ಶ್ರೀನಿವಾಸ ಪ್ರಭು ಅಂಕಣ – ಎಲ್ಲಾ ಒಂದು ರಹಸ್ಯಗಳ ಮೂಟೆ!

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

97

ರಂಜನಿ—ರಾಧಿಕಾರನ್ನು ಬೆಂಗಳೂರಿಗೆ ಕಳಿಸಿದ ಮೇಲೆ ಗುಲ್ಬರ್ಗಾದಲ್ಲಿ ಒಬ್ಬನೇ ದಿನ ನೂಕುವುದು ಪರಮ ಕಷ್ಟವಾಗಿಹೋಯಿತು. ಕೇಂದ್ರದಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸವೂ ಆರಂಭವಾಗಿರದ ಕಾರಣಕ್ಕೆ ಮತ್ತಷ್ಟು ಬೇಸರ ಕಾಡುತ್ತಿತ್ತು. ಏನಾದರೂ ಒಂದು ನೆಪ ಮಾಡಿಕೊಂಡು ರಜೆ ಹಾಕಿ (ಸಂಬಳವಿಲ್ಲದ ರಜೆ!) ಬೆಂಗಳೂರಿಗೆ ಧಾವಿಸಿಬಿಡುತ್ತಿದ್ದೆ! ಹೆಚ್ಚಿನ ಸಮಯ ಬೆಂಗಳೂರಿನಲ್ಲೇ ಕಳೆಯುವುದಾದ ಮೇಲೆ ಹೊಸದಾಗಿ ಕಂತಿನ ಮೇಲೆ ಕೊಂಡಿದ್ದ ಬೈಕ್ ಅನ್ನು ಗುಲ್ಬರ್ಗಾದಲ್ಲಿಟ್ಟು ಏನು ಮಾಡುವುದು? ಸರಿ, ಒಮ್ಮೆ ರಜೆ ಹಾಕಿ ಬೆಂಗಳೂರಿಗೆ ಬರುವಾಗ ಬೈಕ್ ನಲ್ಲೇ ಏಕೆ ಬಂದುಬಿಡಬಾರದು? ಎಂಬ ಆಲೋಚನೆ ಬಂತು! ಇದರಿಂದಾಗಿ ಬೈಕ್ ಅನ್ನು ಟ್ರೈನ್ ನಲ್ಲಿ ಸಾಗಿಸುವ ರಗಳೆಯೂ ತಪ್ಪಿದಂತಾಗುತ್ತದೆ! ನಮ್ಮಲ್ಲೇ ಕ್ಯಾಮರಾಮನ್ ಆಗಿದ್ದ ಶ್ರೀಧರ್ ಅವರು, “ನಡೀರಿ ಸರ್, ನನಗೂ ಬೆಂಗಳೂರಿನಲ್ಲಿ ಸ್ವಲ್ಪ ಕೆಲಸ ಇದೆ; ನಾನೂ ನಿಮಗೆ ಕಂಪನಿ ಕೊಡ್ತೀನಿ.. ಒಂದು adventure ಮಾಡೇಬಿಡೋಣ” ಎಂದರು. ಒಂದು ದಿನ ಮುಂಜಾನೆ 5 ಗಂಟೆಗೆ ಇಬ್ಬರೂ ನನ್ನ ಹೀರೋ ಹೋಂಡಾ ಬೈಕ್ ಹತ್ತಿ ಗುಲ್ಬರ್ಗಾದಿಂದ ಬೆಂಗಳೂರಿಗೆ ಹೊರಟೇಬಿಟ್ಟೆವು. ಸುಮಾರು 625 ಕಿ ಮೀ ಗಳ ಹಾದಿ. ಆಗ ರಸ್ತೆಗಳೂ ಸಹಾ ಹೇಳಿಕೊಳ್ಳುವಂತಹ ಉತ್ತಮ ಸ್ಥಿತಿಯಲ್ಲೇನೂ ಇರಲಿಲ್ಲ. ಇದರ ಮೇಲೆ ಕುದಿ ಬಿಸಿಲು! ಪ್ರಯಾಣವೇನೂ ಸುಖಕರವಾಗಿಲ್ಲದಿದ್ದರೂ ಊರಿಗೆ ಹೋಗುತ್ತಿರುವ ಸಂಭ್ರಮದ ಜೊತೆಗೆ ಭಾರೀ ಸಾಹಸ ಮಾಡುತ್ತಿದ್ದೇವೆಂಬ ಉತ್ಸಾಹವೂ ಸೇರಿ ಪ್ರಯಾಣದ ಹಿಂಸೆ ಆಗ ಅಷ್ಟಾಗಿ ಅನುಭವಕ್ಕೆ ಬರಲಿಲ್ಲ. ಬೈಕ್ ನಲ್ಲಿ ಊರಿಗೆ ಬರುತ್ತಿರುವ ಸಂಗತಿಯನ್ನು ರಂಜನಿಗೆ ತಿಳಿಸಿರಲಿಲ್ಲ.. ಊರು ತಲುಪುವ ತನಕವೂ ಆತಂಕದಲ್ಲೇ ಇರುತ್ತಾಳೆಂಬ ಕಾರಣಕ್ಕೆ! ಅಲ್ಲಲ್ಲಿ ನಿಂತು ತುಸು ವಿಶ್ರಾಂತಿ ಪಡೆಯುತ್ತಾ, ಕೆಟ್ಟ ರಸ್ತೆಗಳ ಕಾರಣವಾಗಿ ನಿಧಾನವಾಗಿಯೇ ಬೈಕ್ ಚಲಾಯಿಸಿಕೊಂಡು ಬಂದು ತುಮಕೂರು ಮುಟ್ಟಿದಾಗ ರಾತ್ರಿ ಎಂಟು ಗಂಟೆಯ ಸಮಯ. ದಾರಿಯಲ್ಲಿದ್ದ ಪೆಟ್ಟಿಗೆ ಅಂಗಡಿಯ ಮುಂದೆ ಚಹಾ ಕುಡಿಯಲು ನಿಲ್ಲಿಸಿದಾಗ ನೋಡುತ್ತೇನೆ—ಶ್ರೀಧರ್ ಮುಖ ಬಾಡಿಹೋಗಿದೆ! ಅಷ್ಟು ದೂರದ ಪ್ರಯಾಣದಿಂದ ಬಸವಳಿದುಹೋಗಿದ್ದ ಶ್ರೀಧರ್ ಚಹಾ ಕುಡಿಯುತ್ತಾ ಮೆಲ್ಲಗೆ, “ಸರ್, ನಾನೊಂದು ಮಾತು ಹೇಳಲಾ”? ಅಂದರು. ನಾನು ಏನು ಶ್ರೀಧರ್? ಎನ್ನುತ್ತಾ ಅವರ ಮುಖ ನೋಡಿದೆ. “ಇಲ್ಲೇ ತುಮಕೂರಲ್ಲೇ ನನ್ನ ತಂಗಿ ಮನೆ ಇದೆ. ನೀವೂ ಗಾಡಿ ಓಡಿಸಿ ತುಂಬಾ ಸುಸ್ತಾಗಿದೀರಾ.. ಇವತ್ತು ರಾತ್ರಿ ಇಲ್ಲೇ ತಂಗಿದ್ದು ಬೆಳಿಗ್ಗೆ ಬೇಗ ಎದ್ದು ಬೆಂಗಳೂರಿಗೆ ಹೊರಟುಬಿಡೋಣ” ಎಂದರು ಶ್ರೀಧರ್. ಅಯ್ಯೋ! ಇಷ್ಟು ದೂರ ಪ್ರಯಾಣ ಮಾಡಿ ಬಂದು ಕೊನೆಯ ಹಂತದಲ್ಲಿ ಸೋತುಬಿಡುವುದೇ? ಅದೂ ಪತ್ನಿ—ಪುತ್ರಿಯರನ್ನು ನೋಡಲು ಮನಸ್ಸು ತವಕಿಸುತ್ತಿರುವಾಗ! “ಬೇಡ ಶ್ರೀಧರ್..ಇನ್ನು ತುಂಬಾ ದೂರ ಏನಿಲ್ಲ.. ಊರು ತಲುಪಿಕೊಂಡುಬಿಡೋಣ” ಎಂದು ನಾನು ಖಡಾಖಂಡಿತವಾಗಿ ಹೇಳಿಬಿಟ್ಟೆ. “ಹಾಗಾದರೆ ನನ್ನನ್ನ ಇಲ್ಲೇ ಇಳಿಸಿಬಿಡಿ ಸರ್.. ನನ್ನ ತಂಗಿ ಮನೇಲಿ ಎರಡು ದಿನ ಇದ್ದು ಆಮೇಲೆ ಬೆಂಗಳೂರಿಗೆ ಬರ್ತೀನಿ” ಎಂದು ಶ್ರಿಧರ್ ಅವರೂ ಖಚಿತವಾಗಿಯೇ ಹೇಳಿಬಿಟ್ಟರು! ‘ಇನ್ನೊಂದು ಕ್ಷಣವೂ ಈ ಬೈಕಿನ ರೆಕ್ಸೀನ್ ಸೀಟಿನ ಮೇಲೆ ಕೂರುವುದು ನನಗೆ ಶಕ್ಯವಿಲ್ಲ’ ಎಂಬ ದೃಢತೆ ಅವರ ಮಾತಿನಲ್ಲಿ ಹೊಡೆದುಕಾಣುತ್ತಿತ್ತು! ಸರಿ, ಮಾಡುವುದಾದರೂ ಏನು? ಅವರಿಚ್ಛೆಯಂತೆ ಅವರನ್ನು ಅವರ ತಂಗಿಯ ಮನೆಗೆ ಕಳುಹಿಸಿ ನಾನು ಬೆಂಗಳೂರಿನತ್ತ ಪ್ರಯಾಣ ಮುಂದುವರಿಸಿದೆ. ಅದುವರೆಗೆ ಪ್ರಯಾಣಿಸಿದ್ದ ಸುಮಾರು 600ಕಿ ಮೀ ಗಳದು ಒಂದು ಲೆಕ್ಕವಾದರೆ ಅಲ್ಲಿಂದ ಮುಂದಿನ 60—70 ಕಿ ಮಿ ಗಳದು ಅದನ್ನು ಮೀರಿಸಿದ ಲೆಕ್ಕ! ಹಾಗೂ ಹೀಗೂ ಕಷ್ಟ ಪಟ್ಟುಕೊಂಡು ಡ್ರೈವ್ ಮಾಡಿಕೊಂಡು ಊರು ಮುಟ್ಟಿ ಮನೆ ತಲುಪಿದಾಗ ರಾತ್ರಿ 10 ಗಂಟೆ. ರಂಜನಿಗೋ ಆ ವೇಳೆಯಲ್ಲಿ ಹಾಗೆ ಅನಿರೀಕ್ಷಿತವಾಗಿ ನಾನು ಬಂದಿಳಿದದ್ದು ಕಂಡು ಪರಮಾಶ್ಚರ್ಯ..ಜೊತೆಗೆ ಗಾಬರಿ..ಆತಂಕ! “ಇಂಥ ಹುಚ್ಚು ಸಾಹಸ ಇನ್ಯಾವತ್ತೂ ಮಾಡಬೇಡಿ.. ನನಗೆ ಜೀವದಲ್ಲಿ ಜೀವ ಇರೋಲ್ಲ” ಎಂಬ ಕಿವಿಮಾತು ಬೇರೆ! ಸಧ್ಯ, ಮೊದಲೇ ಅವಳಿಗೆ ನಾನು ಬೈಕ್ ನಲ್ಲಿ ಬರುತ್ತಿರುವ ವಿಷಯ ತಿಳಿಸದೇ ಇದ್ದುದೇ ಒಳ್ಳೆಯದಾಯಿತು ಎಂದುಕೊಂಡೆ! ಒಂದು ದಿನದ ಸಾಹಸ ಪ್ರಯಾಣ ಮಾಡಿ ಬಂದದ್ದಕ್ಕೆ ಎರಡು ದಿನ ಮಕಾಡೆ ಮಲಗಿ ಸುಧಾರಿಸಿಕೊಳ್ಳಬೇಕಾಯಿತು!

ಹೀಗೆ ಅಲ್ಲಿಂದಿಲ್ಲಿಗೆ ಬಂದು ಹೋಗುತ್ತಿದ್ದಾಗಲೇ ನಾನು ನಿರ್ದೇಶಿಸಿದ ಮತ್ತೊಂದು ಧಾರಾವಾಹಿ ಎಂದರೆ ‘ಖೆಡ್ಡಾ’. ಹಲವಾರು ಕಾರಣಗಳಿಗೆ ಈ ಧಾರಾವಾಹಿ ನನಗೆ ನೆನಪಿನಲ್ಲಿ ಉಳಿಯುವಂಥದ್ದು.

‘ಖೆಡ್ಡಾ’ ಧಾರಾವಾಹಿ ಪ್ರಸಿದ್ಧ ಪತ್ರಕರ್ತರಾಗಿದ್ದ ವಿ ಎನ್ ಸುಬ್ಬರಾವ್ ಅವರು ದೂರದರ್ಶನಕ್ಕಾಗಿ ನಿರ್ಮಿಸಿದ 13 ಕಂತುಗಳ ಸಾಪ್ತಾಹಿಕ ಧಾರಾವಾಹಿ. ಆತ್ಮೀಯ ಗೆಳೆಯ, ಪ್ರಸಿದ್ಧ ಕತೆಗಾರ ಪಾಲ್ ಸುದರ್ಶನ್ ಈ ಧಾರಾವಾಹಿಯ ಕಥೆ—ಚಿತ್ರಕಥೆಗಳನ್ನು ರಚಿಸಿದ್ದ. ಪ್ರಸಿದ್ಧ ಚಿತ್ರನಟ ಶ್ರೀಧರ್ ಅವರು ಮುಖ್ಯ ಭೂಮಿಕೆಯನ್ನು ನಿರ್ವಹಿಸುವವರಿದ್ದರು. ಸುಬ್ಬರಾವ್ ಅವರ ಸುಪುತ್ರ ಸುದರ್ಶನ್ ಹಾಗೂ ಆತ್ಮೀಯ ಗೆಳೆಯ ಶ್ರೀಕಾಂತ್ ನಿರ್ಮಾಣ ವ್ಯವಸ್ಥೆಯ ಹೊಣೆ ಹೊತ್ತಿದ್ದರು. ಒಂದು ಕಾಲೇಜ್ ಅನ್ನು ಕೇಂದ್ರವಾಗಿಟ್ಟುಕೊಂಡು ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಸಮಸ್ಯೆಗಳ ಬಗ್ಗೆ, ಆಡಳಿತ ವ್ಯವಸ್ಥೆಯ ಹುನ್ನಾರ—ಕುತಂತ್ರಗಳ ಬಗ್ಗೆ,ಒಟ್ಟಾರೆ ಹದಗೆಟ್ಟ ಶಿಕ್ಷಣ ವ್ಯವಸ್ಥೆಯ ಬಗ್ಗೆ ಕ್ಷಕಿರಣ ಬೀರುವ ಪ್ರಯತ್ನವನ್ನು ಪಾಲ್ ಸುದರ್ಶನ್ ‘ಖೆಡ್ಡಾ’ ಧಾರಾವಾಹಿಯಲ್ಲಿ ಮಾಡಿದ್ದ. ಇಡೀ ಧಾರಾವಾಹಿಯನ್ನು ದೊಡ್ಡಬಳ್ಳಾಪುರ ಹಾಗೂ ಸುತ್ತಮುತ್ತಲ ಕೆಲ ಜಾಗಗಳಲ್ಲಿ ಚಿತ್ರೀಕರಿಸಲು ಯೋಜಿಸಲಾಗಿತ್ತು. ದೊಡ್ಡಬಳ್ಳಾಪುರದಲ್ಲಿಯೇ ನಡೆದ ಚಿತ್ರೀಕರಣ ಮುಹೂರ್ತಕ್ಕೆ ವಿ ಎನ್ ಸುಬ್ಬರಾವ್ ಅವರು,ಪ್ರಸಿದ್ಧ ಸಾಹಿತಿ—ಪತ್ರಕರ್ತೆ ವಿಜಯಮ್ಮ ಅವರು ಹಾಗೂ ಮತ್ತೂ ಕೆಲ ಗಣ್ಯರು ಆಗಮಿಸಿ ಶುಭ ಕೋರಿದರು. ‘ಖೆಡ್ಡಾ’ ಧಾರಾವಾಹಿಯಲ್ಲಿ ಅಮೃತಘಳಿಗೆ ಶ್ರೀಧರ್ ಅವರ ಜತೆಗೆ ನಟಿಸಿದ ಇತರ ಕಲಾವಿದರೆಂದರೆ ಎ.ಎಸ್.ಮೂರ್ತಿಯವರು, ಶ್ರೀದೇವಿ, ಹಿರಿಯಣ್ಣಯ್ಯ, ರಂಗಭೂಮಿಯ ಪ್ರತಿಭೆಗಳಾದ ವೆಂಕಿ, ಧನಂಜಯ, ಚಿಕ್ಕ ಸುರೇಶ, ಸಂಜೀವ ಕುಲಕರ್ಣಿ, ಶ್ರೀಶೈಲನ್ ಮುಂತಾದವರು. ಚಿತ್ರೀಕರಣದುದ್ದಕ್ಕೂ ಶ್ರೀಧರ್ ಅವರು ನೀಡಿದ ಸಹಕಾರ—ಪ್ರೋತ್ಸಾಹಗಳನ್ನು ನಾನು ಮರೆಯುವಂತೆಯೇ ಇಲ್ಲ. ಸರಳತೆ—ಸಜ್ಜನಿಕೆಗಳೇ ಮೈವೆತ್ತಂತಹ ವ್ಯಕ್ತಿತ್ವ ಶ್ರೀಧರ್ ಅವರದು. ನಿಷ್ಠಾವಂತ ಅಧ್ಯಾಪಕನ ಪಾತ್ರವನ್ನು ಅವರು ನಿರ್ವಹಿಸಿದ ರೀತಿಯಂತೂ ಅನನ್ಯವಾದುದು. ದೂರದರ್ಶನದಲ್ಲಿ ಪ್ರಸಾರವಾದಾಗ ಸಾಕಷ್ಟು ಜನಪ್ರಿಯತೆಯನ್ನೂ ಗಳಿಸಿಕೊಂಡಿದ್ದ ಧಾರಾವಾಹಿ ‘ಖೆಡ್ಡಾ’.

ಈ ಸಮಯದಲ್ಲೇ ಮಾವನವರಾದ ಸುಂದರಂ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರುಗಳಾಗುತ್ತಿದ್ದುದು ಆತಂಕಕ್ಕೆ ಕಾರಣವಾದ ಸಂಗತಿಯಾಗಿತ್ತು. ವಾಸ್ತವವಾಗಿ ನನ್ನ ಅತ್ತೆಯವರು ತೀರಿಕೊಂಡ ಮೇಲೆ ಮಾವನವರು ತುಂಬಾ ಕುಸಿದುಹೋಗಿದ್ದರು. ಆ ಆಘಾತದಿಂದ ಅವರು ಸಂಪೂರ್ಣವಾಗಿ ಚೇತರಿಸಿಕೊಂಡೇ ಇರಲಿಲ್ಲ. ಅವರ ಜೀವನೋತ್ಸಾಹವೇ ಬತ್ತಿಹೋದಂತಾಗಿಹೋಗಿತ್ತು. ಅವರ ಆ ನಿರ್ಲಿಪ್ತ ನಿಸ್ತೇಜ ಸ್ಥಿತಿಗೆ ಮನಸ್ಸು ಕೊರಗುವಂತಾಗುತ್ತಿತ್ತು. ಇದು ಒಂದೆಡೆಗಾದರೆ ಉತ್ಸಾಹ—ಸಂಭ್ರಮ—ಸಂತಸದಿಂದ ಪುಟಿದೇಳುವಂತೆ ಮಾಡುವ ಮತ್ತೊಂದು ಆಹ್ಲಾದಕರ ಸಂಗತಿ ಮನಸ್ಸನ್ನು ಮುದಗೊಳಿಸಿತು: ರಂಜನಿ ಎರಡನೆಯ ಬಾರಿಗೆ ತಾಯಿಯಾಗುತ್ತಿದ್ದಾಳೆ!!ರಜೆ ಹಾಕಿ ಬೆಂಗಳೂರಿನಲ್ಲೇ ಉಳಿದುಕೊಳ್ಳಲು ಇದಕ್ಕಿಂತ ಒಳ್ಳೆಯ ಕಾರಣ ಬೇಕೇ!!? ನಿರ್ದೇಶಕ ಕುಲಕರ್ಣಿಯವರಿಗೆ ವಿಷಯ ತಿಳಿಸಿ, “ಕೇಂದ್ರದಲ್ಲಿ ಪೂರ್ಣಪ್ರಮಾಣದಲ್ಲಿ ಕೆಲಸ ಶುರುವಾಗುವವರೆಗೆ ನಾನು ಸಾಧ್ಯವಾದಷ್ಟೂ ರಜೆಯಲ್ಲೇ ಇರುತ್ತೇನೆ.. ಸಂಬಳವಿಲ್ಲದ ರಜೆಯಾದರೂ ಅಡ್ಡಿಯಿಲ್ಲ..ರಂಜನಿಗೆ ನನ್ನ ಜತೆಯ ಅಗತ್ಯವಿದೆ” ಎಂದು ವಿನಂತಿಸಿಕೊಂಡೆ.

1994 ರ ದ್ವಿತೀಯಾರ್ಧ ಲೆಕ್ಕಕ್ಕೇ ಸಿಗದಂತೆ ಕಳೆದುಹೋಯಿತು. ಮಗುವನ್ನು ಹೊಟ್ಟೆಯಲ್ಲಿಟ್ಟುಕೊಂಡು ಕಾಲೇಜಿಗೆ ಹೋಗಿ ನಾಲ್ಕಾರು ತಾಸು ಪಾಠ ಮಾಡಿ ಬರುವಷ್ಟರಲ್ಲಿ ರಂಜನಿ ಬಸವಳಿದುಹೋಗುತ್ತಿದ್ದಳು. ನಾನೂ ಸಾಧ್ಯವಾದಷ್ಟೂ ಮನೆಗೆಲಸಗಳಲ್ಲಿ ಅವಳಿಗೆ ನೆರವಾಗುತ್ತಿದ್ದೆ. ಮಗಳು ರಾಧಿಕಾಳಂತೂ ವಯಸ್ಸಿಗೆ ಮೀರಿದ ಪ್ರೌಢತೆ ತೋರುತ್ತಾ ತನ್ನಮ್ಮನನ್ನು ಬಲು ಜತನದಿಂದ ನೋಡಿಕೊಳ್ಳುತ್ತಿದ್ದಳು. ಕೆಲ ತಿಂಗಳಿಗೆ ಹೊರ ಜಗತ್ತಿಗೆ ಕಾಲಿಡುವ ತಂಗಿಯನ್ನೋ ತಮ್ಮನನ್ನೋ ಕಾಣಲು ಆ ಪುಟ್ಟ ಹುಡುಗಿ ತವಕಿಸುತ್ತಿದ್ದಳು! ರಂಜನಿಯನ್ನು ನಾನು ತಪಾಸಣೆಗಾಗಿ ಕರೆದುಕೊಂಡು ಹೋಗುತ್ತಿದ್ದುದು ಡಾ॥ಗೀತಾ ಶಾನುಭೋಗ್ ಅವರಲ್ಲಿಗೆ.ಅವರ ನರ್ಸಿಂಗ್ ಹೋಂ ಬಸವೇಶ್ವರ ನಗರದಲ್ಲೇ ಇದ್ದುದರಿಂದ ಹೋಗಿ ಬರುವುದಕ್ಕೆ ಅನುಕೂಲವಾಗಿತ್ತು. ಹೆರಿಗೆಯ ದಿನಗಳು ಹತ್ತಿರ ಬಂದಂತೆ ರಂಜನಿಗೆ ಕಾಲೇಜ್ ಗೆ ಹೋಗಿಬರುವುದು ಕಷ್ಟವಾಗತೊಡಗಿತು. ಆಗ ಒಂದಷ್ಟು ದಿವಸ ನಾನೇ ಕಾಲೇಜಿಗೆ ಹೋಗಿ ಮಕ್ಕಳಿಗೆ ಪಾಠ ಮಾಡಿ ಬರುತ್ತಿದ್ದೆ. 95 ರ ಜನವರಿ ಮಾಸಾಂತ್ಯದಲ್ಲಿ ತಪಾಸಣೆಗೆ ಹೋಗಿದ್ದಾಗ “ಒಂದೆರಡು ವಾರ ಮುಂಚಿತವಾಗಿಯೇ ಹೆರಿಗೆ ಆಗಬಹುದು” ಎಂದು ಡಾ॥ಗೀತಾ ಅವರು ಸೂಚನೆ ನೀಡಿದ್ದರು.ಅಂತೆಯೇ ಫೆಬ್ರವರಿ ಮೊದಲ ವಾರದಲ್ಲೇ ಕೂಸಿನ ಆಗಮನದ ಸೂಚನೆ ದೊರೆಯುತ್ತಿದ್ದಂತೆ ರಂಜನಿಯನ್ನು ನರ್ಸಿಂಗ್ ಹೋಂಗೆ ಸೇರಿಸಿದೆವು. ‘ಈ ಬಾರಿಯೂ ಸಿಜೇ಼ರಿಯನ್ ಏ ಆಗಬಹುದು’ ಎಂದು ಡಾ॥ಗೀತಾ ಅವರು ಮುಂಚಿತವಾಗಿಯೇ ಹೇಳಿದ್ದರು. ಅಂತೆಯೇ 1995 ಫೆಬ್ರುವರಿ ಏಳನೆಯ ತಾರೀಖು ಬೆಳಿಗ್ಗೆ 9.30 ರ ಸುಮಾರಿಗೆ ಈ ಲೋಕಕ್ಕೆ ನಮ್ಮ ಎರಡನೆಯ ಕಂದನ ಆಗಮನವಾಯಿತು! ಸಿಜೇ಼ರಿಯನ್ ಆಪರೇಷನ್ ಮಾಡಿ ಕೂಸನ್ನು ಹೊರ ಕರೆತಂದ ಡಾ॥ಗೀತಾ ಉದ್ಗರಿಸಿದರು: “Baby boy!!” ವಂಶೋದ್ಧಾರಕ ಬಂದನೆಂದು ಅಮ್ಮ ಹಾಗೂ ಕುಟುಂಬದವರು ಸಂಭ್ರಮಿಸಿದರು. ನಾನೂ ರಂಜನಿಯೂ ಮಾತ್ರ ಮೊದಲೇ ಮಾತಾಡಿಕೊಂಡಿದ್ದೆವು: “ಗಂಡಾಗಲೀ ಹೆಣ್ಣಾಗಲೀ ಅದು ನಮ್ಮ ಕೂಸು! ನಮ್ಮದೇ ಅಂಶ! ಅದಕ್ಕೆ ಮೊಗೆಮೊಗೆದು ಪ್ರೀತಿ ನೀಡುವುದಷ್ಟೇ ನಮ್ಮ ಕೆಲಸ! ಆ ನಮ್ಮ ಕನಸಿಗೆ ಒಂದು ಸುಂದರ ನಾಳೆಯನ್ನು ಕಟ್ಟಿಕೊಡುವುದಷ್ಟೇ ನಮ್ಮ ಜವಾಬ್ದಾರಿ!” ಹುಟ್ಟುವ ಕೂಸಿಗೆ ಹೆಸರನ್ನೂ ನಾವು ಮೊದಲೇ ಯೋಚಿಸಿಟ್ಟುಕೊಂಡಾಗಿತ್ತು: ಹೆಣ್ಣುಮಗುವಾದರೆ ಮಾಲವಿಕಾ.. ಗಂಡು ಮಗುವಾದರೆ ಅನಿರುದ್ಧ!

ಈಗಂತೂ ಬೆಂಗಳೂರಿಗೆ ಮತ್ತೆ ವರ್ಗ ಮಾಡಿಸಿಕೊಡು ಬರುವುದು ಅನಿವಾರ್ಯ ಎನಿಸತೊಡಗಿತು. ಆ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡತೊಡಗಿದೆ. ಆಗ ಕೆಲ ವಿಶೇಷ ಸಂದರ್ಭಗಳಲ್ಲಿ ನನಗೆ ಪರಿಚಿತರಾಗಿ ಆತ್ಮೀಯರಾಗಿದ್ದ ಎಂ ಪಿ ಕುಮಾರ್ ಅವರು ನನಗೆ ಸಹಾಯ ಮಾಡುವ ಭರವಸೆ ನೀಡಿದರು. ದೆಹಲಿಯಲ್ಲಿ ಆ ಸಮಯದಲ್ಲಿ ಡೆಪ್ಯುಟಿ ಸ್ಪೀಕರ್ ಆಗಿದ್ದ ಮಲ್ಲಿಕಾರ್ಜುನಯ್ಯ ಅವರು ಕುಮಾರ್ ಅವರಿಗೆ ತುಂಬಾ ಬೇಕಾದವರು.” ಮಲ್ಲಿಕಾರ್ಜುನಯ್ಯ ಅವರು ನಮ್ಮ ಕೆಲಸ ಖಂಡಿತ ಮಾಡಿಕೊಡುತ್ತಾರೆ, ಚಿಂತಿಸಬೇಡಿ” ಎಂದು ಕುಮಾರ್ ಅವರು ನನಗೆ ಭರವಸೆ ನೀಡಿದ್ದರು. ಇದಾಗಿ ಒಂದಷ್ಟು ದಿನಗಳು ಕಳೆದರೂ ಮಲ್ಲಿಕಾರ್ಜುನಯ್ಯನವರು ನನ್ನ ವರ್ಗಾವಣೆಗಾಗಿ ಶಿಫಾರಸು ಮಾಡಿದ್ದರೂ ನಮ್ಮ ಕೇಂದ್ರದ ದೆಹಲಿ ದೊರೆಗಳು ಮಿಸುಕಿರಲಿಲ್ಲ! ನನ್ನ ಬದುಕಿನಲ್ಲಿ ಮೊಟ್ಟಮೊದಲ ಬಾರಿಗೆ ನಾನು ನನ್ನ ಕೆಲಸಕ್ಕಾಗಿ ತರುತ್ತಿದ್ದ ರಾಜಕೀಯ ಒತ್ತಡವಿದು! ಇದರಲ್ಲೂ ಮುಗ್ಗರಿಸಿಬಿಟ್ಟೆನೇ ಎಂಬ ಹಳಹಳಿಕೆ ಶುರುವಾಗಿ ಬಿಟ್ಟಿತು! ಕುಮಾರ್ ಅವರು ಮಾತ್ರ ನಂಬಿಕೆ ಕಳಕೊಂಡಿರಲಿಲ್ಲ. “ಡೆಪ್ಯುಟಿ ಸ್ಪೀಕರ್ ಅವರ ಮಾತನ್ನ ತಳ್ಳಿಹಾಕುವಷ್ಟು ಉದ್ಧಟತನವೇ!! ತಾಳಿ, ಇನ್ನೊಂದ್ಸಲ ಸರಿಯಾಗಿ ಝಾಡಿಸೋದಕ್ಕೆ ಹೇಳ್ತೀನಿ..ನಿಮ್ಮ ಕೆಲಸ ಆಗೇ ಆಗುತ್ತೆ..ಚಿಂತೆ ಮಾಡಬೇಡಿ” ಎಂದು ಕುಮಾರ್ ಅವರು ನನಗೆ ಧೈರ್ಯ ತುಂಬಿದರು. ಇದೇ ವೇಳೆಗೆ ಸರಿಯಾಗಿ ಗುಲ್ಬರ್ಗಾದಿಂದ ಕುಲಕರ್ಣಿಯವರು, “ಕೂಡಲೇ ಹೊರಟುಬನ್ನಿ.. ತುರ್ತಾಗಿ ಒಂದು ಕಾರ್ಯಕ್ರಮ ಆಗಬೇಕಿದೆ” ಎಂದು ಸಂದೇಶ ಕಳಿಸಿದರು. ಈ ಸಂದೇಶದಿಂದ ಬೇಸರ—ಕುದಿ ಮತ್ತಷ್ಟು ಹೆಚ್ಚಿತು. ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ರಂಜನಿ ಹಾಗೂ ಮಕ್ಕಳನ್ನು ಬಿಟ್ಟು ಗುಲ್ಬರ್ಗಾಗೆ ರೈಲು ಹತ್ತಿದೆ. ಸಹಜವಾಗಿಯೇ ಕೆಂಡದ ಹಾಸಿನಂತೆ ಉರಿಯುವ ಗುಲ್ಬರ್ಗಾದಲ್ಲಿ ನನ್ನ ಬೇಗೆ ಮತ್ತಷ್ಟು ಹೆಚ್ಚಿತು! ಹಾಗೂ ಹೀಗೂ ಎರಡು ದಿನ ಕಳೆದೆ.

ಮರುದಿನ, 1995 ನೇ ಇಸವಿ ಮಾರ್ಚ್ ಐದನೇ ತಾರೀಖು. ಅಂದು ಆಫೀಸಿಗೆ ಹೋಗುತ್ತಿದ್ದಂತೆ ನಿರ್ದೇಶಕ ಕುಲಕರ್ಣಿಯವರು ಛೇಂಬರ್ ಗೆ ಕರೆಸಿಕೊಂಡರು. ಅವರ ಮುಖದ ಮೇಲೆ ನಗು ಹರಡಿದ್ದರೂ ಹಿನ್ನೆಲೆಯಲ್ಲೊಂದು ನೋವಿನ ಗೆರೆ ಇಣುಕುತ್ತಿರುವಂತೆ ಭಾಸವಾಗುತ್ತಿತ್ತು. ಯಾವ ಉತ್ಸಾಹವೂ ಇಲ್ಲದೆ ಒಳಹೋಗಿ ನಿಂತ ನನ್ನನ್ನೇ ಒಂದು ಕ್ಷಣ ದಿಟ್ಟಿಸಿದ ಕುಲಕರ್ಣಿಯವರು,” I have one bad news and one good news for you… ಯಾವುದನ್ನ ಮೊದಲು ಹೇಳಲಿ?” ಎಂದು ಪ್ರಶ್ನೆ ಕೇಳಿ ನನ್ನ ಉತ್ತರಕ್ಕೆ ಕಾಯದೆ, “ಇರಲಿ ಬಿಡಿ.. ಮೊದಲು ಒಳ್ಳೇ ಸುದ್ದೀನೇ ಹೇಳಿಬಿಡ್ತೀನಿ.. ನಿಮಗೆ ಬೆಂಗಳೂರಿಗೆ transfer ಆಗಿದೆ with immediate effect!” ಎಂದು ನುಡಿದು ಮೌನ ವಹಿಸಿದರು. ಅಬ್ಬಾ!!! ಅಷ್ಟು ದಿನಗಳಿಂದ ಕಾಯುತ್ತಿದ್ದ ವರ್ಗಾವಣೆಯ ಸಂದೇಶ ಕೊನೆಗೂ ಬಂದುಬಿಟ್ಟಿದೆ!! ಮನಸ್ಸು ಸುದ್ದಿಯನ್ನರಗಿಸಿಕೊಂಡು ಸಂಭ್ರಮಿಸಲು ಸಜ್ಜಾಗುತ್ತಿರುವಂತೆಯೇ ಕುಲಕರ್ಣಿಯವರ ಮಾತು ತೂರಿಬಂತು: “now the bad news.. your father in law is nomore… ಇವತ್ತು ಬೆಳಿಗ್ಗೆ ಅವರು ತೀರಿಕೊಂಡರು ಅಂತ ಅವರ ಮಗ ಬಾಬು ಅನ್ನೋರು ಫೋನ್ ಮಾಡಿ ಮೆಸೇಜ್ ಕೊಟ್ಟಿದಾರೆ.” “ಒಂದು ಕ್ಷಣ ತಲೆ ಸುತ್ತಿದಂತಾಯಿತು. ಬದುಕಿನದೂ ಇದೆಂಥ ವಿಚಿತ್ರ ವೈಪರೀತ್ಯಗಳು! ಸಂಭ್ರಮದ ಸುದ್ದಿಯ ಬೆನ್ನಿಗೇ ಕಂಗೆಡಿಸುವ ಸಮಾಚಾರ! ಒಂದೇ ಉಸುರಿನಲ್ಲಿ ಹುದುಗಿರುವ ಎರಡು ತದ್ವಿರುದ್ಥ ಸಂಗತಿಗಳು! ಮನಸ್ಸು ಯಾವುದನ್ನು ಪರಿಭಾವಿಸಬೇಕು.. ಹೇಗೆ ಪ್ರತಿಕ್ರಿಯಿಸಬೇಕು..? ಒಟ್ಟಾರೆ ಗೊಂದಲದ ಗೂಡು…

ಮನಸ್ಸು ಕೊಂಚ ಹತೋಟಿಗೆ ಬಂದಮೇಲೆ ಕುಲಕರ್ಣಿಯವರ ಛೇಂಬರ್ ನಿಂದಲೇ ಬಾಬು ಅವರಿಗೆ ಫೋನ್ ಮಾಡಿದೆ. ಮಾವನವರ ದೇಹಸ್ಥಿತಿ ಹಲವಾರು ದಿನಗಳಿಂದ ಕ್ಷೀಣಿಸುತ್ತಲೇ ಬಂದದ್ದರಿಂದ ಅವರ ಸಾವು ಅನಿರೀಕ್ಷಿತವಾದುದೇನೂ ಆಗಿರಲಿಲ್ಲ.. ಆದರೂ ಶಾಶ್ವತವಾಗಿ ಒಬ್ಬರನ್ನು ಕಳೆದುಕೊಳ್ಳುವುದೆಂದರೆ ಒಂದಷ್ಟು ಖಾಲಿತನವನ್ನು ತಬ್ಬಿದ ಹಾಗೆ..

ಅಂದೇ ಮಧ್ಯಾಹ್ನ ಅಂತ್ಯಕ್ರಿಯೆ.. ಅಂದರೆ ಹೇಗೂ ನನಗೆ ಆ ಸಮಯಕ್ಕೆ ಅಲ್ಲಿಗೆ ಹೋಗಲಾಗದು. ಅದರ ಬದಲಿಗೆ ಒಂದು ದಿನ ತಡೆದು ವರ್ಗಾವಣೆಯ ಇಲ್ಲಿನ ಪ್ರಕ್ರಿಯೆಗಳನ್ನು ಮುಗಿಸಿ ಒಂದೇ ಸಲಕ್ಕೆ ಹೊರಟುಬಿಡುವುದೇ ಒಳ್ಳೆಯದು ಎಂದು ಕುಲಕರ್ಣಿಯವರೂ ಅಭಿಪ್ರಾಯ ಪಟ್ಟರು.ಬಾಬು ಅವರ ಅಭಿಪ್ರಾಯವೂ ಅದೇ ಆಗಿತ್ತು. “ನಾವೆಲ್ಲರೂ ಇಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿದ್ದೇವೆ.. ಸಮಾಧಾನ ಮಾಡಿಕೊಳ್ಳುತ್ತೇವೆ.. ನೀವು ಎಲ್ಲಾ formalities ಮುಗಿಸಿಕೊಂಡೇ ಬಂದುಬಿಡಿ” ಎಂದರು ಬಾಬು. ಅವರುಗಳು ಹೇಳಿದಂತೆಯೇ ಅಂದು ಅಲ್ಲೇ ಉಳಿದು ವರ್ಗಾವಣೆಯ ಸಂದೇಶದ ಪ್ರತಿ ತೆಗೆದುಕೊಂಡು ಬೆಂಗಳೂರಿನ ಮತ್ತೊಂದು ಪ್ರಯಾಣಕ್ಕೆ ಸಜ್ಜಾಗಿ ರೈಲು ಹತ್ತಿದೆ.

ಮತ್ತೊಂದು ಪಯಣದ ಆರಂಭ… ಈ ಹಾದಿಯ ಗುಂಟ ಮತ್ತೇನೇನು ಎದುರಾಗುವುದೋ.. ಅದಾವ ಸಂತಸ ಸಂಭ್ರಮಗಳ ಹೆಬ್ಬಾಗಿಲು ತೆರೆಯುವುದೋ.. ಮತ್ತದಾವ ತಲ್ಲಣ ಆತಂಕಗಳು ಹೆಡೆ ಬಿಚ್ಚಿ ಭುಸುಗುಡುತ್ತವೋ..

ಒಟ್ಟಾರೆ ಎಲ್ಲಾ ಒಂದು ರಹಸ್ಯಗಳ ಮೂಟೆ!
ಹೀಗೆ ರೈಲಿನ ಛುಕುಬುಕು ಲಯಕ್ಕೆ ಹೊಂದಿಕೊಂಡು ನೂರು ಆಲೋಚನೆಗಳು ಮನಸ್ಸಿಗೆ ಮುತ್ತಿಗೆ ಹಾಕುತ್ತಿದ್ದವು. ಗುಲಾಂ ಅಲಿಯವರ ಗಜ಼ಲ್ ಸಾಲುಗಳು ಕಿವಿಯಲ್ಲಿ ಮೊರೆಯುತ್ತಿದ್ದವು:
“ಮುಸಾಫಿರ್ ಚಲ್ತೇ ಚಲ್ತೇ ಥಕ್ ಗಯಾ ಹೈ/ ಸಫರ್ ಜಾನೇ ಅಭೀ ಕಿತನಾ ಪಡಾ ಹೈ”….

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

May 25, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: