ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ: ಬದುಕು ಇರುವುದೇ ಹಾಗೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು.

ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 151

ಈ ಕಾಲಘಟ್ಟದಲ್ಲಿ ನಾನು ಅಭಿನಯಿಸಿದ ಕೆಲ ಮುಖ್ಯ ಚಿತ್ರಗಳಲ್ಲಿ ಯಶ್ ನಾಯಕ ನಟರಾಗಿ ಅಭಿನಯಿಸಿದ್ದ ‘ಗಜಕೇಸರಿ’ ಹಾಗೂ ‘ ‘ ಚಿತ್ರಗಳು ಪ್ರಮುಖವಾದವು.

ಆನೆಗುಡ್ಡೆ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಗುಡ್ಡಗಾಡು ಜನಾಂಗದವರನ್ನು ಎತ್ತಂಗಡಿ ಮಾಡಿಸಿ ಅಲ್ಲೊಂದು ರೆಸಾರ್ಟ್ ನಿರ್ಮಿಸಬೇಕೆಂಬುದು ಸ್ಥಳೀಯನೇ ಆದ ದುಷ್ಟ ರಾಣಾ ನ ಮಸಲತ್ತು. ಅದಕ್ಕೆ ಪ್ರತಿರೋಧವೊಡ್ಡಿ ಕಾಡುಜನರನ್ನು ರಕ್ಷಣೆ ಮಾಡುವವನೇ ಕಥಾನಾಯಕ ಕೃಷ್ಣ ಅಲಿಯಾಸ್ ಯಶ್! ಇದು ಸ್ಥೂಲವಾಗಿ “ಗಜಕೇಸರಿ” ಚಿತ್ರದ ಕಥಾಹಂದರ. ಇಂಥದೊಂದು ಗಟ್ಟಿಕಥೆಗೆ ಒಂದಷ್ಟು ರಮ್ಯ ಕಲ್ಪನಾತ್ಮಕ ಅಂಶಗಳನ್ನೂ ಸೇರಿಸಿ ಒಂದೊಳ್ಳೆಯ ವ್ಯಾಪಾರಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದ ನಿರ್ಮಾಪಕರು ಜಯಣ್ಣ ಹಾಗೂ ಭೋಗೇಂದ್ರ ಅವರು. ತರುಣ್ ಸುಧೀರ್ ಹಾಗೂ ಕೃಷ್ಣ ಅವರ ಚಿತ್ರಕಥೆ; ಕೃಷ್ಣ ಅವರದೇ ನಿರ್ದೇಶನ. ಯಶ್, ಅಮೂಲ್ಯ ಹಾಗೂ ಅನಂತನಾಗ್ ಮುಖ್ಯ ತಾರಾಗಣದಲ್ಲಿ; ಮಿಕ್ಕಂತೆ ಪೋಷಕ ಕಲಾವಿದರ ದಂಡೇ ‘ಗಜಕೇಸರಿ’ಯ ತಾರಾಗಣದಲ್ಲಿತ್ತು. ನಾನು ನಿರ್ವಹಿಸಿದ್ದು ಒಬ್ಬ ಡಿ ಸಿ ಯ ಪಾತ್ರ. ಎರಡು ಮೂರು ದೃಶ್ಯಗಳಷ್ಟೇ ಇದ್ದರೂ ಚಿತ್ರದ ಕಥೆಯ ಓಟದಲ್ಲಿ ತಿರುವಿಗೆ ಕಾರಣವಾಗುವಂತಹ ಪಾತ್ರ ನನ್ನದಾಗಿತ್ತು. ದೃಶ್ಯಗಳೂ ಸಹಾ ಸಾಕಷ್ಟು ಗಟ್ಟಿಯಾಗಿದ್ದು ಯಶ್ ಅವರೊಂದಿಗೆ ತೆರೆ ಹಂಚಿಕೊಳ್ಳುವ ದೃಶ್ಯಗಳೇ ಆಗಿದ್ದವು.

ಒಂದು ಸ್ವಾರಸ್ಯಕರ ಸಂಗತಿ ನೆನಪಾಗುತ್ತಿದೆ ನನಗೆ:
ನನ್ನ ಹಾಗೂ ಯಶ್ ನಡುವಿನ ಒಂದು ದೃಶ್ಯದ ಚಿತ್ರೀಕರಣದ ಸಿದ್ಧತೆ ಹೊರಾಂಗಣದಲ್ಲಿ ನಡೆದಿತ್ತು. ನಾನು ಮೇಕಪ್ ಮಾಡಿಕೊಂಡು ದೃಶ್ಯದ ಸಂಭಾಷಣೆಗಳನ್ನು ಮನನ ಮಾಡಿಕೊಳ್ಳುತ್ತಿದ್ದೆ. ಅದೇ ವೇಳೆಗೆ ಅಲ್ಲಿಗೆ ಬಂದ ಯಶ್ ಅವರು, “ಪ್ರಭು ಸರ್ ಬನ್ನಿ..ಒಂದು ರಿಹರ್ಸಲ್ ಮಾಡಿಕೊಂಡು ಬಿಡೋಣ” ಎಂದರು! ಸರಿ, ಇಬ್ಬರೂ ನಮ್ಮ ನಮ್ಮ ಸಂಭಾಷಣೆಗಳನ್ನು ಜೋರಾಗಿ ಓದುತ್ತಾ ಮನನ ಮಾಡಿಕೊಳ್ಳುತ್ತಾ ರಿಹರ್ಸಲ್ ಮಾಡಿಕೊಳ್ಳತೊಡಗಿದೆವು! ಅದೇ ವೇಳೆಗೆ ನಮ್ಮನ್ನು ಕರೆಯಲು ಬಂದ ತರುಣ್ ಅವರಿಗೆ ನಾಟಕದ ರೀತಿಯಲ್ಲಿ ನಾವು ರಿಹರ್ಸಲ್ ನಡೆಸುತ್ತಿದ್ದುದು ನೋಡಿ ಆಶ್ಚರ್ಯ! “ಸ್ಪಾಟ್ ನಲ್ಲೇ ಸಂಭಾಷಣೆ ನೋಡಿಕೊಳ್ಳಬಹುದಲ್ಲಾ” ಎಂದು ಅವರಂದರೆ ಯಶ್ ಅವರು, “ಅಲ್ಲಿ ಮಾಡಿಕೊಳ್ಳೋದು ಇದ್ದೇ ಇದೆ; ನಾಲ್ಕು ಸಲ ದೃಶ್ಯ ಓದಿಕೊಂಡು ಬಿಟ್ಟರೆ ಮಾತುಗಳು familiarise ಆಗಿಬಿಡುತ್ವೆ; ಟೇಕ್ ಸಮಯದಲ್ಲಿ ಹೆಲ್ಪ್ ಆಗುತ್ತೆ” ಎಂದರು! ಅವರ ಆ ಬದ್ಧತೆಯ ಮಾತುಗಳನ್ನು ಕೇಳಿ ನಿಜಕ್ಕೂ ತುಂಬಾ ಖುಷಿಯಾಯಿತು! ಇದು ಸಾಮಾನ್ಯವಾಗಿ ಒಬ್ಬ ಪ್ರಚಂಡ ಯಶಸ್ವೀ ನಾಯಕ ನಡೆದುಕೊಳ್ಳುವ ರೀತಿ ಖಂಡಿತ ಅಲ್ಲವೇ ಅಲ್ಲ!!! ಆಮೇಲೆ ನೆನಪಾಯಿತು: ಯಶ್ ಅಭಿನಯತರಂಗ ನಾಟಕ ಶಾಲೆಯಲ್ಲಿ ಕಲಿತವರು; (ಬಹುಶಃ ನಾನೂ ಒಂದಷ್ಟು ದಿನ ಪಾಠ ಮಾಡಿದ್ದೆನೇನೋ) ಅಂದಮೇಲೆ ನಾಟಕದ ಸಂಸ್ಕಾರ ಬಿಟ್ಟುಹೋಗುವುದಾದರೂ ಹೇಗೆ?? ಯಶ್ ಅವರ ಜತೆಗಿನ ಎರಡೂ ದೃಶ್ಯಗಳ ಚಿತ್ರಣ ಬಹಳ ಚೆನ್ನಾಗಿ ಆಯಿತು; ದೃಶ್ಯಗಳು ತುಂಬಾ ಪ್ರಭಾವಿಯಾಗಿ ಹಾಗೂ ಶಕ್ತಿಯುತವಾಗಿ ಮೂಡಿಬಂದವು.

ಯಶ್ ಅವರೊಟ್ಟಿಗೆ ನಾನು ಅಭಿನಯಿಸಿದ ಮತ್ತೊಂದು ಚಿತ್ರವೆಂದರೆ “ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ. ನಾನು ಅಭಿನಯಿಸಿದ್ದು. ಕಾಲೇಜ್ ಪ್ರಿನ್ಸಿಪಾಲರ ಪಾತ್ರದಲ್ಲಿ. ಯಶ್, ರಾಧಿಕಾ ಪಂಡಿತ್, ಅಚ್ಯುತಕುಮಾರ್, ಶ್ರೀನಾಥ್ ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದರು. ಈ ಚಿತ್ರದ ನಿರ್ಮಾಪಕರೂ ಸಹಾ ಜಯಣ್ಣ ಹಾಗೂ ಭೋಗೇಂದ್ರ ಅವರೇ. ಸಂತೋಷ್ ಆನಂದ್ ರಾಮ್ ಅವರು ಚಿತ್ರದ ನಿರ್ದೇಶಕರು. ಚಿತ್ರಕಥೆ ಗಟ್ಟಿಯಾಗಿದ್ದರೆ ಚಿತ್ರವನ್ನು ಗೆಲ್ಲಿಸುವುದು ಸುಲಭ ಎಂಬುದಕ್ಕೆ ಸಂತೋಷ್ ಅವರ ಈ ಚಿತ್ರವೇ ಸಾಕ್ಷಿ. ಅದಾಗಲೇ ಯಶಸ್ವೀ ನಾಯಕರಾಗಿ ರೂಪುಗೊಂಡಿದ್ದ ಯಶ್ ಅವರು ಈ ಚಿತ್ರದಿಂದ ಸೂಪರ್ ಸ್ಟಾರ್ ಆಗಿಬಿಟ್ಟರು. ನನ್ನ ಪಾತ್ರದ ಸಂಭಾಷಣೆಯೊಂದು ವೈರಲ್ ಆಗಿ ಬಲು ಜನಪ್ರಿಯವಾದದ್ದೊಂದು ವಿಶೇಷ ಸಂಗತಿ: “ಆ ಕಾಲದಲ್ಲಿ ಆ ರಾಮಾಚಾರಿ ಈ ಕಾಲದಲ್ಲಿ ಈ ರಾಮಾಚಾರಿ”!! ಆ ಕಾಲದ ‘ನಾಗರಹಾವು’ ರಾಮಾಚಾರಿ ವಿಷ್ಣುವರ್ಧನ್ ಅವರನ್ನು ನೆನೆಯುವ ಈ ಒಂದು ಮಾತು ರಸಿಕರಿಗೆ ಅದಾವ ಪರಿಯಲ್ಲಿ ಇಷ್ಟವಾಗಿಬಿಟ್ಟಿತೆಂದರೆ ಈಗಲೂ ಅನೇಕರು ಈ ಮಾತನ್ನು, ಈ ಚಿತ್ರವನ್ನು ನೆನಪಿಸಿಕೊಳ್ಳುತ್ತಾರೆ.

ಈ ನಡುವೆ ಹೊಸ ಮನೆಗೆ, ಹೊಸಬಗೆಯ ಜೀವನಕ್ರಮಕ್ಕೆ ಹೊಂದಿಕೊಳ್ಳುವ ಪ್ರಯತ್ನಗಳು ಮುಂದುವರಿದೇ ಇದ್ದವು. ನಾವು ಹಿಂದೆಂದೂ ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸಿರಲಿಲ್ಲವಾಗಿ ಆ ಜೀವನಶೈಲಿಗೆ ಹೊಂದಿಕೊಳ್ಳುವುದು ಬಹಳವೇ ಕಷ್ಟವಾಯಿತು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಒಂದು ದಶಕದ ನಂತರವೂ ನಮಗೆ ಈ ಜೀವನಕ್ರಮ ಪೂರ್ಣವಾಗಿ ಹೊಂದಿಕೆಯಾಗಿದೆ ಎಂದು ಗಟ್ಟಿದನಿಯಲ್ಲಿ ಹೇಳಲಾರೆ! ಇದು ಅವರವರ ಮನೋಧರ್ಮಕ್ಕೂ ಸಂಬಂಧಪಟ್ಟ ವಿಷಯ ಅನ್ನುವುದು ಸತ್ಯಸ್ಯ ಸತ್ಯ. ಏಕೆಂದರೆ ನಮ್ಮ ಆತ್ಮೀಯರೊಬ್ಬರು ಅಪಾರ್ಟ್ ಮೆಂಟ್ ಬದುಕಿಗೆ ಅದಾವ ಪರಿಯಲ್ಲಿ ಹೊಂದಿಕೊಂಡು ಬಿಟ್ಟಿದ್ದರೆಂದರೆ ಅವರ ಮಗ ಒಳ್ಳೆಯ ಬಡಾವಣೆಯಲ್ಲಿ ಅರಮನೆಯಂಥ ಮನೆ ಕಟ್ಟಿ ಇವರನ್ನು ಅಲ್ಲಿಗೆ ಕರೆದುಕೊಂಡು ಹೋದರೆ ನಾಲ್ಕು ದಿನದಲ್ಲೇ ಇವರಿಗೆ ಖಿನ್ನತೆ ಆವರಿಸಿಕೊಂಡುಬಿಟ್ಟಿತು! ಶತಾಯಗತಾಯ ಏನೇ ಪ್ರಯತ್ನಪಟ್ಟರೂ ಸ್ವತಂತ್ರ ಮನೆಯ ವಾತಾವರಣ ಅವರಿಗೆ ಹಿಡಿಸಲೇ ಇಲ್ಲ! ಮತ್ತೆ ಅವರು ತಮ್ಮ ಹಳೆಯ ಅಪಾರ್ಟ್ ಮೆಂಟ್ ಗೆ ವಾಸ್ತವ್ಯವನ್ನು ಬದಲಿಸಿದ ಮೇಲೇ ಅವರ ಮುಖದಲ್ಲಿ ನಗು ಅರಳಿದ್ದು. ನಮಗೆ ಮಾತ್ರ ಇದು ನಂಬಲಾಗದಂತಹ ಸೋಜಿಗದ ಸಂಗತಿಯಾಗಿತ್ತು. ಅದಕ್ಕೆ ತಕ್ಕಂತೆ ಪ್ರಾರಂಭದ ದಿನಗಳಲ್ಲೇ ಸಣ್ಣಪುಟ್ಟ ಕಿರಿಕಿರಿಗಳೂ ಎದುರಾದವು.

ರಂಜನಿಗೆ ಮನೆಯ ಪೀಠೋಪಕರಣಗಳನ್ನು ಆಗಾಗ್ಗೆ ಸ್ಥಾನಪಲ್ಲಟಗೊಳಿಸಿ ಹೊಸ ವಿನ್ಯಾಸದಲ್ಲಿ ಜೋಡಿಸುವುದು ಬಹಳ ಪ್ರಿಯವಾದ ಹವ್ಯಾಸ. ಆಗಾಗ್ಗೆ ಹೀಗೆ ಪೀಠೋಪಕರಣಗಳ ಎಳೆದಾಟ ತಳ್ಳಾಟಗಳು ನಡೆದೇ ಇದ್ದವು. ನಮ್ಮ ಮನೆ ಇರುವುದು ಐದನೆಯ ಮಹಡಿಯಲ್ಲಿ. ಒಂದು ದಿನ ನಮ್ಮ ಮನೆಯ ಕೆಳಗೆ ನಾಲ್ಕನೇ ಮಹಡಿಯಲ್ಲಿರುವವರಿಂದ ನಮಗೆ ಫೋನ್ ಕರೆ ಬಂದಿತು: “ನೀವು ನಿಮ್ಮ ಸೋಫಾ ಟೇಬಲ್ ಇತ್ಯಾದಿಗಳನ್ನು ತುಂಬಾ ಎಳೆದಾಡುತ್ತೀರಿ; ವಿಪರೀತ ಸದ್ದಾಗುತ್ತದೆ; ನಮಗೆ ತುಂಬಾ ಕಷ್ಟವಾಗುತ್ತಿದೆ; ಸ್ವಲ್ಪ ನಿಮ್ಮ ಎಳೆದಾಟ ನಿಲ್ಲಿಸಿ”! ರಂಜನಿಗಂತೂ ಸಿಟ್ಟೇ ಬಂದುಬಿಟ್ಟಿತು: ‘ಎಳೆದಾಡದೇ ಸೋಫಾ—ಡೈನಿಂಗ್ ಟೇಬಲ್ ಗಳನ್ನು ನಾನೊಬ್ಬಳೇ ಎತ್ತಿಡಲಾಗುತ್ತದೆಯೇ? ಅಥವಾ ಪ್ರತಿಸಲವೂ ಎತ್ತಿಡೋ ಸಲುವಾಗಿ ಜನರನ್ನು ಕರೆಸುವುದಕ್ಕಾಗುತ್ತದೆಯೇ? ಇವರದ್ದು ಯಾಕೋ ಅತಿಯಾಯ್ತು’ ಎಂದು ಬೇಸರದಿಂದ ಗೊಣಗಿದ್ದೂ ಆಯಿತು…ನಾನು ಕೆಳಗಿನ ಮನೆಯವರಿಗೆ ಚಿಕ್ಕದಾಗಿ ‘ಸಾರಿ’ ಹೇಳಿ ಹೆಚ್ಚು ಎಳೆದಾಡುವುದಿಲ್ಲ ಎಂದು ಆಶ್ವಾಸನೆ ಕೊಟ್ಟಿದ್ದೂ ಆಯಿತು.

ಆದರೆ ಅವರ ಸಿಡಿಮಿಡಿ ಆರೋಪಗಳು ಸಂಪೂರ್ಣ ಆಧಾರರಹಿತವಾದದ್ದೇನಲ್ಲ ಎಂಬುದು ನಮಗೆ ಅರಿವಾದದ್ದು ನಮ್ಮ ಮೇಲಿನ ಮನೆಯಲ್ಲಿ ಮನೆಯನ್ನು ಓರಣಗೊಳಿಸುವ ಕೆಲಸ ಆರಂಭವಾದಾಗ! ಒಮ್ಮೊಮ್ಮೆ ಅಲ್ಲಿ ಕೆಲಸಗಾರರು ಸುತ್ತಿಗೆಯಿಂದ ಹೊಡೆದಾಗಲೂ ನಮ್ಮ ತಲೆಗೇ ಪೆಟ್ಟುಬಿದ್ದ ಹಾಗೆ ಭಾಸವಾಗುತ್ತಿತ್ತು! ಆಗಷ್ಟೇ ಅವರು ಹೊಸದಾಗಿ ಮನೆಗೆ ಬರುವವರಾದ್ದರಿಂದ ಮಂಚ—ಡೈನಿಂಗ್ ಟೇಬಲ್—ಗೋಡೆ ಬೀರು ಇತ್ಯಾದಿಗಳೆಲ್ಲವನ್ನೂ ಸಿದ್ಧಪಡಿಸಲು ಮರಗೆಲಸಗಾರರು ಹುರುಪಿನಿಂದ ತೊಡಗಿಬಿಟ್ಟಿದ್ದರು. ಮನೆಯ ಕೆಲಸ ವಾಸಕ್ಕೆ ಬರುವ ಮುನ್ನ ಮುಗಿಯಲೇಬೇಕಾದ್ದರಿಂದ ಅವರೂ ಅಸಹಾಯಕರು! ಏನೇ ಆದರೂ ಆ ರಣ ಕರ್ಕಶ ಶಬ್ದವನ್ನು ಸಹಿಸಿಕೊಳ್ಳುವುದು ಮಾತ್ರ ಬಲು ಕಷ್ಟದ ಸಂಗತಿ. ಎಷ್ಟೋ ಬಾರಿ ಇಲ್ಲದ ಕೆಲಸವನ್ನು ಆರೋಪಿಸಿಕೊಂಡು ನಾವು ಮನೆಯಿಂದ ಹೊರಹೋಗಿ ಸಂಜೆಯಾದ ಮೇಲೆ, ಅಂದರೆ ಅವರ ಮರಗೆಲಸ ಮುಗಿಯುವ ವೇಳೆಗೆ ಮರಳುತ್ತಿದ್ದುದುಂಟು. ಆ ಸಂದರ್ಭದಲ್ಲಿ ನುಗ್ಗಿಬಂದ ನೆನಪುಗಳೆಂದರೆ ಬಸವೇಶ್ವರನಗರದ ಮನೆಯಲ್ಲಿ ಇದೇ ಶಬ್ದಮಾಲಿನ್ಯದ ಕಾರಣವಾಗಿ ನಾವು ಅನುಭವಿಸಿದ ಯಾತನೆಯದು! ಅಲ್ಲಿ ನಮ್ಮ ಮನೆಯ ಎದುರಿಗೇ ಇದ್ದ ಪಾರ್ಕ್ ನಲ್ಲಿಯೇ ನಮ್ಮ ಮನೆಯ ಎದುರುಭಾಗಕ್ಕೇ ಸಿದ್ದಪ್ಪಾಜಿ ಅವರ ಗುಡಿಯಿತ್ತು.

ಪ್ರತಿ ವರ್ಷ ಅವರ ಆರಾಧನೆಯ ಸಮಯದಲ್ಲಿ ಎರಡು ದಿನ ಬೆಳಗಿನ ಜಾವದಿಂದ ತಡರಾತ್ರಿಯವರೆಗೆ ವಿಪರೀತವೆಂದರೆ ವಿಪರೀತ ಜೋರಾಗಿ ಹಾಡುಗಳನ್ನು ಹಾಕಿಬಿಡುತ್ತಿದ್ದರು. ನನಗೆ ಎರಡರಷ್ಟಿದ್ದ ದೈತ್ಯಾಕಾರದ ಎರಡು ಸ್ಪೀಕರ್ ಗಳು ಕಿವಿತಮಟೆ ಹರಿಯುವಷ್ಟು ಜೋರಾಗಿ ಹಾಡುಗಳನ್ನು ಒಗಾಯಿಸುತ್ತಿದ್ದರೆ ನಾವು ಕಿವಿಗೆ ಹತ್ತಿ ತುರುಕಿಕೊಂಡು ಏನು ಮಾಡಲೂ ತೋಚದೆ—ಆಗದೆ ಚಿಂತಾಕ್ರಾಂತರಾಗಿ ಕುಳಿತುಬಿಡುತ್ತಿದ್ದೆವು. “ಸ್ವಲ್ಪ volume ಕಮ್ಮಿ ಮಾಡಿ..ತುಂಬಾ ಕಷ್ಟ ಆಗ್ತಿದೆ’ ಎಂದು ನಾವು ಕೇಳಿಕೊಂಡರೆ ‘ವರ್ಷಕ್ಕೆ ಎರಡು ದಿನ ಹಬ್ಬ ಸಾರ್..ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ’ ಎಂಬ ಮಾರುತ್ತರ! ಕೊನೆಗೆ ರಂಜನಿ ಈ ಸದ್ದಿನಬ್ಬರದಿಂದ ಪಾರಾಗುವ ಒಂದು ಅದ್ಭುತ ಮಾರ್ಗ ಹುಡುಕಿಯೇ ಬಿಟ್ಟಳು: ಎರಡು ದಿನ ಮೈಸೂರಿನಲ್ಲಿದ್ದ ಅವರ ಅಕ್ಕನ ಮನೆಗೆ ಹೋಗಿಬಿಡುವುದು! ಮುಂದಿನ ಕೆಲ ವರ್ಷಗಳು ಇದೇ ನಮಗೆ ರೂಢಿಯಾಗಿಬಿಟ್ಟಿತ್ತು—ಆ ಎರಡು ದಿನಗಳು ಕಾಲೇಜಿಗೆ ರಜೆ ಹಾಕಿಯಾದರೂ ಸರಿಯೇ, ನಾವು ಒಂದು ಚಿಕ್ಕ ಟ್ರಿಪ್ ಹೊರಟುಬಿಡುತ್ತಿದ್ದೆವು!

ಈಗ ಅಬೋಧ್ ವಾಲ್ ಮಾರ್ಕ್ ಅಪಾರ್ಟ್ ಮೆಂಟ್ ನಲ್ಲಿಯೂ ಅದರದ್ದೇ ಪುನರಾವರ್ತನೆ!

ನಮ್ಮ ಅಪಾರ್ಟ್ ಮೆಂಟ್ ನಲ್ಲಿ ಹಿಂಬದಿಗೆ ಪುಟ್ಟದೊಂದು ಗುಡಿಯಿದೆ—ಸುಬ್ರಹ್ಮಣ್ಯನದು. ನಮ್ಮ ಪಯಣ ‘ಸಿದ್ದಪ್ಪ ಟು ಸುಬ್ಬಪ್ಪ’ ಎಂದು ಆಗಾಗ್ಗೆ ನಾವು ಹೇಳಿಕೊಳ್ಳುವುದುಂಟು. ಇರಲಿ. ನಮ್ಮ flat ನ ಮೇಲ್ಭಾಗದ ಮನೆ ಸುಸಜ್ಜಿತವಾಗುವವರೆಗೆ ಸಾಕಷ್ಟು ‘ಶಾಬ್ದಿಕ ಹಿಂಸೆ’ ಅನುಭವಿಸಿದರೂ ಆ ಮನೆಯನ್ನು ಖರೀದಿಸಿ ವಾಸಕ್ಕೆ ಬಂದ ಸಂಜಯ್ ಜಂಗಮ್ ಹಾಗೂ ಇರಾವತಿ ದಂಪತಿಗಳು ಬಲುಬೇಗ ನಮಗೆ ಆತ್ಮೀಯರಾಗಿಬಿಟ್ಟರು. ಗಂಡ ಹೆಂಡತಿ—ಇಬ್ಬರು ಮಕ್ಕಳ ಚಿಕ್ಕ ಚೊಕ್ಕ ಕುಟುಂಬವದು. Navy ಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಸಂಜಯ್ ಮಹಾ ಉತ್ಸಾಹಿ ಚಟುವಟಿಕೆಯ ಮನುಷ್ಯ. ಪರರಿಗೆ ನೆರವಾಗಲು ಧಾವಿಸಿ ಬರುವ ಮನೋಧರ್ಮ. ನಮಗೂ ಅನೇಕ ಸಂದರ್ಭಗಳಲ್ಲಿ ನೆರವಾಗಿದ್ದಾರೆ…’ಕೆಲ ಸಮಯ ಹಿಂಸೆ ಕೊಟ್ಟುಬಿಟ್ಟೆವು, ಕ್ಷಮೆ ಇರಲಿ’ ಎಂದು ಪೇಚಾಡಿಕೊಂಡಿದ್ದಾರೆ…ಹಾಗೇ ಆಪ್ತ ಮಿತ್ರರೂ ಆಗಿದ್ದಾರೆ!

ಸಂಜಯ್ ಅವರಂತೆಯೇ ಮತ್ತೂ ಕೆಲವರು ಮಿತ್ರವರ್ಗಕ್ಕೆ ಸೇರಿದ್ದಾರೆ. ಹೆಚ್ಚಲ್ಲದಿದ್ದರೂ ಸುಮಾರು 15 ಕನ್ನಡ ಕುಟುಂಬಗಳಿವೆ. ಸತೀಶ್, ಕುಲಕರ್ಣಿಯವರು, ಸಂಜಯ್ ಜೈನ್ ರೋಖಡೆಯವರು, ಸಯ್ಯದ್, ಗೋದಾವರಿ, ಚಂದ್ರೇಶ್ ಜೈನ್, ಭೈರೇಗೌಡರು, ಲೀಲಾ ಮೇಡಂ…ಹೀಗೆ ಆತ್ಮೀಯರಾಗಿರುವವರ ಪಟ್ಟಿ ದೊಡ್ಡದಾಗುತ್ತಿದೆ ದಿನೇ ದಿನೇ! ನಮ್ಮ flat ನ ಎದುರಿಗೇ ಇರುವ ಜಗನ್ನಾಥ್ —ದೇವಿಕಾ ದಂಪತಿಗಳಂತೂ ತೀರಾ ಹತ್ತಿರದವರೇ ಆಗಿದ್ದಾರೆ—ಭಾವನಾತ್ಮಕವಾಗಿಯೂ ಸಹಾ. ಒಟ್ಟಿನಲ್ಲಿ ಎಷ್ಟೇ ಒಳಗೆ ಕೆಲ ನೋವುಗಳು ಕುಟುಕುತ್ತಿದ್ದರೂ ಅಪಾರ್ಟ್ ಮೆಂಟ್ ನ ಸಾಂಘಿಕ ಬದುಕಿಗೆ, ಸುರಕ್ಷಿತ ರಕ್ಷಾಕವಚದಂತಹ ಪರಿಸರಕ್ಕೆ ಒಗ್ಗಿಕೊಳ್ಳುತ್ತಿದ್ದೇವೆ. ರಾಷ್ಟ್ರಕವಿ, ಪ್ರೀತಿಯ ಮೇಷ್ಟ್ರು ಜಿ.ಎಸ್.ಶಿವರುದ್ರಪ್ಪನವರ ‘ಎಲ್ಲೋ ಹುಡುಕಿದೆ ಇಲ್ಲದ ದೇವರ..’ ಕವಿತೆಯ ಸಾಲುಗಳನ್ನಂತೂ ಅದೆಷ್ಟು ಬಾರಿ ಈ ಸಾಂಘಿಕ ಜೀವನದ ಹೊಂದಾಣಿಕೆಯ ಸಮಯದಲ್ಲಿ ನೆನೆಸಿಕೊಂಡಿದ್ದೇವೋ ಲೆಕ್ಕವಿಲ್ಲ: “ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕುದಿನದ ಈ ಬದುಕಿನಲಿ”; “ಒಳಗಿನ ತಿಳಿಯನು ಕಲಕದೆ ಇದ್ದರೆ ಅಮೃತದ ಸವಿಯಿದೆ ನಾಲಗೆಗೆ”!! ನಿಜ. ಬದುಕು ಇರುವುದೇ ಹಾಗೆ; ಈ ಅರಿವಿನ ಜತೆ ಬದುಕಬೇಕಾಗಿರುವುದೂ ಹಾಗೆಯೇ ಅಲ್ಲವೇ!!

ಮುಂದುವರೆಯಲಿದೆ |

‍ಲೇಖಕರು Admin

24 October, 2025

ನಿಮಗೆ ಇವೂ ಇಷ್ಟವಾಗಬಹುದು…

1 Comment

  1. SHRI MAHARAJA SHIVALINGAIAH

    ಪ್ರಭು ಅವರ ಆತ್ಮ ಕಥನ ಕೆ ಕಾಯುತಿರುತ್ತೇವೆ, ಅವರೊಂದಿಗೆ ಸ್ವಲ್ಪ ವರ್ಷ ಒಡನಾಟದಲ್ಲಿದ್ದೆ ಬಹಳ ಹೃದಯವಂತರು ಅಹಂ ಇಲ್ಲ ಪ್ರತಿಭಾ ವಂತರು ಅವರ ಪತ್ನಿಯೂ ಹೃದಯ ವಂತೆ ಒಮ್ಮೆ ಅವರು ಹೀರೋ ಹೋಂಡಾ ಬೈಕ್ ಖರೀದಿಸಿ ಗುಲ್ಬರ್ಗ ದಿಂದ ಬೆಂಗಳೂರಿಗೆ ನಾನು ಹೀರೋ ಹೋಂಡಾ ಹೊಸ ಬೈಕ್ಇ ಖರೀದಿಸಿ ಇ ಬ್ಬರೂ ಆರುನೂರು ಕಿಲೋ ಮೀಟರ್ ಪ್ರಯಾಣ ಮಾಡಿ ಮತ್ತೆ ಬೈಕ್ನಲ್ಲೇ ವಾಪಸ ಬಂದೆವು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading