ಶ್ರೀನಿವಾಸ ಪ್ರಭು ಅಂಕಣ – ನಮ್ಮ ಕೂಸು ಮತ್ತೆ ಕಣ್ತೆರೆದಿದೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

78

1987 ಆಗಸ್ಟ್ 12 ನೇ ತಾರೀಖು..ರಾತ್ರಿ 11.30 ರ ಸಮಯ. ರಾಜಾಜಿನಗರದ ಸತ್ತೂರ್ ನರ್ಸಿಂಗ್ ಹೋಮ್ ನ ಆವರಣದಲ್ಲಿ ಬೆಂಚ್ ಮೇಲೆ, ಒಳಗಿನಿಂದ ಬರುವ ಸುದ್ದಿಗಾಗಿ ಕಾತರದಿಂದ ಕಾಯುತ್ತಾ ಕುಳಿತಿದ್ದೆ. ಕುಮಾರಣ್ಣಯ್ಯನೂ ಅಲ್ಲಿಯೇ ಶತಪಥ ಹಾಕುತ್ತಿದ್ದ. ಅಷ್ಟರಲ್ಲೇ ಒಳಗಿನಿಂದ ಬಂದ ದಾದಿಯೊಬ್ಬಳು, “congratulations! ನಿಮಗೆ ಹೆಣ್ಣುಮಗು ಆಗಿದೆ. ಮಗು—ಬಾಣಂತಿ ಆರೋಗ್ಯವಾಗಿದ್ದಾರೆ. ಸ್ವಲ್ಪ ಹೊತ್ತಿಗೆ ವಾರ್ಡ್ ಗೆ ಕರೆದುಕೊಂಡು ಬರ್ತಾರೆ” ಎಂದು ಘೋಷಿಸಿಯೇಬಿಟ್ಟಳು! ಸಧ್ಯ..ಇಬ್ಬರೂ ಕ್ಷೇಮವಾಗಿದ್ದಾರೆ! ನಾನು ಸಾಂಸಾರಿಕ ರಂಗದಲ್ಲೊಂದು ಬಡ್ತಿಯನ್ನು ಪಡೆದು ತಂದೆಯ ಸ್ಥಾನಕ್ಕೇರಿದ್ದೇನೆ! ಸಂಭ್ರಮ—ಸಂತಸ—ನಿರಾಳಗಳ ಒಂದು ಸಮ್ಮಿಶ್ರ ಭಾವಸ್ಥಿತಿಯಲ್ಲಿ ನಾನು ತೇಲುತ್ತಿದ್ದಾಗಲೇ ಅಣ್ಣಯ್ಯ ಬಳಿ ಬಂದು ಕೈ ಕುಲುಕಿ ಅಭಿನಂದನೆಗಳನ್ನು ಹೇಳಿದ. ಅಲ್ಲೇ ಸಿಹಿ ಸುದ್ದಿಗಾಗಿ ಕಾಯುತ್ತಾ ಆತಂಕದಲ್ಲೇ ಕುಳಿತಿದ್ದ ರಂಜನಿಯ ಅಮ್ಮ ಹಾಗೂ ತಂಗಿ ಪದ್ಮಿನಿ ಸಹಾ ಬಳಿ ಬಂದು ಅಭಿನಂದಿಸಿದರು. “ಅಳಿಯಂದಿರ ಜವಾಬ್ದಾರಿ ಹೆಚ್ಚಾಯಿತು ಈಗ! ಇನ್ನು ಬಿಡಿ..ಮಗಳ ಸೆಳೆತ ಬೇಗ ಬೇಗ ಮನೇಗೆ ಬರೋ ಹಾಗೆ ಮಾಡುತ್ತೆ” ಎಂದು ಹಗುರಾಗಿ ಛೇಡಿಸಿದರು ಪೊನ್ನಮ್ಮ! ಅದೇ ವೇಳೆಗೆ ಬಟ್ಟೆಯಲ್ಲಿ ಸುತ್ತಿಕೊಂಡಿದ್ದ ನನ್ನ ಕೂಸನ್ನು ದಾದಿ ನಮಗೆ ತೋರಿಸಲೆಂದು ಹೊರಕರೆತಂದಳು. ಆ ದೃಶ್ಯವಂತೂ ಇನ್ನೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಆ ನನ್ನ ಪುಟ್ಟ ಕೂಸಿಗೆ ತಲೆಯ ತುಂಬಾ ಕೂದಲು! ಮುಷ್ಠಿ ಕಟ್ಟಿ ಬಾಯೊಳಗೆ ತುರುಕಿಕೊಂಡು ಲೊಟ್ಟೆ ಹೊಡೆಯುತ್ತಿದ್ದಾಳೆ! ಸಿಜೇ಼ರಿಯನ್ ಆದ್ದರಿಂದ ಹೊರಬರುವ ಸಮಯದಲ್ಲಿ ಹೆಚ್ಚಿನ ಯಾತನೆಯಾಗದೆ ಮುಖದಲ್ಲಿ ಹೆಚ್ಚು ಆಯಾಸವೇನೂ ಕಾಣುತ್ತಿಲ್ಲ! ಹುಬ್ಬುಗಂಟಿಕ್ಕಿಕೊಂಡು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಎಲ್ಲರನ್ನೂ ಗುರುತಿಟ್ಟುಕೊಳ್ಳಲೆಂಬಂತೆ ನೋಡುತ್ತಿದ್ದಾಳೆ! “ಓಹೋ! ಹುಬ್ಬುಗಂಟು ನೋಡಿದರೇ ಗೊತ್ತಾಗಿಬಿಡುತ್ತೆ ಪ್ರಭು ಮಗಳು ಅಂತ!” ಎಂದು ಅಣ್ಣಯ್ಯ ರೇಗಿಸಿದ. ರಂಜನಿಯನ್ನೂ ರೂಂಗೆ ಕರೆತಂದಿದ್ದಾರೆಂದು ಮತ್ತೊಬ್ಬ ದಾದಿ ಬಂದು ತಿಳಿಸಿದ ಕೂಡಲೇ ಅವಳನ್ನು ನೋಡಲು ಧಾವಿಸಿದೆವು.ಸಿಜೇ಼ರಿಯನ್ ಹೆರಿಗೆಯ ನಂತರ ರಂಜನಿ ಬಸವಳಿದುಹೋಗಿದ್ದಳು. ಸಣ್ಣ ಪುಟ್ಟ ನೋವುಗಳಿಗೂ ದೊಡ್ಡದಾಗಿಯೇ ಪ್ರತಿಕ್ರಿಯಿಸುವ ಸೂಕ್ಷ್ಮ ಪ್ರಕೃತಿಯ ರಂಜನಿ, ಆ ಆಪರೇಷನ್ ನಂತರದ ನೋವನ್ನು ಹೇಗಾದರೂ ಸಹಿಸಿಕೊಳ್ಳುತ್ತಾಳೋ ಎಂಬ ಆತಂಕ ನನ್ನನ್ನು ಕಾಡುತ್ತಿದ್ದುದು ಸುಳ್ಳಲ್ಲ. ವಾಸ್ತವವಾಗಿ ಅವಳ ತಾಯ್ತನದ ಹಂಬಲ…ತನ್ನ ಕೂಸನ್ನು ಹೊತ್ತು ಹೆತ್ತು ತನ್ನ ಕನಸಿನಂತೆ ಬೆಳೆಸುವ ವಾಂಛೆ ಉಳಿದೆಲ್ಲ ನೋವುಗಳ ಭಯವನ್ನೂ ಹಿನ್ನೆಲೆಗೆ ಸರಿಸಿಬಿಟ್ಟಿತ್ತು ಎಂದು ಕಾಣುತ್ತದೆ!
ನಾಲ್ಕಾರು ದಿನ ಆಸ್ಪತ್ರೆಯಲ್ಲೇ ವಿಶ್ರಾಂತಿ ತೆಗೆದುಕೊಂಡ ನಂತರ ತಾಯಿ ಮಗುವನ್ನು ಮನೆಗೆ ಕರೆದುಕೊಂಡು ಬಂದೆವು.

ಮರುದಿನ ನಾನು ಆಫೀಸ್ ನಲ್ಲಿ ಎಲ್ಲರಿಗೂ ಮಗಳು ಹುಟ್ಟಿದ ಸುದ್ದಿಯನ್ನು ಹೇಳಿ ನಂದಿನಿ ಫೇಡೆಯನ್ನು ಕೊಟ್ಟು ಸಂಭ್ರಮಿಸಿದೆ. ಒಂದಿಬ್ಬರ ಆ ಸಂದರ್ಭದ ಪ್ರತಿಕ್ರಿಯೆ ಮಾತ್ರ ಅಚ್ಚರಿಯನ್ನೂ ಗಾಬರಿಯನ್ನೂ ಹುಟ್ಟಿಸುವಂತಿತ್ತು. ತಾಂತ್ರಿಕ ವಿಭಾಗದ ಮಹಾಲಕ್ಷ್ಮಿ ಎಂಬ ಹೆಣ್ಣುಮಗಳಿಗೆ ಫೇಡೆಯನ್ನು ಕೊಟ್ಟು ‘ನನಗೆ ಮಗಳು ಹುಟ್ಟಿದ್ದಾಳೆ’ ಎಂದು ಹೇಳಿದ್ದು ಆಕೆಯ ಕಿವಿಗೆ ಸರಿಯಾಗಿ ಬೀಳಲಿಲ್ಲವೇನೋ..ಬದಿಯಲ್ಲಿದ್ದ ಮತ್ತೊಬ್ಬರಿಗೆ, ‘congratulate him sir.. he is blessed with a son’ ಎಂದರು! ‘ಮಗನಲ್ಲ ಮೇಡಂ, ಮಗಳು’ ಎಂದು ನಾನು ತಿದ್ದಿದರೆ ಆ ಹೆಣ್ಣುಮಗಳು ಒಂದು ವಿಧದ ಬೆರಗು—ಕರುಣೆಯಿಂದ ನನ್ನನ್ನು ನೋಡುತ್ತಾ, “ಮಗಳಾ! ನೀವು ಎಲ್ಲರಿಗೂ ಸ್ವೀಟ್ ಕೊಡ್ತಿದೀರಲ್ಲಾ, ಅದಕ್ಕೇ ಮಗ ಇರಬಹುದು ಅಂದುಕೊಂಡೆ” ಎಂದು ನಕ್ಕರು. ನನಗೆ ನಗು ಬರಲಿಲ್ಲ. ಈಗಲೂ ಕಲಿತವರೆನ್ನಿಸಿಕೊಂಡ ವರ್ಗದಲ್ಲೂ ಇಂಥ ಮನಸ್ಥಿತಿಯವರು ಇದ್ದಾರೆಯೇ! ಹೆಣ್ಣು ಹುಟ್ಟಿದರೆ ಹಿಂದಿನವರು ಮೂಗುಮುರಿಯುತ್ತಿದ್ದುದನ್ನು, ಶೋಕಭರಿತರಾಗುತ್ತಿದ್ದುದನ್ನು ಕೇಳಿ ಗೊತ್ತಿದ್ದ ನನಗೆ,ನನ್ನ ಕಣ್ಣೆದುರೇ, ಒಬ್ಬ ಹೆಣ್ಣುಮಗಳೇ ಹಾಗೆ ಪ್ರತಿಕ್ರಿಯಿಸಿದ್ದು ನೋಡಿ ಬಹಳ ಕೆಟ್ಟೆನಿಸಿತು.ಇನ್ನೂ ಒಂದಿಬ್ಬರ ಅದೇ ನಮೂನೆಯ ಪ್ರತಿಕ್ರಿಯೆಗಳನ್ನು ನೀಡಿದ ಮೇಲಂತೂ ಒಂದು ರೀತಿಯ ಭ್ರಮ ನಿರಸನವಾಗಿ ಹೋಯಿತು..ಈ ಕೀಳು ಮನಸ್ಥಿತಿ ನಿವಾರಣೆಯಾಗುವುದಾದರೂ ಎಂದು? ಸಮಾಜದ ಯೋಚನೆಯ ದಿಕ್ಕು ಬದಲಾಗುವುದಾದರೂ ಎಂದು? ಎಂಬ ಕಳವಳದಲ್ಲೇ ಕುದಿಯುತ್ತಾ ಮನೆಗೆ ಹೋದೆ..ಪುಟ್ಟ ಕಂದಮ್ಮನ ಬೆಳದಿಂಗಳು ಚೆಲ್ಲಿದಂಥ ನಸುನಗು ಎಲ್ಲ ತಳಮಳವನ್ನೂ ದೂರಮಾಡಿಬಿಟ್ಟಿತು!

ಆಪರೇಷನ್ ಬಳಿಕದ ನೋವಿನಿಂದ ರಂಜನಿ ಇನ್ನೂ ಚೇತರಿಸಿಕೊಂಡಿರಲಿಲ್ಲವಾದ್ದರಿಂದ ಕೂಸಿನ ನಾಮಕರಣ ಶಾಸ್ತ್ರವನ್ನು ಕೊಂಚ ತಡವಾಗಿಯೇ ಇಟ್ಟುಕೊಳ್ಳುವುದೆಂದು ತೀರ್ಮಾನಿಸಲಾಯಿತು. ಹೀಗೆ ಕೂಸು ಮನೆಗೆ ಬಂದು ಇನ್ನೂ ಮೂರು ವಾರಗಳೂ ಕಳೆದಿರಲಿಲ್ಲ.. ಇದ್ದಕ್ಕಿದ್ದ ಹಾಗೆ ಮಗುವಿಗೆ ವಿಪರೀತ ಶೀತ ಅಡರಿಕೊಂಡುಬಿಟ್ಟಿತು. ಮನೆಗೇ ಒಬ್ಬ ಮಕ್ಕಳ ತಜ್ಞರನ್ನು ಕರೆದುಕೊಂಡು ಬಂದರೆ, ತರಾತುರಿಯಲ್ಲಿದ್ದ ಆ ಪುಣ್ಯಾತ್ಮ, “ಸಾಧಾರಣ ಶೀತ ಕೆಮ್ಮು ಅಷ್ಟೇ..ಗಾಬರಿಯಾಗಬೇಡಿ” ಎಂದು ನುಡಿದು ಒಂದೆರಡು ಔಷಧಿ—ಸಿರಪ್ ಕುಡಿಸಲು ಹೇಳಿ ಹೊರಟುಹೋದರು. ಮರುದಿನದ ವೇಳೆಗೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿಬಿಟ್ಟಿತು.ಆ ವೇಳೆಗಾಗಲೇ ಮಗು ಹಾಲು ಕುಡಿಯುವುದನ್ನೇ ನಿಲ್ಲಿಸಿಬಿಟ್ಟಿದ್ದು ರಂಜನಿಯ ಹೆಚ್ಚಿನ ಆತಂಕಕ್ಕೆ ಕಾರಣವಾಗಿತ್ತು. ಕೂಸಿಗೆ ಉಸಿರಾಟವೇ ಕಷ್ಟವಾಗಿ ಒಂದು ರೀತಿಯ ಅರೆ ಪ್ರಜ್ಞಾವಸ್ಥೆಗೆ ಜಾರಿಬಿಟ್ಟಿತು. ರಂಜನಿಗಂತೂ ಜೀವದಲ್ಲಿ ಜೀವ ನಿಲ್ಲುತ್ತಿಲ್ಲ..” ಮಗುವಿನ ಕಷ್ಟ ನನ್ನ ಕೈಲಿ ನೋಡೋಕಾಗ್ತಿಲ್ಲ..ಹಾಲು ಕೂಡಾ ಕುಡಿಯೋಕಾಗ್ತಿಲ್ಲ ಅದಕ್ಕೆ.. ಮೊದಲು ಯಾವುದಾದರೂ ಒಳ್ಳೆಯ ಆಸ್ಪತ್ರೆಗೆ ಕರಕೊಂಡು ಹೋಗೋಣ ನಡೀರಿ” ಎಂದು ದುಃಖಿಸತೊಡಗಿದಳು. ಹಠಾತ್ತನೆ ಎರಗಿದ ಈ ಸಂಕಟದಿಂದ ತಲ್ಲಣಿಸಿಹೋಗಿದ್ದ ನನಗೆ ಆ ತಕ್ಷಣಕ್ಕೆ ನೆನಪಿಗೆ ಬಂದ ಹೆಸರು ಉದಯಪ್ಪ ಅಲಿಯಾಸ್ ಡಾ॥ಬಿ.ಆರ್.ರಾಮಕೃಷ್ಣ. ಈ ಡಾ॥ರಾಮಕೃಷ್ಣ ಇಂದು ಆಯುರ್ವೇದ ವೈದ್ಯಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು. ಆಯುರ್ವೇದ ಕ್ಷೇತ್ರದಲ್ಲಿ ಅನೇಕ ಸಂಶೋಧನೆ—ಆವಿಷ್ಕಾರಗಳನ್ನು ನಡೆಸಿ ದೇಶ ವಿದೇಶಗಳಲ್ಲಿ ಖ್ಯಾತನಾಗಿರುವ ಈ ರಾಮಕೃಷ್ಣ ನನ್ನ ಭಾವಂದಿರ ಸ್ವಂತ ತಮ್ಮ;ನಮ್ಮೆಲ್ಲರ ಅತ್ಯಂತ ಪ್ರೀತಿಯ ಧನ್ವಂತರಿ ಉದಯಪ್ಪ. ಅವನ ಹೆಸರು ನೆನಪಾದದ್ದೇ ತಡ ತಕ್ಷಣವೇ ಪಕ್ಕದ ಶೆಟ್ಟರ ಮನೆಗೆ ಹೋಗಿ ಅವನಿಗೆ ಫೋನ್ ಮಾಡಿದೆ. ನಮ್ಮ ಅದೃಷ್ಟ ಗಟ್ಟಿಯಿತ್ತು..ರಂಜನಿಯ ಆರ್ತಮೊರೆ ಅವನ ಕಿವಿ ಮುಟ್ಟಿತು ಎಂದು ತೋರುತ್ತದೆ..ಅವನು ಮನೆಯಲ್ಲೇ ಇದ್ದ.ನಾನು ವಿಷಯ ತಿಳಿಸುತ್ತಿದ್ದಂತೆ ನಾಗಸಂದ್ರ ಸರ್ಕಲ್ ನ ತನ್ನ ಮನೆಯಿಂದ ರಾಜಾಜಿನಗರದ ನಮ್ಮ ಮನೆಗೆ ಅರ್ಧತಾಸಿನಲ್ಲಿ ಬಂದಿಳಿದ. ಕೋಣೆಯ ಬಾಗಿಲ ಬಳಿ ಅರೆಕ್ಷಣ ನಿಂತು ನೋಡಿದ ಅವನಿಗೆ ತೊಟ್ಟಿಲಲ್ಲಿ ಮಲಗಿದ್ದ ಕೂಸಿನ ಕಷ್ಟದ ಉಸಿರಾಟದ ಸದ್ದು ಕೇಳಿಸಿತು.ಒಡನೆಯೇ ಏನಾಗಿದೆಯೆಂಬುದು ಅವನಿಗೆ ಅರಿವಾಗಿ ಮುಖ ಗಂಭೀರವಾಯಿತು. “ಪ್ರಭೂ, ತಡ ಮಾಡೋಹಾಗಿಲ್ಲ..ಇದು ಬಹುಶಃ ಬ್ರಾಂಕೋ ನ್ಯುಮೋನಿಯಾ..ಈ ತಕ್ಷಣಾನೇ ಟ್ಯಾಕ್ಸಿನಲ್ಲಿ ಸೌತ್ ಎಂಡ್ ಸರ್ಕಲ್ ಹತ್ತಿರ ಇರೋ ಅನುಗ್ರಹ ವಿಠಲ ನರ್ಸಿಂಗ್ ಹೋಮ್ ಗೆ ಕರಕೊಂಡು ಬಾ.ನಾನು ಮುಂಚಿತವಾಗಿ ಹೋಗಿ ಅಲ್ಲಿ ಬೆಡ್ ರೆಡಿ ಮಾಡಿಸಿರ್ತೀನಿ..ಹಾಗೇ ಪಿಡಿಯಾಟ್ರೀಶಿಯನ್ ಗೂ ಬರೋದಕ್ಕೆ ಹೇಳಿರ್ತೀನಿ..ಬರ್ತಾ ಅಲ್ಲೇ ನರ್ಸಿಂಗ್ ಹೋಂ ಹತ್ತಿರಾನೇ ಒಂದು diagnotics centre ಇದೆ..ಅಲ್ಲಿ ಈ ಬ್ಲಡ್ ಟೆಸ್ಟ್ ಗಳನ್ನ ಮಾಡಿಸಿಕೊಂಡು ಬಂದುಬಿಡು..ಆದಷ್ಟು ಬೇಗ” ಎನ್ನುತ್ತಾ ಚೀಟಿಯಲ್ಲಿ ಟೆಸ್ಟ್ ವಿವರಗಳನ್ನು ಬರೆದುಕೊಟ್ಟು ಪಕ್ಕದ ಶೆಟ್ಟರ ಮನೆಯಿಂದಲೇ ನರ್ಸಿಂಗ್ ಹೋಂಗೆ ಫೋನ್ ಮಾಡಿ ಸೂಚನೆಗಳನ್ನು ಕೊಟ್ಟು ಅರೆಕ್ಷಣವೂ ನಿಲ್ಲದೆ ಬೈಕ್ ಹತ್ತಿ ಹೊರಟೇಬಿಟ್ಟ.

ಮಗುವಿಗೆ ಹಾಲು ಕುಡಿಸಲು ರಂಜನಿ ಜತೆಗೇ ಇರಲೇಬೇಕಾಗಿತ್ತು..ಹಾಗಾಗಿ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದಿದ್ದರೂ ಅವಳೂ ಕೂಸಿನ ಜತೆಗೆ ಬರಲೇಬೇಕಿತ್ತು. ಇಲ್ಲದಿದ್ದರೂ ಅವಳೇನೂ ಒಂದು ಕ್ಷಣವೂ ಮಗುವಿನಿಂದ ದೂರ ಇರುತ್ತಿರಲಿಲ್ಲ ಅನ್ನುವುದು ಬೇರೆಯ ಮಾತು! ನಾವು ತಕ್ಷಣವೇ ಅಲ್ಲಿಂದ ಟ್ಯಾಕ್ಸಿಯಲ್ಲಿ ಹೊರಟು ರಕ್ತ ಪರೀಕ್ಷೆಗೆಂದು ಮೊದಲು ಲ್ಯಾಬ್ ಗೆ ಹೋದೆವು.ರಕ್ತವನ್ನು ತೆಗೆದುಕೊಳ್ಳಲು ಸೂಜಿ ಚುಚ್ಚಿದರೂ ಮಗು ಒಮ್ಮೆ ನರಳಲಿಲ್ಲ..ಅಳಲಿಲ್ಲ..ಅಯ್ಯೋ ದೇವಾ..ನೋವೂ ಅನುಭವಕ್ಕೆ ಬಾರದಂತಹ ಎಚ್ಚರವೇ ಇಲ್ಲದ ಸ್ಥಿತಿಗೆ ಮಗು ಜಾರಿದೆಯೆಂದು ಅರಿವಾಗಿ ಎದೆ ಮತ್ತಷ್ಟು ಹೊಡೆದುಕೊಳ್ಳತೊಡಗಿತು. ಅಲ್ಲಿಂದ ಅನುಗ್ರಹ ವಿಠಲ ನರ್ಸಿಂಗ್ ಹೋಂಗೆ ನಾವು ಹೋಗುವ ವೇಳೆಗಾಗಲೇ ಕೋಣೆ ಸಿದ್ಧವಾಗಿತ್ತು. ಮಗುವನ್ನು ಮಂಚದ ಮೇಲೆ ಮಲಗಿಸಿ ಮರುಕ್ಷಣವೇ ಡ್ರಿಪ್ಸ್ ಬಾಟಲ್ ಏರಿಸಿ ಮಗುವಿನ ಕೈಗೆ ಚುಚ್ಚಿ ಅಳವಡಿಸಿ ತನ್ಮೂಲಕವೇ ಔಷಧಿಗಳನ್ನೂ ನೀಡತೊಡಗಿದರು. ಹಾಗೆ ಸೂಜಿ ಚುಚ್ಚಿದಾಗ ನರ್ಸ್ ಹೇಳಿದ ಮಾತು: “ಇಷ್ಟು ಸಣ್ಣ ಮಕ್ಕಳ ಕೈ ನರ ಸಿಕ್ಕೋದೇ ಕಷ್ಟ ಸೂಜಿ ಚುಚ್ಚೋಕೆ..ನಿಮ್ಮ ಅದೃಷ್ಟ ಚೆನ್ನಾಗಿದೆ..ಔಷಧಿ ಎಲ್ಲಾ ಡ್ರಿಪ್ಸ್ ಮೂಲಕವೇ ಮಗುವಿನ ಮೈಗೆ ಹೋಗಬೇಕಲ್ಲಾ..ನರ ಸಿಕ್ಕದಿದ್ರೆ ತುಂಬಾ ಸಮಸ್ಯೆ ಆಗಿಬಿಟ್ಟಿರೋದು”.ಆ ಆತಂಕದ ಸಮಯದಲ್ಲೂ ತುಸು ಸಮಾಧಾನ ನೀಡಿದ ಮಾತದು!

ಆ ವೇಳೆಗೇ ಶಿಶುತಜ್ಞ ಡಾ॥ವಾಸುದೇವ ಧನಂಜಯ ಅವರ ಆಗಮನವಾಯಿತು.ಫೋನ್ ಮೂಲಕವೇ ಏನೆಲ್ಲಾ ಆಗಬೇಕೆಂದು ಆಸ್ಪತ್ರೆಯ ವೈದ್ಯರಿಗೆ ಸೂಚನೆ ನೀಡಿದ್ದ ಡಾ॥ವಾಸುದೇವ್, ಎಲ್ಲವೂ ಸರಿಯಾಗಿದೆ ಎಂದು ನೋಡಿ ಖಚಿತಪಡಿಸಿಕೊಂಡು ಕೂಸನ್ನು ಪರೀಕ್ಷಿಸಿದರು. ನನ್ನನ್ನು ಬಳಿ ಕರೆದು,”ಈ ಕೂಡಲೇ ಹೋಗಿ ಒಂದು ಎಲೆಕ್ಟ್ರಿಕ್ ಹೀಟರ್ ತನ್ನಿ” ಎಂದು ಚೀಟಿ ಬರೆದುಕೊಟ್ಟರು. ಪಕ್ಕದಲ್ಲೇ ಇದ್ದ ಅಂಗಡಿಯಿಂದ ನಾನು ತಂದುಕೊಟ್ಟ ಹೀಟರ್ ಅನ್ನು ಮಗುವಿನ ತಲೆಗೆ ಶಾಖ ಮುಟ್ಟುವಂತೆ ಅಳವಡಿಸಿದರು.

ಅದೇ ವೇಳೆಗೇ ಉದಯಪ್ಪನೂ ಅಲ್ಲಿಗೆ ಬಂದ. ಡಾ॥ವಾಸುದೇವ್ ರನ್ನು ಒಂದು ಬದಿಗೆ ಕರೆದೊಯ್ದು ಕೂಸಿನ ಪರಿಸ್ಥಿತಿಯ ಬಗ್ಗೆ ವಿಚಾರಿಸತೊಡಗಿದ ಉದಯಪ್ಪ. ತುಸು ದೂರದಲ್ಲಿದ್ದ ನನಗೆ ಅವರ ಮಾತು ಕೇಳುತ್ತಿರಲಿಲ್ಲವಾದರೂ ಅವರ ಮುಖಭಾವದಿಂದಲೇ ಪರಿಸ್ಥಿತಿ ಗಂಭೀರವಾಗಿದೆಯೆನ್ನುವುದು ಗೋಚರವಾಗುತ್ತಿತ್ತು. ಹೊರಡುವ ಮುನ್ನ ಡಾ॥ವಾಸುದೇವ್ ನನ್ನನ್ನು ತುಸು ದೂರ ಕರೆದುಕೊಂಡು ಹೋಗಿ, “we have done our best srinivas. ನಿಮಗೆ ಸುಳ್ಳು ಭರವಸೆ ಕೊಡೋಕೆ ನನಗಿಷ್ಟವಿಲ್ಲ..ನಿಮ್ಮೊಬ್ಬರಲ್ಲೇ ಇರಲಿ:ನಾನು ಒಂದು ಹತ್ತು ಪರ್ಸೆಂಟ್ ಮಾತ್ರ ಭರವಸೆ ಕೊಡಬಲ್ಲೆ. ಇನ್ನು ಅರ್ಧ—ಒಂದು ತಾಸು ತಡ ಆಗಿದ್ರೂ ನಮ್ಮ ಪ್ರಯತ್ನ ಏನೂ ಫಲ ಕೊಡ್ತಿರಲಿಲ್ಲ. ಈಗ ಕೊನೇಪಕ್ಷ ಒಂದು ಸಣ್ಣ hope ಇದೆ. ಕೊಟ್ಟಿರೋ ಔಷಧಿ ಎಲ್ಲಾ ದಕ್ಕಿ ಮಗು ಹುಷಾರಾಗಲಿ ಅಂತ ದೇವರನ್ನ ಬೇಡಿಕೊಳ್ಳಿ..ನಾನು ಮತ್ತೆ ಸಂಜೆ ಬಂದು ನೋಡ್ತೇನೆ..All the best” ಎಂದು ನುಡಿದು ನನ್ನ ಭುಜವನ್ನೊಮ್ಮೆ ತಟ್ಟಿ ಹೊರಟುಹೋದರು. ಕಾದ ಸೀಸದ ಹಾಗೆ ನನ್ನ ಕಿವಿಯ ಒಳಹೊಕ್ಕ ಆ ಮಾತುಗಳ ಆಘಾತದಿಂದ ನಾನು ತತ್ತರಿಸಿಹೋದೆ. ಕೇವಲ ಹತ್ತು ಪರ್ಸೆಂಟ್ ನಷ್ಟು ಬದುಕಿನ ಭರವಸೆ! ಹಾಗೇ ಅಲ್ಲೇ ಇದ್ದ ಕುರ್ಚಿಯ ಮೇಲೆ ಕುಸಿದು ಕುಳಿತೆ. ತುಸುಹೊತ್ತಿನ ನಂತರ ನಿಧಾನವಾಗಿ ಎದ್ದು ರಂಜನಿಯ ಬಳಿ ಹೋದೆ. ಇದಾವುದರ ಪರಿವೆಯೂ ಇಲ್ಲದೆ ಕೂಸು ನಿಶ್ಚಲವಾಗಿ ಮಲಗಿತ್ತು. ರಂಜನಿಯ ಕಣ್ಣಿಂದ ಧುಮುಕುತ್ತಿದ್ದ ನೀರಧಾರೆಗೆ ನಿಲುಗಡೆಯೆ ಇರಲಿಲ್ಲ. ನನ್ನನ್ನು ಕಂಡೊಡನೆ ಮತ್ತಷ್ಟು ದುಃಖದಿಂದ ಬಿಕ್ಕತೊಡಗಿದಳು. ತೋಚಿದಷ್ಟೂ ನಾನೂ ಸಮಾಧಾನ ಹೇಳಿದೆ. ಪೊನ್ನಮ್ಮ..ಪದ್ಮಿನಿ..ಬಾಬು..ಎಲ್ಲರೂ ಅವಳಿಗೆ ಧೈರ್ಯ ತುಂಬುತ್ತಲೇ ಇದ್ದರು. ಮಗು ಇದ್ದ ಸ್ಥಿತಿ ಮಾತ್ರ ಭರವಸೆಗಿಂತ ಹತಾಶೆಯನ್ನೇ ಹುಟ್ಟುಹಾಕುವಂತಿತ್ತು. ಡಾಕ್ಟರ್ ಅವರು ನನ್ನ ಬಳಿ ಹೇಳಿದ್ದ ‘ಹತ್ತು ಪರ್ಸೆಂಟ್ ಭರವಸೆ’ಯ ಮಾತನ್ನು ನಾನು ರಂಜನಿಗೆ ಹೇಳಲಿಲ್ಲವಾದರೂ ನನ್ನ ಮುಖಭಾವದಿಂದಲೇ ಆ ಸೂಕ್ಷ್ಮವನ್ನವಳು ಗ್ರಹಿಸಿಬಿಟ್ಟಿದ್ದಳು. ಕೊನೆಗೊಮ್ಮೆ ರಂಜನಿ ಕಣ್ಣೊರೆಸಿಕೊಂಡು ನನ್ನ ಕೈ ಹಿಡಿದುಕೊಂಡು, “ಪ್ರಭೂ ಜೀ..ನಾನು ಮನಸ್ಸಿನಲ್ಲೇ ಒಂದು ಹರಕೆ ಕಟ್ಟಿಕೊಂಡು ಬಿಟ್ಟಿದೀನಿ..ನೋಡಿ, ನಮ್ಮ ಕೂಸು ಬಂದು ಅಡ್ಮಿಟ್ ಆಗಿರೋದು ಅನುಗ್ರಹ ವಿಠಲ ಆಸ್ಪತ್ರೇಲಿ…ಅವಳನ್ನ ನೋಡಿಕೋತಿರೋವರು ಡಾ॥ವಾಸುದೇವ್ ಧನಂಜಯ್…ಮುಖ್ಯ ಅವಳನ್ನಿಲ್ಲಿ ಕರಕೊಂಡು ಬಂದು ಸೇರಿಸಿರೋದು ನಮ್ಮ ರಾಮಕೃಷ್ಣ..ಇದರ ಹಿಂದೇನೇ ಒಂದು ಸೂತ್ರ—ಸೂಚನೆ ಕಾಣಿಸ್ತಿದೆ ನನಗೆ. ನಾನು ಆ ಕೃಷ್ಣನಿಗೇ ಮೊರೆಹೋಗ್ತೀನಿ..’ನನ್ನ ಕೂಸನ್ನ ನನ್ನ ಮಡಿಲಿಗೆ ಮರಳಿ ಕೊಟ್ಟುಬಿಡು, ಅವಳಿಗೆ ರಾಧಿಕಾ ಅಂತ ಹೆಸರಿಡ್ತೀನಿ’ ಅಂತ ಬೇಡಿಕೊಂಡುಬಿಟ್ಟಿದೀನಿ..ಸರಿ ತಾನೇ?” ಎಂದು ಗದ್ಗದಿತಳಾಗಿ ನುಡಿದಳು.”ಇದರಲ್ಲಿ ನನ್ನ ಅನುಮತಿ ಕೇಳೋದೇನಿದೆ? ಪ್ರಾರ್ಥನೇಗೆ ಬೆಟ್ಟಗಳನ್ನೇ ಕದಲಿಸುವಷ್ಟು ಶಕ್ತಿಯಿದೆಯಂತೆ..ಅಂದಮೇಲೆ ಈ ತಾಯಿಯ ಪ್ರಾರ್ಥನೆ ಯಾಕೆ ಈಡೇರಬಾರದು? ಮಗು ಹುಷಾರಾಗಿ ಮನೇಗೆ ಬರಲಿ..ಪ್ರೀತಿಯಿಂದ, ಸಂಭ್ರಮದಿಂದ ರಾಧಿಕಾ ಅಂತಾನೇ ನಾಮಕರಣ ಮಾಡೋಣ” ಎಂದು ನಾನವಳಿಗೆ ಸಾಂತ್ವನ ಹೇಳಿದೆ. ರಂಜನಿಯ ತಂಗಿ, ನನ್ನ ನಾದಿನಿ ಪದ್ಮಿನಿಯಂತೂ ಹೊತ್ತುಕೊಂಡ ಹರಕೆಗಳಿಗೆ ಲೆಕ್ಕವೇ ಇಲ್ಲ! ಅವುಗಳಲ್ಲೊಂದು ವಿವೇಕನಗರದಲ್ಲಿದ್ದ ಕುಳಂದೈಏಸುವಿನ ದೇವಾಲಯಕ್ಕೆ ಬಂದು ಮೋಂಬತ್ತಿ ಹಚ್ಚಿಡುತ್ತೇನೆ ಎನ್ನುವುದು. ಕೃಷ್ಣನ ಜತೆಗೆ ಬಾಲ ಕ್ರಿಸ್ತನ ಕೃಪೆಯೂ ಸೇರಿದರೆ ಹೆಚ್ಚಿನ ಬಲ..ಹೆಚ್ಚಿನ ಭರವಸೆ!

ಮುಂದಿನ ನಾಲ್ಕು—ಐದು ದಿನಗಳು ಬಹುಶಃ ನನ್ನ ಬದುಕಿನ ಅತಿ ದೀರ್ಘಾವಧಿಯ ದಿನಗಳು! ಪ್ರತಿ ಕ್ಷಣವೂ ಕಾತರ..ನಿರೀಕ್ಷೆ..ದುಗುಡ..ಆತಂಕದಲ್ಲೇ ಕಳೆಯುತ್ತಿತ್ತು. ರಂಜನಿಯಂತೂ ಆ ನಾಲ್ಕೈದು ದಿನಗಳು ಅಕ್ಷರಶಃ ನಿದ್ದೆಯನ್ನೇ ಮಾಡಿಲ್ಲ ಅನ್ನಬೇಕು. ಅದಕ್ಕೆ ಕಾರಣ ಯಾರೋ ಅವಳಿಗೆ ಹಿಂದೆ ಯಾವುದೋ ಸಂದರ್ಭದಲ್ಲಿ ಹೇಳಿದ್ದ ಮಾತು: ‘ಸಾವು ಬದುಕಿನ ನಡುವಿನ ಹೊಯ್ದಾಟದಲ್ಲಿರುವವರ ಬಳಿ ಇರುವವರು ಯಾವ ಕಾರಣಕ್ಕೂ ನಿದ್ದೆ ಮಾಡಬಾರದು! ಅವರು ನಿದ್ದೆ ಹೋಗುವುದನ್ನೇ ಕಾಯುತ್ತಿರುತ್ತಾನೆ ಕಾಲ..ತನ್ನ ಬೇಟೆಗಾಗಿ’!ಹಾಗಾಗಿ ಕಣ್ಣು ನಿದ್ದೆಯ ಭಾರ ತಡೆಯದೆ ತೇಲುವಂತಾಗಿ ಒಮ್ಮೆ ಜೂಗರಿಸಿದರೂ ಮರುಕ್ಷಣವೇ ಧಿಗ್ಗನೆ ಎಚ್ಚರಾಗಿಬಿಡುತ್ತಿದ್ದಳು..ಕಂದನನ್ನು ಕಾಪಿಡುವ ಹೊಣೆ ಹೆಗಲೇರಿದೆಯಲ್ಲಾ!

ಸುಮಾರು ಒಂದು ವಾರದಷ್ಟು ಕಾಲ ಅನುಗ್ರಹ ವಿಠಲ ಆಸ್ಪತ್ರೆಯೇ ನಮಗೆ ಮನೆಯಾಗಿಬಿಟ್ಟಿತ್ತು! ಎಲ್ಲರ ತುಟಿಯಂಚಿನಲ್ಲಿ,ಮನಸ್ಸಿನಲ್ಲಿ ಒಂದೇ ಪ್ರಾರ್ಥನೆಯ ಮೊರೆತ:”ಮಗು ಸುರಕ್ಷಿತವಾಗಿ ಮನೆಗೆ ಬಂದುಬಿಡಲಿ!” ಚಿಕಿತ್ಸೆ ಆರಂಭವಾದ ಆರನೆಯ ದಿನವೆಂದು ತೋರುತ್ತದೆ,ಮಗುವನ್ನು ತಪಾಸಣೆ ಮಾಡಿದ ಡಾ॥ವಾಸುದೇವ್ ಧನಂಜಯ್ ಘೋಷಿಸಿದರು: “Congrats! she has won the battle! she is out of danger!”

ನಮ್ಮೆಲ್ಲರ ಸಂಭ್ರಮ—ಸಂತಸಕ್ಕೆ ಪಾರವೇ ಇಲ್ಲ! ವೈದ್ಯರ ಎಲ್ಲ ಪ್ರಯತ್ನಗಳಿಗೆ ಫಲ ದೊರೆತಿದೆ! ನಮ್ಮ ಪ್ರಾರ್ಥನೆ ಫಲ ಕೊಟ್ಟಿದೆ! ನಮ್ಮ ಕೂಸು ಮತ್ತೆ ಕಣ್ತೆರೆದಿದೆ! ಗಂಡಾಂತರವೊಂದನ್ನು ಗೆದ್ದು ಬದುಕಿಗೆ ಮರಳಿದೆ! ನಾನಂತೂ ತೀರಾ ಭಾವುಕನಾಗಿ ಡಾಕ್ಟ್ರ ಕೈಹಿಡಿದು ಬಿಕ್ಕಿದೆ: “ಡಾಕ್ಟ್ರೇ..ನೀವು ವಾಸುದೇವ ಧನಂಜಯ ಅಲ್ಲ..ವಾಸುದೇವ ಮೃತ್ಯುಂಜಯ!”

ಮತ್ತೆರಡು ದಿನಗಳ ತಪಾಸಣೆ—ಅವಗಾಹನೆಗಳ ನಂತರ ‘ಮಗುವನ್ನು ಮನೆಗೆ ಕರೆದುಕೊಂಡು ಹೋಗಬಹುದು’ ಎಂದು ವೈದ್ಯರು ಅನುಮತಿ ನೀಡಿದರು. ಉದಯಪ್ಪನಿಗೆ, ವಾಸುದೇವ ಧನಂಜಯ ಅವರಿಗೆ, ಅನುಗ್ರಹ ವಿಠಲ ಆಸ್ಪತ್ರೆಯ ಎಲ್ಲ ಸಿಬ್ಬಂದಿ ವರ್ಗದವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿ ಮಗುವನ್ನು ಕರೆದುಕೊಂಡು ಸಂಭ್ರಮದಿಂದ ಮನೆಗೆ ಮರಳಿದೆವು.

ಆಸ್ಪತ್ರೆಯಿಂದ ಬರುವಾಗಲೇ ವೈದ್ಯರು ಕಟ್ಟುನಿಟ್ಟಾಗಿ ಆದೇಶ ನೀಡಿಬಿಟ್ಟಿದ್ದರು: ಇನ್ನೊಂದು ವರ್ಷ ತುಂಬಾ ಎಚ್ಚರವಾಗಿರಬೇಕು..ಯಾವುದೇ ಕಾರಣಕ್ಕೂ ಮಗುವಿಗೆ ಶೀತಬಾಧೆಯಾಗದಂತೆ ನೋಡಿಕೊಳ್ಳಬೇಕು. ಹಾಗಾಗಿ ಮಗುವಿಗೆ ನಿಯಮಿತವಾಗಿ ಎಣ್ಣೆಸ್ನಾನ ಮಾಡಿಸುವುದೂ ಸಾಧ್ಯವಾಗಲಿಲ್ಲ. ಮಾತ್ರವಲ್ಲ, ರಂಜನಿಯೇ ಮಗುವಿಗೆ ಹಾಲು ಕುಡಿಸುತ್ತಿದ್ದುದರಿಂದ ಅವಳೂ ಸಹಾ ತನಗೆ ಶೀತವಾಗದಂತೆ ಕಟ್ಟೆಚ್ಚರ ವಹಿಸಬೇಕಾದ ಅನಿವಾರ್ಯತೆ ಇತ್ತು. ಹಾಗಾಗಿ ಬಾಣಂತಿಗೆ ಆಗಲೇಬೇಕಾಗಿದ್ದ ಮಜ್ಜನಾದಿ ಪೋಷಣೆಗಳಿಂದ ಅವಳೂ ದೂರವೇ ಉಳಿಯಬೇಕಾಯಿತು. ಮೂಲತಃ ಮಲೆನಾಡಿನವರಾದ ನಮ್ಮ ಮಾವ ಸುಂದರಂ ಅವರು,”ಛೆ..ತೀರಾ ಅನ್ಯಾಯವಾಗಿ ಹೋಯಿತು..ಮಗು ಬಾಣಂತೀರಿಗೆ ಎಣ್ಣೆಸ್ನಾನವೇ ಇಲ್ಲ ಅಂದುಬಿಟ್ರೆ ಅದು ಯಾವ ಸೀಮೆ ಬಾಣಂತನ ರೀ..ಛೇಛೇಛೆ..ಭಾಳ ಅನ್ಯಾಯ..ಭಾಳ ಅನ್ಯಾಯ..” ಎಂದು ಹಳಹಳಿಸುತ್ತಿದ್ದುದು ಇನ್ನೂ ನನ್ನ ಕಿವಿಗಳಲ್ಲಿ ಮೊರೆಯುತ್ತಿದೆ. ಹುಟ್ಟಿದಾಗ ಕೂಸಿನ ತಲೆಯ ತುಂಬಾ ದಟ್ಟ ಕಪ್ಪು ಕೂದಲಿತ್ತು ಎಂದಿದ್ದೆನಲ್ಲಾ, ಆಸ್ಪತ್ರೆಯಲ್ಲಿ ಹೀಟರ್ ಅನ್ನು ಶೀತ ನಿವಾರಣೆಗಾಗಿ ನೇರವಾಗಿ ತಲೆಯ ಭಾಗಕ್ಕೇ ಶಾಖ ತಾಗುವಂತೆ ಇಟ್ಟದ್ದರಿಂದ ಕೂದಲೆಲ್ಲಾ ಕೊಂಚ ಕೆಂಬಣ್ಣಕ್ಕೆ ತಿರುಗಿಬಿಟ್ಟಿತ್ತು ಮಾತ್ರವಲ್ಲ, ಶಾಖದ ಕಾವಿಗೆ ಸಿಪ್ಪೆ ಸುಲಿದಂತೆ ಮೇಲ್ಪದರದಿಂದ ಚೂರುಗಳು ಉದುರುತ್ತಿದ್ದವು. ತಲೆಯ ಭಾಗವನ್ನು ಮುಟ್ಟಿದರೆ ಸಾಕು, ಉರಿಯ ಬಾಧೆಯಿಂದ ಎಂಬಂತೆ ಕಂದ ನರಳುತ್ತಿದ್ದುದು ನಮ್ಮ ಮತ್ತೂ ಸಂಕಟಕ್ಕೆ ಕಾರಣವಾದ ಸಂಗತಿಯಾಗಿತ್ತು.

ಆಸ್ಪತ್ರೆಯಿಂದ ಮರಳಿದ ಒಂದಷ್ಟು ದಿನಗಳ ನಂತರ, ಮಗು—ರಂಜನಿ ಸಂಪೂರ್ಣವಾಗಿ ಚೇತರಿಸಿಕೊಂಡ ಮೇಲೆ ನಾಮಕರಣ ಶಾಸ್ತ್ರವನ್ನು ಇಟ್ಟುಕೊಳ್ಳುವುದೆಂದು ತೀರ್ಮಾನವಾಯಿತು. ಅಂತೆಯೇ ಎಲ್ಲ ಗುರು ಹಿರಿಯರ—ಬಂಧು ಬಾಂಧವರ ಸಮಕ್ಷಮದಲ್ಲಿ ರಾಜಾಜಿನಗರ ರಾಮಮಂದಿರದಲ್ಲಿ ನಡೆದ ಸರಳ ಸುಂದರ ಆತ್ಮೀಯ ಸಮಾರಂಭದಲ್ಲಿ ನಮ್ಮ ಮುದ್ದು ಕೂಸಿಗೆ,ರಂಜನಿ ಅದಾಗಲೇ ಬೇಡಿಕೊಂಡಿದ್ದಂತೆ ನಾಮಕರಣವಾಯಿತು:

ರಾಧಿಕಾ!

‍ಲೇಖಕರು Admin

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: