ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.
ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.
ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.
ಅಂಕಣ – 153
ಸಂಸ್ಕೃತ ಹಾಗೂ ಗಮಕ ಗ್ರಾಮಗಳೆಂದೇ ಪ್ರಸಿದ್ಧವಾಗಿರುವ ಮತ್ತೂರು ಹಾಗೂ ನೆರೆಯ ಹೊಸಹಳ್ಳಿ ಗ್ರಾಮಗಳಲ್ಲಿ ನಮ್ಮ ಬಂಧುಮಿತ್ರರು ಅನೇಕರಿದ್ದಾರೆ. ಪರಂಪರಾಗತವಾಗಿ ಬೆಳೆದುಬಂದಿರುವ ಈ ಗಮಕಕಲೆಯ ಆಧುನಿಕ ಸಮಯದ ಹರಿಕಾರರೆಂದರೆ ಹೊಸಹಳ್ಳಿಯ ಹೆಚ್.ಆರ್.ಕೇಶವಮೂರ್ತಿಗಳು, ಮತ್ತೂರು ಕೃಷ್ಣಮೂರ್ತಿಗಳು, ರಾಘವೇಂದ್ರ ರಾವ್ , ಗಂಗಮ್ಮ ಕೇಶವಮೂರ್ತಿ, ಬಿ.ಎಸ್.ಎಸ್.ಕೌಶಿಕ್ ಮುಂತಾದವರು. ಇಂಥ ಗಮಕ—ಸಂಸ್ಕೃತ ಗ್ರಾಮವೆಂದು ಖ್ಯಾತಿವೆತ್ತ ಮತ್ತೂರು—ಹೊಸಹಳ್ಳಿ ಗ್ರಾಮಗಳು ತವರಾಗಿರುವ ನಮ್ಮ ಅತ್ಯಂತ ಆತ್ಮೀಯ ಸ್ನೇಹಿತರೆಂದರೆ ಡಾ॥ವೆಂಕಟೇಶ ಮೂರ್ತಿ ಹಾಗೂ ಶ್ಯಾಮಲಾ ದಂಪತಿಗಳು. ವೆಂಕಟೇಶ ಮೂರ್ತಿಗಳು ಆ ಭಾಗದಲ್ಲಿ ಬಹಳ ದೊಡ್ಡ ಹೆಸರು ಮಾಡಿರುವ ವೈದ್ಯರು; ಸಜ್ಜನರು. ಶ್ಯಾಮಲಾ ಹಾಗೂ ರಂಜನಿ ಕಾಲೇಜ್ ದಿನಗಳಲ್ಲಿ ಸಹಪಾಠಿಗಳೂ ಆಗಿದ್ದರು.
ಈ ಗ್ರಾಮದಲ್ಲಿ ಪ್ರತಿ ವರ್ಷವೂ ಬಹಳ ಶ್ರದ್ಧೆ ಉತ್ಸಾಹಗಳಿಂದ ರಾಮೋತ್ಸವವನ್ನು ಆಚರಿಸುತ್ತಾರೆ. ಊರವರೆಲ್ಲರೂ ಬಹಳ ಸಂಭ್ರಮದಿಂದ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಉತ್ಸವದ ಸಂದರ್ಭದಲ್ಲಿ ನಿತ್ಯವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. 2016—ಈ ವರ್ಷದ ರಾಮೋತ್ಸವ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಮತ್ತೂರಿನಲ್ಲಿ ರಾಧಿಕಾಳ ನೃತ್ಯ ಪ್ರದರ್ಶನವನ್ನು ಏರ್ಪಡಿಸಿದರು. ಅಂದಿನ ಸಂಜೆಯ ಕಲಾಪಗಳಿಗೆ ಚಾಲನೆಯನ್ನು ನೀಡುವ ಉದ್ಘಾಟನೆಯ ಜವಾಬ್ದಾರಿ ನನ್ನ ಹೆಗಲೇರಿತ್ತು. ರಾಧಿಕಾಳ ನೃತ್ಯ ಕಾರ್ಯಕ್ರಮದ ನಿರೂಪಣೆಯನ್ನು ರಂಜನಿ ನಿರ್ವಹಿಸುವವಳಿದ್ದಳು. ಅನಿರುದ್ಧನಿಗೆ ಅದು ಇಂಜಿನಿಯರಿಂಗ್ ಪದವಿಯ ಕೊನೆಯ ವರ್ಷ. ಮತ್ತೂರಿನಲ್ಲಿ ಕಾರ್ಯಕ್ರಮವಿದ್ದ ದಿನವೇ ಅವನ ಕಾಲೇಜಿನಲ್ಲಿಯೂ ವಿಶೇಷ ಸಮಾರಂಭ ಏರ್ಪಾಡಾಗಿದ್ದದ್ದರಿಂದ ಅವನು ಮತ್ತೂರಿಗೆ ಬರುವುದಿಲ್ಲ ಎಂದು ಹೇಳಿಬಿಟ್ಟಿದ್ದ. ಕಾರ್ಯಕ್ರಮ ಇದ್ದದ್ದು ನನಗೆ ನೆನಪಿರುವ ಮಟ್ಟಿಗೆ ಏಪ್ರಿಲ್ ಐದನೆಯ ತಾರೀಖು. ಕಾರ್ ನಲ್ಲಿಯೇ ಮೂವರೂ ಹೋಗಿ ಕಾರ್ಯಕ್ರಮ ಮುಗಿಸಿಕೊಂಡು ಒಂದು ದಿನ ಅಲ್ಲೇ ಉಳಿದು ಸಮೀಪದ ಬಂಧುಮಿತ್ರರನ್ನು ಭೇಟಿಯಾಗಿ 7 ರಂದು ಬೆಂಗಳೂರಿಗೆ ಮರಳುವುದೆಂದು ತೀರ್ಮಾನಿಸಿದೆವು.
ಆ ಸಮಯದಲ್ಲಿ ಇಬ್ರಾಹಿಂ ಎನ್ನುವವನು ನಮ್ಮ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ತುಂಬಾ ಒಳ್ಳೆಯ ಮನುಷ್ಯ. ಒಂದೇ ಒಂದು ದಿನವೂ ಕೆಲಸಕ್ಕೆ ತಪ್ಪಿಸಿಕೊಂಡವನಲ್ಲ. ಕೆಲಸದ ವೇಳೆಗೆ ಸಂಬಂಧಪಟ್ಟ ಹಾಗೆ ಕೊಂಚ ಏರುಪೇರುಗಳಾದರೂ ತಗಾದೆ ತೆಗೆಯುತ್ತಿರಲಿಲ್ಲ. ಒಂದೆರಡು ತಾಸು ಹೆಚ್ಚುವರಿ ಕೆಲಸವಾದರೆ ನಾವೇ ‘ಗಂಟೆಗೆ ಇಷ್ಟು’ ಎಂದು ಹೆಚ್ಚುವರಿ ಸಂಬಳ ಕೊಟ್ಟುಬಿಡುತ್ತಿದ್ದೆವು. ಹಾಗಾಗಿ ಯಾವುದೇ ಗೊಣಗಾಟಕ್ಕಾಗಲೀ ಕಿರಿಕಿರಿಗಾಗಲೀ ಅವಕಾಶವೂ ಇರಲಿಲ್ಲವೆನ್ನಿ. ನಾವು ಊರಿಗೆ ಹೋದ ಆ ಎರಡು ಮೂರು ದಿನಗಳು ಅನಿರುದ್ಧನನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬರುವ, ಬೇಕಾದಾಗ ತಿಂಡಿ ಊಟಗಳನ್ನು ತಂದುಕೊಡುವ ಜವಾಬ್ದಾರಿಯನ್ನು ಇಬ್ರಾಹಿಂಗೇ ಒಪ್ಪಿಸಿಬಿಟ್ಟೆವು. ಮೂರು ಹೆಣ್ಣುಮಕ್ಕಳ ತಂದೆಯಾಗಿದ್ದ ಇಬ್ರಾಹಿಂ ನಮ್ಮ ಮನೆಯಲ್ಲಿ ಎಲ್ಲರಿಗೂ ಹೊಂದಿಕೊಂಡು ಮನೆಯ ಸದಸ್ಯನಂತೆಯೇ ಆಗಿಬಿಟ್ಟಿದ್ದ. ರಂಜನಿಗೆ ಕಾಲೇಜ್ ಇಲ್ಲದಿದ್ದ ದಿನಗಳಲ್ಲಿ ನಾನು ಅವನನ್ನು ಶೂಟಿಂಗ್ ಗೆ ಕರೆದುಕೊಂಡು ಹೋಗುತ್ತಿದ್ದುದೂ ಉಂಟು. ಒಟ್ಟಿನಲ್ಲಿ ಮನೆಯಲ್ಲಿ ಎಲ್ಲರ ಎಲ್ಲ ಕೆಲಸಗಳಿಗೂ ಒದಗಿಬರುತ್ತಿದ್ದ ಇಬ್ರಾಹಿಂನನ್ನು ನಾನು ಸಮಯ ಸಂಜೀವಿನಿ ಎಂದೇ ತಮಾಷೆಯಾಗಿ ಕರೆಯುತ್ತಿದ್ದುದುಂಟು.
ಐದನೆಯ ತಾರೀಖು ಬೆಳಗಿನ ಜಾವವೇ ನಾವು ಮೂವರೂ ನಮ್ಮ ಕಾರ್ ನಲ್ಲಿ ಮತ್ತೂರಿನತ್ತ ಪ್ರಯಾಣ ಬೆಳೆಸಿದೆವು. ಅನಿರುದ್ಧನ ಓಡಾಟಕ್ಕೆ ಮತ್ತೊಂದು ಕಾರ್ ಹಾಗೂ ಸಾರಥಿ ಇಬ್ರಾಹಿಂ ಸಿದ್ಧರಾಗಿದ್ದರು!
ನಾವು ಮತ್ತೂರು ತಲುಪಿದಾಗ ಮಧ್ಯಾಹ್ನ ಎರಡು ಗಂಟೆಯ ಸಮಯ. ಡಾ॥ ವೆಂಕಟೇಶಮೂರ್ತಿಗಳು ಹಾಗೂ ಶ್ಯಾಮಲಾ ನಮ್ಮ ಬರವಿನ ಹಾದಿಯನ್ನೇ ಕಾಯುತ್ತಿದ್ದವರು ಸಂಭ್ರಮದಿಂದ ನಮ್ಮನ್ನು ಸ್ವಾಗತಿಸಿದರು. ಹೋದವರೇ ಊಟ ಮುಗಿಸಿ ಕೊಂಚ ವಿಶ್ರಾಂತಿ ಪಡೆದು ಸಂಜೆಯ ಕಾರ್ಯಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳತೊಡಗಿದೆವು. ಸಂಜೆ ಕಾರ್ಯಕ್ರಮದ ಉದ್ಘಾಟನೆಯನ್ನು ನಾನು ನೆರವೇರಿಸಿ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಸಹೃದಯರನ್ನು ಉದ್ದೇಶಿಸಿ ಸುಮಾರು ಅರ್ಧ ತಾಸು ಮಾತಾಡಿದೆ.
ಪ್ರಾಸಂಗಿಕವಾಗಿ ಒಂದು ಸಂಗತಿಯನ್ನು ಇಲ್ಲಿ ನೆನೆಯಬೇಕು: ಶ್ರೇಷ್ಠ ಗಮಕ ಕಲಾವಿದ ಎಂ ಆರ್ ಸತ್ಯನಾರಾಯಣ (ಶ್ರೇಷ್ಠ ಗಮಕಿ—ವಿದ್ವಾನ್ ರಾಘವೇಂದ್ರರಾಯರ ಸುಪುತ್ರ) ನನ್ನ ಆತ್ಮೀಯ ಗೆಳೆಯ. ಸೆಂಟ್ರಲ್ ಕಾಲೇಜ್ ನ ವಿದ್ಯಾರ್ಥಿದೆಸೆಯ ದಿನಗಳಿಂದಲೇ ಸ್ನೇಹವಲಯಕ್ಕೆ ಬಂದಿದ್ದ ಸತ್ಯಣ್ಣ ಅದು ಹೇಗೋ ಈ ಒಂದು ರಾಮೋತ್ಸವದ ಸಂದರ್ಭದಲ್ಲಿ ನನ್ನ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಗಮಕಕಲೆ ಹಾಗೂ ಅದರ ಇತಿಹಾಸ—ಬೆಳವಣಿಗೆಗಳ ಬಗ್ಗೆ ವಿಶೇಷ ತಿಳುವಳಿಕೆ ಇಲ್ಲದಿದ್ದ ನನಗೆ ಆಗ ನೆರವಿಗೆ ಒದಗಿಬಂದವರೆಂದರೆ ಕುಮುದವಲ್ಲಿ ಅರುಣ್. ಕುಮುದವಲ್ಲಿ ಅವರು ನಮ್ಮ ನಾಡಿನ ಸಾಂಸ್ಕೃತಿಕ ಲೋಕದಲ್ಲಿ ಚಿರಪರಿಚಿತ ಹೆಸರು; ಬಹುಮುಖ ಪ್ರತಿಭೆಯ ಕಲಾವಿದೆ. ಒಂದೆರಡು ಚಿತ್ರಗಳಲ್ಲಿ ನಾವು ಸಹಕಲಾವಿದರಾಗಿ ಅಭಿನಯಿಸಿದ್ದೂ ಉಂಟು. ಅವರ ತಂದೆಯವರಾದ ಸನ್ಮಾನ್ಯ ಎಂ ಎ ಜಯರಾಮರಾಯರು ಪ್ರಸಿದ್ಧ ಗಮಕಿಗಳು,ಶ್ರೇಷ್ಠ ವಿದ್ವಾಂಸರು, ಗಮಕಕಲೆಯನ್ನು ಕುರಿತು ಆಳವಾಗಿ ಅಧ್ಯಯನ ನಡೆಸಿದವರು. ಮತ್ತೂರಿನ ಕಾರ್ಯಕ್ರಮದ ಸಮಯದಲ್ಲಿ ಕುಮುದವಲ್ಲಿಯವರಿಂದ ರಾಯರ ಕೃತಿಗಳನ್ನು ಕೇಳಿ ಪಡೆದುಕೊಂಡು ಬಂದು ಗಮಕಕಲೆಗೆ ಸಂಬಂಧ ಪಟ್ಟಹಾಗೆ ಒಂದಷ್ಟು ಟಿಪ್ಪಣಿಗಳನ್ನು ಸಿದ್ಧಪಡಿಸಿಕೊಂಡಿದ್ದೆ! ಹಾಗಾಗಿ ನಿರ್ವಿವಾದವಾಗಿ ಗಮಕಕಲೆಗೆ ಸಂಬಂಧಪಟ್ಟ ಹಾಗೆ ಅಧಿಕೃತ ವಿಚಾರಗಳೂ ವಿಶೇಷ ಸಂಗತಿಗಳೂ ನನ್ನ ಭಾಷಣದಲ್ಲಿ ಮಿಳಿತವಾಗಿದ್ದರಿಂದ ಸಹಜವಾಗಿಯೇ ಗಮಕಗ್ರಾಮದ ಸಹೃದಯರಿಗೆಲ್ಲಾ ತುಂಬಾ ಮೆಚ್ಚುಗೆಯಾಯಿತು.
ನಂತರ ರಂಜನಿಯ ಸಾರಥ್ಯದಲ್ಲಿ ರಾಧಿಕಾ ಭರತನಾಟ್ಯದಲ್ಲಿ ಕೆಲವಾರು ಕೃತಿಗಳನ್ನು ಸಾದರಪಡಿಸಿ ಸಹೃದಯರ ಮನಸೂರೆಗೊಂಡಳು.
ಕಾರ್ಯಕ್ರಮ ಮುಗಿದ ಮೇಲೆ ವೆಂಕಟೇಶ ಮೂರ್ತಿಗಳ ಅಣ್ಣನವರ ಮನೆಯಲ್ಲಿ ಊಟ ಮುಗಿಸಿ ಹಾಗೇ ಹರಟುತ್ತಾ ಕುಳಿತೆವು. ಅರ್ಥಪೂರ್ಣ ಸಾಹಿತ್ಯಿಕ—ಸಾಂಸ್ಕೃತಿಕ ಹರಟೆಯಲ್ಲಿ ನಮಗೆ ಜೊತೆಯಾಗಿದ್ದವರು ಸಾಹಿತಿಗಳೂ ಪತ್ರಕರ್ತರೂ ಆದ ಹೊಸಹಳ್ಳಿ ನಾಗರಾಜು ಹಾಗೂ ರಾಜಾರಾಮಮೂರ್ತಿಗಳು. ಹಾಗೆ ಹರಟುತ್ತಾ ಕುಳಿತಿರುವಾಗಲೇ ದಾಸರ ಪದವೊಂದು ಹಿತವಾಗಿ ಗಾಳಿಯಲ್ಲಿ ತೇಲಿಬಂತು. ಆಗ ರಾತ್ರಿ ಸುಮಾರು ಹನ್ನೊಂದರ ಸಮಯ. ಕುತೂಹಲದಿಂದ ಆಚೆ ಬಂದು ನೋಡಿದರೆ ಎರಡು ಮನೆಗಳ ಆಚಿನ ಮನೆಯೊಂದರ ಜಗಲಿಗಳ ಮೇಲೆ ಹಲವಾರು ಸಹೃದಯರು ಸೇರಿದ್ದಾರೆ! ಒಬ್ಬರು ಭಾವಪೂರ್ಣವಾಗಿ ದಾಸರ ಪದಗಳನ್ನೂ ಭಜನೆಗಳನ್ನೂ ಹಾಡುತ್ತಿದ್ದಾರೆ! ನೆರೆದವರು ಅವರಿಗೆ ಸಹಗಾಯನದ ಸಾಥ್ ನೀಡುತ್ತಿದ್ದಾರೆ! ಅಂಥದೊಂದು ಸಂಗೀತದ ಅನೌಪಚಾರಿಕ ಗೋಷ್ಠಿ ಪಕ್ಕದಲ್ಲೇ ನಡೆಯುತ್ತಿರಬೇಕಾದರೆ ಸುಮ್ಮನೆ ಕೂರುವುದಾದರೂ ಸಾಧ್ಯವೇ? ತಕ್ಷಣವೇ ಎಲ್ಲರೂ ಎದ್ದುಹೋಗಿ ಗೋಷ್ಠಿಯನ್ನು ಸೇರಿಕೊಂಡೆವು. ಹೆಚ್ಚುಕಡಿಮೆ ಆ ಮತ್ತು ಅಕ್ಕಪಕ್ಕದ ಓಣಿಯವರೆಲ್ಲಾ ಅಲ್ಲಿ ನೆರೆದಿದ್ದರು. ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಗೋಷ್ಠಿ ಮುಂದುವರೆಯಿತು. ಸರದಿಯ ಪ್ರಕಾರ ಅಲ್ಲಿದ್ದ ಗಾಯಕರು ಭಾವಪೂರ್ಣವಾಗಿ ಹಾಡುತ್ತಿದ್ದರು. ಮನೆಯ ಜಗಲಿಯ ಮೇಲೆ, ಆಗಸದ ಚಂದಿರನ ಬೆಳದಿಂಗಳ ಮಂದ ಬೆಳಕಿನಲ್ಲಿ ನಡೆಯುತ್ತಿದ್ದ ಆ ಸಂಗೀತ ಗೋಷ್ಠಿ ಚೇತೋಹಾರಿಯಾಗಿತ್ತು. ಯಾವ ಅಬ್ಬರ—ಆಡಂಬರಗಳಿಲ್ಲದ ಸರಳ ಸುಂದರ ಪ್ರಸ್ತುತಿಗಳು, ಮೆಲುದನಿಯ ಉದ್ಗಾರ-ಮೆಚ್ಚುಗೆ…ಅದೊಂದು ಬೇರೆಯದೇ ವಿಶಿಷ್ಟ ಜಗತ್ತು. ಆಗಾಗ್ಗೆ ಹೀಗೆ ಮನೆಗಳ ಜಗಲಿಗಳಲ್ಲಿ ಗೋಷ್ಠಿಗಳು ನಡೆಯುತ್ತಲೇ ಇರುತ್ತವಂತೆ. ನಮ್ಮ ಕಾಂಕ್ರೀಟ್ ನಗರಿಯಲ್ಲಿ ಇಂಥದೊಂದು ಗೋಷ್ಠಿ ಕಲ್ಪನೆಗೂ ನಿಲುಕದ್ದು. ‘ಆಹಾ! ಅದೆಂಥಾ ಪುಣ್ಯವಂತರು’ ಎಂದು ಮನಸ್ಸಿನಲ್ಲೇ ಸಾತ್ವಿಕವಾಗಿ ‘ಕರುಬು’ತ್ತಿರುವಾಗಲೇ ಮನೆಯೊಳಗಿನಿಂದ ಇಬ್ಬರು ಬಾಲೆಯರು ಕಾಫಿ ಕಪ್ ಗಳ ಟ್ರೇಗಳೊಂದಿಗೆ ಪ್ರತ್ಯಕ್ಷರಾದರು! ನಡುರಾತ್ರಿಯಲ್ಲಿ, ಬೆಳದಿಂಗಳ ತಂಪಿನಲ್ಲಿ, ಮಧುರ ನಾದದಲೆಗಳ ನವುರು ಸ್ಪರ್ಶದಲ್ಲಿ ಸುಖಿಸುತ್ತಿರುವಾಗಲೇ ರಸಾಸ್ವಾದವನ್ನು ಉದ್ದೀಪನಗೊಳಿಸುವಂತೆ ಹಬೆಯಾಡುತ್ತಿದ್ದ ಬಿಸಿ ಬಿಸಿ ಕಾಫಿ! ನಾನೂ ರಂಜನಿಯೂ ಈ ರಮ್ಯ ವಾತಾವರಣದಲ್ಲಿ ಅಕ್ಷರಶಃ ಕಳೆದೇಹೋದೆವು ಎನ್ನಬೇಕು! ಕಾಫಿ ಹೀರಿದ ಮೇಲೆ ಮತ್ತಷ್ಟು ಹೊತ್ತು ಗೋಷ್ಠಿ ಮುಂದುವರಿಯಿತು. ನಾನೂ ಒಂದೆರಡು ಭಕ್ತಿಗೀತೆಗಳನ್ನು ಹಾಡಿದೆ. ನಡುರಾತ್ರಿ ಸುಮಾರು ಒಂದೂವರೆಯ ಹೊತ್ತಿಗೆ ಮನಸ್ಸಿಲ್ಲದ ಮನಸ್ಸಿನಿಂದ ಮಂಗಳ ಹಾಡಿ ಎಲ್ಲರೂ ಸ್ವಗೃಹಗಳಿಗೆ ತೆರಳಿದರು. ಆ ನಾದೋಪಾಸನೆ, ನಂತರ ಅನುಭವಿಸಿದ ದಿವ್ಯ ಅನುಭೂತಿ, ಮನಸ್ಸನ್ನಾವರಿಸಿದ ಪರಮ ಶಾಂತಿಯ ಭಾವ ಬಲು ಅಪರೂಪದ್ದು…ಮತ್ತೆ ಮತ್ತೆ ನೆನೆಯುವಂಥದ್ದು..ಪುನರಾವರ್ತನೆಗೆ ಹಾತೊರೆಯುವಂಥದ್ದು!!
ಅಂದು ರಾತ್ರಿ ಮಲಗಿದೊಡನೆ ನನಗೆ ನಿದ್ರೆ ಬಂದುಬಿಟ್ಟಿತು. ಬೆಳಗಿನ ಜಾವದ ಹಾಗೆ ಏನೋ ಸಣ್ಣನೆ ನರಳಾಟ..ಸಣ್ಣಗೆ ಬಿಕ್ಕಿದಂತೆ ಭಾಸವಾಗಿ ಎಚ್ಚರವಾಗಿ ಹೊರಳಿ ನೋಡಿದರೆ ರಂಜನಿ ನಿದ್ರೆಯಲ್ಲಿ ಕನವರಿಸಿಕೊಳ್ಳುತ್ತಿದ್ದಳು. ಅವಳು ಏನೇನೋ ಒಂದೇ ಉಸಿರಿನಲ್ಲಿ ಹೇಳುತ್ತಿದ್ದರೂ ಒಂದೇ ಒಂದು ಶಬ್ದವೂ ಅರ್ಥವಾಗುವಂತಿರಲಿಲ್ಲ…ಗಜಬಜ ಗಜಬಜ…ಒಂದಷ್ಟು ಧ್ವನಿಸಮುಚ್ಚಯಗಳ ಹಾಗೆ. ಆದರೆ ಅವಳ ಮುಖದ ಮೇಲೆ ಮಾತ್ರ ನೋವಿನ ಗೆರೆಗಳು ಢಾಳಾಗಿ ಮೂಡಿದ್ದು ಕಿಟಕಿಯಿಂದ ತೂರಿಬರುತ್ತಿದ್ದ ಬೆಳದಿಂಗಳ ಮಂದಬೆಳಕಿನಲ್ಲಿಯೂ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಹಾಗೇ ತುಸು ಹೊತ್ತು ಅವಳನ್ನು ಗಮನಿಸಿದೆ. ಅವಳಿಗೆ ಕೊಂಚ ಸಮಾಧಾನವಾದಂತನ್ನಿಸಿ ನಾನೂ ಅಡ್ಡಲಾದೆ. ಕೆಲವೇ ಕ್ಷಣಗಳಲ್ಲಿ ಮತ್ತದೇ ಪುನರಾವರ್ತನೆ..ಅದೇ ನೋವಿನ ನರಳಾಟ..ಆತಂಕದ ತೊದಲುನುಡಿಗಳು. ಯಾಕೋ ಸುಮ್ಮನಿರಲಾಗಲಿಲ್ಲ. ಏನು ಹಿಂಸೆಯಾಗುತ್ತಿದೆಯೋ ಏನೋ ಎಂದು ಆತಂಕವಾಗಿ ಮೆಲ್ಲಗೆ ಅವಳನ್ನು ತಟ್ಟಿ ಎಬ್ಬಿಸಿದೆ. ಧಿಗ್ಗನೆದ್ದು ಕುಳಿತ ಅವಳು ಅರೆಚಣ ನನ್ನನ್ನೇ ದಿಟ್ಟಿಸಿ ನಂತರ ತಿಳಿವು ಬಂದವಳಂತೆ, ‘ಮಲಕ್ಕೊಳಿ ಪ್ರಭೂಜೀ..ಏನಿಲ್ಲ…ಕೆಟ್ಟಕನಸು ಅಷ್ಟೇ’ ಎಂದುಸುರಿ ಮಗ್ಗುಲಾದಳು. ಅವಳು ಆಗಾಗ್ಗೆ ಹೀಗೆ ಕನಸಿ ಕನವರಿಸುವುದು ನನಗೆ ರೂಢಿಯಾಗಿದ್ದರಿಂದ ನಾನೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮಲಗಿಬಿಟ್ಟೆ.
ಮರುದಿನ ಡಾ॥ವೆಂಕಟೇಶ ಮೂರ್ತಿ ಹಾಗೂ ಶ್ಯಾಮಲಾರೊಂದಿಗೆ ಹೋಗಿ ಅಲ್ಲಿಯೇ ಇದ್ದ ನನ್ನ ಸೋದರಸಂಬಂಧಿಗಳನ್ನು ಭೇಟಿಯಾಗಿ ಬಂದೆವು. ಬಡಜನರಿಗೆ ವಿಶೇಷ ಸೇವೆ ಸಲ್ಲಿಸುತ್ತಿರುವ ಕಣ್ಣಿನ ಆಸ್ಪತ್ರೆಗೂ ನಮ್ಮನ್ನು ಕರೆದುಕೊಂಡು ಹೋಗಿ ಅಲ್ಲಿನ ಕಾರ್ಯವಿಧಾನವನ್ನೂ ಅವರು ಸಲ್ಲಿಸುತ್ತಿರುವ ಸಾರ್ಥಕ ಸೇವೆಯನ್ನೂ ಬಡಜನತೆಗೆ ಅದರಿಂದಾಗುತ್ತಿರುವ ಅನುಕೂಲಗಳನ್ನೂ ವಿವರಿಸಿ ಹೇಳಿದರು ಡಾ॥ ಮೂರ್ತಿಗಳು. ಸಂಜೆ ಹೊಳೆದಂಡೆಯಲ್ಲಿ ಒಂದಷ್ಟು ಹೊತ್ತು ಅಡ್ಡಾಡಿ ರಾತ್ರಿ ವಿಶ್ರಾಂತಿ ಪಡೆದು ಮರುದಿನ ಬೆಳಿಗ್ಗೆ ಬೆಂಗಳೂರಿಗೆ ಹೊರಟೆವು. ನಾನು ಡಾ॥ಮೂರ್ತಿ ಅವರನ್ನು ಆಗೊಮ್ಮೆ ಈಗೊಮ್ಮೆ ನೋಡಿದ್ದಿರಬಹುದಾದರೂ ಹತ್ತಿರದಿಂದ ನೋಡಿ ಅವರೊಟ್ಟಿಗೆ ಕೂತು ಮಾತಾಡಿದ್ದು ಅದೇ ಮೊದಲು. ನಿಜಕ್ಕೂ ಡಾ॥ವೆಂಕಟೇಶಮೂರ್ತಿಗಳು ಅಪ್ರತಿಮ ವೈದ್ಯರಷ್ಟೇ ಅಲ್ಲ, ಅದ್ಭುತ ಮನುಷ್ಯ ಕೂಡಾ. ಅವರ ಸಜ್ಜನಿಕೆ, ಸರಳತೆ, ಜನರ ಕಷ್ಟಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಹೃದಯವಂತಿಕೆ, ಎಂಥ ಸಮಯದಲ್ಲೂ ಮಾಸದ ಮಂದಹಾಸ, ಅವರ ಸ್ನೇಹಪರತೆ…ಎಲ್ಲವೂ ಒಂದು ಮಾದರಿ. ಅವರೇಕೆ ಅಷ್ಟು ಜನಪ್ರಿಯ ವೈದ್ಯರೆಂಬುದಕ್ಕೆ ನಮಗೆ ಪ್ರತ್ಯಕ್ಷ ಸಾಕ್ಷಿ ದೊರೆತಂತಾಯಿತು! ಪತಿಗೆ ತಕ್ಕ ಸತಿ ಶ್ಯಾಮಲಾ. ಸಮರಸದ, ಸಮಾನಾಭಿರುಚಿಯ ಅನುರೂಪ ದಾಂಪತ್ಯ ಅವರದು. ನಿಜ ಹೇಳಬೇಕೆಂದರೆ ಅವರಿಂದ ಬೀಳ್ಕೊಂಡು ಮರಳಿ ಹೊರಟುಬರುವುದೇ ತುಂಬಾ ಕಷ್ಟವಾಗಿಹೋಯಿತು ನಮಗೆ. ಆದರೆ ರಾಧಿಕಾಳೂ ಶಾಲೆಗೆ ರಜೆ ಹಾಕಿ ಬಂದದ್ದರಿಂದ ಅಂದು ಹೊರಟುಬರುವುದು ಅನಿವಾರ್ಯವಾಗಿತ್ತು . ಜತೆಗೆ ಮಗರಾಯನನ್ನು ಒಬ್ಬನನ್ನೇ ಬೇರೆ ಬಿಟ್ಟುಬಂದಿದ್ದೆವಲ್ಲಾ..ಹೀಗಾಗಿ ಭಾರವಾದ ಮನಸ್ಸಿನಿಂದ ಡಾ॥ದಂಪತಿಗಳಿಗೆ ವಿದಾಯ ಹೇಳಿ ಊರಿಗೆ ಹೊರಟುಬಂದೆವು. ದಾರಿಯುದ್ದಕ್ಕೂ ಕಳೆದ ಮೂರುದಿನಗಳ ನಮ್ಮ ದಿನಚರಿಯನ್ನು, ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕಿದ್ದೇ ಹಾಕಿದ್ದು!
“ಯಾವ ದುಃಖದ ಕ್ಷಣವೂ ಸದಾ ಉಳಿಯುವಂಥದ್ದಲ್ಲ, ಅದು ಕಳೆದು ಸುಖದ ಗಳಿಗೆಗಳು ನಮ್ಮನ್ನು ಸ್ವಾಗತಿಸುತ್ತವೆ..ಚಿಂತೆ ಬೇಡ” ಎಂಬ ಆಶಾಭಾವದ ತಾತ್ವಿಕ ಮಾತುಗಳನ್ನು ಸಾಕಷ್ಟು ಬಾರಿ ಕೇಳಿದ್ದೆ. ಆ ಸಮಯದಲ್ಲೆಲ್ಲಾ “ಇದರ ವಿರುದ್ಧವಾಗಿಯೂ ಸಹಾ ಬದುಕು ನಡೆಯಬಹುದಲ್ಲವೇ? ಸುಖ ಸದಾ ಉಳಿಯದೇ ದುಃಖ ಧುತ್ತೆಂದು ಆವರಿಸಬಹುದಲ್ಲವೇ? ಎಂಬ ಹಾಳು ಯೋಚನೆಯೂ ಸುಳಿದಿರುವುದುಂಟು. ಯೋಚನೆಯ ಮಟ್ಟದಲ್ಲೇ ಅದು ಉಳಿದಾಗ “ಈ ಪ್ರಜ್ಞೆ, ಈ ತಿಳುವಳಿಕೆ ನಮ್ಮಲ್ಲಿರುವುದೇ ವಿಶೇಷ” ಎಂದು ನಮ್ಮ ಬೆನ್ನು ನಾವೇ ತಟ್ಟಿಕೊಂಡು ಸುಖಿಸಬಹುದು. ಆದರೆ ಅಂತಹ ಪ್ರಸಂಗ ವಾಸ್ತವದಲ್ಲಿ ಕಣ್ಣೆದುರಿಗೇ ಧುಮುಕಿಬಿಟ್ಟರೆ ???
|ಮುಂದಿನ ವಾರಕ್ಕೆ |






0 Comments