ಶ್ರೀನಿವಾಸ ಪ್ರಭು ಅಂಕಣ- ಯಾವ ಥಿಯೇಟರ್ ನಲ್ಲೂ ನಾನು ನೋಡದ ಚಿತ್ರವಿರಲಿಲ್ಲ!..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

10

ಬೆಂಗಳೂರಿನಲ್ಲಿ ಒಂದು ಕಾರಣಕ್ಕೆ ನನಗೆ ವಿಪರೀತ ಬೇಸರವಾಗುತ್ತಿತ್ತು: ಕೊಣನೂರಿನಲ್ಲಿ ನೋಡುತ್ತಿದ್ದ ಹಾಗೆ ಇಲ್ಲಿ ಸಿನಿಮಾಗಳನ್ನು ನೋಡಲಾಗುತ್ತಿರಲಿಲ್ಲ. ಬೇಕಾದಷ್ಟು ಒಳ್ಳೊಳ್ಳೆಯ ಟಾಕೀಸ್ ಗಳಿವೆ; ಹೊಸ ಹೊಸಾ ಸಿನಿಮಾಗಳು ಬರುತ್ತಲೇ ಇರುತ್ತವೆ; ಆದರೂ ಹೆಚ್ಚು ನೋಡಲು ಅವಕಾಶವಿಲ್ಲ! ಆಗಾಗ್ಗೆ ಅಣ್ಣ ಎಲ್ಲರನ್ನೂ ಸಿನಿಮಾ ನೋಡಲು ಕರೆದುಕೊಂಡು ಹೋಗುತ್ತಿದ್ದುದುಂಟು. ಒಮ್ಮೆ ಹಾಗೆ ಸತ್ಯ ಹರಿಶ್ಚಂದ್ರ ಚಿತ್ರವನ್ನು ನೋಡಲು ಆಗ ಬೆಂಗಳೂರಿನಲ್ಲಿ ಪ್ರಚಲಿತವಿದ್ದ ಟಾಂಗಾದಲ್ಲಿ ಜೆ.ಸಿ.ರಸ್ತೆಯ ಭಾರತ್ ಟಾಕೀಸ್ ಗೆ ನಮ್ಮನ್ನೆಲ್ಲಾ ಕರೆದುಕೊಂಡು ಹೋದರು.

ನಮ್ಮ ದುರಾದೃಷ್ಟಕ್ಕೆ ಅವತ್ತು ಹೌಸ್ ಫುಲ್! ನೆಚ್ಚಿನ ನಟ ರಾಜ್ ಕುಮಾರ್ ಅವರ ಚಿತ್ರವನ್ನು ನೋಡಲು ಸಾಧ್ಯವಾಗದ್ದಕ್ಕೆ ನನಗಾದ ನಿರಾಸೆ ಅಷ್ಟಿಷ್ಟಲ್ಲ. ಕೆಲದಿನ ಬಿಟ್ಟು ಬಂದು ನೋಡಿದರಾಯಿತು ಅಂದುಕೊಂಡ ಅಣ್ಣ ಆಮೇಲೆ ನನ್ನ ಹ್ಯಾಪುಮೋರೆಯನ್ನು ನೋಡಿ ಕರಗಿ, ‘ಹೋಗಲಿ ಬನ್ನಿ.. ಇಲ್ಲೇ ಪಕ್ಕದಲ್ಲೇ ಶಿವಾಜಿ ಟಾಕೀಸ್ ಇದೆ.. ಅಲ್ಲೇನಾದ್ರೂ ಕನ್ನಡ ಪಿಕ್ಚರ್ ಇದ್ದರೆ ನೋಡೋಣ’ ಎಂದು ಕರೆದುಕೊಂಡು ಹೋದರು. ಅಲ್ಲಿ ನಡೆಯುತ್ತಿದ್ದುದು ಅಮರಜೀವಿ ಅನ್ನುವ ರಾಜಾಶಂಕರ್ ನಾಯಕರಾಗಿದ್ದ ಚಿತ್ರ.

ಸಧ್ಯ! ಯಾವುದೋ ಒಂದು.. ಒಟ್ಟಿನಲ್ಲಿ ಸಿನಿಮಾ ನೋಡಬೇಕು ಅಷ್ಟೇ! ಏನೇ ಆದರೂ ನನ್ನ ಹುಚ್ಚು ತಣಿಯುವಷ್ಟು ಸಿನಿಮಾಗಳನ್ನು ನೋಡಲಾಗುತ್ತಿರಲಿಲ್ಲ. ಇರಲಿ.. ಮುಂದೆ ದೊಡ್ಡವನಾದ ಮೇಲೆ ಬೆಂಗಳೂರಲ್ಲಿರೋ ಎಲ್ಲಾ ಟಾಕೀಸ್ ಗಳಲ್ಲಿ ನಡೆಯೋ ಎಲ್ಲಾ ಸಿನಿಮಾಗಳನ್ನೂ ಒಂದೂ ಬಿಡದೆ ನೋಡೇ ನೋಡ್ತೀನಿ ಎಂದು ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿಕೊಂಡೆ. ನನ್ನ ಈಡೇರಿದ ಪ್ರತಿಜ್ಞೆಗಳಲ್ಲಿ, ನನಸಾದ ಕನಸುಗಳಲ್ಲಿ ಇದೂ ಒಂದು ಎಂದು ಘಂಟಾಘೋಷವಾಗಿ ಹೇಳಬಲ್ಲೆ! 1975 ನೇ ಇಸವಿಯ ಒಂದು ಹಂತದಲ್ಲಿ ಬೆಂಗಳೂರಿನ ಯಾವ ಥಿಯೇಟರ್ ನಲ್ಲೂ ನಾನು ನೋಡದ ಚಿತ್ರವಿರಲಿಲ್ಲ! ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಷ್ಟೂ ಚಿತ್ರಗಳನ್ನು ನೋಡಿ ಮುಗಿಸಿದ್ದೆ!

ಪ್ರತಿದಿನವೂ ಸಂಜೆ ಎಲ್ಲರನ್ನೂ ಕೂರಿಸಿಕೊಂಡು ಅಣ್ಣ ಸ್ತೋತ್ರ- ಗೀತೆಗಳು ಹಾಗೂ ಭಜನೆಗಳನ್ನು ಹೇಳಿಕೊಡುತ್ತಿದ್ದರು. ಸಂಜೆಗತ್ತಲು ಕವಿಯುತ್ತಿದ್ದಂತೆ ಮನೆಯಲ್ಲಿ ದೀಪಗಳು ಬೆಳಗಿ, ‘ಅಯಿಗಿರಿ ನಂದಿನಿ’, ‘ದತ್ತಾತ್ರೇಯ ತವಶರಣಂ’, ‘ಪಾಲಯಾಚ್ಯುತ ಪಾಲಯಾಚ್ಯುತ’ ಮೊದಲಾದ ಸ್ತೋತ್ರ-ಭಜನೆಗಳು ಮನೆಯ ಆವರಣದಲ್ಲಿ ರಿಂಗಣಿಸುತ್ತಿದ್ದವು.

ಮನೆಯವರ ಪ್ರೀತಿ-ವಾತ್ಸಲ್ಯಗಳ ಬೆಚ್ಚನೆಯ ಆಸರೆಯಲ್ಲಿ, ಶಿಸ್ತು-ಸಂಯಮಗಳ ಭದ್ರಕೋಟೆಯಲ್ಲಿ ನನ್ನ ಮನಸ್ಸನ್ನು ಆವರಿಸಿಕೊಂಡಿದ್ದ ಕೀಳರಿಮೆ-ಗೊಂದಲ-ತುಮುಲಗಳ, ಚೆಲುವದ್ವಯರ ಪ್ರಭಾವಜನ್ಯ ಕೆಟ್ಟ ಯೋಚನೆಗಳ ಪರಿವೇಷ ನಿಧಾನವಾಗಿ ಕಳಚಿಕೊಳ್ಳುತ್ತಾ ಮನಸ್ಸು ಸ್ವಸ್ಥ ಸ್ಥಿತಿಗೆ ಮರಳತೊಡಗಿತು. ‘ನನ್ನ ಮನೆಯಲ್ಲಿ ನನ್ನ ಕುಟುಂಬದೊಂದಿಗೆ ನಾನು ಸುರಕ್ಷಿತವಾಗಿದ್ದೇನೆ’ ಎಂಬ ಸಮಾಧಾನದ ಭಾವ ಆವರಿಸಿಕೊಳ್ಳತೊಡಗಿತು.

ಎಂಟನೇ ತರಗತಿಯ ಪರೀಕ್ಷೆಗಳು ಮುಗಿದವು. ನನ್ನ ಫಲಿತಾಂಶ ತೀರಾ ಮೋಸವಾಗಿರಲಿಲ್ಲ. ‘ಜಸ್ಟ್ ಪಾಸ್’ ಹುದ್ದೆಯಿಂದ ಸೆಕೆಂಡ್ ಕ್ಲಾಸ್ ಗೆ ಬಡ್ತಿ ದೊರಕಿತ್ತು. ಇದೇ ವೇಳೆಗೆ ಚಾಮರಾಜಪೇಟೆಯಲ್ಲಿ ಅಂಗಡಿ ವ್ಯಾಪಾರ ಅಷ್ಟೇನೂ ಲಾಭದಾಯಕವಾಗಿರದೇ ಹೋದುದರಿಂದ ಅಣ್ಣ ಅಂಗಡಿಯನ್ನು ಜಯನಗರ ಮೂರನೇ ಬ್ಲಾಕ್ ಗೆ ವರ್ಗಾಯಿಸಿದರು. ನಮ್ಮ ಅಂಗಡಿಯ ಹಿಂಬದಿಯ ರಸ್ತೆಯಲ್ಲಿಯೇ ಇದ್ದ ಬೆಂಗಳೂರು ಹೈಸ್ಕೂಲ್ ನಲ್ಲಿ ನಾನು ‘ಒಂಬತ್ತನೇ ಕ್ಲಾಸ್ ಕನ್ನಡ ಮೀಡಿಯಂ ಸಿ ಸೆಕ್ಷನ್’ ಗೆ ದಾಖಲಾದೆ. ಸಧ್ಯ,ಸೀಟ್ ಕೊಡಲು ಅಲ್ಲಿ ಹೆಡ್ ಮಾಸ್ತರ್ ಆಗಿದ್ದ ಸಿ.ಜಿ.ಗುಂಡೂರಾವ್ ಅವರು ಹೆಚ್ಚೇನೂ ತಕರಾರು ಮಾಡಲಿಲ್ಲ. ಮುಂದೆ ನನಗೆ ನಾಟಕಕ್ಷೇತ್ರದಲ್ಲಿ ಅಪಾರ ಆಸಕ್ತಿ ಮೂಡಲು ಬೀಜಾಂಕುರವಾದದ್ದು, ಅಗತ್ಯ ವೇದಿಕೆ ನಿರ್ಮಾಣಗೊಂಡಿದ್ದು ಈ ಶಾಲೆಯಲ್ಲಿಯೇ.

ಅಂಗಡಿಯನ್ನು ಜಯನಗರಕ್ಕೆ ವರ್ಗಾಯಿಸಿದ ಮೇಲೆ ನಾವು ವಾಸ್ತವ್ಯಕ್ಕೆ ಬಂದದ್ದು ಮಾಧವನ ಪಾರ್ಕ್ ಗೆ ಸಮೀಪದಲ್ಲಿದ್ದ ಒಂದು ಮಹಡಿಯ ಮನೆಗೆ. ಈ ಮನೆಯಲ್ಲಿ ನಾವು ಇದ್ದದ್ದು ಸ್ವಲ್ಪವೇ ಸಮಯವಾದರೂ ಹಲವಾರು ಕಾರಣಗಳಿಗೆ ಮಾಸದ ನೆನಪನ್ನು ಉಳಿಸಿದೆ ಈ ಮನೆ.

ಒಂದು ಸಂಜೆ ಆಗಷ್ಟೇ ಮನೆಯಲ್ಲಿ ಭಜನೆಯ ಕಾರ್ಯಕ್ರಮ ಮುಗಿದಿತ್ತು. ಅಷ್ಟರಲ್ಲಿ ‘ಟೆಲಿಗ್ರಾಂ’ ಎಂಬ ಕೂಗು ಕೇಳಿಸಿತು. ಆ ಕಾಲದಲ್ಲಿ ಸಾಕಷ್ಟು ಭಯ- ಗಾಬರಿಗಳನ್ನು ಹುಟ್ಟಿಸುತ್ತಿದ್ದ ಕೂಗದು- ‘ಟೆಲಿಗ್ರಾಂ’.

ನಮ್ಮಂಥಾ ಬಡ-ಕೆಳ ಮಧ್ಯಮವರ್ಗದವರ ಮನೆಗಳಲ್ಲಿ ಆಗಿನ್ನೂ ಫೋನ್ ಇತ್ಯಾದಿ ಸೌಕರ್ಯಗಳು ಇದ್ದಿರಲಿಲ್ಲವಾಗಿ ಸಂವಹನಕ್ಕೆ ಮುಖ್ಯವಾಗಿ ಪೋಸ್ಟ್ ಕಾರ್ಡ್ ಗಳು, ಕೊಂಚ ವೈಯಕ್ತಿಕ ವಿಷಯಗಳಿದ್ದ ಸಂದರ್ಭಗಳಲ್ಲಿ ಇನ್ ಲ್ಯಾಂಡ್ ಲೆಟರ್ ಅಥವಾ ಕವರ್ ಗಳು, ತುರ್ತುಸಂವಹನಕ್ಕೆ ಟೆಲಿಗ್ರಾಂಗಳು ಬಳಕೆಯಾಗುತ್ತಿದ್ದವು. ‘ಏನು ಕೆಟ್ಟ ಸುದ್ದಿ ಬಂದಿದೆಯೋ’ ಎಂದು ಆತಂಕದಿಂದಲೇ ಅಣ್ಣ ಟೆಲಿಗ್ರಾಂ ತೆಗೆದುಕೊಂಡು ಒಳಬಂದರು. ಅಂದುಕೊಂಡಂತೆ ಅದು ಕೆಟ್ಟಸುದ್ದಿಯೇ ಆಗಿತ್ತು: ‘Shamarao expired, cremation over’ ಎಂದು ಕೊಣನೂರಿನಿಂದ ಚಿಕ್ಕಜ್ಜನ ಆಪ್ತರೊಬ್ಬರು ಸಂದೇಶ ಕಳಿಸಿದ್ದರು.

ಅಮ್ಮನಿಗಂತೂ ದುಃಖ ತಡೆಯಲಾಗದೇ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು. ನನ್ನನ್ನು ಅಷ್ಟು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ, ತೊಡೆಯ ಮೇಲೆ ಕೂರಿಸಿಕೊಂಡು ಕಥೆ ಹೇಳುತ್ತಿದ್ದ, ನಾನು ಎಷ್ಟೇ ಹಠ ಹಿಡಿದು ರಚ್ಚೆ ಮಾಡಿದರೂ ಸಹನೆಯಿಂದ ಮುದ್ದಿಸಿ ರಮಿಸಿ ಬುದ್ಧಿ ಹೇಳುತ್ತಿದ್ದ ಚಿಕ್ಕಜ್ಜ ಇನ್ನಿಲ್ಲ… ಮತ್ತೆಂದೂ ಅವರನ್ನು ನೋಡಲು ಸಾಧ್ಯವೇ ಇಲ್ಲ… ನನಗೂ ತುಂಬಾ ಅಳು ಉಕ್ಕಿ ಬಂದುಬಿಟ್ಟಿತು. ನನಗೆ ತುಂಬಾ ಹತ್ತಿರದವರೊಬ್ಬರ ಸಾವಿನ ಮೊದಲ ಆಘಾತವದು.

ಇದಾದ ಕೆಲವು ದಿನಗಳಿಗೇ ಆ ಮನೆಯಲ್ಲಿ ಮತ್ತೊಂದು ಸಮಸ್ಯೆ ಆರಂಭವಾಯಿತು. ಅಣ್ಣ ಅಂಗಡಿಗೆ, ನಾವುಗಳು ಸ್ಕೂಲು – ಕಾಲೇಜ್ ಗಳಿಗೆ ಹೊರಟ ಮೇಲೆ ಅಮ್ಮ ಒಬ್ಬರೇ ಮನೆಯಲ್ಲಿರುತ್ತಿದ್ದರು. ಅಂಥ ಹೊತ್ತಿನಲ್ಲಿ ಅವರಿಗೆ ವಿಚಿತ್ರ ಅನುಭವಗಳಾಗತೊಡಗಿದವು. ಅಡಿಗೆಮನೆಯಲ್ಲಿ ಕೆಲಸ ಮಾಡುತ್ತಿದ್ದರೆ ಯಾರೋ ಹಿಂದೆ ಬಂದು ನಿಂತಂತೆ ಅವರಿಗೆ ಭಾಸವಾಗುತ್ತಿತ್ತು. ಗಾಬರಿಯಿಂದ ತಿರುಗಿ ನೋಡಿದರೆ ಯಾರೂ ಇಲ್ಲ… ಇದ್ದಕ್ಕಿದ್ದಹಾಗೆ ನೆರಳುಗಳು ಸರಿದುಹೋದಂತೆ,ಮೆಲ್ಲನೆ ಕುಳಿರ್ಗಾಳಿ ಬೀಸಿದಂತೆ ಭಾಸವಾಗುತ್ತಿತ್ತು. ಯಾಕೋ ಈ ಮನೆ ವಾಸಕ್ಕೆ ಅಷ್ಟು ಯೋಗ್ಯವಾಗಿಲ್ಲ ಎನ್ನುವುದು ನಿಶ್ಚಿತವಾದರೂ ‘ಈ ಮನೆಗೆ ಬಂದು ಹೆಚ್ಚು ಸಮಯ ಕೂಡಾ ಆಗಿಲ್ಲ.. ಈಗಲೇ ಮನೆ ಬದಲಿಸುವುದಾದರೂ ಹೇಗೆ’ ಎಂಬ ಚಿಂತೆ ಕಾಡತೊಡಗಿತು. ಅದೇ ಸಮಯಕ್ಕೆ ಸರಿಯಾಗಿ ಒಂದು ದಿನ ಅವಧೂತ ಶಿಶುಸ್ವಾಮಿಗಳು ನಮ್ಮ ಮನೆಗೆ ಬಂದಿಳಿದರು!

ಅವಧೂತ ಶಿಶುಸ್ವಾಮಿಗಳು ಬಹಳ ಹಿಂದೆಯೇ ಅಣ್ಣನಿಗೆ ಪರಿಚಯವಾಗಿ, ತುಸು ಸಮಯದಲ್ಲೇ ಬಹು ಆತ್ಮೀಯರಾಗಿ ಮಾರ್ಗದರ್ಶನ ನೀಡುತ್ತಾ ಬಂದವರು. ಹಿಂದೆ ಬಸವಾಪಟ್ಟಣ-ಕೊಣನೂರುಗಳಿಗೂ ಬಂದಿದ್ದರಂತೆ. ಆಗ ನಾನು ಬಹಳ ಚಿಕ್ಕವನಾದ್ದರಿಂದ ಅದು ನನ್ನ ನೆನಪಿನಲ್ಲಿ ಉಳಿದಿಲ್ಲ. ನಾನು ಅವರನ್ನು ಕಂಡಿದ್ದು ಬೆಂಗಳೂರಿನ ಈ ಮನೆಯಲ್ಲಿಯೇ. ನಾವೆಲ್ಲರೂ ಅವರನ್ನು ಪ್ರೀತಿಯಿಂದ ತಾತ ಎಂದೇ ಕರೆಯುತ್ತಿದ್ದೆವು. ನಮ್ಮ ಕುಟುಂಬವನ್ನು ಕಂಡರೆ ಅವರಿಗೂ ಅಷ್ಟೇ ಪ್ರೀತಿ-ಅಕ್ಕರೆ. ನಿಯಮಿತ ಜಪ ತಪ ಅನುಷ್ಠಾನಗಳ ಜತೆಗೇ ಕುಟುಂಬದ ಎಲ್ಲರೊಟ್ಟಿಗೆ ಕಲೆತು ಸಂಭ್ರಮಿಸುತ್ತಿದ್ದ ಅವರ ಜೀವನೋತ್ಸಾಹ – ಜೀವನಪ್ರೀತಿ ಬೆರಗು ಹುಟ್ಟಿಸುತ್ತಿತ್ತು.

ತಾಸುಗಟ್ಟಲೆ ಕುಳಿತು ಅದ್ಭುತ ಕಸೂತಿಯ ಬೀಸಣಿಗೆಗಳನ್ನು ಸಿದ್ಧ ಪಡಿಸುತ್ತಿದ್ದರು. ಅಮ್ಮನಿಗೆ ಅಡಿಗೆ ಕೆಲಸದಲ್ಲಿ ನೆರವಾಗುತ್ತಿದ್ದುದಲ್ಲದೇ ತಾವೇ ಸ್ವತಃ ಕೆಲ ವಿಶಿಷ್ಟ ಅಡಿಗೆಗಳನ್ನು ಮಾಡಿ ನಮಗೆ ಬಡಿಸುತ್ತಿದ್ದರು. ನಮ್ಮ ಕಣ್ಣುಗಳನ್ನೇ ದಿಟ್ಟಿಸಿ ನೋಡಿ ನಮ್ಮ ಮನಸ್ಸಿನಾಳದಲ್ಲಿ ಹುದುಗಿದ್ದನ್ನೆಲ್ಲಾ ಹೊರತೆಗೆದು ನಮ್ಮನ್ನು ಚಕಿತಗೊಳಿಸುತ್ತಿದ್ದರು. ಇಂಥ ನಮ್ಮ ಪ್ರೀತಿಯ ತಾತ ಆ ಮನೆಯೊಳಗೆ ಅಂದು ಕಾಲಿಟ್ಟದ್ದೇ ತಡ, ಬದ್ಧಭ್ರುಕುಟಿಯಾದರು.

ಸೂಕ್ಷ್ಮವಾಗಿ ಮನೆಯನ್ನೆಲ್ಲಾ ಒಮ್ಮೆ ಅವಲೋಕಿಸಿದರು. ನಂತರ ಅಣ್ಣನನ್ನು ಬಳಿ ಕರೆದು, ‘ಈ ಮನೆ ಅಷ್ಟು ಸರಿ ಇಲ್ಲ.. ಮಕ್ಕಳನ್ನಿಟ್ಟುಕೊಂಡು ತುಂಬಾ ದಿನ ಈ ಮನೆಯಲ್ಲಿರುವುದು ಬೇಡ.. ಈ ಮನೆ ಕಟ್ಟುವಾಗಲೇ ಏನೇನೋ ದುರಂತಗಳು ನಡೆದಿದ್ದು ಅದರ ಕೆಟ್ಟ ನೆರಳು ಈ ಮನೆಯನ್ನು ಕಾಡುತ್ತಿದೆ… ಆದಷ್ಟು ಬೇಗ ಮನೆ ಬದಲಾಯಿಸಿ’ ಎಂದರು. ನಂತರ ಭಯ ಆತಂಕಗಳಿಂದ ಕಂಗಾಲಾಗಿ ಹೋಗಿದ್ದ ನಮ್ಮತ್ತ ತಿರುಗಿ, ‘ಏನೂ ಹೆದರಬೇಡಿ… ನಿಮಗೇನೂ ಆಗುವುದಿಲ್ಲ.. ನಾವಿದ್ದೇವೆ ನಿಮ್ಮ ಜೊತೆ’ ಎಂದು ಧೈರ್ಯ ತುಂಬಿ ಸಮಾಧಾನಗೊಳಿಸಿದರು ತಾತ.

ಆ ಮನೆಯನ್ನು ಬಿಟ್ಟು ನಾವು ಬಂದದ್ದು ಜಯನಗರ ಟಿ ಬ್ಲಾಕ್ 18ನೇ ಮುಖ್ಯ ರಸ್ತೆಯಲ್ಲಿದ್ದ ಒಂದು ಮನೆಯ ಔಟ್ ಹೌಸ್ ಗೆ. ನಮ್ಮ ಮನೆಯ ಮಾಲೀಕರ ಮೊಮ್ಮಗ ಛಾಯಾಪತಿ ಹಾಗೂ ಛಾಯಾಪತಿಯ ಸೋದರಮಾವ ಶಂಕರರಾಮು ಅವರನ್ನು ನಾನಿಲ್ಲಿ ನೆನೆಯಲೇಬೇಕು. ಛಾಯಾಪತಿ ನನ್ನ ಓರಗೆಯವನು. ತುಂಬಾ ವಿಶಿಷ್ಟ ಸ್ವಭಾವದ ಹುಡುಗ. ಕೊಣನೂರಿನ ನಾಗೇಶನಾದ ಮೇಲೆ ನನಗೆ ದೊರೆತ ಅಂತರಂಗದ ಆಪ್ತ ಮಿತ್ರನೆಂದರೆ ಛಾಯಾಪತಿ. ನೂರೆಂಟು ವಿಷಯಗಳ ಬಗ್ಗೆ ಗಂಟೆಗಟ್ಟಲೆ ಛಾಯಾಪತಿಯೊಂದಿಗೆ ಹರಟುತ್ತಿದ್ದೆ. ಅವನ ಮುಂದೆ ಮನಸ್ಸು ಬಿಚ್ಚಿ ಮಾತಾಡಲು ಚೂರೂ ಸಂಕೋಚವಾಗುತ್ತಿರಲಿಲ್ಲ. ಒಂದು ಸ್ವಾರಸ್ಯದ ಪ್ರಸಂಗ ನೆನಪಿಗೆ ಬರುತ್ತಿದೆ –

ದೀಪಾವಳಿ ಹಬ್ಬದ ಸಮಯ. ನನಗೆ ಪಟಾಕಿ ಹಚ್ಚುವ ಹುಚ್ಚು ವಿಪರೀತ. ಮನೆಯ ಆಗಿನ ಪರಿಸ್ಥಿತಿಯಲ್ಲಿ ಪಟಾಕಿಗೆಂದು ಹಣ ಖರ್ಚು ಮಾಡುವ ಅನುಕೂಲವೂ ಇರಲಿಲ್ಲ, ಜತೆಗೆ ಅಣ್ಣನಿಗೆ ಹಾಗೆ ಹಣವನ್ನು ಸುಡುವುದು ಇಷ್ಟವೂ ಇರಲಿಲ್ಲ. ಹಾಗೆಂದು ನಮಗೆ ತೀರಾ ನಿರಾಸೆಯನ್ನೂ ಮಾಡದೆ ತಮ್ಮ ಮಿತಿಯಲ್ಲೇ ಸಾಧ್ಯವಾದಷ್ಟು ಪಟಾಕಿ ತಂದುಕೊಡುತ್ತಿದ್ದರು.ಆದರೆ ಅಷ್ಟರಲ್ಲಿ ನನ್ನ ಪಟಾಕಿ ಸುಡುವ ಆಸೆ ತಣಿಯುತ್ತಿರಲಿಲ್ಲ.

ಮೊದಲ ದಿನದ ಹಬ್ಬ ಕಳೆದ ಮಾರನೇ ದಿನ ಬೆಳಿಗ್ಗೆ ಬೇಗ ಎದ್ದು ಛಾಯಾಪತಿಯನ್ನೂ ಕರೆದುಕೊಂಡು ಹೊರಡುತ್ತಿದ್ದೆ. ಇಬ್ಬರೂ ಅಕ್ಕಪಕ್ಕದ ಬೀದಿಗಳಲ್ಲೆಲ್ಲಾ ಓಡಾಡಿ ಉರಿಯದೆ ಥುಸ್ ಎಂದಿದ್ದ ಪಟಾಕಿಗಳನ್ನೆಲ್ಲಾ ಚೀಲದಲ್ಲಿ ತುಂಬಿಕೊಂಡು ತರುತ್ತಿದ್ದೆವು. ಮನೆಯ ಮುಂದೆ ನಾಲ್ಕಾರು ಇಟ್ಟಿಗೆಗಳನ್ನು ಪೇರಿಸಿ ಒಂದು ಗೂಡಿನಂತೆ ಮಾಡಿ ಸಂಗ್ರಹಿಸಿಕೊಂಡು ತಂದ ಥುಸ್ ಪಟಾಕಿಗಳನ್ನೆಲ್ಲಾ ಅದರಲ್ಲಿ ಸುರುವಿ ಬೆಂಕಿ ಹಚ್ಚಿಬಿಡುತ್ತಿದ್ದೆವು.

ಒಂದೆರಡು ನಿಮಿಷಗಳಲ್ಲಿ ಆ ಪಟಾಕಿಗಳು ತರಹೇವಾರಿ ಸದ್ದುಗಳನ್ನು ಮಾಡಿಕೊಂಡು ಚಿತ್ರವಿಚಿತ್ರ ರೀತಿಯಲ್ಲಿ ಉರಿಯುವ ದೃಶ್ಯ ವೈಭವವನ್ನು ನೋಡಿ ‘ಪಟಾಕಿ ಹೋಮ’ ಎಂದು ಸಂಭ್ರಮಿಸುತ್ತಿದ್ದೆವು. ಒಮ್ಮೆ ಅಚಾನಕ್ಕಾಗಿ ಛಾಯಣ್ಣನ ತಾತನವರು ನಮ್ಮ ಈ ಘನಕಾರ್ಯವನ್ನು ನೋಡಿ ಸಿಟ್ಟಿಗೆದ್ದು, ‘ಪೆದ್ದು ಮುಂಡೇವಾ, ಮನೆಯ ಮುಂದೆ ಹೀಗೆ ಬೆಂಕಿ ಹಚ್ಚುವ ಸಂದರ್ಭವೇ ಬೇರೆ.. ಹೀಗೆ ಮಾಡಿದರೆ ಅದು ತಪ್ಪು ತಿಳುವಳಿಕೆಗೆ ದಾರಿಯಾಗುತ್ತದೆ’ ಎಂದು ಬುದ್ಧಿ ಹೇಳಿ ನೀರು ತಂದು ನಮ್ಮ ಹೋಮಾಗ್ನಿಯ ಮೇಲೆ ಸುರಿದು ಆರಿಸಿಬಿಟ್ಟರು!

ಮುಂದೆ ಛಾಯಣ್ಣ ಫಿಸಿಕ್ಸ್ ಎಂಎಸ್ಸಿ ಮಾಡಿ, ಡಾಕ್ಟರೇಟ್ ಪಡೆದು ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ. ಅಷ್ಟೇ ಅಲ್ಲದೆ ತನ್ನ ಬಡಾವಣೆಯ ಅನೇಕಾನೇಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಗಣಿತ – ವಿಜ್ಞಾನದ ಪಾಠಗಳನ್ನು ಹೇಳಿಕೊಟ್ಟು ಅಪಾರ ಜನಪ್ರೀತಿಯನ್ನು ಗಳಿಸಿಕೊಂಡ. ಮೊದಲಿನಿಂದಲೂ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದ ಛಾಯಣ್ಣ ತದನಂತರದಲ್ಲಿ ಸಂಪೂರ್ಣವಾಗಿ ಆ ಕಡೆಗೇ ವಾಲಿ ಈಗ ಹಲವಾರು ವರ್ಷಗಳಿಂದ ರವಿಶಂಕರ್ ಗುರೂಜಿಯವರೊಟ್ಟಿಗೆ ‘ಜೀವನಕಲೆ’ಯನ್ನು ಜನರಿಗೆ ಬೋಧಿಸುವ ಕಾಯಕದಲ್ಲಿ ತನ್ಮಯತೆಯಿಂದ ತೊಡಗಿಕೊಂಡಿದ್ದಾರೆಂದು ಕೇಳಿದ್ದೇನೆ. ಈ ಒಂದು ಮಾರ್ಗ ಬದಲಾವಣೆಯಾದ ಬಳಿಕ ನನಗೆ ಛಾಯಣ್ಣನನ್ನು ಭೇಟಿಮಾಡುವ ಸಂದರ್ಭ ಒದಗಿ ಬಂದಿಲ್ಲ.

ಛಾಯಣ್ಣನ ಸೋದರಮಾವ ಶಂಕರ್ ರಾಮು ನಾಟಕ – ಸಾಹಿತ್ಯಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದವರು. ನಾವು ಆ ಮನೆಯಲ್ಲಿ ಇದ್ದಷ್ಟು ಕಾಲವೂ ಅವರ ಬಳಿ ಇದ್ದ ಒಳ್ಳೆಯ ಪುಸ್ತಕಗಳನ್ನು ನನಗೆ ಓದಲು ಕೊಟ್ಟು , ನಂತರ ಅವುಗಳ ಬಗ್ಗೆ ನನಗೆ ತಿಳಿಸಿ ಹೇಳಿ ನನ್ನ ಪುಸ್ತಕ ಪ್ರೀತಿ ಬೆಳೆಯಲು ನೆರವಾದವರು. ಮುಂದೆ ಅವರೊಟ್ಟಿಗೆ ಜಯನಗರದ ನ್ಯಾಷನಲ್ ಕಾಲೇಜ್ ನಲ್ಲಿ ನಾಟಕಗಳಲ್ಲಿ ಅಭಿನಯಿಸುವ ಅವಕಾಶವೂ ಒದಗಿ ಬಂದಿತ್ತು.

ಮಾಡೆಲ್ ಹೈಸ್ಕೂಲ್ ನಲ್ಲಿದ್ದಾಗ ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರೂ ಒಂದೇ ಒಂದು ಬಹುಮಾನವೂ ಬಂದಿರಲಿಲ್ಲ ಎಂಬ ವಿಚಾರ ಮನಸ್ಸಿನಲ್ಲಿ ಕೊರೆಯುತ್ತಲೇ ಇತ್ತು. ಒಂದೆರಡು ದುರ್ಬಲ ಕ್ಷಣಗಳಲ್ಲಿ ಇನ್ನು ಮುಂದೆ ಯಾವ ಸ್ಪರ್ಧೆಯಲ್ಲೂ ಭಾಗವಹಿಸುವುದಿಲ್ಲ ಎಂದು ತೀರ್ಮಾನ ಮಾಡಿಕೊಂಡಿದ್ದರೂ ಒಳಗೇ ಒಂದು ಸಣ್ಣ ಹಠ-ಛಲ ಜಾಗೃತವಾಗುತ್ತಿತ್ತು. ಚರ್ಚಾಸ್ಪರ್ಧೆಯಲ್ಲಿ ಒಂದಾದರೂ ಬಹುಮಾನ ಪಡೆಯಲೇ ಬೇಕು ಎಂದು ಮನಸ್ಸು ತುಡಿಯುತ್ತಿತ್ತು. ಹಾಗಾಗಿ ಬೆಂಗಳೂರು ಹೈಸ್ಕೂಲ್ ನಲ್ಲಿ ಮತ್ತೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಆರಂಭಿಸಿದೆ.

ಚರ್ಚಾಸ್ಪರ್ಧೆಯ ವಿಷಯ ಮೊದಲೇ ಗೊತ್ತಿರುತ್ತಾದ್ದರಿಂದ ಅಣ್ಣ ಏನು ಮಾತಾಡಬೇಕೆಂಬುದನ್ನು ಸೊಗಸಾಗಿ ಬರೆದುಕೊಡುತ್ತಿದ್ದರು. ಸಾಕಷ್ಟು ಅಭ್ಯಾಸ ಹಾಗೂ ಮನೆಯವರ ಪ್ರೋತ್ಸಾಹದಿಂದ ಹೆಚ್ಚಿನ ಧೈರ್ಯ – ಆತ್ಮವಿಶ್ವಾಸಗಳು ಮೂಡಿದ್ದಲ್ಲದೆ ಸಭಾಕಂಪನವೂ ಒಂದು ಹಂತಕ್ಕೆ ದೂರವಾಗಿತ್ತು. ಅಣ್ಣ ಬರೆದುಕೊಟ್ಟ ಭಾಷಣವನ್ನು ಚೆನ್ನಾಗಿ ಮನನ ಮಾಡಿಕೊಂಡು, ನಂತರ ಕಂಠಸ್ಥ ಮಾಡಿಕೊಂಡು ಆದಷ್ಟೂ ಪರಿಣಾಮಕಾರಿಯಾಗಿ ಒಪ್ಪಿಸುವ ರೀತಿಯನ್ನು ಅಭ್ಯಾಸ ಮಾಡಿಕೊಳ್ಳುತ್ತಿದ್ದೆ. ನನ್ನ ಪ್ರಸ್ತುತಿಗೆ ಹೊಸತನವನ್ನು ತುಂಬಲು ಒಂದು ತಂತ್ರವನ್ನು ರೂಪಿಸಿಕೊಂಡೆ.

ನೇರವಾಗಿ ‘ಪೂಜ್ಯ ಅಧ್ಯಾಪಕರೇ, ಪ್ರೀತಿಯ ಸಹಪಾಠಿಗಳೇ, ಇಂದು ನಾನು ಈ ವಿಷಯದ ಪರವಾಗಿ ಮಾತಾಡುತ್ತೇನೆ’ ಎಂದು ಎಲ್ಲರ ಹಾಗೆ ರೂಢಿಗತ ರೀತಿಯಲ್ಲಿ ಭಾಷಣ ಶುರು ಮಾಡುವುದನ್ನು ಬಿಟ್ಟು ಯಾವುದಾದರೊಂದು ಸೂಕ್ತಿಯೊಂದಿಗೋ ಪದ್ಯದ ಸಾಲಿನೊಂದಿಗೊ ಶುರು ಮಾಡಿ ನಂತರ ಎಲ್ಲರನ್ನೂ ಸಂಬೋಧಿಸುತ್ತಿದ್ದೆ. ಉದಾಹರಣೆಗೆ ಹೇಳುವುದಾದರೆ, ‘ಅಂಗೈಹುಣ್ಣಿಗೆ ಕನ್ನಡಿ ಬೇಕೆ? ನಮ್ಮ ಕಣ್ಣಿಗೇ ಎಲ್ಲವೂ ನಿಚ್ಚಳವಾಗಿ ಕಾಣುತ್ತಿರುವಾಗ ಬೇರೆ ಆಧಾರಗಳನ್ನು ತೋರಿಸುವ ಅಗತ್ಯವಿದೆಯೇ? ಇಲ್ಲ! ಆದ್ದರಿಂದ ಸನ್ಮಾನ್ಯ ಅಧ್ಯಾಪಕರೇ, ಆತ್ಮೀಯ ಒಡನಾಡಿಗಳೇ..’ ಹೀಗೆ ಸಾಗುತ್ತಿತ್ತು ನನ್ನ ವಾದಸರಣಿ. ಈ ನನ್ನ ಹೊಸ ಶೈಲಿಯ ವಾದ ಮಂಡನೆ ಸಾಕಷ್ಟು ಜನಪ್ರಿಯವಾದದ್ದಲ್ಲದೇ ನನಗೆ ಅನೇಕ ಬಹುಮಾನಗಳನ್ನೂ ತಂದುಕೊಟ್ಟು ಬಹುಮಾನ ಬಾರದ ಕೊರತೆಯಿಂದ ಮಿಡುಕುತ್ತಿದ್ದ ಮನಸ್ಸಿಗೆ ಎಷ್ಟೋ ಸಮಾಧಾನವಾಯಿತು.

ಒಮ್ಮೆ ವಿಜಯ ಹೈಸ್ಕೂಲ್ ನಲ್ಲಿ ನಕ್ಷತ್ರಲೋಕವನ್ನು ವಿಷಯವಾಗಿಟ್ಟುಕೊಂಡು ಒಂದು ಭಾಷಣಸ್ಪರ್ಧೆ ಏರ್ಪಾಡಾಗಿತ್ತು. ಹೆಚ್.ವಿ.ಸುಬ್ಬರಾವ್ ಎಂಬ ನಮ್ಮ ಫಿಸಿಕ್ಸ್ ಮೇಷ್ಟ್ರು ನಕ್ಷತ್ರಲೋಕವನ್ನು ಬಲು ಸ್ವಾರಸ್ಯಕರವಾಗಿ ಪರಿಚಯ ಮಾಡಿಕೊಡುವಂತಹ ಸೊಗಸಾದ ಲೇಖನ ಬರೆದುಕೊಟ್ಟಿದ್ದರು.

ನಾನು ನನ್ನ ಶೈಲಿಯಲ್ಲಿ, ‘ಸುಂದರವಾದ ಒಂದು ಕೋಳಿಗಳ ಗೂಡು.. ಅದರೊಳಗೆ ಹೊಳೆಯುತ್ತಿರುವ ಪುಟ್ಟ ಪುಟ್ಟ ದೀಪಗಳು’ ಎಂದು ಪ್ರಾರಂಭಿಸಿ ಕೊಂಚ ನಾಟಕೀಯವಾಗಿಯೇ ಭಾಷಣ ಮಾಡಿ ಮುಗಿಸಿದ್ದೆ! ಪ್ರಚಂಡ ಕರತಾಡನದ ಮೂಲಕ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರು ತಮ್ಮ ಮೆಚ್ಚುಗೆಯನ್ನು ಸೂಚಿಸಿದಾಗ ನನಗೆ ಖುಷಿಯೋ ಖುಷಿ! ಎರಡನೆಯ ಬಹುಮಾನವನ್ನೂ ಗಳಿಸಿಕೊಂಡು ಹೋದ ನನಗೆ ನಮ್ಮ ಶಾಲೆಯಲ್ಲೂ ಪ್ರೀತಿಯ ಸ್ವಾಗತ! ಕೋಳಿಗೂಡಿನ ಆ ಭಾಷಣವನ್ನು ನನ್ನ ಆಗಿನ ಸಹಪಾಠಿಗಳು ಕೆಲವರು ಈಗಲೂ ನೆನೆಸಿಕೊಳ್ಳುತ್ತಾರೆ!

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: