ಕಾಡಿನ ಮಧ್ಯೆ ಹಸಿವಾದಾಗ..

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ..

‘ಇನ್ನು ಆಗಲ್ಲ. ನನಗೆ ತುಂಬಾ ಹಸಿವಾಗುತ್ತಿದೆ. ಈಗ ನನಗೆ ತಿನ್ನಲು ಏನಾದರೂ ಬೇಕೇಬೇಕುʼ. 

ಹಸಿವಾಗಿದೆ ಅಂತ ನಾನು ಎರಡು ಮೂರು ಬಾರಿ ಹೇಳಿ ನಿಲ್ಲಲು ಪ್ರಯತ್ನಿಸಿದ್ದೆ. ಆದರೆ ನನ್ನನ್ನ ಕಾಡಿನ ಮಧ್ಯ ಕರೆದೊಯ್ಯುತ್ತಿದ್ದ ಕಾರ್ಪೆಡ್‌ ಸಂಸ್ಥೆಯ ಭರತ್‌ ಭೂಷಣ್‌ ‘ಇನ್ನು ಕೆಲವೇ ಫರ್ಲಾಂಗ್‌ ದೂರ. ಅಲ್ಲೊಂದು ಹಳ್ಳಿ ಸಿಗುತ್ತೆ. ಅಲ್ಲಿಗೇ ನಾವು ಹೋಗುತ್ತಿರುವುದು. ನಮ್ಮ ಭೇಟಿ ಮುಗಿಸಿ ವಾಪಸ್‌ ಹೋಗೋಣʼ ಅಂತ ಪುಸಲಾಯಿಸುತ್ತ ನಡೆಯುತ್ತಿದ್ದರು.

ನಾವು ಹೆಜ್ಜೆ ಹಾಕುತ್ತಿದ್ದುದು ಹಿಂದಿನ ಅವಿಭಜಿತ ಆಂಧ್ರಪ್ರದೇಶದ, ಇಂದಿನ ತೆಲಂಗಣಾದ ಮೇಡಕ್‌ ಹತ್ತಿರದ ಕಾಡಿನಲ್ಲಿ. ಸಿಕಂದರಾಬಾದ್‌ನಿಂದ ನಾವು ಹೊರಟಿದ್ದು. ಮೊದಲು ಕೌಡಿಪಲ್ಲಿಗೆ ಭೇಟಿಕೊಟ್ಟು, ಮೇಡಕ್‌ಗೆ ಹೋಗಿ ಕಾರ್ಪೆಡ್‌ ಅವರ ಸಂಸ್ಥೆಯ ಕಛೇರಿ ನೋಡಿಕೊಂಡು ಅವರ ಸಿಬ್ಬಂದಿಗಳೊಡನೆ ಮಾತನಾಡಿ ಅಲ್ಲಿಂದ ಮುಂದಕ್ಕೆ ಒಂದೆರೆಡು ಹಳ್ಳಿಗಳಲ್ಲಿನ ಅನೌಪಚಾರಿಕ ಶಿಕ್ಷಣ ಕೇಂದ್ರಗಳಿಗೆ ಭೇಟಿ ಕೊಡುವುದು ಉದ್ದೇಶ. ಕಾರ್ಪೆಡ್‌ ಸಂಸ್ಥೆ ಅಲ್ಲಿನ ಸಮುದಾಯಗಳೊಡನೆ ನಡೆಸುತ್ತಿದ್ದ ಮಕ್ಕಳ ಅನೌಪಚಾರಿಕ ಶೈಕ್ಷಣಿಕ ಕಾರ್ಯಕ್ರಮಗಳು, ಪರಿಸರ ರಕ್ಷಣೆ, ಮಹಿಳೆಯರ ಸ್ವಸಹಾಯ ಸಂಘಗಳು ಮತ್ತು ಸಮುದಾಯ ಸಂಘಟನೆಯ ಕೆಲಸಗಳನ್ನು ಕ್ರೈ- ‘ಚೈಲ್ಡ್‌ ರಿಲೀಫ್‌ ಅಂಡ್‌ ಯೂ’ ಸಂಸ್ಥೆಯ ಪರವಾಗಿ ಕಣ್ಣಾರೆ ಕಂಡು ಉಸ್ತುವಾರಿ ಮಾಡುವ ಕೆಲಸ ನನ್ನದಾಗಿತ್ತು.

ಆಂಧ್ರಪ್ರದೇಶದ ಬಹುತೇಕ ಭಾಗಗಳಿಗೆ ಅದಾಗಲೇ ಹಲವಾರು ಬಾರಿ ಭೇಟಿ ಕೊಟ್ಟಿದ್ದೆ. ಈ ಬಾರಿ ಹೈದರಾಬಾದ್‌/ಸಿಕಂದರಾಬಾದ್‌ಗೆ ಬಂದು ಮೂರು ದಿನಗಳಾಗಿತ್ತು. ಎರಡು ದಿನ ನಲ್ಗೊಂಡಾ ಜಿಲ್ಲೆಯ ಊರುಗಳಲ್ಲಿ ಪೀಸ್‌ ಸಂಸ್ಥೆಯ ನಿಮ್ಮಯ್ಯನವರೊಡನೆ ಹಳ್ಳಿಗಳಲ್ಲಿ ಸುತ್ತಾಡಿ, ಒಂದು ದಿನ ರಂಗಾರೆಡ್ಡಿ ಜಿಲ್ಲೆಯಲ್ಲಿ ಎಂ.ವಿ.ಫೌಂಡೇಶನ್‌ ಜೊತೆಗೆ ಮಾತುಕತೆ ಮುಗಿಸಿದ್ದೆ. ನಾಲ್ಕನೇ ದಿನ ಮೇಡಕ್‌ ಭೇಟಿ ಮುಗಿಸಿ, ಸಂಜೆ ಬೆಂಗಳೂರಿಗೆ ಹೊರಡಬೇಕಿತ್ತು. ಕಾರ್ಪೆಡ್‌ ಅವರ ಕ್ಷೇತ್ರಗಳಿಗೆ ನನ್ನದು ಮೊದಲ ಭೇಟಿಯಾಗಿತ್ತು (೧೯೯೫).

ನಗರಗಳಿಂದ ದೂರದೂರುಗಳು, ಕಾಡಿನ ಮಧ್ಯದಲ್ಲಿರುವ ಅಥವಾ ಬೆಟ್ಟಗಳ ಮೇಲಿನ ಹಾಗೂ ಮುಖ್ಯ ರಸ್ತೆಯಿಂದ ಒಳಗಿರುವ ಹಳ್ಳಿಗಳಿಗೆ ಕ್ಷೇತ್ರ ಭೇಟಿಗಾಗಿ ಮೇಲಿಂದ ಮೇಲೆ ಹೋಗುತ್ತಿದ್ದ ಅನುಭವದ ಆಧಾರದಿಂದ ನನ್ನ  ಪ್ರಯಾಣಗಳಲ್ಲೆಲ್ಲ ನಾನು ನನ್ನದೇ ಆಹಾರದ ಏರ್ಪಾಟು ಮಾಡಿಕೊಂಡಿರುತ್ತಿದ್ದೆ. ಮಹಾರಾಜಾ ಕಾಲೇಜಿನ ನನ್ನ ಪತ್ರಿಕೋದ್ಯಮ ಶಿಕ್ಷಕರಾಗಿದ್ದ ಆರ್‌.ಎನ್‌.ಪದ್ಮನಾಭ ಅವರೊಡನೆ ಪ್ರವಾಸದಲ್ಲಿದ್ದಾಗ ಒಮ್ಮೆ ಅವರು ಹೇಳಿದ್ದ ಗಾದೆ ಮಾತು ನನಗಂತೂ ವೇದವಾಕ್ಯವಾಗಿತ್ತು, ‘ದಂಡು ಬರಲಿ ದಾಳಿ ಬರಲಿ ಉಂಡಿರು ಮಗನೆ!ʼ ಕ್ಷೇತ್ರ ಭೇಟಿಗೆಂದು ಸತತವಾದ ಓಡಾಟದ ಆ ದಿನಗಳಲ್ಲಿ ನನ್ನೊಡನೆ ಪ್ರಯಾಣ ಮಾಡಿದವರಿಗೆಲ್ಲಾ ಆ ವಿಚಾರ ಚೆನ್ನಾಗಿ ಗೊತ್ತಿತ್ತು. ವಾಸು ಜೊತೆ ಹೊರಟರೆ ಯಾವುದೇ ಸಮಯದಲ್ಲೂ ಹೊಟ್ಟೆಗೆ ತೊಂದರೆಯಿಲ್ಲ ಎಂದು. ಉಂಡು ಹೊರಡುವುದಷ್ಟೇ ಅಲ್ಲ, ಉಣ್ಣುವುದನ್ನು ಕೊಂಡೂ ಹೋಗುತ್ತಿದ್ದೆ.  ಆದರೆ ಮೇಡಕ್‌ನತ್ತ ಹೋಗುತ್ತಿದ್ದಾಗ ನಾನೊಂದು ಎಡವಟ್ಟು ಮಾಡಿಕೊಂಡುಬಿಟ್ಟೆ. 

ಸಿಕಂದರಾಬಾದ್‌ ಬಿಟ್ಟು ಮೇಡಕ್‌ ಕಡೆಗೆ ಓಡುತ್ತಿತ್ತು ನಮ್ಮ  ಟ್ಯಾಕ್ಸಿ. ಭರತ್‌ ಭೂಷಣ್‌ ಇತ್ತೀಚೆಗೆ ಅವರ ಕಾರ್ಯಕ್ಷೇತ್ರದಲ್ಲಿನ ಕೆಲಸಗಳ ಬಗ್ಗೆ ಹೇಳುತ್ತಾ, ಕಳೆದ ತಿಂಗಳು ಕೆಲವು ʼಅನ್ನಲುʼ ಬಂದಿದ್ದರು, ನಮ್ಮ ಕೆಲಸಗಳನ್ನು ಮೆಚ್ಚಿಕೊಂಡರು ಎಂದರು. ನಾನೂ ಅದೇ ಸಾಮಾನ್ಯ ದನಿಯಲ್ಲಿ ಯಾವ ದಳದವರು ಎಂದು ಕೇಳುತ್ತಾ ಮಾತು ಮುಂದುವರೆಸಿದ್ದೆ. ತಮ್ಮಲ್ಲಿದ್ದ ಕೆಲವು ಪತ್ರಿಕೆಗಳು, ನಿಯತಕಾಲಿಕೆಗಳನ್ನು ಹಾಗೂ ಗ್ರಂಥಾಲಯದ ಪುಸ್ತಕಗಳನ್ನು ತಮಗೆ ಓದಲು ಸಾಮಗ್ರಿ ಬೇಕು ಎಂದು ಹೇಳಿ ಒಯ್ದರು ಎಂದು ಭರತ್‌ ಹೇಳಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ಹಳ್ಳಕೊಳ್ಳಗಳೇ ಇದ್ದ ರಸ್ತೆಯಲ್ಲಿ ಕಾರು ಎದ್ದುಬಿದ್ದು ಸಾಗುತ್ತಾ ನರ್ಸಾಪುರ ತಲುಪಿದಾಗ ಮೈಕೈ ಆಡಿಸಲೆಂದೇ ಇಳಿದು ಕಾಫಿ ಕುಡಿದೆವು. ಅಲ್ಲಿಂದ ಮುಂದಕ್ಕೆ ಕೌಡಿಪಲ್ಲಿ ಮತ್ತು ಕುಲ್ಚಾವರಂ ಕಡೆಗೆ ಕಾರು ಓಡತೊಡಗಿತು. 

ನಮ್ಮ ಮಾತಿನ ಮಧ್ಯ ಕೌಡಿಪಲ್ಲಿ ಮಂಡಲದ ಯಾವ ಭಾಗಗಳಲ್ಲಿ ಕಾರ್ಪೆಡ್‌ ಕೆಲಸ ಮಾಡುತ್ತಿದೆ ಎಂದು ಕೇಳಿದೆ. ಇಲ್ಲೇ ನರ್ಸಾಪುರದ ಅಂಚಿನ ಕಾಡಿನಲ್ಲಿ ಕೌಡಿಪಲ್ಲಿಗೆ ಮೊದಲು ಸಿಗುವ ಕಡೆ ಕೆಲಸಗಳಾಗುತ್ತಿವೆ ಎಂದರು ಭರತ್‌. ನಾವು ಯಾಕೆ ಕೌಡಿಪಲ್ಲಿಗೆ ಹೋಗಿ ಅಲ್ಲಿಂದ ಮುಂದಿನ ಹಳ್ಳಿಗಳಿಗೆ ಹೋಗಬೇಕು, ಇಲ್ಲೇ ದಾರಿಯಲ್ಲೇ ನಿಮ್ಮ ಕೇಂದ್ರಗಳಿವೆ ಎನ್ನುವುದಾದರೆ ಇಲ್ಲಿಯೇ ಹೋಗೋಣ. ಆಗದೆ, ಎಂದು ಸ್ವಲ್ಪ ಅನುಮಾನದಿಂದಲೇ ಕೇಳಿಬಿಟ್ಟೆ. 

ಹಿಂದೆ ಮುಂದೆ ನೋಡದೆ ಭರತ್‌ ಕೂಡಾ ‘ಹಾಗೇ ಆಗಲಿʼ, ಎಂದವರೇ ಕಾರಿನ ಡ್ರೈವರ್‌ಗೆ ಕಾರನ್ನು ಏಳೆಂಟು ಕಿಲೋ ಮೀಟರ್‌ ಆದ ಮೇಲೆ ನರಸಾಪುರದ ಅಂಚಿನ ಕಾಡಿನ ಬಳಿ ಕೌಡಿಪಲ್ಲಿಗೆ ಹೋಗುವ ದಾರಿಯಲ್ಲಿ ನಿಲ್ಲಿಸಲು ಹೇಳಿದರು. 

ಬನ್ನಿ ಹೋಗೋಣ, ಇಲ್ಲಿಂದ ನಡೆದು ಹೋದರೆ ಹತ್ತಿರ ಎನ್ನುತ್ತಲೇ ಭರತ್‌ ಕಾಡಿನ ಕಾಲು ದಾರಿಯಲ್ಲಿ ದಾಪುಗಾಲು ಹಾಕಲಾರಂಭಿಸಿದರು. ನಾನು ಅವರಂತೆಯೇ ಬೀಸುಗಾಲಲ್ಲಿ ಅವರನ್ನು ಹಿಂಬಾಲಿಸಿದೆ.

ನಡಿಗೆ ಆರಂಭಿಸಿದ ಸ್ವಲ್ಪ ಹೊತ್ತಿಗೆ ಮುಖ್ಯ ರಸ್ತೆಯಲ್ಲಿ ಓಡುವ ವಾಹನಗಳ ಸದ್ದು ಕೇಳದಂತಾಯಿತು. ಒಂದಷ್ಟು ಹೊತ್ತು ಕಾಡಿನ ಪರಿಸರವನ್ನು ಆಸ್ವಾದಿಸಿದೆ. ಅಲ್ಲೆಲ್ಲೋ ಹಕ್ಕಿಗಳು ಕೂಗುವುದು, ಇನ್ನೆಲ್ಲೋ ಯಾವುದೋ ಪ್ರಾಣಿಯ ಕೂಗು, ಅಲ್ಲೆಲ್ಲೋ ಯಾರೋ ಮರ ಕಡಿಯುವ ಸದ್ದು. ಇಷ್ಟರ ಮೇಲೆ ಭರತ್‌ ಹೇಳುತ್ತಿದ್ದ ಕಾಡಿನ ಮಧ್ಯ ಹಗಲು ರಾತ್ರಿ ತಾವು ಮತ್ತು ಕಾರ್ಯಕರ್ತರು ಓಡಾಡುವಾಗ ಎದುರಾಗುವ ಕೆಲವು ರೋಚಕ ಘಟನೆಗಳು. ನಿಧಾನವಾಗಿ ನನಗೆ ಕಾಡಿನ ಹಕ್ಕಿಗಳ ಕೂಗು, ಪ್ರಾಣಿಗಳ ಕೂಗು ಗುರುತಿಸುವುದು ತಪ್ಪಿತು. 

ಬರಿಯ ಮರದ ದುಂಬಿಗಳ ಝೇಂಕಾರ, ಮರದ ಎಲೆ, ಕೊಂಬೆಗಳ ಓಲಾಟ, ಮಿಕ್ಕಂತೆ ನಮ್ಮ ಹೆಜ್ಜೆ ಸದ್ದು. ಕಾಡು ಅಷ್ಟೇನೂ ದಟ್ಟವಾಗಿಲ್ಲದಿದ್ದರಿಂದ ಬಿಸಿಲ ಧಗೆ ಸುಡುತ್ತಿತ್ತು.  ಬಾಯಾರಿಕೆಯಾಗತೊಡಗಿತು. ನೀರು ಕಾರಿನಲ್ಲಿದೆ. 

ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಮೇಲೆ ನನಗೆ ಯಾಕೋ ಅನುಮಾನ ಶುರುವಾಯಿತು. ಅಲ್ಲ, ಇಲ್ಲೇ ಹತ್ತಿರ ಎಂದವರು ಇಷ್ಟು ಹೊತ್ತು ನಡೆದ ಮೇಲೂ ಎಲ್ಲಿಯೂ ನಿಲ್ಲುತ್ತಿಲ್ಲವಲ್ಲ, ಕಾಡಿನ ಕಾಲುಜಾಡು ಹಿಡಿದುಕೊಂಡು ಎಲ್ಲಿಗೆ ಹೊರಟಿದ್ದಾನೆ ಈ ಮನುಷ್ಯ ಎಂಬ ಪ್ರ‍ಶ್ನೆಯೂ ಮೂಡತೊಡಗಿತು. ಇವನಿಗೇನಾದರೂ ದಾರಿ ತಪ್ಪಿದೆಯೆ? ಇವನೂ ಮೊದಲ ಬಾರಿಗೆ ಇಲ್ಲಿಗೆ ಬರುತ್ತಿರುವನೇನೋ, ನಾನು ತೋರಿಸು ನಿನ್ನ ಕಾರ್ಯಕ್ಷೇತ್ರದ ಹಳ್ಳಿಗಳು ಎಂದು ಕೇಳಿದ್ದು ಸರಿಹೋಯಿತು. ಒಂದು ತರಹದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ, ಆಗಲಿ ಇನ್ನಷ್ಟು ನಡೆದೇ ಬಿಡೋಣ ಎಂದುಕೊಂಡದ್ದು ಸುಳ್ಳಲ್ಲ. 

ಅಷ್ಟು ಹೊತ್ತಿಗೆ ಅದೇಕೋ ಏನೋ ಬೆಳಗ್ಗೆ ಹೊಟೇಲ್‌ ದ್ವಾರಕದಲ್ಲಿ ಎಂ.ಎಲ್.ಎ. ಪೆಸರಟ್ಟು ತಿಂದಿದ್ದರೂ ಹಸಿವು ಕಾಣಿಸಲಾರಂಭಿಸಿತ್ತು. ಪ್ರಾಯಶಃ ಅದಕ್ಕೆ ಮುಖ್ಯ ಕಾರಣ ಕಾರಿನಲ್ಲಿ ಬಿಟ್ಟು ಬಂದಿದ್ದ ಬ್ರೆಡ್‌, ಬಿಸ್ಕತ್‌ ಮತ್ತು ಬಾಳೆಹಣ್ಣು ಇದ್ದಿರಬಹುದು ಎಂದು ಆಮೇಲೆ ಗೊತ್ತಾಯಿತು. ಈಗ ಹಸಿವು ನಿಧಾನವಾಗಿ ಮುಂದಾಗತೊಡಗಿತು. ನಾನು ಭರತ್‌ಗೆ ಮೊದಮೊದಲು ಸೂಚ್ಯವಾಗಿ ಹೇಳಿದೆ. ಇನ್ನೇನು ಸ್ವಲ್ಪ ದೂರದಲ್ಲಿ ಒಂದು ಹಳ್ಳಿ ಇದೆ. ಅಲ್ಲೇ ತಾವು ಕೆಲಸ ಮಾಡುವುದು ಅಲ್ಲಿಗೆ ಹೋಗಿ ಹಿಂದೆ ಬಂದುಬಿಡೋಣ. ಮೇಡಕ್‌ಗೆ ಹೋಗುವ ಮೊದಲು ಕೌಡಿಪಲ್ಲಿಯಲ್ಲಿ ನಿಲ್ಲೋಣ ಎಂದ. 

ಈ ಕಾಡ ಹಳ್ಳಿ ಭೇಟಿ ಮುಗಿಸಿ, ಮತ್ತೆ ಇಷ್ಟೇ ದೂರ ನಡೆದು ಕೌಡಿಪಲ್ಲಿಗೆ ಹೋಗಿ ತಲುಪುವ ತನಕ ನನಗೆ ಕಾಯಲು ಆಗುವುದಿಲ್ಲ ಎಂದು ಮನಸ್ಸು ಖಡಾಖಂಡಿತವಾಗಿ ಹೇಳಿದ ಮೇಲೆ ‘ಇನ್ನು ಆಗಲ್ಲ. ನನಗೆ ತುಂಬಾ ಹಸಿವಾಗುತ್ತಿದೆ. ಈಗ ನನಗೆ ತಿನ್ನಲು ಏನಾದರೂ ಬೇಕುʼ ಎಂದು ನಿಂತೇಬಿಟ್ಟೆ. ನನಗೆ ಆಗ ಕಾಡಿನ ಯಾವುದೇ ಹಕ್ಕಿಗಳ ಕೂಗು, ಎಲೆಗಳಾಡುವ ಮರಮರ ಕೇಳುತ್ತಿರಲಿಲ್ಲ. ‘ಹಸಿವಿನ ಭೂತವು ಕೂಯುವ ಕೂವೊ’ ಅಂತ ಕವಿವಾಣಿ ಹೊಟ್ಟೆಯಲ್ಲಿ ಕೂಗುತ್ತಿತ್ತು!

ಭರತ್‌ಗೆ ಈಗ ನನ್ನ ಸಮಸ್ಯೆ ಸತ್ಯ ಎಂದು ಗೊತ್ತಾಯಿತು ಅಂತ ಕಾಣುತ್ತೆ. ನಿಜವಾಗಿಯೂ ಹಸಿವು ಎಂದು ಅರ್ಥವಾಗುತ್ತಿದ್ದಂತೆಯೇ ಕೆಲವು ಕ್ಷಣ ಅಕ್ಕಪಕ್ಕ ನೋಡಿ, ನೀವು ಇಲ್ಲೇ ಇರಿ ಎಂದು ಹೇಳಿ ಇನ್ಯಾವುದೋ ಕಾಲುಜಾಡು ಹಿಡಿದು ಮಾಯವಾಗಿಬಿಟ್ಟ. ಅರೆ ಒಬ್ಬನನ್ನೇ ಬಿಟ್ಟು ಓಡಬೇಡಯ್ಯಾ ಎಂದು ಕೂಗಬೇಕನ್ನಿಸಿತ್ತು. ಆದರೆ ಕೂಗಲಿಲ್ಲ. 

ವಾಪಸ್ಸು ಹೋಗೋಣ ಎನ್ನುವನೇನೋ ಅಂದುಕೊಂಡರೆ, ನಾನು ಏನಾದರೂ ಹೇಳುವುದಕ್ಕೆ ಮೊದಲು ಹೋಗಿಬಿಟ್ಟನಲ್ಲಾ ಎಂದುಕೊಂಡೆ. ಈಗ ಮತ್ತೆ ಕಾಡಿನ ಶಬ್ದಗಳು ಅರಿವಾಗತೊಡಗಿತು. ಮೊದಲು ದುಂಬಿಗಳ ಝೇಂಕಾರ, ಅದರ ಹಿಂದೆ ಎಲೆಗಳ ಮರಮರ, ಆಮೇಲೆ ಹಕ್ಕಿಗಳ ಕೂಗು, ಅವುಗಳ ಹಾರಾಟ, ಅಲ್ಲೆಲ್ಲೋ ಯಾವುದೋ ಪ್ರಾಣಿಗಳ ಕೂಗು. ನಿಜವಾದ ಕಾಡೇ ಹೌದು. ಸಮಯ ನಿಮಿಷ ನಿಮಿಷಗಳು ಸರಿಯುತ್ತಿದ್ದಂತೆ ಒಂದು ತರಹದ ಆತಂಕ ಆರಂಭವಾಯಿತು. ಹಸಿವು, ಬಾಯಾರಿಕೆಯ ಜೊತೆ, ಬೇರೆ ಕೆಲಸವಿರಲಿಲ್ಲವಾ ನಿನಗೆ, ಮರ್ಯಾದೆಯಿಂದ ಕೌಡಿಪಲ್ಲಿಗೆ ಪೂರ್ತಿ ಹೋಗಿ ಅಲ್ಲಿನ ಕೇಂದ್ರಗಳನ್ನು ನೋಡಿಕೊಂಡು ಮುಂದೆ ಮೇಡಕ್‌ಗೆ ಹೋಗಬೇಕಿತ್ತು. ಯಾಕೆ ಬೇಕಿತ್ತು ಈ ತಲೆಪ್ರತಿಷ್ಠೆ ಎಂದುಕೊಂಡೆ. (ನೆನಪಿರಲಿ ಆಗ ಕೈಗಿನ್ನೂ ಮೊಬೈಲ್‌ ಬಂದಿರಲಿಲ್ಲ!)

