ಶ್ರೀನಿವಾಸ ಪ್ರಭು ಅಂಕಣ- ‘ಜನನಿ’ ನಾನು ಸದಾ ನೆನೆಸಿಕೊಳ್ಳುವ ಚಿತ್ರ…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

90

ಇತ್ತೀಚೆಗೆ—ಅಂದರೆ 2022 ರ ಮಧ್ಯಭಾಗದಲ್ಲಿ—ಆತ್ಮೀಯ ಗೆಳೆಯ, ಪ್ರಸಿದ್ಧ ಸಾಹಿತಿ—ವಿಮರ್ಶಕ ಹೆಚ್.ಎಸ್.ಸತ್ಯನಾರಾಯಣ ಅವರು ಮಾಸ್ತಿಯವರ ಬದುಕು—ಬರಹಗಳನ್ನು ಕುರಿತು ಅವರು ಬರೆದಿದ್ದ “ನಗೆಮೊಗದ ಅಜ್ಜ ಮಾಸ್ತಿ” ಎಂಬ ಕೃತಿಯನ್ನು ನನಗೆ ಕಳಿಸಿಕೊಟ್ಟರು.ಸತ್ಯ ಅವರ ಸ್ವಾರಸ್ಯಕರ ಕಥನ ಹಾಗೂ ನಿರೂಪಣಾ ವಿಧಾನ ನನಗೆ ಯಾವಾಗಲೂ ಮೆಚ್ಚು. ಮಾಸ್ತಿಯವರನ್ನು ಕುರಿತ ಈ ಕೃತಿಯನ್ನು ಓದುತ್ತಿರುವಾಗ ಒಂದು ಅಧ್ಯಾಯ ವಿಶೇಷವಾಗಿ ನನ್ನ ಗಮನ ಸೆಳೆಯಿತು: ‘ವ್ಯಕ್ತಿತ್ವದ ಹಲವು ಬಗೆ’. ಆ ಅಧ್ಯಾಯ ಪ್ರಾರಂಭವಾಗುವುದು ಹೀಗೆ:
“ಒಬ್ಬ ಮೋಚಿ ಮಾಸ್ತಿಯವರ ಮನೆಗೆ ಬರುತ್ತಿದ್ದ. ಸುಮ್ಮನೆ ಕಾಸು ಕೊಟ್ಟರೆ ತೆಗೆದುಕೊಳ್ಳದ ಆತ ಮಾಡಿದ ಕೆಲಸಕ್ಕಷ್ಟೇ ಹಣ ಪಡೆಯುವ ನಿಷ್ಠೆಯುಳ್ಳವನು. ಮಾಸ್ತಿಯವರಿಗೋ ಹೇಗಾದರೂ ಆತನಿಗೆ ಸ್ವಲ್ಪ ಹಣ ಸಂದಾಯ ಮಾಡುವಾಸೆ. ಚೆನ್ನಾಗಿದ್ದ ಚಪ್ಪಲಿಯನ್ನೇ ಕಿತ್ತುಹಾಕಿ, ಹೊಲಿದುಕೊಡೆಂದು ಮೋಚಿಗೆ ನೀಡುತ್ತಿದ್ದರು. ಬಳಿಕ ಅದಕ್ಕೆ ತಕ್ಕ ಹಣವನ್ನು ಆತನ ಕೈಗಿಡುತ್ತಿದ್ದರು. ದುಡಿಮೆಯಿಲ್ಲದೆ ಹೋದರೆ ಆತನ ಕುಟುಂಬದ ಗತಿಯೇನು ಎಂಬುದು ಮಾಸ್ತಿಯವರ ಕಳಕಳಿ. ಹಬ್ಬದ ದಿನ ಆತನನ್ನು ಬರಲು ಹೇಳಿ,ಒತ್ತಾಯಪೂರ್ವಕವಾಗಿ ಆತನಿಗೆ ಹೊಸಬಟ್ಟೆ ಕೊಡಿಸುತ್ತಿದ್ದರು. ಮಾಸ್ತಿಯವರು ಬದುಕಿರುವವರೆಗೂ ಮೋಚಿಗೆ ದೀಪಾವಳಿ ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸುವುದನ್ನು ಮರೆಯಲಿಲ್ಲ.”

ಈ ಪ್ರಸಂಗವನ್ನು ಓದುತ್ತಿದ್ದಂತೆ ಮನಸ್ಸು ಸುಮಾರು ಮೂವತ್ತು ವರ್ಷಗಳಷ್ಟು ಹಿಂದಕ್ಕೆ ಓಡಿತು! ಹೌದು..ಆಗ ನಾನು ನಿರ್ದೇಶಿಸಿ ನಿರ್ಮಿಸಿದ್ದ ಒಂದು ಕಿರುಚಿತ್ರ—”ಮೋಚಿ”. ಇದು ಅಂದಿನ ಪ್ರಸಿದ್ಧ ಸಾಹಿತಿಗಳಾಗಿದ್ದ ‘ಭಾರತೀಪ್ರಿಯ’ರ ಅದೇ ಹೆಸರಿನ ಕಥೆಯನ್ನು ಆಧರಿಸಿ ರೂಪಾಂತರಿಸಿದ್ದು.’ಭಾರತೀಪ್ರಿಯ’ ಕಾವ್ಯನಾಮದಲ್ಲಿ ಬರೆಯುತ್ತಿದ್ದ ವೆಂಕಟರಾವ್ ಅವರು ಎಂ ಎ ಓದುವಾಗ ನನ್ನ ಸಹಪಾಠಿಯಾಗಿದ್ದ ಛಾಯಾದೇವಿಯವರ ತಂದೆ; ಹಲವಾರು ಮೌಲಿಕ ಕಥೆಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಕೊಟ್ಟವರು. ಬಹುಶಃ ಭಾರತೀಪ್ರಿಯರೂ ಸಹಾ ಮಾಸ್ತಿಯವರ ಈ ಮೋಚಿ ಪ್ರಸಂಗವನ್ನು ಅರಿತು ಅದರ ಆಧಾರದ ಮೇಲೆಯೇ ತಮ್ಮ ಕಥೆಯನ್ನು ಹೆಣೆದಿದ್ದಿರಬೇಕು.ಮಾಸ್ತಿಯವರ ಪ್ರಸಂಗದಲ್ಲಿ ಬರುವ ಮೋಚಿಯಂತೆಯೇ ಭಾರತೀಪ್ರಿಯರ ‘ಮೋಚಿ’ಯೂ ಮಹಾ ಸ್ವಾಭಿಮಾನಿ. ತನ್ನ ಕೆಲಸಕ್ಕೆ ಬರಬೇಕಾದ ಮಜೂರಿಯನ್ನು ಹೊರತುಪಡಿಸಿ ಬೇರಾವುದೇ ಸಹಾಯವನ್ನೂ ಆತ ಸ್ವೀಕರಿಸಲಾರ! ಮಾಸ್ತಿಯವರ ಮೋಚಿಯ ಗುಣ ಸ್ವಭಾವಗಳೆಲ್ಲವನ್ನೂ ತಮ್ಮ ಪಾತ್ರದಲ್ಲಿಯೂ ಅಳವಡಿಸಿಕೊಂಡ ಭಾರತೀಪ್ರಿಯರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಕಥೆಗೆ ಒಂದು ಅನಿರೀಕ್ಷಿತ—ಅರ್ಥಪೂರ್ಣ ತಿರುವನ್ನು ನೀಡಿಬಿಡುತ್ತಾರೆ. ತನ್ನ ಬಳಿ ಪದೇ ಪದೇ ಚಪ್ಪಲಿ ರಿಪೇರಿಗೆ ಬರುವ ‘ಧಣಿ’ಗಳ ಮನೋಗತ ಮೋಚಿಗೆ ತಿಳಿದುಬಿಡುತ್ತದೆ; ತನಗೆ ಹಣಸಹಾಯ ಮಾಡಲೆಂದೇ ಈ ಧಣಿಗಳು ಬೇಕಂತಲೇ ಚಪ್ಪಲಿಯನ್ನು ಕಿತ್ತುಹಾಕಿಕೊಳ್ಳುತ್ತಿರುವರೆಂಬ ಸತ್ಯ ಅವನ ಅರಿವಿಗೆ ಬಂದಬಿಡುತ್ತದೆ.

ಈ ಔದಾರ್ಯದ ಉರುಳಿನ ಬಿಗಿತವನ್ನು ಸ್ವಾಭಿಮಾನಿಯಾದ ಆತ ಸಹಿಸಿಕೊಳ್ಳಲಾರ..ಅಂತೆಯೇ ಅದನ್ನು ನೇರವಾಗಿ ಹೇಳಿ ‘ಧಣಿ’ಗಳ ಮನಸ್ಸನ್ನೂ ನೋಯಿಸಲಾರ! ಈ ಇಬ್ಬಂದಿತನದಲ್ಲಿ ತೊಳಲಾಡುತ್ತಾ ಕೊನೆಗೆ ಧಣಿಗಳಿಂದ ದೂರವಾಗಿ ಹೊರಟುಹೋಗುವುದೇ ಇದಕ್ಕೆ ಸೂಕ್ತ ಪರಿಹಾರವೆಂದು ಬಗೆದು ರಾತೋರಾತ್ರಿ ಗುಡಿಸಲನ್ನು ಖಾಲಿಮಾಡಿಕೊಂಡು ಕುಟುಂಬದೊಂದಿಗೆ ದೂರ ಹೊರಟುಹೋಗುತ್ತಾನೆ. ಇದು ಭಾರತೀಪ್ರಿಯರು ಕಥೆಗೆ ನೀಡಿದ್ದ ಧ್ವನಿಪೂರ್ಣ ಅಂತ್ಯ.’ಮೋಚಿ’—ನನಗೆ ಅತ್ಯಂತ ತೃಪ್ತಿ—ಸಮಾಧಾನಗಳನ್ನು ನೀಡಿದ ಕಿರುಚಿತ್ರ ಕೂಡಾ ಹೌದು.ಸಂಕೇತ್ ಕಾಶಿ ಮೋಚಿಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ. ಧಣಿಯ ಪಾತ್ರದಲ್ಲಿ ವಿಶ್ವನಾಥ ರಾವ್ (ಸುಗಮ ಸಂಗೀತದ ಸರದಾರ ಸಿ.ಅಶ್ವಥ್ ಅವರ ಹಿರಿಯ ಸೋದರ) ಹಾಗೂ ಅವರ ಪತ್ನಿಯ ಪಾತ್ರದಲ್ಲಿ ಮಂಜುಳಾ ರಾವ್ ಅವರೂ ಸಹಾ ಗಮನಾರ್ಹ ಅಭಿನಯ ನೀಡಿದ್ದರು. ಸಾಹಿತ್ಯ ವಲಯವಷ್ಟೇ ಅಲ್ಲದೆ ಸಾಮಾನ್ಯ ವೀಕ್ಷಕರಿಂದಲೂ ಅಪಾರ ಪ್ರಶಂಸೆ ಗಳಿಸಿಕೊಂಡ ಕಿರುಚಿತ್ರ ‘ಮೋಚಿ’.ಅದು ಹೇಗೋ ನೆನಪಿನಿಂದ ಹಿನ್ನೆಲೆಗೆ ಸರಿದುಬಿಟ್ಟಿದ್ದ ‘ಮೋಚಿ’ಯನ್ನು ನೆನಪಿಸಿದ್ದಕ್ಕೆ ಗೆಳೆಯ ಸತ್ಯನಾರಾಯಣರಿಗೆ ಶರಣು!

ಈ ಕಾಲಘಟ್ಟದಲ್ಲಿಯೇ ನಾನು ಅಭಿನಯಿಸಿದ ಮತ್ತೊಂದು ಮುಖ್ಯ ಚಿತ್ರವೆಂದರೆ ಶ್ರೀವತ್ಸಾ ರಂಗನಾಥ್ ಅವರ ನಿರ್ದೇಶನದ “ಜನನಿ”. ಹಿಂದೆ ನಾನು ಮುಖ್ಯ ಪಾತ್ರ ನಿರ್ವಹಿಸಿದ್ದ ‘ಚಿರಕನ್ನಿಕಾ’ ಚಿತ್ರದ ನಿರ್ಮಾಪಕರೇ ಈ ಚಿತ್ರವನ್ನು ನಿರ್ಮಿಸಲು ಮುಂದಾಗಿದ್ದರು. ಸೋಹಿನಿ ಹಾಗೂ ನಾನು ಚಿತ್ರದ ಕೇಂದ್ರ ಪಾತ್ರಗಳಿಗೆ ಆಯ್ಕೆಯಾಗಿದ್ದೆವು; ರಾಕ್ ಲೈನ್ ವೆಂಕಟೇಶ್ ,ವಿದ್ಯಾಶ್ರೀ,ನವೀನ್ ,ಮೋಹನ್ ಜುನೇಜಾ, ರಾಮದಾಸ್ ಮುಂತಾದವರು ಇತರ ಮುಖ್ಯ ಪಾತ್ರಗಳನ್ನು ನಿರ್ವಹಿಸುವವರಿದ್ದರು.ಎಸ್.ರಾಮಚಂದ್ರ ಅವರ ಛಾಯಾಗ್ರಹಣ,ಸುರೇಶ್ ಅರಸ್ ಅವರ ಸಂಕಲನ..ಸೋಮನಹಳ್ಳಿಯಲ್ಲಿ 8—10 ದಿನಗಳ ಕಾಲ ನನ್ನ ಪಾತ್ರಕ್ಕೆ ಸಂಬಂಧಿಸಿದ ದೃಶ್ಯಗಳ ಚಿತ್ರೀಕರಣ. ಸರಿ, ಆಫೀಸ್ ನಲ್ಲಿ ಮತ್ತೆ ಶುರುವಾಯಿತು ತಗಾದೆ! ನಾನು ಕೂಡಿಟ್ಟುಕೊಂಡಿದ್ದ ರಜೆಯ ದಿನಗಳು ಸಾಕಷ್ಟಿದ್ದರೂ ಆ ರಜೆಯನ್ನು ಮಂಜೂರು ಮಾಡಲು ನಿರ್ದೇಶಕಿ ರುಕ್ಮಿಣಿಯಮ್ಮನಿಗೆ ಏನೋ ಸಂಕಟ! ‘ನನ್ನ ಪಾಲಿನ ರಜೆಯನ್ನು ನಾನು ಬಳಸಿಕೊಳ್ಳಲು ನಿಮ್ಮದೇನು ತಕರಾರು?’ ಎಂದು ನಾನು; ‘ರಜೆಯನ್ನು ಹಾಗೆಲ್ಲಾ ಹಕ್ಕಿನ ರೀತಿಯಲ್ಲಿ ಬಳಸಿಕೊಳ್ಳಲು ಬರುವುದಿಲ್ಲ..ಮೇಲಾಗಿ ರಜೆ ಹಾಕಿ ಹೋಗಿ ನುವು ಹೊರಗಡೆ ಕೆಲಸ ಮಾಡುತ್ತೀರಿ ಎಂಬ ಆರೋಪ ನಿಮ್ಮ ಮೇಲಿದೆ..ಅದು ನಮ್ಮ ನೀತಿ ಸಂಹಿತೆಗೆ ವಿರುದ್ಧ..ನಾನು ರಜೆ ಮಂಜೂರು ಮಾಡುವುದಿಲ್ಲ’ ಎಂದು ರುಕ್ಮಿಣಿಯಮ್ಮ! “ನಾನು ಹೊರಗೆ ಕೆಲಸ ಮಾಡುತ್ತೇನೆಂಬುದಕ್ಕೆ ಸಾಕ್ಷಿ ಪುರಾವೆಗಳೇನಿವೆ? ಇದ್ದರೆ ಸಾದರ ಪಡಿಸಿ..ಸಾಬೀತಾದರೆ ಕ್ರಮ ಜರುಗಿಸಿ..ಈಗ ರಜೆ ಕೇಳುತ್ತಿರುವುದು ನನ್ನ ವೈಯಕ್ತಿಕ ಕಾರಣಗಳಿಗೆ..ನೀವು ಮಂಜೂರು ಮಾಡಲೇಬೇಕು” ಎಂದು ನಾನು! ಈ ಹಗ್ಗ ಜಗ್ಗಾಟ ಸಾಕಷ್ಟು ನಡೆದು ಕೊನೆಗೆ ನಾನು ,”ಮೇಡಂ,ನೀವು ಮಂಜೂರು ಮಾಡಿ ಬಿಡಿ..ನಾನಂತೂ ರಜೆಯಲ್ಲಿ ಹೋಗುವವನೇ! ಇನ್ನೊಮ್ಮೆ ಡೈಸ್ ನಾನ್ ಮಾಡುವುದಾದರೆ ಮಾಡಿರಿ..ನೀವು ನನ್ನ ಮೇಲೆ ವಿನಾಕಾರಣ ಬೆದರಿಕೆ ಒಡ್ಡುತ್ತಿದ್ದೀರಿ ಎಂದು ನಾನೂ ದೂರು ದಾಖಲಿಸುತ್ತೇನೆ” ಎಂದು ಭಂಡಧೈರ್ಯದಿಂದ ಸವಾಲೆಸೆದು ಹೊರ ನಡೆದುಬಿಟ್ಟೆ.
ಅದೃಷ್ಟವಶಾತ್ ಅಂಥ ಪ್ರಸಂಗವೇನೂ ಒದಗಿ ಬರಲಿಲ್ಲ..ಯಾಕೋ ರುಕ್ಮಿಣಿಯಮ್ಮ ಸುಮ್ಮನಾಗಿಬಿಟ್ಟರು! ಸಧ್ಯ!
ಇರಲಿ.

ರಂಗನಾಥ್ ಅವರೇ ಕಥೆ—ಚಿತ್ರಕಥೆಯನ್ನು ಬರೆದು ನಿರ್ದೇಶಿಸುತ್ತಿದ್ದ ‘ಜನನಿ’ ಅನೇಕ ಕಾರಣಗಳಿಗೆ ಒಂದು ವಿಶಿಷ್ಟ ಚಿತ್ರ. ಕೋಮು ಸೌಹಾರ್ದತೆಯನ್ನು ಕದಡಲು ಮುಂದಾಗುವ ಕುಟಿಲ ರಾಜಕೀಯ ಶಕ್ತಿಗಳ ಷಡ್ಯಂತ್ರಗಳು, ತತ್ಪರಿಣಾಮವಾಗಿ ಭುಗಿಲೇಳುವ ಜಾತಿ ವೈಷಮ್ಯದ ಕಿಚ್ಚು.. ಬಡಿದಾಟ.. ರಕ್ತಪಾತ.. ಇದೆಲ್ಲದರ ಕಾರಣವಾಗಿ ಕದಡಿಹೋಗುವ ಗ್ರಾಮದ ಶಾಂತಿ…ಹೀಗೊಂದು ಸಂಕೀರ್ಣ ಕಥಾ ಹಂದರವನ್ನಿಟ್ಟುಕೊಂಡು ಸಮರ್ಥ ಚಿತ್ರಕಥೆಯನ್ನು ರಂಗನಾಥ್ ಅವರು ಸಿದ್ಧಪಡಿಸಿದ್ದರು. ಒಂದು ರೀತಿಯಲ್ಲಿ ಮಣಿರತ್ನಂ ಅವರ ‘ಬಾಂಬೆ’ ಚಿತ್ರವನ್ನು ನೆನಪಿಸುವಂತಿದ್ದರೂ ‘ಬಾಂಬೆ’ ಚಿತ್ರಕ್ಕಿಂತ ತುಸು ಮೊದಲೇ ನಮ್ಮ ‘ಜನನಿ’ ಸಿದ್ಧಗೊಂಡಿತ್ತು ಅನ್ನುವುದು ಬಹು ಮುಖ್ಯ ಸಂಗತಿ. ಈ ಚಿತ್ರದಲ್ಲಿ ನನ್ನದು ಬಟ್ಟೆ ಮಾರಿ ಬದುಕು ಸಾಗಿಸುವ ಕಾಸಿಂ ಸಾಬಿಯ ಪಾತ್ರ. ಆ ಪಾತ್ರಕ್ಕೇ ಒಂದು ವಿಶಿಷ್ಟ ಸಂಭಾಷಣಾ ಶೈಲಿಯನ್ನು ನಾನು ರೂಢಿಸಿಕೊಂಡಿದ್ದೆ. ಹಲವಾರು ತಪ್ಪು ತಿಳುವಳಿಕೆಗಳಿಂದಾಗಿ ಊರ ಪ್ರಮುಖ ಶಿವನಂಜೇಗೌಡ ತನ್ನ ಹೆಂಡತಿಯನ್ನೇ ಪಂಚಾಯ್ತಿ ಕಟ್ಟೆಗೆಳೆದು ಕೊನೆಗೆ ಅವಳನ್ನು ತ್ಯಜಿಸಿಯೇ ಬಿಡುತ್ತಾನೆ. ಮನೆಯವರ ವಿರೋಧದ ಹೊರತಾಗಿಯೂ ಮಾನವೀಯ ನೆಲೆಯಲ್ಲಿ ಗೌಡನ ಪತ್ನಿ ಗಂಗವ್ವಳಿಗೆ ಆಶ್ರಯ ಕೊಡುವ ಕಾಸಿಂ, ಮುಂದೆ ಹಲವು ಸಂಕಷ್ಟಗಳನ್ನೆದುರಿಸಬೇಕಾಗುತ್ತದೆ. ನನಗೆ ಸವಾಲಿನಂತೆ ಎದುರಾದ ಹಲವಾರು ಪಾತ್ರಗಳಲ್ಲಿ ‘ಜನನಿ’ಯ ಕಾಸಿಂ ಸಾಬಿಯ ಪಾತ್ರವೂ ಒಂದು.

‘ಜನನಿ’ ಚಿತ್ರದ ಚಿತ್ರೀಕರಣ ಬಹುತೇಕ ಸೋಮನಹಳ್ಳಿಯ ಆಜುಬಾಜಿನಲ್ಲೇ ನಡೆದುದರಿಂದ ಒಂದು ವಾರದ ಮಟ್ಟಿಗೆ ನಾನು ಅಲ್ಲೇ ಉಳಿದುಕೊಳ್ಳುವುದು ಅನಿವಾರ್ಯವಾಗಿತ್ತು.ಆ ಸಮಯದಲ್ಲೇ ಅಣ್ಣಯ್ಯನಿಗೂ ಬಾಂಬೆಗೆ ವರ್ಗವಾಗಿ ಎಲ್ಲರೂ ಹೊರಟುಹೋಗಿದ್ದರು.ಅಷ್ಟು ದೊಡ್ಡ ಮನೆಯಲ್ಲಿ ಮಗಳನ್ನೂ ಇಟ್ಟುಕೊಂಡು ಇರಲು ರಂಜನಿ ಕೊಂಚ ಹಿಂದೇಟು ಹಾಕಿದ್ದರಿಂದ ಅವಳಿಗೂ ಕಾಲೇಜಿಗೆ ರಜೆ ಹಾಕಿಸಿ ಸಂಸಾರ ಸಮೇತ ಶೂಟಿಂಗ್ ಗೆ ಹೊರಟುಬಿಟ್ಟೆ! ಹಾಗೆ ಕುಟುಂಬದೊಂದಿಗೆ ಬಂದಿಳಿದಿದ್ದನ್ನು ನೋಡಿ ನಿರ್ದೇಶಕ ರಂಗನಾಥ್ ಅವರು ಬೇಸರಿಸುತ್ತಾರೇನೋ ಎಂಬ ಅಳುಕು ನನ್ನನ್ನು ಕಾಡುತ್ತಿತ್ತು. ಆದರೆ ನಾನು ಕುಟುಂಬ ಸಮೇತನಾಗಿ ಎದುರಿಗೆ ಬಂದದ್ದನ್ನು ಕಂಡ ರಂಗನಾಥ್ ಅವರು ಖುಷಿಯಿಂದ ಕುಣಿದಾಡಿಬಿಟ್ಟರು! ಅವರ ಸಂಭ್ರಮದ ಕಾರಣ ಮೊದಲು ನನಗೆ ತಿಳಿಯದೆ ಕಕ್ಕಾಬಿಕ್ಕಿಯಾದೆ. ಅವರಾದರೋ ರಂಜನಿಯನ್ನೇ ನೋಡುತ್ತಾ ‘ಅಬ್ಬಾ! ಬೇಗಂ ಸಿಕ್ಕಿಬಿಟ್ಟಳು ನಂಗೆ! ಬೇಗಂ ಸಿಕ್ಕಿಬಿಟ್ಟಳು’ ಎಂದು ಮತ್ತಷ್ಟು ಖುಷಿ ಪಡುತ್ತಿದ್ದಾರೆ! “ಸರ್, ಇವಳು ನನ್ನ ಬೇಗಂ ಸರ್! ನೀವ್ಯಾಕೆ ಇಷ್ಟು ಸಂಭ್ರಮ ಪಡ್ತಿದೀರಿ!|?” ಎಂದು ನಾನು ಅವರನ್ನೇ ದಿಟ್ಟಿಸುತ್ತಾ ಕೇಳಿದೆ. ಅದಕ್ಕವರು,”ಅದೇ ಸರ್ ನಾನೂ ಹೇಳ್ತಿರೋದು! ನಿಮ್ಮ ಹೆಂಡತೀನೇ ನಮ್ಮ ಸಿನಿಮಾದಲ್ಲಿ ನಿಮಗೆ ಬೇಗಂ! ನಿಮ್ಮ ಮಗಳೇ ನಮ್ಮ ಸಿನಿಮಾದಲ್ಲಿ ನಿಮ್ಮ ಮಗ!” ಎಂದು ಪರಮೋತ್ಸಾಹದಲ್ಲಿ ನುಡಿದಾಗಲೇ ನನಗೆ ವಸ್ತುಸ್ಥಿತಿ ಅರಿವಾದ್ದು! ವಾಸ್ತವವಾಗಿ ಬೇಗಂ ಪಾತ್ರಕ್ಕೆ ಆಯ್ಕೆಯಾಗಿದ್ದ ನಟೀಮಣಿ ಕೊನೆಯ ಕ್ಷಣದಲ್ಲಿ ಕೈಕೊಟ್ಟು ತಕ್ಷಣಕ್ಕೆ ಯಾರೂ ಸಿಗದೆ ಪರದಾಡುತ್ತಿದ್ದರಂತೆ. ಬದಲಿ ನಟಿ ಸಿಗದಿದ್ದರೆ ಮರುದಿನ ಶೂಟಿಂಗ್ ನಡೆಸಲು ಸಾಧ್ಯವಿಲ್ಲ! ಇಂಥದೊಂದು ಒತ್ತಡದ ಸನ್ನಿವೇಶದಲ್ಲಿ ಅವರಿಗೆ ನನ್ನ ಬೇಗಂ ಳ ದರ್ಶನವಾಗಿದೆ! ಎದುರಾಗಿದ್ದ ಸಮಸ್ಯೆ ಅನಾಯಾಸವಾಗಿ ಪರಿಹಾರವಾಗುತ್ತಿದೆ ಅಂದಮೇಲೆ ಖುಷಿಯಾಗದೇ ಇರುತ್ತದೆಯೇ? ಕಾಸಿಂ ಜತೆ ಬೇಗಂ..ಬೇಗಂ ಜತೆ ಬೇಟಾ! ಪ್ಯಾಕೇಜ್ ಡೀಲ್! ಸಧ್ಯ!ರಂಜನಿ—ರಾಧಿಕಾರನ್ನು ಕರೆದುಕೊಂಡು ಹೋಗಿ ನಿರ್ಮಾಪಕರಿಗೆ ಹೊರೆಯಾಗುತ್ತಿದ್ದೇನೇನೋ ಎನ್ನುವ ಗಿಲ್ಟ್ ನನ್ನಿಂದ ದೂರವಾಯಿತು. ರಂಜನಿಗೆ ಒಂದೆರಡು ಬಾರಿ ಕ್ಯಾಮರಾ ಮುಂದೆ ಅಭಿನಯಿಸುವ ಅನುಭವವಾಗಿದ್ದರೂ ಪುಟಾಣಿ ರಾಧಿಕಾಳಿಗಂತೂ ಅದು ಮೊದಲ ಶೂಟಿಂಗ್ ಅನುಭವ! ಆದರೆ ಆಶ್ಚರ್ಯವೆನ್ನುವಂತೆ ಒಂದಿಷ್ಟೂ ಅಳುಕಿಲ್ಲದೆ ಸರಾಗವಾಗಿ ಕ್ಯಾಮರಾ ಮುಂದೆ ಅಭಿನಯಿಸಿದಳು ನನ್ನ ಪುಟ್ಟ ಕಂದಮ್ಮ.ರಂಜನಿಯೂ ಸಹಾ ನುರಿತ ಕಲಾವಿದೆಯಂತೆಯೇ ಸಹಜವಾಗಿ—ಲೀಲಾಜಾಲವಾಗಿ ಅಭಿನಯಿಸಿದ್ದು ನಾನು ಗರ್ವದಿಂದ ಬೀಗುವಂತಾಯಿತು!

“ಜನನಿ” ಚಿತ್ರದ ಮತ್ತೊಂದು ಸ್ವಾರಸ್ಯಕರ ಪ್ರಸಂಗವನ್ನು ನೆನೆಸಿಕೊಳ್ಳುವುದಾದರೆ:
ಊರಪ್ರಮುಖ ಶಿವನಂಜೇಗೌಡನ ಪಾತ್ರವನ್ನು ರಾಕ್ ಲೈನ್ ವೆಂಕಟೇಶ್ ಅವರು ನಿರ್ವಹಿಸುತ್ತಿದ್ದರಲ್ಲಾ, ಒಂದು ದೃಶ್ಯದಲ್ಲಿ ಅವರು ಆವೇಶಭರಿತರಾಗಿ ನನಗೆ ಹೊಡೆಯುವುದಿತ್ತು. ಮಾನೀಟರ್ ಸಮಯದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ ಸಮಸ್ಯೆ ಶುರುವಾದದ್ದು ನಿರ್ದೇಶಕರು ‘ಟೇಕ್ ಗೆ ಹೋಗೋಣ’ ಎಂದಮೇಲೆ!ನಿರ್ದೇಶಕರು ‘action’ ಎನ್ನುತ್ತಿದ್ದಂತೆ ರಾಕ್ ಲೈನ್ ಅವರು ನಿಜಕ್ಕೂ ರೋಷಾವಿಷ್ಟರಾಗಿ ನನಗೆ ನಿಜವಾಗಿಯೂ ಹೊಡೆದು ಬಡಿದು ತಳ್ಳಿ ಗುದ್ದಿ ಬಾರಿಸತೊಡಗಿಬಿಟ್ಟರು..ಡೈರೆಕ್ಟರ್ ಸರ್ ‘ಕಟ್’ ಎಂದು ಕೂಗಿದರೂ ಕೇಳಿಸುವುದೇ ಬೇಡವೇ ಅವರಿಗೆ! ಕೊನೆಗೊಮ್ಮೆ ನಾನೇ ಅಂಗಲಾಚಿದೆ— “ಬಿಟ್ಬಿಡಿ ಸರ್…ದಮ್ಮಯ್ಯ! ಶಾಟ್ ಕಟ್ ಆಗಿದೆ”! ಆಗೊಮ್ಮೆ ಅವರ ಕೈಗೆ ವಿಶ್ರಾಂತಿ ಸಿಕ್ಕಿತು! ಅಷ್ಟುಹೊತ್ತಿಗೆ ನಾನು ಹೈರಾಣಾಗಿ ಹೋಗಿದ್ದೆ! “ಸಾರಿ ಪ್ರಭು..ಒಂದೆರಡು ಏಟು ಜೋರಾಗೇ ಬಿತ್ತೇನೋ..”ಎಂದರು ರಾಕ್ ಲೈನ್.ಒಂದೆರಡೇ?!!ಅಯ್ಯೋ ದೇವಾ!! ಕನಿಷ್ಠ ಎರಡು ಡಜ಼ನ್ ಹೊಡೆತ!” ರಿಯಲಿ ಸಾರಿ ಪ್ರಭೂ.. ತುಂಬಾ ಎಮೋಷನಲ್ ಆಗ್ಬಿಟ್ಟಿದ್ದೆ ನೋಡಿ..ಗೊತ್ತಾಗ್ಲಿಲ್ಲ. ನಿಜವಾಗಲೂ ಹೊಡೆದೇ ಬಿಟ್ಟೆ ಅನ್ಸುತ್ತೆ” ಎಂದು ರಾಕ್ ಲೈನ್ ಮತ್ತಷ್ಟು ನೊಂದುಕೊಂಡು ಹೇಳಿದರು. “ಪರವಾಗಿಲ್ಲ ಬಿಡಿ ಸರ್..ನೀವೂ ಎಮೋಷನಲ್ ಆಗಿ ಬಾರಿಸಿದ್ರಿ..ನಾನೂ ಹೊಡೆತ ತಿಂದು ಎಮೋಷನಲ್ ಆಗಿ ಅತ್ತುಬಿಟ್ಟೆ! ಒಳ್ಳೇದೇ ಆಯ್ತು ಬಿಡಿ” ಎಂದು ಮಾತು ತೇಲಿಸಿದೆ. ಇಷ್ಟರ ನಡುವೆ ಟೇಕ್ ಓಕೆ ಆಗಿದೆಯಾ ಇಲ್ಲವಾ ಅನ್ನುವುದಿನ್ನೂ ನಮಗೆ ಗೊತ್ತಾಗಿರಲಿಲ್ಲ! ಇನ್ನೊಂದು ಟೇಕ್ ಅಂದುಬಿಟ್ಟಿದ್ದರೆ ಮಾತ್ರ ಎಮೋಷನ್ ಗಳ ಭಾರದಡಿಯಲ್ಲಿ ನಾನು ಕುಸಿದೇ ಹೋಗಿಬಿಡುತ್ತಿದ್ದೆನೇನೋ! ಸಧ್ಯ..ಆಪದ್ಭಾಂಧವ ಶ್ರೀ ರಾಮಚಂದ್ರ ಎಸ್. ಅವರು ‘ಟೇಕ್ ಓಕೆ’ ಎಂದು ಜೋರಾಗಿ ಕೂಗಿ ಹೇಳಿ ನನ್ನ ಎಲ್ಲ ಆತಂಕಗಳಿಗೆ ತೆರೆ ಎಳೆದರು!
ಆದರೆ ರಂಗನಾಥ್ ಅವರು ತುಂಬಾ ಶ್ರಮವಹಿಸಿ ರೂಪಿಸಿದ ಅವರ ಕನಸಿನ ಕೂಸು ‘ಜನನಿ’ ಸಂಪೂರ್ಣವಾಗಿ ಸಿಂಗರಗೊಂಡು ಪ್ರದರ್ಶನಕ್ಕೆ ಸಜ್ಜಾಗುವ ಮುನ್ನವೇ ಅವರು ವಿಧಿವಶರಾದುದು ಮಾತ್ರ ದುರ್ದೈವದ ಸಂಗತಿ.

‘ಜನನಿ’ ವ್ಯಾವಹಾರಿಕವಾಗಿ ಯಶಸ್ವೀ ಚಿತ್ರಗಳ ಗುಂಪಿಗೆ ಸೇರ್ಪಡೆಯಾಗದಿದ್ದರೂ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು ಎನ್ನಬಹುದು. “ಹಲವು ದೌರ್ಬಲ್ಯಗಳ ನಡುವೆಯೂ ವಸ್ತುವಿನ ದೃಷ್ಟಿಯಿಂದ ಜನನಿ ಗಮನಾರ್ಹ ಪ್ರಯತ್ನ ಎನ್ನಬಹುದು.. ಕಥೆಗೆ ಮಹತ್ವದ ತಿರುವು ನೀಡುವ ಪಾತ್ರದಲ್ಲಿ ಶ್ರೀನಿವಾಸ ಪ್ರಭು ಅತ್ಯುತ್ತಮ ಅಭಿನಯ ನೀಡಿದ್ದಾರೆ” ಎಂದು ಒಂದು ಪತ್ರಿಕಾ ವಿಮರ್ಶೆ ಬಂದರೆ ಮತ್ತೊಬ್ಬ ವಿಮರ್ಶಕರು ‘ಹೊಸ ದಿಗಂತ’ ಪತ್ರಿಕೆಯಲ್ಲಿ ಹೀಗೆ ಬರೆದರು: “ಚಿತ್ರಕಥೆ ಬಹಳ ಗಂಭೀರ ವಿಷಯವನ್ನು ಹೊಂದಿದ್ದರೂ ಪೂರ್ವಾರ್ಧದಲ್ಲಿ ಇರುವ ಬಿಗಿಯನ್ನು ಉತ್ತರಾರ್ಧದಲ್ಲಿ ಕಳೆದುಕೊಳ್ಳುತ್ತದೆ… ಕಾಸಿಂ ಪಾತ್ರದಲ್ಲಿ ಶ್ರೀನಿವಾಸ ಪ್ರಭು ಗಮನಾರ್ಹ ಅಭಿನಯ ನೀಡಿದ್ದಾರೆ.”
ಒಟ್ಟಿನಲ್ಲಿ ಹಲವು ಹತ್ತು ಕಾರಣಗಳಿಗಾಗಿ ‘ಜನನಿ’ ನಾನು ಸದಾ ನೆನೆಸಿಕೊಳ್ಳುವ ಚಿತ್ರ.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 30, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: