ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ 152
ರಾಧಿಕಾಳನ್ನು ಆಗಸ್ಟ್ 2013 ರಲ್ಲಿ ಚೆಲ್ಸಿ ಯೂನಿವರ್ಸಿಟಿಯಲ್ಲಿ ಎಂ ಎ ಪದವಿಯ ಶಿಕ್ಷಣಕ್ಕೆ ಕಳಿಸಿಕೊಟ್ಟಿದ್ದೆವಲ್ಲಾ, ವಾಸ್ತವವಾಗಿ ಅವಳು ತರಗತಿಗಳು ಆರಂಭವಾಗುವುದಕ್ಕೆ ಎರಡು ತಿಂಗಳು ಮುಂಚಿತವಾಗಿಯೇ ಲಂಡನ್ ಗೆ ಪ್ರಯಾಣ ಬೆಳೆಸಿದ್ದಳು. ಸಾಮರ್ ಸೆಟ್ ನ “international network of culture and arts” ಸಂಸ್ಥೆಯವರು ರೆಸಿಡೆನ್ಸಿ ಕಲಾವಿದೆಯಾಗಿ ರಾಧಿಕಾಳನ್ನು ಆಹ್ವಾನಿಸಿದ್ದರು.
ಒಂದು ತಿಂಗಳ ಆ ರೆಸಿಡೆನ್ಸಿಯನ್ನು ಯಶಸ್ವಿಯಾಗಿ ಮುಗಿಸಿಕೊಂಡು ಚೆಲ್ಸಿ ಕಾಲೇಜ್ ನಲ್ಲಿ ವ್ಯಾಸಂಗ ಆರಂಭಿಸಿದ್ದಳು ರಾಧಿಕೆ. ನೋಡಿ, ಈ ರೆಸಿಡೆನ್ಸಿಯ ವಿಷಯ ಹೇಳುತ್ತಿರುವಂತೆಯೇ ಈ ಮೊದಲೇ ರೆಸಿಡೆನ್ಸಿ ಕಲಾವಿದೆಯಾಗಿ ಅವಳು ಅಮೆರಿಕೆಗೆ ಹೋಗಿಬಂದಿದ್ದ ವಿಚಾರ ನೆನಪಾಗುತ್ತಿದೆ! 2012 ರಲ್ಲಿಯೇ ನ್ಯೂಯಾರ್ಕ್ ನ “Art students league of Newyork” ಸಂಸ್ಥೆಯವರು ರಾಧಿಕೆಗೆ ಮೆರಿಟ್ ಸ್ಕಾಲರ್ ಶಿಪ್ ನೀಡಿ ರೆಸಿಡೆಂಟ್ ಆರ್ಟಿಸ್ಟ್ ಆಗಿ ರಾಧಿಕೆಯನ್ನು ಒಂದು ತಿಂಗಳ ಅವಧಿಗೆ ಕರೆಸಿಕೊಂಡಿದ್ದರು. ರೆಸಿಡೆನ್ಸಿಯನ್ನು ಯಶಸ್ವಿಯಾಗಿ ಮುಗಿಸಿದ ನಂತರ ಒಂದು ತಿಂಗಳ ಕಾಲ ಅಮೆರಿಕೆಯ ಹಲವಾರು ಪ್ರಾಂತಗಳಲ್ಲಿ ಭರತನಾಟ್ಯ ಪ್ರದರ್ಶನವನ್ನು ನೀಡಲು ರಾಧಿಕೆಗೆ ಆಹ್ವಾನ ಬಂದಿತ್ತು. ಆಲ್ಬನಿ, ಲಾಸ್ ವೆಗಾಸ್ , ಶಿಕಾಗೋ, ವಾಶಿಂಗ್ಟನ್ ಡಿ ಸಿ ಹಾಗೂ ಸೇಂಟ್ ಲೂಯಿಸ್ — ಈ ಪ್ರಾಂತಗಳಲ್ಲಿ ಯಶಸ್ವೀ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ಅಪಾರ ಮೆಚ್ಚುಗೆಯನ್ನು ಗಳಿಸಿಕೊಂಡು ಭಾರತಕ್ಕೆ ಮರಳಿದ್ದಳು ರಾಧಿಕೆ. ಅಮೆರಿಕೆಯ ಈ ನೃತ್ಯ ಪ್ರದರ್ಶನಗಳನ್ನು ಆಯೋಜಿಸುವಲ್ಲಿ ನಮಗೆ ಬಹುವಾಗಿ ನೆರವಾಗಿದ್ದವರು ಆತ್ಮೀಯ ಗೆಳೆಯ, ಪ್ರಸಿದ್ಧ ನಟ ಬಾಬು ಹಿರಣ್ಣಯ್ಯನವರು. ಮತ್ತೂ ಒಂದು ಮುಖ್ಯ ವಿಷಯವನ್ನು ದಾಖಲಿಸಲು ಮರೆತಿದ್ದೆ.
ಬೆಂಗಳೂರಿನ “Lewis foundation of classical Ballet” ಸಂಸ್ಥೆಯಲ್ಲಿ ಶಾಸ್ತ್ರೀಯ ಬ್ಯಾಲೆ ನೃತ್ಯವನ್ನೂ ಸಹಾ ರಾಧಿಕಾ ಅಭ್ಯಾಸ ಮಾಡಿದ್ದಳು! ಲಂಡನ್ ಗೆ ಓದಲು ಹೋದ ಸಂದರ್ಭದಲ್ಲಿ ಅಲ್ಲಿನ Royal academy of dance ಶಾಲೆಯಲ್ಲಿಯೂ ತನ್ನ ಕಲಿಕೆಯನ್ನು ಮುಂದುವರಿಸಿ ವಿಶೇಷ ತರಬೇತಿಯನ್ನು ಪಡೆದುಕೊಂಡಳು! ಜೊತೆಗೆ Contemporary dance ಪ್ರಕಾರದಲ್ಲಿಯೂ ಸಹಾ ನುರಿತ ಕಲಾವಿದರಿಂದ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದಳು ರಾಧಿಕಾ! ಈ ಎಲ್ಲ ಪ್ರಕಾರಗಳ ಕಲಿಕೆ , ಮುಂದೆ ಅವಳಿಗೆ ಕಸಿಗೊಂಡ, fusion ಮಾದರಿಯ ನೃತ್ಯ ಪ್ರಯೋಗಗಳನ್ನು ರೂಪಿಸಿಕೊಳ್ಳಲು ತುಂಬಾ ನೆರವಾಯಿತು.2014 ರ ಕೊನೆಗೆ ಎಂ ಎ ಪದವಿ ವ್ಯಾಸಂಗ ಯಶಸ್ವಿಯಾಗಿ ಪೂರ್ಣಗೊಂಡಿತು. ಆಗ ಇದ್ದ ನಿಯಮಾವಳಿಗಳ ಪ್ರಕಾರ ಓದು ಮುಗಿದ ಮೇಲೆ ಮೂರು ತಿಂಗಳು ಮಾತ್ರ UK ಯಲ್ಲಿರಲು ಅವಳಿಗೆ ಅವಕಾಶವಿತ್ತು. ಓದು ಮುಗಿಯುತ್ತಿದ್ದಂತೆಯೇ ಅಮೆರಿಕೆಯ ಮತ್ತೊಂದು ರೆಸಿಡೆನ್ಸಿ ಅವಕಾಶ ರಾಧಿಕಾಳನ್ನು ಅರಸಿಕೊಂಡು ಬಂದಿತು! ಅಮೆರಿಕೆಯ ಪಶ್ಚಿಮ ಓಕ್ಲಹಾಮಾ ರಾಜ್ಯದ ಯೂನಿವರ್ಸಿಟಿಯವರು ಒಂದು ತಿಂಗಳ ಅವಧಿಗೆ “ARTIST IN RESIDENCE” ಆಗಿ ಆಹ್ವಾನಿಸಿದರು. ಆ ರೆಸಿಡೆನ್ಸಿಯ ಸಮಯದಲ್ಲಿಯೂ ಅಲ್ಲಿನ ಸಹೋದ್ಯೋಗಿಗಳಿಗೆ, ಅಧ್ಯಾಪಕ ವರ್ಗದವರಿಗೆ ವಿಶೇಷ ಭರತನಾಟ್ಯ ಪ್ರದರ್ಶನಗಳನ್ನು ನೀಡಿ ಶಹಬ್ಬಾಸ್ ಅನ್ನಿಸಿಕೊಂಡು ಅಲ್ಲಿಂದಲೇ ಭಾರತಕ್ಕೆ ಮರಳಿ ಬಂದಳು ಮಗಳು ರಾಧಿಕಾ! ಒಂದೂಕಾಲು ವರ್ಷದ ನಂತರ ಮಗಳು ವ್ಯಾಸಂಗವನ್ನು ಯಶಸ್ವಿಯಾಗಿ ಮುಗಿಸಿಕೊಂಡು ಮನೆಗೆ ಬಂದರೆ ನಮಗೆ ಸಂಭ್ರಮವೋ ಸಂಭ್ರಮ! ಹಿಗ್ಗೋ ಹಿಗ್ಗು! ನಿಜಕ್ಕೂ ಮಕ್ಕಳಿಂದ ಬಹಳ ಸಮಯ ಅಗಲಿರುವುದು ಬಲು ಕಷ್ಟದ ಸಂಗತಿ! ನಮ್ಮ ಹಾಗೆ ಕೊಂಚ ಭಾವಜೀವಿಗಳಾಗಿಬಿಟ್ಟರಂತೂ ಮುಗಿದೇಹೋಯಿತು! ಹೋಗಿ ಎಷ್ಟು ದಿನವಾಯಿತು, ಮರಳಿ ಬರಲೆಷ್ಟು ದಿನ — ಈ ಲೆಕ್ಕಾಚಾರದ ಸುತ್ತಲೇ ಮನಸ್ಸು ತಿರುಗುತ್ತಿರುತ್ತದೆ! ಅಲ್ಲಿ ಊಟ ತಿಂಡಿ ಸರಿಯಾಗಿ ಹೊಂದಿಕೆಯಾಗಿದೆಯೋ ಇಲ್ಲವೋ..ಒಳ್ಳೆಯ ಗೆಳತಿಯರು ಸಿಕ್ಕಿದ್ದಾರೋ ಇಲ್ಲವೋ…ಇತ್ಯಾದಿ ಚಿಂತೆಗಳ ಸರಮಾಲೆ ಮತ್ತೊಂದಷ್ಟು ಕಾಡಿಸುತ್ತದೆ!ಮರಳಿ ಬಂದ ನಂತರ ರಾಧಿಕೆ ಕೇವಲ ಕೆಲವೇ ದಿನಗಳ ವಿಶ್ರಾಂತಿ ತೆಗೆದುಕೊಂಡು ಮತ್ತೆ ನೃತ್ಯ—ಕಲೆಗಳತ್ತ ಗಮನ ಹರಿಸತೊಡಗಿದಳು.
ನಮ್ಮ ಅಪಾರ್ಟ್ ಮೆಂಟ್ ನಲ್ಲಿಯೇ ಸಾಕಷ್ಟು ಮಕ್ಕಳು ಭರತನಾಟ್ಯ ಕಲಿಕೆಯಲ್ಲಿ ಆಸಕ್ತಿ ತೋರಿದ್ದರಿಂದ ಇಲ್ಲಿಯೇ ನೃತ್ಯ ತರಗತಿಗಳನ್ನು ರಾಧಿಕಾ ಆರಂಭಿಸಿದಳು. ಒಂದೆರಡು ತಿಂಗಳು ಕಳೆಯುತ್ತಿದ್ದಂತೆಯೇ U K ಇಂದ ಕೆಲ ನೃತ್ಯ ಪ್ರದರ್ಶನಗಳಿಗೆ ಆಹ್ವಾನ ಬಂದಿತು! ಬಾತ್ ನಲ್ಲಿ ನಡೆದ ‘ಭಾರತೀಯ ಸಂಗೀತೋತ್ಸವ’ದ ಭಾಗವಾಗಿ ಭರತನಾಟ್ಯ ಪ್ರದರ್ಶನ ನೀಡಲು ರಾಧಿಕಾಳನ್ನು ಆಹ್ವಾನಿಸಿದ್ದರು. ಅದರ ಜತೆಗೆ ಕಾರ್ಡಿಫ್ , ಹಮ್ಮಿಂಗ್ ಡನ್ ಹಾಗೂ ಲಂಡನ್ ಗಳಲ್ಲಿಯೂ ನೃತ್ಯ ಪ್ರದರ್ಶನಗಳು ಆಯೋಜನೆಗೊಂಡವು. ಇದಾದ ನಂತರ ಆಯೋಜನೆಗೊಂಡದ್ದು ನೆಹರೂ ವಾಂಗ್ ಚಕ್ ಕಲ್ಚರಲ್ ಸೆಂಟರ್ ನವರ ವತಿಯಿಂದ ಭರತನಾಟ್ಯ ಪ್ರದರ್ಶನ —ಭೂತಾನ್ ನಲ್ಲಿ! ಎಲ್ಲೆಡೆ ಅಮೋಘ ಪ್ರದರ್ಶನಗಳನ್ನು ನೀಡಿ ಅಪಾರ ಪ್ರೀತಿ ಮೆಚ್ಚುಗೆಗಳನ್ನು ಗಳಿಸಿಕೊಂಡು ಹೆಮ್ಮೆಯಿಂದ ಭಾರತಕ್ಕೆ ಮರಳಿದಳು ರಾಧಿಕೆ. ಬರುತ್ತಿದ್ದಂತೆ ಬೆಂಗಳೂರಿನ ARMY SCHOOL ನಲ್ಲಿ ನೃತ್ಯ ಶಿಕ್ಷಕಿಯಾಗಿ ಉದ್ಯೋಗವೂ ದೊರೆಯಿತು ಅವಳಿಗೆ. ಆದರೆ ಮಗಳಿಗೆ ಈ ಶಿಕ್ಷಕ ವೃತ್ತಿ ಅಷ್ಟೇನೂ ಪ್ರಿಯವಾದುದಾಗಿರಲಿಲ್ಲ.
ಶಾಲೆಯಲ್ಲಿ ಇತರ ವಿಷಯಗಳನ್ನು ಪರಿಗಣಿಸುವಷ್ಟು ಗಂಭೀರವಾಗಿ ನೃತ್ಯಶಿಕ್ಷಣವನ್ನು ಪರಿಗಣಿಸುವುದಿಲ್ಲ ಅನ್ನುವುದು ಅವಳ ಅಸಮಾಧಾನಕ್ಕೆ, ಸಿಡಿಮಿಡಿಗೆ ಪ್ರಮುಖ ಕಾರಣ! ತಮ್ಮ ವಿಷಯದ ಪಠ್ಯ ಭಾಗಗಳನ್ನು ಪರೀಕ್ಷೆಯ ಮೊದಲು ಮುಗಿಸಬೇಕು ಎಂಬ ಕಾರಣಕ್ಕೆ ವಿಜ್ಞಾನ ವಿಭಾಗದ ಶಿಕ್ಷಕರು ಡಾನ್ಸ್ ತರಗತಿಗಳನ್ನು ಕಬಳಿಸಿಬಿಡುವುದರ ಬಗ್ಗೆಯೂ ಅವಳಿಗೆ ಸಿಟ್ಟು! ಕೇವಲ ಔಪಚಾರಿಕತೆಗೆ ನೃತ್ಯ ತರಗತಿ ಇಡುವ ವ್ಯವಸ್ಥೆಯನ್ನು ಕಂಡರಾಗದು ಅವಳಿಗೆ. ನೃತ್ಯವೂ ಒಂದು ಪ್ರಧಾನ ವಿಷಯವಾಗಿದ್ದಾಗ ಮಾತ್ರ ಅದಕ್ಕೊಂದು ಬೆಲೆ; ವಿದ್ಯಾರ್ಥಿಗಳೂ ಸಹಾ ಕೊಂಚ ಜವಾಬ್ದಾರಿಯಿಂದಿರುತ್ತಾರೆ ಹಾಗೂ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ; ಐಚ್ಫಿಕ ವಿಷಯವಾಗಿಯಾದರೂ ಅದು ಪ್ರಧಾನ ವಿಷಯವಾಗಿರಲಿ ಎನ್ನುವುದು ಅವಳ ಮನದಳಲು. ಹಿಂದೆ ನಾಟಕದ ವಿಷಯಕ್ಕೂ ನಾವು ಹೀಗೆಯೇ ಹಳಹಳಿಸುತ್ತಿದ್ದುದು ನೆನಪಾಯಿತು ನನಗೆ! “ಈ ಬಗೆಯ ನಾಮಕಾವಸ್ಥೆಯ ಕೆಲಸದಲ್ಲಿ ನನಗೆ ಆಸಕ್ತಿಯಿಲ್ಲ, ಬಿಟ್ಟುಬಿಡುತ್ತೇನೆ ಎಂದು ಆಗಾಗ್ಗೆ ಸಿಡಿಮಿಡಿಗೊಳ್ಳುತ್ತಿದ್ದಳು ರಾಧಿಕೆ. ಆದರೆ ಒಂದು ಭದ್ರತೆಯನ್ನು, ಆರ್ಥಿಕ ಸ್ವಾವಲಂಬನೆಯನ್ನು ಒದಗಿಸಿಕೊಡುವ ನೌಕರಿಯನ್ನು ಕೆಲ ಸಣ್ಣ ಪುಟ್ಟ ಹೊಂದಾಣಿಕೆ ಮಾಡಿಕೊಂಡಾದರೂ ಉಳಿಸಿಕೊಳ್ಳಬೇಕು ಅನ್ನುವುದು ನಮ್ಮ ಅಭಿಪ್ರಾಯವಾಗಿತ್ತು. ಆದರೆ ಈಗಿನ ಮಕ್ಕಳ ಮನೋಧರ್ಮವೇ ಬೇರೆ…ಅವರ ಆಲೋಚನಾ ಧಾಟಿಯೇ ಬೇರೆ…ಬದುಕನ್ನು ಅವರು ಪರಿಭಾವಿಸುವ ಕ್ರಮವೇ ಬೇರೆ! ಹೆಚ್ಚುಕಡಿಮೆ ಅಂದಿಗೆ ಎರಡು ದಶಕಗಳ ಹಿಂದೆ ನಾನೇ ‘ಭದ್ರತೆ’ಯ ಸೋಗಿನ ಉದ್ಯೋಗವನ್ನು, ಅದೂ ಕೇಂದ್ರ ಸರಕಾರದ ನೌಕರಿಯನ್ನು ‘ಹಾಗೇ ಸುಮ್ಮನೆ’ ತ್ಯಜಿಸಿ ಬಂದವನು..
ಇನ್ನು ಈ ಕಾಲದ ಮಕ್ಕಳು ಹಾಗೆ ಒಂದೆಡೆ, ಅದೂ ಒಲ್ಲದೆಡೆ ನೆಲೆ ನಿಲ್ಲುವರೇ!? ಬಹಳ ದಿನಗಳ ಕಾಲ ಅವಳೇನೂ ನೌಕರಿಯಲ್ಲಿ ಮುಂದುವರಿಯುವವಳಲ್ಲ ಎಂಬುದು ನಮಗೆ ಖಾತ್ರಿಯಾಗಿಹೋಗಿತ್ತು! ಕೇವಲ ‘ಯಾವಾಗ’ ಎಂಬೊಂದು ಸಮಯದ ಪ್ರಶ್ನೆಯಾಗಿ ಅದು ಉಳಿದಿತ್ತು ಅಷ್ಟೇ! ಈ ಸಮಯದಲ್ಲಿ ನಾನು ಹಲವಾರು ಚಿತ್ರಗಳಲ್ಲಿಯೂ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದೆನಾದರೂ ಬಹುತೇಕ ಅವು ನೆನಪಿನಲ್ಲಿ ಉಳಿದಿಲ್ಲ. ನೆನಪಿನಲ್ಲಿ ಉಳಿಯುವಂತಹ ಪಾತ್ರವಾಗಲೀ ಚಿತ್ರವಾಗಲೀ ನನ್ನ ತೆಕ್ಕೆಗೆ ಬರಲಿಲ್ಲ ಅನ್ನುವುದು ಹೆಚ್ಚು ಸೂಕ್ತ!ಇತ್ತ ರಂಜನಿಯ ಕಾವ್ಯಕೃಷಿ ಸಾಕಷ್ಟು ಕ್ಷಿಪ್ರಗತಿಯಲ್ಲಿಯೇ ಸಾಗಿ ಹೊಸದೊಂದು ಧ್ವನಿ ಸಾಂದ್ರಿಕೆಗೆ ಬೇಕಾದಷ್ಟು ಹಾಡುಗಳನ್ನು ಬರೆದು ಸಿದ್ಧಪಡಿಸಿದ್ದಳು.
ಎಂದಿನಂತೆ ಉಪಾಸನಾ ಮೋಹನ್ ಅವರು ಆ ಗೀತೆಗಳನ್ನು ಸುಮಧುರ ಸಂಗೀತದಿಂದ ಸಿಂಗರಿಸಲು ತಯಾರಿ ನಡೆಸಿದ್ದರು. ಆಗಲೇ ನಮಗೆ ಹೊಳೆದ ಒಂದು ಆಲೋಚನೆ ಎಂದರೆ ಧ್ವನಿ ಸಾಂದ್ರಿಕೆಯ ಲೋಕಾರ್ಪಣೆ ಸಮಾರಂಭವನ್ನು ಕೊಂಚ ವಿಭಿನ್ನವಾಗಿ ಆಯೋಜಿಸಬೇಕೆನ್ನುವುದು! ಹೊಸ ಧ್ವನಿ ಸಾಂದ್ರಿಕೆಗೆ ನಾಮಕರಣವಾಯಿತು: “ಮೇಘವಿನ್ಯಾಸ”. “ಭಾವನೃತ್ಯ—ಸಿ ಡಿ ಬಿಡುಗಡೆ—ಗೌರವಾರ್ಪಣೆ”— ಹೀಗೆ ಮೂರು ಮುಖ್ಯ ಮಜಲುಗಳಲ್ಲಿ ಕಾರ್ಯಕ್ರಮ ಪ್ರಸ್ತುತಿಯನ್ನು ರೂಪಿಸಿದೆವು. ರಾಧಿಕಾ ರಂಜನಿಯ ಐದು ಭಾವಗೀತೆಗಳನ್ನು ಭರತನಾಟ್ಯಕ್ಕೆ ಅಳವಡಿಸಿಕೊಂಡು ಪ್ರಸ್ತುತಿ ಪಡಿಸಲು ಸಿದ್ಧತೆ ಮಾಡಿಕೊಳ್ಳತೊಡಗಿದಳು. ನಮ್ಮೊಂದಿಗೆ ಇದ್ದು ಸದಾ ನಮ್ಮನ್ನು ಪ್ರೋತ್ಸಾಹಿಸುತ್ತಿರುವ, ಹರಸುತ್ತಿರುವ ಕೆಲ ಹಿರಿಯರನ್ನು—ಮಿತ್ರರನ್ನು ಅಂದು ವೇದಿಕೆಯ ಮೇಲೆ ಗೌರವಿಸುವ ಒಂದು ಗೌರವಾರ್ಪಣೆ ಕಾರ್ಯಕ್ರಮವನ್ನು ಕೂಡಾ ರೂಪಿಸಿಕೊಂಡೆವು.
ಡಿಸೆಂಬರ್ 11, ರಂಜನಿಯ ಜನುಮದಿನ. 2015 ನೇ ಇಸವಿ ಅದೇ ದಿನದಂದು ‘ಮೇಘವಿನ್ಯಾಸ’ ಧ್ವನಿ ಸುರುಳಿಯ ಲೋಕಾರ್ಪಣೆ—ಎಡಿಎ ರಂಗಮಂದಿರದಲ್ಲಿ ಎಂದು ತೀರ್ಮಾನಿಸಲಾಯಿತು. ಅಂದು ವೇದಿಕೆಯ ಮೇಲೆ ಧ್ವನಿ ಸುರುಳಿ ಲೋಕಾರ್ಪಣೆ, ರಾಧಿಕೆಯ ಭಾವನೃತ್ಯ ಹಾಗೂ ಗುರು ಹಿರಿಯರಿಗೆ—ಮಿತ್ರರಿಗೆ ಗೌರವಾರ್ಪಣೆ ಕಾರ್ಯಕ್ರಮ. ಅಂದು ನಾವು ಪ್ರೀತಿಯ ಗುರುಗಳಾದ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಡಾ॥ಸಿ.ಎನ್. ರಾಮಚಂದ್ರನ್ , ನಮ್ಮ ಮಾರ್ಗದರ್ಶಕ ಡಾ॥ ಹರೀಶ್ ಜೀ, ಪ್ರೀತಿಯ ಗುರು ಶಾಮಲಾ ಭಾವೆ, ಪ್ರಿಯ ಮಿತ್ರರಾದ ಡಾ॥ಬಿ.ವಿ.ರಾಜಾರಾಂ ಹಾಗೂ ಬಾಬು ಹಿರಣ್ಣಯ್ಯ— ಇವರುಗಳನ್ನು ನಾವು ಗೌರವ ಪೂರ್ವಕವಾಗಿ ಸನ್ಮಾನಿಸಿ ಧನ್ಯತೆಯ ಭಾವವನ್ನು ಅನುಭವಿಸಿದೆವು..


ಡಾ॥ ಹೆಚ್.ಎಸ್. ವೆಂಕಟೇಶ ಮೂರ್ತಿ, ಬಿ.ಆರ್. ಲಕ್ಷ್ಮಣ ರಾವ್ , ಹಾಗೂ ಎಂ ಎನ್ ವ್ಯಾಸರಾವ್ —ಈ ದಿಗ್ಗಜ ಕವಿತ್ರಯರು ಅಂದಿನ ವೇದಿಕೆಯ ಕಾರ್ಯಕ್ರಮಗಳನ್ನು ಸುಸೂತ್ರವಾಗಿ ನಡೆಸಿಕೊಟ್ಟರು. ಭಾವಗೀತಾಕ್ಷೇತ್ರದ ಮೂವರು ಪ್ರಮುಖ ಕವಿಗಳು ಅಂದು ಒಟ್ಟಿಗೆ ವೇದಿಕೆಯ ಮೇಲಿದ್ದದ್ದು ವಿಶೇಷ ಮೆರುಗನ್ನು ತಂದಿತ್ತು. ‘ಮೇಘವಿನ್ಯಾಸ’ ಧ್ವನಿ ಸಾಂದ್ರಿಕೆಯಲ್ಲಿದ್ದ ಒಂಬತ್ತು ಹಾಡುಗಳಿಗೆ ಅತ್ಯಂತ ಸೊಗಸಾದ ಸಂಗೀತ ಸಂಯೋಜನೆಯನ್ನು ಮಾಡಿದ್ದರು ಮೆಲೋಡಿ ಕಿಂಗ್ ಉಪಾಸನಾ ಮೋಹನ್! ಇನಿದನಿಯ ಗಾಯಕಿ ಎಂ ಡಿ ಪಲ್ಲವಿ ಅವರು ಧ್ವನಿಸಾಂದ್ರಿಕೆಯ ಮೂರು ಹಾಡುಗಳನ್ನು ಹಾಡಿದ್ದರು. ಉಳಿದ ಹಾಡುಗಳಿಗೆ ದನಿಯಾಗಿದ್ದವರು ಉಪಾಸನಾ ಮೋಹನ್ , ಮೇಘನಾ ಭಟ್ , ಪಂಚಮ್ ಹಳಿಬಂಡಿ, ವರ್ಷಾ ಸುರೇಶ್ ಹಾಗೂ ರಶ್ಮಿ ಪೈಲೂರು.
ವೇದಿಕೆಯ ಮೇಲಿನ ಕಾರ್ಯಕ್ರಮಗಳು ಸೊಗಸಾಗಿ ಮೂಡಿ ಬಂದವು. ಕೆಲವು ಹಾಡುಗಳಿಗೆ ಗಾಯಕ—ಗಾಯಕಿಯರು ರಂಗದ ಮೇಲೆ ದನಿಯಾದರೆ ಮತ್ತೆ ಕೆಲ ಹಾಡುಗಳಿಗೆ ರಾಧಿಕೆ ಮನೋಹರ ನೃತ್ಯ ಪ್ರಸ್ತುತಿ ಒದಗಿಸಿದಳು. ಅವಳ ನೃತ್ಯ ಎಂದಿನಂತೆ ಸಹೃದಯರ ಮನಸೂರೆಗೊಂಡಿತು. ಕವಿತೆಗಳನ್ನು ಕುರಿತು ಮೂವರೂ ಕವಿವರ್ಯರು ಮೆಚ್ಚುನುಡಿಗಳನ್ನಾಡಿ ರಂಜನಿಯ ಬೆನ್ನು ತಟ್ಟಿದರು; ಸನ್ಮಾನಿತರ ಪರವಾಗಿ ಡಾ॥ ಹೆಚ್. ಎಸ್.ವಿ. ಅವರು ಮಾತನಾಡಿ , “ತನಗೆ ನೆರವಾದವರನ್ನು ಕೃತಜ್ಞತೆಯಿಂದ ನೆನೆಯುವುದು, ಗುರು ಹಿರಿಯರನ್ನು ಆದರದಿಂದ ಗೌರವಿಸುವುದು ಮನುಷ್ಯನಲ್ಲಿ ಇರಬೇಕಾದ ಅತ್ಯಂತ ಮುಖ್ಯ ಗುಣಗಳು.

ಇಂದಿನ ಸಮಾರಂಭದಲ್ಲಿ ನಮಗೆ ಎದ್ದು ಕಾಣುತ್ತಿರುವುದು ಪ್ರೀತಿ—ಗೌರವಾದರಗಳ, ಸುಮಧುರ ಬಂಧಗಳ ವಾತಾವರಣ. ಇಂತಹ ಗಟ್ಟಿ ಗಳಿಗೆಗಳೇ ನಮ್ಮ ಬದುಕನ್ನು ರಸಮಯವಾಗಿಸುತ್ತಲೇ ಅರ್ಥಪೂರ್ಣವಾಗಿಸುತ್ತವೆ” ಎಂದು ಸಂತಸ ವ್ಯಕ್ತಪಡಿಸಿದರು. ಒಟ್ಟಾರೆ ಮನಸ್ಸಿಗೆ ಅತೀವ ಸಮಾಧಾನವನ್ನು ತಂದ, ಮುದ ನೀಡಿದ ಕಾರ್ಯಕ್ರಮ ಅದಾಗಿತ್ತು. ಪ್ರಾಸಂಗಿಕವಾಗಿ ನೆನಪಾದ ಒಂದು ಸಂಗತಿ:”ಮೇಘವಿನ್ಯಾಸ” ಧ್ವನಿಸಾಂದ್ರಿಕೆಯ ಶೀರ್ಷಿಕೆ ಗೀತೆಯನ್ನು ಪ್ರಸಿದ್ಧ ಗಾಯಕಿಯರಾದ ಮಂಗಳಾ ರವಿ ಹಾಗೂ ಮೀರಾ ಅವರು ತಮ್ಮ ‘ಆಲಾಪನಾ’ ಸಂಸ್ಥೆಗೆ ದತ್ತು ತೆಗೆದುಕೊಂಡಿದ್ದಾರೆ! “ಮೇಘವಿನ್ಯಾಸದ ಎತ್ತರ ಬಾನಿಗೆ ಕಾಮನಬಿಲ್ಲೇ ಆಲಾಪನಾ” ಎಂದು ಆರಂಭವಾಗುವ ಈ ಗೀತೆ ಈಗ ‘ಆಲಾಪನಾ’ ಸಂಸ್ಥೆಯ ಗೀತೆ!
|ಮುಂದಿನ ವಾರಕ್ಕೆ |






0 Comments