ಮತ್ತೆ ಕೆಲವು ಆತಂಕದ ಕ್ಷಣಗಳು. ಅಕಸ್ಮಾತ್‌ ಯಾವುದಾದರೂ ಪ್ರಾಣಿಯೋ, ಹಾವೋ ಬಂದು ಬಿಟ್ಟರೆ? ನಾನು ಅತ್ತಿತ್ತ ಹೋಗುವುದು ಸುರಕ್ಷಿತವಲ್ಲ ಎಂಬುದು ಗೊತ್ತಿತ್ತು. ಅಕಸ್ಮಾತ್‌ ದಾರಿ ತಪ್ಪಿದರೆ ಇನ್ನೂ ಕಷ್ಟ. ಒಂದು ಉದ್ದನೆಯ ಕೋಲು ಹುಡುಕಿಕೊಂಡು ಅಲ್ಲೇ ಬಿದ್ದಿದ್ದ ದೊಡ್ಡದೊಂದು ಮರದ ಬೊಡ್ಡೆಯೊಂದರ ಮೇಲೆ ಕಾಲು ಮೇಲಿಟ್ಟುಕೊಂಡೇ ಆಗಾಗ್ಗೆ ಹಿಂದೆಮುಂದೆ ಅತ್ತ ಇತ್ತ ನೋಡುತ್ತಾ ಕುಳಿತಿದ್ದೆ. ಕೆಲ ಹೊತ್ತಿನಲ್ಲಿ ಭರತ್‌ ಧಿಗ್ಗನೆ ಪ್ರತ್ಯಕ್ಷವಾದರು. ಆತನ ಜೊತೆ ಒಬ್ಬ ಲಂಬಾಣಿ ಹೆಂಗಸು. ಇವನ ಕೈಯಲ್ಲಿ ಕೆಲವು ರೊಟ್ಟಿಗಳು. ಆಕೆಯ ಕೈಯಲ್ಲಿ ಎರಡು ಪಾತ್ರೆಗಳು. ನೀರಿರಬೇಕು ಅಂದುಕೊಂಡೆ.  

ಅದನ್ನು ನನ್ನ ಕೈಯಲ್ಲಿಟ್ಟು, ‘ತಿನ್ನಿ. ಜೋಳದ ರೊಟ್ಟಿ’ ಎಂದರು ಭರತ್‌.

ತುಂಬಾ ಹಸಿವಾಗಿತ್ತು. ರೊಟ್ಟಿ ಕೈಗೆ ತೆಗೆದುಕೊಂಡೆ. ಅಂಗೈ ದಪ್ಪದ ರೊಟ್ಟಿಗಳು. ಒಣಗಿತ್ತು. ತಿನ್ನಬೇಕೆಂದರೆ ಮುರಿಯಬೇಕು. ಒಂದು ಪಕ್ಕ ರೊಟ್ಟಿ ಮುರಿದೊಡನೆಯೇ ಅದರಿಂದ ತುಪತುಪನೆ ಒಂದಷ್ಟು ಹುಳಗಳು ಕೆಳ ಬಿದ್ದವು. ಭರತ್‌ ಜೊತೆಯಲ್ಲಿ ಬಂದಿದ್ದ ಹೆಂಗಸು ಪಾತ್ರೆಯನ್ನು ತೆಗೆದು ಚಟ್ನಿ ಹಾಕಲು ಬಂದವರು, ನಾನು ರೊಟ್ಟಿಯಿಂದ ಬಿದ್ದ ಹುಳ ನೋಡಿ ಗಾಬರಿ ಬಿದ್ದು ಹಿಂದಕ್ಕೆ ಹಾರಿದ್ದು, ಕೈಯಲ್ಲಿದ್ದ ರೊಟ್ಟಿ ಇನ್ನೇನು ಜಾರಿ ಬೀಳುವುದನ್ನು ನೋಡಿ ಗೊಳ್ಳೆಂದು ನಕ್ಕುಬಿಟ್ಟರು. 

ಅಷ್ಟು ಹೊತ್ತಿಗೆ ಭರತ್‌ ರೊಟ್ಟಿಯನ್ನು ಎರಡೂ ಕೈಗಳಲ್ಲಿ ಹಿಡಿದು ಮುರಿದು ಒದರುತ್ತಿದ್ದ. ಒಂದು ಚೂರು ರೊಟ್ಟಿಯಿಂದ ಗಟ್ಟಿ ಚಟ್ನಿ ತೆಗೆದುಕೊಂಡು ಬಾಯಿಗಿಟ್ಟುಕೊಂಡ. ಹಸಿವಾಗಿದ್ದು ಯಾರಿಗೆ ಎಂಬ ಅನುಮಾನ ಆ ಕ್ಷಣದಲ್ಲಿ ಮಿಂಚಿ ಹೋಯಿತು ನನಗೆ!

ಆಕೆ ನಕ್ಕಿದ್ದು, ನಾನು ಹಾರಿದ್ದು ಅರಿವಿಗೆ ಬಂದ ಭರತ್‌ ಹತ್ತಿರ ಬಂದು, ಆ ಹುಳಗಳು ಏನೂ ಮಾಡವು, ನಿರುಪದ್ರವಿಗಳು. ನೀವು ಹಾಗೆ ಒದರಿಕೊಂಡು ತಿನ್ನಬಹುದು ಎಂದು ಉಚಿತ ಸಲಹೆ ಕೊಟ್ಟ. ಮುಖ ಹುಳ್ಳಹಳ್ಳಗೆ, ಸೊಟ್ಟಗೆ ಮಾಡಿಕೊಂಡು ಹುಳ ಶೋಧಿಸಿ ಶೋಧಿಸಿ ಒದರಿ ತೆಗೆದು ಮುಕ್ಕಾಲು ರೊಟ್ಟಿಯಷ್ಟು ಕಷ್ಟಪಟ್ಟು ತಿಂದೆ. ಆ ಹೊತ್ತಿಗೆ ಭರತ್‌ ಎರಡು ರೊಟ್ಟಿ ಹೊಡೆದಾಗಿತ್ತು. ಆ ಹೆಂಗಸು ಇನ್ನೂ ಎರಡು ರೊಟ್ಟಿ ಇದೆ ತೊಗೊಳ್ಳಿ ಅಂತ ಭರತ್‌ಗೆ ಹೇಳುತ್ತಿದ್ದಳು. 

ನನ್ನ ಹಸಿವು ಹಾರಿ ಹೋಗಿತ್ತು. 

ಅಗಿದು ಜಗಿದು ನುಂಗಿದ್ದ ಒಣರೊಟ್ಟಿಯನ್ನ ಗಂಟಲಿನಲ್ಲಿಳಿಸಲು ಆಕೆ ಕೊಟ್ಟ ನೀರು ಕುಡಿದು ವಂದಿಸಿ ಮುಂದೆ ಹೋಗೋಣ ಎಂದು ನಾನೇ ಎದ್ದೆ. ಭರತ್‌ ಆ ಮಹಿಳೆಯೊಡನೆ ಒಂದೆರೆಡು ಮಾತು ಮುಗಿಸಿ ಜೊತೆಗೂಡಿದರು. 

ನನ್ನ ನಡಿಗೆ ವೇಗವನ್ನೇ ಕಳೆದುಕೊಂಡಿತ್ತು. ಕಾರು ಇಳಿದು ಕಾಡೊಳಗೆ ನಡೆಯುತ್ತಿದ್ದಾಗ ಇದ್ದ ಉತ್ಸಾಹ ಕಡಿಮೆಯಾಗಿತ್ತು. ಈಗಷ್ಟು ಮಾತುಕತೆ, ಪ್ರಶ್ನೆ ನನ್ನಿಂದ ಹೊರಡಲೇ ಇಲ್ಲ. ನಿಜವಾಗಿಯೂ ನನ್ನ ಬಗ್ಗೆಯೇ ತಿರಸ್ಕಾರ, ಅಸಹ್ಯ, ಕರುಣೆ, ಕೋಪ, ಇನ್ನೂ ಏನೇನೋ. ಯಾಕೆ ಬೇಕಿತ್ತು ಇದೆಲ್ಲಾ ನಿನಗೆ ಎನ್ನುವ ಮಾತು ಮನಸ್ಸಿನಲ್ಲಿ ಮೇಲೆ ಮೇಲೆ ಕೇಳುತ್ತಲೇ ಇತ್ತು. ಭರತ್‌ ಮಾತ್ರ ಉತ್ಸಾಹದಲ್ಲಿ ಏನೋ ಹೇಳುತ್ತಾ ಹೊರಟಿದ್ದರು. ಸುಮ್ಮನೆ ಹೂಂಗುಡುತ್ತಿದ್ದೆ. 

ಸ್ವಲ್ಪ ಹೊತ್ತಿನಲ್ಲಿ ನಮ್ಮ ಗಮ್ಯಸ್ಥಾನ ತಲುಪಿದ್ದಾಯ್ತು. 

ಕಾಡಿನ ಮಧ್ಯದಲ್ಲೊಂದು ಪುಟ್ಟ ಹಳ್ಳಿ. ಹಳ್ಳಿ ಎನ್ನುವುದಕ್ಕಿಂತಾ ಒಂದಷ್ಟು ಗುಡಿಸಲುಗಳ ಸಮೂಹ. ನಾವು ಅವುಗಳ ಹತ್ತಿರ ಹೋಗುತ್ತಿದ್ದಂತೆಯೇ ಭರತ್‌ ಅದರ ಹೆಸರು ಏನೋ ಹೇಳಿದರು. ತಲೆಯಲ್ಲಿ ನಿಲ್ಲಲಿಲ್ಲ. ಎಷ್ಟು ಬೇಗ ಈ ಭೇಟಿ ಮುಗಿಸಿ ಹೊರಟರೆ ಸಾಕು ಎನ್ನುವಂತೆ ಮನಸ್ಸಿತ್ತು. 

ಅಲ್ಲಿಗೆ ಕಾಲಿಟ್ಟಾಗಲೇ ಒಂದಷ್ಟು ಮಹಿಳೆಯರು ಭರತ್‌ನನ್ನು ಗುರುತಿಸಿ ನನಗರ್ಥವಾಗದ  ತೆಲುಗು ಮಿಶ್ರಿತ ಲಂಬಾಣಿಯಲ್ಲಿ ತಮ್ಮ ಆಶ್ಚರ್ಯ ಬೆರಗು ತುಂಬಿದ ಮಾತು ಆರಂಭಿಸಿದರು. ಕ್ಷಣಾರ್ಧದಲ್ಲಿ ಸುದ್ದಿ ಹಬ್ಬಿತು. ಕಾರ್ಪೆಡ್‌ ನಡೆಸುವ ಅನೌಪಚಾರಿಕ ಶಿಕ್ಷಣ ಕೇಂದ್ರ ಎನ್ನುವ ಒಂದು ಗುಡಿಸಲು ಮುಂದೆ ಬರುವ ಹೊತ್ತಿಗೆ ಅಲ್ಲಿ ಮಕ್ಕಳೊಂದಿಗೆ ಪಾಠ ಹೇಳುವ ಯುವಕನೊಬ್ಬ ಸ್ವಲ್ಪ ಸಂಭ್ರಮ, ಸ್ವಲ್ಪ ಗಾಬರಿ ಹೊತ್ತ ಮುಖದಲ್ಲಿ ಹೊರ ಬಂದ. ಒಳಗೆ ನಾವು ಕಾಲಿಟ್ಟಾಗ ಕತ್ತಲಿಗೆ ನನಗೇನೂ ಕಾಣಲಿಲ್ಲ.

ಸ್ವಲ್ಪ ಹೊತ್ತಿಗೆ ಕಣ್ಣು ಅಲ್ಲಿನ ಕತ್ತಲೆ ಬೆಳಕಿಗೆ ಹೊಂದಿಕೊಂಡಿತು. ಅಲ್ಲಿ ಹತ್ತು ಹನ್ನೆರಡು ವಿವಿಧ ವಯೋಮಾನದ ಹೀಚುಪೀಚು ಮಕ್ಕಳು, ಮುಂದೆ ಒಂದು ಕಪ್ಪು ಹಲಗೆಯ ಚಾರ್ಟ್‌, ತೆಲುಗು ವರ್ಣಮಾಲೆಯ ಚಾರ್ಟ್‌, ಒಂದಷ್ಟು ಬೊಂಬೆಗಳು, ಚಿತ್ರಗಳು, ಭಾರತದ, ಆಂಧ್ರಪ್ರದೇಶದ ಭೂಪಟಗಳು, ಮೂಲೆಯಲ್ಲಿ ಪುಸ್ತಕಗಳು, ಜೊತೆಗೆ ಒಂದಷ್ಟು ಪಾತ್ರೆಗಳು, ಮಡಕೆ, ಜೋಳ ತುಂಬಿದ್ದಿರಬಹುದಾದ ಮೂಟೆಗಳು, ಹಾಸಿಗೆ ಬಟ್ಟೆಗಳು ಕಾಣತೊಡಗಿದವು. ಪ್ರಾಯಶಃ ಇದು ಯಾರದೋ ಮನೆ. ಅಲ್ಲಿ ಈ ಕೇಂದ್ರ ನಡೆಯುತ್ತಿದೆ ಎಂಬುದು ವೇದ್ಯವಾಯಿತು. 

ಭರತ್‌ ಅವರ ನಿರ್ದೇಶನದಂತೆ ಆ ಯುವಕ ಮಕ್ಕಳಿಗೆ ಕತೆ ಹೇಳುವ ಪ್ರಕ್ರಿಯೆ ಮುಂದುವರೆಸಿದ. ಮಕ್ಕಳೂ ಒಮ್ಮೆ ಅವನತ್ತ, ಇನ್ನೊಮ್ಮೆ ನಮ್ಮತ್ತ ನೋಡುತ್ತಾ ಯುವಕನ ಕತೆಗೆ ದನಿಗೂಡಿಸುತ್ತಾ ಇದ್ದರು… 

…ಆಗ ಭರತ್‌ ಹೇಳುತ್ತಿದ್ದ ಮಾತುಗಳು ನನ್ನ ಮನಸ್ಸಿನಲ್ಲಿ ಮರುಕಳಿಸತೊಡಗಿತು. ಈ ಜನ ಕಾಡಿನಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಇದು ಬಹುಶಃ ಮೂರನೆಯದೋ ನಾಲ್ಕನೆಯದೋ ತಲೆಮಾರು. ಇಲ್ಲಿನ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹ ಮಾಡಿ ಅದನ್ನ ಗುತ್ತಿಗೆದಾರರಿಗೆ ಕೊಡುತ್ತಾರೆ. ಮೊದಮೊದಲು ಅವರೇ ಬೇರೆ ಬೇರೆ ಕಡೆ ತೆಗೆದುಕೊಂಡು ಹೋಗಿ ಮಾರುತ್ತಿದ್ದರು. ಈಗೀಗ ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಗುತ್ತಿಗೆದಾರರು ಹೊರಗಿನ ಜನರನ್ನೂ ತರುತ್ತಾರೆ.

ಕಾಡಿನಲ್ಲಿ ತಲೆತಲಾಂತರಗಳಿಂದ ಇರುವ ಜನರಿಗೆ ಎಲೆ, ಹೂ, ಕಾಯಿ, ತೊಗಟೆ, ಬೇರು, ಕೊಂಬೆ, ಜೇನು, ಮೇಣ, ಮರಗಳಿಂದ ಒಸರುವ ಗೋಂದು ಇಂಥವೆಲ್ಲ ಸಂಗ್ರಹಿಸುವುದಕ್ಕೆ ಅವರದೇ ಆದ ಸ್ಥಳೀಯ ಜ್ಞಾನ, ತಾಳ್ಮೆ, ಆಯ್ಕೆ ಇದೆ. ಆದರೆ ಹೊರಗಿನಿಂದ ಬರುವ ಜನರಿಗೆ ಅದಾವುದೂ ಅರ್ಥವಾಗುವುದಿಲ್ಲ, ಬೇಕಾಗಿಯೂ ಇಲ್ಲ. ಅವರು ಸುಮ್ಮನೆ ಕಂಡದ್ದನ್ನೆಲ್ಲಾ ಕೀಳುತ್ತಾರೆ. ಹಾಳು ಮಾಡುತ್ತಾರೆ…

ಈಗೀಗ ಮಕ್ಕಳನ್ನು ಯಾರೂ ಕಾಡಿಗೆ ಸಂಗ್ರಹಕ್ಕೆ ಕರೆದೊಯ್ಯುವುದಿಲ್ಲ. ಮಕ್ಕಳು ಶಾಲೆಗೆ ಹೋಗಬೇಕು, ಕಲಿಯಬೇಕು, ತಮ್ಮಂತಾಗಬಾರದು ಎನ್ನುವ ಭಾವನೆ ಬೆಳೆದಿದೆ. ಆದರೆ ಹತ್ತಿರದ ಶಾಲೆಯೆಂದರೆ ಸುಮಾರು ಹತ್ತು ಕಿಲೋಮೀಟರ್‌ ದೂರ. ಕಾರ್ಪೆಡ್‌ ಕಳೆದ ಎರಡು ವರ್ಷಗಳಿಂದ ಅನೌಪಚಾರಿಕ ಶಾಲೆ ನಡೆಸುತ್ತಿದೆ. ಅದಕ್ಕೆ ಮೊದಲು ಸುಮಾರು ಒಂದು ವರ್ಷದ ಕಾಲ ಈ ಸಮುದಾಯದೊಡನೆ ಮಾತುಕತೆ, ಸಂಬಂಧ ಬೆಳೆಸುವ ಕೆಲಸವೇ ಆಗಿತ್ತು. ಇಲ್ಲಿಂದ ಕೆಲವು ಪ್ರಾಥಮಿಕ ವಿಚಾರಗಳು, ಅಕ್ಷರ ಕಲಿತ ಕೆಲವು ಮಕ್ಕಳು ಆ‍ಶ್ರಮ ಶಾಲೆಗೆ ಸೇರಿದ್ದಾರೆ. ಅವರಿಂದ ಜನ ಮಹತ್ತರವಾದುದನ್ನು ನಿರೀಕ್ಷಿಸುತ್ತಿದ್ದಾರೆ…

ಹಳ್ಳಿಯ ಬಳಿ ಒಂದೂ ವೈದ್ಯಕೀಯ  ಕೇಂದ್ರವಿಲ್ಲ. ಆರೋಗ್ಯ ಕಾರ್ಯಕರ್ತೆಯರು ಬರುತ್ತಾರೆ ಸರಿ, ಆದರೆ ಅಷ್ಟೊಂದು ಖಚಿತವಿಲ್ಲ. ಕಾಡಿನಲ್ಲಿನ ಜನರಿಗೆ ನಿಧಾನವಾಗಿ ತಮ್ಮ ಸಾಂಪ್ರದಾಯಿಕ ವೈದ್ಯ ಪದ್ಧತಿ ಮರೆತು ಹೋಗುತ್ತಿದೆ. ಅವರೊಂದಿಗೆ ಮಾತನಾಡಿ ಅಲೋಪತಿ ವೈದ್ಯದ ಬಳಕೆಯ ಜೊತೆಜೊತೆಗೇ ಹಳೆಯ ಗಿಡಮೂಲಿಕೆಗಳು, ಬೇರು, ಕಷಾಯ ಬಳಕೆಗೆ ಕಾರ್ಪೆಡ್ ಪ್ರೋತ್ಸಾಹಿಸುತ್ತಿದೆ. ಕಾರ್ಪೆಡ್‌ ಆಗಾಗ್ಗೆ ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ಜನರನ್ನು ಸೇರಿಸಿ ವೈದ್ಯಕೀಯ ಶಿಬಿರ ನಡೆಸುತ್ತದೆ. ಅದು ಮುಖ್ಯವಾಗಿ ಅಂಗವಿಕಲತೆಯಿರುವ ಮಕ್ಕಳನ್ನು ಗುರುತಿಸಿ ಅವರಿಗೆ ಬೇಕಾದ ನೆರವು ಕೊಡಿಸಲು, ಕಣ್ಣು ಕಾಣದ, ಕಿವಿ ಕೇಳದ ಮತ್ತು ಅಪೌಷ್ಟಿಕತೆ ಇರುವ ಮಕ್ಕಳು, ಹದಿವಯಸ್ಸಿನ ಹೆಣ್ಣುಮಕ್ಕಳು ಮತ್ತು ವೃದ್ಧರನ್ನು ಗುರುತಿಸಿ ಅವರಿಗೆ ಸಲಹೆ ಕೊಡಿಸುತ್ತಾರೆ.

ನವಜಾತ ಮಕ್ಕಳಿಗೆ ರೋಗನಿರೋಧಕಗಳನ್ನು ಕೊಡಿಸಲೇಬೇಕು. ಈ ಸಮುದಾಯಕ್ಕೆ ಹೊರಗಿನವರ ಸಂಪರ್ಕ ಹೆಚ್ಚಾಗಿದೆ. ಹೀಗಾಗಿ ಬೇರೆ ಬೇರೆ ರೋಗಬಾಧೆಗಳು ಇವೆ. ಹೆರಿಗೆಗೆ ಈ ಜನ ಆಸ್ಪತ್ರೆಯತ್ತ ಹೋಗುವುದಿಲ್ಲ. ಇಲ್ಲೇ ಮಾಡಿಕೊಳ್ಳುತ್ತಾರೆ. ವೈದ್ಯಕೀಯ ನೆರವು ಕಷ್ಟ. ಸುತ್ತಮುತ್ತಲ ಹಳ್ಳಿಗಳಲ್ಲಿ ಹೆರಿಗೆಯಲ್ಲಿ ತಾಯಂದಿರು ಮತ್ತು ಮಕ್ಕಳು ಸಾಯುವುದು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ…

ನಾನು ಕೇಂದ್ರದಲ್ಲಿ ಮಕ್ಕಳೊಡನೆ ಮಾತನಾಡಲು ಯತ್ನಿಸಿದೆ. ಭರತ್‌ ಸಹಾಯ ಮಾಡಿದರು. ಒಂದಷ್ಟು ಮಕ್ಕಳು ತಾವು ಮುಂದೆ ಕಲೆಕ್ಟರ್‌ ಆಗುವ ಆಸೆಯಿದೆ ಎಂದರು. ಒಂದಷ್ಟು ಮಕ್ಕಳು ಪಂತುಲು (ಟೀಚರ್‌) ಆಗಬೇಕೆಂದರೆ, ಕೆಲವು ಮಕ್ಕಳು ತಾವು ಪೊಲೀಸ್‌ ಆಗುವುದಾಗಿ ಗಟ್ಟಿಯಾಗಿಯೇ ಹೇಳಿದರು. ಒಬ್ಬ ಹುಡುಗ ತಾನು ‘ಭರತ್‌ ಸಾರ್‌ʼ ಆಗುತ್ತೇನೆ ಎಂದ. ಇದ್ದ ಮೂವರು ಹುಡುಗಿಯರು ಏನೂ ಮಾತನಾಡದೆ ನಾಚಿಕೊಂಡು ಕುಳಿತಿದ್ದರು. ಆಗಲೇ ಯಾರೋ ಹುಡುಗ ಕಿಚಾಯಿಸುವ ದನಿಯಲ್ಲಿ ‘ಅವರೆಲ್ಲರಿಗೂ ಮುಂದಿನವಾರ ಮದುವೆʼ ಅಂತ ಕೂಗಿದ. 

ಅದರ ಬೆನ್ನಿಗೇ  ನಗುವಿನ ಅಲೆಯೆದ್ದಿತು. ಅಲ್ಲಿ ಸೇರಿದ್ದ ಮಹಿಳೆಯರೂ, ಆ ಹುಡುಗಿಯರೂ ಆ ನಗುವಿನಲ್ಲಿ ಸೇರಿದ್ದರು. 

ನನಗೆ ಈಗ ಗಾಬರಿಯಾಯಿತು. ಭರತ್‌ ನನ್ನ ಕೈ ಅಮುಕಿ ಈಗ ಸುಮ್ಮನಿರಿ ಎಂದು ಕಣ್ಣಲ್ಲೇ ಸೂಚಿಸಿದರು.  ಯಾಕೋ ಒಳಗಡೆ ಬಹಳ ಧೂಳು ಅನ್ನಿಸಲು ಆರಂಭಿಸಿತು. ಹೊರಗೆ ಬಂದೆ. ಆಗಲೇ ಒಂದಿಬ್ಬರು ಒಂದು ಬಟ್ಟೆ ಮುಚ್ಚಿದ ಬುಟ್ಟಿ, ಎರಡು ತಟ್ಟೆಗಳು, ಸ್ಟೀಲ್‌ ಲೋಟಗಳು, ದೊಡ್ಡದೊಂದು ತಂಬಿಗೆಯಲ್ಲಿ ನೀರು ತೆಗೆದುಕೊಂಡು ಬಂದರು. ಏನಿರಬಹುದು ಎಂಬ  ಕುತೂಹಲ. ಹಿಂದೆಯೇ ಬಂದ ಭರತ್‌ ‘ಆಗಲೇ ತಂದು ಬಿಟ್ಟಿರಾ?ʼ ಎಂಬ ಪ್ರಶಂಸೆಯ ದನಿಯಲ್ಲಿ ಕೇಳಿದ್ದೂ, ಅವರು ಅಲ್ಲೇ ಆ ಗುಡಿಸಲ ಎದುರೇ ಪಕ್ಕದಲ್ಲಿ ಎಲ್ಲ ಜೋಡಿಸಿ, ತಟ್ಟೆಗೆ ಬಿಸಿಬಿಸಿ ರೊಟ್ಟಿ ಹಾಕಿ ಚಟ್ನಿ ಇಟ್ಟು ಕೈಗಿಟ್ಟರು. 

ಮುಸುಕಿನ ಜೋಳದ ರೊಟ್ಟಿಗಳೇ. ನನ್ನ ಒಳಗೆಲ್ಲೋ ಬೇಡ ಬೇಡ, ಕಾರಿನಲ್ಲಿ ಮೆದು ಮಿದು ಬ್ರೆಡ್‌, ಬಾಳೆಹಣ್ಣು ಇದೆ ಎಂದು ಹೇಳುತ್ತಿದ್ದರೂ, ರೊಟ್ಟಿ ಮುರಿದು ಚಟ್ನಿ ತೆಗೆದುಕೊಂಡು ಬಾಯಲಿಟ್ಟೆ. ಮೃದುವಲ್ಲದಿದ್ದರೂ ಆಪ್ಯಾಯಮಾನವಾಗಿತ್ತು. 

‘ಜೊನ್ನ ( ಜೋಳದ) ರೊಟ್ಟಿ. ಇದನ್ನ ತಿನ್ನಿ. ಭರತ್‌ ನಿಮಗೆ ಕಾಡಿನಲ್ಲಿ ಹುಳ ಬಂದ ಒಣಗಿದ ರೊಟ್ಟಿ ಕೊಡಿಸಿದನಂತೆ. ಪಾಪ ನಿಮಗೆ ಅದನ್ನೆಲ್ಲಾ ತಿನ್ನಕ್ಕೆ ಆಗಿರಲ್ಲ. ಇದನ್ನ ತಿಂದು ನೋಡಿ. ಇನ್ನೊಂದ್ಸರ್ತಿ ನೇರ ಇಲ್ಲಿಗೇ ಬರ್ತೀರ…ʼ ಎಂದು ಸಂಭ್ರಮದಿಂದ ಹೇಳುತ್ತಲೇ ಇದ್ದರು  ಅದೆಲ್ಲ ತಂದಿಟ್ಟ ಜನ.

ಒಂದೆರಡು ಬಿಸಿಬಿಸಿ ರೊಟ್ಟಿ ಒಳಗಿಳಿದ ಮೇಲೆ ಗಡಿಯಾರ ನೋಡಿಕೊಂಡೆ. ಸಮಯ ಮಧ್ಯಾಹ್ನದ ಎರಡು ಗಂಟೆಗೆ ಸಮೀಪಿಸುತ್ತಿತ್ತು. ಕೆಲ ಹೊತ್ತಿನಲ್ಲಿ ಕೆಲವರು ಗಂಡಸರು ಅದಾವುದೋ ಎಲೆಗಳು, ಕೊಂಬೆಗಳ ದೊಡ್ಡ ದೊಡ್ಡ ಹೊರೆ ಹೊತ್ತುಕೊಂಡು ಬಂದರು. ಇನ್ನಷ್ಟು ಹೆಂಗಸರು ಗುಂಪುಗೂಡಿದರು. ಇನ್ನಾರೋ ಹೆಂಗಸು ತಾವೂ ಒಂದು  ರೊಟ್ಟಿಯ ಬುಟ್ಟಿ ತಂದು ಇಟ್ಟರು. ನನಗೆ ಎರಡಕ್ಕಿಂತ ಹೆಚ್ಚು ತಿನ್ನಲು ಆಗದು ಎನಿಸಿತು. ಆದರೂ ಅವರ ಒತ್ತಾಯಕ್ಕೆ ಇನ್ನೊಂದು ರೊಟ್ಟಿ ತಟ್ಟೆಗೆ ಬಿದ್ದಿತು. 

‘ಈಗ ಇಲ್ಲಿನ ಎಲ್ಲ ಸಮುದಾಯಗಳನ್ನ ಹಳ್ಳಿಗಳನ್ನು ಸರ್ಕಾರ ಒಕ್ಕಲೆಬ್ಬಿಸುತ್ತಿದೆʼ ಭರತ್‌ ಹೇಳಿದ್ದ ಮಾತು ನೆನಪಿಗೆ ಬಂದಿತು. ನಾನು ಸರ್ಕಾರವಲ್ಲ, ನಿರ್ಧಾರಗಳನ್ನು ಮಾಡುವವನಲ್ಲ, ಆ ರಾಜ್ಯದವನೂ ಅಲ್ಲ… ಒಳಗೆಲ್ಲೋ ತಳಮಳವಾಗ ತೊಡಗಿತ್ತು. ಮಕ್ಕಳ ಹಕ್ಕು, ಮಾನವ ಹಕ್ಕು, ಕಾಡಿನ ನಿವಾಸಿಗಳ ಹಕ್ಕು ತಲೆಯಲ್ಲಿ ಗಿರಕಿ ಹೊಡೆಯತೊಡಗಿತು. ಭಾರತ ಸಂವಿಧಾನದ ಪರಿಚ್ಛೇದ ೪೬ ಹೇಳುವುದು, ʼದುರ್ಬಲ ವರ್ಗಗಳು ಅದರಲ್ಲೂ ಪರಿಶಿಷ್ಟ ಜಾತಿ ಮತ್ತು ವರ್ಗಗಳು, ಬುಡಕಟ್ಟು ಜನಾಂಗಗಳ ರಕ್ಷಣೆ, ಶಿಕ್ಷಣ ಮತ್ತು ಆರ್ಥಿಕ ಅಭಿವೃದ್ಧಿ ಸರ್ಕಾರವು ವಿಶೇಷ ಗಮನ ಕೊಡುತ್ತದೆ ಮತ್ತು ಅವರನ್ನು ಸಾಮಾಜಿಕ ಅನ್ಯಾಯ ಮತ್ತು ಎಲ್ಲ ರೀತಿಯ ಶೋಷಣೆಗಳ ವಿರುದ್ಧ ರಕ್ಷಿಸುತ್ತದೆʼ. 

ಇದರ ಜೊತೆಜೊತೆಗೆ ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯ ಪರಿಚ್ಛೇದ ೩೦ಕ್ಕೂ ಭಾರತ ಸರ್ಕಾರ ಒಪ್ಪಿಕೊಂಡಿದೆ – ʼಪ್ರತಿಯೊಂದು ಮಗುವಿಗೂ ತನ್ನ ಮಾತೃಭಾಷೆಯಲ್ಲಿ  ಮಾತನಾಡುವ, ಕಲಿಯುವ, ಮೂಲನಿವಾಸಿಗಳು, ಭಾಷಾ ಅಲ್ಪಸಂಖ್ಯಾತರು, ಗಿರಿಜನರ ಮಕ್ಕಳಿಗೆ ಅವರವರ ಸಮುದಾಯದೊಡನೆ ಒಡನಾಡುವ, ಬದುಕುವ ತಮ್ಮ ಧಾರ್ಮಿಕ ಸಾಂಸ್ಕೃತಿಕ ವಿಚಾರಗಳನ್ನು ಅನುಸರಿಸುವ ಹಕ್ಕು ಇದೆʼ. ಆದರೆ ಈ ಗಿರಿಜನ, ಬುಡಕಟ್ಟುಗಳ ಸಮುದಾಯಗಳ ಮಕ್ಕಳಿಗೆ ಮುಖ್ಯವಾಗಿ ಶೈಕ್ಷಣಿಕ ಮತ್ತು ಆರೋಗ್ಯದ ಹಕ್ಕುಗಳು ಖಾತರಿ ಯಾವಾಗ ಮತ್ತು ಇವನ್ನು ಮಕ್ಕಳಿಗೆ ಒದಗಿಸಲು ಹೆಚ್ಚಿನ ಸಂಪನ್ಮೂಲಗಳು ಹೂಡಿಕೆ ಆಗಬೇಕು ಎನ್ನುವುದು ಸ್ಪಷ್ಟವಾಗುತ್ತಿತ್ತು. 

ನನ್ನ ಹರಕು ಮುರುಕು ತೆಲಗಿನಲ್ಲಿ ಅಲ್ಲೇ ಸಭೆ ಸೇರಿದ್ದ ಮಹಿಳೆಯರು, ಮೂರ್ನಾಲ್ಕು ಗಂಡಸರೊಡನೆ ಮಾತನಾಡಲು ಯತ್ನಿಸಿದೆ. ಅವರೆಲ್ಲರ ಮಾತಿನಲ್ಲಿ ಭರತ್‌ ಮತ್ತು ಅವರ ತಂಡದ ಸಿಬ್ಬಂದಿ ಬಂದು ಯಾವುದೇ ನಿರೀಕ್ಷೆಗಳಿಲ್ಲದೆ ಮಕ್ಕಳೊಡನೆ ಶಾಲೆ ನಡೆಸುತ್ತಿರುವುದು, ಮಹಿಳೆಯರ ಸಂಘ ಮಾಡಿರುವುದು, ಉದ್ಯೋಗ ಮಾರ್ಗದರ್ಶನ, ಮುಖ್ಯವಾಗಿ ಕಾಡು ಮತ್ತು ಕಾಡಿನ ಉತ್ಪನ್ನಗಳ ಸಂಗ್ರಹ ಹೇಗೆ ಅವರ ಹಕ್ಕು ಎಂದು ತಿಳಿಸಿಕೊಟ್ಟಿರುವುದು, ಎಂದೆಲ್ಲಾ ಕೆಲವನ್ನು ಮಂದ್ರವಾಗಿ, ಕೆಲವನ್ನು ತಾರಕದ ದನಿಯಲ್ಲಿ ಹೇಳುತ್ತಿದ್ದರು. ಆಗಾಗ್ಗೆ ಕೆಲವರ ದನಿ ಎತ್ತರಕ್ಕೆ ಹೋಗಿ, ‘ನಮಗೆ ಮನೆ ಕೊಡಿʼ ಎಂದು ಹೇಳಿದ್ದೂ ತಿಳಿಯಿತು. ಭರತ್‌ ‘ಅದು ನಮ್ಮ ಕೆಲಸವಲ್ಲ ಅಂತ ನಿಮಗೆ ಹೇಳಿದ್ದೀವಲ್ಲ. ಇವರು ಬಂದಿದ್ದಾರೆ. ಇಲ್ಲೇನು ನಡೆಯುತ್ತಿದೆ ಅಷ್ಟು ಹಂಚಿಕೊಂಡರೆ ಸಾಕು. ನಾವು ಇಲ್ಲೇ ಇರೋವರು. ಮನೆ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದ್ದೀರಲ್ಲ. ಇನ್ನೊಮ್ಮೆ ಬರೆಯೋಣ…ʼ ಎಂದರು. 

ಸಮಯ ಉರುಳುತ್ತಿತ್ತು. ನಾನು ಸಂಜೆ ಮುನ್ನ ಬೆಂಗಳೂರಿಗೆ ಬಸ್‌ ಹಿಡಿಯಬೇಕಿತ್ತು. ಇನ್ನು ಮೇಡಕ್‌ಗೆ ಮತ್ತು ಅಲ್ಲಿಂದ ಮುಂದಕ್ಕೆ ಹಳ್ಳಿಗಳಿಗೆ ಈಗ ಬೇಡ ಇನ್ನೊಮ್ಮೆ ಬರುವುದು ಎಂದು ನಿರ್ಧರಿಸಿದೆವು.  

ನಾವು ಹೊರಟಿದ್ದಂತೆಯೇ ಎರಡು ಮೂರು ಹುಡುಗರು ಉದ್ದನೆ ಲಾಠಿಗಳನ್ನು ಹಿಡಿದುಕೊಂಡು ನಮ್ಮೊಡನೆ ಹೆಜ್ಜೆ ಹಾಕಿದರು. ಭರತ್‌ ಹೇಳಿದರು, ‘ಇದು ಇಲ್ಲಿನ ಮರ್ಯಾದೆ. ನಮ್ಮನ್ನು ಮುಖ್ಯ ರಸ್ತೆಗೆ ತಲುಪಿಸಿಯೇ ಅವರು ಹಿಂದಿರುಗುವುದು’. 

ನಮ್ಮೊಡನೆ ಬಂದ ಒಬ್ಬ ಹುಡುಗ ಶಾಲೆಯಲ್ಲಿ ಹೇಳಿದ್ದ, ತಾನು ಕಲೆಕ್ಟರ್‌ ಆಗುತ್ತೇನೆ ಎಂದು. 

ನಾವು ಕಾರು ಸೇರಿ, ಹುಡುಗರಿಗೆ ವಂದನೆ ಹೇಳಿ, ಸಿಕಂದರಾಬಾದ್‌ ಕಡೆಗೆ ನಮ್ಮ ಟ್ಯಾಕ್ಸಿ ಮುಖ ಮಾಡಿ ಓಡಿತು. ಆಗಲೇ ಭರತ್‌ ಸ್ವಲ್ಪ ತಗ್ಗಿದ ದನಿಯಲ್ಲಿ ಹೇಳಿದರು, ‘ನಾವು ಈಗ ಹಳ್ಳಿಗೆ ಬಂದು ಹೋದದ್ದು ‘ಅನ್ನಗಳಿಗೆʼ ಮಾಹಿತಿ ಹೋಗಿರುತ್ತದೆ. ಇದು ಇಲ್ಲಿ ಬಹಳ ಸಾಮಾನ್ಯ. ನಾಳೆ ನಾಡಿದ್ದರಲ್ಲಿ ನಿಮ್ಮ ಬಗ್ಗೆ ವಿಚಾರಿಸಲಿಕ್ಕೆ ಜನ ನಮ್ಮ ಆಫೀಸಿಗೆ ಬಂದು ಹೋಗ್ತಾರೆʼ. 

ನನಗೆ ಈ ಹಿಂದೆಯೂ ‘ಅನ್ನಗಳು’ (ಅಣ್ಣಂದಿರು) ಬಂದ ಇಂತಹ ಅನುಭವವಾಗಿತ್ತು. ಆದ್ದರಿಂದ ಗಾಬರಿಯೇನೂ ಆಗಲಿಲ್ಲ. ಆದರೆ ನನ್ನನ್ನು ಹೆಚ್ಚು ಕಾಡಿದ್ದು, ಕಾಡಿನ ಮಧ್ಯದಲ್ಲಿರುವ ಮಕ್ಕಳ ಅಪೌಷ್ಟಿಕತೆ, ಅಂಗವಿಕಲತೆ, ಶಿಕ್ಷಣದ ಅವಕಾಶವಿಲ್ಲದ ಪರಿಸ್ಥಿತಿ… ಜೊತೆಯಲ್ಲೇ ಕಾರ್ಪೆಡ್‌ನ ಭರತ್‌ ಭೂಷಣನಂತಹ ವ್ಯಕ್ತಿಗಳ ಕಾಳಜಿ. 

‍ಲೇಖಕರು Admin

July 29, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: