲ್ಲಿ ಒಂದಿಬ್ಬರು ಗೆಳತಿಯರು ಅದರ ನಕಲುಪ್ರತಿ ಮಾಡಿಸಿಕೊಳ್ಳಲು ಬಯಸಿದ್ದರಿಂದ ತೆಗೆದುಕೊಂಡು ಹೋಗಿದ್ದ ಆ ರೆಸಿಪಿ ಪುಸ್ತಕ ಕಾರ್ ನಲ್ಲೇ ಉಳಿದಿತ್ತು. ದೊಡ್ಡೆಗೌಡರ ಪ್ರೋತ್ಸಾಹದ ನುಡಿಗಳನ್ನು ಕೇಳಿದೊಡನೆ ನಾನು ಕೆಳಗೆ ಹೋಗಿ ಕಾರ್ ನಿಂದ ಪುಸ್ತಕವನ್ನು ತಂದು ಅವರಿಗೊಪ್ಪಿಸಿದೆ. ದೊಡ್ಡೆಗೌಡರು ಆಗಲೇ ಸಹಾಯಕನೊಬ್ಬನನ್ನು ಕರೆದು ಪುಸ್ತಕದ ಪ್ರಥಮಪುಟದಲ್ಲಿ ಒಂದಷ್ಟು ಸೂಚನೆಗಳನ್ನು ಬರೆದು ‘ಪ್ರಿಂಟಿಂಗ್ ಸೆಕ್ಷನ್ ಗೆ ಕೊಟ್ಟುಬಿಡು’ ಎಂದು ಕಳಿಸಲು ಅನುವಾದರು! ನಾನೇ ಅವರನ್ನು ತಡೆದು, “ಕೊಂಚ ಸಮಯ ಕೊಡಿ..ಬರಹವನ್ನು ಪರಿಷ್ಕರಿಸಿ ಒಂದಷ್ಟು ತಿದ್ದುಪಡಿ ಮಾಡಿ ತಂದುಕೊಡುತ್ತೇನೆ” ಎಂದು ನುಡಿದು ಅವರಿಂದ ಬೀಳ್ಕೊಂಡು ಅಲ್ಲಿಂದ ರಂಜನಿಯೊಡನೆ ಹೊರಟುಬಂದೆ. ನಂತರದ ಕೆಲ ದಿನಗಳು ಈ ಪರಿಷ್ಕರಣೆಯೇ ನನ್ನ ಮುಖ್ಯ ಕೆಲಸವಾಗಿ ಹೋಯಿತು.

ಹರೀಶ್ ಗುರೂಜಿಯವರು ‘ಸಿರಿಪಾಕ’ ಎಂಬ ಹೆಸರನ್ನು ಪುಸ್ತಕಕ್ಕೆ ಸೂಚಿಸಿದರು. ಮೊದಲ ಎರಡು ಭಾಗಗಳನ್ನು ಬಗೆಬಗೆಯ ತಿಂಡಿಗಳಿಗಾಗಿಯೇ ಮೀಸಲಿಡುವುದೆಂದು ಆಲೋಚಿಸಿ ‘ಬೆಳಗಿನ ತಿಂಡಿ ಚಿಂತೆ ಬಿಡಿ’ ಎಂಬ ಉಪಶೀರ್ಷಿಕೆಯನ್ನು ನೀಡಿದೆ. ಒಂದೊಂದು ವಿಭಾಗಕ್ಕೆ ಒಂದೊಂದು ಶೀರ್ಷಿಕೆ: “ಇಡ್ಡಲಿ ಲೋಕದಿ ಅಡ್ಡಾಡುವಾ”, “ದೋಸೆ ದರಬಾರ್”..ಹೀಗೆ! ದೊಡ್ಡೆಗೌಡರು ಬಹಳ ಕಡಿಮೆ ಸಮಯದಲ್ಲಿಯೇ ‘ಸಿರಿಪಾಕ’ದ ಎರಡು ಭಾಗಗಳನ್ನೂ ಸೂಕ್ತ ಚಿತ್ರಗಳೊಂದಿಗೆ ಅತ್ಯಂತ ಸುಂದರವಾಗಿ ಮುದ್ರಣ ಮಾಡಿಸಿ ಸಿದ್ಧಪಡಿಸಿದರು. ಪುಸ್ತಕ ಬಿಡುಗಡೆಯ ಸಮಾರಂಭವೂ ಏರ್ಪಾಡಾಯಿತು. ಆಗ ಎದುರಾದದ್ದು ಪರಮ ಸೋಜಿಗದ ಸಂಗತಿ! ಸಪ್ನ ಪ್ರಕಾಶನದ ವತಿಯಿಂದ ಹತ್ತು ಪುಸ್ತಕಗಳ ಬಿಡುಗಡೆ ಸಮಾರಂಭ ಗಾಂಧಿ ಭವನದಲ್ಲಿ; ಜೋಗಿ, ವಿಶ್ವೇಶ್ವರ ಭಟ್ಟರು, ಸುಧಾಮೂರ್ತಿಯವರು ಮೊದಲಾದವರ ಸಾಹಿತ್ಯ ಕೃತಿಗಳ ಜೊತೆಯಲ್ಲೇ ‘ಸಿರಿಪಾಕ’ಕ್ಕೂ ಲೋಕಾರ್ಪಣೆಯ ಭಾಗ್ಯ! ‘ಅಡುಗೆಮನೆ ಸಾಹಿತ್ಯ’ವೆಂಬಂತಹ ಛೇಡಿಸುವ ಮಾತುಗಳನ್ನು ಕೇಳಿದ್ದುಂಟು; ಅಡುಗೆಯೇ ಸಾಹಿತ್ಯ ಪ್ರಕಾರವೆಂಬಂತೆ ವಿಶೇಷ ಸ್ಥಾನಮಾನ ಗಳಿಸಿಕೊಂಡಂತಾಯಿತಲ್ಲಾ ಎಂದು ಈಗ ಮತ್ತೊಂದು ಅಚ್ಚರಿಯ ಪ್ರಸಂಗ! ಶ್ರೇಷ್ಠ ಸಾಹಿತಿ—ವಿಮರ್ಶಕ—ಚಿಂತಕ ಡಾ॥ ಸಿ.ಎನ್. ರಾಮಚಂದ್ರನ್ ಅವರು ಅಂದು ಬಿಡುಗಡೆಯಾದ ಕೃತಿಗಳ ಬಗ್ಗೆ ಸೊಗಸಾಗಿ ಮಾತಾಡಿದರು. ಅವರಿಂದಲೂ ಮೆಚ್ಚುಗೆಯ ಮಾತುಗಳನ್ನು ಗಳಿಸಿಕೊಂಡ ಹೆಮ್ಮೆ ‘ಸಿರಿಪಾಕ’ಕ್ಕೆ! ಹೀಗೆ ಅತ್ಯಂತ ಅನಿರೀಕ್ಷಿತವಾಗಿ ದೊಡ್ಡೆಗೌಡರ ಪ್ರೋತ್ಸಾಹ—ಉತ್ತೇಜನಗಳಿಂದ ನನ್ನ ಅಡುಗೆಯ ಪುಸ್ತಕಕ್ಕೆ ಪ್ರಕಟಣೆಯ ಭಾಗ್ಯ ದೊರಕಿಬಿಟ್ಟಿತು..ಅದೂ ನನ್ನ ನಾಟಕಗಳಿಗಿಂತ ಮೊದಲು!!!ತುಂಬುಹೃದಯದ ಧನ್ಯವಾದಗಳು ಸನ್ಮಾನ್ಯ ನಿತಿನ್ ಷಾ ಹಾಗೂ ದೊಡ್ಡೆಗೌಡರೇ!!!
| ಮುಂದುವರೆಯಲಿದೆ |






0 Comments