ಕಾಡುವ ಕವಿತೆಗಳು ಭಾಗ –1…

ಪ್ರಿಯದರ್ಶಿನಿ ಮತ್ತು ಮೇಘದರ್ಶಿನಿ ಶೆಟ್ಟರ

ಶ್ರೀಮತಿ ಸವಿತಾ ನಾಗಭೂಷಣ ಅವರ ʼತಂಗಿ ಹುಟ್ಟಿದಳುʼ ಹಾಗೂ ಶ್ರೀಮತಿ ಅನಸೂಯ ಜಹಗೀರದಾರ ಅವರ ʼಇಲ್ಲಿ ಮಕ್ಕಳು ಅಳುವುದಿಲ್ಲʼ – ಈ ಎರಡೂ ಪದ್ಯಗಳು ನನಗೆ ಅಚ್ಚುಮೆಚ್ಚು. ʼತಂಗಿ ಹುಟ್ಟಿದಳುʼ ಪದ್ಯ ಬಹಳ ವಿಶಿಷ್ಟವಾಗಿದೆ. ಈಗಾಗಲೇ ಒಂದು ಹೆಣ್ಣುಮಗುವಿರುವ ಮನೆಯಲ್ಲಿ ಎರಡನೆಯದೂ ಹೆಣ್ಣುಮಗು ಎಂದು ತಿಳಿದಾಗ ವ್ಯಕ್ತವಾಗುವ ಜನಸಾಮಾನ್ಯರ ಪ್ರತಿಕ್ರಿಯೆ ಮತ್ತು ಅವರ ಗೊಂದಲಮಯ ಮನಸ್ಥಿತಿಯ ಸಾರಾಂಶವನ್ನು ಈ ಪದ್ಯದ ಮೂಲಕ ಸವಿತಾ ನಾಗಭೂಷಣ ಅವರು ಪರಿಣಾಮಕಾರಿಯಾಗಿ ಹಿಡಿದಿಟ್ಟಿದ್ದಾರೆ. ʼಇಲ್ಲಿ ಮಕ್ಕಳು ಅಳುವುದಿಲ್ಲʼ ಕವಿತೆಯು ಉದ್ಯೋಗಸ್ಥ ಮಹಿಳೆಯರ ಮಕ್ಕಳ ಕುರಿತು ಬರೆದದ್ದು. ಇಂತಹ ಮಕ್ಕಳ ಬೆಳವಣಿಗೆ, ಅವರ ದಿನಚರಿ, ಪಾಲಕರೊಂದಿಗೆ ಹೆಚ್ಚಿನ ಸಮಯ ಕಳೆಯಲಾಗದ ಮಕ್ಕಳ ತುಮುಲ, ಭಾವನೆಗಳನ್ನು ಅನಸೂಯ ಜಹಗೀರದಾರ ಅವರು ಸೂಕ್ಷ್ಮವಾಗಿ ಗ್ರಹಿಸಿ ವಿವರಿಸಿದ್ದಾರೆ. ಮಕ್ಕಳು, ಪಾಲಕರು ಓದಿ ಇಷ್ಟಪಡಬಹುದಾದ ಅದ್ಭುತ ಕವಿತೆಗಳಿವು. ಈ ಎರಡೂ ಪದ್ಯಗಳು ಓದಿದಷ್ಟು ಸಲ ಹೊಸದಾಗಿಯೇ ಮನಸ್ಸಿನಲ್ಲಿಳಿಯುತ್ತವೆ. ಮತ್ತೆ ಮತ್ತೆ ಓದಿಕೊಂಡರೆ ಸಾಕು ಬೇರೆ ವಿವರಣೆ ಬೇಡವೇ ಬೇಡ ಎನ್ನುವಷ್ಟು ಸ್ಪಷ್ಟವಾಗಿವೆ. 

ನನ್ನ ತಾಯಿ ಉದ್ಯೋಗಸ್ಥೆ ಹಾಗೂ ನನಗೊಬ್ಬಳು ತಂಗಿ ಇರುವ ಕಾರಣ ವಿಶೇಷವಾಗಿ ಈ ಪದ್ಯಗಳು ನನಗೆ ಆಪ್ತವೆನಿಸುತ್ತವೆ. ಲಿಂಗತಾರತಮ್ಯವನ್ನು ನಮ್ಮ ಮನೆಯಲ್ಲಿ ನಾವು ಅನುಭವಿಸಿಯೇ ಇಲ್ಲ ಎನ್ನಬಹುದು. ʼಎಲ್ಲರ ಮನೆಯಲ್ಲೂ ಹೀಗೇ ಇರುತ್ತದೆʼ ಅಂದುಕೊಳ್ಳುತ್ತ ಬೆಳೆದೆವು. ಆದರೆ ಅನೇಕ ಸ್ನೇಹಿತೆಯರ, ನೆರೆಹೊರೆಯವರ ಜತೆ ಬೆರೆಯುವ ಸಮಯದಲ್ಲಿ ʼಎಲ್ಲರ ಮನೆಗಳೂ ನಮ್ಮ ಮನೆಯಂತೆಯೇ ಇರಲಾರವುʼ ಎಂಬ ತಿಳುವಳಿಕೆ ಬಂದಾಗ ಅಂತಹ ಹೆಣ್ಣುಮಕ್ಕಳ ಬಗ್ಗೆ ಬೇಜಾರಾಗುತ್ತಿತ್ತು. ಬಿ.ಎಸ್ಸಿ.ಯಲ್ಲಿದ್ದಾಗ ಕಾಲೇಜಿನಲ್ಲಿ ಗೆಳತಿಯರು ತಮ್ಮ ಮನೆಗಳಲ್ಲಿ ತಮಗೆ, ತಾಯಿ, ತಂಗಿಯರಿಗೆ ಹಾಗೂ ಮನೆಯ ಇತರ ಗಂಡುಮಕ್ಕಳು, ಮೊಮ್ಮಕ್ಕಳಿಗೆ ಹಿರಿಯರು ತೋರುವ ಪ್ರೀತಿ ಕಾಳಜಿಗಳಲ್ಲಿನ ತಾರತಮ್ಯದ ಕುರಿತು ಹೇಳಿಕೊಳ್ಳುತ್ತಾ ನಮ್ಮೆದುರು ಸಿಟ್ಟು ಹೊರಹಾಕುತ್ತಿದ್ದರು. ಎಂ.ಎಸ್ಸಿ.ಯಲ್ಲಿದ್ದಾಗಲೂ ಸಹ ಉನ್ನತ ಶಿಕ್ಷಣ ಪಡೆಯಲು ಮನೆಯಲ್ಲಿ ಒಪ್ಪಿಗೆ ನೀಡದ ಕಾರಣ ನನ್ನ ಗೆಳತಿಯರು ಅವರ ಪಾಲಕರೊಡನೆ ಮಾತುಬಿಟ್ಟ, ಅವರೊಡನೆ ಜಗಳವಾಡಿ ಒಪ್ಪಿಸಿದ ಸನ್ನಿವೇಶಗಳನ್ನು ನಮ್ಮೊಡನೆ ಹಂಚಿಕೊಳ್ಳುವಾಗಲೆಲ್ಲ ಇಂತಹ ವಿಷಯದ ಕುರಿತು ಲೇಖನವೊಂದನ್ನು ಬರೆಯಬೇಕೆಂಬ ಆಸೆ ಚಿಗುರೊಡೆಯುತ್ತಿತ್ತು. ಮೇಲಿನ ಎರಡು ಪದ್ಯಗಳು ನೆನಪಾದಾಗಲೆಲ್ಲ ಆ ಆಸೆ ತೀವ್ರಗೊಳ್ಳುತ್ತಿತ್ತು. ಮೊಮ್ಮಕ್ಕಳಲ್ಲಿ ಹೆಣ್ಣು- ಗಂಡು ಎಂಬ ಭೇದಭಾವ, ಸೊಸೆಯಂದಿರು- ಹೆಣ್ಣುಮಕ್ಕಳಲ್ಲಿ ತರತಮ – ಇವೆಲ್ಲ ಆರೋಗ್ಯಕರ ಕುಟುಂಬದ ಲಕ್ಷಣಗಳಲ್ಲವೇ ಅಲ್ಲ ಅನಿಸುತ್ತಿತ್ತು. ಜೊತೆಗೆ ನಮ್ಮ ಮನೆಯ ನಮ್ಮ ಪರಿಸರದ ಬಗ್ಗೆ ಹೆಮ್ಮೆಯಾಗುತ್ತಿತ್ತು. ಏನಾದರೂ ಕೇಳುವ ಮುಂಚೆ, ಬೇಕು ಎಂದೊಡನೆ, ಕೇಳದೆಯೇ ಎಷ್ಟೊಂದು ಪಡೆದೆವು ಎಂದು ಅಚ್ಚರಿಯೂ ಆಗುತ್ತಿತ್ತು. 

ನನಗಾಗ ಮೂರು ವರ್ಷ. ಮಮ್ಮಿ ಎಂ.ಫಿಲ್.‌ ಮಾಡುತ್ತಿದ್ದರು. ಮನೆತುಂಬ ಆಟದ ಸಾಮಾನುಗಳು. ಕೈಗೆ ಸಿಕ್ಕ ಹಣಿಗೆ, ದಾರ, ಪೆನ್ನು, ಕಡ್ಡಿ, ಚಪ್ಪಲಿ- ಹೀಗೆ ಏನೇ ಸಿಕ್ಕರೂ ಆಟವಾಡುತ್ತಿದ್ದೆ. ನನ್ನ ತಂಗಿಯೂ ನನ್ನ ಹಾಗೇ ಇದ್ದಳು. ನಾನು ಬಾಲವಾಡಿಯಲ್ಲಿದ್ದಾಗ ಮಮ್ಮಿ ಪಿ.ಯು. ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿ ಸೇರಿಕೊಂಡರು. ಆಗ ನಾವು ಮೂವರೇ ಇದ್ದದ್ದು. ಕರ್ನಾಟಕ ವಿಶ್ವವಿದ್ಯಾಲಯದ ಸ್ಟಾಫ್ ಕ್ವಾರ್ಟರ್ಸ್‌ನಲ್ಲಿ. ಮೂರು ಅಂತಸ್ತಿನ ಅಪಾರ್ಟಮೆಂಟ್‌ ಅದು. ಪೂರ್ತಿ ಮೇಲಿನದ್ದು ನಮ್ಮ ಮನೆ. ಮಧ್ಯಾಹ್ನ ಕ್ಲಾಸ್‌ ಇದ್ದಾಗ ಮಮ್ಮಿ ನನ್ನನ್ನು ಕೆಳಗಿನ ಮನೆಯಲ್ಲಿ ಬಿಟ್ಟುಹೋಗುತ್ತಿದ್ದರು. ಕುಸುಮಾ ಅಂಟಿ ಹಾಗೂ ಈಶ್ವರ ಬಸವರೆಡ್ಡಿ ಅಂಕಲ್‌ ಅವರ ಮನೆ ಅದು. ಬಾಲ್ಯ ಎಂದೊಡನೆ ನೆನಪಾಗುವ ಅನೇಕ ಸಂಗತಿಗಳಲ್ಲಿ ಇವರೊಡನೆಯ ಒಡನಾಟವೂ ಒಂದು. ಕೆಲವೊಮ್ಮೆ ನಾನು ಮಲಗಿರುತ್ತಿದ್ದುದು ನಮ್ಮ ಮನೆಯಲ್ಲಿ. ನಿದ್ದೆಯಿಂದ ಎದ್ದಾಗ ಕೆಳಗಿನ ಮನೆಯಲ್ಲಿರುತ್ತಿದ್ದೆ. ಎಲ್ಲ ಮನೆಗಳೂ ಬಹುತೇಕ ಒಂದೇ ತರ ಇರುತ್ತಿದ್ದವು. ನನಗೆ ನಮ್ಮ ಮನೆಯೋ ಅಥವಾ ಅವರ ಮನೆಯೋ ಎಂದು ಗೊಂದಲವಾಗುತ್ತಿತ್ತು! ಕೆಲವು ಕ್ಷಣ ಬೇಕಾಗುತ್ತಿತ್ತು. ಎದ್ದಾಗ ಕುಸುಮಾ ಅಂಟಿ ಮುಖತೊಳೆದು ತಿನ್ನಲು ಕುಡಿಯಲು ಏನಾದರೂ ಕೊಡುತ್ತಿದ್ದರು. ನಂತರದ ದಿನಗಳಲ್ಲಿ ಪಪ್ಪನ ಅಕ್ಕ ಗೌರಮ್ಮನವರು (ನಮಗೆ ಗೌರಕ್ಕ ಅಮ್ಮ) ನಮ್ಮೊಡನಿರಲು ಬಂದರು. ಸುಮಾರು ಹನ್ನೆರಡು ವರ್ಷ ನಮ್ಮ ಜೊತೆಗಿದ್ದರು. 

ನಾನು ಒಂದನೇ ತರಗತಿಯಲ್ಲಿದ್ದಾಗ ತಂಗಿ ಮೇಘದರ್ಶಿನಿ ಹುಟ್ಟಿದಳು. ಆಕೆ ಹತ್ತು ತಿಂಗಳಿನವಳಿದ್ದಾಗ ಮಮ್ಮಿ ಬೆಳಗಾವಿಯ ಆರ್.ಎಲ್.ಎಸ್.‌ ಕಾಲೇಜಿನಲ್ಲಿ ಲೆಕ್ಚರರ್‌ ಆಗಿ ಸೇರಿಕೊಂಡರು. ಬಹುಶಃ ಒಂದು ವರ್ಷ ಅಲ್ಲಿದ್ದರು. ಪಪ್ಪ ಮಮ್ಮಿಯನ್ನು ಬೆಳಿಗ್ಗೆ ಬಸ್‌ ಸ್ಟಾಪ್‌ಗೆ ಡ್ರಾಪ್‌ ಮಾಡಿಬರುತ್ತಿದ್ದರು. ಮಮ್ಮಿ ಹೊರಡಲು ತಯಾರಾಗುತ್ತಿದ್ದರು. ಕೆಲವೊಮ್ಮೆ ಮೇಘ ಎದೆಹಾಲು ಕುಡಿಯುತ್ತಿರುವಾಗಲೇ ಪಪ್ಪ ಕೆಳಗೆ ಹಾರ್ನ್‌ ಮಾಡುತ್ತಿದ್ದುದು, ಮಮ್ಮಿ ಅವಸರ ಮಾಡಿ ಅವಳಿಂದ ಬಿಡಿಸಿಕೊಂಡು ಹೋಗುವಾಗ ಇವಳು ದೊಡ್ಡ ದನಿಯಲ್ಲಿ ಅಳುತ್ತಿದ್ದುದು, ಅವಳನ್ನೆತ್ತಿಕೊಂಡು ಗೌರಕ್ಕ ಅಮ್ಮ ರಮಿಸುತ್ತಿದ್ದುದು ಇವೆಲ್ಲ ಸಾಮಾನ್ಯ ದೃಶ್ಯಗಳಾಗಿದ್ದವು. ನಂತರ ಗೌರಕ್ಕ ಅಮ್ಮ ನನ್ನನ್ನು ಶಾಲೆಗೆ ಹೋಗಲು ತಯಾರಿ ಮಾಡಿ, ಡಬ್ಬಿ ಕಟ್ಟುತ್ತಿದ್ದರು. ಪಪ್ಪ ಶಾಲೆಗೆ ಬಿಟ್ಟುಬರುತ್ತಿದ್ದರು. ಮಾರನೇ ವರ್ಷವೇ ಮಮ್ಮಿ ಹುಬ್ಬಳ್ಳಿಯ ಎಚ್.‌ಎಸ್.‌ ಕೋತಂಬ್ರಿ ಕಾಲೇಜು ಸೇರಿಕೊಂಡರು. ಅಲ್ಲಿ ಇಂಗ್ಲಿಷ್ ವಿಭಾಗದಲ್ಲಿ ಸುಮಾರು ಎಂಟು ವರ್ಷ ಕಾರ್ಯ ನಿರ್ವಹಿಸಿದರು. 

ಪಪ್ಪನ ಹೆಸರು ಪ್ರೊ. ಶಿವಾನಂದ ಶೆಟ್ಟರ, ಮಮ್ಮಿ ಡಾ. ಸುಮಂಗಲಾ ಶೆಟ್ಟರ. ಇಬ್ಬರೂ ಶಿಕ್ಷಕರು, ಕಲಾಸಕ್ತರು, ಸಾಹಿತ್ಯಾಸಕ್ತರೂ ಆಗಿದ್ದರಿಂದ ನಮ್ಮ ಅಭಿರುಚಿಗಳನ್ನು ಬಹಳ ಸಣ್ಣವಯಸ್ಸಿನಲ್ಲಿಯೇ ನಾವು ಗುರುತಿಸಿಕೊಳ್ಳಲು ಸಹಾಯವಾಯಿತು. ನಮ್ಮ ಮನೆ ಮಾತ್ರವಲ್ಲ ಇಡೀ ಕುಟುಂಬದ ಪರಿಸರವು ಅಷ್ಟೇನೂ ಭಿನ್ನವಾಗಿರಲಿಲ್ಲ. ಮನೆಯಲ್ಲಿ, ಶಾಲೆಯಲ್ಲಿ ಕಥೆ ಹೇಳುವವರಿಂದ ಕಥೆಗಳು, ಹಾಡುಗಳು ಯಥೇಚ್ಛವಾಗಿ ದೊರೆತವು. ಎಸ್.ಎಲ್.‌ ಭೈರಪ್ಪನವರ ಕಾದಂಬರಿಗಳನ್ನು ಒಂದೂ ಬಿಡದಂತೆ ಮಮ್ಮಿ ಓದುತ್ತಿದ್ದರು. ನನಗೆ ನೆನಪಿದ್ದಂತೆ ಒಮ್ಮೆ ಅವರು ʼಆವರಣʼ ಕೃತಿ ಓದುವಾಗ ನಮ್ಮಿಬ್ಬರೆಡೆಗೆ ಗಮನ ಕೊಡದ ಕಾರಣ ಮಾರನೇ ದಿನ ನಾನು ಆ ಪುಸ್ತಕವನ್ನು ರ್ಯಾಕ್‌ನಲ್ಲಿ ಮುಚ್ಚಿಟ್ಟಿದ್ದೆ! ಸಂಜೆ ಆಟಕ್ಕೆ ಹೊರಗೆ ಹೋಗುವಾಗ ಅದನ್ನು ಹೊರಗಿಡುತ್ತಿದ್ದೆ!! ಮಮ್ಮಿ ಯಾವುದಾದರೂ ಪುಸ್ತಕ ಓದುವಾಗ ಅವರ ಓದು ಯಾವುದೇ ಹಂತದಲ್ಲಿದ್ದರೂ ಸಹ ನಾವು “ಕಥೆ ಏನು? ಎಲ್ಲಿಗೆ ಬಂತು?” ಎಂದು ಕೇಳಿದಾಗ ಅವರು ಎಂದೂ ನಮ್ಮನ್ನು ನಿರಾಶೆಗೊಳಿಸುತ್ತಿರಲಿಲ್ಲ. ವಾರದ ನಂತರ ನಾನು ಮತ್ತದೇ ಪ್ರಶ್ನೆ ಕೇಳುತ್ತಿದ್ದೆ. ಮಮ್ಮಿ ಕಥೆ ಮುಂದುವರೆಸುತ್ತಿದ್ದರು. 

ಆದರೆ ಪಪ್ಪ ಹಾಗಲ್ಲ. ಕಥೆ ಹೇಳುತ್ತಲೇ ಪುಸ್ತಕ ಹಾಗೂ ಲೇಖಕರ ಬಗ್ಗೆ ಹೇಳುತ್ತಿದ್ದರು. ಅದನ್ನೆಲ್ಲ ಕೇಳುತ್ತಿದ್ದರೆ, ʼಆ ಪುಸ್ತಕ ಓದಿಯೇ ಬಿಡಬೇಕುʼ ಎನಿಸಿರಬೇಕು; ಅಂತಹ ತೀವ್ರತೆ ಇರುತ್ತಿತ್ತು ವಿವರಣೆಯಲ್ಲಿ. ಗೌರಕ್ಕ ಅಮ್ಮ ಹಾಗೂ ಮಮ್ಮಿಯ ತಾಯಿಯವರಾದ ಶಾಂತವ್ವ ಮರಡಿ (ಶಾಂತಕ್ಕ ಅಮ್ಮ) ಅವರಿಬ್ಬರೂ ನಮಗೆ ಕಥೆಗಳನ್ನು ಪುಸ್ತಕಗಳು, ಪದ್ಯಗಳು, ಪ್ರಚಲಿತ ವಿದ್ಯಮಾನಗಳ ಬಗ್ಗೆ ಹೇಳುತ್ತಿದ್ದದ್ದು ನಮ್ಮ ಕಲ್ಪನಾಶಕ್ತಿಯನ್ನು ವಿಸ್ತರಿಸಿತ್ತು.

‍ಲೇಖಕರು Admin

November 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: