ಶ್ರೀನಿವಾಸ ಪ್ರಭು ಅಂಕಣ – ನೇರ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದ್ದವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

72

ಕಳೆದ ವಾರವಷ್ಟೇ ಎಲ್ಲ ಸುದ್ದಿ ವಾಹಿನಿಗಳಲ್ಲಿ ಒಂದು ಹೃದಯ ವಿದ್ರಾವಕ ಸುದ್ದಿ ಬಿತ್ತರಗೊಂಡಿತು: 12—13 ವರ್ಷದ ಬಾಲಕನೊಬ್ಬ ಶಾಲೆಯಲ್ಲಿ ಭಗತ್ ಸಿಂಗ್ ರನ್ನು ಕುರಿತ ನಾಟಕದಲ್ಲಿ ಪಾತ್ರ ನಿರ್ವಹಿಸುತ್ತಿದ್ದ.ಒಂದು ದಿನ ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಟಕದ ಅಭ್ಯಾಸದಲ್ಲಿ ತೊಡಗಿದ್ದಾನೆ… ನಾಟಕದ ಕೊನೆಯ ದೃಶ್ಯದಲ್ಲಿ ಭಗತ್ ಸಿಂಗ್ ರನ್ನು ನೇಣಿಗೇರಿಸುವ ದೃಶ್ಯವಿದೆ.. ಆ ದೃಶ್ಯವನ್ನೂ ಅಭ್ಯಾಸ ಮಾಡುವ ಭರದಲ್ಲಿ ಫ್ಯಾನ್ ಗೆ ಹಗ್ಗ ಕಟ್ಟಿ ನೇಣಿನ ಕುಣಿಕೆಯನ್ನು ಬಿಗಿದು ಅದನ್ನು ತನ್ನ ಕುತ್ತಿಗೆಗೆ ಹಾಕಿಕೊಂಡು ಅಭ್ಯಾಸದ ಅಂಗವಾಗಿ ಹಾರಿಯೇ ಬಿಟ್ಟಿದ್ದಾನೆ..ನಡೆಯಬಾರದ ಅನಾಹುತ ನಡೆದೇ ಬಿಟ್ಟಿದೆ..ಒಂದೆರಡು ಕ್ಷಣಗಳಲ್ಲೇ ಹುಡುಗನ ಪ್ರಾಣಪಕ್ಷಿ ಹಾರಿಹೋಗಿದೆ.

ಒಂದು ಕ್ಷಣ ಈ ಸುದ್ದಿಕೇಳಿ ನನಗೆ ದಿಗ್ಭ್ರಮೆಯಾಗಿಹೋಯಿತು. ಬಾಲಕನ ವಿನಾಕಾರಣದ ಈ ಸಾವನ್ನು ಕರೆಯುವುದಾದರೂ ಏನೆಂದು? ಇದು ಸಹಜ ಸಾವಲ್ಲ.. ಕೊಲೆಯಲ್ಲ..ಉದ್ದೇಶಪೂರ್ವಕ ಆತ್ಮಹತ್ಯೆಯೂ ಅಲ್ಲ..ಆದರೂ ಒಂದು ಜೀವದ ಎದೆ ಬಡಿತ ಶಾಶ್ವತವಾಗಿ ನಿಂತುಹೋಗಿದೆ. ಉಸಿರಿರುವ ತನಕ ಅನುಭವಿಸಲು ಸಾಕಾಗುವಷ್ಟು ಸಂಕಟದ ಹೊರೆಯನ್ನು ಹೆತ್ತವರ ಹೆಗಲಿಗೆ ಹೊರಿಸಿ ತಣ್ಣಗೆ ನಡೆದುಬಿಟ್ಟನಲ್ಲಾ ಈ ಹುಡುಗ…ಇವನ ಸಾವಿನ ಹೊಣೆ ಯಾರ ಹೆಗಲಿಗೆ? ಬೇಜವಾಬ್ದಾರಿತನವೋ… ತಿಳುವಳಿಕೆಯ ಅಭಾವವೋ.. ಪ್ರಯೋಗಶೀಲತೆಯ ಉತ್ಸಾಹದ ದುರಂತ ಪರಿಣಾಮವೋ..ವಿವರಿಸುವುದಾದರೂ ಹೇಗೆ?

ವಾಸ್ತವವಾಗಿ ಇಷ್ಟೆಲ್ಲಾ ಪ್ರಶ್ನೆಗಳನ್ನು ನಾನೇ ಸ್ವತಃ ವೈಯಕ್ತಿಕವಾಗಿ ಎದುರಿಸಿದ್ದು 85 ರಲ್ಲಿ! ಈ ಹುಡುಗನ ನೇಣಿನ ಪ್ರಸಂಗ ಹಳೆಯ ಅನೇಕ ನೆನಪುಗಳು ಧುತ್ತೆಂದು ಮನದಂಗಳದಲ್ಲಿ ಪ್ರತ್ಯಕ್ಷವಾಗಲು ಕಾರಣೀಭೂತವಾಯಿತಷ್ಟೇ. ನನಗೆ ಸಾಕಷ್ಟು ಆತಂಕ—ತಲ್ಲಣಗಳ ಕ್ಷಣಗಳನ್ನು ತಂದೊಡ್ಡಿದ ಆ ಘಟನೆ ಅಂದು ನಡೆದದ್ದು ಹೀಗೆ:

ಬಿಜಾಪುರದ ಶೀನಣ್ಣನ ತಂಡದವರನ್ನು ಒಮ್ಮೆ ಒಂದು ನಾಟಕದ ಸಲುವಾಗಿ ನಮ್ಮ ಸ್ಟುಡಿಯೋಗೆ ಆಹ್ವಾನಿಸಿದ್ದೆ. ಅವರು—ಬಹುಶಃ ಮರಾಠಿ ಮೂಲದಿಂದ ಪ್ರೇರಿತವಾಗಿ ರೂಪಾಂತರಗೊಂಡಿದ್ದ ‘ಅಂತಿಮ ಸಂದೇಶ’ ಎನ್ನುವ ನಾಟಕವನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ತೆಳುಹಾಸ್ಯದ ಲೇಪವಿದ್ದ ಆ ನಾಟಕದ ಕಥಾ ಸಂವಿಧಾನವನ್ನು ಕೊಂಚ ವಿವರಿಸುತ್ತೇನೆ:
ರಂಗದ ಮಧ್ಯಭಾಗದಲ್ಲಿ ಮೇಲಿನ ತೊಲೆಯಿಂದ ಒಂದು ನೇಣಿನ ಕುಣಿಕೆ ತೂಗುಬಿದ್ದಿದೆ.ಒಬ್ಬ ನಿರುದ್ಯೋಗಿ ಯುವಕ ಕೆಲಸ ಸಿಗದ ಹತಾಶೆಯಲ್ಲಿ ನೇಣಿಗೆ ಶರಣಾಗುವ ನಿರ್ಧಾರ ಮಾಡಿ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾನೆ; ಇನ್ನೇನು ಕುಣಿಕೆಯನ್ನು ಕುತ್ತಿಗೆಗೆ ಬಿಗಿದುಕೊಳ್ಳಬೇಕು, ಅಷ್ಟರಲ್ಲಿ ಬಾಗಿಲ ಬಡಿತ ಕೇಳುತ್ತದೆ. ಹೋಗಿ ಬಾಗಿಲು ತೆಗೆದು ನೋಡಿದರೆ ಯಾರೋ ಯಾವುದೋ ವಿಳಾಸವನ್ನು ಕೇಳಿಕೊಂಡು ಬಂದಿರುತ್ತಾರೆ! ಅವರನ್ನು ಸಾಗಹಾಕಿ ಮತ್ತೆ ಕುಣಿಕೆಯನ್ನು ಕುತ್ತಿಗೆಗೆ ಹಾಕಿಕೊಳ್ಳುವ ವೇಳೆಗೆ ಮತ್ತೆ ಬಾಗಿಲ ಬಡಿತದ ಸದ್ದು! ಮತ್ತೆ ಹೋಗಿ ಬಾಗಿಲು ತೆಗೆದು ನೋಡಿದರೆ ಮತ್ತಾರೋ ಮತ್ತಾವುದೋ ಕಾರಣಕ್ಕೆ ಬಂದಿರುತ್ತಾರೆ!

ಹೀಗೇ ನಾಲ್ಕಾರು ಬಾರಿ ಪುನರಾವರ್ತನೆಯಾಗಿ ಯುವಕನಿಗೆ ರೋಸಿಹೋಗುತ್ತದೆ. ‘ನೆಮ್ಮದಿಯಾಗಿ ಸಾಯಲೂ ಬಿಡುವುದಿಲ್ಲ ಈ ಜನ…ಇನ್ನು ಯಾರು ಬಂದು ಬಾಗಿಲು ಬಡಿದರೂ ಖಂಡಿತ ಬಾಗಿಲು ತೆಗೆಯುವುದಿಲ್ಲ’ ಎಂದು ತೀರ್ಮಾನಿಸಿ ಮತ್ತೆ ಕುಣಿಕೆಯನ್ನು ಕೊರಳಿಗೆ ಹಾಕಿಕೊಳ್ಳುತ್ತಾನೆ. ಮತ್ತೆ ಬಾಗಿಲ ಬಡಿತದ ಸದ್ದು ಕೇಳಿದಾಗ ಯುವಕನ ಸಿಟ್ಟು ಮೇರೆ ಮೀರುತ್ತದೆ. ಬಾಗಿಲ ಬಡಿತದ ಜತೆಗೆ ‘post’ ಎಂಬ ಕೂಗು ಬೇರೆ! ‘ಸರಿ, ಏನಾದರಾಗಲಿ ಇದೊಂದು ಬಾಗಿಲು ತೆಗೆದು ನೋಡಿಬಿಡುತ್ತೇನೆ. ಖಂಡಿತವಾಗಿ ಇದು ಕಡೆಯ ಬಾರಿ’ ಎಂದುಕೊಂಡು ಯುವಕ ಬಾಗಿಲು ತೆರೆಯುತ್ತಾನೆ. ಪೋಸ್ಟ್ ಮ್ಯಾನ್ ಅವನ ಕೈಗಿತ್ತ ಲಕೋಟೆಯನ್ನು ಒಡೆದು ನೋಡಿದ ಯುವಕನಿಗೆ ಪರಮಾಶ್ಚರ್ಯ ಕಾದಿದೆ: ಅವನಿಗೆ ಯಾವುದೋ ಕಛೇರಿಯಲ್ಲಿ ಕೆಲಸಕ್ಕೆ ಕರೆ ಬಂದಿದೆ! ಇನ್ನೊಂದು ವಾರದಲ್ಲಿ ಹೋಗಿ ಕೆಲಸಕ್ಕೆ ಸೇರಿಕೊಳ್ಳಬೇಕು! “ಅಬ್ಬಾ! ಎಷ್ಟು ಸರಿಯಾದ ಸಮಯಕ್ಕೆ ಈ ಪತ್ರ ಬಂದಿದೆ; ಕೊಂಚ ತಡವಾಗಿದ್ದರೂ ನಾನು ಭೂತಕಾಲಕ್ಕೆ ಸೇರಿಬಿಡುತ್ತಿದ್ದೆನಲ್ಲಾ! ಅದಕ್ಕೇ ಹೇಳುವುದು—ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು” ಎಂದುಕೊಳ್ಳುತ್ತಾ ಆ ಯುವಕ ಸಂಭ್ರಮದಿಂದ ಬಂದು ತೂಗುಬಿದ್ದಿದ್ದ ನೇಣಿನ ಹಗ್ಗವನ್ನು ಕೆಳಗೆಳೆದು ಬಿಸುಟು ಖುಷಿಯಾಗಿ ಹಾಡು ಹೇಳಿಕೊಳ್ಳುತ್ತಾ ಅಲ್ಲಿಂದ ಹೊರಡುತ್ತಾನೆ.

ಸರಳ ರಂಗಸಜ್ಜಿಕೆಯ ಈ ನಾಟಕವನ್ನು ಕಲಾವಿದರು ಸೊಗಸಾಗಿ ಅಭಿನಯಿಸಿದರು.ಸ್ಟುಡಿಯೋದಲ್ಲಿ ನಾಟಕವನ್ನು ಚಿತ್ರೀಕರಿಸಿಕೊಂಡ ಒಂದೆರಡು ದಿನಗಳಿಗೇ ನಾಟಕದ ಪ್ರಸಾರವೂ ಆಗಿಹೋಯಿತು.

ನಾಟಕ ಪ್ರಸಾರವಾದ ಮರುದಿನವೇ ಎಂದು ತೋರುತ್ತದೆ—ಅಂದು ಸಂಜೆ ನಾನು ಭೈರಸಂದ್ರದ ನಮ್ಮ ಮನೆಯ ಸನಿಹದಲ್ಲಿದ್ದ ಔಷಧಿ ಅಂಗಡಿಯಿಂದ ಕೆಲ ಮಾತ್ರೆಗಳನ್ನು ತೆಗೆದುಕೊಂಡು ಬರುತ್ತಿರುವಾಗ ಪಕ್ಕದ ಪೇಪರ್ ಅಂಗಡಿಯ ಹೊರಗೆ ತೂಗುಹಾಕಿದ್ದ ಸಂಜೆ ಪತ್ರಿಕೆಯೊಂದರ ಮುಖಪುಟದ ತಲೆಬರಹ ನನ್ನ ಗಮನ ಸೆಳೆಯಿತು:

“ಟಿ ವಿ ನಾಟಕ ನೋಡಿ ಬಾಲಕ ನೇಣಿಗೆ ಶರಣು!”
ಭಯ—ಗಾಬರಿಗಳಿಂದ ಕೈಕಾಲು ನಡುಗ ತೊಡಗಿ ಹೇಗೋ ಸಾವರಿಸಿಕೊಂಡು ಪತ್ರಿಕೆಯ ಒಂದು ಪ್ರತಿಯನ್ನು ಖರೀದಿಸಿ ಆತುರಾತುರವಾಗಿ ಮನೆಗೆ ಬಂದು ವರದಿಯನ್ನು ಸಂಪೂರ್ಣವಾಗಿ ಓದಿದೆ.

ಹೌದು! ಆ ವರದಿ ನನ್ನ ನಾಟಕಕ್ಕೇ, ಅಂತಿಮ ಸಂದೇಶ ನಾಟಕಕ್ಕೇ ಸಂಬಂಧ ಪಟ್ಟಿದ್ದು! ಅದನ್ನೇ ಕುರಿತದ್ದು! ತನ್ನ ತಂದೆ—ತಾಯಿಯರೊಂದಿಗೆ ಹಿಂದಿನ ದಿನ ಪ್ರಸಾರವಾಗಿದ್ದ ನಾಟಕವನ್ನು 11—12 ವಯಸ್ಸಿನ ಅವರ ಮಗನೂ ನೋಡಿದ್ದಾನೆ; ನಂತರ ಬಾಲ ಸಹಜ ಕುತೂಹಲದಿಂದ ತಂದೆ ತಾಯಿಯರ ಜೊತೆ ‘ನೇಣು ಅಂದರೇನು’? ಇತ್ಯಾದಿಯಾಗಿ ಪ್ರಶ್ನೆ ಮಾಡಿದ್ದಾನೆ. ಸಾಧಾರಣವಾಗಿ ಮನೆಗಳಲ್ಲಿ ಇಂಥ ಅಶುಭ ಮಾತುಕತೆಯನ್ನು ಹಿರಿಯರು ತಳ್ಳಿಹಾಕುವಂತೆ ಅವನ ತಂದೆ ತಾಯಿಯರೂ ಮಾಡಿದ್ದಾರೆ..ಕುತೂಹಲ ತಣಿಯದ ಬಾಲಕ ಮರುದಿನ ಯಾರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ತಾನೇ ಖುದ್ದಾಗಿ ‘ನೇಣಿ’ನ ಅರ್ಥವನ್ನು ಅರಿತುಕೊಳ್ಳಲು ಯತ್ನಿಸಿದ್ದಾನೆ.. ಸೀರೆಯಂತಹ ಬಟ್ಟೆ ತೆಗೆದುಕೊಂಡು ನಾಟಕದಲ್ಲಿ ನೋಡಿದ್ದಂತೆ ಕುಣಿಕೆಯನ್ನು ಸಿದ್ಧಪಡಿಸಿಕೊಂಡು ಕುರ್ಚಿ ಮೇಜುಗಳ ನೆರವಿನಿಂದ ಮೇಲೆ ಹತ್ತಿ ಫ್ಯಾನ್ ಗೆ ಬಟ್ಟೆಯನ್ನು ಕಟ್ಟಿ ಕುಣಿಕೆಯನ್ನು ಕೊರಳಿಗೆ ಹಾಕಿಕೊಂಡಿದ್ದಾನೆ.. ಬಹುಶಃ ಆ ಸಮಯದಲ್ಲಿ ನಿಂತ ಕುರ್ಚಿ ಜಾರಿಯೋ ಅಥವಾ ಆಯ ತಪ್ಪಿಯೋ ಹುಡುಗ ಬಿದ್ದಿದ್ದಾನೆ..ಕುಣಿಕೆ ಬಿಗಿದಿದೆ.. ಒದ್ದಾಡಿದರೂ ಬಿಡಿಸಿಕೊಳ್ಳಲಾಗದೇ ಕೊನೆಗೆ ಉಸಿರು ನಿಂತಿದೆ..ಅನಾಹುತ ಸಂಭವಿಸಿಯೇ ಬಿಟ್ಟಿದೆ.
ಸುದ್ದಿಯನ್ನು ಓದಿ ನಾನು ದಿಕ್ಕು ತಪ್ಪಿದವನಂತಾಗಿ ಹೋದೆ. ನಿಂತಲ್ಲಿ ನಿಲ್ಲಲಾರದೆ ಕುಳಿತಲ್ಲಿ ಕೂರಲಾಗದೆ ಆತಂಕ—ತಲ್ಲಣ—ಚಡಪಡಿಕೆಗಳಲ್ಲಿ ನರಳತೊಡಗಿದೆ. ಅಂದರೆ ಆ ಬಾಲಕನ ಸಾವಿಗೆ ನನ್ನ ನಾಟಕ ಹಾಗೂ ಪರೋಕ್ಷವಾಗಿ ನಾನು ಕಾರಣವಾಗಿಬಿಟ್ಟೆವೇ? ಎಂ ಎ ಓದುತ್ತಿದ್ದಾಗ ಸಹಪಾಠಿ ಭಾಗ್ಯಲಕ್ಷ್ಮಿ ನನಗೆ ಪತ್ರ ಬರೆದದ್ದು..ನಾನು ಹೆಚ್ಚಿನ ಉತ್ಸಾಹ ತೋರದಿದ್ದಾಗ ಸುಟ್ಟುಕೊಂಡು ಜೀವಬಿಟ್ಟಿದ್ದು ಮತ್ತೆ ನೆನಪಿಗೆ ನುಗ್ಗಿ ಬಂತು. ಒಂದೆಡೆ ಸಂಕಟ—ದುಃಖ…ಮತ್ತೊಂದೆಡೆ ಹತಾಶೆ—ಆತಂಕಗಳು ಮುತ್ತಿಕೊಂಡು ಒಂದು ರೀತಿಯ ಪ್ರಜ್ಞಾಹೀನ ಸ್ಥಿತಿಗೆ ಜಾರಿಬಿಟ್ಟೆ. ಅಣ್ಣ—ಅಮ್ಮನೊಂದಿಗೆ ಈ ವಿಷಯ ಚರ್ಚಿಸಿ ಅವರಿಗೂ ಆತಂಕ ಉಂಟುಮಾಡುವುದು ಯಾಕೋ ಇಷ್ಟವಾಗಲಿಲ್ಲ. ದೂರದರ್ಶನದ ಆತ್ಮೀಯ ಗೆಳೆಯ ಕಟ್ಟಿ ಬೇರೆ ತರಬೇತಿಗಾಗಿ ಪುಣೆಗೆ ಹೊರಟುಹೋಗಿದ್ದ. ಯಾರೊಂದಿಗೂ ಹೇಳಿಕೊಳ್ಳಲೂ ಆಗದೇ ಅನುಭವಿಸಲೂ ಆಗದೆ ಇಡೀ ರಾತ್ರಿ ದುಗುಡದಲ್ಲೇ ಕಳೆದೆ.ಕೆಲ ಕ್ಷಣಗಳ ಮಟ್ಟಿಗೂ ನಿದ್ರೆ ಹತ್ತಿರ ಸುಳಿಯಲೂ ಇಲ್ಲ.

ಮರುದಿನ ಬೆಳಿಗ್ಗೆ ಬೇಗ ಬೇಗ ಸಿದ್ಧನಾಗಿ ಆಫೀಸ್ ಗೆ ಧಾವಿಸಿದೆ.ಅಕಸ್ಮಾತ್ ಆ ಹುಡುಗನ ತಂದೆ ತಾಯಿಯರೋ ಬಂಧುವರ್ಗದವರೋ ನಮ್ಮ ಕೇಂದ್ರಕ್ಕೆ ಬಂದು ‘ನಿಮ್ಮ ನಾಟಕ ನಮ್ಮ ಹುಡುಗನನ್ನ ತಿಂದುಕೊಂಡುಬಿಟ್ಟಿತು’ ಎಂದು ಎಲ್ಲಿ ಆಕ್ರೋಶಭರಿತರಾಗಿ ಕೂಗಾಡುವರೋ ಎಂಬ ಭಯ ಬೇರೆ ಕಾಡುತ್ತಿತ್ತು. ಹಾಗೆ ನೋಡಿದರೆ ಅದು ನೇರವಾಗಿ ನನ್ನನ್ನು ಹೊಣೆ ಮಾಡುವಂತಹ ಸಂದರ್ಭವೇನೂ ಆಗಿರಲಿಲ್ಲ. ಆದರೆ ಮೊದಲೇ ದುಃಖದ ಮಡುವಿನಲ್ಲಿ ಮುಳುಗಿರುವವರೊಂದಿಗೆ ವಾದ ಮಾಡಲಾದೀತೇ? ಚರ್ಚೆ ಮಾಡಲಾದೀತೇ? ಸಧ್ಯ,ನಾನು ಹೆದರಿದ್ದಂತೇನೂ ಆಗಲಿಲ್ಲ..ಯಾರೂ ಬಂದು ಕೇಂದ್ರಕ್ಕೆ ಮುತ್ತಿಗೆ ಹಾಕಲಿಲ್ಲ.ನಮ್ಮ ನಿರ್ದೇಶಕರಾಗಿದ್ದ ಗುರುನಾಥ್ ಅವರಿಗೆ ನಡೆದ ಪ್ರಸಂಗವನ್ನೆಲ್ಲಾ ವಿವರಿಸಿ ಹೇಳಿದೆ. ಒಂದು ಕ್ಷಣ ಅವರೂ ವಿಚಲಿತರಾದಂತೆ ಕಂಡು ನನ್ನ ಆತಂಕ ದುಪ್ಪಟ್ಟಾಯಿತು. ಕೊನೆಗೆ ಅವರು ಕೇಳಿದರು: “ನೇಣಿನ ಪರವಾದಂತಹ ಯಾವುದೇ ಹೇಳಿಕೆ ನಾಟಕದಲ್ಲಿಲ್ಲ ತಾನೇ? ಅಂದರೆ ಸಮಸ್ಯೆಗಳ ಪರಿಹಾರಕ್ಕೆ ಆತ್ಮಹತ್ಯೆಯೇ ಉತ್ತರ ಎನ್ನುವಂತಹ ಸಂದೇಶ ನಾಟಕದಲ್ಲಿ ರವಾನೆಯಾಗಿಲ್ಲ ತಾನೇ?”. ನಾನು ವಿಶ್ವಾಸದಿಂದಲೇ ನುಡಿದೆ: “ಇಲ್ಲ ಸರ್..ಬದಲಿಗೆ ಸಮಸ್ಯೆ ಬಂದಾಗ ದುಡುಕಬಾರದು, ಸಹನೆಯಿಂದಿರಬೇಕು.. ಆತ್ಮವಿಶ್ವಾಸದಿಂದ ಬಂದ ಕಷ್ಟಗಳನ್ನೆದುರಿಸಬೇಕು.ಆಗ ಒಳ್ಳೆಯದೇ ಆಗುತ್ತದೆ—ಎಂಬಂತಹ ಧನಾತ್ಮಕ ಸಂದೇಶವನ್ನೇ ನಾಟಕ ನೀಡುತ್ತದೆ ಸರ್.”

“ಸರಿ ಹಾಗಾದರೆ.ಹೆಚ್ಚು ಚಿಂತಿಸುವ ಅಗತ್ಯವಿಲ್ಲ.ಹುಡುಗನ ಸಾವಿನ ಬಗ್ಗೆ ನಮಗೂ ಸಹಾನುಭೂತಿಯಿದೆ..ಆದರೆ ನಡೆದಿರುವ ಘಟನೆ ನಮ್ಮೆಲ್ಲರ ಹತೋಟಿಯನ್ನೂ ಮೀರಿ ಅನಿರೀಕ್ಷಿತವಾಗಿ ನಡೆದಿರುವಂಥದ್ದು.ಈ ಕುರಿತಾಗಿ ಯಾವುದೇ ಗಿಲ್ಟ್ ನಿನ್ನನ್ನು ಕಾಡಬೇಕಾದ್ದಿಲ್ಲ.. ಧೈರ್ಯವಾಗಿರು..ಏನೇ ಸಂದರ್ಭ ಎದುರಾದರೂ ಎದುರಿಸೋಣ” ಎಂದು ಸಾಂತ್ವನ ಹೇಳಿದರು ಗುರುನಾಥ್. ಅವರ ಮಾತಿನಿಂದ ಮನಸ್ಸಿಗೆ ಎಷ್ಟೋ ಹಿತವೆನಿಸಿದರೂ ಸುಲಭಕ್ಕೆ ಆ ಪ್ರಸಂಗವನ್ನು ಮರೆಯಲಾಗಲಿಲ್ಲ ನನಗೆ. ನೋಡಿಯೇ ಇರದಿದ್ದ ಆ ಹುಡುಗನ ಊಹಾತ್ಮಕ ಅಸ್ಪಷ್ಟ ಮುಖಮುದ್ರೆ ನೇಣುಕುಣಿಕೆಯ ಹಿನ್ನೆಲೆಯಲ್ಲಿ ಪದೇ ಪದೇ ಗೋಚರವಾಗುತ್ತಾ ಸಾಕಷ್ಟು ಸಮಯ ನನ್ನನ್ನು ಕಾಡಿತು. ಆ ಹುಡುಗನ ತಂದೆ ತಾಯಿಯರ ಯಾತನೆಯ ಬಿಕ್ಕು ಬಹಳ ದಿನಗಳವರೆಗೆ ಕಿವಿಗಳಲ್ಲಿ ಮೊರೆಯುತ್ತಲೇ ಇತ್ತು.’ಮತ್ತೆಂದೂ ಇಂಥ ಸಂಕಟದ ವಿಷಮ ಪರಿಸ್ಥಿತಿಗಳನ್ನು ತಂದೊಡ್ಡದಿರು’ ಎಂದು ನೂರು ನೂರು ಬಾರಿ ಭಗವಂತನಲ್ಲಿ ಮೊರೆಯಿಟ್ಟು ಬೇಡಿಕೊಂಡೆ.

ನನ್ನ NSD ಸಹಪಾಠಿ ಎಸ್.ಸುರೇಂದ್ರನಾಥ್—ಅಲಿಯಾಸ್ ಸೂರಿ ಕಲಾಗಂಗೋತ್ರಿ ತಂಡಕ್ಕೆ ಮಾಡಿಸಿದ ನಾಟಕ—”ಈ ಮುಖದವರು”. ರೆಜಿನಾಲ್ಡ್ ರೋಸ್ ಅವರು 1954ರಲ್ಲಿ ರಚಿಸಿದ್ದ ’12 angry men’ ನಾಟಕವನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಸೊಗಸಾಗಿ ರೂಪಾಂತರಿಸಿದ್ದ ಸೂರಿ.ಮೂಲ ನಾಟಕದ ಎರಡು ಮೂರು ಸಿನೆಮಾ ಅವತರಣಿಕೆಗಳೂ ಕೂಡಾ ನಿರ್ಮಾಣಗೊಂಡಿದ್ದು ಸಾಕಷ್ಟು ಜನಪ್ರಿಯವಾಗಿದ್ದವು.ಮೂಲ ನಾಟಕದ ಕಥಾವಸ್ತುವನ್ನು ಸ್ಥೂಲವಾಗಿ ಗಮನಿಸುವುದಾದರೆ: ‘ಹದಿನೆಂಟು ವರ್ಷದ ಒಬ್ಬ ಬಾಲಕ ತನ್ನ ತಂದೆಯನ್ನೇ ಚೂರಿಯಿಂದ ಇರಿದು ಕೊಂದಿದ್ದಾನೆ’ಎಂದು ಆರೋಪ ಹೊರಿಸಲಾಗಿದೆ.ನ್ಯಾಯಾಲಯದಲ್ಲಿ ನ್ಯಾಯಾಧೀಶರು 12 ಮಂದಿ ಜ್ಯೂರಿಗಳಿಗೆ ಈ ಪ್ರಕರಣಕ್ಕೆ ಸಂಬಂಧ ಪಟ್ಟಹಾಗೆ ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬರುವಂತೆ ಸೂಚಿಸುತ್ತಾರೆ.ಎಲ್ಲರ ಅಭಿಪ್ರಾಯವೂ ಒಂದೇ ಆಗಿರಬೇಕಾಗಿರುವುದು ಮಾತ್ರ ಕಡ್ಡಾಯ!

ಮೇಲ್ನೋಟಕ್ಕೆ, ಸಾಂದರ್ಭಿಕ ಸಾಕ್ಷ್ಯಾಧಾರಗಳ ಮೇಲೆ ಹುಡುಗನೇ ಅಪರಾಧಿ ಎಂದು ಸುಲಭವಾಗಿ ತೀರ್ಮಾನಿಸಬಹುದಾಗಿದೆ;ಆದ್ದರಿಂದ ಇದು ಬಲು ಬೇಗ ತೀರ್ಮಾನಿಸಿ ಮುಗಿಸಬಹುದಾದ ಒಂದು ‘open and shut case’ ಎಂಬುದು ಹೆಚ್ಚುಕಡಿಮೆ ಎಲ್ಲ ಜ್ಯೂರಿಗಳ ಅಭಿಪ್ರಾಯವಾಗಿರುತ್ತದೆ.ಆದರೆ ಒಬ್ಬ ಜ್ಯೂರಿ ಮಾತ್ರ ವಿಭಿನ್ನವಾಗಿ ಚಿಂತಿಸತೊಡಗುತ್ತಾನೆ. ತನಿಖೆಯ ಇಡೀ ಪ್ರಕ್ರಿಯೆಯಲ್ಲಿ ಎಲ್ಲೋ ತಪ್ಪಾಗಿದೆ ಎಂದು ಅವನಿಗೆ ತೀವ್ರವಾಗಿ ಅನ್ನಿಸುತ್ತಿರುತ್ತದೆ. ಸರ್ವಾನುಮತದ ತೀರ್ಮಾನವಾಗಬೇಕಾಗಿರುವುದರಿಂದ ವಿಧಿಯಿಲ್ಲದೆ ಜ್ಯೂರಿಗಳು ಮತ್ತೆ ಚರ್ಚೆ—ವಾದ ವಿವಾದಗಳಿಗೆ ತೊಡಗುತ್ತಾರೆ. ಆ ಪ್ರಕ್ರಿಯೆಯಲ್ಲಿ ಒಬ್ಬೊಬ್ಬರಾಗಿ ಎಲ್ಲ ಜ್ಯೂರಿಗಳ ಮನಸ್ಸನ್ನು ಬದಲಾಯಿಸುವಲ್ಲಿ,ಹುಡುಗ ನಿರಪರಾಧಿ ಎಂಬುದು ಒಮ್ಮತದ ತೀರ್ಮಾನವಾಗುವಂತೆ ಮಾಡುವುದರಲ್ಲಿ ಆ ‘ಒಬ್ಬ’ ಯಶಸ್ವಿಯಾಗುತ್ತಾನೆ. ನಮ್ಮ ನ್ಯಾಯಾಂಗ ವ್ಯವಸ್ಥೆಯಲ್ಲಿ ಜ್ಯೂರಿ ವ್ಯವಸ್ಥೆ ಇಲ್ಲದಿರುವುದರಿಂದ ನಿರ್ದೇಶಕ ಸೂರಿ ಸಮಾಜದ ಬೇರೆ ಬೇರೆ ವರ್ಗಗಳಿಗೆ ಸೇರಿದ ಹತ್ತು ಜನರ ಆಯೋಗ ಈ ತನಿಖೆ ನಡೆಸುವ ರೀತಿಯಲ್ಲಿ ಬದಲಾವಣೆ ಮಾಡಿಕೊಂಡಿದ್ದ. ‘ಹುಡುಗ ಅಪರಾಧಿಯಲ್ಲ’ ಎಂದು ವಾದಿಸುವ ‘ಒಬ್ಬ’ನ ಪಾತ್ರವನ್ನು ನಾನು ನಿರ್ವಹಿಸಿದ್ದೆ. ಹವ್ಯಾಸಿ ರಂಗಭೂಮಿಯ ಅನೇಕ ಪ್ರತಿಭಾವಂತ ಕಲಾವಿದರನ್ನು ಉಳಿದ ಪಾತ್ರಗಳಿಗೆ ಸೂರಿ ಆರಿಸಿಕೊಂಡಿದ್ದ. ಶ್ರೀನಿವಾಸ ಮೇಷ್ಟ್ರು,ಸತ್ಯಸಂಧ,ಬಿ.ವಿ.ರಾಜಾರಾಂ, ಮಂಜುನಾಥ ಹೆಗ್ಡೆ, ಸೇತೂರಾಂ,ಕೃಷ್ಣೇಗೌಡ, ಸಿಹಿಕಹಿ ಚಂದ್ರು, ಪ್ರಕಾಶ್ ರೈ(ರಾಜ್), ನಾಗೇಂದ್ರ ಶಾ,ದತ್ತಣ್ಣ,ಪೃಥ್ವೀರಾಜ್ ,ಜಿ.ವಿ.ಶಿವಾನಂದ್..ಇವರುಗಳೆಲ್ಲಾ ಈಮುಖದವರು ನಾಟಕದ ಒಂದಲ್ಲ ಒಂದು ಪ್ರದರ್ಶನದಲ್ಲಿ ಅಭಿನಯಿಸಿದ್ದಾರೆ. ಮೊದಲಿನಿಂದ ಕೊನೆಯವರೆಗೆ ಪ್ರೇಕ್ಷಕರನ್ನು ‘ಆಸನಗಳ ತುದಿ’ಯಲ್ಲಿ ಕೂರುವಂತೆ ಮಾಡುವ ಈ ನಾಟಕವನ್ನು ಸೊಗಸಾಗಿ ರೂಪಾಂತರಿಸಿ ನಿರ್ದೇಶಿಸಿದ ಶ್ರೇಯ ಸೂರಿಗೆ ಸಲ್ಲಬೇಕು. ಅನೇಕ ಪ್ರದರ್ಶನಗಳನ್ನು ಕಂಡ ಈ ನಾಟಕದ ಅಷ್ಟೂ ಪ್ರದರ್ಶನಗಳಲ್ಲಿ ಬದಲಾಗದೇ ಉಳಿದು ಅಭಿನಯಿಸಿದ ಕಲಾವಿದ ಬಹುಶಃ ನಾನೊಬ್ಬನೇ! ಇಲ್ಲಿ ವಿಶೇಷವಾಗಿ ಸತ್ಯಸಂಧನನ್ನು ನಾನು ನೆನೆಯಲೇಬೇಕು. ಸತ್ಯಸಂಧ ಕನ್ನಡ ಹವ್ಯಾಸೀ ರಂಗಭೂಮಿ ಕಂಡ ಅಪರೂಪದ ಪ್ರತಿಭೆ.ಸದೃಢ ನಿಲುವಿನ, ನೇರನುಡಿಯ,ತೀಕ್ಷ್ಣದೃಷ್ಟಿಯ ಸತ್ಯ ಮಾತುಗಳನ್ನು ಎಂದೂ ‘ಹೊರಳಿಸಿ’ ಆಡಿದವನಲ್ಲ! ಯಾವ ಮುಲಾಜು ದಾಕ್ಷಿಣ್ಯಗಳೂ ಇಲ್ಲದೆ ತನಗೆ ಸರಿ ಅನ್ನಿಸಿದ್ದನ್ನು ಗಟ್ಟಿದನಿಯಲ್ಲಿ ಹೇಳುತ್ತಿದ್ದ.ಎಂಥ ಪಾತ್ರವೇ ಆಗಲಿ ತಕ್ಕ ಪೂರ್ವಸಿದ್ಧತೆಗಳನ್ನು ಮಾಡಿಕೊಂಡು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ. ಬೇರೆ ಭಾಷೆಯ ನಟರನ್ನು ಕನ್ನಡಕ್ಕೆ ತಂದು ಮುಖ್ಯ ಪಾತ್ರಗಳನ್ನು ನೀಡಿ ಮೆರೆಸುತ್ತಿದ್ದ ಚಿತ್ರನಿರ್ದೇಶಕರ ವಿರುದ್ಧ ಹರಿಹಾಯುತ್ತಿದ್ದ.’ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಿ ಬೆಳೆಸುವುದು ನಿಮ್ಮ ಕರ್ತವ್ಯ;ಅವಕಾಶ ಸಿಕ್ಕಿದರೆ ನಿಮ್ಮ ಪರಭಾಷೆಯ ನಟರಷ್ಟೇ ಉತ್ತಮವಾಗಿ —ಅಥವಾ ಇನ್ನೂ ಮಿಗಿಲಾಗಿ ಅಭಿನಯಿಸಿ ತೋರಿಸುತ್ತೇವೆ’ ಎಂದು ದೊಡ್ಡ ದೊಡ್ಡ ನಿರ್ದೇಶಕರಿಗೆ ಸವಾಲು ಎಸೆಯುತ್ತಿದ್ದ.ನನ್ನ ‘ರಥಮುಸಲ’ ನಾಟಕದಲ್ಲಿ ವಸ್ಸಕಾರ ಎಂಬ ಮುಖ್ಯಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದ.ನನ್ನ ಅನೇಕ ಟಿ.ವಿ.ಕಿರುಚಿತ್ರಗಳಲ್ಲಿಯೂ ಅಭಿನಯಿಸಿದ್ದ ಸತ್ಯ ಸದಾ ಒಳ್ಳೆಯ ಪಾತ್ರಗಳಿಗಾಗಿ ತುಡಿಯುತ್ತಿದ್ದ.ನಮ್ಮ ಹವ್ಯಾಸಿ ರಂಗಭೂಮಿಯ ಎಲ್ಲ ನಿರ್ದೇಶಕರ ಅಚ್ಚುಮೆಚ್ಚಿನ ಸತ್ಯಸಂಧ,ನಿಜಕ್ಕೂ ಅನ್ವರ್ಥನಾಮನೇ ಆಗಿದ್ದ.

ಒಮ್ಮೆ ‘ಈ ಮುಖದವರು’ ನಾಟಕದ ಮೂರು ಪ್ರದರ್ಶನಗಳು ಯವನಿಕಾ ರಂಗಮಂದಿರದಲ್ಲಿ ಆಯೋಜನೆಗೊಂಡಿದ್ದವು.ಎರಡು ದಿನದ ಪ್ರದರ್ಶನಗಳನ್ನು ಯಶಸ್ವಿಯಾಗಿ ಪೂರೈಸಿದ ಮೇಲೆ ಸತ್ಯಸಂಧ ರಾಜಾರಾಮನಿಗೆ ಹೇಳಿದ:”ಗುರುವೇ,ನಾಳೆ ಷೋ ಆದಮೇಲೆ ಭರ್ಜರಿ ಪಾರ್ಟಿ ಆಗಬೇಕು..ಇಲ್ಲದಿದ್ರೆ ನಾನು ಸುಮ್ಮನಿರೋಲ್ಲ ನೋಡು”. “ಆಯ್ತು ಬಿಡಣ್ಣಾ,ಅದು ಯಾವ ಮಹಾ ದೊಡ್ಡ ವಿಷಯ?” ಎಂದು ರಾಜಾರಾಮನೂ ಮರುನುಡಿದ.

ಮರುದಿನ ನಾನು ದೂರದರ್ಶನ ಕೇಂದ್ರದಲ್ಲಿ ‘ಪ್ರಿಯ ವೀಕ್ಷಕ’ ರ ಪತ್ರಾವಲೋಕನದಲ್ಲಿ ಮುಳುಗಿದ್ದಾಗಲೇ ಸಂಕೇತ್ ಕಾಶಿಯ ಫೋನ್ ಕರೆ ಬಂತು:’ಸತ್ಯಸಂಧನಿಗೆ ಹೃದಯಾಘಾತವಾಗಿದೆ…ಸಿಂಧಿ ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಮಾಡಿದಾರೆ”! ಅಯ್ಯೋ ಗ್ರಹಚಾರವೇ! 35 ರ ಹರಯದ ಸದೃಢ ಶರೀರದ ಸತ್ಯನಿಗೆ ಹೃದಯಾಘಾತವೇ! ಒಂದು ಕ್ಷಣವೂ ತಡಮಾಡದೇ ಆಸ್ಪತ್ರೆಯತ್ತ ಧಾವಿಸಿದೆ.ಗಾಡಿ ನಿಲ್ಲಿಸಿ ಒಳಗೋಡುತ್ತಿದ್ದಂತೆಯೇ ಪ್ರಜಾವಾಣಿಯ ಜಿ.ಎಸ್.ಸದಾಶಿವ ಎದುರಾದರು.’ಸತ್ಯ ಹೇಗಿದಾನೆ ಸದಾಶಿವ್?’ ಎಂದು ಆತಂಕದಿಂದಲೇ ಕೇಳಿದೆ.ಸದಾಶಿವ ಅವರು ನಿಟ್ಟುಸಿರಿಟ್ಟು ತಲೆ ಆಡಿಸಿ,’he is no more..’ ಎಂದುಬಿಟ್ಟರು.ಅಷ್ಟು ದೊಡ್ಡಮಟ್ಟದ ಆಘಾತವನ್ನು ಬಹಳ ಕಡಿಮೆ ಪ್ರಸಂಗಗಳಲ್ಲಿ ನಾನು ಎದುರಿಸಿರುವುದು.ಕೈಯಲ್ಲಿದ್ದ ಹೆಲ್ಮೆಟ್ ಜಾರಿ ಧಡ್ಡೆಂದು ನೆಲಕ್ಕೆ ಬಿತ್ತು.ಏನೂ ಮಾತಾಡಲು ತೋಚದೆ ಕೆಲ ಕ್ಷಣಗಳು ಮೂಕನಾಗಿ ನಿಂತುಬಿಟ್ಟೆ. ‘ಹೋಗಿ ನೋಡಿಕೊಂಡು ಬನ್ನಿ’ ಎಂದು ನುಡಿದು ಸದಾಶಿವ ಹೊರಟುಬಿಟ್ಟರು. ಸಾವರಿಸಿಕೊಂಡು ನಿಧಾನವಾಗಿ ಒಳನಡೆದೆ. ರಂಗಭೂಮಿಯ ನಾಲ್ಕಾರು ಗೆಳೆಯರು ಅದಾಗಲೇ ಬಂದು ಶೋಕಿಸುತ್ತಾ ನಿಂತಿದ್ದರು. ಸತ್ಯಸಂಧ ನಿದ್ರಿಸುತ್ತಿರುವನೇನೋ ಎಂಬಂತಹ ಮುಖಮುದ್ರೆ ಧರಿಸಿ ಮಲಗಿದ್ದ. ಕೊನೆಕೊನೆಯ ದಿನಗಳಲ್ಲಂತೂ ತೀರಾ ಅಂತರಂಗದ ಗೆಳೆಯನೇ ಆಗಿಬಿಟ್ಟಿದ್ದ ಸತ್ಯನ ಈ ಅನಿರೀಕ್ಷಿತ ನಿರ್ಗಮನ ಅರಗಿಸಿಕೊಳ್ಳಲಾಗದ ಆಘಾತವಾಗಿತ್ತು.ಅವನ ಕಂಚಿನ ಕಂಠದಲ್ಲಿ ಹೊಮ್ಮುತ್ತಿದ್ದ ಮೊನಚು ಸಂಭಾಷಣೆಗಳು..ಅವನ ನಿರ್ಭಿಡೆಯ ನೇರ ಮಾತುಗಳು ಕಿವಿಯಲ್ಲಿ ಮೊರೆಯುತ್ತಿದ್ದವು.

ಸತ್ಯನ ಅಂತ್ಯಸಂಸ್ಕಾರದ ಸಿದ್ಧತೆಗಳು ಅವನ ಮನೆಯ ಮುಂದೆ ನಡೆಯುತ್ತಿದ್ದಾಗ ಹೆಚ್ಚುಕಡಿಮೆ ಇಡೀ ಹವ್ಯಾಸೀ ರಂಗಭೂಮಿಯೇ ಅಲ್ಲಿ ನೆರೆದಿತ್ತೆಂದರೆ ಅದು ಅವನ ಗಳಿಸಿಕೊಂಡಿದ್ದ ಜನಪ್ರೀತಿಗೆ ಸಾಕ್ಷಿ.

‘ಪಾರ್ಟಿ ಮಾಡಬೇಕು ಗುರುವೇ’ ಎನ್ನುತ್ತಲೇ ನಾಟಕದಲ್ಲಿ ನಮೂದಿಸಿರದ ನಿಷ್ಕ್ರಮಣವನ್ನು ತೆಗೆದುಕೊಂಡು ನಡೆದೇಬಿಟ್ಟ ಈ ಗೆಳೆಯನ ‘ಅವಸರ’ಕ್ಕೆ ಹೇಳುವುದಾದರೂ ಏನಿದೆ? ‘ಪಾರ್ಟಿ ಮಾಡೋಣ ಬಾ ಗೆಳೆಯಾ’ ಎಂದು ನಾವು ಕರೆಯುತ್ತಲೇ ಇದ್ದರೂ ಅವನ ಧಾಪುನಡಿಗೆಯ ಓಟ ನಿಲ್ಲಲೇ ಇಲ್ಲ.

“ಇನ್ನು ಎಲ್ಲಿಗೋಟ..ನಂದನದ ತೋಟ.”

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

November 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: