ಶ್ರೀಧರ ಡಿ ಎಸ್ ಓದಿದ ‘ಅಂತರ್ವೀಕ್ಷಣೆ’

ಅಂತರ್ವೀಕ್ಷಣೆಗೊಂದು ಬಹಿರ್ವೀಕ್ಷಣೆ

ಶ್ರೀಧರ ಡಿ ಎಸ್

ಭಗವದ್ಗೀತೆ ಭಾರತೀಯ ಸಾಹಿತ್ಯದ ಅಂತರಾತ್ಮ. ಮಹಾಭಾರತದ ಒಳಗೇ ಬರುವ ಈ ಜೀವನ ದರ್ಶನವು ಬರೀ ಉಪದೇಶವಲ್ಲ. ಮಹರ್ಷಿ ವ್ಯಾಸರ ಅಂತರ್ದರ್ಶನದಲ್ಲಿ ಮೂಡಿಬಂದ ಭಗವಂತನ ವಾಣಿ. ಜಗತ್ತಿನ ಬಹುಪಾಲು ವಾಙ್ಮಯಕ್ಕೆ ಅನುವಾದಗೊಂಡ ಈ ಕೃತಿ ಭಾರತೀಯ ಭಾಷೆಗಳಲ್ಲಂತೂ ನೂರಾರು ಮುಖಗಳಲ್ಲಿ ಹರಡಿದ ನಿತ್ಯಪಾರಾಯಣ ಗ್ರಂಥ. ಗೀತೆ ಧರ್ಮದೊಳಗಿನ ಬಂಧ. ಪ್ರಾರಂಭದ ಶಬ್ದ ಧರ್ಮಕ್ಷೇತ್ರೇ…ಕೊನೆಯ ಪದ ಧ್ರುವಾನೀತಿರ್ಮತಿರ್ಮಮ.

ಮೊದಲ ಕೊನೆಯ ವರ್ಣಗಳನ್ನು ಜೋಡಿಸಿದಾಗಲೂ ಧರ್ಮ! ಹೀಗೆ ಪುರಾಣಮುನಿ ವ್ಯಾಸರಿಂದ ಗ್ರಂಥಸ್ಥಗೊಂಡ ಗೀತೆಯು ಆಚಾರ್ಯತ್ರಯರ ವ್ಯಾಖ್ಯಾನಗಳೊಂದಿಗೆ ದೇಶದ ಮಹಾಮಹಾಮನೀಷಿಗಳನ್ನೆಲ್ಲ ಚಿಂತನೆಗಿಕ್ಕಿದ ಕೃತಿ. ಬಹುಮುಖ್ಯವಾಗಿ ತಿಲಕರ ಗೀತಾರಹಸ್ಯ ಪ್ರಸಿದ್ಧವಾದುದು. ಕನ್ನಡದಲ್ಲೂ ಅತೀ ಸಣ್ಣ ಶ್ಲೋಕಾನುವಾದಗಳಿಂದ ತೊಡಗಿ ಬೃಹತ್ ವ್ಯಾಖ್ಯಾನಗಳು ಬಂದಿವೆ, ಅನುವಾದಗೊಂಡಿವೆ. ಕನ್ನಡ ಸಾರಸ್ವತಲೋಕದ ಪಿತಾಮಹ ಶ್ರೀ ಡಿ.ವಿ.ಗುಂಡಪ್ಪನವರ ‘ಜೀವನಧರ್ಮಯೋಗ’, ಶ್ರೀರಾಮಕೃಷ್ಣಾಶ್ರಮದ ‘ಗೀತಾ ಭಾವಧಾರೆ’, ಬನ್ನಂಜೆ ಗೋವಿಂದಾಚಾರ್ಯರ ‘ಭಗವಂತನ ನಲ್ನುಡಿ’, ಪೇಜಾವರ ಮಠದ ಮಹಾಸಂತರಾದ ವಿಶ್ವೇಶ ತೀರ್ಥ ಶ್ರೀಪಾದರ ‘ಗೀತಾಸಾರೋದ್ಧಾರ’ ಹೀಗೆ ಕನ್ನಡದಲ್ಲೂ ವಿಪುಲವಾಗಿ ಉಪಲಬ್ಧವಿರುವ ಕೃತಿ “ಭಗವದ್ಗೀತೆ”.

ಮಹಾಭಾರತದಲ್ಲಿ ಗೀತೆಯಂತಹ ವ್ಯಾಸಚಿಂತನೆಗಳು ವಿಪುಲವಾಗಿವೆ. ಗೀತೆ ಎಂಬ ಹೆಸರಿನಲ್ಲೇ ಹಲವಿವೆ. ಶಾಂತಿಪರ್ವ, ಅನುಶಾಸನ ಪರ್ವ, ಷೋಢಶ ಮಹಾರಾಜರ ಚರಿತ್ರೆ, ಉದ್ಧವಗೀತೆ, ಅವಧೂತ ಗೀತೆ ಹೀಗೆ… ಆದರೆ ಯುದ್ಧರಂಗದ ತುಮುಲದ ನಡುವೆ ಕರ್ತವ್ಯಬೋಧದ, ಬದುಕಿನ ಹೊಣೆಗಾರಿಕೆಯ, ಚಿಂತನೆಯ ವಿಸ್ತಾರವಾದ ವಿವರದ ಗೀತೆ ಭಗವದ್ಗೀತೆಯೆ. ಗೀತೆಯನ್ನು ಹೇಗೆಲ್ಲ ನೋಡಬಹುದು ಎಂಬುದನ್ನು ಬಹುಮಂದಿ ಮಾಡಿತೋರಿಸಿದ್ದಾರೆ. ಅದು ಚಿತ್ರ, ಕಾವ್ಯ, ನಾಟಕ, ಯಕ್ಷಗಾನ, ದೂರದರ್ಶನದ ಧಾರಾವಾಹಿ, ರೂಪಕ, ಸಂಕೇತಗಳಾಗಿಯೂ ಪ್ರಸಿದ್ಧವಾಗಿವೆ. ಅದರ ಅಧ್ಯಾಯ, ಶ್ಲೋಕಗಳು, ಸಾಲುಗಳು, ವಾಕ್ಯಗಳೆಲ್ಲ ನಮಗೆ ನಿತ್ಯ ಪಾಠಗಳಾಗಿವೆ. ಹೀಗೆ ಸರ್ವ ಜನಾದರಣೀಯ, ಸರ್ವಾಕರ್ಷಣೀಯ ಕೃತಿ. ಬಹುಶಃ ನಮಗೆ ಉಪಲಬ್ಧವಿರುವ ಅತೀ ಚಿಕ್ಕ ಪುಸ್ತಕ ಮತ್ತು ಅತೀ ದೊಡ್ಡ ಪುಸ್ತಕ ಭಗವದ್ಗೀತೆಯೇ ಎಂದರೆ ಅಶ್ಚರ್ಯವಿಲ್ಲ !

ಹೀಗೆ ರಹಸ್ಯಾದ್ರಹಸ್ಯತರವಾದ ಭಗವದ್ಗೀತೆಯನ್ನು ಕುರಿತು ಭಿನ್ನಭಿನ್ನ ಚಿಂತನೆಗಳು ನಡೆಯುತ್ತಲೇ ಇವೆ. ಏಕೆಂದರೆ ಇದು ಬದುಕಿಗೆ ದಿಕ್ಕನ್ನೂ, ಮಾನವನ ನಡೆಯನ್ನೂ, ಮಾಡಬೇಕಾದ ಕರ್ತವ್ಯಗಳನ್ನೂ ಹೇಳಿ ಏನು ಮಾಡಬೇಕು, ಏನನ್ನು ಮಾಡಬಾರದು ಎಂದು ನಿರೂಪಿಸುತ್ತಾ ಪರಗತಿಗೆ ಸಾಧನವಾದ ಕರ್ತವ್ಯಗಳನ್ನು ಬೋಧಿಸುತ್ತದೆ. ಈ ಬಗೆಯ ಐಹಿಕ ಆಮುಷ್ಮಿಕಗಳ ಸಮಗ್ರ ಚಿಂತನೆಯನ್ನು ಹಿಂದೆ ಯಾರಾದರೂ ಬರೆದದ್ದುಂಟೋ ಎಂಬುದನ್ನು ನಾನು ಅರಿಯೆ. ಬಹುಶಃ ಡಿವಿಜಿಯವರು ಬಹುವಿಸ್ತಾರವಾಗಿ ಈ ನೆಲೆಯಲ್ಲಿ ಚಿಂತಿಸಿದ್ದಾರೆ. ಅದು ಗಹನವಾದ ಚಿಂತನೆಗಳ ಗುಚ್ಛ. ಪೂರ್ಣಿಮಾ ಅವರದ್ದು ಸರಳವಾದ ರೀತಿ.

ಗೀತೆಯ ಅಧ್ಯಾಯಗಳನ್ನು ಪ್ರತ್ಯೇಕ ಕಥೆಗಳೊಂದಿಗೆ ತುಲನೆ ಮಾಡುತ್ತಾ ಬದುಕಿಗೆ ಹತ್ತಿರಗೊಳಿಸುವ ಕೆಲಸ. ಅವರು ಬರೆಯಲು ತೊಡಗಿದಾಗಿನಿಂದಲೂ ನಾನು ಈ ಕೃತಿಯನ್ನು ಓದಿ, ಬರೆಯುತ್ತಾ ಹೋಗಿ ಎಂದವನು. ಇಲ್ಲಿ ಬಳಸಿದ ಭಾಷೆ ಸರಳವಾದದ್ದು. ಭಗವದ್ಗೀತೆ ಎಂದಾಗ ಅದು ಗಡುಸಾದ ತತ್ತ್ವಶಾಸ್ತ್ರೀಯ ಚಿಂತನೆ, ನಮಗೆ ಜೀರ್ಣವಾಗದು ಎಂದು ಹೆದರಿಯೋ, ಈ ವೇದಾಂತವೆಲ್ಲ ನಮಗೇಕೆ ಎಂಬ ಅಸಡ್ಡೆಯಿಂದಲೋ ಓದದೆ ಇರುವ ಮಂದಿಯೇ ಈಗ ಎಲ್ಲೆಡೆ. ಯುವಕರಂತೂ ಗೀತೆಯನ್ನು ಓದುವ ಪ್ರಾಯ ನಮಗಿನ್ನೂ ಬಂದಿಲ್ಲ ಎಂದು ಮುದುಕರ ಬಾಪ್ತಿಗೆ ದಾಟಿಸಿಬಿಡುತ್ತಾರೆ. ಯುವ ಪ್ರಾಯದಲ್ಲಿ ಗೀತೆಯನ್ನು ಕುರಿತು ತಾನೊಂದು ಕೃತಿ ರಚಿಸಬೇಕೆಂಬ ಮನಸ್ಸು ಬಂದುದು ಶ್ರೀಮತಿ ಪೂರ್ಣಿಮಾ ಅವರಲ್ಲಿ ವಿಶೇಷ. ಹದಿನೆಂಟು ಅಧ್ಯಾಯಕ್ಕೆ ಹದಿನೆಂಟು ಸಣ್ಣಸಣ್ಣ ಕಥೆಗಳು.

ಆ ಕಥೆ ಆಯಾ ಅಧ್ಯಾಯಗಳ ಸಾರವನ್ನು ನೀತಿಯಂತೆ ಹೇಳುತ್ತಾ ಹೋಗುತ್ತವೆ. ಕೊನೆಗೆ ಆಯಾ ಅಧ್ಯಾಯಗಳ ಸಾರವನ್ನು ಅಲ್ಲಿಯ ಬಹು ಮುಖ್ಯ ಮಾತಿನ ತುಣುಕುಗಳ ಮೂಲಕ ತಿಳಿಸಿ ಮುಂದಿನ ಅಧ್ಯಾಯಕ್ಕೆ ಹೋಗುವ ವಿಧಾನ ಮನನೀಯವಾಗಿದೆ. ಆಯಾ ಅಧ್ಯಾಯಗಳಿಗೆ ಮೂಲದಲ್ಲಿರುವ ಹೆಸರನ್ನೇ ಇರಿಸಿದರೂ ಈ ಕೃತಿ ರಚನೆಯ ಉದ್ದೇಶ ಗೀತೆಯ ಶ್ಲೋಕಗಳ ವಿವರಣೆಯಲ್ಲ‌. ಇದು ಆಧುನಿಕ ಕಾಲದ ಕಥೆಯೊಂದಿಗೆ ಗೀತೆಯ ಆಯಾ ಅಧ್ಯಾಯದ ಸಾರವನ್ನು ಹೊಸಕಾಲಕ್ಕೆ ಹೊಂದಿಸುವುದು. ಈ ಹೊಂದಿಸುವಿಕೆಯ ಪ್ರಕ್ರಿಯೆಯಲ್ಲಿ ವ್ಯಾಪಾರ, ವ್ಯವಹಾರ, ವಿಜ್ಞಾನ, ತಂತ್ರಜ್ಞಾನ, ಭಕ್ತಿ, ವೈರಾಗ್ಯ, ಆಸೆ, ನಿರಾಸೆ… ಮುಂತಾದ ನಿಜ ಜೀವನದ ಚಿಂತನೆಗಳು ಮೌಲ್ಯ ನಿರ್ವಹಣೆಗಳಾಗಿ ಬರುತ್ತವೆ. ಡಿವಿಜಿಯವರು ಅವರ ಜೀವನಧರ್ಮಯೋಗದಲ್ಲಿ ಇದೇ ವಿಧಾನವನ್ನು ಅನುಸರಿಸಿದ್ದಾರೆ. ಇದು ಪೂರ್ಣಿಮಾ ಅವರು ಗೀತೆಯ ದಾರಿಯಲ್ಲಿ ಒಂದು ಕಥಾಸಂಕಲನವನ್ನು ರಚಿಸಿದಂತಿದೆ.

ಪುರುಷೋತ್ತಮ ಯೋಗದಲ್ಲಿ ಬರುವ ಕಥೆಯ ನಾಯಕ ಸಾಕಷ್ಟು ಸಂಪತ್ತು ಗಳಿಸಿ ತಾಯಿಯ ಮರಣಕಾಲದಲ್ಲಿ ಅವಳನ್ನು ಕಾಣದೆ ಚಿಂತಿತನಾಗುವುದು, ವೈರಾಗ್ಯದತ್ತ ಮುಖಮಾಡಲು ಪ್ರಯತ್ನಿಸಿ ಸೋಲುವುದು, ವೈರಾಗ್ಯವು ಬದುಕಿನ ಕರ್ತವ್ಯದಲ್ಲೂ ಸಾಧ್ಯ ಎಂಬ ತಂದೆಯ ಅನುಭವದ ಮಾತು ಇವುಗಳಿಂದ ಸತ್ಯವನ್ನು ಕಾಣುತ್ತಾನೆ. ನಮಗೆಲ್ಲ ತಿಳಿದಿರುವಂತೆ ಈ ಅಧ್ಯಾಯ ತುಂಬಾ ಪ್ರಸಿದ್ಧವಾದುದು. “ಊರ್ಧ್ವಮೂಲಮಧಶ್ಶಾಖಂ” ಎಂಬೊಂದು ಸೂಕ್ತಿಯ ತತ್ತ್ವವೇ ವಿಶೇಷವಾಗಿದೆ. ಅಸಂಘ ಶಸ್ತ್ರದಿಂದ ವ್ಯಾಮೋಹ ತೊರೆಯುವ ವಿಚಾರವಿರುವುದೂ ಇಲ್ಲಿಯೇ. ಹಾಗೆಯೇ ಸಾಮಾನ್ಯ ಚಿತ್ರಕಾರನೊಬ್ಬ ಜಗತ್ಪ್ರಸಿದ್ಧನಾಗಿ ಬಹುದೊಡ್ಡ ಅವಕಾಶ ಪಡೆದು ಕೊನೆಗೆ ಜನಕ್ಕೆ ವಿರುದ್ಧವಾದ ನಡೆಗೆ ಹಣದಾಸೆಗಾಗಿ ಹೊರಟು ತನ್ನ ಬೆಕ್ಕು ಹಾಳುಮಾಡಿದ ಚಿತ್ರದಿಂದ ಜ್ಞಾನೋದಯ ಪಡೆಯುವುದು, ತೀರಾ ಬಡವ ಅನಿರೀಕ್ಷಿತವಾಗಿ ತಂದೆ ತಂಗಿಯರನ್ನು ಕಳೆದುಕೊಂಡು ಮುಂದೆ ವೈದ್ಯರು ತಾಯಿಗೆ ನೆನಪು ಮರಳಲು ತಂದೆ, ತಂಗಿಯರ ಫೋಟೋ ತೋರಿಸಬೇಕೆಂದಾಗ ಇವನಿಗೆ ಅದೇನೆಂದು ತಿಳಿಯದಿರುವುದು. ಮುಂದೆ ಆತನೇ ಬಹುದೊಡ್ಡ ಫೋಟೋಗ್ರಾಫರ್ ಆದರೂ ಇಲ್ಲದ ತಂದೆ ತಂಗಿಯರ ಫೋಟೋ ತೆಗೆಯಲಾರದ ಸ್ಥಿತಿಯಲ್ಲೂ ಜಗಕ್ಕೆ ಉಪಕಾರವಾಗಲೆಂಬ ಆಶಯಕ್ಕೆ ಬರುವುದು.. ಹೀಗೆ ಪ್ರತಿಯೊಂದು ಕಥೆಯನ್ನೂ ನೇಯುತ್ತಾ ಸಾಗಿದ್ದಾರೆ. ಈ ಕಥೆಗಳೆಲ್ಲ ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಬದುಕಿನ ಮಹತ್ವವನ್ನು ತಿಳಿಸಿ ಹೇಳಿದಂತೆ ವರ್ತಮಾನವನ್ನು ಚಿತ್ರಿಸಿವೆ. ಜೀವನ ಬಹುಮುಖ್ಯ ಎಂಬುದರತ್ತ ಗಮನ ಹರಿಸುತ್ತವೆ.

ಮುಖ್ಯವಾಗಿ ಗಮನಿಸಬೇಕಾದ ವಿಚಾರ ಪ್ರತೀ ಅಧ್ಯಾಯದ ಕೊನೆಯಲ್ಲಿ ಬರುವ ಇಡೀ ವಿಷಯಗಳ ಸಂಕ್ಷಿಪ್ತ ಪರಿಚಯ. ಇಲ್ಲಿ ಆಯಾ ಯೋಗದಲ್ಲಿ (ಗೀತೆಯ ಪ್ರತೀ ಅಧ್ಯಾಯಕ್ಕೂ ಪ್ರತಿಪಾದಿತ ಚಿಂತನೆಗೆ ಸಂಬಂಧಿಸಿ ಹೆಸರನ್ನು ನೀಡುವುದರ ಜೊತೆಗೆ ಅದನ್ನು ಯೋಗ ಎಂದು ಗುರುತಿಸಲಾಗಿದೆ. ಧ್ಯಾನಯೋಗ,ಕರ್ಮಯೋಗ ಹೀಗೆ) ತಿಳಿಸಿದ ವಿಚಾರಗಳ ಸಂಕ್ಷಿಪ್ತ ಮಾಹಿತಿ ಮತ್ತು ಮುಖ್ಯ ಶ್ಲೋಕ ಅಥವಾ ಶ್ಲೋಕದ ಮುಖ್ಯ ಭಾಗಗಳನ್ನು ಸೂಚಿಸಲಾಗಿದೆ.

ಆದರೂ ಇದೇ ಗೀತೆಯ ಸಮಗ್ರ ಪರಿಚಯ ಎಂದು ಓದುಗರು ಭಾವಿಸಬಾರದು. ಈ ಮಾದರಿಯೊಂದಿಗೂ ಗೀತೆಯನ್ನು ಪರಿಭಾವಿಸಿ ನೋಡಬಹುದು. ನನ್ನ ದೃಷ್ಟಿಯಲ್ಲಿ ಭಗವದ್ಗೀತೆ ಓದುವ ಸಾಹಿತ್ಯವೆ ಅಲ್ಲ. ಒಂದೊಂದೇ ಶ್ಲೋಕವನ್ನೂ ಮನನ ಮಾಡಬೇಕು. ಈ ಮನನ ಭೂತ, ಭವಿಷ್ಯ, ವರ್ತಮಾನದೊಂದಿಗೆ ಸಮ್ಮಿಳಿತಗೊಂಡಿರಬೇಕು. ಅಂತಹ ಸಂದರ್ಭದಲ್ಲಿ ಇಂತಹ ನೂತನ ರೀತಿಯ ಚಿಂತನೆಗಳು ಉಪಯುಕ್ತವಾಗುತ್ತವೆ. ಇನ್ನೊಂದು ವಿಚಾರ ಈ ಕಥೆಗಳನ್ನು ಪ್ರತ್ಯೇಕ ಕಥೆಗಳು ಎಂದೂ ಓದಬಹುದು.

ಪೂರ್ಣಿಮಾ ಹೆಗಡೆಯವರು ಇನ್ನೂ ಕಿರಿಯ ವಯಸ್ಸಿನವರು. ಅಧ್ಯಯನದಿಂದ ಮತ್ತೂ ಬೆಳೆಯಬೇಕಾದವರು, ಮಾಗಬೇಕಾದವರು. ಈ ಬಗೆಯ ಗಾಢ ಚಿಂತನೆಯ ಮೇರುಕೃತಿಯೊಂದನ್ನು ಕನ್ನಡದ ಕಣ್ಣಿನಲ್ಲಿ ಕಂಡು ಕಂಡರಿಸುವುದು ಸಾಹಸದ ಕೆಲಸ. ಇದರಲ್ಲಿ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ಹುಟ್ಟಿದರೆ ಕೃತಿಗೂ ಹೆಚ್ಚುಗಾರಿಕೆ. ಅದಾಗಲಿ ಎಂದು ಹಾರೈಸುತ್ತೇನೆ. ಇಂತಹ ಅಧ್ಯಯನಪೂರ್ಣ ಚಿಂತನೆಯ ಗ್ರಂಥಗಳು ಅವರಿಂದ ರಚನೆಗೊಳ್ಳಲಿ. ಕನ್ನಡ ಸಾರಸ್ವತಲೋಕ ಈ ಕೃತಿಗೆ ಓದಿನ ಮನ್ನಣೆ ನೀಡಲೆಂದು ಹಾರೈಸುತ್ತೇನೆ.

‍ಲೇಖಕರು Admin

November 19, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: