ಕಿರಣ ಭಟ್ ಕಂಡಂತೆ ʼಆನಂದ ಭಾವಿನಿʼ

ಕಿರಣ ಭಟ್

ಮೂಲ: ‘ಸಾವಿತ್ರಿ’ : ಪುರುಷೋತ್ತಮ್ ಶಿವರಾಮ ರೇಗೇ
ಕನ್ನಡಕ್ಕೆ: ಗಿರಿಜಾ ಶಾಸ್ತ್ರಿ
ರಂಗರೂಪ: ಸುಧಾ ಆಡುಕಳ
ಸಹ ನಿರ್ದೇಶನ: ಪದ್ಮಶ್ರೀ ಸಿ.ಆರ್
ಸಂಗೀತ: ಅನುಷ್ ಶೆಟ್ಟಿ ಮತ್ತು ಮುನ್ನಾ
ನೃತ್ಯ ನೆರವು: ಮಂಜುಳಾ ಸುಬ್ರಹ್ಮಣ್ಯ, ಪುತ್ತೂರು
ರಂಗ ನಿರ್ವಹಣೆ: ಗಣೇಶ ಹೆಗ್ಗೋಡು, ಹರಿಸಿಂಗ್
ನಿರ್ದೇಶನ: ಶ್ರೀಪಾದ ಭಟ್
ಅಭಿನಯ: ಸಿರಿ ವಾನಳ್ಳಿ

ನಿರ್ಮಾಣ : ಫೋರ್ ‘ಸಿ’, ಸೆಂಟರ್ ಫಾರ್ ಕಲ್ಚರ್

ತೆಳ್ಳನೆಯ ಬೆಳಕೊಂದು ರಂಗವನ್ನು ಬೆಳಗಿದೆ.

ಆಕೆಯ ಮುಖ ಹೊಳೆಯುತ್ತಿದೆ.

ನಾಲ್ಕು ವರ್ಷಗಳ ಸುದೀರ್ಘ ಅವಧಿಯ ನಂತರ ‘ಆತನ’ ಪತ್ರ ಆಕೆಯ ಕೈಸೇರಿದೆ. ಆಕೆಗೋ ಪುಳಕ.

ಆತ ಉನ್ನತ ವ್ಯಾಸಂಗಕ್ಕಾಗಿ ಇಂಗ್ಲಂಡಿಗೆ ಹೊರಟು ಹೋದ ನಂತರದ ವರ್ಷಗಳಲ್ಲಿ ಏನೇನೆಲ್ಲಾ ಘಟಿಸಿ ಹೋಗಿದೆ. ಆಕೆಯೂ ಬಹುದೂರ ಸಾಗಿ ಬಂದಾಗಿದೆ. ಗೆಳೆಯನ ಪತ್ರದ ಎಳೆಯನ್ನೇ ಹಿಡಿದುಕೊಂಡು, ಭೂತ, ವರ್ತಮಾನವನ್ನೆಲ್ಲ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ ಸಾಗುತ್ತಾಳೆ ಸಾವಿತ್ರಿ. ಆಕೆ ಕಂಡ ದಿನಗಳನ್ನ, ಆಕೆ ಬರೆದ ಪುಟ್ಟ ಪತ್ರಗಳನ್ನ.

‘ಹಿಂದಿನ ನೆನಪು ಇಲ್ಲದಿರುತ್ತಿದ್ದರೆ
ಹಾಗೂ
ಮುಂದಿನದು ಅನುಭವಕ್ಕೆ ಬರದಿರುತ್ತಿದ್ದರೆ
ಎಷ್ಟು ಚೆನ್ನಾಗಿರುತ್ತಿತ್ತು’

ಬಾಲ್ಯದಿಂದ ಮೊದಲುಗೊಂಡು ನಂತರದ ದಿನಗಳಲ್ಲಿ ಹಲವಾರು ತಿರುವುಗಳನ್ನು ಕಂಡ ಆಕೆಯ ಬದುಕೇ ಒಂದು ಫಿಲಾಸಫಿ. ಚಿಕ್ಕವಳಿರುವಾಗಲೇ ಚಿಕ್ಕದಾಗಿ ‘ಸಾವೂ’ ಎಂದು ಕರೆಸಿಕೊಳ್ಳುತ್ತ ಕಿರಿ ಕಿರಿ ಅನುಭವಿಸುತ್ತಿದ್ದ ಆಕೆಯನ್ನ ‘ಆನಂದಭಾವಿನಿ’ ಯಾಗಿಸೋದು ದೊಡ್ಡ ತತ್ವಜ್ಞಾನಿಯಾಗಿದ್ದ ಆಕೆಯ ಅಪ್ಪ. ಅವರ ಪುಸ್ತಕದ ಹೆಸರಿನಂತೇ ಈ ಹೆಸರೂ ಅರ್ಥವಾಗದೆ ಪಿಳಿ ಪಿಳಿ ಕಣ್ಣು ಬಿಡುತ್ತ ಕೂತ ಆಕೆಗೆ ಅದರ ಅರ್ಥವನ್ನೂ ಮಾಡಿಸುತ್ತಾರೆ ಅವರು.

” ನೀನು ‘ಆನಂದ ಭಾವಿನಿ’, ಎಂದ್ರೆ ಆನಂದವನ್ನು ಅನುಭವಿಸುವವಳು, ಪಸರಿಸುವವಳು. ಇರುವಲ್ಲೆಲ್ಲ ಆನಂದ ಕಾಣುವವಳು,ಆನಂದ ನೀಡುವವಳು” ಎಂದಾಗ ಆಕೆಗೆ ಮಹದಾನಂದ. ಮುಂದೆಂದೂ ಆಕೆ ‘ಸಾವೂ’ ಕುರಿತು ತಲೆಕೆಡಿಸಿಕೊಳ್ಳಲಿಲ್ಲ.

…….. ಹೀಗೆ ನಾಮಕರಣದಿಂದ ಶುರುವಾಗುವ ಆಕೆಯ ಪಯಣದ ಸುದೀರ್ಘವಾದ ಕಥೆಯಿದು.

ತಾಯಿಯನ್ನು ಬಾಲ್ಯದಲ್ಲೇ ಕಳಕೊಂಡ ಸಾವಿತ್ರಿ ಗೆ ತಂದೆಯೇ ಸರ್ವಸ್ವ. ಹಿಂದೆ ಹೇಳಿದಂತೆ ಆಕೆಯನ್ನು ‘ ಆನಂದ ಭಾವಿನಿ’ ಯಾಗಿಸಿ ಆಕೆಯಲ್ಲಿ ಆತ್ಮವಿಶ್ವಾಸ ತುಂಬಿದವರು. ಆಕೆಯ ಪುಟ್ಟ ಜಗತ್ತಿನಲ್ಲಿ ‘ಆತ’ ಒಬ್ಬ ಗೆಳೆಯ. ಮುಂದೆ ಪ್ರೇಮಿ.

ಈ ಹಂತದಲ್ಲಿ ‘ಒಬ್ಬರ ಬದುಕಲ್ಲಿ ಇನ್ನೊಬ್ಬರು ಪ್ರವೇಶಿಸುವ ಸೋಜಿಗ’ ವನ್ನು ಕಾಣುತ್ತಾಳೆ ಆಕೆ. ಪಂಡಿತರಾದ ತಂದೆ ಜಪಾನಿಗೆ ಹೊರಟು ನಿಂತಾಗ ಆಕೆಯೂ ಜೊತೆಗೆ ಹೊರಡುತ್ತಾಳೆ. ‘ಆತ’ ಇನ್ನೊಂದು ಹಾದಿ ಹಿಡಿದು ಇಂಗ್ಲಂಡಿಗೆ ಹೋಗುತ್ತಾನೆ. ಯುದ್ಧ ಆಕೆಯ ಬದುಕನ್ನು ಕದಡಿಬಿಡುತ್ತದೆ. ತಂದೆಯನ್ನು ಕಳೆದುಕೊಳ್ಳುತ್ತಾಳೆ ಆಕೆ. ಯುದ್ಧದ ಕಾರಣದಿಂದ ‘ಸಾವೂ’ ನಿರಂತರ ಸಾವುಗಳನ್ನ ನೋಡುತ್ತಾಳೆ. ಯುದ್ಧ ಸರ್ವನಾಶ ಮಾಡುವದನ್ನು ಕಂಡು ನೋಯುತ್ತಾಳೆ. ಹಿಂಸೆಯನ್ನು ಕಂಡು ಅಳುತ್ತಾಳೆ.

‘ ಯುದ್ಧ ಯಾರಿಗಾದ್ರೂ ಒಳ್ಳೆಯದನ್ನು ಮಾಡಿದರೆ ಅದು ಹಿಂಸೆಗೆ ಮಾತ್ರ’ ಎಂದು ಮರುಗುತ್ತಾಳೆ.

‘ಬಣ್ಣದ ಪೆಟ್ಟಿಗೆ’ ತರುವೆನೆಂದು ಹೋದ ಜನರಲ್ ಪೆಟ್ಟಿಗೆಯಲ್ಲಿ ಹೆಣವಾಗಿ ಬಂದಾಗ ಆಘಾತವಾಗುತ್ತದೆ ಆಕೆಗೆ. ದಾದಿಯಾಗುತ್ತಾಳೆ. ಸೇವೆ ಮಾಡುತ್ತಾಳೆ. ಅನಾಥ ಮಗು ಬೀನಾ ಳನ್ನು ಹೊತ್ತುಕೊಂಡು, ಗೆಳತಿ ಲ್ಯೋರೆ ಯೊಂದಿಗೆ ಭಾರತಕ್ಕೆ ಮರಳುತ್ತಾಳೆ. ಅಂಕಲ್ ಎಜ್ವರ್ತ್ ಆಕೆಗಾಗಿ ಬಿಟ್ಟುಹೋದ ಜಾಗದಲ್ಲಿ ಅವರ ಆಸೆಯಂತೆ ಕಲಾಶಾಲೆ ಆರಂಭಿಸುತ್ತಾಳೆ.

‘ಹಾರಿ ಹೋಯಿತು ಹಂಸ ಕೊಳದ ಆಕಾಶದಲಿ’ ಹೀಗೆ ಪ್ರೀತಿ, ಪ್ರೇಮ, ಹೆಣ್ತನದ ಸಹಜ ಸಂವೇದನೆಗಳೊಂದಿಗೆ ಮಡಿಕೇರಿಯ ಸರಳ ಸುಂದರ ಬದುಕಿಂದ ಯುದ್ಧಭೂಮಿಯ ವರೆಗೂ ಸುತ್ತುವ ಆಕೆಯ ಅನುಭವ, ಭಾವಗಳ ಒಟ್ಟೂ ಮೊತ್ತವೇ ಈ ಏಕವ್ಯಕ್ತಿ ಪ್ರದರ್ಶನ. ಪುರುಷೋತ್ತಮ್ ಶಿವರಾಮ ರೇಗೇ ಯವರ ಮರಾಠಿ ಕಾದಂಬರಿ ‘ಸಾವಿತ್ರಿ’ ಯನ್ನು ಕನ್ನಡಕ್ಕೆ ತಂದವರು ಹಿರಿಯ ಸಾಹಿತಿ ಗಿರಿಜಾ ಶಾಸ್ತ್ರಿ ಯವರು. ರಂಗರೂಪ ನೀಡಿದವರು ಸುಧಾ ಆಡುಕಳ.

ಇಂಥ ಸ್ತ್ರೀ ಸಂವೇದನೆಯ ಏಕವ್ಯಕ್ತಿ ಪ್ರದರ್ಶನಗಳ ಮಾಸ್ಟರ್ ಶ್ರೀಪಾದ ಭಟ್ ರು. ಹಾಗಾಗಿ ಇಂಥ ಕೃತಿಯೊಂದು ಅವರನ್ನು ಆಕರ್ಷಿಸಿದ್ದು ಸಹಜವೇ. ಶಹಬ್ಬಾಸ್ ಕೊಡಬೇಕಾದ್ದು ‘ಸಿರಿ ವಾನಳ್ಳಿʼ ಎಂಬ ಭಾವ ಶ್ರೀಮಂತಿಕೆಯ ಹುಡುಗಿಗೆ. ಅಂಥದೇನೂ ನಾಟಕೀಯ ಅಂಶಗಳಿಲ್ಲದ ತಾತ್ವಿಕ ಚಿಂತನೆಗಳಿಂದಲೇ ತುಂಬಿದ ಸಾಕಷ್ಟು ದೊಡ್ಡ ಪಠ್ಯವೊಂದನ್ನ ಅಭಿನಯಿಸಲು ಎತ್ತಿಕೊಂಡಿದ್ದಕ್ಕಾಗಿ ಮತ್ತು ಯಶಸ್ವಿಯಾಗಿದ್ದಕ್ಕಾಗಿ.

ನಾನು ನೋಡಿದ ಹೊನ್ನಾವರದ ಪ್ರದರ್ಶನ ನಾವೇ ಏರ್ಪಡಿಸಿದ್ದು. ಸಣ್ಣ ಊರಲ್ಲಿ ತಾಂತ್ರಿಕ ಮಿತಿಗಳೂ ಬಹಳ. ಆದರೆ ಆ ಮಿತಿಗಳನ್ನೆಲ್ಲ ಮೀರಿ ಕೃತಿಯ ಚಿಂತನೆಗಳನ್ನೆಲ್ಲ ಸುಲಭವಾಗಿ ದಾಟಿಸಿದ್ದಕ್ಕಾಗಿ. ಮಡಿಕೇರಿಯ ಅಜ್ಜೀ ಕಥೆಯಲ್ಲಿ ಸುಲಭವಾಗಿ ಪಾತ್ರಗಳ ಸ್ಥಿತ್ಯಂತರ ಮಾಡುವ ಸಿರಿ ಭಾವಪೂರಿತವಾಗಿ ಹಾಡುತ್ತ, ನವಿಲಾಗಿ, ಮರವಾಗಿ, ದುಷ್ಟ ಅರಸನಾಗಿ ನರ್ತಿಸುತ್ತ ಕಥೆ ಹೇಳುವ ಪರಿ ಅನನ್ಯ.

ಅಜ್ಜಿ ಹೇಳಿದ ಮರ, ಹಕ್ಕಿಗಳ ಕಥೆಯಾಗಲೀ ಟ್ಯಾಗೋರ್ ರ ‘ನಮಗೆ ನವಿಲು ಬೇಕೆಂದರೆ ನಾವು ನವಿಲೇ ಆಗಿಬಿಡಬೇಕು’ ಎನ್ನುವ ಸಂದೇಶಗಳಾಗಲೀ ಈ ಕಾರಣಕ್ಕಾಗಿಯೇ ಸಾವಿತ್ರಿಯ ಬದುಕಿನ ಕಥೆಯಲ್ಲಿ ಸುಲಭವಾಗಿ ಮಿಳಿತವಾಗಿಬಿಡುತ್ತವೆ.

ನಭಾ ಒಕ್ಕುಂದ ಎನ್ನೋ ಸೂಕ್ಷ್ಮ ಸಂವೇದನೆಯ ಹುಡುಗಿ ರಚಿಸಿದ ಮಹಿಳಾ ಸಂವೇದನೆಯ ಚಿತ್ರಗಳನ್ನು ನೇತುಹಾಕಿದ ಕಲಾಶಾಲೆಯ ಸರಳ ಸೆಟ್ ನಲ್ಲೇ ಸುಮಾರು ಒಂದೂವರೆ ಘಂಟೆ ಕಾಲ ನಡೆಯುವ ಈ ರಂಗಪ್ರದರ್ಶನ ಕೊನೆಯ ಚಲನೆಯ ತನಕವೂ ನಮ್ಮನ್ನು ಒಳಗೊಂಡುಬಿಡುತ್ತದೆ.

ಇಂಥ ವಿಚಾರಗಳನ್ನು ಸುಲಭವಾಗಿ ಹೇಳಿಬಿಡುವ ಶ್ರೀಪಾದ್ರ ಕೌಶಲ್ಯ ಇಲ್ಲೂ ಇದೆ. ಮನ್ನೆಲೆಗೇ ಬಂದು ಕಾಡುವ ಸಂಗೀತ, ಚೆಂದದ ಹಾಡುಗಳಿವೆ. ಕಲಾತ್ಮಕವಾದ ಚಲನೆಗಳಿವೆ.

ಸ್ಪಷ್ಟವಾದ, ನವಿರಾದ, ಕೆಲವೊಮ್ಮೆ ಖಡಕ್ ಆಗುವ ಮಾತುಗಳಿವೆ.. ಇದ್ದ ಚೂರು ಪಾರು ದೀಪಗಳಲ್ಲೇ ಸುಂದರವಾಗಿ, ಪ್ರಭಾವಶಾಲಿಯಾಗಿ ರಂಗವನ್ನು ಬೆಳಗುತ್ತಾರೆ ಹರಿ ಸಿಂಗ್. ರೆಕಾರ್ಡೆಡ್ ಸಂಗೀತವನ್ನು ಸವಿತಾ ವಾನಳ್ಳಿ, ನಿಖರವಾಗಿ ನಿರ್ವಹಿಸುತ್ತಾರೆ. ಪ್ರಯೋಗದ ಮೊದಲರ್ಧ ನಿಧಾನವಾಗಿ ನಾಟಕವನ್ನು ಕಟ್ಟುತ್ತ ಸಾಗಿದರೆ, ಕೊನೆಯ ಅರ್ಧ ದಟ್ಟವಾಗಿದೆ. ತುಂಬ ಕಾಡುವಂತಿದೆ. ಉತ್ತರಾರ್ಧವನ್ನು ಅದೆಷ್ಟು ಪ್ರಭಾವಶಾಲಿಯಾಗಿ ತೀಕ್ಣವಾಗಿ ಬರೆದಿದಾರೆ ಸುಧಾ ಆಡುಕಳ! ಅದಕ್ಕಾಗಿ ಅವರಿಗೆ ಫುಲ್ ಮಾರ್ಕ್ಸ. ಯುದ್ಧದ ಎಪಿಸೋಡ್ ಅಂತೂ ಎದೆಯನ್ನ ನೋಯಿಸಿಬಿಡುತ್ತದೆ.

ಒಂದು ಹಂತದಲ್ಲಿ ಬೆರಳುಗಳನ್ನು ಪಿಸ್ತೂಲಾಗಿಸಿಕೊಂಡ ಸಾವಿತ್ರಿ ಜನರೆಡೆಗೆೆ ಗುರಿಯಿಟ್ಟು ಕೇಳುತ್ತಾಳೆ.
‘ ಪಿಸ್ತೂಲಿನ ವಿರುದ್ಧಾರ್ಥಕ ಪದ ಏನು?
‘ಅದು ಅಲ್ಲದ ಎಲ್ಲದೂ’
ಯುದ್ಧದ ಕ್ಷುದ್ರತೆ ಹೇಳಲು ಇಷ್ಟು ಸಾಕು.

‍ಲೇಖಕರು Admin

December 29, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: