ಶ್ರೀನಿವಾಸ ಪ್ರಭು ಅಂಕಣ: ಜೈಲಿನೊಳಗೆ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

101

ನಾಟಕದ ವಿಭಾಗಕ್ಕೆ ಮರಳಿ ಬಂದ ಮೇಲೆ ಎಷ್ಟೋ ನಿರಾಳ ಮನಸ್ಸಿನಿಂದ ರಂಗ ಚಟುವಟಿಕೆಗಳಲ್ಲಿ ತೊಡಗಿಕೊಂಡೆ. ಒಂದು ದಿನ ಮಧ್ಯಾಹ್ನ ನನ್ನನ್ನು ಭೇಟಿಯಾಗಲು ರಂಗಕರ್ಮಿಯೊಬ್ಬರು ಬಂದರು. ಅವರೇ ಹುಲಗಪ್ಪ ಕಟ್ಟೀಮನಿ. ಆಗ ಅವರು ಮೈಸೂರಿನಲ್ಲಿ ಕಾರಂತ ಮೇಷ್ಟ್ರು ಪ್ರಾರಂಭಿಸಿದ್ದ ʻರಂಗಾಯಣʼದಲ್ಲಿ ಕಲಾವಿದರಾಗಿ ಸೇರಿಕೊಂಡು ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದರು. ʻರಂಗಾಯಣʼದ ಪ್ರತಿನಿಧಿಯಾಗಿ ಯಾವುದಾದರೊಂದು ನಾಟಕವನ್ನು ದೂರದರ್ಶನಕ್ಕಾಗಿ ಸಿದ್ಧಪಡಿಸಿಕೊಡುವ ಸಲುವಾಗಿ ಮಾತಾಡಲು ಬಂದಿರಬಹುದೆಂಬುದು ನನ್ನ ಎಣಿಕೆಯಾಗಿತ್ತು.

ಆದರೆ ಅವರು ಬಂದ ಉದ್ದೇಶ ಸಂಪೂರ್ಣ ಬೇರೆಯದೇ ಆಗಿತ್ತು. “ಪ್ರಭು ಸರ್, ನಿಮ್ಮನ್ನು ಜೈಲಿಗೆ ಕರೆದುಕೊಂಡು ಹೋಗೋಣ ಅಂತ ವಿಚಾರ ಮಾಡ್ತಿದೀನಿ. ಏನಂತೀರಿ?” ಎಂದರು ಹುಲಗಪ್ಪ. “ಯಾಕೆ ಸ್ವಾಮೀ ಇಂಥಾ ದುರಾಲೋಚನೆ ನಿಮಗೆ? ಜೀವನದಲ್ಲಿ ನಾನು ಸಣ್ಣಪುಟ್ಟ ತಪ್ಪುಗಳನ್ನ ಸಾಕಷ್ಟು ಮಾಡಿದೀನಿ ನಿಜ. ಆದರೆ ಜೈಲು ಪಾಲಾಗುವಂಥ ಯಾವ ಅಪರಾಧವನ್ನೂ ನಾನು ಮಾಡಿಲ್ಲವೇ!” ಎಂದು ನಾನೂ ನಗುತ್ತಲೇ ನುಡಿದೆ. ಹುಲಗಪ್ಪನವರು ನಗುತ್ತಲೇ ತಮ್ಮ ಯೋಜನೆಯನ್ನು ನನ್ನ ಮುಂದಿಟ್ಟರು: “ನಾನು ಒಂದು ಮಹತ್ವದ ಯೋಜನೆಯನ್ನ ರೂಪಿಸಿದ್ದೇನೆ ಪ್ರಭು ಸರ್… ಬಳ್ಳಾರಿಯ ಜೈಲಿನ ಅಪರಾಧಿಗಳು ಹಾಗೂ ಆರೋಪಿಗಳಿಗೆ ಒಂದು ನಾಟಕ ಮಾಡಿಸ್ತಿದೇನೆ… ಬಹಳ ಕಷ್ಟಪಟ್ಟು ಸಂಬಂಧಪಟ್ಟ ಅಧಿಕಾರಿಗಳನ್ನ ಒಪ್ಪಿಸಿ ಮಂಜೂರಾತಿ ಪಡಕೊಂಡಿದೇನೆ… ರಿಹರ್ಸಲ್ ಈಗಾಗಲೇ ಪ್ರಾರಂಭವಾಗಿದೆ. ಇನ್ನೊಂದು ವಾರದಲ್ಲಿ ನಾಟಕ ಸಿದ್ಧವಾಗಿಬಿಡುತ್ತೆ… ನನಗೆ ತಿಳಿದಮಟ್ಟಿಗೆ ಇದೊಂದು ವಿಶಿಷ್ಟ ಪ್ರಯತ್ನ… ಹಿಂದೆ ಯಾರಾದರೂ ಮಾಡಿದಾರೋ ಇಲ್ಲವೋ ಗೊತ್ತಿಲ್ಲ… ಈ ನಾಟಕವನ್ನ ದೂರದರ್ಶನಕ್ಕೆ ಅಳವಡಿಸಿಕೊಳ್ಳೋದಕ್ಕೆ ಸಾಧ್ಯವೇ? ಕಾರಣಾಂತರಗಳಿಂದ ಜೈಲು ಸೇರಿ ಅಪರಾಧಿ ಅನ್ನೋ ಹಣೆಪಟ್ಟಿ ಹಚ್ಚಿಕೊಂಡಿರೋ ಅಂಥವರ ಒಳಗೆ ಹುದುಗಿರುವ ಕಲಾವಿದನನ್ನು ಹೊರಜಗತ್ತಿಗೆ ಪರಿಚಯ ಮಾಡಿಸಿಕೊಡುವ ಮಹತ್ವಾಕಾಂಕ್ಷೆ ನನ್ನದು… ನಿಮ್ಮ ನೆರವು ಸಿಕ್ಕರೆ ರಾಜ್ಯದ ಸಮಸ್ತ ಜನತೆಗೆ ನಮ್ಮ ಈ ವಿಶೇಷ ಪ್ರಯತ್ನವನ್ನು ತಲುಪಿಸಿದ ಹಾಗಾಗುತ್ತೆ… ನಮ್ಮ ಶ್ರಮವೂ ಸಾರ್ಥಕವಾಗುತ್ತೆ”. ಹುಲಗಪ್ಪನವರ ಮಾತು ಕೇಳಿ ನನ್ನಲ್ಲೂ ಉತ್ಸಾಹ ಗರಿಗೆದರಿತು!

ನಿಜಕ್ಕೂ ಇದೊಂದು ವಿಶೇಷ ಹಾಗೂ ಸ್ತುತ್ಯರ್ಹ ಪ್ರಯತ್ನ ಅನ್ನುವುದರಲ್ಲಿ ಅನುಮಾನವೇ ಇರಲಿಲ್ಲ. ಆ ವೇಳೆಗಾಗಲೇ ಹುಲಗಪ್ಪ ಕಟ್ಟೀಮನಿಯವರು ರಂಗಭೂಮಿಯಲ್ಲಿ ಅತ್ಯುತ್ತಮ ನಟನೆಂದು ಪ್ರಸಿದ್ಧರಾಗಿದ್ದರು. “ನಿಮ್ಮ ಈ ಜೈಲು ನಾಟಕವನ್ನು ಖಂಡಿತ ದೂರದರ್ಶನಕ್ಕೆ ಅಳವಡಿಸಿಕೊಳ್ತೇನೆ ಹುಲಗಪ್ಪನವರೇ. ನಾಟಕ ಸಿದ್ಧವಾಗ್ತಿದ್ದ ಹಾಗೇ ನನಗೆ ತಿಳಿಸಿ. ಎರಡು ದಿನ ಸ್ಟುಡಿಯೋ ಬುಕ್ ಮಾಡಿಬಿಡ್ತೇನೆ. ನಾಟಕದ ರೆಕಾರ್ಡಿಂಗ್ ಮುಗಿಸಿಬಿಡೋಣ”, ಎಂದು ಉತ್ಸಾಹದಿಂದಲೇ ನಾನು ಹೇಳಿದೆ. ಒಂದು ಕ್ಷಣ ಹುಲಗಪ್ಪ ಏನೂ ಮಾತಾಡದೇ ಸುಮ್ಮನಿದ್ದರು. ಅರೆ! ನಾಟಕ ಮಾಡಿಸುತ್ತೇನೆಂದು ಹೇಳಿದರೂ ಈ ಮನುಷ್ಯ ಸಂಭ್ರಮಿಸುತ್ತಲೇ ಇಲ್ಲವಲ್ಲಾ ಎಂದು ನಾನೂ ಸೋಜಿಗದಿಂದ ಅವರನ್ನೇ ದಿಟ್ಟಿಸಿದೆ. ನಿಧಾನವಾಗಿ ಹುಲಗಪ್ಪ ಹೇಳಿದರು: ” ಪ್ರಭು ಸರ್, ಜೈಲುವಾಸಿಗಳಿಗೆ ನಾಟಕ ಮಾಡಿಸೋದಕ್ಕೆ ಪರವಾನಗಿ ತೆಗೆದುಕೊಳ್ಳೋದಕ್ಕೇ ಹರಸಾಹಸ ಮಾಡಬೇಕಾಗಿ ಬಂತು… ಇನ್ನು ಅವರನ್ನ ಜೈಲಿನ ನಾಲ್ಕು ಗೋಡೆಗಳ ನಡುವಿನಿಂದ ಆಚೆ ಕರಕೊಂಡು ಬಂದು ಸ್ಟುಡಿಯೋದಲ್ಲಿ ನಾಟಕ ಮಾಡಿಸೋದಕ್ಕೆ ಸಾಧ್ಯವೇ!? ದೇವರಾಣೆ ಯಾರೂ ಇದಕ್ಕೆ ಒಪ್ಪಿಗೆ ಕೊಡೋಲ್ಲ ಸರ್… ಅಕಸ್ಮಾತ್ತಾಗಿ ಕೊಟ್ರೂ 20-30 ಅಪರಾಧಿಗಳನ್ನ ಹೊರ ಕರೆತಂದು ನಾಟಕ ಮಾಡಿಸೋ ಜವಾಬ್ದಾರಿಯನ್ನ ನಾನು ಹೊತ್ತುಕೊಳ್ಳೋಕಾಗಲ್ಲ ಸರ್… ನೀವೇ ನಿಮ್ಮ ಕ್ಯಾಮರಾ ಇತ್ಯಾದಿ ಪರಿಕರಗಳನ್ನು ತೆಗೆದುಕೊಂಡು ಬಳ್ಳಾರಿಗೇ ಬಂದರೆ, ಜೈಲಿನ ಆವರಣದಲ್ಲೇ ನೀವು ಚಿತ್ರೀಕರಣ ಮಾಡಿಕೊಂಡು ಬರಬಹುದು”.

ಅರೆ! ಹೌದಲ್ಲವೇ! ಅಷ್ಟು ಜನ ಆರೋಪಿ ಯಾ ಅಪರಾಧಿ ಪಟ್ಟಿ ಹಚ್ಚಿಕೊಂಡವರನ್ನು ಹೊರಕರೆತರೋದು ಅಸಾಧ್ಯದ ಮಾತು. ನಾವೇ ಅಲ್ಲಿಗೆ ಹೋಗಿ ಚಿತ್ರೀಕರಣ ಮುಗಿಸಿಕೊಂಡು ಬರಬೇಕು! ಓಹೋ! ಈ ಕಾರಣಕ್ಕಾಗಿಯೇ ಹುಲಗಪ್ಪ ಆಗಲೇ, ‘ನಿಮ್ಮನ್ನ ಜೈಲಿಗೆ ಸೇರಿಸೋಣ ಅಂತ ವಿಚಾರ ಮಾಡ್ತಿದೀನಿ’ ಅಂದದ್ದು! ಜೈಲಿಗೇ ಹೋಗಿ ಜೈಲುವಾಸಿಗಳ ನಾಟಕವನ್ನು ಚಿತ್ರೀಕರಿಸುವುದು ಒಂದು ವಿಶೇಷ ಹಾಗೂ ರೋಮಾಂಚಕಾರಿ ಅನುಭವವಾಗುವುದರಲ್ಲಿ ಯಾವ ಅನುಮಾನವೂ ಇರಲಿಲ್ಲ. “ಆಯಿತು ಹುಲಗಪ್ಪ, ನಾಟಕ ಸಿದ್ಧವಾಗುತ್ತಿದ್ದಂತೆ ತಿಳಿಸಿ… ನಾನೂ ಕೇಂದ್ರದ ನಿರ್ದೇಶಕರೊಟ್ಟಿಗೆ ಚರ್ಚಿಸಿ ಪರವಾನಗಿ ತೆಗೆದುಕೊಂಡು ಬಿಡುತ್ತೇನೆ… ಇದು ಒಂದು ವಿಶೇಷ ಕಾರ್ಯಕ್ರಮವೇ ಆಗಲಿದೆ ದೂರದರ್ಶನದ ಪಾಲಿಗೆ” ಎಂದು ಆಶ್ವಾಸನೆ ಕೊಟ್ಟು ಹುಲಗಪ್ಪನವರನ್ನು ಕಳಿಸಿಕೊಟ್ಟೆ. ಕೇಂದ್ರದ ನಿರ್ದೇಶಕ ಎನ್.ಜಿ. ಶ್ರೀನಿವಾಸ್ ಅವರು ನಮ್ಮ ಈ ಸಾಹಸಕ್ಕೆ ಪರವಾನಗಿ ಕೊಟ್ಟದ್ದಷ್ಟೇ ಅಲ್ಲ, “ನಾನೂ ಒಂದು ದಿನದ ಮಟ್ಟಿಗೆ ಚಿತ್ರೀಕರಣ ನೋಡೋದಕ್ಕೆ ಬರ್ತೀನಿ” ಎಂದು ತುಂಬು ಉತ್ಸಾಹದಿಂದ ನುಡಿದರು!

ಇದಾದ ಸ್ವಲ್ಪ ದಿನಗಳಿಗೇ ʻನಾಟಕ ಸಂಪೂರ್ಣವಾಗಿ ಸಿದ್ಧವಾಗಿದೆ… ನೀವು ಯಾವಾಗ ಬೇಕಾದರೂ ಚಿತ್ರೀಕರಣಕ್ಕೆ ಬರಬಹುದು’ ಎಂದು ಹುಲಗಪ್ಪನವರು ಸಂದೇಶ ನೀಡಿದರು. ನಾವೂ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಂಡು ಬಳ್ಳಾರಿಗೆ ಹೊರಟೇಬಿಟ್ಟೆವು. ಶ್ರೀನಿವಾಸ್ ಅವರು ಚಿತ್ರೀಕರಣದ ಕೊನೆಯ ದಿನ ಅಲ್ಲಿಗೆ ಬರುತ್ತೇನೆಂದು ಭರವಸೆ ನೀಡಿ ನಮ್ಮನ್ನು ಕಳಿಸಿಕೊಟ್ಟರು.

ಆಗ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಜೆ.ಹೆಚ್. ಪಟೇಲ್ ಅವರನ್ನು ಸಚಿವ ಎಂ.ಪಿ. ಪ್ರಕಾಶ್ ಅವರನ್ನು ಬಳ್ಳಾರಿಗೆ ಕರೆದುಕೊಂಡು ಹೋಗಿ ಜೈಲುನಾಟಕ ತೋರಿಸಿದ್ದರಂತೆ. ಬಳ್ಳಾರಿಯ ಜೈಲುವಾಸಿ ಸೋದರರಿಗಾಗಿ ಹುಲಗಪ್ಪನವರು ಮಾಡಿಸಿದ ನಾಟಕ – ʻಕಾಲನೇಮʼ. ನಾಟಕಕಾರರು ಮಂಜುನಾಥ ಬೆಳಕೆರೆ… ಇವರೂ ಸಹಾ ರಂಗಾಯಣದಲ್ಲಿ ಕಲಾವಿದರಾಗಿ ಕೆಲಸ ಮಾಡುತ್ತಿದ್ದವರೇ. ಸ್ಥೂಲವಾಗಿ ಕಾಲನೇಮ ನಾಟಕದ ವಸ್ತುವನ್ನು ಗಮನಿಸುವುದಾದರೆ: “ಒಬ್ಬ ದುಷ್ಟ ರಾಜ… ಒಮ್ಮೆ ಆ ರಾಜನಿಗೆ ಕಾಡಿನಲ್ಲಿ ʻಕಾಲʼನೊಂದಿಗೆ ಮುಖಾಮುಖಿಯಾಗುತ್ತದೆ. ʻನಿನ್ನ ಸಮಯ ಮುಗಿದಿದೆ. ನನ್ನೊಂದಿಗೆ ಹೊರಡು’ ಎಂದು ಕಾಲ ರಾಜನಿಗೆ ಹೇಳುತ್ತಾನೆ. ʻಅಯ್ಯಾ ಕಾಲಪುರುಷ, ನನಗಿನ್ನೂ ಒಂದಿಷ್ಟು ಸಮಯ ಬದುಕುವ ಆಸೆಯಿದೆ… ಆ ನನ್ನ ಆಸೆಯನ್ನು ಈಗಲೇ ಚಿವುಟಿ ಹಾಕಿಬಿಡಬೇಡ… ದಯವಿಟ್ಟು ನನಗೆ ಬದುಕಲು ಬಿಡುʼ ಎಂದು ರಾಜ ಅಂಗಲಾಚಿ ಬೇಡಿಕೊಳ್ಳುತ್ತಾನೆ. “ನೀನು ನಿನ್ನ ಬದುಕಿನಲ್ಲಿ ಮಾಡಿರುವ  ಪಾಪಗಳನ್ನು ಯಾರಾದರೂ ಹಂಚಿಕೊಂಡರೆ ಮತ್ತೆ ನಿನಗೆ ಬದುಕಲು ಬಿಡುತ್ತೇನೆ”, ಎನ್ನುತ್ತಾನೆ ಕಾಲ! ರಾಜ ಪರಮಸಂತೋಷದಿಂದ ಅರಮನೆಗೆ ಓಡೋಡಿ ಬಂದು ತನ್ನ ಪಾಪಗಳನ್ನು ಹಂಚಿಕೊಳ್ಳಬೇಕೆಂದು ತಂದೆತಾಯಿಯರನ್ನು ಪ್ರಾರ್ಥಿಸಿಕೊಳ್ಳುತ್ತಾನೆ. ʻಸಾಧ್ಯವೇ ಇಲ್ಲʼವೆಂದು ಅವರು ನಿರಾಕರಿಸಿದಾಗ ರಾಜನಿಗೆ ಆಘಾತವಾಗುತ್ತದೆ. ಗಾಯದ ಮೇಲೆ ಬರೆ ಎಳೆದಂತೆ ಹೆಂಡತಿ – ಮಕ್ಕಳು, ಬಂಧುಬಾಂಧವರು, ಮಂತ್ರಿಗಳು, ಪ್ರಜೆಗಳು… ಎಲ್ಲರಿಂದಲೂ ಪಾಪ ಹಂಚಿಕೆಗೆ ನಿರಾಕರಣೆಯೇ ವ್ಯಕ್ತವಾಗುತ್ತದೆ! ಹತಾಶನಾದ ರಾಜ ಪಶ್ಚಾತ್ತಾಪದಿಂದ ಒಳಗೊಳಗೇ ಬೇಯುತ್ತಾ ಬೇರೆ ದಾರಿಯೇ ಇಲ್ಲದೆ ಕಾಲನ ಜೊತೆ ಹೊರಡಲು ಸಿದ್ಧನಾಗುತ್ತಾನೆ”.

ಮೇಲ್ನೋಟಕ್ಕೇ ಬೆಳಕೆರೆಯವರು ಆಲ್ಬರ್ಟ್ ಕಾಮೂನ ʻಮಿಥ್ ಆಫ್ ಸಿಸಿಫಸ್ʼನಿಂದ ಸ್ಫೂರ್ತಿ ಪಡೆದಿರುವುದು ನಿಚ್ಚಳವಾಗಿ ಕಂಡರೂ ಪಾಪಪ್ರಜ್ಞೆಯಿಂದ ನರಳುತ್ತಾ ಆತ್ಮಶೋಧನೆಗೆ ತೊಡಗುವ ದೊರೆಯ ಕಥೆ ಕೈದಿಗಳ ಮನಸ್ಸಿನ ಮೇಲೆ ವಿಶೇಷ ಪರಿಣಾಮ ಬೀರುವುದರಲ್ಲಿ ಅನುಮಾನವಿರಲಿಲ್ಲ. ಕಾಲನೇಮ ನಾಟಕ ಗೆಲ್ಲುವುದೂ ಇಲ್ಲಿಯೇ. ಅನೇಕ ಕರಕುಶಲ ಕಲೆಗಳಲ್ಲಿ, ಧ್ಯಾನ – ಯೋಗ ಮುಂತಾದ ಅಂತರ್ಮುಖೀ ಚಟುವಟಿಕೆಗಳಲ್ಲಿ ಕೈದಿಗಳು ಸೃಜನಾತ್ಮಕವಾಗಿ ತೊಡಗಿಕೊಳ್ಳುವಂತೆ ಮಾಡಿ ಅವರೊಳಗೆ ಹುದುಗಿರುವ ಕಲಾವಿದನನ್ನು ಪ್ರಕಾಶಕ್ಕೆ ತರುವ ಸ್ತುತ್ಯರ್ಹ ಕಾರ್ಯದಲ್ಲಿ ದೊಡ್ಡ ಯಶಸ್ಸನ್ನೇ ಕಂಡಿದ್ದರು ಹುಲಗಪ್ಪ.

ನಮಗಂತೂ ಈ ಜೈಲು ನಾಟಕದ ಚಿತ್ರೀಕರಣ ಒಂದು ವಿಶೇಷ ಅನುಭವದ ಹೆಬ್ಬಾಗಿಲನ್ನೇ ತೆರೆದುಬಿಟ್ಟಿತೆಂದರೆ ಅತಿಶಯೋಕ್ತಿಯಲ್ಲ. ನಾನಂತೂ ಚಿತ್ರೀಕರಣದ ಜೊತೆಜೊತೆಗೇ ಅಲ್ಲಿನ ಅನೇಕ ಕೈದಿಗಳ ಜತೆ ಮಾತಾಡಿ ಅವರ ನೋವು-ಸಂಕಟ-ಅಪರಾಧದ ಹಿನ್ನೆಲೆಗಳನ್ನು ತಿಳಿಯುವ ಪ್ರಯತ್ನವನ್ನೂ ಮಾಡಿದೆ. ಎಷ್ಟೋ ವಿಚಾರಣಾಧೀನ ಕೈದಿಗಳಿಗೆ ತಾವು ಯಾವ ಅಪರಾಧಕ್ಕಾಗಿ ಜೈಲುಪಾಲಾಗಿದ್ದೇವೆ ಎಂಬುದೂ ಸಹಾ ಅರಿವಿರಲಿಲ್ಲ! ಒಬ್ಬ ವ್ಯಕ್ತಿಯ ಕೊಲೆಯ ಆರೋಪದ ಮೇಲೆ ಯಾರದೋ ದೂರಿನನ್ವಯ ಶಂಕಿತ ಅಪರಾಧಿಗಳೆಂದು ಮೂವತ್ತಕ್ಕೂ ಹೆಚ್ಚು ಜನರನ್ನು ಬಂಧಿಸಿಟ್ಟಿದ್ದ ಪ್ರಸಂಗವೂ ಎದುರಾಗಿ ದಿಗ್ಭ್ರಮೆಯಾಗಿ ಹೋಯಿತು. ಕೆಲವರ ಕಣ್ಣಲ್ಲಿ ತುಳುಕುತ್ತಿದ್ದ ವಿಷಾದ ಒಳಗಿನ ಪಶ್ಚಾತ್ತಾಪಕ್ಕೆ ಕನ್ನಡಿಯಾಗಿದ್ದರೆ, ಮತ್ತೆ ಕೆಲವರಲ್ಲಿ ʻತಾನು ಮಾಡಿದ್ದೇ ಸರಿʼ ಎಂಬಂತಹ ಹಮ್ಮು – ಆವೇಶ!

ತಾವು ಅನುಭವಿಸಿದ ಅನೇಕ ಸಂದಿಗ್ಧ ಕ್ಷಣಗಳನ್ನೂ ಹುಲಗಪ್ಪ ಸಹಾ ನಮ್ಮೊಂದಿಗೆ ಹಂಚಿಕೊಂಡರು: ಜೈಲಿನಲ್ಲಿಯೂ ಹಲವಾರು ಬಣಗಳು… ಒಂದೊಂದು ಬಣಕ್ಕೆ ಒಬ್ಬೊಬ್ಬ ನಾಯಕ. ಅಂತಹ ಇಬ್ಬರು ನಾಯಕರಿಗೆ ನಾಟಕದಲ್ಲಿ ಪ್ರಮುಖ ಪಾತ್ರ ಕೊಡಲೇ ಬೇಕಿತ್ತು ಹುಲಗಪ್ಪ. ಎರಡು ತಂಡಗಳಾಗಿ ಮಾಡಿಕೊಂಡು ತಾಲೀಮು ನಡೆಸುವಷ್ಟು ಸಮಯಾವಕಾಶ ಇರದ ಕಾರಣಕ್ಕೆ ಹುಲಗಪ್ಪ ಹೊಸ ರೀತಿಯ ಯೋಜನೆ ಹಾಕಿಕೊಂಡಿದ್ದರು: ʻನಾಟಕದ ಪ್ರಥಮಾರ್ಧದಲ್ಲಿ ನಾಟಕದ ನಾಯಕನ ಪಾತ್ರವನ್ನು ಒಂದು ಬಣದ ನಾಯಕ ಅಭಿನಯಿಸುವುದು; ದ್ವಿತೀಯಾರ್ಧದಲ್ಲಿ ಅದೇ ಪಾತ್ರವನ್ನು ಮತ್ತೊಂದು ಬಣದ ನಾಯಕ ಅಭಿನಯಿಸುವುದು! ಬಣದ ನಾಯಕರನ್ನು ಎದುರು ಹಾಕಿಕೊಂಡು ಜೈಲಿನಲ್ಲಿ ಪೂರೈಸುವುದಾದರೂ ಸಾಧ್ಯವೇ!ʼ ʻಪ್ರೇಕ್ಷಕರಿಗೆ ಈ ಪಾತ್ರ ವಿಭಜನೆಯಿಂದ ಗೊಂದಲವಾಗುವುದಿಲ್ಲವೇ?ʼ ಎಂದು ಹುಲಗಪ್ಪನವರನ್ನು ಕೇಳಿದರೆ, ಅವರು “ಒಂದು ಅನೌನ್ಸ್‌ಮೆಂಟ್ ಮೂಲಕ ಆ ಗೊಂದಲ ನಿವಾರಿಸಬಹುದು ಸರ್… ಇಲ್ಲದಿದ್ದರೆ ನನ್ನ ಅಸ್ತಿತ್ವವೇ ಗೊಂದಲದಲ್ಲಿ ಬಿದ್ದುಬಿಡುತ್ತೆ” ಎನ್ನುವುದೇ! ಅದರಲ್ಲಿ ಒಂದು ಬಣದ ನಾಯಕನಿಗೆ ವಿಶೇಷ ಪರವಾನಗಿಯ ಮೇಲೆ ಮನೆಯಿಂದಲೇ ಊಟ ಬರುತ್ತಿತ್ತಂತೆ! ಮತ್ತೊಂದು ಬಣದ ನಾಯಕನಿಗೆ ಅಳಿಲೆಂದರೆ ವಿಶೇಷ ಪ್ರೀತಿ! ಒಂದು ಅಳಿಲನ್ನು ಹಿಡಿದು ಸಾಕಿಕೊಂಡಿದ್ದ ಆತ, ಅದರ ಕುತ್ತಿಗೆಗೆ ಒಂದು ಹಗುರಾದ ದಾರ ಕಟ್ಟಿ ಇಟ್ಟುಕೊಂಡಿದ್ದ. ಅದೋ ಸುಮಾರು 100-150 ಮೀಟರ್‌ಗಳಷ್ಟು ಉದ್ದದ ದಾರ! ಅಳಿಲು ಆರಾಮವಾಗಿ ಮರದ ಮೇಲೆಲ್ಲಾ ಓಡಾಡಿಕೊಂಡು ದಣಿವಾದಾಗ ಮಾಲೀಕನ ಬಳಿ ಬಂದು ಮಲಗುತ್ತಿತ್ತು!

ಜೈಲಿನಲ್ಲಿ ಮೂರು ದಿನಗಳ ಕಾಲ ಚಿತ್ರೀಕರಣವನ್ನು ನಡೆಸಿದೆವು. ಮುಖ್ಯಪಾತ್ರಗಳಲ್ಲಿದ್ದ ಕೆಲ ಕಲಾವಿದರು ನುರಿತ ನಟರಂತೆಯೇ ಅಭಿನಯಿಸುತ್ತಿದ್ದುದು ಅಚ್ಚರಿಯನ್ನುಂಟು ಮಾಡಿತ್ತು. ಜೈಲಿನ ಆವರಣದಲ್ಲಿಯೇ ಇದ್ದ ವಿಶಾಲ ಬಯಲಿನಲ್ಲಿ ಸ್ಟೇಜ್ ನಿರ್ಮಿಸಿಕೊಂಡು ಒಂದಷ್ಟು ದೃಶ್ಯಗಳನ್ನು ಚಿತ್ರೀಕರಿಸಿದೆವು. ಮತ್ತಷ್ಟು ದೃಶ್ಯಗಳ ಚಿತ್ರೀಕರಣ ಅಲ್ಲಿಯೇ ಹೊರಾಂಗಣದಲ್ಲಿ ನಡೆಯಿತು. ಹೋದ ಮೊದಲ ದಿನ ನಮ್ಮಲ್ಲಿದ್ದ ಅಳುಕು-ಆತಂಕಗಳೆಲ್ಲಾ ಬಲು ಬೇಗ ನಿವಾರಣೆಯಾಗಿ ಅಲ್ಲಿನ ಕೈದಿಗಳು, ಸಿಬ್ಬಂದಿ ವರ್ಗದವರು, ಅಧಿಕಾರಿಗಳು ಎಲ್ಲರೂ ಆತ್ಮೀಯ ಗೆಳೆಯರಂತಾಗಿಬಿಟ್ಟರು.

ಆ ಜೈಲಾದರೂ ಅಷ್ಟೇ… ʻನಾಲ್ಕು ಗೋಡೆಗಳ ನಡುವಣ ಉಸಿರುಗಟ್ಟಿಸುವ ವಾತಾವರಣʼ ಎಂಬ ಜೈಲಿನ ರೂಢಿಗತ ಕಲ್ಪನೆಗೆ ತದ್ವಿರುದ್ಧವಾಗಿತ್ತು ಅಲ್ಲಿಯ ವಾತಾವರಣ. ಮಾತು ಕೊಟ್ಟಿದ್ದಂತೆ ನಮ್ಮ ಕೇಂದ್ರದ ನಿರ್ದೇಶಕ ಶ್ರೀನಿವಾಸ್ ಅವರು ಕೊನೆಯ ದಿನದ ಚಿತ್ರೀಕರಣದ ವೇಳೆಗೆ ಅಲ್ಲಿಗೆ ಬಂದು ನಮ್ಮೊಟ್ಟಿಗಿದ್ದದ್ದು ತಂಡದ ಹುರುಪು-ಉತ್ಸಾಹಗಳನ್ನು ಗಣನೀಯವಾಗಿ ಹೆಚ್ಚಿಸಿತು. ಹುಲಗಪ್ಪನವರು ನಮ್ಮ ಇಡೀ ತಂಡಕ್ಕೆ ಅಗತ್ಯ ಅನುಕೂಲಗಳನ್ನೆಲ್ಲಾ ಸೊಗಸಾಗಿ ಮಾಡಿಕೊಟ್ಟಿದ್ದರು. ಚಿತ್ರೀಕರಣ ಮುಗಿಸಿ ಎಲ್ಲರಿಂದ ಬೀಳ್ಕೊಂಡು ಊರಿಗೆ ಮರಳಿ ಹೊರಟಾಗ ಹಲವರ ಕಣ್ಣಂಚಿನಲ್ಲಿ ನೀರು! ಯಾವುದೋ ಒಂದು ಕ್ಷಣದ ಆವೇಗ-ದುಡುಕಿನಲ್ಲಿ ಘಟಿಸಿ ಬಿಡುವ ತಪ್ಪೊಂದರಿಂದ ಒಬ್ಬ ವ್ಯಕ್ತಿಯನ್ನು ಶಾಶ್ವತ ಅಪರಾಧಿ ಎಂದು ಘೋಷಿಸಲಾದೀತೇ? ಎಂದು ಒಂದು ಕಡೆ ಅನ್ನಿಸಿದರೆ, ಇಷ್ಟು ಹೃದಯವಂತಿಕೆ-ಅಂತಃಕರಣ-ಪ್ರೀತಿ-ವಿಶ್ವಾಸಗಳು ತುಂಬಿರುವ ವ್ಯಕ್ತಿ ಅಪರಾಧವೆಸಗಲು ಹೇಗೆ ತಾನೇ ಸಾಧ್ಯವಾಗುತ್ತದೆ ಎಂಬ ಪ್ರಶ್ನೆಯೂ ಕಾಡತೊಡಗಿ ಮನಸ್ಸು ಕ್ಷೋಭೆಗೊಂಡಿತು. ಇದರ ಜೊತೆಗೇ ಒಂದು ನಮೂನೆಯ ಸಾರ್ಥಕತೆಯ ಭಾವವೂ ನನ್ನಲ್ಲಿ ತುಂಬಿ ಬಂದಿತ್ತು. ಕೈದಿಗಳ ಮನಃಪರಿವರ್ತನೆಗೆ, ಅವರಲ್ಲಿ ಒಂದು ಜಾಗೃತಿಯನ್ನು ಮೂಡಿಸಲಿಕ್ಕೆ ಪ್ರಯತ್ನಿಸುತ್ತಿರುವ ಹುಲಗಪ್ಪನವರಿಗೆ ನಾವೂ ಜತೆಯಲ್ಲಿ ನಿಂತು ಸಹಕಾರ ನೀಡುತ್ತಿದ್ದೇವೆಂಬುದು ಕಡಿಮೆ ಸಂತಸದ ಸಂಗತಿಯಾಗಿರಲಿಲ್ಲ!

ಅದು ಹುಲಗಪ್ಪನವರು ಮಾಡಿಸಿದ ಮೊಟ್ಟಮೊದಲ ಜೈಲುನಾಟಕ. ಅಲ್ಲಿಂದ ಅಂದರೆ 1997ರಿಂದ ಈಚೆಗೆ ಅವರು ಅನೇಕ ಜೈಲುನಾಟಕಗಳನ್ನು ಮಾಡಿಸಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ, ಬೆಳಗಾವಿ ಮುಂತಾದ ಕಡೆಗಳಲ್ಲೆಲ್ಲಾ ಕೈದಿಗಳಿಗಾಗಿ ಹುಲಗಪ್ಪನವರು ನಾಟಕ ಮಾಡಿಸಿದ್ದಾರೆ. ಮಾರನಾಯಕ (ಮ್ಯಾಕ್ ಬೆತ್), ಜ್ಯೂಲಿಯಸ್ ಸೀಜ಼ರ್, ಮಾಧವಿ (ಮಹಿಳಾ ಕೈದಿಗಳಿಗಾಗಿ ಮಾಡಿಸಿದ ನಾಟಕ), ತಲೆದಂಡ, ಜತೆಗಿರುವನು ಚಂದಿರ ಮೊದಲಾದುವು ಇವರು ಮಾಡಿಸಿರುವ ನಾಟಕಗಳು. ಸತತ ಒಂದು ವರ್ಷ ಹತ್ತು ನಗರಗಳಲ್ಲಿ ಮೂರು ಮೂರು ದಿನಗಳ ʻಜೈಲಿನಿಂದ ಬಯಲಿಗೆʼ ಎಂಬ ತಲೆಬರಹದಲ್ಲಿ ನಾಟಕೋತ್ಸವ ಮಾಡಿಸಿದ್ದಾರೆ… ಇವರ ಕಾರಾಗೃಹ ಸಂಬಂಧಿ ಚಟುವಟಿಕೆ-ತೊಡಗುವಿಕೆಗಳು ವಿಪರೀತ! ಆಗೀಗ ಭೇಟಿಯಾದಾಗ ʻಯಾವ ಜೈಲಿಂದ ಬಿಡುಗಡೆಯಾಗಿ ಬಂದಿರಿʼ ಎಂತಲೋ, ಈಗ ಯಾವ ಜೈಲಲ್ಲಿದೀರಿ ಅಂತಲೋ ನಾನು ತಮಾಷೆ ಮಾಡುವುದುಂಟು. ಜೈಲಿನಿಂದ ಆಚೆ ಬಂದಾಗ ಹೊರಗಡೆಯೂ ನಾಟಕ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಾರೆ ಈ ಹುಲಗಪ್ಪ!!!

‍ಲೇಖಕರು avadhi

June 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: