ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಪ್ರಭು ಅಂಕಣ : ನಟನೆಯ ಪ್ರಥಮ ಪಾಠಗಳು ನೆನಪಾದವು..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. 

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು. 

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ. 

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

ಅಂಕಣ 149

ಡಿ ಬ್ಲಾಕ್ 501, ಅಬೋಧ್ ವಾಲ್ಮಾರ್ಕ್ ಅಪಾರ್ಟ್ ಮೆಂಟ್ಸ್ — ನಮ್ಮ ಹೊಸ ಮನೆಯ ವಿಳಾಸ ! ಅಪಾರ್ಟ್ ಮೆಂಟ್ ಸಿದ್ಧವಾಗಿ ಮನೆಯ ಒಳಗೆ ಬೀರುಗಳು, ಮಂಚಗಳು ಇತ್ಯಾದಿಗಳೆಲ್ಲವನ್ನೂ ಸಿದ್ಧಪಡಿಸುವ ಒಳಾಂಗಣ ವ್ಯವಸ್ಥೆಯ ಕೆಲಸ ಬಾಕಿ ಉಳಿದಿತ್ತು. ಅಪಾರ್ಟ್ ಮೆಂಟ್ ನ ಇನ್ನೂ ಕೆಲ ಮನೆಗಳ ಒಳಾಂಗಣಗಳ ವ್ಯವಸ್ಥೆಯನ್ನು ಸಂಪತ್ ಎನ್ನುವ ವಿನ್ಯಾಸಗಾರರು ಸಿದ್ಧಪಡಿಸುತ್ತಿದ್ದರು. ನಮ್ಮ ಮನೆಯ ವಿನ್ಯಾಸದ ಜವಾಬ್ದಾರಿಯನ್ನೂ ಅವರಿಗೇ ಒಪ್ಪಿಸಿದೆವು. ನಮ್ಮ ಸಂಸಾರ ಪುಟ್ಟದೇ ಆದರೂ ವಿಪರೀತ ಸಾಮಾನು ಸರಂಜಾಮುಗಳನ್ನು ಸೇರಿಸಿಕೊಂಡುಬಿಟ್ಟಿದ್ದೆವು! ಇದರ ಜೊತೆಗೆ ಸಭೆ— ಸಮಾರಂಭಗಳಲ್ಲಿ ನೀಡಿದ್ದ ಸ್ಮರಣಿಕೆಗಳು, ಪ್ರಶಸ್ತಿಗಳು, ಸಿಡಿ ಡಿವಿಡಿ ಭಂಡಾರ, ಪುಸ್ತಕ ಭಂಡಾರ, ಅಲಂಕಾರಿಕ ವಸ್ತು ವಿಶೇಷಗಳು, ಆಕರ್ಷಕ ಬೊಂಬೆಗಳು… ಎಲ್ಲಕ್ಕೂ ಒಂದು ಸೂಕ್ತ ಜಾಗವನ್ನು ಕಲ್ಪಿಸಿಕೊಡುವ ಕೆಲಸವನ್ನು ಸಂಪತ್ ಅತ್ಯಂತ ಸಮರ್ಥವಾಗಿ ನಿರ್ವಹಿಸಿದರು. ನವಂಬರ್ ತಿಂಗಳ ಒಳಗೆ ಬಸವೇಶ್ವರ ನಗರದ ಮನೆಯನ್ನು ಹೆಗಡೆ ಅವರಿಗೆ ಬಿಟ್ಟುಕೊಡಬೇಕಿತ್ತು. ಹಾಗಾಗಿ ಅತ್ಯಂತ ಚುರುಕುಗತಿಯಲ್ಲಿ ಒಳಾಂಗಣವನ್ನು ಸಿದ್ಧಪಡಿಸುವ ಕೆಲಸ ಸಾಗತೊಡಗಿತು.

ಇದರ ನಡುವೆಯೇ ಮತ್ತೂ ಒಂದು ವಿಶೇಷ ಕಾರ್ಯಕ್ರಮದ ಸಿದ್ಧತೆ ಪ್ರಾರಂಭವಾಗಿತ್ತು—ಅದೇ ರಂಜನಿಯ ಎರಡನೇ ಕವನ ಸಂಕಲನದ ಲೋಕಾರ್ಪಣೆ!
ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥ ಮಾಲೆ ಕನ್ನಡದ ಒಂದು ಹೆಮ್ಮೆಯ ಪ್ರಕಾಶನ ಸಂಸ್ಥೆ.

ಟಿ.ಎಸ್.ವೆಂಕಣ್ಣಯ್ಯನವರು ಹಾಗೂ ತ ಸು ಶಾಮರಾಯರು ಕನ್ನಡ ಸಾಹಿತ್ಯ ಲೋಕದ ಬಹುದೊಡ್ಡ ಹೆಸರುಗಳು. ಸಾಹಿತ್ಯದ ವಿದ್ಯಾರ್ಥಿಗಳಿಗಂತೂ ಪ್ರಾತಃಸ್ಮರಣೀಯರು. ತ ಸು ಶಾಮರಾಯರ ಸುಪುತ್ರರಾದ ಟಿ ಎಸ್ ಛಾಯಾಪತಿಯವರು ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯನ್ನು ಅತ್ಯಂತ ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದರು. ನಮಗೆ ಛಾಯಾಪತಿಗಳ ಪ್ರಪ್ರಥಮ ಭೇಟಿಯಾದದ್ದು ಕವಿಗುರು ಎಚ್ ಎಸ್ ವೆಂಕಟೇಶಮೂರ್ತಿಯವರ ಮನೆಯಲ್ಲಿ ನಡೆದ ಒಂದು ಸಾಹಿತ್ಯ ಕಾರ್ಯಕ್ರಮಲ್ಲಿ. ಮಹಾ ಸಾಹಿತ್ಯ ಪ್ರೇಮಿಗಳೂ ಸಜ್ಜನರೂ ಆದ ಛಾಯಾಪತಿಗಳು ಸ್ವಲ್ಪ ಸಮಯದಲ್ಲಿಯೇ ನಮಗೆ ತೀರ ಆತ್ಮೀಯರಾಗಿ ಬಿಟ್ಟರು! ಅಷ್ಟೇ ಅಲ್ಲ, “ನಿಮ್ಮ ಎರಡನೇ ಕವನ ಸಂಕಲನದ ಪ್ರಕಾಶನದ ಜವಾಬ್ದಾರಿಯನ್ನು ನಮ್ಮ ಸಂಸ್ಥೆ ವಹಿಸಿಕೊಳ್ಳುತ್ತದೆ; ನಿಮಗೆ ಯಾವ ಚಿಂತೆಯೂ ಬೇಡ” ಎಂದು ಖಡಾ ಖಂಡಿತ ನುಡಿಗಳಲ್ಲಿ ರಂಜನಿಗೆ ಆಶ್ವಾಸನೆ ನೀಡಿಬಿಟ್ಟರು! ನಮಗಂತೂ ಆಶ್ಚರ್ಯವೋ ಆಶ್ಚರ್ಯ! ವಾಸ್ತವವಾಗಿ ನಾವೂ ಸಹ ಅದೇ ನಿಟ್ಟಿನಲ್ಲಿ ಆಲೋಚಿಸುತ್ತಿದ್ದೆವು!

ರಂಜನಿಯ ಮೊದಲ ಕವನ ಸಂಕಲನ ಲೋಕಾರ್ಪಣೆಯಾಗಿ ಸಾಕಷ್ಟು ಸಮಯ ಕಳೆದಿತ್ತು. ಅವಳ ಮೊದಲ ಕವಿತಾ ಸಂಕಲನ ಭರಣಿ ಮಳೆ ಪ್ರಕಟವಾದದ್ದು 2009ರಲ್ಲಿ. ಅಲ್ಲಿಂದ ಇದು ತನಕ ಸಾಕಷ್ಟು ಕವಿತೆಗಳನ್ನು ರಚಿಸಿದ್ದ ರಂಜನಿ ಎರಡನೆಯ ಕವನ ಸಂಕಲನ ತರುವ ಉತ್ಸಾಹದಲ್ಲಿದ್ದಾಗಲೇ ಮನೆ ಮಾರುವ ಪ್ರಸಂಗ ಧುತ್ತೆಂದು ಎದುರಾಗಿ ಕವಿತೆ ಹಿನ್ನೆಲೆಗೆ ಸರಿದಿತ್ತು! ಈಗ ಛಾಯಾಪತಿಗಳ ಪ್ರೋತ್ಸಾಹ ಆಶ್ವಾಸನೆಗಳ ಕಾರಣವಾಗಿ ಆ ಆಸೆ ಮತ್ತೆ ಗರಿಗೆದರಿದಂತಾಯಿತು. ನನಗೂ ಇದರಿಂದ ಎಷ್ಟೋ ಸಮಾಧಾನವಾಯಿತು: ಕನಸಿನ ಮನೆ ಮಾರಿದ ಸಂಕಟವನ್ನು ಮರೆಯಲು ರಂಜನಿಗೆ ಈ ಹೊಸ ಕನಸು—ಹೊಸ ತೊಡಗುವಿಕೆ ಒಂದಿಷ್ಟು ನೆರವಾಗುತ್ತದಲ್ಲ ಎಂದು! ಆಶ್ವಾಸನೆ ನೀಡಿದ್ದಷ್ಟೇ ಅಲ್ಲ, ಛಾಯಾಪತಿಗಳು ಮೇಲಿಂದ ಮೇಲೆ ನಮಗೆ ಫೋನ್ ಮಾಡಿ, “ಕವಿತೆಗಳನ್ನು ಕಳಿಸಿಕೊಡಿ, ಪುಸ್ತಕ ಮಾಡಿ ಬಿಡೋಣ” ಎಂದು ಪ್ರೀತಿಯಿಂದ ಒತ್ತಡ ಹೇರಿದರು. ಅದುವರೆಗೂ ಸಿದ್ಧವಾಗಿದ್ದ ಕವಿತೆಗಳೆಲ್ಲವನ್ನೂ ನಾನೇ ಸ್ವತಃ ದುಂಡನೆಯ ಅಕ್ಷರಗಳಲ್ಲಿ ಬರೆದು ಛಾಯಾಪತಿಗಳಿಗೆ ಕಳಿಸಿಕೊಟ್ಟೆ. ಮಾಡುವುದಾದರೂ ಏನು?!! ರಂಜನಿಯ ಕವಿತೆಗಳು ಚಂದವಿದ್ದರೂ ಅವಳ ಅಕ್ಷರ ಮಾತ್ರ ಕೋಚು ಕೋಚು! ಕೋಳಿ ಕಾಲು ಅಕ್ಷರಗಳು! ಹಾಗಾಗಿ ನಾನೇ ಲಿಪಿಕಾರ! ಸುಮಾರು 45 ಹೊಸ ಕವಿತೆಗಳ ಸಂಗ್ರಹಕ್ಕೆ ಸೂಕ್ತ ಹೆಸರಿನ ಅನ್ವೇಷಣೆ ಆರಂಭವಾಗಿ ಶೀಘ್ರಾತಿ ಶೀಘ್ರವಾಗಿ ತೀರ್ಮಾನವೂ ಆಗಿ ಹೋಯಿತು— “ಬಾನ ಜಗಲಿ”!

ರಾಧಿಕೆ ಕ್ಷೇಮವಾಗಿ ಲಂಡನ್ ತಲುಪಿ ಅಲ್ಲಿನ ಹಾಸ್ಟೆಲ್ ನಲ್ಲಿ ವಾಸ್ತವ್ಯ ಹೂಡಿ ತನ್ನ ವಿದ್ಯಾಭ್ಯಾಸ ಆರಂಭಿಸಿದ್ದಳು; ಇತ್ತ ವೀರಣ್ಣ ಪಾಳ್ಯದ ಅಪಾರ್ಟ್ ಮೆಂಟ್ ನಲ್ಲಿ ನಮ್ಮ ಮನೆಯ ಒಳಾಂಗಣಗಳ ಸಿದ್ಧತೆ ರಭಸದಿಂದ ಸಾಗಿತ್ತು; ಅತ್ತ ಮೈಸೂರಿನಲ್ಲಿ ಬಾನಜಗಲಿಯ ಕವಿತೆಗಳು ಮುದ್ರಣದ ಮನೆಯಲ್ಲಿ ಪ್ರಕಟಣೆಗೆ ಸಜ್ಜುಗೊಳ್ಳುತ್ತಿದ್ದವು. “ಪ್ರಸಿದ್ಧ ಕಲಾವಿದ ಸುಧಾಕರ್ ದರ್ಬೆಯವರು ಮುಖಪುಟವನ್ನು ಸೊಗಸಾಗಿ ರಚಿಸಿಕೊಟ್ಟಿದ್ದಾರೆ; ಕೃತಿ ಸಿದ್ಧವಾಗುತ್ತಿದೆ; ಮುಂದಿನ ವಾರದೊಳಗೆ ಪೂರ್ಣವಾಗಿ ಸಿದ್ಧಗೊಂಡ ಕೃತಿ ಕೈ ಸೇರುತ್ತದೆ ; ಸಾಧ್ಯವಾದರೆ ಬಂದು ಹೋಗಿ” ಎಂದು ಛಾಯಾಪತಿಗಳು ಕರೆ ಮಾಡಿ ಹೇಳಿದಾಗ ರಂಜನಿಗೆ ಸಂಭ್ರಮವೋ ಸಂಭ್ರಮ! ಮುಂದಿನ ವಾರದಲ್ಲಿ ಒಂದು ದಿನ ಹೋಗುವುದೆಂದು ನಾವು ತೀರ್ಮಾನಿಸಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆಯೇ ಅಷ್ಟೇನೂ ಹಿತವಲ್ಲದ ಮತ್ತೊಂದು ವಾರ್ತೆ ಮೈಸೂರಿನಿಂದ ಬಂದಿತು: ‘ಛಾಯಾಪತಿಗಳು ಅನಾರೋಗ್ಯ ನಿಮಿತ್ತ ಆಸ್ಪತ್ರೆ ಸೇರಿದ್ದಾರೆ’. ‘ಈಗ ಹೋಗಿ ಆಸ್ಪತ್ರೆ ಸೇರಿರುವ ಛಾಯಾಪತಿಗಳನ್ನು ಒಮ್ಮೆ ನೋಡಿಕೊಂಡು ಬಂದುಬಿಡೋಣ, ಪುಸ್ತಕ ಸಿದ್ಧವಾದ ಮೇಲೆ ಮತ್ತೊಮ್ಮೆ ಹೋದರಾಯಿತು; ಮೈಸೂರಿಗೆ ಏನು, ಯಾವಾಗ ಬೇಕಾದರೂ ಹೋಗಿ ಬರಬಹುದು’ ಎಂದು ತೀರ್ಮಾನಿಸಿಕೊಂಡು ‘ನಾವು ಬರುತ್ತಿದ್ದೇವೆ’ ಎಂದು ಛಾಯಾಪತಿಗಳಿಗೆ ಸಂದೇಶ ಕೊಟ್ಟು ಮೈಸೂರಿಗೆ ಹೊರಟೇಬಿಟ್ಟೆವು.

ಮೈಸೂರಿನಲ್ಲಿ ಛಾಯಾಪತಿಗಳು ಚಿಕಿತ್ಸೆ ಪಡೆಯುತ್ತಿದ್ದದ್ದು ಡಾ॥ರಾಜಶೇಖರ್ ರವರ ಆಸ್ಪತ್ರೆಯಲ್ಲಿ. ಸೀದಾ ಆಸ್ಪತ್ರೆಗೆ ಹೋದ ನಾವು ಛಾಯಾಪತಿಗಳು ಇದ್ದ ಕೋಣೆಯೊಳಗೆ ಕಾಲಿರಿಸುತ್ತಿದ್ದಂತೆ ಕಂಡದ್ದು ಮಂಚದ ಮೇಲೆ ಕಟ್ಟೆಗೆ ಒರಗಿಕೊಂಡು ಕಾಲು ಚಾಚಿಕೊಂಡು ನಮ್ಮ ಹಾದಿಯನ್ನೇ ಎದುರು ನೋಡುತ್ತಿದ್ದ ಛಾಯಾಪತಿಗಳು! ಎರಡು ಮೂರು ದಿನಗಳ ಚಿಕಿತ್ಸೆ ಶುಶ್ರೂಷೆಯಿಂದ ಕೊಂಚ ಚೇತರಿಸಿಕೊಂಡಿದ್ದ ಅವರ ಮುಖದಲ್ಲಿ ನಮ್ಮನ್ನು ಕಂಡೊಡನೆ ಮಂದಹಾಸ ಮಿನುಗಿತು. ಬನ್ನಿ ಬನ್ನಿ ಎಂದು ಸ್ವಾಗತಿಸಿದ ಛಾಯಾಪತಿಗಳು ಉಭಯ ಕುಶಲೋಪರಿಯ ನಂತರ, “ಅಮ್ಮ, ಒಂದು ಕ್ಷಣ ಕಣ್ಣು ಮುಚ್ಚಿಕೊಳ್ಳಿ. ನಿಮಗೆ ಒಂದು surprise ಇದೆ” ಎಂದು ರಂಜನಿಗೆ ಹೇಳಿದರು. ಏನಿರಬಹುದು ಎಂದು ಯೋಚಿಸುತ್ತಲೇ ರಂಜನಿ ಕಣ್ಣು ಮುಚ್ಚಿಕೊಂಡಳು. ದಿಂಬಿನ ಅಡಿಯಿಂದ ಪುಸ್ತಕ ಒಂದನ್ನು ತೆಗೆದು ಛಾಯಾಪತಿಗಳು ರಂಜನಿಯ ಎದುರು ಹಿಡಿದು “ಕಣ್ಣು ಬಿಡಿ ಅಮ್ಮ” ಎಂದರು. ಕಣ್ಣುಬಿಟ್ಟ ರಂಜನಿಗೆ ಎದುರಿಗೆ ಕಂಡದ್ದು ಸರ್ವಾಂಗ ಸುಂದರವಾಗಿ ರೂಪುಗೊಂಡಿದ್ದ ಅವಳ ಕವಿತಾ ಸಂಕಲನ ‘ಬಾನಜಗಲಿ’ಯ ಪ್ರಪ್ರಥಮ ಪ್ರತಿ!! ನಿಜಕ್ಕೂ ಆ ಕ್ಷಣದ ಅವಳ ಮುಖದ ಆ ಚಕಿತ ಭಾವ, ಆ ಸಂತಸದ ಉದ್ಗಾರ ಮಾತಿಗೆ ನಿಲುಕದ್ದು. ಅಚ್ಚರಿಗೊಳಿಸಬೇಕು ಅನ್ನುವ ತನ್ನ ಉದ್ದೇಶ ನೆರವೇರಿದ ಸಾರ್ಥಕ ಭಾವದ ಮುಗುಳ್ನಗು ಛಾಯಾಪತಿಗಳ ಮುಖದ ಮೇಲೆ! ಬದುಕಿನ ಸಣ್ಣಪುಟ್ಟ, ಆದರೆ ಅತ್ಯಮೂಲ್ಯ ಹಾಗೂ ಸ್ಮರಣೀಯ ಗಳಿಗೆಗಳೆಂದರೆ ಇವೇ ಅಲ್ಲವೇ? “ನೀವು ಪೂರ್ತಿ ಗುಣಮುಖರಾಗಿ, ಆದಷ್ಟು ಬೇಗ ಬೆಂಗಳೂರಿನಲ್ಲಿ ಕೃತಿ ಬಿಡುಗಡೆಗೆ ಸಿದ್ಧತೆಗಳನ್ನು ಮಾಡುತ್ತೇವೆ” ಎಂದು ನುಡಿದು ಛಾಯಾಪತಿಗಳಿಂದ ಬೀಳ್ಕೊಂಡು ಸಂತೃಪ್ತ ಸಮಾಧಾನದ ಭಾವದೊಂದಿಗೆ ಬೆಂಗಳೂರಿಗೆ ಮರಳಿದೆವು.

ಇದೇ ದಿನಗಳಲ್ಲಿ ಮತ್ತೊಂದು ಚಿತ್ರದಲ್ಲಿ ಅಭಿನಯಿಸಲು ನನಗೆ ಕರೆ ಬಂದಿತು. ಅದೇ ಪ್ರಸಿದ್ಧ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ “….ರೆ” ಚಿತ್ರ. ದೇಸಾಯಿ ಅವರು ತರ್ಕ, ನಿಷ್ಕರ್ಷ, ನಮ್ಮೂರ ಮಂದಾರ ಹೂವೇ ಮೊದಲಾದ ಚಿತ್ರಗಳ ಮೂಲಕ ದೊಡ್ಡ ಹೆಸರು ಮಾಡಿದ್ದವರು; ಅಪಾರ ಜನಪ್ರೀತಿಯ ಜೊತೆಗೆ ವಿಮರ್ಶಕರ ಮೆಚ್ಚುಗೆಗೂ ಪಾತ್ರರಾದ ನಿರ್ದೇಶಕರು. ಅವರ ಚಿತ್ರಗಳಲ್ಲಿ ನಟಿಸುವ ಅವಕಾಶ ಅದುವರೆಗೆ ಒದಗಿಬಂದಿರಲಿಲ್ಲ. ಅವರು ಒಂದು ಧಾರಾವಾಹಿಯನ್ನು ನಿರ್ದೇಶಿಸಲು ಪ್ರಾರಂಭಿಸಿದ್ದಾಗ ಅದರಲ್ಲಿ ನನಗೊಂದು ಮುಖ್ಯ ಪಾತ್ರವನ್ನು ನೀಡಿದ್ದರು. ಎರಡು ಮೂರು ದಿನಗಳ ಚಿತ್ರೀಕರಣವೂ ನಡೆದಿತ್ತು. ಆದರೆ ಅದೇನು ಕಾರಣವೋ, ಆ ಧಾರಾವಾಹಿ ಆರಂಭವನ್ನೇ ಕಾಣದೆ ಸ್ಥಗಿತಗೊಂಡುಬಿಟ್ಟಿತ್ತು. ಒಳ್ಳೆಯ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಮೊಟಕಾದ್ದಕ್ಕೆ ನನಗೆ ಅತೀವ ಬೇಸರವಾಗಿತ್ತು. ಬಹುಶಃ ಆ ಧಾರಾವಾಹಿಯ ನೆನಪಿನ ಬಲದಿಂದಲೇ ದೇಸಾಯಿ ಅವರು “ರೆ” ಚಿತ್ರಕ್ಕೆ ನನ್ನನ್ನು ಆಹ್ವಾನಿಸಿದರೆಂದು ಕಾಣುತ್ತದೆ. ದೇಸಾಯಿ ಅವರ ಕಾರ್ಯವೈಖರಿ, ಅವರು ಶಾಟ್ ಗಳನ್ನು ಸಂಯೋಜಿಸುವ ರೀತಿ, ಕಲಾವಿದರನ್ನು ದುಡಿಸಿಕೊಳ್ಳುವ ಪರಿ, ಚಿತ್ರಕಥೆಯನ್ನು ಕಟ್ಟುವ ಕ್ರಮ..ಎಲ್ಲವೂ ನನಗೆ ಮೆಚ್ಚುಗೆಯೇ. ನಿರ್ದೇಶನ ಮಾಡುವಾಗ ಒಂದು ವಿಶಿಷ್ಟ ರೀತಿಯ ಚಡಪಡಿಕೆ ದೇಸಾಯಿ ಅವರಲ್ಲಿ ಎದ್ದುಕಾಣುವ ಗುಣ! ಮಾತುಗಳನ್ನು ತುಂಡರಿಸಿ ಮತ್ತೆ ಮತ್ತೆ ಹೇಳುತ್ತಾ ತಮಗೆ ತಾವೇ ಏನನ್ನೋ ಗುನುಗಿಕೊಳ್ಳುತ್ತಾ ಅರ್ಥವಾಗದ ಶಬ್ದಗಳನ್ನುದುರಿಸುತ್ತಾ ವಿಶಿಷ್ಟ ಆಂಗಿಕಗಳೊಂದಿಗೆ ಅವರು ಚಿತ್ರಿಕೆಗಳನ್ನು ಸಂಯೋಜಿಸುವ ರೀತಿಯದೇ ಒಂದು ವೈಶಿಷ್ಟ್ಯ…ಒಂದು ಹೊಸ ನಮೂನೆಯ ಸ್ವಾರಸ್ಯ! ‘ಹಾಗೆ ಆದರೆ’, ‘ಹೀಗೆ ಆದರೆ’ ಎಂದು ಸದಾ ‘ರೆ’ ಸಾಮ್ರಾಜ್ಯದಲ್ಲಿ ವಿಹರಿಸುವ ಮನುಷ್ಯನ ಮೂಲಭೂತ ಕಾಲ್ಪನಿಕ ಹೊಯ್ದಾಟಗಳ ಮನಸ್ಥಿತಿಯನ್ನು ಧ್ವನಿಸುವಂತೆ ‘ರೆ’ ಎಂದು ಚಿತ್ರಕ್ಕೆ ನಾಮಕರಣ ಮಾಡಿರುವುದೇ ಒಂದು ಸ್ವಾರಸ್ಯದ ಸಂಗತಿ.

ನನಗೆ ನಾಟಕ ಶಾಲೆಯಲ್ಲಿ ಕಲಿತ ನಟನೆಯ ಪ್ರಥಮ ಪಾಠಗಳು ನೆನಪಾದವು: ನಟ ತನ್ನ ಪಾತ್ರದೊಂದಿಗಿನ ತೊಡಗುವಿಕೆಯನ್ನು ಆರಂಭಿಸುವುದೇ ಈ ‘ರೆ’ ಅಥವಾ ‘IF’ ಎಂಬ ಪ್ರಶ್ನೆಯಿಂದ!

ಹಾಸ್ಯವೇ ಪ್ರಧಾನವಾಗಿದ್ದ ಈ ಕಾಲ್ಪನಿಕ ಕಥೆಯ ಕಟ್ಟಡದ ಚಿತ್ರದಲ್ಲಿ ಅನಂತನಾಗ್, ರಮೇಶ್ ಅರವಿಂದ್ ಮುಖ್ಯ ಭೂಮಿಕೆಯಲ್ಲಿದ್ದರು. ಅಪ್ಪಟ ಕನ್ನಡ ಪ್ರತಿಭೆಗಳಾದ ಸುಮನ್ ಹಾಗೂ ಹರ್ಷಿತಾ ಪೂಣಚ್ಚ ಅವರು ನಾಯಕಿಯರಾಗಿ ಅಭಿನಯಿಸುತ್ತಿದ್ದರು. ಮಿಕ್ಕಂತೆ ಪೋಷಕ ಕಲಾವಿದರ ದಂಡೇ ಚಿತ್ರದಲ್ಲಿತ್ತು— ಲೋಕನಾಥ್, ಶಿವರಾಂ, ಜಿ ಕೆ ಗೋವಿಂದ ರಾವ್ , ರಮೇಶ್ ಭಟ್, ಬಿರಾದಾರ್, ಶರತ್ ಲೋಹಿತಾಶ್ವ, ನಾನು…ಹೀಗೆ.

ವಿಶಾಲ ಬಂಗಲೆಯೊಂದರಲ್ಲಿ ಬಂದಿಯಾಗಿರುವ ಐದು ತಲೆಮಾರಿನ ಐದು ಆತ್ಮಗಳು ಮುಕ್ತಿಗಾಗಿ ಹಾತೊರೆಯುತ್ತಿರುತ್ತವೆ; ಆ ವಂಶದ ಕಿರಿಯ ಕುಡಿ, ಹುಡುಗಿಯೊಬ್ಬಳ ಪ್ರೇಮಪಾಶದಲ್ಲಿ ಸಿಲುಕಿ ಅವಳನ್ನೇ ಲಗ್ನವಾದ’ರೆ’ ಈ ಆತ್ಮಗಳಿಗೆ ಮುಕ್ತಿ! ಈ “ರೆ” ಸಾಧ್ಯವಾಗುವುದೇ ಎಂಬುದರ ಸ್ವಾರಸ್ಯಕರ ಅನಾವರಣವೇ ‘ರೆ’ ಚಿತ್ರದ ಹೂರಣ. ನನ್ನ ಪಾತ್ರವಂತೂ ಈ ಚಿತ್ರದಲ್ಲಿ ಸದಾ ಕುದುರೆಯ ಮೇಲೇ ಕುಳಿತಿರುವಂಥದ್ದು! ಅದಕ್ಕೂ ಒಂದು ಸ್ವಾರಸ್ಯಕರ ಹಿನ್ನೆಲೆಯ ಕಥೆ! ಹೀಗೆ ಒಟ್ಟಾರೆ ಹಾಸ್ಯವೇ ಮೂಲದ್ರವ್ಯವಾಗಿದ್ದರೂ, ಕಲಾವಿದರೆಲ್ಲರ ಚೇತೋಹಾರಿ ಅಭಿನಯವಿದ್ದರೂ, ದೇಸಾಯಿ ಅವರ ಸಮರ್ಥ ನಿರ್ದೇಶನವಿದ್ದರೂ ಚಿತ್ರ ನಿರೀಕ್ಷಿತ ಮಟ್ಟದ ಯಶಸ್ಸನ್ನು ಗಳಿಸದೇ ಹೋದದ್ದು ಬೇಸರದ ಸಂಗತಿ. 2014 ರಲ್ಲೇ ಚಿತ್ರೀಕರಣ ಆರಂಭವಾದರೂ ಮುಗಿದು ಚಿತ್ರ ತೆರೆಕಂಡದ್ದು 2016 ರಲ್ಲಿ. ಮೆಚ್ಚಿನ ನಿರ್ದೇಶಕ ದೇಸಾಯಿ ಅವರ ಚಿತ್ರದಲ್ಲಿ ಅಭಿನಯಿಸಿದ್ದು ಮಾತ್ರ ನನ್ನ ಪಾಲಿಗೆ ಸ್ಮರಣೀಯ ಅನುಭವ.

‘ಬಾನಜಗಲಿ’ಗೆ ಮರಳುವುದಾದರೆ:
‘ಬಾನಜಗಲಿ’ ಕವನಸಂಕಲನಕ್ಕೆ ಅತ್ಯಂತ ಮೌಲಿಕ ಮುನ್ನುಡಿಯನ್ನು ಬರೆದುಕೊಟ್ಟವರು ಡಾ॥ಮಲ್ಲೇಪುರಂ ಜಿ. ವೆಂಕಟೇಶ್. ಅತ್ಯಂತ ಪ್ರೀತಿಯಿಂದ ಹಾರೈಕೆಯ ನುಡಿಗಳನ್ನು ಬರೆದುಕೊಟ್ಟವರು ಡಾ॥ಹೆಚ್.ಎಸ್. ವೆಂಕಟೇಶ ಮೂರ್ತಿ ಅವರು. ಈ ಇಬ್ಬರು ಶ್ರೇಷ್ಠರ ಪ್ರೋತ್ಸಾಹದ ಮೆಚ್ಚುನುಡಿಗಳಿಂದ ರಂಜನಿಯ ಕೃತಿಯ ಮೌಲ್ಯ ಹೆಚ್ಚಿದ್ದು ನಿಜ. ಒಂದೆರಡು ಮಾತುಗಳನ್ನು ಗಮನಿಸುವುದಾದರೆ:
“ಶಬ್ದಶಕ್ತಿಗೆ ಇರುವ ಅರ್ಥಶಕ್ತಿ, ಪದಪ್ರತಿಭೆಗೆ ಇರುವ ಅರ್ಥಪ್ರತಿಭೆ—ಇವುಗಳ ಸುಸಾಂಗತ್ಯ ನಮ್ಮನ್ನು ಅಚ್ಚರಿಗೊಳಿಸುವಷ್ಟು ಇಲ್ಲಿಯ ಅನೇಕ ಕವಿತೆಗಳಲ್ಲಿ ಮನೆ ಮಾಡಿವೆ. ರಂಜನಿ ಪ್ರಭು ಅವರ ಕಾವ್ಯಾಭ್ಯಾಸ, ಪ್ರತಿಭೆ ಮತ್ತು ಕಾವ್ಯರಚನಾಶಕ್ತಿಗಳು ಓದುಗರನ್ನು ಮರುಳುಗೊಳಿಸುವಷ್ಟು ಪ್ರಭಾವವನ್ನು ಬೀರುತ್ತವೆ…”/ ಮಲ್ಲೇಪುರಂ ಜಿ. ವೆಂಕಟೇಶ್.
“ರಂಜನಿಪ್ರಭು ಅವರದ್ದೊಂದು ಸುಕುಮಾರ ಕಾವ್ಯಪ್ರಪಂಚ. ಅಲ್ಲಿ ಭಾಷೆ ಮಧುರ ಪುಲಕದ ತರಂಗಿಣಿಯಂತಿದೆ. ಲಯ ಸಿಹಿಯಾದ ಕೋಗಿಲೆಯ ಕುಕಿಲು, ವಿರಹವೂ ಹದಬಿಸಿಯ ಉರಿಸದ ಬಿಸುಪು. ಮಾಧುರ್ಯಪೂರ್ಣವಾದ ಒಂದು ಮಾರ್ದವದ ಜಗತ್ತು ಅದು.”/ ಡಾ॥ಹೆಚ್.ಎಸ್.ವೆಂಕಟೇಶ ಮೂರ್ತಿ.

‘ಬಾನಜಗಲಿ’ ಕವನಸಂಕಲನದ ಲೋಕಾರ್ಪಣೆ ನೆರವೇರಿದ್ದು 2013 ಅಕ್ಟೋಬರ್ 26 ನೇ ತಾರೀಖು ಶನಿವಾರ ಸಂಜೆ ಬಸವನಗುಡಿಯ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ. ಕೃತಿಯನ್ನು ಲೋಕಾರ್ಪಣೆಗೊಳಿಸಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ಗಾಯಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಮುಖ್ಯ ಅತಿಥಿಗಳಾಗಿ ಪ್ರಸಿದ್ಧ ಕವಿ ಬಿ.ಆರ್. ಲಕ್ಷ್ಮಣರಾವ್ ಆಗಮಿಸಿದ್ದರು. ಹೆಚ್ ಎಸ್ ವಿ ಹಾಗೂ ಮಲ್ಲೇಪುರಂ ಅವರಿಗೆ ಗೌರವಾರ್ಪಣೆ ಸಲ್ಲಿಸುವ ಕಾರ್ಯಕ್ರಮ ಹಾಗೂ ಉಪಾಸನಾ ಮೋಹನ್ ಅವರ ಉಪಾಸನಾ ಸಂಸ್ಥೆಯ ಕಲಾವಿದರಿಂದ ರಂಜನಿಯ ಗೀತೆಗಳ ಗಾಯನವೂ ಸಹಾ ಆಯೋಜನೆಗೊಂಡಿದ್ದವು. ಕವಿ ಬಿ ಆರ್ ಎಲ್ ಅವರು ಹಲವಾರು ಕವಿತೆಗಳನ್ನು ಉಲ್ಲೇಖಿಸಿ ಮೆಚ್ಚಿ ವಿಶ್ಲೇಷಿಸಿದರೆ, ಗಾಯಕ ಸುಬ್ಬಣ್ಣ ಅವರು, ‘ಮುಗುಳುನಗೆಯ ಕೆಂದಾವರೆಯೇ’ ಗೀತೆಗೆ ತಾವೇ ಸ್ವರಸಂಯೋಜನೆ ಮಾಡಿ ಹಾಡಿ ರಂಜಿಸಿದರು. ಖ್ಯಾತ ನಿರೂಪಕ ಜಿ.ಪಿ.ರಾಮಣ್ಣ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ಅನೇಕ ಬಂಧು ಮಿತ್ರರು, ಗಣ್ಯ ಕಲಾವಿದರು ಹಾಗೂ ಸಹೃದಯರು ಭಾಗಿಯಾಗಿ ಪ್ರೋತ್ಸಾಹಿಸಿದರು. ಉಭಯಗಾನ ವಿದುಷಿ, ಗುರು ಶ್ಯಾಮಲಾ ಭಾವೆ, ಶ್ರೇಷ್ಠ ನಾಟಕಕಾರ—ನಿರ್ದೇಶಕ ಟಿ.ಎನ್. ಸೀತಾರಾಂ, ಪ್ರಸಿದ್ಧ ಸಾಹಿತಿ ದಂಪತಿಗಳಾದ ಕೃಷ್ಣಶರ್ಮ ಹಾಗೂ ಸಂಧ್ಯಾ ಶರ್ಮ, ಪ್ರಸಿದ್ಧ ಗಾಯಕ ಮುದ್ದುಕೃಷ್ಣ, ಪ್ರಸಿದ್ಧ ಕವಯಿತ್ರಿ—ಸಾಹಿತಿ ಎಂ ಆರ್ ಕಮಲ… ಇಂತಹ ಖ್ಯಾತನಾಮರ ಉಪಸ್ಥಿತಿ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತ್ತು. ತುಂಬಾ ಅಚ್ಚುಕಟ್ಟಾಗಿ ನಡೆದ ಸರಳ ಸುಂದರ ಕಾರ್ಯಕ್ರಮ ತಲ್ಲಣ—ಒತ್ತಡಗಳಲ್ಲಿ ಬಳಲಿದ್ದ ನಮ್ಮ ಮನಗಳಿಗೆ ಅಮೃತಸಿಂಚನವಾಯಿತು.

। ಮುಂದುವರೆಯುವುದು ।

‍ಲೇಖಕರು Admin

10 October, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading