ಗಿರಿಧರ್ ಖಾಸನೀಸರ ‘ಐದು ಸಂಭಾಷಣೆಗಳು’

ಗಿರಿಧರ್ ಖಾಸನೀಸ್

೧.

ಅರವತ್ತಾರು ಮುಗಿದು ಅರವತ್ತೇಳರ ಮುಂಚಿನ ದಿನಗಳು. ಎಂದಿನಂತೆ ಮುಂಜಾನೆ ಎದ್ದು ಪಕ್ಕದ ಪಾರ್ಕಿನಲ್ಲಿ ಒಂದೆರಡು ರೌಂಡು ಹೊಡೆದು ಮನೆಗೆ ಮರಳುತ್ತಿದ್ದಾಗ ಯಾರೋ ಹಿಂದಿನಿಂದ ತಳ್ಳಿದ ಹಾಗಾಯಿತು. ತಿರುಗಿ ನೋಡಿದೆ. ಯಾರೂ ಇರಲಿಲ್ಲ. ಕಲ್ಲಿನ ಬೆಂಚಿನ ಮೇಲೆ ಕೂತೆ. ಪರಿಚಯಸ್ಥ ಹುಡುಗ ಮನೆ ಮನೆಗೆ ಪೇಪರ್ ಹಾಕುತ್ತ ಬರುವುದು ಕಾಣಿಸಿತು.

ʻಪ್ರಕಾಶ ಇಲ್ಲಿ ಬಾʼ, ಅಂದೆ.

ʻಏನು ಅಂಕಲ್ʼ, ಅಂದ.

ʻಅಲ್ಲ ಎರಡು ನಿಮಿಷದ ಹಿಂದೆ ಒಂದು ಸಣ್ಣ ಭೂಕಂಪ ಆದ ಹಾಗಾಯಿತು. ನಿನಗೂ ಹಾಗೆ ಅನಿಸಿತೇ?ʼ 

ʻಇಲ್ಲ ಅಂಕಲ್… ಹಾಗೇನೂ ಅನಿಸಲಿಲ್ಲ… ಬರ್ತೀನಿʼ, ಅಂತ ಸೈಕಲ್ ಹತ್ತಿ ಮುಂದೆ ಹೋದ.

ಮರದ ಮೇಲಿದ್ದ ಕಾಗೆಯೊಂದು ಕಾಕಾ ಎಂದು ಕಿರುಚುತ್ತಾ ಹಾರಿಹೋಯಿತು.

{ }

೨.

ʻಅಮ್ಮ ಅಮ್ಮ…ʼ 

ʻಏನು ಪುಟ್ಟಿ?ʼ 

ʻಅಮ್ಮ ಅಲ್ಲಿ ನೋಡಮ್ಮʼ.

ʻಏನೇ ಅದು?ʼ

ʻಅಮ್ಮ ರಸ್ತೆ ಆ ಕಡೆ ಅವಳು…ʼ

ʻಯಾರೇ ಅದು, ಆ ಮುದುಕೀನಾ?ʼ 

ʻಹೌದಮ್ಮ, ಆಗಿನಿಂದ ನನ್ನನ್ನೇ ನೋಡ್ತಿದ್ದಾಳೆʼ.

ʻನೋಡಲಿ ಬಿಡುʼ.

ʻಅಮ್ಮ, ನನ್ನನ್ನೇ ನೋಡ್ತಿದ್ದಾಳೆ. ಭಯ ಆಗ್ತಿದೆʼ.

ʻಭಯ ಯಾಕೆ?ʼ

ʻಯಾಕೆ ಅಂದ್ರೆ… ಅವಳ ಕಣ್ಣು ನೋಡು… ಅವಳು ಏನು ಯೋಚನೆ ಮಾಡ್ತಿರಬಹುದು?ʼ

ʻಏನೂ ಇಲ್ಲ ಕಣೆ… ಅವಳಿಗೂ ಭಯ ಆಗ್ತಿದೆ ಅನ್ಸತ್ತೆ… ಪಾಪʼ.

ʻಭಯ ಯಾಕಮ್ಮ?ʼ

ʻಯಾಕೆ ಅಂದ್ರೆ… ಒಂದು ಕಾಲದಲ್ಲಿ ನಾನೂ ಆ ಪುಟ್ಟ ಹುಡುಗೀ ತರ ಇದ್ದೆ. ಈಗ ನೋಡು ಹೇಗಾಗಿದ್ದೀನಿ ಅಂತ, ಭಯ ಆಗ್ತಿರಬಹುದು…ʼ.

ʻಅಮ್ಮ ನಾನೂ ಒಂದು ದಿನ ಮುದುಕಿ ಆಗ್ತೀನಾ?ʼ

ʻಏಳು ಪುಟ್ಟಿ… ನಿನ್ನ ಸ್ಕೂಲ್ ಬಸ್ಸು ಬರ್ತಾ ಇದೆ…ʼ.

{ }

೩.

ಸಾರಾನಾತಿನ ಜಿಂಕೆ ಉದ್ಯಾನ. ಮಹನೀಯರು ಮುಖಾಮುಖಿಯಾದರು. ಪರಸ್ಪರ ನಮಸ್ಕಾರಗಳಾದವು.

ʻಕಾವೀಧಾರಿಗಳ ಕಾಲು ಮುಟ್ಟುವ ಅಭ್ಯಾಸವಿಲ್ಲ ನನಗೆ, ಸ್ವಾಮಿʼ.

ʻಪರವಾಗಿಲ್ಲ, ಬಾಬಾ ಸಾಹೇಬರೇ. ಕೈಮುಗಿದರಲ್ಲ ಸಾಕುʼ.

ʻನಾನು ಕೈ ಮುಗಿದದ್ದು ನಿಮ್ಮ ಹಿಂದೆ ಸ್ತೂಪ ಇದೆಯಲ್ಲ, ಅದಕ್ಕೆʼ.

ʻಸ್ತೂಪಕ್ಕೆ ಕೈ ಮುಗಿದರೆ ಇಡೀ ಮಾನವಕುಲಕ್ಕೆ ನಮಸ್ಕರಿಸಿದ ಹಾಗಲ್ಲವೇ?ʼ

ʻಕೆಲವೊಮ್ಮೆ ನಮಸ್ಕಾರಕ್ಕೂ, ತಿರಸ್ಕಾರಕ್ಕೂ ವ್ಯತ್ಯಾಸ ಕಾಣದು ಸ್ವಾಮಿʼ.

ʻನಮಸ್ಕಾರ, ತಿರಸ್ಕಾರ ಎರಡಕ್ಕೂ ನಾವು ಸಿದ್ಧರಾಗಿರಬೇಕಲ್ಲವೇ ಬಾಬಾ ಸಾಹೇಬರೇ? ಮಾರ್ಗಗಳು ವಿಭಿನ್ನವಾಗಿರಬಹುದು. ಆದರೆ ನಾವು ನಿಂತ ನೆಲ ಒಂದೇ ಅಂತಾದರೆ ಸಾಕಲ್ಲವೇ ಸಾಹೇಬರೇ?ʼ

ʻಆಹಾ! ಎಂತಹ ಕಾವ್ಯಾತ್ಮಕ ಮಾತು! ನಾವು ಬೇರೆ ಬೇರೆ ಆದರೇನು, ನಮ್ಮ ಮಾರ್ಗಗಳು ಭಿನ್ನ ಆದರೇನು, ನಾವು ನಿಂತಿರುವುದು ಒಂದೇ ನೆಲದಲ್ಲಿ ಅಲ್ಲವೇ… ಈ ಎರಡು ಮೂರು ಸಾಲುಗಳಿದ್ದರೆ ಸಾಕು. ನಮ್ಮ ಸಂಪೂರ್ಣ ಸಂವಿಧಾನ ಸಿದ್ಧ ಆದ ಹಾಗೆ!ʼ

ʻಬುದ್ಧಮ್ ಶರಣಂ ಗಚ್ಚಾಮಿ…ʼ

ʻಧಮ್ಮಮ್ ಶರಣಂ ಗಚ್ಚಾಮಿ…ʼ

{ }

೪.

ಕಲಾವಿದ ಬ್ಯಾಗಿನಿಂದ ಪೆನ್ಸಿಲ್, ಪೇಪರ್, ರಬ್ಬರ್ ತೆಗೆದು ರೆಡಿಯಾದ. ಹುಡುಗಿ ತಲೆ ತಗ್ಗಿಸಿ ಕೂತಿದ್ದಳು. ಇನ್‌ಸ್ಪೆಕ್ಟರ್‌ ಅವಳ ದೂರಿನ ಪತ್ರವನ್ನು ಮತ್ತೊಮ್ಮೆ ಓದಿದನು.

ʻಆಯಿತು ಹೇಳಮ್ಮ. ನಿನ್ನ ಮೈಮೇಲೆ ಕೈ ಹಾಕಿ ಬೆದರಿಸಿದವನು… ಅವನು ಹೇಗಿದ್ದ ನೋಡೋದಕ್ಕೆ? ಇವರು ಕಲಾವಿದರು. ನಿನ್ನ ವರ್ಣನೆ, ವಿವರಣೆಯನ್ನು ಆಧರಿಸಿ ಆ ಲೋಫರ್‌ನ ಚಿತ್ರ ಬಿಡಿಸುತ್ತಾರೆ. ಆಮೇಲೆ ಮುಂದೆ ಏನು ಮಾಡೋದು ನೋಡೋಣʼ. 

ಹುಡುಗಿ ಮೆಲ್ಲಗೆ ಹೇಳಿದಳು.

ʻಎತ್ತರ ಇದ್ದʼ.

ʻಮುಂದೆ?ʼ

ʻಕಪ್ಪಗಿದ್ದʼ.

ʻಮುಖ ಹೇಗಿತ್ತು?ʼ

ʻರಾತ್ರಿ ಅಲ್ವಾ ಸರಿಯಾಗಿ ಕಾಣಿಸಲಿಲ್ಲʼ. 

ʻಆದರೂ ನೆನಪು ಮಾಡಿಕೋ. ಟ್ರೈ ಮಾಡುʼ.

ʻಮುಖ ಉದ್ದ. ಕಂದು ಬಣ್ಣ. ಕಪ್ಪು ಕೂದಲು ಅನ್ಸತ್ತೆʼ.

ʻಚಪ್ಪಟೆ ಮೂಗು. ದಪ್ಪ ಮೀಸೆ. ಕಮಲಹಾಸನ್ ತರ…ʼ

ಕಲಾವಿದ ಸರಸರನೆ ಗೆರೆ ಎಳೆದ.

ಅವಳು, ʻಹೌದು, ಹೌದುʼ, ʻಇಲ್ಲ, ಹಾಗಲ್ಲʼ ಎಂದು ತಿದ್ದುತ್ತಾ ಹೋದಳು.

ಅಪರಾಧಿಯ ಮುಖವು ನಿಧಾನವಾಗಿ ಹೊರಹೊಮ್ಮುತ್ತಿದ್ದಂತೆ…

ಕಲಾವಿದನ ಕೈ ಅದುರಲು ಶುರುವಾಯಿತು.

ಭಾವಚಿತ್ರ ಅಪಸ್ವರ ಹಾಡಿತು.

ಹತ್ತು ವರ್ಷದಿಂದ, ಶ್ರದ್ಧೆಯಿಂದ ಕಾಪಾಡಿಕೊಂಡಿದ್ದ ಮೀಸೆಯನ್ನು ಬೆಳಿಗ್ಗೆ ಎದ್ದವನೇ ಏಕೆ ಬೇಗ ಬೇಗ ಶೇವ್ ಮಾಡಿ ಬೋಳಿಸಿದ?

ನನ್ನ ತಮ್ಮ…

{ }

೫.

ಎಲ್ಲಿಂದಲೋ ಹಾರಿ ಬಂದು ಬಾಲ್ಕನಿ ಕಟ್ಟೆಯ ಮೇಲೆ ಕೂತ ಹಕ್ಕಿ ಕೇಳಿತು:

ʻಏನು ಮಾಡ್ತಾ ಇದ್ದೀಯಾ?ʼ

ʻಏನಿಲ್ಲ ಗುಬ್ಬಕ್ಕ ಒಂದು ಹೈಕು ಬರಿಯೋಣ ಅಂತʼ.

ʻಅಯ್ಯೋ ಅದಕ್ಕೇನು ನಾನು ಹೇಳ್ತೀನಿ ಬರ್ಕೋʼ.

ʻಆಯ್ತು ಹೇಳುʼ.

ʻಹಳೆಯ ಕೊಳ. ಜಿಗಿದ ಕಪ್ಪೆ. ನೀರ ಸದ್ದುʼ.

ʻಏ ಗುಬ್ಬಿ. ಅದನ್ನ ಮುನ್ನೂರು ವರ್ಷದ ಹಿಂದೆನೇ ಬಾಶೋ ಬರೆದಾಗಿದೆʼ.

ʻಅಯ್ಯೋ ಅದಕ್ಕೇನು? ಗ್ರೇಟ್ ಮೈಂಡ್ಸ್ ಥಿಂಕ್ ಅಲೈಕ್… ಅಷ್ಟೂ ಗೊತ್ತಿಲ್ಲವಾ ಮುಂಡೇದೆ?ʼ

ʻಗುಬ್ಬಕ್ಕ…ʼ

ʻಆಯ್ತು ಇನ್ನೊಂದು ಹೇಳ್ತೀನಿ ಬರ್ಕೋʼ.

ʻಹೇಳುʼ.

ʻನೀರಿಲ್ಲದ ಕೊಳ. ಕಾಲಿಲ್ಲದ ಕಪ್ಪೆ. ಹಸಿದ ಹಾವು… ಹೇಗಿದೆ?ʼ

ʻವಾಹ್ ಗುಬ್ಬಕ್ಕ, ಎಲ್ಲಿಂದ ತಂದೆ ಇದನ್ನು?ʼ

ʻಅಯ್ಯೋ ಮುಂಡೇದೆ. ಇಲ್ಲಿ ಬಾಲ್ಕನಿಗೆ ಬಾ. ಕಣ್ಬಿಟ್ಟು ನೋಡು. ನೂರಾರು ಹೈಕು ಸಿಗತ್ತೆ. ನಾನು ಬರ್ತೀನಿʼ

‍ಲೇಖಕರು avadhi

June 22, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: