ಶ್ರೀನಿವಾಸ ಪ್ರಭು ಅಂಕಣ- ನನ್ನನ್ನು ಮತ್ತೆ ಮತ್ತೆ ಅವೇ ಸಾಲುಗಳು ಕಾಡುತ್ತಿದ್ದವು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

36

ಈ ವೇಳೆಗಾಗಲೇ ನಮ್ಮ ನಾಟಕ ಶಾಲೆಯಲ್ಲಿ ಕನ್ನಡ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿ ನಾವು ಒಂದು ರೀತಿಯಲ್ಲಿ ಬಹು ಸಂಖ್ಯಾತರೇ ಆಗಿಹೋಗಿದ್ದೆವು! ಜಯತೀರ್ಥ ಜೋಶಿ, ರಘುನಂದನ್, ಬ.ಸು.ಪಾಟೀಲ, ಸುರೇಶ್ ಶೆಟ್ಟಿ, ವಾಲ್ಟರ್ ಡಿಸೋಜಾ಼, ಸುಂದರ ಶ್ರೀ, ಜಂಬೆ ಚಿದಂಬರ ರಾವ್, ಗೋಪಾಲಕೃಷ್ಣ ನಾಯರಿ.. ಇವರೆಲ್ಲಾ ನಮ್ಮ ಮುಂದಿನ ವರ್ಷಗಳಲ್ಲಿ ಶಾಲೆಯಲ್ಲಿ ಅಧ್ಯಯನ ನಡೆಸಲು ಆಯ್ಕೆಯಾಗಿ ಬಂದ ರಂಗಕರ್ಮಿಗಳು. ನಮ್ಮ ತರಗತಿಯಲ್ಲಿದ್ದ ಕನ್ನಡದವರು ನಾಲ್ಕು ಮಂದಿ. ಅಲ್ಲಿಗೆ 12 ನೇ ಆಟಗಾರನೂ ಸೇರಿ ಕನ್ನಡಿಗರದ್ದೇ ಒಂದು ಪೂರ್ತಿ ಕ್ರಿಕೆಟ್ ತಂಡವೇ ಆಗಿಹೋಯಿತು!

ದೆಹಲಿಯಲ್ಲಿ ನನಗೆ ಪರಿಚಿತನಾಗಿ ಪರಮಾಪ್ತನಾಗಿ ಹೋದ ಮತ್ತೊಬ್ಬ ಗೆಳೆಯನೆಂದರೆ ಕೆ.ಎನ್.ಗುರುದತ್ತ. ಸ್ಟೇಟ್ ಬ್ಯಾಂಕ್ ಉದ್ಯೋಗಿಯಾಗಿದ್ದ ಗುರುದತ್ತ, ದೆಹಲಿಯಲ್ಲೇ ಇದ್ದ ಅವನ ಅಣ್ಣ ರಾಮಚಂದ್ರರಾವ್ ಅವರ ಜೊತೆಗೇ ವಾಸಿಸುತ್ತಿದ್ದ. ಆ ಕಾಲದ ಸಮಾಜವಾದಿ ಆಂದೋಲನದ ಅಗ್ರಗಣ್ಯ ನಾಯಕರಾಗಿದ್ದ ಎಸ್.ವೆಂಕಟರಾಂ ಅವರು ನಮ್ಮ ಗುರುದತ್ತನ ಭಾವ. ಈ ಗುರುದತ್ತನಾದರೋ ನಮ್ಮ ಗೆಳೆತನಕ್ಕಾಗಿ ಅಂದು ರಂಗಭೂಮಿಯ ನಂಟು ಅಂಟಿಸಿಕೊಂಡವನು ಇಂದಿಗೂ ರಂಗಭೂಮಿಯಲ್ಲಿ ಸಕ್ರಿಯನಾಗಿದ್ದಾನೆ! ಈ ಗುರುದತ್ತನ ಮತ್ತೊಬ್ಬ ಅಣ್ಣನೇ ಗೌರಿಬಿದನೂರಿನ ಕೆ.ಎನ್.ಶ್ರೀನಿವಾಸ್ ಅಲಿಯಾಸ್ ಕಾ ನಾ ಶ್ರೀ ಅಲಿಯಾಸ್ ಶೀನಣ್ಣ! ಕಾನಾಶ್ರೀ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಒಂದು ದೊಡ್ಡ ಹೆಸರು.

ಮುಂದಿನ ದಿನಗಳಲ್ಲಿ ಈ ಶೀನಣ್ಣನ ನಿಕಟ ಸಂಪರ್ಕಕ್ಕೆ ಬಂದು ಹಲವಾರು ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾದದ್ದು ನಾನು ಸದಾ ಸ್ಮರಿಸಿಕೊಳ್ಳುವ ಸಂಗತಿ. ಮುಂದೆ ಈ ವಿಚಾರಗಳ ಕುರಿತಾಗಿ ವಿವರವಾಗಿ ಬರೆಯುತ್ತೇನೆ. ಗುರುದತ್ತ—ರಾಮಣ್ಣ—ಶೀನಣ್ಣರ ಹತ್ತಿರದ ಒಡನಾಟದಿಂದ ನನಗೆ ಖಾತ್ರಿಯಾಗಿ ಹೋದ ಸಂಗತಿ ಇದು: ಜೀವನ ಪ್ರೀತಿ, ಸ್ನೇಹಪರತೆ, ಅತಿಥಿ ಸತ್ಕಾರಗಳು ಇವರ ಮನೆತನಕ್ಕೇ ಅಂಟಿಕೊಂಡು ಬಂದಿರುವ ಹವ್ಯಾಸಗಳು! ಎಲ್ಲಿಯೂ ಆಡಂಬರವಿಲ್ಲ.. ತೋರಾಣಿಕೆಯ ನಾಟಕವಿಲ್ಲ.. ಅಥವಾ ಸ್ವಾರ್ಥಪ್ರೇರಿತ ಹುನ್ನಾರಗಳಿಲ್ಲ.

ಎಲ್ಲವೂ ಸಹಜ, ನೇರ, ಸರಳ, ನಿರ್ಮಲ, ಪಾರದರ್ಶಕ. ಅನೇಕ ರಜೆಯ ದಿನಗಳಂದು ಅಥವಾ ಹಬ್ಬ ಹರಿದಿನಗಳಂದು ನಾವು, ನಾಟಕ ಶಾಲೆಯ ಕೆಲ ಕನ್ನಡದ ಹುಡುಗರು ಸೀದಾ ರಾಮಣ್ಣನ ಮನೆಗೆ ಊಟಕ್ಕೆ ದೌಡು! ಒಣ ರೊಟ್ಟಿ—ಆಲೂ ಸಬ್ಜಿ ತಿಂದು ತಿಂದು ಬಸವಳಿದು ಹೋಗಿದ್ದ ನಾಲಗೆಗೆ ಅನ್ನ—ಹುಳಿ—ಸಾರು—ಪಲ್ಯ—ಕೋಸಂಬರಿಗಳ, ಪಾಯಸ ಪರಮಾನ್ನಗಳ ರಸಭರಿತ ಸವಿಭೋಜನ! ರಾಮಣ್ಣನ ಧರ್ಮಪತ್ನಿ ಲೀಲಾ ಅತ್ತಿಗೆಯಾದರೂ ಅಷ್ಟೇ—ಪರಮ ವಾತ್ಸಲ್ಯಮಯಿ. ಮನೆಯಿಂದ ದೂರವಿರುವ ಹುಡುಗರು ಎಂದು ನಮ್ಮನ್ನೂ ದತ್ತನಷ್ಟೇ ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದರು.ನಾವು ನಾಲ್ಕಾರು ಹುಡುಗರು ಅವರ ಮನೆಗೆ ದಾಳಿ ಮಾಡಿ ಕಾಟ ಕೊಟ್ಟರೂ ಆ ಅತ್ತಿಗೆಮ್ಮನ ಹಣೆಯಲ್ಲಿ ಬೇಸರದ ಒಂದೇ ಒಂದು ನಿರಿಗೆಯಾದರೂ ಮೂಡಿದ್ದರೆ ಆಣೆ!

ಈ ಸಂದರ್ಭದಲ್ಲೇ ನಾನು ನೆನಪಿಸಿಕೊಳ್ಳಲೇ ಬೇಕಾದ ಮತ್ತೆರಡು ಕನ್ನಡದ ಕುಟುಂಬಗಳೆಂದರೆ ಆಗ ದೆಹಲಿ ದೂರದರ್ಶನದಲ್ಲಿ ಅಧಿಕಾರಿಯಾಗಿದ್ದ ಜೆ.ಎನ್. ಕಮಲಾಪುರ್ ಅವರ ಕುಟುಂಬ ಹಾಗೂ ನಮ್ಮಹತ್ತಿರದ ಬಂಧುಗಳೂ ಆಗಿದ್ದ ಮಂಜಯ್ಯನವರ ಕುಟುಂಬ. ಕಮಲಾಪುರ್ ಅವರ ಮನೆ ನಮ್ಮ ಶಾಲೆಯಿಂದ ನಡೆದುಹೋಗುವಷ್ಟೇ ದೂರದಲ್ಲಿದ್ದದ್ದು ನಮಗೆ ಒಂದು ವರದಾನವೇ ಆಗಿಬಿಟ್ಟಿತ್ತು! ಒಮ್ಮೊಮ್ಮೆಯಂತೂ ಕ್ರಿಕೆಟ್ ಮ್ಯಾಚ್ ನೋಡುವ ನೆಪದಲ್ಲಿ ಅವರ ಮನೆ ಸೇರಿಕೊಂಡುಬಿಟ್ಟರೆ ತಿಂಡಿ—ಊಟ—ಕಾಫಿ ಎಲ್ಲವನ್ನೂ ಅಲ್ಲಿಯೇ ಮುಗಿಸಿಕೊಂಡೇ ಹೊರಡುತ್ತಿದ್ದುದು!

ಇನ್ನು ಒಮ್ಮೆ ಮಂಜಯ್ಯನವರ ಮನೆಗೆ ಯಾವುದೋ ಹಬ್ಬದ ದಿನ ಮುನ್ಸೂಚನೆಯನ್ನೇ ಕೊಡದೆ ಊಟದ ಸಮಯಕ್ಕೇ ದಾಳಿ ಇಟ್ಟಾಗಲೂ ಆ ಮಹಾತಾಯಿ—ಮಂಜಯ್ಯನವರ ಧರ್ಮಪತ್ನಿ— ಒಂದಿಷ್ಟೂ ಬೇಸರಿಸಿಕೊಳ್ಳದೇ, “ಪ್ರಸಾದಿ ಕೈಲಿ (ಅವರ ಮಗ) ಒಂದು ಮಾತು ಹೇಳಿ ಕಳಿಸಿದ್ರೆ ಅಡಿಗೆ ಮಾಡಿಟ್ಟುಬಿಡ್ತಿದ್ದೆನಲ್ರೋ.. ಈಗ ನೋಡಿ.. ಹಸಿದ ಹೊಟ್ಟೇಲಿ ಕಾಯೋ ಹಾಗಾಯ್ತು” ಎಂದು ಪೇಚಾಡಿಕೊಳ್ಳುತ್ತಾ ಮುಕ್ಕಾಲು ಗಂಟೆಯಲ್ಲಿ ಬಗೆಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಪ್ರೀತಿಯಿಂದ ಉಣಬಡಿಸಿದರು! ಇಂಥ ಮಾತೆಯರ ಪ್ರೀತಿ—ವಾತ್ಸಲ್ಯಗಳ ಅಮೃತ ಸಿಂಚನವೇ ಬದುಕಿಗೆ ಚೈತನ್ಯ ತುಂಬುವ ದಿವ್ಯಶಕ್ತಿ ಎಂಬುದು ನನ್ನ ದೃಢ ನಂಬಿಕೆ.

ಮತ್ತೊಂದು ಮುಖ್ಯ ವಿಷಯವೆಂದರೆ ನಮ್ಮ ಮಂಜಯ್ಯನವರ ಸುಪುತ್ರಿಯೇ ಇಂದು ಶ್ರೇಷ್ಠ ಗಾಯಕಿಯೆಂದು ಹೆಸರಾಗಿರುವ ಕೆ.ಎಂ.ಕುಸುಮಾ. ನಾವು ದೆಹಲಿಯಲ್ಲಿದ್ದಾಗಲೇ ಕುಸುಮಾ ಭಾವ ಪರವಶಳಾಗಿ ಹಾಡುತ್ತಿದ್ದ ಲತಾ ಮಂಗೇಶ್ಕರರ ಹಾಡುಗಳು ಹಾಗೂ ಹಲವಾರು ಭಜನೆಗಳನ್ನು ಕೇಳಿ ದಂಗುಬಡಿದು ಹೋಗಿದ್ದೆವು. ಅಂದು ನಾವು ಕಂಡ ಯುವ ಪ್ರತಿಭೆ ಇಂದು ಇಷ್ಟು ಎತ್ತರಕ್ಕೆ ಬೆಳೆದು ಪ್ರಬುದ್ಧ ಗಾಯಕಿಯೆಂದು ಖ್ಯಾತಳಾಗಿರುವುದು ನಿಜಕ್ಕೂ ಸಂತಸದ ಸಂಗತಿ.

ದೆಹಲಿಯಲ್ಲಿ ನನಗೆ ಹೊಸದಾಗಿ ಪರಿಚಯವಾಗಿ ನನ್ನನ್ನು ಬಹುವಾಗಿ ಆಕರ್ಷಿಸಿದ ಮತ್ತೊಂದು ಸಂಗತಿಯೆಂದರೆ ಉರ್ದು—ಹಿಂದಿ ಗಜ಼ಲ್ ಗಳ ಮಧುರ ಲೋಕ! ನಮ್ಮ ಸಹಪಾಠಿಯೇ ಆಗಿದ್ದ ಅನ್ನುಕಪೂರ್, ಹಿರಿಯ ವಿದ್ಯಾರ್ಥಿ ಜ್ಞಾನ್ ಶಿವಪುರಿ (ಪ್ರಸಿದ್ಧ ನಟ ಓಂ ಶಿವಪುರಿಯವರ ಸೋದರ ಸಂಬಂಧಿ) ಬಹಳ ಸೊಗಸಾಗಿ ಗಜ಼ಲ್ ಗಳನ್ನು ಹಾಡುತ್ತಿದ್ದರು. ನಮ್ಮ ಭಾವಗೀತೆಗಳಂತೆ ಸಾಹಿತ್ಯ—ಸಂಗೀತಗಳ ಅಪೂರ್ವ ಸಂಗಮವಾಗಿರುವ ಈ ವಿಶಿಷ್ಟ ಗಜ಼ಲ್ ಪ್ರಕಾರ ಉತ್ತರ ಭಾರತದಲ್ಲಿ ಬಹಳ ಜನಪ್ರಿಯ ಕೂಡಾ.

ನಾನು ಸಮಯ ಸಿಕ್ಕಾಗಲೆಲ್ಲಾ ದೆಹಲಿಯಲ್ಲಿ ನಡೆಯುತ್ತಿದ್ದ ಗಜ಼ಲ್ ಕಛೇರಿಗಳಿಗೆ ಹೋಗತೊಡಗಿದೆ. ಅಲ್ಲಿಯೂ ಅಷ್ಟೇ—ಬೆಂಗಳೂರಿನಲ್ಲಿ ನಾಟಕಗಳಿಗೆ ಮಾಡುತ್ತಿದ್ದಂತೆ ಕೊಂಚ ತಡವಾಗಿ ಕಛೇರಿ ನಡೆಯುತ್ತಿದ್ದ ಜಾಗಕ್ಕೆ ಹೋಗಿ ಗೇಟ್ ಕೀಪರ್ ಕಣ್ತಪ್ಪಿಸಿ ಒಳ ಸೇರಿಕೊಳ್ಳುವುದು!ಅಷ್ಟಲ್ಲದೆ 10—20 ರೂಪಾಯಿ ಟಿಕೇಟ್ ಗಳನ್ನು ಕೊಳ್ಳುವುದಾದರೂ ಹೇಗೆ! ಸಾಮಾನ್ಯವಾಗಿ ಮಧ್ಯರಾತ್ರಿಯವರೆಗೆ ಈ ಕಛೇರಿಗಳು ನಡೆಯುತ್ತಿದ್ದುದರಿಂದ ತಡವಾಗಿ ಹೋದರೂ ಒಂದಷ್ಟು ಗಜ಼ಲ್ ಗಳನ್ನು ಆಸ್ವಾದಿಸಲು ಹೇಗೂ ಅವಕಾಶವಾಗುತ್ತಿತ್ತು.

ಜಗಜೀತ್ ಸಿಂಗ್—ಚಿತ್ರಾ ಸಿಂಗ್, ಅನೂಪ್ ಜಲೋಟಾ, ಅಶೋಕ್ ಖೋಸ್ಲಾ, ರಾಜೇಂದರ್ ಸಿಂಗ್ ಮುಂತಾದವರ ಅನೇಕ ಕಛೇರಿಗಳಿಗೆ ಹೀಗೇ ಹೋಗಿ ಆನಂದಿಸಿದೆ! ದೆಹಲಿಯ ಶ್ರೀರಾಮ ಆರ್ಟ್ ಸೆಂಟರ್ ನಲ್ಲಿ ನಮ್ಮ ‘enemy of the people’ ನಾಟಕದ ಪ್ರದರ್ಶನಗಳು ನಡೆದ ಮೇಲೆ ಮತ್ತೂ ಹಲವೆಡೆಗಳಲ್ಲಿ ಆ ನಾಟಕದ ಪ್ರದರ್ಶನಗಳು ಏರ್ಪಾಡಾದವು. ಅವುಗಳಲ್ಲಿ ಎರಡು ಮುಖ್ಯ ಕಾರಣಗಳಿಗಾಗಿ ನೆನಪಿಸಿಕೊಳ್ಳಲೇ ಬೇಕಾದ್ದೆಂದರೆ ವಿಶಾಖಪಟ್ಟಣದ ಪ್ರವಾಸ ಪ್ರಸಂಗ.

ವಿಶಾಖಪಟ್ಟಣದಲ್ಲಿ ನಮ್ಮ ಎರಡೂ ತಂಡದ ಕೆಲ ಪ್ರದರ್ಶನಗಳು ನಿಗದಿಯಾಗಿದ್ದವು. ಬಹುಶಃ ಕಡಲಿನಿಂದ ತುಸುವೇ ದೂರದಲ್ಲಿದ್ದ ಯಾವುದೋ ಯೂನಿವರ್ಸಿಟಿಯ ಆಡಿಟೋರಿಯಂ ಇರಬೇಕು.. ಅಲ್ಲಿ ಪ್ರದರ್ಶನಗಳನ್ನು ಏರ್ಪಡಿಸಿದ್ದರು. ಆ ಆವರಣದಲ್ಲಿಯೇ ನಾವು ಉಳಿದುಕೊಂಡಿದ್ದ ವಿಶ್ರಾಂತಿ ಗೃಹವೂ ಇತ್ತು.ಸಾಕಷ್ಟು ದೀರ್ಘ ರೈಲು ಪ್ರಯಾಣವನ್ನು ಮುಗಿಸಿಕೊಂಡು ಹೋಗಿ ಒಂದು ದಿನದ ವಿಶ್ರಾಂತಿಯ ನಂತರ ಪ್ರದರ್ಶನಗಳಿಗೆ ಸಿದ್ಧತೆ ಆರಂಭವಾಯಿತು.

ಮೊದಲ ದಿನ ನಮ್ಮ ತಂಡದ ಪ್ರದರ್ಶನ, ಎರಡನೆಯ ದಿನ ಮೊದಲ ತಂಡದ ಪ್ರದರ್ಶನವೆಂದು ನಿರ್ಧಾರವಾಗಿತ್ತು. ಸಂಜೆ 6.30 ಕ್ಕೆ ಪ್ರದರ್ಶನ ಆರಂಭವಾಗುವುದಿತ್ತು. ನಾನು ಲಘು ವ್ಯಾಯಾಮ—ಧ್ಯಾನಗಳನ್ನು ಮುಗಿಸಿ ಮೇಕಪ್ ಗೆ ಅಣಿಯಾಗುತ್ತಿದ್ದೆ. ಅಷ್ಟರಲ್ಲೇ ನಮ್ಮ ಶಾಲೆಯ ಒಬ್ಬ ಸಿಬ್ಬಂದಿ ವರ್ಗದವರು ತರಾತುರಿಯಿಂದ ಓಡಿಬಂದರು.ಹಾಗೆ ಬಂದ ಕಾರಣ ಹಿತವಾದ್ದಲ್ಲವೆನ್ನುವುದನ್ನು ಅವರ ಮುಖದ ಮೇಲೆ ಅಚ್ಚೊತ್ತಿದ್ದ ಆತಂಕವೇ ಸಾರುತ್ತಿತ್ತು. ನಿಜವೇ! “Mother serious start immediately” ಎಂದು ಬಿಜಾಪುರದಿಂದ ಅಶೋಕನಿಗೆ ದೆಹಲಿಯ ವಿಳಾಸಕ್ಕೆ ಟೆಲಿಗ್ರಾಂ ಬಂದಿದೆಯೆಂದು ಶಾಲೆಯಿಂದ ಫೋನ್ ಮಾಡಿದ್ದರಂತೆ.

ಆ ಕ್ಷಣಕ್ಕೆ ಅಶೋಕ ಅಲ್ಲಿ ನಮ್ಮ ಜತೆ ಇರಲಿಲ್ಲ.ಅವನ ತಾಯಿ ಹಲವಾರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಚಾರ ನನಗೆ ಅದಾಗಲೇ ತಿಳಿದಿತ್ತಾದ್ದರಿಂದ ಸುದ್ದಿ ಅಷ್ಟೇನೂ ಅನಿರೀಕ್ಷಿತವಾಗಿರಲಿಲ್ಲ. ಹೇಗೂ ಮತ್ತೊಂದು ತಂಡದಲ್ಲಿ ಅಶೋಕನ ಪಾತ್ರವನ್ನೇ ನಿರ್ವಹಿಸುವ ಪಾತ್ರಧಾರಿ—ಅಲೋಪಿ ವರ್ಮ— ಇರುವುದರಿಂದ ಅಶೋಕನ ಬದಲಿಗೆ ಅವನೇ ಪಾತ್ರ ನಿರ್ವಹಿಸಬಹುದು; ಆದಷ್ಟು ಶೀಘ್ರವಾಗಿ ಅಶೋಕನನ್ನು ಊರಿಗೆ ಕಳಿಸಿಕೊಡಬೇಕೆಂದು ನಾವೆಲ್ಲರೂ ತೀರ್ಮಾನಿಸಿಕೊಂಡೆವು. ನೋಡಿದರೆ ಆ ನಮ್ಮ ಸಹಪಾಠಿ ಅಲೋಪಿ ವರ್ಮ ತನ್ನ ಗೆಳೆಯರನ್ನು ಭೇಟಿಯಾಗಲು ಹೊರಹೋಗಿದ್ದಾನೆ; ಅವನು ಅಂದು ಪಾಲ್ಗೊಳ್ಳಬೇಕಿದ್ದ ಗುಂಪು ದೃಶ್ಯ ಮಧ್ಯಂತರದ ನಂತರ ಬರುತ್ತಿದ್ದುದರಿಂದ ಆ ತಕ್ಷಣಕ್ಕೆ ಅವನು ಹೊರಳಿ ಬರುವ ನಿರೀಕ್ಷೆಯಿಲ್ಲ! ಅಂದರೆ ಅಶೋಕನೇ ಪಾತ್ರ ನಿರ್ವಹಿಸದೇ ಬೇರೆ ಮಾರ್ಗವಿಲ್ಲ!

ಟೆಲಿಗ್ರಾಂ ವಿಷಯ ಅಶೋಕನಿಗೆ ತಿಳಿದರೆ ಅವನಿಗೆ ನಾಟಕದಲ್ಲಿ ತನ್ಮಯತೆಯಿಂದ ಅಭಿನಯಿಸಲಾದೀತೇ? ಹಾಗೆಂದು ಅವನಿಂದ ವಿಷಯ ಮುಚ್ಚಿಟ್ಟು ಪ್ರದರ್ಶನಾನಂತರ ಹೇಳುವುದೆಂದರೆ ಅದು ಸರಿಯಾದ ನಿರ್ಧಾರವಾದೀತೇ? ಹೀಗೆ ಗೊಂದಲದಲ್ಲಿ ತೊಳಲುತ್ತಿರುವಾಗಲೇ ಅಲ್ಲಿಗೆ ಅಶೋಕನ ಆಗಮನವಾಯಿತು. ಅಷ್ಟೇ ಅಲ್ಲ ಅವನಿಗಾಗಲೇ ಟೆಲಿಗ್ರಾಂ ವಿಷಯ ತಿಳಿದುಹೋಗಿತ್ತು! ಅತ್ತ ನೋಡಿದರೆ ಸಭಾಂಗಣ ಕಿಕ್ಕಿರಿದು ತುಂಬಿ ಹೋಗಿದೆ…ಪ್ರದರ್ಶನಕ್ಕೆ ಹಲವಾರು ನಿಮಿಷಗಳಷ್ಟೇ ಉಳಿದಿವೆ.

ಅಶೋಕನಿಗೋ ಮೊದಲೇ ಅವ್ವನೆಂದರೆ ಉಸಿರು… “ಅಯ್ಯೋ ಶಿವನss..ನನಗನ್ನಿಸ್ತತಿ ಆಕಿ ಮಾರೀನೂ ನನಗ ಸಿಗಂಗಿಲ್ಲ.. ಇಲ್ಲಿಂದ ಬಿಜಾಪುರಕ್ಕ ನಾ ಹೋಗೋದಾದ್ರೂ ಹೆಂಗೋ?..ಆಕಿ ಜೀವಸಹಿತ ಇರಂಗಿಲ್ಲ..ಒಂದು ತಿಂಗಳ ಮೊದ್ಲೇ ಡಾಕ್ಟ್ರು ಭಾಳ ದಿನ ಈಕಿ ಬಾಳಂಗಿಲ್ರೀ ಅಂದಿದ್ರು…ಕಳಕೊಂಡ್ನಲ್ಲೋ..ಅವ್ವನ್ನ ಕಳಕೊಂಡ್ನಲ್ಲೋ” ಎಂದು ಒಂದೇ ಸಮ ದುಃಖಿಸತೊಡಗಿದ ಅಶೋಕ. ಈಗಾಗಲೇ ನಾಟಕದ ಪ್ರದರ್ಶನಕ್ಕೆ ಕ್ಷಣಗಣನೆ ಆರಂಭವಾಗಿದೆ..ಏನು ಮಾಡುವುದು? ನಾನು ಅಶೋಕನಿಗೆ ಸಮಾಧಾನ ಹೇಳುತ್ತಲೇ ಇದ್ದೆ: “ನಿಮ್ಮ ಅವ್ವನಿಗೆ ಏನೂ ಆಗಿರಂಗಿಲ್ಲ..ಅಂಜಬ್ಯಾಡ..ಕೊನೇಪಕ್ಷ ನಿನಗಾಗಿ ಆಕಿ ಉಸಿರು ಬಿಗಿ ಹಿಡಿದು ಕಾದಿರ್ತಾಳ..ಇಂದs ರಾತ್ರಿ ರೈಲು ಹತ್ತುವಿಯಂತೆ..”

ಒಂದೆರಡು ನಿಮಿಷ ಮೌನವಾಗಿ ಕುಳಿತಿದ್ದ ಅಶೋಕ ತಟಕ್ಕನೆ ಎದ್ದು ಕಣ್ಣೊರೆಸಿಕೊಂಡು—”ಆತು..ನಡಿ..ಅದ್ಹೆಂಗಾಗ್ತದೋ ಆಗಲಿ.ನಾಟಕ ಚಾಲೂ ಮಾಡ್ರಿ..ನಾ ಒಂದೀಟು ತಯಾರಾಗಿ ಬರ್ತೀನಿ” ಎಂದವನೇ ಗ್ರೀನ್ ರೂಂನತ್ತ ಹೆಜ್ಜೆ ಹಾಕಿದ. ನಾಟಕದ ಮೊದಲ ದೃಶ್ಯದಲ್ಲಿ ಅಶೋಕನ ಪಾತ್ರ ಇರಲಿಲ್ಲವಾದ್ದರಿಂದ ನಾವು ಸಮಯಕ್ಕೆ ಸರಿಯಾಗಿ ನಾಟಕ ಪ್ರಾರಂಭ ಮಾಡಿಬಿಟ್ಟೆವು. ನನಗೋ ಒಳಗೇ ಸಣ್ಣ ಅಳುಕು: ‘ಅಶೋಕ ಈ ಕಠಿಣ ಸನ್ನಿವೇಶವನ್ನು ಹೇಗೆ ನಿಭಾಯಿಸುತ್ತಾನೋ… ಈ ಅಗ್ನಿ ಪರೀಕ್ಷೆಯಲ್ಲಿ ಅದು ಹೇಗೆ ಪಾರಾಗಿ ಬರುತ್ತಾನೋ…’

ಹೀಗೆ ಪಾತ್ರ ನಿರ್ವಹಿಸುತ್ತಿರುವಂತೆಯೇ ಹತ್ತಾರು ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದ್ದವು.ಮೊದಲ ದೃಶ್ಯ ಮುಗಿಯುತ್ತಿದ್ದಂತೆ ಅಶೋಕನೊಂದಿಗಿನ ದೃಶ್ಯ. ದೃಶ್ಯ ಪ್ರಾರಂಭವಾದ ಮೇಲೆ ನೋಡುತ್ತೇನೆ—ಅಶೋಕನ ಕಣ್ಣುಗಳು ಕೆಂಡದುಂಡೆಗಳಂತೆ ಕೆಂಪಗಾಗಿ ಬಿಟ್ಟಿವೆ..ಮುಖದಲ್ಲಿ ಕರುಳು ಹಿಂಡುವಂತಹ ನೋವು ಅಚ್ಚೊತ್ತಿದೆ…ದೃಶ್ಯ ಆರಂಭವಾದ ಕೆಲ ಕ್ಷಣಗಳಲ್ಲೇ ಅಶೋಕ ಮನಸ್ಸನ್ನು ಸ್ತಿಮಿತಕ್ಕೆ ತಂದುಕೊಂಡ.

ಒಳಗಿನ ದುಃಖವನ್ನು ಹೊಡೆದೋಡಿಸುವವನಂತೆ ಸ್ವಲ್ಪ ಅತಿರೇಕ ಅನ್ನುವಂತೆಯೇ ಅಭಿನಯಿಸತೊಡಗಿದ! ಆಗಾಗ್ಗೆ ತುಳುಕುತ್ತಿದ್ದ ಕಂಬನಿಯನ್ನು ಯಾರಿಗೂ ಸುಳಿವು ಬಿಟ್ಟುಕೊಡದಂತೆ ಒರೆಸಿಕೊಂಡು ಮತ್ತೆ ಸಂಭಾಷಣೆ ಹೇಳಲು ತೊಡಗುತ್ತಿದ್ದ. ಸಾಧ್ಯವಿದ್ದ ಕಡೆಗಳಲ್ಲೆಲ್ಲಾ ನಾನು ಮೆಲ್ಲಗೆ ಅವನ ಭುಜವನ್ನು ಅಮುಕಿ ಸ್ಥೈರ್ಯವನ್ನು ತುಂಬಲು ಯತ್ನಿಸುತ್ತಿದ್ದೆ. ಎಲ್ಲ ಪಾತ್ರಧಾರಿಗಳೂ ಬಲು ಎಚ್ಚರದಿಂದ ಯಾವ ಆಭಾಸಗಳಿಗೂ ಎಡೆಯಾಗದಂತೆ ನಾಟಕವನ್ನು ಸರಿಯಾದ ಹಳಿಗಳ ಮೇಲೆ ನಡೆಸಿಕೊಂಡು ಹೋಗಿ ಗಮ್ಯ ಮುಟ್ಟಿಸಿಯೇ ಬಿಟ್ಟೆವು. ಅಷ್ಟೆಲ್ಲಾ ಮಾನಸಿಕ ತುಮುಲ—ಆತಂಕಗಳ ನಡುವೆಯೂ ರಂಗದ ಮೇಲೆ ನಾಟಕ ಯಶಸ್ವಿಯಾಗಿ ಮೂಡಿ ಬಂದಿತ್ತು.ಒಬ್ಬ ಕಲಾವಿದನಾಗಿ ಅಶೋಕ ಗೆದ್ದಿದ್ದ!

ನಾಟಕ ಮುಗಿಯುತ್ತಿದ್ದಂತೆ ಅಶೋಕನನ್ನು ರೈಲ್ವೇಸ್ಟೇಷನ್ ಗೆ ಕರೆದುಕೊಂಡು ಹೋದೆ. ದಾರಿಯುದ್ದಕ್ಕೂ ಮೌನವಾಗಿಯೇ ಇದ್ದ ಅಶೋಕ ಇದ್ದಕ್ಕಿದ್ದಂತೆ ಒಮ್ಮೊಮ್ಮೆ ಬಿಕ್ಕುತ್ತಿದ್ದ..ಅವ್ವಾ ಅವ್ವಾ ಎಂದು ನರಳುತ್ತಿದ್ದ. ನಾನೂ ನನಗೆ ತೋಚಿದಂತೆ ಒಂದಿಷ್ಟು ಸಮಾಧಾನ ಹೇಳುತ್ತಿದ್ದೆ. ಕೊನೆಗೆ ಯಾವುದೋ ಒಂದು ಸಂಪರ್ಕ ರೈಲಿನಲ್ಲಿ ಅವನನ್ನು ಕೂರಿಸಿ ಕಳಿಸಿಕೊಟ್ಟು ವಿಶ್ರಾಂತಿ ಗೃಹಕ್ಕೆ ಮರಳಿದೆ. ಅಷ್ಟು ಮಾನಸಿಕ ಒತ್ತಡದ ನಡುವೆ ನಿದ್ದೆಯಾದರೂ ಹೇಗೆ ಬಳಿ ಸುಳಿದೀತು? ರಾತ್ರಿಯೆಲ್ಲಾ ಒಂದೇ ಯೋಚನೆ: ಇದೆಂತೆಂತಹ ಸವಾಲುಗಳು ಎದುರಾಗುತ್ತವೆ ಒಬ್ಬ ನಟನಿಗೆ!

ಕೆಲ ವರ್ಷಗಳ ಹಿಂದೆ ರಾಜಕಪೂರನ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಇಂಥದೇ ದೃಶ್ಯ ನೋಡಿ ಕಣ್ಣೀರು ಮಿಡಿದದ್ದು ನೆನಪಿನಂಗಳಕ್ಕೆ ತೇಲಿ ಬಂತು. ಈಗ ನೋಡಿದರೆ ವಾಸ್ತವದಲ್ಲೇ..ಕಣ್ಣೆದುರಿಗೇ.. ನಮ್ಮ ಅನುಭವಕ್ಕೆ ದಕ್ಕುವಂತೆಯೇ ಅಂಥದೇ ಸನ್ನಿವೇಶ ಎದುರಾಗಿ ತಲ್ಲಣಗೊಳಿಸಿದೆ! ಸಿನೆಮಾದಲ್ಲಿದ್ದ ಅತಿ ಭಾವುಕತೆಯೋ ಅದನ್ನು ಮತ್ತಷ್ಟು ಮೆರೆಸುವ ಸಂಗೀತವೋ ಮತ್ತೊಂದೋ ಇಲ್ಲಿಲ್ಲದಿರಬಹುದು.. ಆದರೆ ತೀವ್ರವಾಗಿ ಅನುಭವವೇದ್ಯವಾಗುತ್ತಿರುವುದು ಅದೇ ವೇದನೆ.. ಅದೇ ಅಸಹಾಯಕತೆ..ಅದೇ ಆತಂಕ! ನಿಜಕ್ಕೂ ಒಬ್ಬ ರಂಗ ಕಲಾವಿದನ ಬದುಕಾದರೂ ಎಂಥದು! ಅವನ ವೃತ್ತಿಯಾದರೂ ಎಂಥದು! ಸವಾಲು..ಹೆಜ್ಜೆ ಹೆಜ್ಜೆಗೂ ಸವಾಲು..ಪಾತ್ರ ಸಿದ್ಧತೆಯ ಸವಾಲು..ಪಾತ್ರದೊಳಹೋಗುವ ಸವಾಲು..ನೂರಾರು ಪ್ರೇಕ್ಷಕರಿಗೆ ಮುಖಾಮುಖಿಯಾಗುವ ಸವಾಲು..ತನ್ಮಯನಾಗಿ ನಿರ್ವಹಿಸಿದ ಪಾತ್ರದಿಂದ ಹೊರಬರುವ ಸವಾಲು..ಕ್ಲಿಷ್ಟಾತಿಕ್ಲಿಷ್ಟ ಸನ್ನಿವೇಶಗಳನ್ನೆದುರಿಸುವ ಸವಾಲು…ಸವಾಲುಗಳಿಗೆ ಎದೆಯೊಡ್ಡಿ ನಿಲ್ಲುವ ಸವಾಲು..

ಯಾವಾಗ ನಿದ್ರಾದೇವಿಯ ತೆಕ್ಕೆಗೆ ಬಿದ್ದೆನೋ ಅರಿವಾಗಲೇ ಇಲ್ಲ.

ಮರುದಿನ ನಿಧಾನವಾಗಿ ಎದ್ದು 11 ರ ಸುಮಾರಿಗೆ ಹಾಗೇ ಅಡ್ಡಾಡುತ್ತಾ ಕಡಲ ದಂಡೆಗೆ ಹೋದೆ. ಆ ವೇಳೆಗಾಗಲೇ ನಮ್ಮ ಹಲವಾರು ಸಹಪಾಠಿಗಳು ಕಡಲ ನೀರಿಗಿಳಿದು ಸಂಭ್ರಮಿಸುತ್ತಿದ್ದರು. ನನ್ನ ಮನಸ್ಸಿನ್ನೂ ಹಿಂದಿನ ದಿನದ ಘಟನಾವಳಿಗಳ ಗುಂಗಿನಿಂದ ಹೊರಬಂದಿರಲಿಲ್ಲ. ಯಾಕೋ ಒಂಟಿತನ ಹೆಚ್ಚು ಪ್ರಿಯವೆನಿಸಿ ಕಡಲತಡಿಯ ಗುಂಟ ಹಾಗೇ ನಡೆಯುತ್ತಾ ಹೋದೆ.ಕಣ್ಣಿಗೆಟುಕುವಷ್ಟೂ ದೂರಕ್ಕೆ ಹರಡಿರುವ ತನ್ನ ಅಗಾಧತೆಯಲ್ಲಿ..ಭೋರ್ಗರೆಯುವ ತೆರೆಗಳ ರುದ್ರನರ್ತನದಲ್ಲಿ ಸೆಳೆಯುವ ಈ ಕಡಲೊಂದು ವಿಸ್ಮಯ.

“ಬಂಗಾರ ನೀರ ಕಡಲಾಚೆಗೀಚೆಗಿದೆ ನೀಲ ನೀಲ ತೀರಾ/ ಮಿಂಚುಬಳಗ ತೆರೆತೆರೆಗಳಾಗಿ ಅಲೆಯುವುದು ಪುಟ್ಟ ಪೂರಾ…”
ಪ್ರೀತಿಯ ಕವಿ ದ.ರಾ.ಬೇಂದ್ರೆಯವರ ‘ಹೃದಯ ಸಮುದ್ರ’ ಕವಿತೆಯ ಸಾಲುಗಳು ಮನಸ್ಸಿನಲ್ಲಿ ರಿಂಗಣಿಸುತ್ತಿದ್ದವು. ಜೊತೆಗೇ ಹಿಂದೆ ಕೇಳಿದ್ದ ಒಂದು ಗಜ಼ಲ್ ನ ಮಾರ್ಮಿಕ ಸಾಲುಗಳೂ ನೆನಪಾಗಿ ಕೆಣಕತೊಡಗಿದವು: “ಏಕ್ ಸಮಂದರ್ ನೇ ಆವಾಜ಼್ ದೀ/ಮುಝಕೋ ಪಾನೀ ಪಿಲಾ ದೀಜಿಯೇ”!

ಕಡಲ ಸೆಳೆತಕ್ಕೆ ಸಿಕ್ಕು ಹಾಗೇ ಕಡಲಿಗಭಿಮುಖವಾಗಿ ಹೆಜ್ಜೆ ಹಾಕತೊಡಗಿದೆ. ಮೊಣಕಾಲುಗಳಿಗೆ ಬಂದು ಅಪ್ಪಳಿಸುತ್ತಿದ್ದ ತೆರೆಗಳು ಮತ್ತಷ್ಟು ಒಳಗೆ ಹೋಗುವಂತೆ ಪ್ರೇರೇಪಿಸುತ್ತಾ ಸೆಳೆಯತೊಡಗಿದವು. ಸಮೀಪದಲ್ಲೇ ಇದ್ದ ಗೆಳೆಯರು, “ಓಯ್ ಪ್ರಭು ಭಾಯ್… ಕಪಡೇ ತೋ ನಿಕಾಲ್ ಕೆ ಜಾನಾ” ಎಂದು ಕೂಗುತ್ತಿದ್ದರು. “ರೆಹನೇ ದೋ ಭಾಯ್..” ಎನ್ನುತ್ತಾ ನಾನು ಮುನ್ನಡೆಯುತ್ತಲೇ ಇದ್ದೆ. ನಾಲ್ಕಾರು ಹೆಜ್ಜೆ ಮುಂದೆ ಹೋಗಿದ್ದೆನೋ ಏನೋ..ಯಾಕೋ ಪಾದದಡಿಯ ಮರಳ ಹಾಸು ಅಳ್ಳಕವಾದಂತಾಗಿ ಆಯ ತಪ್ಪತೊಡಗಿದೆ.

ಹೌದು….ಹೆಜ್ಜೆ ಊರಲು ಮರಳೇ ಎಟುಕುತ್ತಿಲ್ಲ.. ಅಷ್ಟು ಸಮೀಪಕ್ಕೆ ನನ್ನನ್ನು ಸೆಳೆದಿದ್ದ ಕಡಲು ಈಗ ತನ್ನ ಒಳಗೇ ಸೆಳೆದುಕೊಳ್ಳತೊಡಗಿತು! ಅಂತಹ ಒಳ್ಳೆಯ ಈಜುಗಾರನೇನಲ್ಲ ನಾನು ಅಲೆಗಳ ಹೊಯ್ದಾಟದಲ್ಲಿ ಮುಳುಗೇಳತೊಡಗಿದ ನನ್ನ ಮೂಗು ಬಾಯಿಗಳಲ್ಲಿ ಉಪ್ಪು ನೀರು ತುಂಬಿಕೊಳ್ಳತೊಡಗಿ ತತ್ತರಿಸತೊಡಗಿದೆ. ಚಿಕ್ಕಂದಿನಲ್ಲಿ ಸಾವಿನೊಡನೆ ಮುಖಾಮುಖಿಯಾಗಿದ್ದ ಪ್ರಸಂಗ ನೆನಪಿಗೆ ಬಂದು, ‘ಆಗ ಉಳಿಸಿಹೋಗಿದ್ದ ಸಾವು ಈಗ ಎಳೆದುಕೊಳ್ಳುತ್ತಿದೆ’ ಎಂದು ಖಾತ್ರಿಯಾಗಿ ಅನ್ನಿಸಿ ಬಿಟ್ಟಿತು. ಹತಾಶನಾಗಿ ‘ಬಚಾವ್..ಬಚಾವ್’ ಎಂದು ಕೂಗತೊಡಗಿದೆ. ನನ್ನ ಅದೃಷ್ಟಕ್ಕೆ ತುಸುವೇ ದೂರದಲ್ಲಿ ಈಜುತ್ತಿದ್ದ ನನ್ನ ಸಹಪಾಠಿ ಸುರಿಂದರ್ ಪ್ರಸಾದನಿಗೆ ನನ್ನ ಆಕ್ರಂದನ ಕೇಳಿ ಆತ ಒಡನೆಯೇ ನನ್ನತ್ತ ವೇಗವಾಗಿ ಈಜಿಕೊಂಡು ಬಂದ. ಆ ವೇಳೆಗಾಗಲೇ ಸಾಕಷ್ಟು ಉಪ್ಪು ನೀರು ಕುಡಿದು ಬಸವಳಿದು ಹೋಗಿದ್ದ ನಾನು ಅವನು ಸನಿಹಕ್ಕೆ ಬಂದೊಡನೆ ಆಸರೆಗಾಗಿ ಅವನನ್ನು ಹಿಡಿದುಕೊಳ್ಳಲು ತವಕಿಸಿದೆ. “ಮುಝೇ ಮತ್ ಪಕಡನಾ..ದೋನೋ ಡೂಬ್ ಜಾಯೇಂಗೇ” ಎಂದು ಕಿರುಚುತ್ತಾ ಆತ ನನ್ನ ಕೂದಲು ಹಿಡಿದು ಎಳೆಯುತ್ತಾ ದಡದತ್ತ ಈಜತೊಡಗಿದ.

ಆ ವೇಳೆಗೆ ಮತ್ತೂ ಇಬ್ಬರು ಸಹಪಾಠಿಗಳು ಅವನ ನೆರವಿಗೆ ಬಂದು ಕಷ್ಟಪಟ್ಟು ನನ್ನನ್ನು ದಡಕ್ಕೆ ತಂದುಹಾಕಿದರು. ಹೊಟ್ಟೆಯ ಮೇಲೆ ಮಲಗಿಸಿ ಬೆನ್ನು ಒತ್ತಿ ಒತ್ತಿ ಕುಡಿದಿದ್ದ ನೀರು ಕಕ್ಕಿಸಿದರು. ಆ ದಣಿವು—ಆಘಾತಗಳಿಂದ ಚೇತರಿಸಿಕೊಂಡು ಎದ್ದು ನಿಲ್ಲಲು ಅರ್ಧ ತಾಸೇ ಬೇಕಾಯಿತು. ಜೀವ ಉಳಿಸಿದ ಗೆಳೆಯರಿಗೆ ಧನ್ಯವಾದ ಅರ್ಪಿಸಿ ವಿಶ್ರಾಂತಿ ಗೃಹದತ್ತ ಮೆಲ್ಲಗೆ ಹೆಜ್ಜೆ ಹಾಕತೊಡಗಿದೆ. ‘ನನಗೆ ಕುಡಿಯಲು ನೀರು ಕೊಡಿ’ ಎಂದು ಅಲವತ್ತುಕೊಂಡ ಕಡಲು ನನಗೆ ನೀರು ಕುಡಿಸಿ ಹೈರಾಣಾಗಿಸಿದ ಪರಿಗೆ ಒಳಗೇ ಸಣ್ಣಗೆ ನಗುತ್ತಾ ಹೊರಟ ನನ್ನನ್ನು ಮತ್ತೆ ಮತ್ತೆ ಅವೇ ಸಾಲುಗಳು ಕಾಡುತ್ತಿದ್ದವು; ಅಂದಷ್ಟೇ ಏನು, ಇಂದಿಗೂ ಕಾಡುತ್ತಿರುವ ಸಾಲುಗಳಿವು:

“ಏಕ್ ಸಮಂದರ್ ನೇ ಆವಾಜ಼್ ದೀ/ ಮುಝಕೋ ಪಾನೀ ಪಿಲಾ ದೀಜಿಯೇ”!!

‍ಲೇಖಕರು Admin

January 27, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: