ಶ್ರೀನಿವಾಸ ಪ್ರಭು ಅಂಕಣ- ಅನಿರೀಕ್ಷಿತ ದೊಡ್ಡ ಪೆಟ್ಟು…

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ ಅಪ್ಪಿಕೊಳ್ಳುವಂತೆ ಮಾಡಿತು.

ರಂಗಭೂಮಿಯ ಮಗ್ಗುಲಲ್ಲೇ ಟಿಸಿಲೊಡೆಯುತ್ತಿದ್ದ ಸಿನೆಮಾ ಹಾಗೂ ಕಿರುತೆರೆ ಶ್ರೀನಿವಾಸ ಪ್ರಭು ಅವರನ್ನು ಪ್ರೀತಿಯಿಂದ ಬರಮಾಡಿಕೊಂಡಿತು. ಶ್ರೀನಿವಾಸ ಪ್ರಭು ಅವರು ಬರೆದ ನಾಟಕಗಳೂ ಸಹಾ ರಂಗಭೂಮಿಯಲ್ಲಿ ಭರ್ಜರಿ ಹಿಟ್ ಆಗಿವೆ.

ಎಂ ಆರ್ ಕಮಲ ಅವರ ಮನೆಯಂಗಳದಲ್ಲಿ ನಡೆದ ‘ಮಾತು-ಕತೆ’ಯಲ್ಲಿ ಪ್ರಭು ತಮ್ಮ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಮಾತನಾಡಿದ್ದರು. ಆಗಿನಿಂದ ಬೆನ್ನತ್ತಿದ ಪರಿಣಾಮ ಈ ಅಂಕಣ.

89

ಡಾ॥ ನಾಗರಾಜಯ್ಯ ಮುಂದುವರಿಸಿದರು: “ಲುಂಬ್ಯಾಗೋ ಅಂದರೆ ಬೆನ್ನಿನ ಕೆಳಭಾಗದ ಸ್ನಾಯು ಹಾಗೂ ಕೀಲುಗಳಲ್ಲಿ ಬರುವ ನೋವು! ನೀವು ಇದರಿಂದ ಬಳಲುತ್ತಿದ್ದೀರಿ, ಕನಿಷ್ಠ 20ದಿನಗಳ ವಿಶ್ರಾಂತಿ ಅತ್ಯಗತ್ಯ ಅಂತ ಬರೆದುಕೊಡ್ತೇನೆ..ನಿಮ್ಮ ಸಮಸ್ಯೆ ಪರಿಹಾರವಾಗುತ್ತೆ “.
ಹಾಗೆ ಒಂದು ಸುಳ್ಳು ಸರ್ಟಿಫಿಕೇಟ್ ಅನ್ನು ಡಾಕ್ಟರಿಂದ ಪಡೆದುಕೊಂಡು ಮರುದಿನವೇ ರಿಜಿಸ್ಟರ್ಡ್ ಟಪಾಲಿನಲ್ಲಿ ನಮ್ಮ ಕೇಂದ್ರದ ನಿರ್ದೇಶಕರಿಗೆ ರವಾನಿಸಿಬಿಟ್ಟೆ. ಹಾಗೆ ಸುಳ್ಳು ಹೇಳಿದ್ದಕ್ಕೆ ಹಾಗೂ ಅದಕ್ಕೆ ನಮ್ಮ ಡಾಕ್ಟರ್ ಮಿತ್ರರನ್ನೂ ಭಾಗೀದಾರನನ್ನಾಗಿ ಮಾಡಿದ್ದಕ್ಕೆ ಕಸಿವಿಸಿಯಾಯಿತಾದರೂ ಕಾಶ್ಮೀರದ ತೂಗುಕತ್ತಿಯಿಂದ ಪಾರಾಗಲು ಹಾಗೊಂದು ಸುಳ್ಳು ಹೇಳದೇ ಉಪಾಯವೇ ಇರಲಿಲ್ಲ. ನಾಟಕದ ಪ್ರದರ್ಶನದ ದಿನಗಳೂ ಬೇರೆ ಹತ್ತಿರ ಬಂದದ್ದರಿಂದ ತಾಲೀಮಿಗೆ ಹೆಚ್ಚು ಸಮಯ ನೀಡಲು ಸಹಾ ಈ ರಜೆಯಿಂದಾಗಿ ಸಾಧ್ಯವಾಯಿತು.
ಕೆಲ ವರ್ಷಗಳ ಬಿಡುವಿನ ನಂತರ ನನ್ನ ನಿರ್ದೇಶನದ ನಾಟಕ ರಂಗದ ಮೇಲೆ ಬರಲಿತ್ತು. ಹಾಗಾಗಿ ನಾನು ಕೊಂಚ ಆತಂಕದಲ್ಲೇ ಇದ್ದೆ ಎನ್ನಬೇಕು. ಸಂಪೂರ್ಣ ಮನರಂಜನಾತ್ಮಕ ನಾಟಕವಾದುದರಿಂದ ವಿಮರ್ಶಕರು ಹೇಗೆ ಪ್ರತಿಕ್ರಿಯಿಸುತ್ತಾರೋ ಎಂಬ ಅಳುಕು ಬೇರೆ ಕಾಡುತ್ತಿತ್ತು. ಅದುವರೆಗೆ ನಾನು ಮಾಡಿಸಿದ್ದೆಲ್ಲವೂ—ಗುಳ್ಳೆನರಿಯನ್ನು ಹೊರತುಪಡಿಸಿ—ಗಂಭೀರ ನಾಟಕಗಳೇ. ‘ವಿಡಂಬನಾತ್ಮಕ ನಾಟಕ’ ಎಂದು ಹೇಳಿಕೊಂಡೇ ಗುಳ್ಳೆನರಿ ನಾಟಕವನ್ನು ರಂಗಕ್ಕೆ ತಂದಿದ್ದರೂ ‘ಹಾಡುಕುಣಿತಗಳ ರಂಜನೆ—ವಿಡಂಬನೆಯಾಗಿ ಮಾತ್ರ ಉಳಿದ ನಾಟಕ ‘ ಎಂಬಂತಹ ಟೀಕೆಗಳೂ ಆಗ ಕೇಳಿಬಂದದ್ದು ನನ್ನ ಅಳುಕನ್ನು ಹೆಚ್ಚಿಸಿತ್ತು. ವೈನೋದಿಕಗಳನ್ನೂ ಒಂದು ಶುದ್ಧ ನಾಟಕ ಪ್ರಕಾರವಾಗಿ ಗಮನಿಸದೇ ಕೇವಲ ಬೌದ್ಧಿಕ ಯಾ ಸಂದೇಶ ವಾಹಕ ನಾಟಕಗಳಿಗೆ ಮಾತ್ರ ಮಣೆ ಹಾಕುವ ಕೆಲ ವಿಮರ್ಶಕರು ಈ ವೈನೋದಿಕಕ್ಕೆ ಸಹೃದಯ ಸ್ಪಂದನೆ ನೀಡುವರೇ ಎಂಬ ಚಿಂತೆಯೂ ಕಾಡುತ್ತಿತ್ತು.ಏನೇ ಆದರೂ ಶುದ್ಧ ಮನರಂಜನೆಯ ಇಂಥ ನಾಟಕಗಳು ರಂಗಭೂಮಿಗೆ ಹೊಸ ಪ್ರೇಕ್ಷಕರನ್ನು ಖಂಡಿತ ಕರೆತರುತ್ತವೆ ಎಂಬುದು ನನ್ನ ಅಚಲ ನಂಬಿಕೆ ಆಗಿತ್ತು.

ನಾನು ಎಣಿಸಿದ್ದಂತೆಯೇ ‘ಬ್ರಹ್ಮಚಾರಿ ಶರಣಾದ’ ನಾಟಕ ರಂಗದ ಮೇಲೆ ಪ್ರಚಂಡ ಯಶಸ್ಸನ್ನು ಗಳಿಸಿತು.ಕಲಾವಿದರೆಲ್ಲರದ್ದು ಅಮೋಘ ಅಭಿನಯ. ಬಾಳಗೆಳತಿ ರಂಜನಿಯೂ ನುರಿತ ಕಲಾವಿದೆಯಂತೆಯೇ ನಟಿಸಿದ್ದು ಮನಸ್ಸಿಗೆ ಮತ್ತಷ್ಟು ಮುದ ನೀಡಿದ ಸಂಗತಿ. 130 ನಿಮಿಷಗಳ ಕಾಲ ಪ್ರೇಕ್ಷಕರನ್ನು ಬಿಡುವು ಕೊಡದಂತೆ ನಗೆಗಡಲಿನಲ್ಲಿ ತೇಲಿಸಿದ ‘ಬ್ರಹ್ಮಚಾರಿ ಶರಣಾದ’ ನಾಟಕ ಅಲ್ಪ ಕಾಲದಲ್ಲೇ ಹಲವಾರು ಪ್ರದರ್ಶನಗಳನ್ನು ಕಂಡು ಯಶಸ್ವೀ ನಾಟಕವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇಬ್ಬರು ಬ್ರಹ್ಮಚಾರಿಗಳು ಪ್ರೇಮದಲ್ಲಿ ಸಿಕ್ಕಿಬಿದ್ದು ನಂತರ ಅನೇಕ ಗೋಜಲುಗಳ ಬಲೆಯಲ್ಲಿ ಸಿಲುಕಿ ಕೊಂಡು ನಿಧಾನವಾಗಿ ಒಂದೊಂದೇ ಕಗ್ಗಂಟನ್ನು ಬಿಡಿಸಿಕೊಳ್ಳುತ್ತಾ ಕೊನೆಗೆ ಸುಖಾಂತವಾಗುವ ‘ಬ್ರಹ್ಮಚಾರಿ’ ನಾಟಕಕ್ಕೆ ಪ್ರೇಕ್ಷಕರ ಅದ್ಭುತ ಪ್ರತಿಕ್ರಿಯೆ ದೊರೆತು ಮನಸ್ಸು ಹಗುರಾಯಿತು.ನಾಟಕವನ್ನು ಓದಿದ ಕವಿಗುರು—ಶ್ರೇಷ್ಠ ನಾಟಕಕಾರ ಹೆಚ್ ಎಸ್ ವೆಂಕಟೇಶ ಮೂರ್ತಿಯವರು ಹೀಗೆ ಪ್ರತಿಕ್ರಿಯಿಸಿದ್ದಾರೆ: ” ಶ್ರೀನಿವಾಸ ಪ್ರಭು ಘನವಾದ ಕಾವ್ಯ—ಸಂಗೀತ ಪ್ರೇಮಿ, ಪ್ರತಿಭಾಶಾಲಿ ರಂಗ ನಿರ್ದೇಶಕ,ಅದ್ಭುತ ನಟ. ಈಗ ಒಳ್ಳೆಯ ಪ್ರಹಸನಕಾರರಾಗಿಯೂ ಈ ನಾಟಕದ ಮೂಲಕ ಪ್ರಕಟವಾಗುತ್ತಿದ್ದಾರೆ. ಅವರ ಈ ನಾಟಕ ಶ್ರೇಷ್ಠ ಬರಹಗಾರ ವುಡ್ ಹೌಸ್ ಅವರ ಪ್ರೇರಣೆ—ಸ್ಫೂರ್ತಿಯಿಂದ ಸೃಷ್ಟಿಯಾದದ್ದು. ಪ್ರಭು ತಮ್ಮ ದೇಸೀ ಸಂವೇದನೆ ಮತ್ತು ರಂಗಪ್ರಜ್ಞೆಯಿಂದ ಅದನ್ನೊಂದು ಅಚ್ಚ ಕನ್ನಡ ನಾಟಕವಾಗಿ ನಿರ್ಮಿಸಿದ್ದಾರೆ.ಈಚಿನ ದಿನಗಳಲ್ಲಿ ವಿರಳವಾಗಿರುವ ಪ್ರಹಸನಗಳ ಅರಕೆಯನ್ನು ಈ ನಾಟಕ ತುಂಬಿಕೊಡುವಂತಿದೆ. ತರ್ಕವನ್ನು ನಿರುಪಯುಕ್ತಗೊಳಿಸುವ ನಾಟಕದ ತೀವ್ರಗತಿ, ಕ್ಷಣಕ್ಷಣಕ್ಕೆ ಹಾಸ್ಯ ಉಕ್ಕಿಸುವ ಕ್ರಿಯೆ ಮತ್ತು ಮಾತುಗಳು, ಮೊದಲು ಸಿಕ್ಕುಗೊಳಿಸಿ ನಂತರ ಅದನ್ನು ಬಿಡಿಸುವ ಜಾಣ್ಮೆಯ ರಂಗ ಸಂವಿಧಾನ—ಇವುಗಳಿಂದ ನಾಟಕ ರಂಗದ ಮೇಲೆ ಆಕರ್ಷಕ ಪ್ರಯೋಗವಾಗುವ ಎಲ್ಲ ಅರ್ಹತೆಯನ್ನೂ ಪಡೆದಿದೆ.”

ಪ್ರಸಿದ್ಧ ಸಾಹಿತಿಗಳೂ ಪತ್ರಕರ್ತರೂ ಆದ ಜಿ.ಎನ್.ಮೋಹನ್ ಅವರು ನಾಟಕದ ಪ್ರದರ್ಶನದ ಬಗ್ಗೆ ಪ್ರಜಾವಾಣಿ ಪತ್ರಿಕೆಯಲ್ಲಿ ಹೀಗೆ ಬರೆದರು: “ಹಾಸ್ಯದ ಎಳೆಯ ಮೇಲೇ ಸಾಗಿ ಯಶಸ್ವಿಯಾಗುವ ನಾಟಕಗಳು ಇತ್ತೀಚೆಗೆ ತೀರಾ ಕಡಿಮೆಯಾಗಿದೆ. ಹಾಸ್ಯದ ಹಾದಿ ಹಿಡಿಯಲು ಹೋಗಿ ಅಪಹಾಸ್ಯವಾಗುವ ನಾಟಕಗಳೇ ಹೆಚ್ಚು. ಈ ಹಿಂದೆ ನಟ ಶಂಕರನಾಗ್ ಮತ್ತು ಗೆಳೆಯರು ಹಾಸ್ಯದ ಹೂರಣವುಳ್ಳ ನಾಟಕಗಳನ್ನು ರಂಗಕ್ಕೆ ನೀಡಿದ್ದರು. ನಂತರ ಬಹುತೇಕ ಇಲ್ಲವಾಗಿದ್ದ ಹಾಸ್ಯನಾಟಕಗಳ ಕೊರತೆಯನ್ನು ಈ ನಾಟಕ ತುಂಬಿದೆ…ಶ್ರೀನಿವಾಸ ಪ್ರಭು ಅವರ ರಚನೆಯಲ್ಲಿ ‘ಬ್ರಹ್ಮಚಾರಿ ಶರಣಾದ’ ಉತ್ತಮವಾಗಿ ಮೂಡಿ ಬಂದಿದೆ. ಚುರುಕು ಸಂಭಾಷಣೆ,ಸದಾ ಕಾಯ್ದುಕೊಳ್ಳುವ ಲವಲವಿಕೆ ಈ ನಾಟಕದ ಹೆಚ್ಚುಗಾರಿಕೆ. ಸ್ವತಃ ಪ್ರಭು ಅವರೇ ಈ ನಾಟಕವನ್ನು ನಿರ್ದೇಶಿಸಿರುವುದರಿಂದ ನಾಟಕ ಕೇವಲ ಮಾತೇ ಆಗದೆ ಗಟ್ಟಿಯಾಗಿ ಉಳಿದಿದೆ….ಸುದರ್ಶನ್, ಶಿವಮಲ್ಲಯ್ಯ, ಶ್ರೀನಿವಾಸ ಮೇಷ್ಟ್ರು, ವಿದ್ಯಾ, ನಳಿನಿಮೂರ್ತಿ ಮುಂತಾದವರು ಹಲವು ಕಾಲ ಮನದಲ್ಲುಳಿಯುವ ಅಭಿನಯ ನೀಡಿದ್ದಾರೆ.”

ಇತ್ತೀಚೆಗೆ ಇದೇ ನಾಟಕವನ್ನು ‘ಪರಮೇಶಿ ಪ್ರೇಮ ಪ್ರಸಂಗ’ ಎಂಬ ಮೂಲ ಹೆಸರಿನಿಂದಲೇ ಪ್ರಖ್ಯಾತ ಪ್ರಕಾಶಕರಾದ ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆಯ ಶ್ರೀ ಛಾಯಾಪತಿಯವರು ಪ್ರಕಟಿಸಿದರು. ನಾಟಕವನ್ನು ರಂಗಶಂಕರದಲ್ಲಿ ಲೋಕಾರ್ಪಣೆ ಮಾಡಿದ ಸಂದರ್ಭದಲ್ಲಿ ಶ್ರೇಷ್ಠ ಸಾಹಿತಿ—ವಿಮರ್ಶಕ ಡಾ॥ಸಿ.ಎನ್.ರಾಮಚಂದ್ರನ್ ಅವರು ಮಾತನಾಡಿ, “ಪರಮೇಶಿ ಪ್ರೇಮ ಪ್ರಸಂಗ ನಾಟಕ ವುಡ್ ಹೌಸ್ ಅವರ ಕೃತಿಯ ಸ್ಛೂರ್ತಿಯಿಂದ ರಚಿತವಾಗಿದ್ದರೂ ಕನ್ನಡದ್ದೇ ನಾಟಕವೇನೋ ಎನ್ನುವಷ್ಟರ ಮಟ್ಟಿಗೆ ಸಹಜವಾಗಿ ರೂಪಾಂತರಗೊಂಡಿದೆ..ಚುರುಕು ಸಂಭಾಷಣೆಗಳು ಚೇತೋಹಾರಿಯಾಗಿವೆ” ಎಂದು ಶ್ಲಾಘಿಸಿದರು.

ಒಟ್ಟಿನಲ್ಲಿ ‘ಬ್ರಹ್ಮಚಾರಿ ಶರಣಾದ’ ಅಲಿಯಾಸ್ ‘ಪರಮೇಶಿ ಪ್ರೇಮಪ್ರಸಂಗ’ ನನಗೆ ಬಹಳ ತೃಪ್ತಿ—ಸಮಾಧಾನಗಳನ್ನು ತಂದುಕೊಟ್ಟ ನಾಟಕ.ಸಾಮಾನ್ಯವಾಗಿ ನಾನು ಮಾಡಿಸಿದ ನಾಟಕಗಳನ್ನು ಮನೆಯವರೆಲ್ಲರೂ ತಪ್ಪದೇ ನೋಡುತ್ತಾರೆ. ‘ಬ್ರಹ್ಮಚಾರಿ ಶರಣಾದ’ ನಾಟಕ ನನ್ನ ಮದುವೆಯಾದ ಮೇಲೆ ಮಾಡಿಸಿದ ಮೊದಲ ನಾಟಕವಾದುದರಿಂದ ನನ್ನ ಅತ್ತೆ ಸಾವಿತ್ರಮ್ಮ ಅಲಿಯಾಸ್ ಪೊನ್ನಮ್ಮನವರು ಹಾಗೂ ಮಾವ ಸುಂದರಂ ಅಯ್ಯರ್ ಅವರೂ ಸಹಾ ಪ್ರಪ್ರಥಮ ಬಾರಿಗೆ ಕಲಾಕ್ಷೇತ್ರಕ್ಕೆ ಬಂದು ನಾಟಕವನ್ನು ವೀಕ್ಷಿಸಿದರು. ಮಗಳು ಅಭಿನಯಿಸುತ್ತಿದ್ದಾಳೆಂಬ ವಿಶೇಷ ಆಕರ್ಷಣೆ ಬೇರೆ ಇದ್ದಿತಲ್ಲಾ!

ಹೀಗೆ ನಾಟಕದ ಯಶಸ್ಸಿನ ಅಲೆಯ ಮೇಲೆ ತೇಲುತ್ತಿರುವಾಗಲೇ ಆಫೀಸ್ ನಿಂದ ‘ತಕ್ಷಣವೇ ಕೆಲಸಕ್ಕೆ ಹಾಜರಾಗಿ’ ಎಂದು ಒತ್ತಾಯಿಸಿ ಪತ್ರಗಳು—ಟೆಲಿಗ್ರಾಂಗಳು ಬರತೊಡಗಿದವು. ಅದೇ ವೇಳೆಯಲ್ಲಿ ಪೀಟರ್ ಆಸ್ಟ್ರೋವ್ ಸ್ಕಿಯ ‘ಡೈರಿ ಆಫ್ ಎ ಸ್ಕೌಂಡ್ರಲ್’ ನಾಟಕದ ರೂಪಾಂತರವನ್ನು ಆರಂಭಿಸಿದ್ದೆ. ಆ ಬರವಣಿಗೆಯ ಕಾರ್ಯವನ್ನು ಮುಗಿಸಿಯೇ ಮತ್ತೆ ಡ್ಯೂಟಿಗೆ ಹೋದರಾಯಿತೆಂದು ರಜೆಯ ಅವಧಿಯನ್ನು ವಿಸ್ತರಿಸಿಬಿಟ್ಟೆ. ಇದೇ ವೇಳೆಯಲ್ಲಿ ಅಣ್ಣ—ಅಮ್ಮ ಅಮೆರಿಕೆಯಲ್ಲಿದ್ದ ತಂಗಿ ಪದ್ಮಿನಿಯ ಮನೆಯಲ್ಲಿ ಕೆಲ ತಿಂಗಳು ಇದ್ದು ಬರುವುದಕ್ಕಾಗಿ ಹೊರಟಿದ್ದರು. ಆಗ ನಾವಿದ್ದದ್ದು ಬಸವೇಶ್ವರ ನಗರದಲ್ಲಿ ಅಣ್ಣಯ್ಯ ಕಟ್ಟಿಸಿದ್ದ ದೊಡ್ಡ ಮನೆಯಲ್ಲಿ. ಆಗಲೇ ನನ್ನ ಅತ್ತೆ—ಮಾವಂದಿರು ಕೆಲ ದಿನಗಳ ಕಾಲ ನಮ್ಮ ಮನೆಗೆ ಬಂದು ನಮ್ಮೊಟ್ಟಿಗಿದ್ದರು. ನನ್ನ ಅತ್ತೆ ಪೊನ್ನಮ್ಮನವರಿಗಂತೂ ರಾಧಿಕಾ ಅಚ್ಚುಮೆಚ್ಚಿನ ಮೊಮ್ಮಗಳು. ರಾಧಿಕಾಳಿಗಾದರೂ ಅಷ್ಟೇ—ಪೊನ್ನಜ್ಜಿ ಎಂದರೆ ಉಸಿರು. ಅವರು ತನ್ಮಯರಾಗಿ ಮೊಮ್ಮಗಳನ್ನು ಆಟವಾಡಿಸಿಕೊಳ್ಳುತ್ತಿದ್ದುದೇ ಒಂದು ಸೊಗಸಿನ ದೃಶ್ಯ. ಅವರು ತಮ್ಮ ಸಣ್ಣ ಇನಿದನಿಯಲ್ಲಿ ಕಥೆ ಹೇಳುತ್ತಿದ್ದರೆ ಪುಟ್ಟ ರಾಧೆ ಬಟ್ಟಲಗಣ್ಣ ಮಂತ್ರಮುಗ್ಧೆ! ಹಾಗೇ ಜೇನುದನಿಯಲ್ಲಿ ದೇವರನಾಮಗಳನ್ನು,ಹಳೆಯ ತಮಿಳು ಹಾಡುಗಳನ್ನು ಹಾಡುತ್ತಿದ್ದರೆ ತನ್ಮಯಳಾಗಿ ಆಲಿಸುತ್ತಲೇ ತೊಡೆಯ ಮೇಲೆ ಮಲಗಿದ್ದಂತೆಯೇ ನಿದ್ದೆಗೆ ಜಾರಿ ಬಿಡುತ್ತಿದ್ದಳು! ಅವರಿಬ್ಬರದೂ ಒಂದು ಅತ್ಯಪೂರ್ವವಾದ ವಾತ್ಸಲ್ಯಪೂರ್ಣ ದೈವಿಕ ಸಂಬಂಧ! ಒಂದು ಅಲೌಕಿಕ ಸುಕುಮಾರ ಮುಗ್ಧ ಪ್ರಪಂಚ! ನನ್ನ ಅತ್ತೆ ಪೊನ್ನಮ್ಮನವರ ನಿಷ್ಕಲ್ಮಶನವುರು ಹಾಸ್ಯಪ್ರಜ್ಞೆಯನ್ನೂ ಮಾವನವರ ಕಟ್ಟುನಿಟ್ಟಿನ ಶುದ್ಧಹಸ್ತದ ಪರಿಶುದ್ಧ ವ್ಯಕ್ತಿತ್ವವನ್ನೂ ನಾವು ಸದಾ ನೆನೆಯುತ್ತಿರುತ್ತೇವೆ. ಅವರು ನಮ್ಮ ಮನೆಯಲ್ಲಿದ್ದ ಆ ಸಮಯದಲ್ಲೇ ರಾಧಿಕೆಯ 4ನೇ ಹುಟ್ಟುಹಬ್ಬವನ್ನು ಆಗಸ್ಟ್ 12 ರಂದು ಸರಳವಾಗಿ ಆಚರಿಸಿದೆವು.

ಹೀಗೆ ಕೆಲ ದಿನಗಳು ನಮ್ಮ ಮನೆಯಲ್ಲಿ ಕಳೆದು ಅತ್ತೆ—ಮಾವನವರು ಅವರ ಮನೆಗೆ ಮರಳಿದ ನಾಲ್ಕಾರು ದಿನಗಳಲ್ಲೇ ನಮ್ಮ ಆಫೀಸಿನಿಂದ ‘ಕಡೆಯ ಎಚ್ಚರಿಕೆ’ ಎಂಬ ಧಾಟಿಯ ಟೆಲಿಗ್ರಾಂ ಬಂದಿತು. ಕೂಡಲೇ ಕೆಲಸಕ್ಕೆ ಹಾಜರಾಗದಿದ್ದರೆ ಕಠಿಣ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತೇವೆಂಬ ಬೆದರಿಕೆಯೂ ಅದರಲ್ಲಿತ್ತು. ಇನ್ನು ಉದಾಸೀನ ತರವಲ್ಲ ಎಂದೆಣಿಸಿ ಅಂದೇ ಡ್ಯೂಟಿಗೆ ಹಾಜರಾಗಿಬಿಡಲು ನಿರ್ಧರಿಸಿದೆ. ರಂಜನಿ ರಾಧಿಕಾಳನ್ನು ಶಾಲೆಗೆ ಕಳುಹಿಸಿ ತಾನೂ ಕಾಲೇಜಿಗೆ ಹೋಗಿದ್ದಳು. ನಾನು ಆಫೀಸಿಗೆ ಹೊರಡಲು ಸಿದ್ಧನಾಗಿ ಮಾರ್ಗಮಧ್ಯದಲ್ಲಿ ಮಗಳ ಕೆಲ ಬಟ್ಟೆಗಳನ್ನು ಅತ್ತೆಯವರ ಮನೆಗೆ ತಲುಪಿಸುವ ಸಲುವಾಗಿ ರಾಜಾಜಿನಗರದಲ್ಲಿದ್ದ ಅವರ ಮನೆಗೆ ಹೋದೆ. ಮನೆಯ ಬಳಿ ಹೋಗಿ ಬೈಕ್ ನಿಲ್ಲಿಸುತ್ತಿದ್ದಂತೆಯೇ ಮನೆಯ ಮುಂದೆ ಸಣ್ಣಗೆ ಉರಿಯುತ್ತಿದ್ದ ಬೆಂಕಿಯನ್ನು ನೋಡಿ ತೀರಾ ಕಸಿವಿಸಿಯಾಯಿತು. ಏನಿದರ ಅರ್ಥ?ಯಾಕೆ ಹೀಗೆ ಅಗ್ನಿ ಉರಿಯುತ್ತಿದೆ ಎಂದು ಗೊಂದಲದಲ್ಲಿದ್ದಾಗಲೇ ಎದುರುಮನೆಯ ಹಿರಿಯರು ನನ್ನ ಬಳಿ ಧಾವಿಸಿ ಬಂದು, ‘ವಿಷಯ ಗೊತ್ತಾಯ್ತಾ?’ ಎಂದರು. ಇಲ್ಲವೆಂಬಂತೆ ನಾನು ತಲೆಯಾಡಿಸಿದೆ. “ನಿಮ್ಮ ಅತ್ತೆ ಹೋಗಿಬಿಟ್ರು ಪ್ರಭೂ..ಸಿವಿಯರ್ ಹಾರ್ಟ್ ಅಟ್ಯಾಕ್” ಎಂದು ಆ ಹಿರಿಯರು ನುಡಿಯುತ್ತಿದ್ದಂತೆ ತಲೆ ಸುತ್ತಿ ಬಂದಂತಾಯಿತು. ಹತ್ತಾರು ಕ್ಷಣ ಗರ ಬಡಿದವನಂತೆ ಅಲ್ಲೇ ನಿಂತಿದ್ದೆ. ಹಿಂದಿನ ದಿನವಷ್ಟೇ ನಗುನಗುತ್ತಾ ಮಾತಾಡಿದ್ದಾರೆ.. ಮಗುವಿನ ಜತೆ ಮಗುವಾಗಿ ಆಡಿ ನಲಿದಿದ್ದಾರೆ..ಇಂದು ಇಲ್ಲವೆಂದರೆ ಏನರ್ಥ?..ನಿಧಾನವಾಗಿ ಮನೆಯೊಳಗೆ ಹೆಜ್ಜೆಯಿರಿಸಿದೆ. ಮನೆಯ ಹಜಾರದಲ್ಲಿ ನೆಲದ ಮೇಲೆ ಪೊನ್ನಮ್ಮ ಪರಮ ಶಾಂತ ಸ್ಥಿತಿಯಲ್ಲಿ ಮಲಗಿದ್ದರು. ಮಾವನವರು ಪಕ್ಕದಲ್ಲೇ ಮಂಚದ ಮೇಲೆ ಕುಳಿತು ಶೂನ್ಯವನ್ನು ದಿಟ್ಟಿಸುತ್ತಿದ್ದರು. ಹಿರಿಯ ಮಗ ಜಗದೀಶ ಬಾಬು ಆಘಾತವನ್ನು ಅರಗಿಸಿಕೊಳ್ಳಲಾಗದೇ ದಿಕ್ಕು ತಪ್ಪಿದವರಂತೆ ಗೋಡೆಗೊರಗಿಕೊಂಡು ನಿಂತಿದ್ದರು… ಅತ್ಯಂತ ಹತ್ತಿರದವರ ಸಾವಿನ ಸಂದರ್ಭವೊಂದನ್ನು ನಾನು ಎದುರಿಸಿದ್ದು ಅದೇ ಮೊದಲು.ಸಾವಿನ ತಣ್ಣನೆಯ ಕ್ರೌರ್ಯ ಮೆಲ್ಲಗೆ ನರನಾಡಿಗಳಿಗೆ ಇಳಿಯುತ್ತಿದ್ದಂತೆ ಅಲ್ಲಿ ನಿಲ್ಲುವುದು ಕಷ್ಟವಾಗತೊಡಗಿತು. ಆಫೀಸ್ ಗೆ ಹೋಗಿ ಕೆಲಸಕ್ಕೆ ರಿಪೋರ್ಟ್ ಮಾಡಿಕೊಂಡು ಶೀಘ್ರವಾಗಿ ಬಂದುಬಿಡುತ್ತೇನೆ ಎಂದು ಬಾಬು ಅವರಿಗೆ ಹೇಳಿ ಪ್ರೀತಿಯ ಅತ್ತೆಯವರಿಗೆ ಅಂತಿಮ ನಮನ ಸಲ್ಲಿಸಿ ಬೈಕ್ ಹತ್ತಿ ಹೊರಟುಬಿಟ್ಟೆ.

ಆಫೀಸಿನಲ್ಲಿ ನಿರ್ದೇಶಕಿ ರುಕ್ಮಿಣಿಯಮ್ಮ ನನ್ನ ಮೇಲೆ ಹರಿಹಾಯಲು ಸರ್ವಸಿದ್ಧತೆಗಳನ್ನೂ ಮಾಡಿಕೊಂಡು ಕಾಯುತ್ತಿದ್ದರು. ನಾನು ಹೆಚ್ಚಿಗೆ ಮಾತನಾಡಲು ಅವಕಾಶ ಕೊಡದೆ, “ಮನೆಯಲ್ಲಿ ನನ್ನ ಅತ್ತೆಯವರ ಸಾವಾಗಿದೆ..ಏನನ್ನೂ ಹೇಳುವ—ಕೇಳುವ ಸ್ಥಿತಿಯಲ್ಲಿ ನಾನಿಲ್ಲ..ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದೇನೆ..ಆದರೆ ಈಗಲೇ ಹೊರಡುತ್ತಿದ್ದೇನೆ..ನಾಳೆ ನಾಡಿದ್ದರಲ್ಲಿ ಬಂದು ಮಾತಾಡುತ್ತೇನೆ” ಎಂದು ಒಂದೇ ಉಸುರಿನಲ್ಲಿ ಒದರಿ ಅವರ ಉತ್ತರಕ್ಕೂ ಕಾಯದೇ ಬೈಕ್ ಏರಿ ಮನೆಯತ್ತ ಹೊರಟೆ. ನಮ್ಮ ಆಫೀಸಿಗೆ ತುಸು ದೂರದಲ್ಲಿಯೇ ರಂಜನಿಯ ಕಾಲೇಜ್ ಇದ್ದದ್ದು..ಮಿಲ್ಲರ್ ರಸ್ತೆಯಲ್ಲಿ. ಆಫೀಸಿನಿಂದ ಹೊರಟಾಗ ಬಾಬು ಅವರಿಗೆ ಫೋನ್ ಮಾಡಿ, “ರಂಜನಿಗೆ ವಿಷಯ ತಿಳಿಸಿಯಾಯಿತೇ? ನಾನು ಬರುವಾಗ ಕರೆದುಕೊಂಡು ಬರಲೇ?” ಎಂದು ವಿಚಾರಿಸಿದೆ. “ಈ ಕೂಡಲೇ ಹೊರಟು ಬಾ ಎಂದು ಸಂದೇಶ ಕಳಿಸಿದ್ದೇವೆ.. ದಾರಿಯಲ್ಲಿರಬಹುದು.. ನೀವು ಸೀದಾ ಬಂದುಬಿಡಿ” ಎಂದರು ಬಾಬು. ಅಮ್ಮನೆಂದರೆ ಜೀವವೇ ಆಗಿದ್ದ ರಂಜನಿ ಈ ಆಘಾತವನ್ನು ಹೇಗೆ ಸಹಿಸಿಕೊಳ್ಳುತ್ತಾಳೋ ಎಂಬುದೇ ನನ್ನ ಚಿಂತೆಯಾಗಿತ್ತು. ಅಂದಂತೂ ಯಾವುದೋ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಮೌಲ್ಯಮಾಪನ ಮಾಡಿ ಕೊಡುತ್ತಿದ್ದೇನೆಂದು ತುಂಬು ಉತ್ಸಾಹದಿಂದ ಬೇರೆ ಕಾಲೇಜಿಗೆ ಹೋಗಿದ್ದಳು. ಈಗ ನೋಡಿದರೆ ಇಂಥದೊಂದು ಅನಿರೀಕ್ಷಿತ ದೊಡ್ಡ ಪೆಟ್ಟು..

ಸಾವೆಂದರೆ ಶಾಶ್ವತ ಅಗಲಿಕೆಯೆಂಬುದರ ಬೋಧವಿಲ್ಲದ ರಾಧಿಕಾಳಿಗೆ— “ಮುದ್ದು ಪೊನ್ನಜ್ಜಿ ದೇವರ ಬಳಿ ಹೋಗಿದ್ದಾರೆ..ಬೇಗ ಬಂದುಬಿಡ್ತಾರೆ” ಎಂದು ಸಮಾಧಾನ ಪಡಿಸಿದರೂ ಯಾವುದೋ ಅವ್ಯಕ್ತ ನೋವು—ಸಂಕಟ ಅವಳನ್ನು ಬಾಧಿಸುತ್ತಿದ್ದುದು ನಮಗೆ ಅರ್ಥವಾಗುತ್ತಿತ್ತು…ಮನೆಯವರು, ಅಂತಿಮ ದರ್ಶನಕ್ಕೆ ಬಂದ ಬಂಧುಮಿತ್ರರು ಎಲ್ಲರೂ ಅವರ ಗುಣಗಾನ ಮಾಡುವವರೇ..ಅವರ ಆತಿಥ್ಯವನ್ನು ನೆನೆಯುವವರೇ. ವಾಸ್ತವವಾಗಿ ಕಳೆದ ಗೌರಿ ಹಬ್ಬದ ಸಂದರ್ಭದಲ್ಲೇ ಪೊನ್ನಮ್ಮನವರು, ಬಹುಶಃ ಇದೇ ನನ್ನ ಕಡೇ ಗೌರಿ ಹಬ್ಬ ಕಣ್ರೇ.. ಮುಂದಿನ ವರ್ಷದ ಹಬ್ಬಕ್ಕೆ ನಾನಿರ್ತೀನೋ ಇಲ್ಲವೋ..” ಎಂದು ಕಾಲಜ್ಞಾನಿಯ ಹಾಗೆ ನುಡಿದಿದ್ದರಂತೆ. ಗೌರಿ ಹಬ್ಬ 15 ದಿನ ಇರುವಂತೆಯೇ ತಮ್ಮ ಇಹಲೋಕದ ಜಂಜಾಟವನ್ನು ಮುಗಿಸಿ ಕಾಣದ ಅನೂಹ್ಯ ಲೋಕಕ್ಕೆ ಹೊರಟೇಬಿಟ್ಟರು ಪೊನ್ನಮ್ಮ.

ಹೀಗೆ ಪೊನ್ನಮ್ಮನೆಂಬ ಪುಣ್ಯ ಚೇತನದ ಒಂದು ಸರಳ ಸುಂದರ ಅಧ್ಯಾಯಕ್ಕೆ ಶಾಶ್ವತ ತೆರೆ ಬಿದ್ದುಹೋಯಿತು. ಅವರ ನಿಷ್ಕಲ್ಮಶ ಮುಗ್ಧ ನಗು,ನಿರ್ವ್ಯಾಜ ಪ್ರೀತಿ—ಅಂತಃಕರಣ, ನೋಯಿಸದ ಹಾಸ್ಯ ಚಟಾಕಿಗಳು…ಇಂದಿಗೂ ನಮ್ಮ ಮನದಲ್ಲಿ ಹಸಿರಾಗಿ ಉಳಿದಿವೆ.

ಅಮ್ಮನ ಸಾವಿನಿಂದ ರಂಜನಿ ಕುಸಿದುಹೋಗಿದ್ದಳು. ಪುಟ್ಟ ರಾಧಿಕಾಳದಂತೂ ಹೇಳಿಕೊಳ್ಳಲಾಗದ ಸಂಕಟ..ಚಡಪಡಿಕೆ. ನಾನು ವಿಧಿಯಿಲ್ಲದೆ ಮನಸ್ಸಿಲ್ಲದ ಮನಸ್ಸಿನಿಂದ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ್ದೆ.ಆಫೀಸ್ ನಲ್ಲಿ ನಿರ್ದೇಶಕಿ ರುಕ್ಮಿಣಿಯವರೊಂದಿಗೆ ಒಂದಷ್ಟು ಮಾತಿನ ಚಕಮಕಿಯೂ ನಡೆಯಿತು. ಅಷ್ಟು ದಿನವೂ ನಾನು ರಜೆ ಹಾಕಿ ಹೊರಗಡೆ ಕೆಲಸ ಮಾಡುತ್ತಿದ್ದೇನೆಂಬುದು ಅವರ ಮುಖ್ಯ ಗುಮಾನಿ ಹಾಗೂ ಆರೋಪವಾಗಿತ್ತು. ”ಈ ಬಾರಿಯಂತೂ ನಾನು ಖಂಡಿತ ಹಾಗೆ ಮಾಡಿಲ್ಲ; ಮೇಲಾಗಿ ನನ್ನ ಯಾವ ಆಫೀಸಿನ ಕೆಲಸವನ್ನೂ ಕಡೆಗಣಿಸಿಲ್ಲ;ನನಗೆ ನೀವು ನಿಗದಿ ಪಡಿಸಿರುವ ಕಾರ್ಯಕ್ರಮಗಳೆಲ್ಲವೂ ನನ್ನ ಅನುಪಸ್ಥಿತಿಯಲ್ಲೂ ಸರಿಯಾಗಿ ಪ್ರಸಾರವಾಗುತ್ತಿವೆ; ನಾನು ರಜೆ ಹಾಕಿದ್ದು ವೈಯಕ್ತಿಕ ಕಾರಣಗಳಿಗಾಗಿ” ಎಂದು ಎಷ್ಟೇ ಹೇಳಿದರೂ ಅವರು ಕಿವಿಗೆ ಹಾಕಿಕೊಳ್ಳಲೇ ಇಲ್ಲ.ನನ್ನ ವೈಯಕ್ತಿಕ ಕಡತದಲ್ಲಿ, “ಕಛೇರಿಯ ಕೆಲಸಗಳಿಗೆ ಗೈರಾಗಿ ಇವರು ಹೊರಗಡೆ ಸಿನೆಮಾ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆಂದು ನಮಗೆ ತಿಳಿದುಬಂದಿದೆ—ಇದಕ್ಕೆ ಖಚಿತ ಸಾಕ್ಷಿ—ಪುರಾವೆಗಳಿಲ್ಲದಿದ್ದರೂ ಕೂಡಾ. ಹಾಗಾಗಿ ಇವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇವರು ರಜೆಯಲ್ಲಿದ್ದ ಈ ಒಂದು ನಿರ್ದಿಷ್ಟ ಅವಧಿಯನ್ನು (ದಿನಾಂಕಗಳನ್ನು ನಮೂದಿಸಲಾಗಿತ್ತು) ಡೈಸ್ ನಾನ್ ಎಂದು ಪರಿಗಣಿಸಲಾಗಿದೆ” ಎಂದು ಬರೆದು ಅದರ ಒಂದು ಪ್ರತಿಯನ್ನು ನನಗೆ ನೀಡಿದರು. ಈ ಡೈಸ್ ನಾನ್ ಎಂದರೇನೆಂಬುದು ನನಗೆ ಅರ್ಥವಾಗಲಿಲ್ಲ. ಎಂದಿನ ಹಾಗೆ ಗೆಳೆಯ ಮೋಹನರಾಮ ನಮ್ಮನ್ನು ಕೂರಿಸಿಕೊಂಡು “ಡೈಸ್ ನಾನ್ ಎಂದರೆ ನಿನ್ನ ಕಾರ್ಯಾವಧಿಯಲ್ಲಿ ಒಂದು ತಡೆ ಒಡ್ಡಿದ ಹಾಗೆ..ಬ್ರೇಕ್ ಇನ್ ಸರ್ವೀಸ್ ಅನ್ನುತ್ತಾರಲ್ಲಾ, ಅದೇ ಇದು” ಎಂದೆಲ್ಲಾ ವಿವರಿಸಿ ಒಂದಿಷ್ಟು ಜ್ಞಾನದಾನ ಮಾಡಿದ. ನಿಜ ಹೇಳಬೇಕೆಂದರೆ ಅದರಿಂದ ನಾನು ಒಂದಿಷ್ಟೂ ವಿಚಲಿತನಾಗಲಿಲ್ಲ. ಹಾಗೆಂದು ಸುಮ್ಮನೆಯೂ ಕೂರಲಿಲ್ಲ! ಮೋಹನರಾಮನ ಮಾರ್ಗದರ್ಶನದಲ್ಲಿ ದೆಹಲಿ ದೊರೆಗಳಿಗೆ ಒಂದು ಪತ್ರ ಬರೆದು ಹಾಕಿದೆ: “ನನ್ನ ಮೇಲೆ ಹೊರಿಸಿರುವ ಆರೋಪಗಳಿಗೆ ಯಾವುದೇ ಆಧಾರವಿಲ್ಲ ಎಂದು ನಿರ್ದೇಶಕರೇ ಒಪ್ಪಿಕೊಂಡಿದ್ದಾರೆ. ಊಹಾಪೋಹ ಹಾಗೂ ಗಾಳಿಸುದ್ದಿಗಳ ಆಧಾರದ ಮೇಲೆ ತೀರ್ಮಾನಗಳನ್ನು ತೆಗೆದುಕೊಂಡು ಸೇವಾ ನೋಂದಣಿ ಕಡತದಲ್ಲಿ ಋಣಾತ್ಮಕವಾಗಿ ಬರೆದು ಶಿಸ್ತು ಕ್ರಮ ಜರುಗಿಸಿರುವುದು ಸಾಧುವೇ? ಈ ಕೂಡಲೇ ಆಗಿರುವ ಈ ಲೋಪವನ್ನು ಸರಿಪಡಿಸಿರೆಂದು ಕೇಳಿಕೊಳ್ಳುತ್ತೇನೆ”…ಹೀಗೆ ಸಾಗಿತ್ತು ನನ್ನ ಪತ್ರದ ಒಕ್ಕಣೆ. ನನಗೇನೋ ಇದರಿಂದ ಸಮಾಧಾನವಾಯಿತಾದರೂ ಪರಿಣಾಮ ಮಾತ್ರ ಶೂನ್ಯ. ದೆಹಲಿಯಿಂದ ನನ್ನ ಪತ್ರಕ್ಕೆ ಯಾವ ಉತ್ತರವೂ ಬರಲಿಲ್ಲ. ರುಕ್ಮಿಣಿಯಮ್ಮನ ಕಣ್ಣುಗಳು ಇನ್ನಷ್ಟು ಕೆಂಪಾಗಿ ಊದಿಕೊಂಡದ್ದಷ್ಟೇ ಇದರಿಂದಾದ ಶುಭಲಾಭ!! ಇಂಥದಕ್ಕೆಲ್ಲಾ ಸೊಪ್ಪು ಹಾಕುವ—ಪ್ರಾಮುಖ್ಯತೆ ನೀಡುವ ಜಾಯಮಾನವೇ ನನ್ನದಲ್ಲವಾದ್ದರಿಂದ ಈ ಡೈಸ್ ನಾನ್ ಕೆಲವೇ ದಿನಗಳಲ್ಲಿ ಒಂದು ಮರೆತ ಅಧ್ಯಾಯವಾಗಿ ಹೋಯಿತು.

। ಇನ್ನು ಮುಂದಿನ ವಾರಕ್ಕೆ ।

‍ಲೇಖಕರು avadhi

March 23, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: