ಶ್ರೀನಿವಾಸ ಪ್ರಭು ಅಂಕಣ- ನನ್ನ ನೆನಪಿನಲ್ಲಿ ಅಳಿಸಲಾಗದಂತೆ ದಾಖಲಾಗಿರುವ ಕ್ಷಣಗಳು!…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

58

ಬಾಲ್ಯದಲ್ಲಿ ನಾನು ಗಣಿತ—ಇಂಗ್ಲೀಷ್ ಎಂದರೆ ದುಃಸ್ವಪ್ನ ಕಂಡವನಂತೆ ನಡುಗುತ್ತಿದ್ದ ಸಂಗತಿಯನ್ನು ಈಗಾಗಲೇ ನಿಮ್ಮೊಂದಿಗೆ ಹಂಚಿಕೊಂಡಿದ್ದೇನಷ್ಟೇ. ಗಣಿತದ ಗುಮ್ಮನನ್ನು ಪಿ ಯು ಸಿ ಯ ವೇಳೆಗಾಗಲೇ ದೂರ ಅಟ್ಟಿಯಾಗಿದ್ದರೂ ಮುಂದೆಯೂ ನನ್ನನ್ನು ಬಹುಕಾಲ ಕಾಡಿದ ಇಂಗ್ಲೀಷನ್ನು ಸತತ ಓದಿನ ಮೂಲಕ ತಕ್ಕಮಟ್ಟಿಗೆ ಒಲಿಸಿಕೊಂಡಿದ್ದಷ್ಟೇ ಅಲ್ಲ, ಒಂದು ಇಂಗ್ಲೀಷ್ ನಾಟಕವನ್ನೂ ಧೈರ್ಯವಾಗಿ ನಿರ್ದೇಶಿಸಿಬಿಟ್ಟೆ ಎಂದರೆ ನೀವು ನಂಬಲೇಬೇಕು! ಭಾಷೆ ಸ್ಪಷ್ಟ ಸಂವಹನಕ್ಕೆ ಒದಗುವ ಸಾಧನವಾದರೆ ಸಾಕಲ್ಲದೇ ಪಾಂಡಿತ್ಯ ಪ್ರದರ್ಶನದ ಮಾಧ್ಯಮವಾಗುವ ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳುವುದರೊಂದಿಗೆ ರಂಗಭೂಮಿಯಲ್ಲಿನ ತೊಡಗುವಿಕೆಯಿಂದಾಗಿ ನನ್ನ ಅಳುಕು—ಹಿಂಜರಿಕೆ—ಕೀಳರಿಮೆಗಳೂ ದೂರವಾಗಿ ಹೋಗಿದ್ದವು. ಅಂತೆಯೇ ಇಂಗ್ಲೀಷ್ ನಾಟಕದ ನಿರ್ದೇಶನಕ್ಕೆ ನಾನು ಒಪ್ಪಿಕೊಂಡದ್ದು!

ಬೆಂಗಳೂರು ಹೈಸ್ಕೂಲ್ ನಲ್ಲಿ ನಾನು ಓದುತ್ತಿದ್ದ ದಿನಗಳಿಂದಲೇ ನನ್ನ ಗೆಳೆಯನಾಗಿದ್ದ ಜಯಂತ ನಂತರದ ದಿನಗಳಲ್ಲಿ ಬೆನಕ ರಂಗ ತಂಡವನ್ನುಸೇರಿಕೊಂಡಿದ್ದ.ಅಷ್ಟೇ ಅಲ್ಲ, ಹ್ಯಾಮ್ಲೆಟ್ ನಾಟಕದಲ್ಲಿ ಹೊರೇಷಿಯೋನ ಪಾತ್ರ ನಿರ್ವಹಿಸಿದ್ದ ಕೂಡಾ. ನನ್ನ ನಿರ್ದೇಶನದ ಎಲ್ಲ ನಾಟಕಗಳನ್ನೂ ನೋಡಿದ್ದ ಅವನಿಗೆ ಸಾರ್ತ್ರ್ ನ men without shadows ನಾಟಕವನ್ನು ನಾನು ‘ನೆರಳಿಲ್ಲದ ಜೀವಗಳು’ ಎಂದು ಅನುವಾದಿಸಿ ರಂಗದ ಮೇಲೆ ತಂದಿದ್ದ ಪ್ರಯೋಗ ತುಂಬಾ ಮೆಚ್ಚುಗೆಯಾಗಿತ್ತು. ಬೆಂಗಳೂರಿನ ಇಂಗ್ಲೀಷ್ ರಂಗಭೂಮಿಯೊಂದಿಗೂ ಸಂಪರ್ಕವಿರಿಸಿಕೊಂಡಿದ್ದ ಜಯಂತ ಕೆಲವು ಇಂಗ್ಲೀಷ್ ನಾಟಕಗಳಲ್ಲಿ ಅಭಿನಯಿಸಿದ್ದಲ್ಲದೇ ಕೆಲ ನಾಟಕಗಳಿಗೆ ಬೆಳಕಿನ ವಿನ್ಯಾಸವನ್ನೂ ಮಾಡಿದ್ದ.

ಒಂದು ದಿನ ಕಲಾಕ್ಷೇತ್ರದಲ್ಲಿ ಭೇಟಿಯಾದ ಜಯಂತ ನನ್ನನ್ನು ಕೇಳಿದ: “ನಮ್ಮ ನಾಟಕ್ ತಂಡಕ್ಕೆ ಇಂಗ್ಲೀಷ್ ನಲ್ಲೇ men without shadows ನಾಟಕ ಮಾಡಿಸುತ್ತೀಯಾ?”.ಈ ಅನಿರೀಕ್ಷಿತ ಪ್ರಶ್ನೆ ಒಂದು ಕ್ಷಣ ನನ್ನನ್ನು ತಬ್ಬಿಬ್ಬು ಗೊಳಿಸಿಬಿಟ್ಟಿತು! ನಾಟಕ್ ತಂಡ ಸಾಕಷ್ಟು ಹೆಸರು ಮಾಡಿದ್ದ,ಪ್ರತಿಭಾವಂತ ಕಲಾವಿದರಿದ್ದ ತಂಡ. ಅವರು ತಮ್ಮ ತಂಡದ ಹೆಸರನ್ನು ಇಂಗ್ಲೀಷ್ ನಲ್ಲಿ Gnatak ಎಂದು ಬರೆದರೂ ಉಚ್ಚರಿಸುತ್ತಿದ್ದುದು ಮಾತ್ರ ನಾಟಕ್ ಅಂತಲೇ! “ಜಯಂತ,ನಾನು ಸುಲಲಿತವಾಗಿ ನಿರರ್ಗಳವಾಗಿ ಕನ್ನಡ ಮಾತಾಡಿದಂತೆ ಇಂಗ್ಲೀಷ್ ಮಾತಾಡಲಾರೆ..ಇಂಗ್ಲೀಷ್ ನಾಟಕ ನಿರ್ದೇಶಿಸುವುದು ನನಗೆ ಕಷ್ಟವಾಗುವುದಿಲ್ಲವೇ?” ಎಂದು ಅಳುಕಿನಿಂದಲೇ ಜಯಂತನನ್ನು ಪ್ರಶ್ನಿಸಿದೆ. “ಏನೂ ಚಿಂತಿಸಬೇಡ..ನಿನಗೆ ಗೊತ್ತಿರುವಷ್ಟು ಇಂಗ್ಲೀಷ್ ನಿರ್ದೇಶನಕ್ಕೆ ಬೇಕಾದಷ್ಟಾಯಿತು..ಹಾಗೂ ಏನಾದರೂ ವಿವರಣೆ ನೀಡುವ ಸಂದರ್ಭದಲ್ಲಿ ನಿನಗೆ ಕಷ್ಟವಾದರೆ ನಾನಲ್ಲೇ ಇರುತ್ತೇನೆ—ನಿನಗೆ ದುಬಾಷಿಯಾಗಿ ಕೆಲಸ ಮಾಡುತ್ತೇನೆ” ಎಂದು ನನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸವನ್ನು ತುಂಬಿದ ಜಯಂತ.ಈ ಮಾತುಕತೆಯಾದ ಒಂದು ವಾರಕ್ಕೇ ತಾಲೀಮು ಆರಂಭವಾಗಿಯೇ ಹೋಯಿತು!

ನಾಟಕ್ ತಂಡದ ಕಲಾವಿದರು ನಿಜಕ್ಕೂ ತುಂಬಾ ಪ್ರತಿಭಾವಂತರಾಗಿದ್ದರು. ರಂಗಭೂಮಿಯ ಬಗ್ಗೆ ಅವರಿಗಿದ್ದ ಬದ್ಧತೆ, ಅವರ ಹುಮ್ಮಸ್ಸು-ಉತ್ಸಾಹಗಳೂ ಸಹಾ ಬೆರಗು ಹುಟ್ಟಿಸುವಂತೆಯೇ ಇದ್ದವು. ನಾಟಕದ ಜೊತೆಜೊತೆಗೇ ಒಂದು ತರಬೇತಿ ಶಿಬಿರವನ್ನೂ ನಡೆಸಿ ಎಂದವರು ಕೇಳಿಕೊಂಡಾಗ ನನ್ನ ಉತ್ಸಾಹವೂ ಇಮ್ಮಡಿಯಾಗಿಹೋಯಿತು. Men without shadows ನಾಟಕದ ವಸ್ತುವಿಗೆ ಹೊಂದುವ ರೀತಿಯಲ್ಲಿ, ‘ಉಸಿರುಗಟ್ಟಿಸುವ ವಾತಾವರಣ’, ‘ಬಂಧನ’, ‘ಏಕಾಕಿತನ’, ‘ಕ್ರೌರ್ಯ—ಹಿಂಸೆ ಹಾಗೂ ನೋವು—ಯಾತನೆಗಳ ಅಭಿವ್ಯಕ್ತಿ’…ಇಂತಹ ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ಕೆಲ ಹೊಸ ‘ಸ್ಫೂರ್ತ ವಿಸ್ತರಣ’ ಪ್ರಯೋಗಗಳನ್ನು ಕಲ್ಪಿಸಿಕೊಂಡು ಶಿಬಿರದಲ್ಲಿ ಮಾಡಿಸಿದೆ. ಆ ಪ್ರಯೋಗಗಳಲ್ಲಿ ಅವರು ತನ್ಮಯತೆಯಿಂದ ತೊಡಗಿಕೊಂಡ ರೀತಿ ಅನನ್ಯವಾದುದು. ಯೂಸುಫ್, ಸುಮನ್ ರಾವ್, ಅರುಂಧತಿ ರಾವ್, ‘ಟಾಮಿ’ ಪ್ರಕಾಶ್, ಆವ್ರಾ, ಕೃಷ್ಣ…ಇವು ಈಗ ನನಗೆ ನೆನಪುಳಿದಿರುವ ಕೆಲ ಕಲಾವಿದರ ಹೆಸರುಗಳು. ಜಯಂತನ ನೆರವಿನೊಂದಿಗೆ ಸುಮಾರು ಒಂದು ತಿಂಗಳ ಕಾಲ ಶಿಬಿರ—ತಾಲೀಮುಗಳನ್ನು ನಡೆಸಿದೆ.

ಕಲಾವಿದರೂ ಸಹಾ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದುದರಿಂದ ನನಗೆ ಸಾಸಿವೆ ಕಾಳಿನಷ್ಟೂ ತೊಂದರೆಯಾಗಲೀ ಸಂವಹನ ಸಮಸ್ಯೆಯಾಗಲೀ ಎದುರಾಗಲಿಲ್ಲ. ಪೂರ್ಣರೂಪದಲ್ಲಿ ನಾಟಕ ಸಿದ್ಧವಾದ ಬಳಿಕ ಬಾಲಭವನದಲ್ಲಿ ನಾಟಕದ ನಾಲ್ಕಾರು ಪ್ರದರ್ಶನಗಳಾದುವು. ಬಾಲಭವನದ ರಂಗಸ್ಥಳ ನಮ್ಮ ರಂಗಸಜ್ಜಿಕೆಗೆ ಕೊಂಚ ಚಿಕ್ಕದಾಗಿ ರಂಗಪರಿಕರಗಳು ಇಡುಕಿರಿದಂತೆ ಭಾಸವಾಗುತ್ತಿದ್ದುದು ಒಂದು ಕೊರತೆಯೇ ಆದರೂ ಕಲಾವಿದರು ಅದಾವುದೂ ಪ್ರೇಕ್ಷಕರನ್ನು ಕಾಡದಂತೆ ಅದ್ಭುತವಾಗಿ ಅಭಿನಯಿಸಿ ನಾಟಕದ ಯಶಸ್ಸಿಗೆ ಕಾರಣರಾದರು.ಹೀಗೆ ಪ್ರಪ್ರಥಮ ಇಂಗ್ಲೀಷ್ ನಾಟಕದ ನಿರ್ದೇಶನದಲ್ಲಿ ನನಗೆ ‘ದಂತಭಗ್ನ’ವಾಗದೇ ಮತ್ತಷ್ಟು ಆತ್ಮವಿಶ್ವಾಸವನ್ನು ನಾನು ಮೈಗೂಡಿಸಿಕೊಳ್ಳಲು ಅದು ನೆರವಾಯಿತು.

Men without shadows ನಾಟಕದಲ್ಲಿ ಅಭಿನಯಿಸಿದ ಇಬ್ಬರು ಕಲಾವಿದರೊಂದಿಗೆ ಮುಂದಿನ ದಿನಗಳಲ್ಲಿ ಘಟಿಸಿದ ಒಂದೆರಡು ಪ್ರಸಂಗಗಳು ಈಗ ನೆನಪಿಗೆ ನುಗ್ಗಿ ಬರುತ್ತಿರುವುದರಿಂದ ಈಗಲೇ ನಿಮ್ಮೊಂದಿಗೆ ಹಂಚಿಕೊಂಡು ಬಿಡುತ್ತೇನೆ.ಏಕೆಂದರೆ ಈ ಪ್ರಸಂಗಗಳು ಘಟಿಸಿದ ಕಾಲಮಾನದ ಸಮೀಪಕ್ಕೆ ನಾನು ನನ್ನ ಬರವಣಿಗೆಯಲ್ಲಿ ಬರುವ ವೇಳೆಗೆ ಈ ನೆನಪುಗಳು ಮಸುಕಾಗಿ ಬಿಟ್ಟಿರುವ ಸಾಧ್ಯತೆಯೂ ಉಂಟು!

ಒಂದು ರಜೆಯ ದಿನ ಮಧ್ಯಾಹ್ನ, ‘ಹುಲಿ ‘ ಚಂದ್ರಶೇಖರ್ ಎಂದೇ ಖ್ಯಾತರಾದ ನನ್ನ ನಿರ್ದೇಶಕ ಮಿತ್ರರು ನನ್ನನ್ನು ಹುಡುಕಿಕೊಂಡು ಮನೆಗೇ ಬಂದರು. “ಯು.ಆರ್.ಅನಂತಮೂರ್ತಿ ಅವರ ಕಾದಂಬರಿ ಆಧರಿಸಿದ,ಗಿರೀಶ್ ಕಾರ್ನಾಡ್ ಅಭಿನಯದ,ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಸಂಸ್ಕಾರ’ ಚಿತ್ರವೂ ಸೇರಿದಂತೆ ಹಲವಾರು ಚಿತ್ರಗಳ ಪ್ರಸಿದ್ಧ ನಿರ್ದೇಶಕರಾದ ಪಟ್ಟಾಭಿರಾಮರೆಡ್ಡಿಯವರು ‘ದೇವರ ಕಾಡು’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ;ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ;ಆ ಚಿತ್ರದ ಮುಖ್ಯ ಪಾತ್ರಧಾರಿ ಕನ್ನಡದವರಲ್ಲ;ಅವರಿಗೆ ನೀವು ಕಂಠದಾನ ಮಾಡಲು ಸಾಧ್ಯವೇ?” ಎಂದು ಕೇಳಿದರು ‘ಹುಲಿ’ ಚಂದ್ರಶೇಖರ್. ಅರೆಕ್ಷಣವೂ ಯೋಚಿಸದೆ ನಾನು ನುಡಿದೆ: “ಖಂಡಿತ ಮಾಡುತ್ತೇನೆ ಚಂದ್ರು..ಅಂತಹ ಹಿರಿಯ ನಿರ್ದೇಶಕರೊಟ್ಟಿಗೆ ಕೆಲಸ ಮಾಡುವ ಅವಕಾಶವನ್ನು ಕೈಚೆಲ್ಲುವುದುಂಟೇ?”. “thank you so much! ನಾನು ಸರ್ ಅವರಿಗೆ ವಿಷಯ ತಿಳಿಸ್ತೇನೆ. ನಾಳೆ ನಾಡಿದ್ದರಲ್ಲೇ ಡಬ್ಬಿಂಗ್ ಶುರು ಮಾಡಿಬಿಡೋಣ” ಎಂದು ಹೊರಡಲನುವಾದರು ಚಂದ್ರು.

ನಾನು: “ಇರಿ ಚಂದ್ರು,ಸ್ವಲ್ಪ ಕಾಫಿ ಕುಡಿದು ಹೋಗುವಿರಂತೆ ಕೂತುಕೊಳ್ಳಿ.”
ಚಂದ್ರು: “ಇಲ್ಲ ಇಲ್ಲ..ಸರ್ ಹೊರಗಡೆ ಕಾರಲ್ಲಿ ಕೂತಿದಾರೆ..ಹೊರಟುಬಿಡ್ತೀನಿ.”
ಏನು?! ಪಟ್ಟಾಭಿರಾಮರೆಡ್ಡಿಯವರು ಹೊರಗಡೆ ಕಾರಲ್ಲಿ ಕೂತಿದ್ದಾರೆಯೇ?! “ಛೇ! ಎಂಥಾ ಕೆಲಸ ಮಾಡಿಬಿಟ್ಟಿರಿ ಚಂದ್ರು! ಅಂಥಾ ಹಿರಿಯರನ್ನ ಒಳಗೆ ಕರಕೊಂಡು ಬರದೇ ಕಾರಲ್ಲಿ ಕೂರಿಸಿ ಬಂದಿದೀರಲ್ಲಾ!” ಎನ್ನುತ್ತಾ ನಾನು ಹೊರಗೋಡಿದೆ.”ದಯವಿಟ್ಟು ಕ್ಷಮಿಸಿ ಸರ್..ನೀವು ಬಂದಿರೋ ವಿಷಯ ನನಗೆ ಗೊತ್ತಾಗಲೇ ಇಲ್ಲ..ತಪ್ಪಾಗಿ ಭಾವಿಸಬೇಡಿ..ಒಳಗೆ ಬನ್ನಿ ಸರ್..” ಎಂದು ರೆಡ್ಡಿಯವರನ್ನು ಕೇಳಿಕೊಂಡೆ. ಯಾವ ಬಿಗುವು ಬಿಂಕಗಳೂ ಇಲ್ಲದ ಸರಳ ವ್ಯಕ್ತಿತ್ವ ರೆಡ್ಡಿಯವರದು..”its all right srinivas..actually we don’t have much time” ಎನ್ನುತ್ತಾ ನಸುನಗುತ್ತಲೇ ಕೆಳಗಿಳಿದರು ರೆಡ್ಡಿಯವರು.”ಒಂದೈದು ನಿಮಿಷದ ಮಟ್ಟಿಗಾದರೂ ಒಳಗೆ ಬಂದು ಹೋಗಿ ಸರ್..ಹಾಗೇ ಕಳಿಸೋಕ್ಕಾಗಲ್ಲ ನಿಮ್ಮನ್ನ” ಎಂದು ಒತ್ತಾಯಪೂರ್ವಕವಾಗಿ ಅವರನ್ನು ಒಳ ಕರೆತಂದೆ. ಒಳಬಂದ ಮೇಲೆ ಅವರ ಹೊಸ ಚಿತ್ರದ ಬಗ್ಗೆ ಉತ್ಸಾಹದಿಂದ ಮಾತಾಡುತ್ತಾ ರೆಡ್ಡಿಯವರು 30 ನಿಮಿಷಗಳಿಗೂ ಹೆಚ್ಚು ಸಮಯ ನಮ್ಮೊಟ್ಟಿಗೆ ಕಳೆದರು! ಆ ಮಾತುಕತೆಯ ನಡುವೆಯೇ ನನಗೆ ತಿಳಿದು ಬಂದ ಮುಖ್ಯ ಸಂಗತಿ ಎಂದರೆ ನಾನು ಕಂಠದಾನ ಮಾಡಬೇಕಿರುವ ಕಲಾವಿದನ ಹೆಸರು ಅಬ್ರಹಾಂ ಅಲಿಯಾಸ್ ಆವ್ರಾ! ಇವನೇ ನನ್ನ men without shadows ನಾಟಕದಲ್ಲಿ ಒಂದು ಮುಖ್ಯ ಪಾತ್ರ ವಹಿಸಿದ್ದವನು! ಹುಲಿ ಚಂದ್ರು ಅವನಿಗೆ ಕಂಠದಾನ ಮಾಡಲು ನನ್ನ ಹೆಸರನ್ನು ಸೂಚಿಸಿದಾಗ ಅವನೂ ಸಹಾ, “ಪ್ರಭು ಸರ್ ನನಗೆ voice ಕೊಡೋದಕ್ಕೆ ಒಪ್ಪಿಕೊಂಡ್ರೆ ಅದು ನನ್ನ ಅದೃಷ್ಟ ಅಂತ ಭಾವಿಸ್ತೀನಿ..ಅವರ ನಿರ್ದೇಶನದಲ್ಲಿ ಪಾರ್ಟ್ ಮಾಡಿದೀನಿ ಅನ್ನೋದೇ ನನಗೆ ಖುಷಿಯ ವಿಷಯ” ಎಂದು ಉದ್ಗರಿಸಿದ್ದನಂತೆ! ಸಾಲು ಮರದ ತಿಮ್ಮಕ್ಕನಂತೆ ಮರಗಳನ್ನು ಬೆಳೆಸುತ್ತಾ ಕಾಡುಗಳನ್ನು ಸಂರಕ್ಷಿಸುವುದನ್ನೇ ತನ್ನ ಬದುಕಿನ ಮುಖ್ಯ ಧ್ಯೇಯವಾಗಿರಿಸಿಕೊಂಡ ವ್ಯಕ್ತಿಯೊಬ್ಬನ ಬದುಕಿನ ಸುತ್ತ ತಮ್ಮ ‘ದೇವರಕಾಡು’ ಚಿತ್ರದ ಕಥಾ ಹಂದರವನ್ನು ರೆಡ್ಡಿಯವರು ರೂಪಿಸಿದ್ದರು. ಆ ವ್ಯಕ್ತಿಯ ಯೌವ್ವನದಿಂದ ಮೊದಲುಗೊಂಡು ಅವನು ಹಣ್ಣು ಹಣ್ಣು ಮುದುಕನಾಗುವವರೆಗೆ ಕಥೆಯ ಹರವಿದ್ದುದರಿಂದ ಸಂದರ್ಭಾನುಸಾರವಾಗಿ ಆಯಾಯಾ ವಯೋಮಾನಕ್ಕೆ ತಕ್ಕಂತೆ ಮಾತಾಡಬೇಕಾಗಿದ್ದುದು ಕಂಠದಾನ ಸಮಯದಲ್ಲಿ ನನಗೆ ಒಂದು ಕಠಿಣ ಸವಾಲೇ ಆಗಿತ್ತು. ಆವ್ರಾ ತನಗೆ ದೊರೆತಿದ್ದ ಆ ಅಪೂರ್ವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ತನ್ನ ಪಾತ್ರದಲ್ಲಿ ತಲ್ಲೀನನಾಗಿ ಮನಮುಟ್ಟುವಂತೆ ಅಭಿನಯಿಸಿದ್ದ.ನಾನೂ ಸಹಾ ಅವನ ಶ್ರಮ ವ್ಯರ್ಥವಾಗದಂತೆ ಪಾತ್ರಕ್ಕೆ ಜೀವ ತುಂಬಲು ಶಕ್ತಿಮೀರಿ ಪ್ರಯತ್ನಿಸಿದ್ದೆ. ನಿರ್ದೇಶಕ ಪಟ್ಟಾಭಿರಾಮರೆಡ್ಡಿಯವರು ನನ್ನ ಕೆಲಸವನ್ನು ಮೆಚ್ಚಿಕೊಂಡು, “thank you srinivas! you have done a great job!” ಎಂದು ಬೆನ್ನು ತಟ್ಟಿದರು! ಅಂಥವರ ಇಂಥದೊಂದು ಮೆಚ್ಚುಗೆ ಸಾಲದೇ ಸಂತಸದಿಂದ ಎದೆ ಉಬ್ಬಲಿಕ್ಕೆ?! ಕಿರಿಯ ಮಿತ್ರನೊಬ್ಬನಿಗೆ ‘ಧ್ವನಿ’ಯನ್ನು ನೀಡಿದ್ದು ಹಾಗೂ ಅರ್ಥಪೂರ್ಣ ಚಿತ್ರವೊಂದರಲ್ಲಿ ನಾನೂ ಭಾಗಿಯಾದೆನೆನ್ನುವುದು ನನ್ನ ಖುಷಿಯನ್ನು ಮತ್ತಷ್ಟು ಹೆಚ್ಚಿಸಿದ ಕಾರಣಗಳಾದವು.

ಮತ್ತೂ ಒಂದು ಪ್ರಸಂಗ—ಇದೂ ಸಹಾ ಹಲವಾರು ವರ್ಷಗಳ ನಂತರ ಘಟಿಸಿದ್ದು ಹಾಗೂ men without shadows ನಾಟಕದಲ್ಲಿ ಒಂದು ಮುಖ್ಯ ಪಾತ್ರ ವಹಿಸಿದ್ದ ಮತ್ತೊಬ್ಬ ನಟನಿಗೆ ಸಂಬಂಧಿಸಿದ್ದು. ನಾನೊಮ್ಮೆ ಸಿಲ್ವರ್ ಜೂಬಿಲಿ ಪಾರ್ಕ್ ರಸ್ತೆಯಲ್ಲಿದ್ದ ಒಂದು ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿಗೆ ನನ್ನ ಭಾವನಂಟ ಅಶೋಕನೊಂದಿಗೆ ಹೋಗಿದ್ದೆ. ಬುಶ್ ಅಕಾಯ್ ಕಂಪನಿಯ audio system ನ ಜಾಹೀರಾತು ನೋಡಿ ಕೈಗೆಟುಕುವಂತಿದ್ದರೆ ಕೊಳ್ಳಬೇಕೆಂಬ ಇರಾದೆಯಿಂದ ನಾನಲ್ಲಿಗೆ ಹೋದದ್ದು. ಅಲ್ಲಿದ್ದ ವ್ಯಕ್ತಿಯೊಬ್ಬ ಬಹಳ ಆಸಕ್ತಿಯಿಂದ ನಾನು ಬಯಸಿದ್ದ system ಅನ್ನು ಕುರಿತು ಎಲ್ಲಾ ಮಾಹಿತಿಯನ್ನು ನೀಡಿ ಒಳ್ಳೆಯ ರಿಯಾಯಿತಿಯನ್ನೂ ನೀಡುವುದಾಗಿ ಭರವಸೆ ನೀಡಿದ.’ಆಯಿತು..ಮುಂದಿನ ವಾರ ಬಂದು ಖರೀದಿಸುತ್ತೇನೆ’ ಎಂದು ಹೇಳಿ ಅಲ್ಲಿಂದ ಹೊರಹೊರಟೆ. ಅಶೋಕಿಯೊಂದಿಗೆ ಇನ್ನೇನು ಸ್ಕೂಟರ್ ಹತ್ತಿ ಹೊರಡಬೇಕು, ಅಷ್ಟರಲ್ಲಿ ಆ ವ್ಯಕ್ತಿ ಒಳಗಿನಿಂದ ಓಡೋಡಿ ಬಂದ. ‘ಸರ್, ನೀವು ನಾಟಕ direct ಮಾಡ್ತೀರಾ?’ ಎಂದು ಅವನು ನನ್ನನ್ನು ಕೇಳಿದಾಗ ನನಗೆ ಪರಮಾಶ್ಚರ್ಯ! ಹೌದೆಂದು ತಲೆಯಾಡಿಸಿದೆ. ‘ಒಂದು ನಿಮಿಷ ಒಳಗೆ ಬನ್ನಿ ಸರ್..ನಮ್ಮ ಬಾಸ್ ನಿಮ್ಮ ಜೊತೆ ಮಾತಾಡಬೇಕಂತೆ’ ಎಂದು ನುಡಿದು ಮತ್ತೆ ನಮ್ಮನ್ನು ಒಳ ಕರೆದೊಯ್ದ.ಯಾರಿರಬಹುದು ಇವನ ಬಾಸ್ ಎಂದು ಚಿಂತಿಸುತ್ತಾ ಗೊಂದಲದಲ್ಲೇ ಒಳಹೋಗುತ್ತಿದ್ದಂತೆ ಒಳಗಿನಿಂದ ಒಬ್ಬ ವ್ಯಕ್ತಿ ತಾನು ಕುಳಿತಿದ್ದ ವ್ಹೀಲ್ ಛೇರ್ ಅನ್ನು ತಾನೇ ಚಲಾಯಿಸಿಕೊಂಡು ನಮ್ಮ ಬಳಿಗೆ ಬಂದ. “hallo mr. prabhu.. how are you? do you remember me?” ಎಂದು ಆ ವ್ಯಕ್ತಿ ಕೇಳಿದಾಗ ಅವನನ್ನೇ ದಿಟ್ಟಿಸಿ ನೋಡಿದೆ. ಪರಿಚಿತ ಚಹರೆ.. ಪರಿಚಿತ ಧ್ವನಿ.. ಆದರೆ ಯಾರೆಂದು ಫಕ್ಕನೇ ತಿಳಿಯುತ್ತಿಲ್ಲ.. ಒಂದು ಕ್ಷಣ ನನ್ನ ಗೊಂದಲವನ್ನು ಗಮನಿಸಿ ನಸುನಗುತ್ತಾ ಅವನೇ ಮುಂದುವರಿಸಿದ: ” ನಾನು ಸರ್..ಪ್ರಕಾಶ್.. ‘ಟಾಮಿ’..i played the character of pellarin in your play men without shadows a few years ago”.. ಅರೆ! ಹೌದು! ನಾಟಕ್ ತಂಡದ ಕಲಾವಿದ ಟಾಮಿ! ನನ್ನ ಮುಖದ ಮೇಲೆ ಅವನ ಗುರುತು ಹತ್ತಿದ ಸಂತಸದ ಕಿರುನಗೆ ಮೂಡುವಷ್ಟರಲ್ಲೇ ದೃಷ್ಟಿ ಅವನು ಕುಳಿತಿದ್ದ ವ್ಹೀಲ್ ಛೇರ್ ನತ್ತ ಹೊರಳಿ ಆಘಾತವಾಯಿತು..ಟಾಮಿಯ ಆ ಪರಿಸ್ಥಿತಿ ಕಂಡು ವಿಪರೀತ ಸಂಕಟವಾಗಿ ಪ್ರಶ್ನಾರ್ಥಕವಾಗಿ ಅವನ ಮುಖವನ್ನೇ ನೋಡಿದೆ. ಸಂಕ್ಷಿಪ್ತವಾಗಿ ತನ್ನ ಬದುಕಿನ ದುರಂತ ಕಥೆಯನ್ನು ಟಾಮಿ ಹೇಳಿಕೊಂಡ: ‘ಒಂದೆರಡು ವರ್ಷಗಳ ಹಿಂದೆ ಕಾರ್ಪೊರೇಷನ್ ವೃತ್ತದ ಬಳಿ ತಡರಾತ್ರಿ ನಡೆದ ಭೀಕರ ಅಪಘಾತದಲ್ಲಿ ಟಾಮಿಯ ಸೊಂಟ ಹಾಗೂ ಕಾಲುಗಳಿಗೆ ಬಲವಾದ ಪೆಟ್ಟುಬಿದ್ದು ನಿರ್ವಾಹವಿಲ್ಲದೆ ವ್ಹೀಲ್ ಛೇರ್ ನ ಆಸರೆ ಪಡೆಯಬೇಕಾಗಿ ಬಂದಿದೆ..ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿ ಉಳಿದಿದ್ದಾನೆ..ಸಧ್ಯದಲ್ಲೇ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗಿ ಬರುವ ಯೋಚನೆಯಿದೆ.’

ನನಗಾದ ಆಘಾತದಿಂದ ಚೇತರಿಸಿಕೊಳ್ಳಲು ನನಗೆ ಕೊಂಚ ಸಮಯವೇ ಬೇಕಾಯಿತು. ಕೊನೆಗೆ ಟಾಮಿಯೇ ನಗುತ್ತಾ, “ಅಷ್ಟೊಂದು worry ಮಾಡ್ಕೋಬೇಡಿ ಸರ್.. ಏನು ಮಾಡೋಕಾಗುತ್ತೆ? ಎಲ್ಲಾ ಹಣೇಬರಹ..ನೀವು ಒಂದು ಕೆಲಸ ಮಾಡಿ..ಇಂದಿರಾನಗರದಲ್ಲಿ ನಮ್ಮದು ಇನ್ನೊಂದು ಅಂಗಡಿ ಇದೆ..actually it is a c d library. western music ದು ತುಂಬಾ ಒಳ್ಳೇ collection ಇದೆ..ಒಂದೆರಡು imported audio systems ಕೂಡಾ ಇವೆ.ಒಂದ್ಸಲ ಬಿಡುವು ಮಾಡಿಕೊಂಡು ಬನ್ನಿ” ಎಂದ. ಹೆಚ್ಚೇನೂ ಹೇಳಲು ತೋಚದೇ ಒಂದೆರಡು ಸಾಂತ್ವನದ ಮಾತಾಡಿಅಲ್ಲಿಂದ ಹೊರಟುಬಂದೆ. ಬಹು ಸಮಯದ ವರೆಗೆ ಟಾಮಿ ನನ್ನನ್ನು ಕಾಡುತ್ತಲೇ ಇದ್ದ. ಒಮ್ಮೆ ನಾಟಕದಲ್ಲಿ ಅವನು ವಹಿಸಿದ್ದ ಪಾತ್ರದ ಚಲನ ವಲನಗಳು—ಅವನ ಹಾವ ಭಾವ ಮಾತುಗಳು ಕಣ್ಣೆದುರಿಗೆ ಚಿತ್ರವತ್ತಾಗಿ ಮೂಡಿಬಂದರೆ ಮರುಕ್ಷಣದಲ್ಲಿ ವ್ಹೀಲ್ ಛೇರ್ ದೂಡಿಕೊಂಡು ಬಂದ ಟಾಮಿಯ ಮುಖ ಧುತ್ತೆಂದು ಪ್ರತ್ಯಕ್ಷವಾಗಿ ತುಂಬಾ ಸಂಕಟವಾಗುತ್ತಿತ್ತು. ಒಂದೆರಡು ಬಾರಿ ಇಂದಿರಾನಗರದ ಅವನ ಸಿ ಡಿ ಲೈಬ್ರರಿಗೂ ಹೋಗಿ ಮಾತಾಡಿಸಿಕೊಂಡು ಬಂದೆ. ಆ ಸಮಯದಲ್ಲಿ ನನ್ನ ಬಾಳಗೆಳತಿ ರಂಜನಿ ಮಿಲ್ಲರ್ ರಸ್ತೆಯಲ್ಲಿದ್ದ st annes college ನಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಳು. ಅವಳಿಗೆ ಟಾಮಿಯ ವಿಷಯವನ್ನೆಲ್ಲಾ ಆಮೂಲಾಗ್ರವಾಗಿ ಹೇಳಿದ್ದೆ. ಒಂದು ಸಂಜೆ ಕಾಲೇಜ್ ನಿಂದ ಬರುತ್ತಿದ್ದಂತೆ ರಂಜನಿ, “ನಿಮ್ಮ friend ಪ್ರಕಾಶ್ —ಟಾಮಿ—ಇದಾರಲ್ಲಾ, ಅವರ friend ಉಮಾ ನನ್ನ ಸಹೋದ್ಯೋಗಿ…ಇವತ್ತು ಅವಳ ಜೊತೆ ಮಾತಾಡ್ತಾ ಕೂತಿದ್ದಾಗ ಅಕಸ್ಮಾತ್ ಆಗಿ ಈ ವಿಷಯ ಗೊತ್ತಾಯ್ತು” ಎಂದಳು.

ವಾಸ್ತವವಾಗಿ ಉಮಾ ಹಾಗೂ ಪ್ರಕಾಶ್ ರ ನಡುವೆ ಇದ್ದದ್ದು ಬರಿಯ ಸ್ನೇಹವಷ್ಟೇ ಅಲ್ಲ,ನಾಲ್ಕೈದು ವರ್ಷಗಳಿಂದ ಇಬ್ಬರೂ ಗಾಢ ಪ್ರೇಮದಲ್ಲಿದ್ದಾರೆ! ‘ಇದ್ದಾರೆ’ ಅನ್ನುವುದಕ್ಕಿಂತ ಪ್ರೇಮದಲ್ಲಿ ಇದ್ದರು ಎಂದರೆ ಸೂಕ್ತವೇನೋ..ಟಾಮಿಯ ಅಪಘಾತದ ನಂತರ ಒಟ್ಟಾರೆ ಸನ್ನಿವೇಶವೇ ಬದಲಾಗಿರಬಹುದಲ್ಲವೇ ಎಂಬ ನನ್ನ ಅನುಮಾನದ ಪ್ರಶ್ನೆಗೆ ರಂಜನಿ ನೀಡಿದ ಉತ್ತರ ಕೇಳಿ ನಾನು ಚಕಿತನಾಗಿ ಹೋದೆ! ಇಲ್ಲ! ಅಪಘಾತದ ನಂತರವೂ ಉಮಾ ಒಂದಿಷ್ಟೂ ಬದಲಾಗಿಲ್ಲ! ಅಷ್ಟೇ ಅಲ್ಲ..ಪ್ರಕಾಶನನ್ನೇ ಮದುವೆಯಾಗುವುದಾಗಿ ತೀರ್ಮಾನಿಸಿಯೂ ಬಿಟ್ಟಿದ್ದಾಳೆ! ಯಾರು ಎಷ್ಟೇ ವಿರೋಧಿಸಿದರೂ ಅವಳ ಮನಃಪರಿವರ್ತನೆಗೆ ಯತ್ನಿಸಿದರೂ ಅವಳ ನಿಲುವು ಮಾತ್ರ ಮಿಸುಕಿಯೂ ಇಲ್ಲ! “ಮದುವೆಯ ನಂತರ ಈ ಅಪಘಾತವಾಗಿದ್ದರೆ ನಾನು ಅವನನ್ನು ಬಿಟ್ಟುಹೋಗುತ್ತಿದ್ದೆನೇ? ಇಲ್ಲ! ಈಗಲೂ ಹಾಗೆಯೇ..ಯಾರೂ ಈ ಕುರಿತು ನನ್ನ ಜತೆ ಚರ್ಚೆಗೆ ಬರಬೇಡಿ” ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟಿದ್ದಾಳೆ!

ಕಥೆ—ಕಾದಂಬರಿಗಳಲ್ಲಿ, ಸಿನೆಮಾಗಳಲ್ಲಿ ಇಂಥ ಸನ್ನಿವೇಶಗಳನ್ನು ಓದಿ—ನೋಡಿ ಎಷ್ಟೋ ಸಲ ಅವಾಸ್ತವವೆಂದು ಗೊಣಗಿಕೊಂಡಿದ್ದರೂ ಕಣ್ಣೆದುರಿಗೇ—ನಮ್ಮ ಪರಿಚಿತ ವಲಯದಲ್ಲೇ ಘಟಿಸುತ್ತಿದ್ದ ಅಂಥದೊಂದು ಪ್ರಸಂಗವನ್ನು ನೋಡಿ ನಿಜಕ್ಕೂ ಮೂಕ ವಿಸ್ಮಿತನಾದೆ. ಹೀಗೂ ಸಾಧ್ಯವೇ ಎಂಬ ನನ್ನ ಗೊಂದಲದ ಪ್ರಶ್ನೆಗಳು ಅರ್ಥವಾದವಳಂತೆ ರಂಜನಿ ಹೇಳಿದಳು: “ಖಂಡಿತ ಸಾಧ್ಯ! ನಿಜವಾದ ಪ್ರೇಮಕ್ಕೆ ಆಕಾರ—ರೂಪ—ಆಸ್ತಿ ಅಂತಸ್ತು—ಜಾತಿ ಪಾತಿ.. ಹೀಗೆ ಯಾವ ಹಂಗೂ ಇಲ್ಲ ಯಾವ ಸಂಕೋಲೆಗಳೂ ಇಲ್ಲ. ಅದೊಂದು ಆತ್ಮ ಸಂವಾದ… ಆತ್ಮ ಸ್ಪರ್ಶದ ದಿವ್ಯಾನುಭೂತಿ!”

ಮುಂದಿನ ದಿನಗಳಲ್ಲಿ ಉಮಾ—ಪ್ರಕಾಶರ ಮದುವೆಯೂ ಆಯಿತು. ಕಾರಣಾಂತರಗಳಿಂದಾಗಿ ಅವರೊಂದಿಗೆ ಹೆಚ್ಚಿನ ಸಂಪರ್ಕವನ್ನು ಮುಂದಿನ ದಿನಗಳಲ್ಲಿ ಇಟ್ಟುಕೊಳ್ಳಲಾಗದಿದ್ದರೂ ಯಾವಾಗಾದರೊಮ್ಮೆ ಅವರ ಸಿ ಡಿ ಲೈಬ್ರರಿಗೆ ಹೋಗಿ ಭೇಟಿಯಾಗಿ ಬರುತ್ತಿದ್ದೆ.ಕೆಲವೊಮ್ಮೆ ಉಮಾ ಕೂಡಾ ಅಲ್ಲಿ ಸಿಗುತ್ತಿದ್ದರು. ಅವರನ್ನು ನೋಡಿದಾಗಲೆಲ್ಲಾ ಕವಿ ವಾಣಿ ನೆನಪಿಗೆ ನುಗ್ಗಿ ಬರುತ್ತಿತ್ತು: “ನಿನ್ನ ಪ್ರೀತಿಗೆ ಅದರ ರೀತಿಗೆ ಕಣ್ಣ ಹನಿಗಳೇ ಕಾಣಿಕೆ”!

ಈ ಎರಡೂ ಪ್ರಸಂಗಗಳು ಎಂಬತ್ತರ ದಶಕದ ಕೊನೆ ಹಾಗೂ ತೊಂಬತ್ತರ ದಶಕದ ಪ್ರಾರಂಭದಲ್ಲಿ ಘಟಿಸಿದಂಥವು. ಸಾಂದರ್ಭಿಕವಾಗಿ ಇವುಗಳನ್ನು ನೆನಪಿಸಿಕೊಂಡ ಮೇಲೆ ಈಗ ಮತ್ತೆ ನನ್ನ ರಂಗಭೂಮಿ ಪಯಣಕ್ಕೆ ತೆರಳುತ್ತೇನೆ.

ನಮ್ಮ ನಾಟ್ಯದರ್ಪಣ ತಂಡಕ್ಕೆ ನಾಟಕ ಮಾಡಿಸಿ ಸಾಕಷ್ಟು ದಿನಗಳಾಗಿಬಿಟ್ಟಿದ್ದವು. ಯಾವ ನಾಟಕ ಮಾಡಿಸುವುದೆಂದು ಚಿಂತಿಸುತ್ತಿದ್ದಾಗಲೇ ಮಯೂರ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಕುಂ.ವೀರಭದ್ರಪ್ಪ ಅವರ ‘ಬೇಲಿ ಮತ್ತು ಹೊಲ’ ನೀಳ್ಗತೆ ನನ್ನ ಗಮನ ಸೆಳೆಯಿತು. ಕುಂ ವೀ ಅವರು ಅದಾಗಲೇ ತಮ್ಮ ಸೊಗಸಾದ ಕಥೆಗಳ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಛಾಪೊತ್ತಿದ್ದರು. ಬಳ್ಳಾರಿ ಪ್ರಾಂತದ ಗ್ರಾಮೀಣ ಕನ್ನಡದ ಅತ್ಯಂತ ಸಮರ್ಥ ಬಳಕೆಯನ್ನು ಕುಂ ವೀ ಅವರ ಕಥೆಗಳಲ್ಲಿ ಕಾಣಬಹುದು. ಯಾವ ಅಡೆತಡೆಯೂ ಇಲ್ಲದೆ ಲೀಲಾಜಾಲವಾಗಿ ಹರಿಯುವ ಕಥನ ಪ್ರವಾಹ ಕುಂ ವೀ ಅವರ ಬರವಣಿಗೆಯ ವೈಶಿಷ್ಟ್ಯ. ಗ್ರಾಮೀಣ ಪ್ರದೇಶದ ಜನರ ಸರಳ ಬದುಕು.. ಅವರ ಮುಗ್ಧತೆ.. ಅವರನ್ನು ಇನ್ನಿಲ್ಲದಂತೆ ಶೋಷಿಸುವ ಪೋಲೀಸರ ದೌರ್ಜನ್ಯ…ಇವೇ ಕೆಂದ್ರಸ್ಥಾನದಲ್ಲಿರುವ ‘ಬೇಲಿ ಮತ್ತು ಹೊಲ’ ಕಥೆ ಕುಂ ವೀ ಅವರ ಅತ್ಯಂತ ಶಕ್ತಿಶಾಲೀ ಬರವಣಿಗೆಯ ದ್ಯೋತಕವಾಗಿದ್ದು ಅವರ ಪ್ರಾತಿನಿಧಿಕ ಕಥೆಗಳಲ್ಲಿ ಒಂದೆಂದು ಕೂಡಾ ನಿರ್ವಿವಾದವಾಗಿ ಹೇಳಬಹುದು.

ಇಂಥದೊಂದು ಅಪೂರ್ವ ಕಥೆ ಕಣ್ಣಿಗೆ ಬೀಳುತ್ತಲೇ ನಾನು ಕಾರ್ಯೋನ್ಮುಖನಾದೆ. ಆಗ ಮಯೂರ ಮಾಸಪತ್ರಿಕೆಯ ಜವಾಬ್ದಾರಿಯನ್ನು ಹೊತ್ತಿದ್ದ ಜಿ.ಎಸ್.ಸದಾಶಿವ ಅವರಿಗೆ ‘ಬೇಲಿ ಮತ್ತು ಹೊಲ’ ಕಥೆಯನ್ನು ನಾಟಕ ರೂಪಕ್ಕೆ ಅಳವಡಿಸುವ ನನ್ನ ಇರಾದೆಯನ್ನು ತಿಳಿಸಿ ಅವರ ಮೂಲಕವೇ ಕುಂ ವೀ ಅವರ ಒಪ್ಪಿಗೆಯನ್ನು ಪಡೆದುಕೊಂಡೆ. ನಂತರ ಆದಷ್ಟು ಬೇಗ ರೂಪಾಂತರದ ಕೆಲಸವನ್ನು ಮುಗಿಸಿಬಿಡಬೇಕೆಂಬ ತವಕದಿಂದ ಮಂಗಳೂರಿನ ಮಿತ್ರ ಎಸ್.ಕೆ.ಶ್ರೀಧರನ ಮನೆಗೆ ಹೊರಟುಬಿಟ್ಟೆ. ನನ್ನ ಬರವಣಿಗೆಗೇ ಮೀಸಲಾಗಿದ್ದ ಅವರ ಮನೆಯ ಪುಟ್ಟ ಕೋಣೆ ನನಗಾಗಿ ಕಾಯುತ್ತಿತ್ತು. ಅದೇನೋ ಅಲ್ಲಿ ಕುಳಿತುಬಿಟ್ಟರೆ ಇನ್ನಿಲ್ಲದಂತಹ ಏಕಾಗ್ರತೆ ಆವರಿಸಿಕೊಂಡು ಒಂದೇ ಓಘದಲ್ಲಿ ಬರವಣಿಗೆಯ ಕೆಲಸ ಸಾಗುತ್ತಿತ್ತು!

ಹಾಗೆ ಅಲ್ಲಿ ಕುಳಿತು ಬರವಣಿಗೆಯಲ್ಲಿ ತೊಡಗಿದ್ದಾಗಲೇ ಹೊನ್ನಾವರದಲ್ಲಿ ಹವ್ಯಾಸಿ ರಂಗಭೂಮಿಯನ್ನು ಕುರಿತು ನಡೆಯುತ್ತಿದ್ದ ಒಂದು ವಿಚಾರ ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂದಿತು.ಸನ್ಮಾನ್ಯ ಶಿವರಾಮ ಕಾರಂತರು ಆ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸುವವರಿದ್ದರು. ಸತತ ಬರವಣಿಗೆಯ ನಡುವೆ ಒಂದು ದಿನದ ವಿರಾಮವೂ ಆಯಿತು,ಅದಕ್ಕಿಂತ ಹೆಚ್ಚಿಗೆ ಶಿವರಾಮ ಕಾರಂತರನ್ನು ಮುಖತಃ ಭೇಟಿಯಾಗುವ ಸುವರ್ಣಾವಕಾಶ ದೊರೆತಂತಾಯಿತು ಎಂದುಕೊಂಡು ವಿಚಾರಗೋಷ್ಠಿಗೆ ಬರುತ್ತೇನೆಂದು ಒಪ್ಪಿಕೊಂಡೆ. ಮೊದಲು ನಾನೂ ಹಾಗೂ ಶ್ರೀಧರ ಬೈಕ್ ನಲ್ಲೇ ಅಲ್ಲಿಗೆ ಹೋಗಿಬಿಡುವುದೆಂದು ತೀರ್ಮಾನಿಸಿಕೊಂಡಿದ್ದರೂ ಕೊನೆಯ ಕ್ಷಣದಲ್ಲಿ ಶ್ರೀಧರನಿಗೆ ಯಾವುದೋ ಮುಖ್ಯ ಕೆಲಸ ಒದಗಿ ಬಂದದ್ದರಿಂದ ನಾನು ಹೊನ್ನಾವರಕ್ಕೆ ಬಸ್ ಹತ್ತಬೇಕಾಯಿತು. ಹೆಚ್ಚುಕಡಿಮೆ ನಾಲ್ಕು ತಾಸಿನ ಪ್ರಯಾಣವಾಗಿದ್ದು ವಿಚಾರಗೋಷ್ಠಿ ಬೆಳಿಗ್ಗೆ ಹತ್ತು ಗಂಟೆಗೇ ಇದ್ದುದರಿಂದ ನಾನು ಆರು ಗಂಟೆಗೇ ಇದ್ದ ಮೊದಲ ಬಸ್ ಅನ್ನೇ ಹತ್ತಿ ಮಂಗಳೂರಿನಿಂದ ಹೊರಟೆ. ನನ್ನ ದುರಾದೃಷ್ಟಕ್ಕೆ ಅಂದೇ ಬಸ್ ನಲ್ಲಿ ತಾಂತ್ರಿಕ ತೊಂದರೆ ಕಾಣಿಸಿಕೊಳ್ಳಬೇಕೇ! ಸುಮಾರು ಹೊತ್ತು ಅದನ್ನು ಸರಿಪಡಿಸಲು ತಿಣುಕಿ ಸಾಧ್ಯವಾಗದೇ ಹೋದಾಗ ಪರ್ಯಾಯ ವ್ಯವಸ್ಥೆ ಮಾಡಿ ನಮ್ಮನ್ನು ಹೊನ್ನಾವರಕ್ಕೆ ಕಳಿಸಿಕೊಟ್ಟರು ಸಾರಿಗೆ ಸಂಸ್ಥೆಯವರು.ಊರು ತಲುಪಿ ಗೋಷ್ಠಿ ನಡೆಯುತ್ತಿದ್ದ ಹಾಲ್ ಅನ್ನು ಹುಡುಕಿಕೊಂಡು ಹೋಗಿ ತಲುಪಿದಾಗ 12 ಗಂಟೆ! ಆ ವೇಳೆಗಾಗಲೇ ಎಲ್ಲರ ಭಾಷಣಗಳೂ ಮುಗಿದು ಕಾರಂತರು ಅಧ್ಯಕ್ಷ ಭಾಷಣ ಆರಂಭಿಸಿಬಿಟ್ಟಿದ್ದಾರೆ! ನಾನು ಹೋಗಿ ನಿರ್ವಾಹಕರಿಗೆ ನಡೆದ ಪ್ರಸಂಗವನ್ನು ವಿವರಿಸಿ ಕ್ಷಮೆ ಯಾಚಿಸಿದೆ. ಅವರೂ ಸಹಾ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು,”ನಾವು ಹೀಗೆ ಮಾಡೋಣ..ಕಾರಂತರು ಮಾತು ಆರಂಭಿಸಿಯಾಗಿದೆ..ಮಧ್ಯೆ ನಿಲ್ಲಿಸುವುದು ಸರಿಯಲ್ಲ..ಅವರ ಮಾತು ಮುಗಿದ ಮೇಲೆ ನಾನು ಸಭೆಗೆ ನಿಮಗಾದ ತೊಂದರೆಯನ್ನು ವಿವರಿಸುತ್ತೇನೆ..ಆಮೇಲೆ ನೀವು ಅನೌಪಚಾರಿಕವಾಗಿ ಸ್ವಲ್ಪ ಹೊತ್ತು ಮಾತಾಡಿ ನಿಮ್ಮ ವಿಚಾರಗಳನ್ನು ಮಂಡಿಸಬಹುದು..ಆದೀತೇ?” ಎಂದರು.ನಾನು ಆಗಲೆಂದು ತಲೆಯಾಡಿಸಿದೆ. ಅತ್ತ ಕಾರಂತರ ಅಧ್ಯಕ್ಷೀಯ ಭಾಷಣ ಸಾಗಿತ್ತು. ಯಕ್ಷಗಾನದಿಂದ ಮೊದಲುಗೊಂಡು ವೃತ್ತಿ ರಂಗಭೂಮಿ—ಹವ್ಯಾಸೀ ರಂಗಭೂಮಿಗಳೆಲ್ಲದರಲ್ಲಿ ತಾಂಡವವಾಡುತ್ತಿದ್ದ ಅಶಿಸ್ತಿನ ಬಗ್ಗೆಯೇ ಒತ್ತುಕೊಟ್ಟು ಕಾರಂತರು ಮಾತಾಡುತ್ತಿದ್ದರು. ಯಾಕೋ ಒಂದೆರಡು ಸಲ ಮುಂದೆಯೇ ಕುಳಿತಿದ್ದ ನನ್ನನ್ನು ನೋಡಿಯೇ ಮಾತಾಡಿದ್ದರಿಂದ ಎರಡು ತಾಸು ತಡವಾಗಿ ಬಂದ ಗಿಲ್ಟ್ ಕಾಡತೊಡಗಿ ಹಾಗೇ ಕುಳಿತಲ್ಲೇ ಮುಜುಗರದಲ್ಲಿ ಮಿಸುಕಾಡಿದೆ! ನಂತರ ಪ್ರೇಕ್ಷಕರ ಶಿಸ್ತಿನ ಬಗ್ಗೆ ಮಾತಾಡತೊಡಗಿದ ಕಾರಂತರು ತಮ್ಮ ಅನುಭವದ ಒಂದು ಪ್ರಸಂಗವನ್ನು ಹೇಳತೊಡಗಿದರು: ” ಒಮ್ಮೆ ನಾನು ಜಪಾನಿಗೆ ಹೋಗಿದ್ದಾಗ ಅಲ್ಲಿಯ ಪ್ರಸಿದ್ಧ ಕಾಬುಕಿಪ್ರಕಾರದ ಪ್ರದರ್ಶನವೊಂದನ್ನು ನೋಡುವ ಅವಕಾಶ ದೊರೆತಿತ್ತು. ಪ್ರದರ್ಶನ ಅದ್ಭುತವಾಗಿತ್ತು ಅನ್ನುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಅದಕ್ಕಿಂತಲೂ ನನ್ನ ಗಮನ ಸೆಳೆದದ್ದು ಅಲ್ಲಿಯ ಪ್ರೇಕ್ಷಕರ ಶಿಸ್ತು. ಪ್ರದರ್ಶನ ಪ್ರಾರಂಭವಾಗುವುದಕ್ಕೆ ಹತ್ತು ನಿಮಿಷ ಮುಂಚಿತವಾಗಿ ಎಲ್ಲರೂ ತಂತಮ್ಮ ಕುರ್ಚಿಗಳಲ್ಲಿ ಆಸೀನರಾಗಿದ್ದರು.ಒಂದು ಮಾತು..ಮಾತಿರಲಿ, ಪಿಸುಮಾತೂ ಎಲ್ಲೂ ಕೇಳುತ್ತಿಲ್ಲ…ಉಸಿರಾಟದ ಸದ್ದು ಕೇಳುವಷ್ಟರ ಮಟ್ಟಿಗೆ ಅಲ್ಲಿ ನಿಶ್ಶಬ್ದ ನೆಲೆಸಿತ್ತು..ನಾಟಕದುದ್ದಕ್ಕೂ ಅದೇ ಶಾಂತಿ..ಅದೇ ಸಂಯಮದ ನಡವಳಿಕೆ.. ಅಗತ್ಯವಿದ್ದೆಡೆ ಮಾತ್ರ ನಗು ಇಲ್ಲವೇ ಚಪ್ಪಾಳೆ.. ಅನಗತ್ಯವಾದ ಮತ್ತೊಂದು ಸದ್ದಿಲ್ಲದಂತಹ ಶಿಸ್ತು…ನಮ್ಮವರ ಪ್ರೇಕ್ಷಾಗೃಹದ ಅವಾಂತರಗಳನ್ನು ನೋಡಿದರೆ ಸಂಕಟವಾಗುತ್ತದೆ..ಜೋರುದನಿಯ ಹರಟೆ..ಆಕಳಿಸುವವನೊಬ್ಬ..ಕೆಮ್ಮುವವನೊಬ್ಬ..ಬಾಯ ತಾಂಬೂಲ ತುಪ್ಪುವವನೊಬ್ಬ..ಛೀ….ರೇಜಿಗೆ! ಎಂದು ನಮ್ಮವರು ಒಂದಿಷ್ಟು ಶಿಸ್ತು ಕಲಿಯುವುದು?”

ಹೀಗೆ ಸುಮಾರು ಮೂವತ್ತು ನಿಮಿಷಗಳ ಕಾಲ ಶಿಸ್ತು—ಪ್ರೇಕ್ಷಕ ಸಂಸ್ಕೃತಿಗಳ ಬಗ್ಗೆ ಕಾರಂತರು ಅದ್ಭುತವಾಗಿ ಮಾತಾಡಿದರು. ಅವರ ಮಾತು ಮುಗಿದ ಮೇಲೆ ನಿರ್ವಾಹಕರು ನನ್ನನ್ನು ಅಭಿಪ್ರಾಯ ಮಂಡನೆಗೆ ಆಹ್ವಾನಿಸಿದರು! ಅಧ್ಯಕ್ಷ ಭಾಷಣದ ನಂತರ ಮತ್ತೆ ವಿಚಾರ ಮಂಡನೆ—ಚರ್ಚೆ! ಏನಾದರಾಗಲಿ ಎಂದುಕೊಂಡು ಹವ್ಯಾಸಿ ರಂಗಭೂಮಿಯ ಕೆಲ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತಾಡಿ ನಂತರ ಆಗ ಬಹು ಪ್ರಚಲಿತವಿದ್ದ ಬ್ರೆಖ್ಟ್ ನ ಎಪಿಕ್ ರಂಗಭೂಮಿ ಹವ್ಯಾಸೀ ರಂಗಭೂಮಿಯ ಮೇಲೆ ಹಲವು ರೀತಿಯಲ್ಲಿ ಪ್ರಭಾವ ಬೀರಿರುವುದರ ಬಗ್ಗೆಯೂ ಮಾತಾಡಿದೆ. ನನ್ನ ಮಾತು ಮುಗಿದ ನಂತರ ಚರ್ಚೆ ಆರಂಭವಾಯಿತು. ನನಗೆ ನೆನಪಿರುವ ಮಟ್ಟಿಗೆ ಬೆಂಗಳೂರಿನಿಂದ ಜಿ.ಎನ್.ರಂಗನಾಥರಾವ್ ಅವರು ಗೋಷ್ಠಿಯಲ್ಲಿ ಭಾಗವಹಿಸಲು ಬಂದಿದ್ದರು. ಅದಾಗಲೇ ಕನ್ನಡ ಕಾವ್ಯಾಸಕ್ತರ ಗಮನ ಸೆಳೆದಿದ್ದ, ಹೊನ್ನಾವರದವರೇ ಆದ ಆರ್.ವಿ ಭಂಡಾರಿ ಹಾಗೂ ಜಿ.ಎಸ್.ಅವಧಾನಿ ಅವರೂ ಸಹಾ ಗೋಷ್ಠಿಯಲ್ಲಿದ್ದರು. ಚರ್ಚೆ ನಡೆಯುತ್ತಿದ್ದಾಗಲೇ ಯಾರೋ ಒಬ್ಬರು ಸಭಿಕರು ,”ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಸರ್ ?” ಎಂದು ಕಾರಂತರನ್ನು ಕೆಣಕಿಬಿಟ್ಟರು. ಅದುವರೆಗೆ ಗಂಭೀರವಾಗಿ ಎಲ್ಲರ ಮಾತುಗಳನ್ನೂ ಕೇಳಿಸಿಕೊಳ್ಳುತ್ತಿದ್ದ ಕಾರಂತರು ಯಾಕೋ ಕೊಂಚ ಕೆರಳಿದವರಂತೆ,” ನಾನು ಹೇಳುವುದಿಷ್ಟೇ: ನನಗೆ ಯಾರೋ ಜರ್ಮನ್ ನಾಟಕಕಾರ ಆದರ್ಶಪ್ರಾಯನಾಗಬೇಕಾದ ಅಗತ್ಯವಿಲ್ಲ..ತಾವುಗಳು ಎಷ್ಟು ಬೇಕಾದರೂ ಅವರುಗಳನ್ನು ಹಾಡಿ ಹೊಗಳಿ ಕೊಂಡಾಡಿಕೊಳ್ಳಬಹುದು” ಎಂದುಬಿಟ್ಟರು. ಸಭೆಯಲ್ಲಿ ನೀರವ ಮೌನ.ಯಾರಿಗೂ ಏನು ಮಾತಾಡಲೂ ತೋಚುತ್ತಿಲ್ಲ..ಕೊನೆಗೆ ನಾನೇ ಕೊಂಚ ಧೈರ್ಯ ವಹಿಸಿ ಸಣ್ಣ ದನಿಯಲ್ಲಿ,” ಸ್ಫೂರ್ತಿ—ಆದರ್ಶಗಳಿಗೆ ಕಟ್ಟುಪಾಡೇಕೆ? ಜಪಾನೀ ಪ್ರೇಕ್ಷಕರ ಶಿಸ್ತು ನಮ್ಮ ಪ್ರೇಕ್ಷಕರಿಗೆ ಆದರ್ಶವಾಗುವಂತೆಯೇ ಜರ್ಮನ್ ನಾಟಕಕಾರ ನಮ್ಮ ಬರವಣಿಗೆಗೆ ಆದರ್ಶವಾದರೆ ತಪ್ಪಾಗುತ್ತದೆಯೇ?” ಎಂದೆ. ಮಾತು ಮುಗಿದ ಮರುಕ್ಷಣ ‘ನನ್ನದು ಉದ್ಧಟತನದ ಮಾತಾಗಿ ಹೋಯಿತು..ಹಿರಿಯರಿಗೆ ಅಗೌರವ ತೋರುವಂತಹ ಪ್ರತಿಕ್ರಿಯೆಯಾಗಿ ಹೋಯಿತು..’ ಎನ್ನಿಸಿ ಚಡಪಡಿಕೆ ಶುರುವಾಗಿ ಹೋಯಿತು.ಯಾರೂ ಮಾತಾಡದೆ ಮೌನಕ್ಕೆ ಶರಣಾದ್ದು ನನ್ನ ಮುಜುಗರವನ್ನು ಮತ್ತಷ್ಟು ಹೆಚ್ಚಿಸಿಬಿಟ್ಟಿತು. ಕೊನೆಗೆ ಕಾರಂತರೇ ,”ಸರಿ..ಅಧ್ಯಕ್ಷ ಭಾಷಣ ಹೇಗೂ ಮುಗಿದಿದೆ..ಇಲ್ಲಿಗೆ ಈ ಚರ್ಚೆ ಮುಗಿಸಬಹುದು ಎಂದು ತೋರುತ್ತದೆ” ಎಂದು ನುಡಿದು ವೇದಿಕೆಯಿಂದ ಕೆಳಗಿಳಿದು ಹೊರಟರು.ನಿರ್ವಾಹಕರಾದಿಯಾಗಿ ಸಾಕಷ್ಟು ಜನ ಅವರ ಹಿಂದೆಯೇ ಹೊರಟದ್ದರಿಂದ ನಾನು ಅಲ್ಲಿ ಅಕ್ಷರಶಃ ಏಕಾಂಗಿಯಾಗಿಬಿಟ್ಟೆ!ನನ್ನ ಮನಸ್ಸಿಗೆ ಹಾಗೆ ತೋಚಿತೋ ಅಥವಾ ವಾಸ್ತವವಾಗಿಯೇ ಹಾಗಾಯಿತೋ ಕಾಣೆ—ಒಟ್ಟಿನಲ್ಲಿ ಗೋಷ್ಠಿ ಮುಗಿದ ಮೇಲೆ ಯಾರೂ ಅಲ್ಲಿ ನನ್ನನ್ನು ಸರಿಯಾಗಿ ಮಾತಾಡಿಸಲಿಲ್ಲ! ಕೆಲವರ ಕಣ್ಣುಗಳಂತೂ ಕೆಂಡ ಉಗುಳುತ್ತಿದ್ದವು! ಹಾಗೂ ಹೀಗೂ ಸಾವರಿಸಿಕೊಂಡು ಹೊರಟು ಮಂಗಳೂರು ತಲುಪಿಕೊಂಡೆ.

ಈ ಪ್ರಸಂಗದ ನಂತರ ಮತ್ತೆ ಶಿವರಾಮಕಾರಂತರನ್ನು ಭೇಟಿಯಾಗುವ, ಅವರ ಬಗ್ಗೆಯೇ ಸಾಕ್ಷ್ಯ ಚಿತ್ರ ತಯಾರಿಸುವ ಅವಕಾಶ ನಾನು ದೂರದರ್ಶನದಲ್ಲಿದ್ದಾಗ ಒದಗಿ ಬಂತು. ಪ್ರಾರಂಭದಲ್ಲಿ ಕಾರಂತರೊಟ್ಟಿಗೆ ಹೇಗೋ ಎಂತೋ ಎಂದು ನನಗೆ ಒಂದು ಸಣ್ಣ ಆತಂಕವಿದ್ದುದು ಸುಳ್ಳಲ್ಲ. ಆದರೆ ಅವರೊಟ್ಟಿಗೆ ಕಳೆದ ಆ ಆರೆಂಟು ದಿನಗಳು ನನ್ನ ಬದುಕಿನ ಅಪೂರ್ವ ಕ್ಷಣಗಳು.. ಎಂದೆಂದೂ ನನ್ನ ನೆನಪಿನಲ್ಲಿ ಅಳಿಸಲಾಗದಂತೆ ದಾಖಲಾಗಿರುವ ಕ್ಷಣಗಳು! ಈ ಕುರಿತು ಮುಂದಿನ ಪುಟಗಳಲ್ಲಿ ವಿವರವಾಗಿ ಬರೆಯುತ್ತೇನೆ.

ಹೊನ್ನಾವರದಿಂದ ಮಂಗಳೂರಿಗೆ ಬಂದ ಮೇಲೆ ಒಂದೆರಡು ದಿನಗಳಲ್ಲೇ ‘ಬೇಲಿ ಮತ್ತು ಹೊಲ’ ನಾಟಕ ರೂಪ ಸಿದ್ಧವಾಗಿ ಹೋಯಿತು! ಅಲ್ಲಿನ ಗೆಳೆಯರ ಮುಂದೆ ಒಮ್ಮೆ ಓದಿ ಹೇಳಿ ಶಭಾಸ್ ಅನ್ನಿಸಿಕೊಂಡು ತರಾತುರಿಯಿಂದ ಬೆಂಗಳೂರಿನ ಬಸ್ ಹತ್ತಿದೆ. ಬಗಲಲ್ಲಿ “ಬೇಲಿ ಮತ್ತು ಹೊಲ” ನಾಟಕರೂಪ ಭದ್ರವಾಗಿ ಕುಳಿತಿತ್ತು; ಮನಸ್ಸಿನಲ್ಲಿ ಅದರ ಪ್ರಯೋಗ—ಪ್ರದರ್ಶನದ ನೂರು ನೂರು ಕಲ್ಪನಾ ಚಿತ್ರಗಳು ದಾಂಗುಡಿಯಿಡುತ್ತಿದ್ದವು!

| ಇನ್ನು ಮುಂದಿನ ವಾರಕ್ಕೆ ।

‍ಲೇಖಕರು Admin

July 14, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: