ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀದೇವಿ ಕೆರೆಮನೆ ಹೊಸ ಕವಿತೆ- ವಾಸ್ತವ ಅವಾಸ್ತವಗಳ ನಡುವೆ

ಶ್ರೀದೇವಿ ಕೆರೆಮನೆ

ಆಸೆಯಾಗುತ್ತದೆ ಕೆಲಮೊಮ್ಮೆ
ಮಾತಿಲ್ಲದೆ ಹೆಗಲ ಮೇಲೆ
ತೋಳು ಬೀಸಾಡಿ ಎದೆಗೊರಗಬೇಕೆಂದು
ಈಗ ಈ ಆಸೆ ಈಡೇರಲಾರದು
ಎನ್ನುವ ವಾಸ್ತವದ ಅರಿವಿದ್ದಾಗಲೂ

ಕೂದಲು ಕೆದರಿ, ಅಂಗೈ ಸೇರಿಸಿ
ತೋಳು ಜಿಗುಟಿ ಕೆಂಪಾಗಿಸಿ
ಹೆಗಲಿಗೆ ಹಲ್ಲಿನ ಗುರುತು ಮೂಡಿಸಿ
ಹುಸಿ ಮುನಿಸು ತೋರಿ
ಮುದ್ದಿಸಿಕೊಳ್ಳುವ ಮನಸಾಗುತ್ತದೆ
ಅಸಾಧ್ಯವಾದದ್ದು ಈಡೇರಿದರೆ
ಏನಾದೀತು ಎಂಬ ಹುಂಬು ಪ್ರಶ್ನೆಯನ್ನು
ಮನಸು ತನಗೆ ತಾನೇ ಕೇಳಿಕೊಳ್ಳುತ್ತದೆ

ನೀರವ ರಾತ್ರಿಯ ಮೌನದಲಿ
ಯಾರಿಗೂ ಕೇಳದಂತೆ ಆಡಿದ
ಪಿಸುಮಾತುಗಳು ಮರುಕಳಿಸುವ
ಯೋಚನೆಯೇ ಮೈ ನವಿರೇಳಿಸಿ
ಎದೆಕಟ್ಟು ಬಿಗಿಯಾಗಿ
ಮೈ ಮುರಿಯುವಂತಾದಾಗಲೂ
ಅಣಕಿಸುತ್ತದೆ ಎದುರು ನಿಂತ ವಾಸ್ತವ ಸ್ಥಿತಿ

ನೆನಪು ಕಾಡಿ,
ಎದೆಯ ಬೇಗುದಿ ಇನ್ನೇನು
ಸಿಡಿಯಲು ಸಿದ್ಧವಾಗಿ
ನನ್ನ ಮೇಲಿನ ನಿಯಂತ್ರಣ
ನಾನೇ ಕಳೆದುಕೊಳ್ಳುವಂತಾದಾಗ
ಮೌನಕ್ಕೆ ಶರಣು ಹೋಗುತ್ತೇನೆ
ನಿಲ್ಲಿಸಿ ಮಾತು, ಫೋನು, ಮೆಸೆಜುಗಳನ್ನೆಲ್ಲ
ಕಳೆದು ಎರಡು ದಿನ,
ಅದರ ಮೇಲೆ ಮತ್ತೆರಡಾಗಿ
ವಾರಕ್ಕೆ ಹತ್ತಿರವಾದಾಗ
ತಹಂಬದಿಗೆ ಬರುತ್ತದೆ ನಿಧಾನವಾಗಿ
ಕ್ಷೋಬೆಗೊಂಡ ಮನಸು

ಭಾವನೆಗಳು ಮರುಗಟ್ಟಿದ ನಂತರ
ಏನೆಂದರೆ ಏನೂ ಆಗದಂತೆ
ಲೋಕಾಭಿರಾಮವಾಗಿ ಪರಿಚಿತನೊಬ್ಬನ ಬಳಿ
ಹರಟಿದಂತೆ ಮಾತನಾಡುತ್ತ
ಒಳಗೊಳಗೇ ಮರುಗುತ್ತೇನೆ
ಎಂದೂ ಸರಿಹೋಗದ
ಹಿಂದೊಮ್ಮೆ ಸ್ವರ್ಗಕ್ಕೆ ಕಿಚ್ಚಿಟ್ಟ ಸಂಬಂಧಕ್ಕಾಗಿ

‍ಲೇಖಕರು Admin

6 August, 2021

1 Comment

  1. T S SHRAVANA KUMARI

    ಮನಮುಟ್ಟಿತು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading