ಶ್ರವಣಕುಮಾರಿ ಸರಣಿ: ಮೇಡಂ… ಪೂರಾ ದುಡ್ಡು ಬರ್ಲಿಲ್ಲ

ಶ್ರವಣಕುಮಾರಿ

ಈ ಗ್ರಾಹಕ… ಹೆಸರಿಗೇನು, ಪ್ರಾಣೇಶ ಎಂದಿಟ್ಟುಕೊಳ್ಳಿ. ಇನ್ನೂ ಚಿಕ್ಕ ವಯಸ್ಸಿನ ಮಾರಾಟ ಪ್ರತಿನಿಧಿ. ವಿಜಯಾ ಬ್ಯಾಂಕಿನ ಒಂದು ಶಾಖೆಯ ಸ್ವಸಯಂನಲ್ಲಿ ಐದು ಸಾವಿರ ರೂಪಾಯಿ ತೆಗೆಯುವಾಗ ಕೇವಲ ಎರಡು ಸಾವಿರ ಮಾತ್ರ ಬಂದಿದೆ. ಇನ್ನುಳಿದ ಮೂರು ಸಾವಿರ ರೂಪಾಯಿ ಬಂದಿಲ್ಲ. “ಅಲ್ಲೇ ಹತ್ತು ನಿಮಿಷ ಕಾಯುತ್ತಾ ನಿಂತಿದ್ದೆ ಮೇಡಂ. ಆಮೇಲೆ ಅಲ್ಲಿದ್ದ ಗಾರ್ಡು ಇನ್ನೊಬ್ಬರಿಗೂ ಹಾಗೇ ಆಯ್ತು. ನಿಮ್ಮ ಬ್ಯಾಂಕಿಗೋಗಿ ದೂರು ಕೊಡಿ ಅಂದ. ಮೂರು ಸಾವಿರ ಮೇಡಂ…” ಇನ್ನೂ ಈಗ ತಾನೇ ದುಡಿಯಲು ಆರಂಭಿಸಿದ್ದ ಹುಡುಗ. ಅಳುಮುಖವಾಗಿತ್ತು. “ದೂರು ಹಾಕೋಣ ಬಿಡಿ. ಗಾರ್ಡು ಏನೋ ತೊಂದರೆ ಇದೆ ಅಂದ್ನಲ್ವಾ. ದುಡ್ಡು ವಾಪಸ್ಸು ಬರತ್ತೆ” ಅಭಯ ನೀಡಿ ದೂರು ದಾಖಲಿಸಿಕೊಂಡು ಕಳುಹಿಸಿದೆ. ಆದರೆ ನಾಲ್ಕನೇ ದಿನ ಬಂದದ್ದು ಕೇವಲ ಸಾವಿರ ರೂಪಾಯಿ ಮಾತ್ರಾ. ನಮ್ಮಲ್ಲಿ ಇಷ್ಟೇ ಹೆಚ್ಚಾಗಿ ಬಂದಿರೋದು ಎನ್ನುವುದು ಆ ಬ್ಯಾಂಕಿನವರ ಅಂಬೋಣ.

ಪ್ರಾಣೇಶನದು ಅಳುಮುಖ. “ಹಬ್ಬಕ್ಕೆ ಅಮ್ಮನಿಗೆ ಸೀರೆ ತೊಗೊಂಡು ಹೋಗೋಣ ಅಂತ ತೆಗೆದಿದ್ದ ದುಡ್ಡು; ಈಗ ಬರಿಕೈಲಿ ಹೋಗಬೇಕಾಗಿದೆ”. “ಇನ್ನೊಮ್ಮೆ ದೂರು ಸಲ್ಲಿಸಿ ನೋಡೋಣಪ್ಪ. ಹಬ್ಬಕ್ಕೆ ಇನ್ನೂ ಹದಿನೈದು ದಿನ ಇದ್ಯಲ್ಲ” ಎಂದು ಸಮಾಧಾನ ಹೇಳಿ, ದೂರಿನ ಉತ್ತರದ ಜೊತೆಯಲ್ಲಿ ಕಳುಹಿಸಿದ್ದ ಇಜೆ ಲಾಗನ್ನು ಕೂಲಂಕುಶವಾಗಿ ಪರಿಶೀಲಿಸಿದೆ. ಬಟವಾಡೆಯಾದ ದುಡ್ಡಿನ ಅಂಕಣದಲ್ಲಿ 2:5, 3:3 ಎಂದು ಮಾತ್ರಾ ತೋರಿಸುತ್ತಿದೆ. ಅಂದರೆ ಬಂದಿರುವುದು 5 ನೂರರ ನೋಟುಗಳು ಮತ್ತು 3 ಐನೂರರ ನೋಟುಗಳು. ಅಲ್ಲಿಗೆ ಬಂದಿರುವುದು ಕೇವಲ ಎರಡು ಸಾವಿರ ರೂಪಾಯಿ ಮಾತ್ರ.

ಅಲ್ಲಿಂದ ಮುಂದೆ ಏನೇನೋ ಗಜಿಬಿಜಿಯಾಗಿ ಎಷ್ಟೋ ಹೊತ್ತು ಆ ಯಂತ್ರ ನಿಷ್ಕ್ರಿಯವಾಗಿದ್ದನ್ನು ತೋರಿಸುತ್ತಿದೆ. ನಾನು ಆ ಇ ಜೆ ಲಾಗನ್ನು ಪ್ರಶ್ನಿಸಿ ಮತ್ತೊಂದು ದೂರನ್ನು ಸಲ್ಲಿಸಿದೆ. ಜೊತೆಗೆ ವಿಜಯಾ ಬ್ಯಾಂಕಿನ ಹೆಡ್ ಆಫೀಸಿನಲ್ಲೇ ಕೆಲಸ ಮಾಡುತ್ತಿದ್ದ ತಂಗಿಯ ಮೂಲಕ ಅವರ ದೂರು ನಿರ್ವಹಣಾ ಕೇಂದ್ರವನ್ನು ಸಂಪರ್ಕಿಸಿದೆ. ಅವರದು ಒಂದೇ ವಾದ. “ನಮ್ಮಲ್ಲಿ ಹೆಚ್ಚು ಬಂದಿದ್ದನ್ನು ಕೊಟ್ಟಿದ್ದೇವೆ ಅಷ್ಟೇ. ಇನ್ನೇನು ಮಾಡಲೂ ಬರುವುದಿಲ್ಲ”. “ನೀವೇ ಇನ್ನೊಮ್ಮೆ ನೀವು ಕಳುಹಿಸಿರುವ ಇಜೆ ಲಾಗನ್ನು ಪರಿಶೀಲಿಸಿ ನೋಡಿ. ಅದರಲ್ಲಿ ನಿಖರವಾಗಿ ಅವನಿಗೆ ಕಡಿಮೆ ಹಣ ಬಂದಿರುವುದು ಗೊತ್ತಾಗುತ್ತಿದೆ” ಎಂದೆ, “ಇರಬಹುದೇನೋ, ಆದರೆ ನಮ್ಮಲ್ಲಿಲ್ಲದ ದುಡ್ಡನ್ನು ಎಲ್ಲಿಂದ ಕೊಡಕ್ಕೆ ಆಗತ್ತೆ” ಎಂದು ಫೋನಿಟ್ಟರು.

ಎದುರಿನಲ್ಲಿ ಅಳುಮುಖ ಮಾಡಿಕೊಂಡು ಕೂತಿದ್ದ ಪ್ರಾಣೇಶ. ಅವನು ಸುಳ್ಳು ಹೇಳುತ್ತಿಲ್ಲ ಎನ್ನುವುದು ನನಗೆ ಮನವರಿಕೆಯಾಗಿತ್ತು. ಹಾಗಾಗಿ ಅವನಿಗೆ ನಾನೊಂದು ಸಲಹೆಯನ್ನು ಕೊಟ್ಟೆ. “ಪ್ರಾಣೇಶ, ಬ್ಯಾಂಕಿನ ನೋಟೀಸ್ ಬೋರ್ಡಿನಲ್ಲಿ ʻಓಮ್ಬಡ್ಸ್ಮನ್ʼ ಅವರ ಫೋನ್ ನಂಬರ್ರು ಮತ್ತು ವಿಳಾಸ ಎರಡೂ ಇದೆ. ನಾನು ನಮಗೆ ಬಂದಿರುವ ಇ ಜೆ ಲಾಗಿನ ಪ್ರತಿಯನ್ನು ನಿನಗೆ ತೆಗೆದು ಕೊಡ್ತೀನಿ. ನೀನು ಅವರಿಗೆ ಕಂಪ್ಲೇಂಟ್ ಹಾಕು. ಅದೂ ಒಂದು ಪ್ರಯತ್ನ ಮಾಡಿಬಿಡೋಣ” ಎಂದೆ.

“ಹಾಗಂತೀರಾ. ನನ್ದುಡ್ಡು ವಾಪಸ್ಸು ಬರತ್ತಾ ಅವ್ರಿಗೆ ದೂರು ಕೊಟ್ರೆ” ಎಂದ. “ಹಾಕು. ಪ್ರಯತ್ನ ಪಡೋದ್ರಲ್ಲಿ ತಪ್ಪಿಲ್ವಲ್ಲಾ. ನಿನ್ನ ದುಡ್ಡು ನಿಂಗೆ ವಾಪಸ್ಸು ಬಂದ್ರೆ ನಂಗೂ ಖುಷಿಯಾಗತ್ತೆ” ಅಂದೆ. ಅವನೂ ಹಾಕಿದ… ದುಡ್ಡೂ ಬಂತು. ಖುಷಿಯಾಗಿ “ಮೇಡಂ ನಾನು ಬಟರ್ ಫ್ಲೈ ಕಂಪನೀಲಿ ಸೇಲ್ಸ್ ರೆಪ್ರೆಸೆಂಟಿಟೀವ್. ನೀವು ನಮ್ಮ ಕಂಪನಿಯ ಯಾವ್ದಾದ್ರೂ ಸಾಮಾನು ಕೊಳ್ಳೋದಿದ್ರೆ ನಂಗೆ ಫೋನ್ ಮಾಡಿ ಮೇಡಂ. ನಾನು ಡಿಸ್ಕೌಂಟಿನಲ್ಲಿ ತಂದು ಕೊಡ್ತೀನಿ” ಅಂದ. “ಸರಿ. ನಾನು ತೊಗೊಳೋ ಕಾಲಕ್ಕೆ ನೋಡೋಣ. ಈಗ ಹಬ್ಬಕ್ಕೆ ನಿಮ್ಮಮ್ಮನಿಗೆ ಸೀರೆ ತೆಗೆದುಕೊಂಡು ಹೋಗು. ಹಬ್ಬ ಚೆನ್ನಾಗಿ ಮಾಡ್ಕೊಂಡು ಬಾ” ಎಂದೆ.

ಈ ಪ್ರಕರಣ ಇಲ್ಲಿಗೆ ಮುಗಿಯಿತೇ? ಇಲ್ಲ, ನನ್ನ ಮಗಳ ಬಾಣಂತನಕ್ಕೆಂದು ಒಂದೆರಡು ತಿಂಗಳು ರಜೆ ಹಾಕಿದ್ದೆ. ವಾಪಸ್ಸು ಬಂದಾಗ ನಮ್ಮ ಶಾಖೆಯ ಸ್ವ.ಸ.ಯಂ.ನ ಋಣದ ಖಾತೆಗೆ ಈ ವಹಿವಾಟಿನ ಮೂರು ಸಾವಿರ ರೂಪಾಯಿ ಋಣಿತವಾಗಿದೆ. ಅವನ ಖಾತೆಗೆ ಋಣಿಸಲು ನೋಡಿದರೆ ಸಾವಿರ ಚಿಲ್ಲರೆ ಮೊತ್ತವಿದೆ. ಖಾತೆಗೆ ಒಂದು ತಡೆ (ಹೋಲ್ಡ್) ಹಾಕಿಟ್ಟು ಸಂಬಳ ಬಂದಾಗ ತೆಗೆದುಕೊಳ್ಳಲು ನೋಡೋಣವೆಂದರೆ ಈಗ ಖಾತೆ ಬನ್ನೇರುಘಟ್ಟ ರಸ್ತೆಯ ಶಾಖೆಗೆ ವರ್ಗವಾಗಿದೆ. ಅವನ ಖಾತೆಯನ್ನು ಪರಿಶೀಲಿಸುತ್ತಾ ಹೋದೆ. ಒಂದು ತಿಂಗಳ ಹಿಂದೆ ಇದೇ ವಹಿವಾಟಿನ ಮೊತ್ತ ನಮ್ಮ ಶಾಖೆಗೆ ಜಮೆಯಾಗಿದೆ. ನನ್ನ ಜಾಗದಲ್ಲಿ ಕುಳಿತಿದ್ದ ಸಹೋದ್ಯೋಗಿಗೆ ಈ ವಹಿವಾಟಿನ ಚರಿತ್ರೆ ತಿಳಿಯದು. ಮರುದಿನವೇ ಹೆಚ್ಚು ಯೋಚಿಸದೆ ಅವನ ಖಾತೆಗೆ ಜಮೆ ಮಾಡಿಬಿಟ್ಟಿದ್ದಾಳೆ.

ಅದಾದ ನಾಲ್ಕು ದಿನಕ್ಕೇ ಸ್ವಿಚ್ ಕೇಂದ್ರದವರು ಇದೇ ವಹಿವಾಟಿನ ಮೊತ್ತವನ್ನು ಮತ್ತೆ ನಮ್ಮ ಶಾಖೆಗೆ ಋಣಿಸಿದ್ದಾರೆ. ನನಗೋ ಪ್ರಾಣೇಶನ ಮೇಲೆ ಕೋಪವೇ ಬಂತು. ಅವನ ದುಡ್ಡು ಅವನಿಗೆ ಮರಳಿ ತರಿಸಿಕೊಡಲು ನಾನೆಷ್ಟು ಪ್ರಯತ್ನ ಪಟ್ಟಿದ್ದೇನೆ. ಈಗ ನೋಡಿದರೆ ಎರಡನೇ ಬಾರಿ ತಪ್ಪಿ ಅವನ ಖಾತೆಗೆ ಬಂದರೆ ಅವನು ವಾಪಸ್ಸು ಕೊಡದೇ ಬಳಸಿಕೊಂಡಿದ್ದಾನಲ್ಲ ಎನ್ನಿಸಿ ಅವನಿಗೆ ಫೋನಾಯಿಸಿದರೆ ಆ ಸಂಖ್ಯೆ ಅಸ್ತಿತ್ವದಲ್ಲಿಲ್ಲ ಎಂದು ಉಲಿಯಿತು. ಅವನು ತನ್ನ ವೈಯಕ್ತಿಕ ಮೊಬೈಲ್ ನಂಬರನ್ನು ನನಗೆ ಕೊಟ್ಟಿದ್ದನ್ನು ಡೈರಿಯಲ್ಲಿ ಬರೆದಿಟ್ಟಿದ್ದೆ. ಜ್ಞಾಪಕ ಬಂದು ಅದನ್ನು ಹುಡುಕಿ ಫೋನಾಯಿಸಿದೆ. ಅವನ ಮೇಲೆ ರೇಗುವಂತಿಲ್ಲ. ಈಗ ಅವನು ನಮ್ಮ ಹಿಡಿತದಲ್ಲಿ ಇಲ್ಲ. ಅವನಾಗಿ ಕೊಟ್ಟರೆ ಉಂಟು. ಇಲ್ಲವೇ ಆ ಶಾಖೆಯಲ್ಲಿರುವ ಖಾತೆಯನ್ನೂ ಮುಚ್ಚಿದರೆ ಬ್ಯಾಂಕಿಗೆ ಪಂಗನಾಮವೇ!

ಫೋನು ತೆಗೆದುಕೊಂಡ ಪುಣ್ಯಾತ್ಮ “ಮೇಡಂ ಚೆನ್ನಾಗಿದೀರಾ” ಅಂತ ಖುಷಿಯಿಂದಲೇ ಕೇಳಿದ. ಮುಳ್ಳಿನ ಮೇಲೆ ಬಟ್ಟೆ ಬಿದ್ದಿದೆ. ಈಗ ಹುಷಾರಾಗಿ ಎಳೆದುಕೊಳ್ಳಬೇಕು ಎಂಬ ಅರಿವಿನಲ್ಲಿ ಉಭಯ ಕುಶಲೋಪರಿ ಮಾತನಾಡಿದ ನಂತರ “ಏನು ಬ್ಯಾಂಕಿನ ಕಡೆ ಬಂದೇ ಇಲ್ವಲ್ಲಾ?” ಎಂದೆ, ಅವನ ಖಾತೆ ವರ್ಗಾವಣೆಯಾಗಿದ್ದರ ಕುರಿತು ಮಾತನಾಡದೆ. “ಹ್ಞೂಂ ಮೇಡಂ. ಈಗ ಅಕೌಂಟ್ನ ಬನ್ನೇರುಘಟ್ಟ ರೋಡ್ ಬ್ರಾಂಚಿಗೆ ಟ್ರಾನ್ಸಫರ್ ಮಾಡಿಕೊಂಡಿದೀನಿ” ಅಂದ.

“ನಂಗೆ ಒಂದು ರೈಸ್ ಕುಕ್ಕರ್ ಕೊಂಡ್ಕೊಳೋದಿತ್ತು. ಯಾವಾಗ ಬರ್ತೀಯ ಈ ಕಡೆ?” ಕೇಳಿದೆ. “ಮೇಡಂ ನಾನೀಗ ಬಟರ್ ಫ್ಲೈ ನಲ್ಲಿ ಇಲ್ಲ, ಪೀಜನ್ನಲ್ಲಿ ಇದೀನಿ. ಅದನ್ನೇ ತೊಗೋತೀರಾ” ಅಂದ. “ಅದೂ ಒಳ್ಳೇ ಕಂಪನೀನೇ ಅಲ್ವಾ. ಸರಿ, ನೀನು ಕ್ಯಾಟಲಾಗನ್ನ ತೊಗೊಂಡು ಬಾ, ನೋಡೋಣ” ಅಂದೆ. “ಸಾಯಂಕಾಲ ಬರ್ತೀನಿ” ಎಂದು ಫೋನಿಟ್ಟವನು ಸಾಯಂಕಾಲ ಕ್ಯಾಟಲಾಗಿನೊಂದಿಗೆ ಹಾಜರಾದ.

ಕ್ಯಾಟಲಾಗನ್ನು ಕೈಗೆ ತೆಗೆದುಕೊಂಡು “ಯಾಕೆ ಪ್ರಾಣೇಶ, ಅಕೌಂಟು ಟ್ರಾನ್ಸ್ಫರ್ ಮಾಡ್ಕೊಂಡಿದ್ದು” ಸಹಜವಾಗಿ ಎಂಬಂತೆ ಕೇಳಿದೆ. “ಬೆಳಗ್ಗೆ ನೀವು ಫೋನ್ ಮಾಡ್ದಾಗ್ಲೇ ಹೇಳೋಣ ಅಂದ್ಕೊಂಡೆ. ಆಮೇಲೆ ಹೇಗೂ ಸಾಯಂಕಾಲ ಬರ್ತಿದೀನಲ್ಲಾ ಆಗ್ಲೇ ಹೇಳಿದ್ರಾಯ್ತು ಅಂತ ಸುಮ್ನಾದೆ. ನಂದು ಆ ಮೂರು ಸಾವ್ರದ ಕೇಸಿತ್ತಲ್ಲಾ, ಅದು ಇನ್ನೊಂದ್ಸಲ ನನ್ನ ಅಕೌಂಟಿಗೆ ಬಂದು ಬಿಡ್ತು. ʻಹಿಂಗಾಗಿದೆʼ ಅಂತ ಹೇಳಕ್ಕೆ ಬಂದೆ. ಇಲ್ಲಿ ನಿಮ್ಮ ಬದ್ಲಿಗೆ ಕೂತಿದ್ರಲ್ಲಾ, ಆವಮ್ಮಂಗೆ ಕನ್ನಡ ಬರಲ್ಲಾ, ನಂಗೆ ಹಿಂದಿ ಬರಲ್ಲ. ನಾನು ಹೇಳಿದ್ದು ಅರ್ಥವೇ ಆಗ್ದೆ ʻಅಕೌಂಟೆಂಟ್ ಹತ್ರ ಬನ್ನಿʼ ಅಂತ ಕರ್ಕೊಂಡು ಹೋದ್ರು. ಅವ್ರೋ ನೊಣ ಮುತ್ಕೊಂಡಿದ್ದ ಬೆಲ್ಲದ ತರ ಕೂತಿದ್ರು. ಸುತ್ಲೂ ಜನಗ್ಳ ಗಲಾಟೆ. ಈವಮ್ಮ ಏನು ಹೇಳ್ತೋ, ಅವ್ರಿಗೆ ಏನರ್ಥವಾಯ್ತೋ….

ʻನೀವಿರೋದೆಲ್ಲಿʼ ಅಂದ್ರು. ನಾನು ʻಬನ್ನೇರುಘಟ್ಟ ರೋಡಲ್ಲಿʼ ಅಂದೆ. ಹಾಗಂದ ತಕ್ಷಣ ʻಹಂಗಾದ್ರೆ ಇಲ್ಯಾಕ್ರಿ ನಿಮ್ಮ ಅಕೌಂಟನ್ನ ಇಟ್ಕೊಂಡಿದೀರಾ. ಆ ಬ್ರಾಂಚ್ಗೇ ಟ್ರಾನ್ಸಫರ್ ಮಾಡಿಕೊಡ್ತೀವಿ. ಇನ್ಮುಂದೆ ನಿಮ್ಮ ವ್ಯವಹಾರ ಅಲ್ಲೇʼ ಅಂತ ಹೇಳಿ ಈವಮ್ಮಂಗೆ ʻಅಕೌಂಟು ಟ್ರಾನ್ಸ್ಫರ್ ಮಾಡುʼ ಅಂದು ತಮ್ಮ ಕೆಲ್ಸದಲ್ಲಿ ಮುಳುಗೋದ್ರು. ನನ್ನ ಮಾತನ್ನೇ ಕಿವಿಮೇಲೆ ಹಾಕ್ಕೋತಿಲ್ಲ. ʻಬಿಡು, ಅವ್ರಿಗೇ ಬೇಡದ ದುಡ್ಡು ನಾನ್ಯಾಕೆ ತಲೆ ಕೆಡ್ಸಿಕೊಳ್ಳಿʼ ಅಂತ ನಾನೂ ಸುಮ್ನಾದೆ” ಅಂದ.

“ನೀನು ಸುಮ್ನಾದೆ, ಈಗ ಅದು ನನ್ನ ಕುತ್ಗೇಗೆ ಬಂದಿದೆ. ವಾಪಸ್ಸು ಕಟ್ಟಿಬಿಡು. ಮ್ಯಾನೇಜರ್ರು ನನ್ನ ಹಿಂದೆ ಬಿದ್ದಿದಾರೆ. ಅದನ್ನ ಹೇಳಕ್ಕಂತಾನೇ ಬೆಳಗ್ಗೆ ಫೋನ್ ಮಾಡಿದ್ದು. ಮತ್ತೆ ಇದನ್ನೂ ತೊಗೊಳೋದು ಇತ್ತಲ್ಲ; ಸರಿ ಬಂದಾಗ್ಲೇ ಹೇಳಿದ್ರಾಯ್ತು ಅಂತ ಸುಮ್ನಾದೆ. ನಿನ್ಮೇಲೆ ನಂಗೆ ಭರವಸೆ” ಸ್ವಲ್ಪ ಪಂಪು ಹೊಡೆದೆ. “ಈಗ ಮದ್ವೆಯಾಗಿದೆ ಮೇಡಂ. ನಿಮಗೆ ಇನ್ವಿಟೇಶನ್ ಕೊಡಕ್ಕೆ ಬಂದಾಗ ನೀವು ರಜದಲ್ಲಿದ್ರಿ. ಈಗ ಆ ದುಡ್ಡು ಉಪಯೋಗ್ಸಿಬಿಟ್ಟಿದೀನಿ.

ಇಪ್ಪತ್ತೈದನೇ ತಾರೀಖು ನನ್ನ ಟಿ.ಎ. ಬಿಲ್ಲು ಬರತ್ತೆ; ಆಗ ಖಂಡಿತವಾಗ್ಲೂ ಕಟ್ತೀನಿ. ನಂಗೆ ಹೆಲ್ಪ್ ಮಾಡಿದೀರ. ನಿಮ್ಗೆ ಕಷ್ಟ ಕೊಡಲ್ಲ. ಈ ಕ್ಯಾಟಲಾಗಲ್ಲಿ ಇರೋದ್ರಲ್ಲಿ ಯಾವ್ದುನ್ನಾದ್ರೂ ಇಷ್ಟ ಪಟ್ರೆ ತಂದು ಕೊಡ್ತೀನಿ. ನಂಗೆ ಫೋನ್ ಮಾಡಿ” ಎದ್ದ. ಹೇಳಿದಂತೆಯೇ ಕಟ್ಟಿದ; ನಾನು ಬಡಿದು ಬಾಚಿಕೊಂಡದ್ದಾಯಿತು. ಆ ಕ್ಯಾಟಲಾಗು ಬಹಳ ದಿನ ನನ್ನ ಡ್ರಾವರಿನ ಮೂಲೆಯಲ್ಲೇ ಬಿದ್ದಿತ್ತು…

ಮೇಡಂ ಕೈಗೆ ಫೋನ್ ಕೊಡಿ…

ಹೀಗೆ ನನ್ನ ಹತ್ತಿರ ಬಂದ ಬಹಳಷ್ಟು ಗ್ರಾಹಕರನ್ನು ಮಾತನಾಡಿಸಿ ಅವರ ದೂರಲ್ಲಿ ಪ್ರಾಮಾಣಿಕತೆ ಇದೆ ಎಂದು ನನಗೆ ಮನವರಿಕೆಯಾದರೆ ಅವರ ದುಡ್ಡನ್ನು ವಾಪಸ್ಸು ತರಿಸಿಕೊಡಲು ನನ್ನ ಕೈಮೀರಿ ಪ್ರಯತ್ನ ಪಡುತ್ತಿದ್ದೆ. ಈ ಹಿಂದೆಯೇ ನಮ್ಮ ಶಾಖೆಯ ಅತಿ ಮುಖ್ಯ ಗ್ರಾಹಕ ಕಂಪನಿಯೊಂದರ ಬಗ್ಗೆ, ಅಲ್ಲಿ ತರಬೇತಿಗಾಗಿ ಬರುವ ಹುಡುಗರ ಬಗ್ಗೆ ಬರೆದಿದ್ದೆ. ಮೂರ್ನಾಲ್ಕು ಮಂದಿ ಒಂದು ಕೋಣೆಯನ್ನು ಹಂಚಿಕೊಂಡು, ಬರುವ ಅಲ್ಪ ಆದಾಯದಲ್ಲೂ ತಮ್ಮ ಊರಿಗೆ ದುಡ್ಡು ಕಳುಹಿಸುತ್ತಿದ್ದುದರ ಬಗ್ಗೆಯೂ ಹೇಳಿದ್ದೆ. ಈ ಹುಡುಗರಲ್ಲಿ ಬಹಳಷ್ಟು ಸಲ ನನಗೆ ದೂರು ಬರುತ್ತಿದ್ದದ್ದು “ಮೇಡಂ, ನನ್ನ ಅಕೌಂಟಿಂದ ಯಾರೋ ರೊಕ್ಕ ತೆಕ್ಕೊಂಡಾರೆ” ಅಳುಮುಖದಿಂದ ಎದುರು ಕೂರುತ್ತಿದ್ದ ಆ ಹುಡುಗರನ್ನು ನೋಡಿದರೆ ನನಗೆ ಸದಾ ಒಂದು ರೀತಿಯ ಅನುಕಂಪ.

ನನ್ನ ಮಾಮೂಲಿ ವಿಚಾರಣೆ ಶುರುವಾಗುತ್ತಿತ್ತು. ʻಕಾರ್ಡ್ ಎಲ್ಲಿಟ್ಟಿದ್ದೆ?ʼ ʻಪಿನ್ ನಂಬರ್ ಯಾರ್ಗಾದ್ರೂ ಹೇಳಿದ್ಯಾ?ʼ ʻಯಾವಾಗ್ಲಾದ್ರೂ ನಿನ್ನ ಕಾರ್ಡನ್ನ ಯಾರ್ಗಾದ್ರೂ ಕೊಟ್ಟು ದುಡ್ಡು ತರಿಸಿಕೊಂಡಿದ್ಯಾ?” ಸಾಮಾನ್ಯವಾಗಿ ಅವರ ಉತ್ತರ ಹೀಗಿರುತ್ತಿತ್ತು. ʻಕಾರ್ಡು ಪೆಟಿಗ್ಯಾಗೇ ಇಟ್ಟಿದ್ದೆರಿʼ ʻಪಿನ್ ನಂಬ್ರ ಕಾರ್ಡ್ ಹಿಂದನಾ ಬರ್ದಿದ್ದೆರಿʼ ಇಲ್ಲಾ ʻಮನಸ್ನಾಗೇ ನೆಪ್ಪಿಟ್ಕೊಂಡಿದೀನ್ರೀʼ ʻವಾರದ್ ಕೆಳ್ಗೆ ನನ್ ಗೆಳೆಯಾನ್ ಕೈಲೇ ಐನೂರು ರೂಪಾಯಿ ತರಿಸ್ಕೊಂಡಿದ್ದೆರಿʼ ಹೀಗೆ.

ʻಪಿನ್ ನಂಬ್ರ ಯಾರ್ಗೂ ಹೇಳಿಲ್ಲ; ನೆಪ್ಪಿಟ್ಕೊಂಡಿದ್ದೆʼ ಎನ್ನುವವರಿಗೆ ಮುಂದಿನ ಪ್ರಶ್ನೆ ʻದುಡ್ಡು ತೆಗ್ಯುವಾಗ ಗೆಳೆಯಾರ ಜೋಡಿ ಹೋಗ್ತಿದ್ಯಾ?ʼ ಅದಕ್ಕೆ ಖಂಡಿತವಾದ ಉತ್ರ ʻಹೌದ್ರಿ ನಾವೆಲ್ಲಾ ಗೆಳೆಯಾರೂ ಒಟ್ಗೇ ಹೋಗಿ ರೊಕ್ಕಾ ತರ್ತೀವ್ರಿʼ ʻಅಷ್ಟು ಸಾಕಲ್ವಾ ಅವ್ರಿಗೆ ನಿನ್ನ ಪಿನ್ ನಂಬರ್ ತಿಳ್ಕೊಳಕ್ಕೆ. ಅವ್ರಲ್ಲೇ ಯಾರಾದ್ರೂ ತೆಗೆದಿರ್ತಾರೆʼ ಎಂದರೆ ʻಇಲ್ಲ ಬಿಡ್ರೀ ಮೇಡಂ. ಅವ್ರೆಲ್ಲಾ ಭಾಳ್ ಒಳ್ಳೇವ್ರುʼ.

ನನ್ನ ಮುಂದಿನ ಪ್ರಶ್ನೆ ʻಅವತ್ತು ನಿನ್ನ ಡ್ಯೂಟಿ ಎಷ್ಟು ಹೊತ್ತಿಗಿತ್ತು?ʼ ʻಮುಂಜಾನೆʼ ಅಂತಲೋ ʻರಾತ್ರಿʼ ಅಂತಲೋ ಹೇಳುತ್ತಿದ್ದ. ಎ ಟಿ ಎಂ ಜಾಲತಾಣಕ್ಕೆ ಹೋಗಿ ನೋಡಿದರೆ ಆ ವಹಿವಾಟು ನಡೆದ ಸಮಯದ ವಿವರ ಸಿಕ್ಕುತ್ತಿತ್ತು. ಸರಿಯಾಗಿ ಅವನು ಕೆಲಸದಲ್ಲಿರುವ ವೇಳೆಯಲ್ಲಿ ಆ ವಹಿವಾಟು ನಡೆದಿರುತ್ತಿತ್ತು. ಸ್ವ.ಸ.ಯಂ.ನ್ನು ಉಪಯೋಗಿಸುವಾಗ ಅನುಸರಿಸಬೇಕಾದ ಸುರಕ್ಷತೆಯ ಬಗ್ಗೆ ಅವನಿಗೆ ಅರ್ಥಮಾಡಿಸಿ ʼಇನ್ನು ಮುಂದೆ ಕಟ್ಟುನಿಟ್ಟಾಗಿ ಇವನ್ನು ಪಾಲಿಸಬೇಕುʼ ಎಂದು ತಿಳುವಳಿಕೆ ನೀಡುತ್ತಿದ್ದೆ.

“ಈಗ ನನ್ನ ರೊಕ್ಕ ಹೋಗ್ಯಾವಲ್ರಿ” ಕಣ್ಣಲ್ಲಿ ನೀರಾಡುತ್ತಿತ್ತು. ಅದರಲ್ಲಿ ನನಗೆ ಹಳ್ಳಿಯಲ್ಲಿ ಅವನ ಈ ದುಡ್ಡಿಗೆ ಕಾಯುತ್ತಿರಬಹುದಾದ ಅಪ್ಪ, ಅಮ್ಮ, ತಮ್ಮ, ತಂಗಿಯರ ಚಿತ್ರವೇ ಕಾಣುತ್ತಿತ್ತು. “ಒಂದ್ಕೆಲಸ ಮಾಡು. ಇವತ್ತು ರಾತ್ರಿ ಎಲ್ರೂ ಒಟ್ಟಿಗೆ ಊಟ ಮಾಡ್ತಿರೋವಾಗ ನಿನ್ನ ರೊಕ್ಕ ಹೋಗಿರೋ ಬಗ್ಗೆ ಹೇಳು.

ಬ್ಯಾಂಕಲ್ಲಿ ದೂರು ಕೊಟ್ಟಿದೀನಿ ಅಂತ ಹೇಳು. ಹಾಗೇನೇ ಬ್ಯಾಂಕಿನವ್ರು ʻನಾಳೆ ಪೋಲೀಸ್ ಕಂಪ್ಲೇಂಟ್ ಕೊಡು. ಅವ್ರು ಎ ಟಿ ಎಂ ನಲ್ಲಿರೋ ಸಿಸಿಟಿವಿ ಕ್ಯಾಮರಾದಲ್ಲಿ ಯಾರು ತೆಗೆದಿದ್ದು ಅಂತ ಕಂಡು ಹಿಡೀತಾರೆʼ ಅಂತ ಹೇಳಿದಾರೆ. ನಿಮ್ಮಲ್ಲೇ ಯಾರಾದ್ರೂ ತೆಗೆದಿದ್ರೆ ಕೊಟ್ಟುಬಿಡಿ. ಇಲ್ಲಾಂದ್ರೆ ನಾಳೆ ಬೆಳಗ್ಗೆ ಕಂಪ್ಲೇಂಟು ಕೊಡ್ತಿದೀನಿ” ಅಂತ ಹೇಳು; ತಾನಾಗೇ ನಿನ್ನ ದುಡ್ಡು ಬರತ್ತೆ” ಎಂದು ಹೇಳುತ್ತಿದ್ದೆ. ನಾನು ಹೇಳಿದ ಹಾಗೆ ಅವರ ದುಡ್ಡು ವಾಪಸ್ಸು ಬರುತ್ತಿತ್ತು. ಯಾರಿಗೆ ತಾನೆ ಪೋಲೀಸ್ಗೆ ಸಿಲುಕಿಕೊಳ್ಳುವ ಆಸೆ?!

ಒಂದು ಸಲ ಹೀಗೆ ಕೈಸುಟ್ಟುಕೊಂಡ ಮೇಲೆ ಆ ಪ್ರಸಂಗದಲ್ಲಿ ಒಳಗಾದವರು, ನೋಡಿದವರು, ಕೇಳಿದವರು ಎಲ್ಲರೂ ಹುಷಾರಾಗುತ್ತಿದ್ದರು. ʻಕಾರ್ಡು ಕಳೆದು ಹೋಗಿದೆʼ; ʻಪಿನ್ ನಂಬರ್ ಮರೆತು ಹೋಗಿದೆʼ ʻಅಕೌಂಟಿನಲ್ಲಿ ದುಡ್ಡು ಕಟ್ಟಾಗಿದೆ; ಆದರೆ ರೊಕ್ಕ ಬರಲಿಲ್ಲʼ ಇಂತಹ ದೂರುಗಳು ಇವರಲ್ಲಿ ಸಾಮಾನ್ಯ. ಬೇಸರಿಸಿಕೊಳ್ಳದೆ ಅವರ ಕೆಲಸವನ್ನು ಮಾಡಿಕೊಡುತ್ತಿದ್ದುದರಿಂದ, ಅದ್ಯಾರಿಗೆ ನಾನು ಯಾವ ಘಳಿಗೆಯಲ್ಲಿ ತಪ್ಪಿ ನನ್ನ ಪೋನ್ ನಂಬರ್ ಕೊಟ್ಟುಬಿಟ್ಟಿದ್ದೆನೋ ಅದು ಆ ಕಂಪನಿಯಲ್ಲೆಲ್ಲಾ ಹಾರಾಡುತ್ತಿದ್ದು ಎಲ್ಲದಕ್ಕೂ ಫೋನಾಯಿಸುತ್ತಿದ್ದರು. ಇದು ಎಷ್ಟರ ಮಟ್ಟಿಗಾಯಿತು ಎಂದರೆ ನಾನು ನ್ಯೂಮೋನಿಯಾದಿಂದ ಬದುಕು ಸಾವಿನ ಮಧ್ಯೆ ಹೋರಾಡುತ್ತಾ ತೀವ್ರ ಚಿಕಿತ್ಸಾ ಘಟಕದಲ್ಲಿ ವೆಂಟಿಲೇಟರಿನ ಮೇಲೆ ಮಲಗಿದಾಗಲೂ ಕರೆಗಳು ಬರುತ್ತಿದ್ದವಂತೆ.

ಫೋನು ಮಗಳ ಕೈಯಲ್ಲಿದ್ದು ಅವಳು ಪರಿಸ್ಥಿತಿಯನ್ನು ವಿವರಿಸಿದ ಮೇಲೂ ʻಸ್ವಲ್ಪ ಹಾಗೇ ವಾರ್ಡಿನೊಳಗೆ ಹೋಗಿ ಅವರಿಗೆ ಫೋನ್ ಕೊಟ್ಬಿಡಿ ಅಕ್ಕಾ, ಅವರ ಹತ್ರ ಮಾತಾಡ್ಬೇಕು. ತುಂಬಾ ತ್ರಾಸಾಗಿದೆ…ʼ ಎಂದು ಅವರ ಸಮಸ್ಯೆಯನ್ನು ಹೇಳತೊಡಗಿದರೆ ಮಗಳು ತಾನೇ ಏನು ಹೇಳಿಯಾಳು ʻನೀವು ಬ್ಯಾಂಕಿಗೆ ಹೋಗಿ ವಿಚಾರಿಸಿʼ ಅನ್ನುವುದನ್ನು ಬಿಟ್ಟು… ಅವರಿಗೆ ನನ್ನ ತೊಂದರೆ ತಲೆಗೆ ಹೋಗದಿದ್ದರೂ, ಅವರ ಸಮಸ್ಯೆಗೆ ನಾನು ಪರಿಹಾರ ಕೊಡುತ್ತೇನೆಂದು ಅಷ್ಟರ ಮಟ್ಟಿಗೆ ನಂಬಿದ್ದರಲ್ಲಾ!!

ನನ್ನ ಅಕೌಂಟಿಂದ ಯಾರೋ ದುಡ್ಡು ತೆಗೆದುಬಿಟ್ಟಿದಾರೆ… ಫ್ರಾಡ್ ಆಗಿದೆ…

“ಮೇಡಂ, ನನ್ನ ಅಕೌಂಟಲ್ಲಿ ಫ್ರಾಡ್ ಆಗಿದೆ. ಒಂದು ಸಾವಿರ, ಎರಡು ಸಾವಿರ, ಎರಡು ಸಾವಿರ ಹೀಗೆ ಮೂರುಸಲ ನನ್ನ ದುಡ್ಡು ಕಟ್ಟಾಗಿದೆ. ನಾನು ಎ ಟಿ ಎಂ ಉಪಯೋಗಿಸೇ ಇಲ್ಲ” ಆ ದಿನ ಇನ್ನೇನು ಕೆಲಸ ಮುಗಿಯುತ್ತಿದೆ ಎನ್ನುವಾಗ ಒಬ್ಬ ಮಹಿಳೆ ನನ್ನನ್ನು ಹುಡುಕಿಕೊಂಡು ಬಂದವರೇ ಉದ್ವೇಗದಿಂದ ಹೇಳಿದರು. ಅವರನ್ನು ಕುಳಿತುಕೊಳ್ಳಲು ಹೇಳಿ ವಹಿವಾಟಿನ ಪೂರ್ಣ ವಿವರಗಳನ್ನು ಪಡೆದುಕೊಂಡೆ. ಶಾಲೆಯೊಂದರ ಟೀಚರ್ ಆಕೆ. ಆ ವಹಿವಾಟುಗಳ ಬಗೆಗಿನ ಮಾಹಿತಿಯನ್ನು ಎ.ಟಿ.ಎಂ. ಜಾಲತಾಣದಲ್ಲಿ ನೋಡಿದೆ. ಆಕೆ ಸದಾ ಬಳಸುತ್ತಿದ್ದ ಆಂಧ್ರ ಬ್ಯಾಂಕ್ ಸ್ವ.ಸ.ಯಂ.ನಿಂದಲೇ ಆ ವಹಿವಾಟುಗಳು ನಡೆದಿದ್ದವು.

“ನಿಮ್ಮ ಕಾರ್ಡನ್ನು ಎಲ್ಲಿಟ್ಟಿರ್ತೀರಿ” ಕೇಳಿದೆ. “ಅದು ಸದಾ ನನ್ನ ಪರ್ಸಲ್ಲೇ ಇರತ್ತೆ. ನಾನು ಎ.ಟಿ.ಎಂ.ಗೆ ಹೋದಾಗ ಮಾತ್ರ ಅದನ್ನು ತೆಗೆಯೋದು” ಆಕೆಯ ಉತ್ತರ. “ನೀವು ಹಾಗೆ ಹೋದಾಗೆಲ್ಲಾ ನಿಮ್ಮ ಜೊತೆ ಯಾರಾದ್ರೂ ಬರ್ತಾರಾ?” ನನ್ನ ಮುಂದಿನ ಪ್ರಶ್ನೆ. “ಯಾರನ್ನೂ ಕರ್ಕೊಂಡು ಹೋಗಲ್ಲ. ಮನೆ ಹತ್ರಾನೆ ಇದೆ. ನಾನು ನನ್ನ ಮಗ ಇಬ್ರೇ ಹೋಗೋದು. ಅವನಿಗಿನ್ನೂ ಹತ್ತು ವರ್ಷ ಅಷ್ಟೇ. ತುಂಬಾ ಚೂಟಿ. ಅವನೇ ಎಲ್ಲಾ ಮಾಡ್ತಾನೆ” ಮಗನ ಬಗ್ಗೆ ಹೆಮ್ಮೆಯಿಂದ ಹೇಳಿದರು

. “ದಯವಿಟ್ಟು ತಪ್ಪು ತಿಳಿಯಬೇಡಿ. ಮೇಲ್ನೋಟಕ್ಕೆ ಈ ವಹಿವಾಟು ಸರಿಯಾಗೇ ಇದೆ. ಕಾರ್ಡು ನಿಮ್ಮ ಪರ್ಸಲ್ಲೇ ಇದೆ. ಮಗನಿಗೆ ಬಿಟ್ಟರೆ ಬೇರೆಯವರಿಗೆ ನಿಮ್ಮ ಪಿನ್ ನಂಬರ್ ತಿಳಿದಿರುವ ಸಾಧ್ಯತೆ ಇಲ್ಲ. ಹುಡುಗಾಟಕ್ಕೆ ನಿಮ್ಮ ಮಗನೇ ಯಾಕೆ ದುಡ್ಡು ತೆಗೆದಿರಬಾರದು? ಒಂದ್ಸಲ ಅವನನ್ನ ವಿಚಾರಿಸಿ ನೋಡಿ” ಎಂದೆ.

“ಏನು ಮಾತು ನೀವು ಹೇಳೋದು? ಅವನ್ಯಾಕೆ ತೆಗೀತಾನೆ? ಅಷ್ಟಕ್ಕೂ ಅವನು ನನ್ನ ಪರ್ಸಿಂದ ಕಾರ್ಡು ತೆಗೆದರೆ ನಂಗೆ ಗೊತ್ತಾಗಲ್ವೇ?” ಸಿಟ್ಟು ಬಂದಿತ್ತು ಆಕೆಗೆ. “ಕೋಪಿಸ್ಕೋ ಬೇಡಿ. ಈಗ ನನ್ನ ಪರ್ಸಲ್ಲಿ ನನ್ನ ಎ.ಟಿ.ಎಂ. ಕಾರ್ಡು ಇದೆ ಅನ್ನೋದು ನನ್ನ ನಂಬಿಕೆ ಅಷ್ಟೇ. ಅದನ್ನ ದಿನವೂ ಚೆಕ್ ಮಾಡಲ್ವಲ್ಲಾ. ಯಾವಾಗ ಅದರ ಉಪಯೋಗ ಇದೆಯೋ ಆಗ ಅದು ಅಲ್ಲಿದ್ರೆ ಅದು ಅಲ್ಲೇ ಇತ್ತು ಅಂತ ತಾನೇ ಅಂದುಕೊಳ್ತೀನಿ.

ನಿಮ್ಮ ಮನೆಯಿಂದ ಎ.ಟಿ.ಎಂ.ಗೆ ಎರಡು ನಿಮಿಷದ ಹಾದಿ ಅಂತೀರ. ನೀವು ಸ್ನಾನ ಮಾಡ್ತಿರೋವಾಗ್ಲೋ, ಅಡುಗೆ ಕೆಲಸದಲ್ಲಿ ಮುಳ್ಗಿರೋವಾಗ್ಲೋ ʻಹೀಗೆ ಹೋಗಿ ಹಾಗೆ ಬಂದೆʼ ಅನ್ನೋ ಹಾಗೆ ಹೋಗಿ ಬಂದ್ರೆ ನಿಮ್ಗೆ ಹೇಗೆ ಗೊತ್ತಾಗತ್ತೆ? ಯಾವ್ದಕ್ಕೂ ಒಂದ್ಸಲ ಕೇಳಿ ನೋಡಿ” ಎಂದೆ. “ಮಗನ್ನೇ ಹೇಗೆ ನೀನು ಕಳ್ಳತನ ಮಾಡಿದ್ಯಾ ಅಂತ ಕೇಳೋದು?” ಈಗ ಸ್ವಲ್ಪ ಮೆತ್ತಗಾಗಿದ್ದರು. “ಸೀದಾ ಸೀದಾ ಕೇಳಬೇಡಿ. ಅವನೇ ತೆಗೆದಿದ್ರೂ ಒಪ್ಪಿಕೊಳ್ಳುವ ಸಂಭವ ಕಡಿಮೆ.

ʻಹೀಗಾಗಿದೆ. ಪೊಲೀಸ್ ಕಂಪ್ಲೇಂಟ್ ಕೊಡೋಣ ಅಂತಿದೀನಿ. ಸಿಸಿಟಿವಿನಲ್ಲಿ ಯಾರು ತೆಗ್ದಿದಾರೆ ಅಂತ ಗೊತ್ತಾಗತ್ತಂತೆ. ಪೋಲೀಸ್ನವ್ರು ಒದ್ದು ವಸೂಲಿ ಮಾಡ್ತಾರೆʼ ಅಂತ ಸುಮ್ಮನೆ ಅವನ ಮುಂದೆ ನಿಮ್ಮ ಗಂಡನಿಗೆ ಹೇಳಿ. ಅವನ ಪ್ರತಿಕ್ರಿಯೆ ಏನೂಂತ ನೋಡಿ” ಎಂದೆ. “ಅವನಲ್ಲದಿದ್ರೆ?” ಏನೋ ವಿಶ್ವಾಸ ಮಗನ ಬಗ್ಗೆ. “ಆಮೇಲೆ ನೀವು ಏನ್ಮಾಡಬೇಕೂಂತ ನಾನು ಹೇಳ್ತೀನಿ” ಎಂದವಳು ನನ್ನ ಕೆಲಸದಲ್ಲಿ ಮುಳುಗಿದೆ. ಒಂದಷ್ಟು ಹೊತ್ತು ಸುಮ್ಮನೆ ಮುಂದೆ ಕುಳಿತೇ ಇದ್ದರು. ಅವರಿಗಿನ್ನೂ ಈ ವಿಷಯವನ್ನು ಅರಗಿಸಿಕೊಳ್ಳಲು ಆಗಿರಲಿಲ್ಲ. ನಿಧಾನವಾಗಿ ಎದ್ದು ಹೋದರು…

ಇದಾದ ಎರಡನೆಯ ದಿನವೇ ಸಾಯಂಕಾಲ ಮತ್ತೆ ಬಂದು ಎದುರಲ್ಲಿ ಕುಳಿತರು. ಅತ್ತು ಅತ್ತು ಕಣ್ಣುಗಳೆಲ್ಲಾ ಕೆಂಪಾಗಿದ್ದವು. “ಮೇಡಂ, ನೀವು ಹೇಳಿದ ಮಾತು ನಿಜ. ಅವನೇ ತೆಗೆದಿರೋದು ಅಂತ ಒಪ್ಕೊಂಡ. ಈಗೇನ್ಮಾಡ್ಬೇಕು?” ಬಿಕ್ಕಿ ಬಿಕ್ಕಿ ಅತ್ತರು. “ಸಮಾಧಾನ ಮಾಡ್ಕೊಳ್ಳಿ. ಇದರಲ್ಲಿ ನಿಮ್ಮ ತಪ್ಪೂ ಇದೆ. ದುಡ್ಡೇನೂ ವಾಪಸ್ಸು ಬರಲ್ಲ. ಯಾಕೆ ಹಾಗ್ಮಾಡ್ದ ಅಂತ ಕೇಳಿದ್ರಾ” ಕೇಳಿದೆ. “ಚಾಕ್ಲೇಟು, ಐಸ್ ಕ್ರೀಂ ತಿನ್ನಕ್ಕಂತೆ ಮೇಡಂ. ಅವನ ಫ್ರೆಂಡ್ಸ್ಗಳಿಗೂ ಕೊಡ್ಸಿ ತಿಂದಿದಾನೆ” ಅಳುವಿನ ಮಧ್ಯದಲ್ಲೇ ಹೇಳಿದರು.

“ನೀವು ಅವನಿಗೆ ಅಂತವೆಲ್ಲಾ ಕೊಡಸಲ್ವಾ?” ಎಂದು ಕೇಳಿದ್ದಕ್ಕೆ “ಅದು ಒಳ್ಳೇದಲ್ವಲ್ಲ ಮೇಡಂ. ಹಾಗಾಗಿ ನಾನು ಅದನ್ನು ಕೊಡ್ಸೋದೇ ಇಲ್ಲ. ಟೀಚರ್ರಾಗಿದ್ಕೊಂಡು ಬೇರೆ ಮಕ್ಕಳಿಗೆ ತಿನ್ಬೇಡಿ, ಒಳ್ಳೇದಲ್ಲ ಅಂತ ಹೇಳಿ ನನ್ನ ಮಗನಿಗೆ ಕೊಡ್ಸೋದು ತಪ್ಪಲ್ವಾ?” ಅಂದರಾಕೆ. “ಒಳ್ಳೇದಲ್ಲ ಅನ್ನೋದು ನಿಜ. ಆದರೆ ಮಕ್ಕಳು ಅವರ ಫ್ರೆಂಡ್ಸ್ ಎಲ್ಲಾ ತಿನ್ನೋದು ನೋಡ್ತಿರ್ತಾರೆ. ಅವ್ರೂ ನಿಮ್ಮ ಮಗನಿಗೆ ಕೊಡ್ಸಿರ್ತಾರೆ. ನೀವು ಕೊಡ್ಸಲ್ಲ. ತುಂಬಾ ಕಟ್ಟುನಿಟ್ಟು ಮಾಡಿದ್ರೆ ಹೀಗಾಗೋ ಸಂಭವ ಹೆಚ್ಚು. ಅವ್ನಿಗೆ ತಿಳುವಳಿಕೆ ಕೊಟ್ಟು, ಒಂದೊಂದು ಸಲವಾದ್ರೂ ಕೊಡ್ಸಿರ್ತಿದ್ರೆ ಹೀಗಾಗ್ತಿರ್ಲಿಲ್ಲ ಅನ್ಸತ್ತೆ” ನಂಗೆ ಅನ್ನಿಸಿದ್ದನ್ನು ಹೇಳಿದೆ.

“ಈಗೇನ್ಮಾಡ್ಲಿ” ಅಸಹಾಯಕರಾಗಿ ಕೇಳಿದರು. “ಸೂಕ್ಷ್ಮವಾಗಿ ಈ ಪ್ರಸಂಗವನ್ನು ಎದುರಿಸಿ. ತಪ್ಪು ಮಾಡಿದ್ದಕ್ಕೆ ಶಿಕ್ಷೆ ಅಂತ ಏನಾದ್ರೂ ಬರೆಯೋದೋ, ಕಲಿಯೋದೋ ಅಂತದೇನನ್ನಾದ್ರೂ ಕೊಡಿ. ಅವನು ಮಾಡಿರೋ ತಪ್ಪು ಅವ್ನಿಗೆ ಗೊತ್ತಾಗೋ ಹಾಗೆ ಬುದ್ಧಿ ಹೇಳಿ. ನೀವೂ ಇನ್ಮುಂದೆ ತುಂಬಾ ಕಠಿಣವಾಗಿರದೆ ಅವನ ಮುಂದೆ ಏನೋ ಒಂದು ಗುರಿ ಇಟ್ಟು ಅದು ಮಾಡಿದ್ರೆ ಕೊಡಿಸ್ತೀನಿ ಅಂತ ಅವ್ನನ್ನ ದಾರಿಗೆ ತರಕ್ಕೆ ನೋಡಿ. ನೀವೇ ಟೀಚರ್. ಮಕ್ಕಳನ್ನ ಚೆನ್ನಾಗಿ ನಿಭಾಯಿಸೋ ಕಲೆ ನಿಮಗಿದೆ” ತಿಳಿದಷ್ಟನ್ನು ಹೇಳಿ ಸುಮ್ಮನಾದೆ. ಸ್ವಲ್ಪ ಹೊತ್ತು ಕುಳಿತಿದ್ದವರು “ತುಂಬಾ ಥ್ಯಾಂಕ್ಸ್” ಎನ್ನುತ್ತಾ ಎದ್ದು ಭಾರವಾದ ಹೆಜ್ಜೆಗಳನ್ನಿಡುತ್ತಾ ಹೊರನಡೆದರು. ನಿಟ್ಟುಸಿರು ಬಿಟ್ಟು ನಾನೂ ನನ್ನ ಕೆಲಸದಲ್ಲಿ ತೊಡಗಿಕೊಂಡೆ.

ಈ ತಿಂಗ್ಳು ನನ್ನ ಸಂಬಳಾನೇ ಬಂದಿಲ್ಲ…

ಶಾಲೆಯಲ್ಲಿ ಆಯಾ ಕೆಲಸ ಮಾಡುವ ಮಹಿಳೆಯೊಬ್ಬಳು ಒಮ್ಮೆ ಬಂದು “ನನ್ನ ಖಾತೆಗೆ ಯಾಕೋ ಸಂಬಳ ಬಂದಿಲ್ವಂತೆ ನೋಡಿ ಮೇಡಂ” ಎಂದಳು. “ಬಂದಿಲ್ಲದಿದ್ರೆ ನಿಮ್ಮ ಆಫೀಸಲ್ಲಿ ಕೇಳ್ಬೇಕಲ್ವಾ. ನಮ್ಮ ಬಳಿ ಬಂದಿರುವ ಪಟ್ಟಿಯ ಪ್ರಕಾರ ಎಲ್ಲರ ಖಾತೆಗಳಿಗೂ ನಿನ್ನೆಯೇ ಜಮಾ ಮಾಡಿದ್ದೇವೆ” ಎಂದೆ. “ಅದೇ. ನಿನ್ನೆ ಸ್ಕೂಲ್ ಅತ್ರ ಇರೋ ಎ.ಟಿ.ಎಂ.ಗೆ ಹೋಗಿದ್ದೆ. ಅಲ್ಲಿದ್ದ ಒಬ್ಬನ ಹತ್ರ ಕಾರ್ಡು ಕೊಟ್ಟು ʻಸಂಬಳ ಬಂದಿದ್ಯಾ ನೋಡಣ್ಣಾʼ ಅಂದೆ. ಆವಪ್ಪ ನೋಡಿ ʻಬಂದಿಲ್ಲ ಕಣಕ್ಕೋʼ ಅಂತ ಕಾರ್ಡು ವಾಪಸ್ಸು ಕೊಡ್ತು. ಆಮೇಕೆ ಸ್ಕೂಲಲ್ಲಿ ಇಚಾರ್ಸಿದ್ರೆ ನಿನ್ನೇನೆ ಆಕಾಗಿದೆ.

ಬ್ಯಾಂಕಿಗೋಗಿ ಕೇಳು ಅಂದ್ರು. ಅದ್ಕೆ ಇವತ್ತು ನನ್ನ ಮಗನ್ನೂ ಕರ್ಕಂಡು ಬಂದು ಇಲ್ಲೇ ಇರೋ ಎ.ಟಿ.ಎಂ.ಗೆ ಓಗಿ ನೋಡಿದ್ರೆ ಕಾರ್ಡು ಕೆಲ್ಸಾನೇ ಮಾಡ್ತಿಲ್ಲ ಮೇಡಂ” ಕಾರ್ಡನ್ನು ಕೈಗೆ ಕೊಟ್ಟಳು. ಅದನ್ನು ನೋಡಿದವಳೇ “ನಿನ್ನ ಹೆಸರೇನು?” ಎಂದು ಕೇಳಿದೆ. ಶಾಂತಮ್ಮನೋ, ಜಯಮ್ಮನೋ ಏನೋ ಹೇಳಿದಳು. ಕಾರ್ಡಿನ ಮೇಲಿರುವ ಹೆಸರು ಗೋವಿಂದ. “ಅಲ್ಲಮ್ಮಾ ಯಾರದೋ ಕಾರ್ಡು ತಂದು ಕೆಲಸ ಮಾಡ್ತಿಲ್ಲ ಅಂತಿದೀಯಲ್ಲ” ಎಂದರೆ “ಇದು ನಂದೇ ಕಾರ್ಡು ಮೇಡಂ. ನಿನ್ನೆ ಆವಪ್ಪ ನೋಡಿ ವಾಪಸ್ಸು ಕೊಟ್ನಲ್ಲಾ ಅದೇಯ” ಎಂದಳು ಗಾಬರಿಯಿಂದ.

“ಅವನ ಕೈಗೆ ಕಾರ್ಡು ಕೊಟ್ಟು ಎಲ್ಲಿ ನೋಡ್ತಿದ್ದೆ? ಅವನು ನಿನ್ನ ಕಾರ್ಡು ತೆಗೆದುಕೊಂಡು ಅವನ ಕಾರ್ಡು ಕೊಟ್ಟಿದಾನೆ” ಎಂದು ಅವಳ ಬಳಿಯಿದ್ದ ಕಾರ್ಡಿನ ವಿವರವನ್ನು ಎ.ಟಿ.ಎಂ. ಜಾಲತಾಣದಲ್ಲಿ ತೆಗೆದು ನೋಡಿದರೆ ಅದು ನಿರ್ಬಂಧಿತ ಕಾರ್ಡಾಗಿತ್ತು. ಈಕೆಯ ಖಾತೆಯನ್ನು ಪರಿಶೀಲಿಸಿದರೆ ಎರಡಂಕೆಯಲ್ಲಿ ಶಿಲ್ಕನ್ನು ಉಳಿಸಿ ಎಲ್ಲವನ್ನೂ ಬಳಿದುಕೊಂಡುಬಿಟ್ಟಿದ್ದ.

ತಕ್ಷಣವೇ ಆಕೆಯ ಕಾರ್ಡನ್ನು ನಿರ್ಬಂಧಿಸಿ ಬೇರೆ ಕಾರ್ಡಿಗೆ ಅರ್ಜಿಯನ್ನು ಹಾಕಿದೆ. “ಇಡೀ ತಿಂಗಳೆಲ್ಲಾ ದುಡಿದುದ್ದು ಒಂಟೋಯ್ತಲ್ಲ ಈಗ ಖರ್ಚಿಗೆ ಏನ್ಮಾಡ್ಲಿ” ಎನ್ನುತ್ತಾ ಗೋಳಾಡಿದಳು. ನಾನು ತಾನೆ ಏನು ಮಾಡುವ ಹಾಗಿದ್ದೇನೆ? “ಆಫೀಸಿಗೆ ಹೋಗಿ ಹೀಗಾಗಿದೆ ಅಂತ ಕಷ್ಟ ಹೇಳ್ಕೋ. ಮುಂದಿನ ತಿಂಗಳ ಸಂಬಳದಲ್ಲಿ ಸ್ವಲ್ಪ ದುಡ್ಡನ್ನು ಕೈಗಡ ಕೊಡಿ ಅಂತ ಕೇಳು. ಇನ್ಮುಂದೆ ಹುಷಾರಾಗಿರು. ನಿಂಗೆ ತುಂಬಾ ಪರಿಚಯ ಇರೋವ್ರನ್ನ, ನಂಬಿಕಸ್ತರನ್ನ ಬಿಟ್ಟು ಬೇರೆಯವರ ಕೈಲಿ ಕಾರ್ಡು ಕೊಡಬೇಡ.

ಕಾರ್ಡು ಬೇಡ ಅಂತಿದ್ರೆ ತಿಂಗಳಿಗೊಂದು ಸಲ ಇಲ್ಲಿಗೇ ಬಂದು ದುಡ್ಡು ತೆಗೆದುಕೊಂಡು ಹೋಗು” ಎಂದೆ. “ಇಲ್ಲಿಗೆ ಬರ್ಬೇಕು ಅಂದ್ರೆ ರಜಾ ಆಕಿ ಬರ್ಬೇಕು ಮೇಡಂ. ಆ ದಿನದ ಸಂಬಳ ಇಡ್ಕತಾರೆ. ಬಂದೋಗೋ ಬಸ್ಚಾರ್ಜೇ ನೂರು ರೂಪಾಯಿ ಆಗತ್ತೆ” ಅಂದಳು. ಇದಕ್ಕೆ ನನ್ನಲ್ಲಿ ಪರಿಹಾರವಿಲ್ಲ. “ಒಂದ್ಸಲ ಪೆಟ್ಟು ತಿಂದಿದೀಯ; ಇನ್ಮುಂದೆ ಹುಷಾರಾಗಿರು” ಎಂದು ಹೇಳಿ ಇನ್ನೊಬ್ಬ ಗ್ರಾಹಕರ ಸಮಸ್ಯೆಗೆ ಕಿವಿಕೊಟ್ಟೆ. ಅವರು ಹೋದ ಮೇಲೂ ಈಕೆ ಇನ್ನೂ ಅಲ್ಲೇ ನಿಂತಿದ್ದಳು.

“ಯಾಕಿನ್ನೂ ನಿಂತಿದೀಯ?” ಕೇಳಿದೆ. “ವಾಪಸ್ಸು ಓಗಕ್ಕೆ ಚಾರ್ಜಿಗೆ ದುಡ್ಡಿಲ್ಲ. ಇವತ್ತು ಸಂಬಳ ಬಂದಿರತ್ತೆ ತೊಗೊಂಡು ಹೋಗೋಣ ಅಂದ್ಕಂಡಿದ್ದೆ. ಈಗೇನ್ಮಾಡೋದು. ಯಾರಾದ್ರೂ ಗುರ್ತಿನೋರು ಬರ್ತಾರಾ ಅಂತ ಕಾಯ್ತಿದೀನಿ” ಎಂದಳು ಕಣ್ಣಲ್ಲಿ ನೀರು ತುಂಬಿಕೊಂಡು. ಪರ್ಸ್ ತೆಗೆದು ಇನ್ನೂರು ರೂಪಾಯಿ ಕೈಗಿಟ್ಟೆ. “ತುಂಬಾ ಥ್ಯಾಂಕ್ಸ್. ಮುಂದಿನ ತಿಂಗಳು ಸಂಬಳ ಬಂದ್ಮೇಲೆ ಬಂದು ಕೊಡ್ತೀನಿ ಮೇಡಂ” ಅಂದಳು. ಅದಕ್ಕೋಸ್ಕರ ದುಡ್ಡು ಖರ್ಚು ಮಾಡ್ಕೊಂಡು ಬರ್ಬೇಡ. ಏನಾದ್ರೂ ಬೇರೆ ಕೆಲಸದ ಮೇಲೆ ಈ ಕಡೆ ಬಂದಾಗ ಕೊಡುವೆಯಂತೆ” ಎಂದು ಆಕೆಯನ್ನು ಕಳುಹಿಸಿದ್ದಾಯಿತು.

ಈ ರೀತಿಯ ಹಲವು ಪ್ರಸಂಗಗಳನ್ನು ನಾನು ಕಂಡಿದ್ದೇನೆ. ಬೇರೆಯವರ ಕೈಯಲ್ಲಿ ಕಾರ್ಡನ್ನು ಕೊಟ್ಟು ದುಡ್ಡು ತರಿಸಬೇಕಾದರೆ ತುಂಬಾ ಜವಾಬ್ದಾರಿಯಿಂದ ವರ್ತಿಸಬೇಕು. ಇದು ಜಂಟಿ ಖಾತೆಯಷ್ಟೇ ನಂಬಿಕೆಗೆ ಒಳಪಟ್ಟಿದ್ದು. ಯಾವುದೋ ಅವಸರದಲ್ಲೋ, ಅಥವಾ ಮಿತಿಮೀರಿದ ನಂಬಿಕೆಯಲ್ಲೋ ಬೇರೊಬ್ಬರಿಂದ ಹಣ ತರಿಸಿಕೊಳ್ಳುವುದು ಖಂಡಿತವಾಗಿಯೂ ಒಳ್ಳೆಯ ಅಭ್ಯಾಸವಲ್ಲ.

ಅಜ್ಜಿ, ತಾತ, ಅಮ್ಮ, ಅಪ್ಪ ಇವರ ಖಾತೆಯನ್ನು ಸಂಪೂರ್ಣವಾಗಿ ಮೇದಿರುವ ಮೊಮ್ಮಕ್ಕಳನ್ನು, ಮಕ್ಕಳನ್ನು ನೋಡುತ್ತಲೇ ಇರುತ್ತೇವೆ. ಮನೆಯವರೊಂದಿಗೆ ಹೋಗಲಿ, ತುಂಬಾ ದುಡ್ಡಿರುವ ಮಾಲೀಕರ ಖಾತೆಯಿಂದ ಆಗೊಮ್ಮೆ, ಈಗೊಮ್ಮೆ ಅವರ ಗಮನಕ್ಕೆ ಬರದಂತೆ ಹಣ ಲಪಟಾಯಿಸುವ ಕೆಲಸಗಾರರಿದ್ದಾರೆ. ಅನಕ್ಷರಸ್ತ ಖಾತೆದಾರರು ಇಂತಹ ಹಲವು ಸಮಸ್ಯೆಗಳನ್ನು ಎದುರಿಸುತ್ತಾರೆ.

ಏನೂ ಕೊಂಡ್ಕೊಂಡಿಲ್ಲ, ಆದ್ರೆ ದುಡ್ಡು ಕಟ್ಟಾಗಿದೆ….

ಹೀಗೆ ಹೇಳುತ್ತಾ ಅರವತ್ತರ ಆಸುಪಾಸಿನವರೊಬ್ಬರು ನನ್ನೆದುರು ಕುಳಿತುಕೊಂಡು ಕಾರ್ಡನ್ನು ಕೊಟ್ಟರು. “ಇದು ಯಾರೋ ಹೆಣ್ಮಗಳ ಕಾರ್ಡಲ್ವಾ?” ಎಂದೆ ನೋಡುತ್ತಾ. “ಹೌದು, ನನ್ನ ಮಗಳದ್ದು. ನೋಡಿ ಕಾರ್ಡು ನಮ್ಮ ಹತ್ರಾನೇ ಇದೆ. ಆದ್ರೆ ಅಕೌಂಟಲ್ಲಿ ದುಡ್ಡು ಕಟ್ಟಾಗಿರೋ ಮೆಸೇಜ್ ಬಂದಿದೆ” ಎಂದರು. ಖಾತೆಯನ್ನು ನೋಡಿದೆ. ಯಾವುದೋ ಆನ್ಲೈನ್ ಖರೀದಿ ಮಾಡಿರುವ ಎರಡು ವಹಿವಾಟುಗಳು. ಅದನ್ನೇ ಹೇಳಿದೆ. “ಇಲ್ಲ ಮೇಡಂ ನಾವು ಮಾಡಿಲ್ಲ. ನಿನ್ನೆ ನನ್ನ ಮಗಳಿಗೆ ಬ್ಯಾಂಕಿಂದ ಫೋನ್ ಬಂತು.

ನಿಮ್ಮ ಕಾರ್ಡನ್ನು ಪರಿಶೀಲಿಸಬೇಕು; ಅದರ ನಂಬರ್ ಕೊಡಿ ಅಂದ್ರು. ಮಗಳು ಕೊಟ್ಳು. ಪಿನ್ ನಂಬರ್ ಕೊಡಿ ಅಂದ್ರು; ಅದನ್ನೂ ಕೊಟ್ಳು. ಕಾರ್ಡಿನ ಹಿಂದೆ ಒಂದು ಮೂರು ಅಂಕೆಗಳು ಇರತ್ತೆ ಅದನ್ನ ಕೊಡಿ ಅಂದ್ರು. ಅದ್ನೂ ಕೊಟ್ಳು. ಒಂದೆರಡು ನಿಮ್ಷ ಆದ್ಮೇಲೆ ಈಗ ನಿಮ್ಮ ಮೊಬೈಲ್ಗೆ ಒಂದು ಮೆಸೇಜ್ ಬಂದಿದೆ. ಅದರಲ್ಲಿರೋ ನಂಬರ್ ಕೊಡಿ ಅಂದರು. ಕೊಟ್ಳು. ಇನ್ನೊಂದು ಎರಡು ನಿಮ್ಷ ಬಿಟ್ಟು ಎಲ್ಲೋ ತಪ್ಪಾಯ್ತು ಇನ್ನೊಂದ್ಸಲ ಈಗ ಬಂದಿರೋ ಮೆಸೇಜಲ್ಲಿ ಇರೋ ನಂಬರ್ ಕೊಡಿ ಅಂದ್ರು. ಅದ್ನೂ ಮಗಳು ಕೊಟ್ಳು. ಆಮೇಲೆ ನೋಡಿದ್ರೆ ಅಕೌಂಟಲ್ಲಿ ದುಡ್ಡು ಕಟ್ಟಾಗಿರೋ ಮೆಸೇಜ್ ಬಂತು. ನಾವೇನೂ ಮಾಡಿಲ್ಲ” ಪೆಚ್ಚಾಗಿ ನೋಡಿದರು.

“ನಿಮ್ಮ ಮಗಳು ಇನ್ನೂ ತುಂಬಾ ಚಿಕ್ಕೋಳಾ” ಕೇಳಿದೆ. “ಇಲ್ಲಾ. ಇಂಜಿನೀರಿಂಗ್ ಫೈನಲ್ ಸೆಮಿಸ್ಟರ್ನಲ್ಲಿದಾಳೆ” ಹೆಮ್ಮೆಯಿಂದ ಹೇಳಿದರು. “ಅಲ್ರೀ ವಿದ್ಯಾವಂತರಾಗಿ ಹೀಗೆ ಅವಿವೇಕಿಗಳ ತರಹ ಯಾವುದೋ ಫೋನ್ ಕರೆ ಮಾಡ್ದವ್ರಿಗೆ ಬೆಳ್ಳಿ ತಟ್ಟೇಲಿ ತಾಂಬೂಲದ ಜೊತೆ ಇಟ್ಟುಕೊಟ್ಟ ಹಾಗೆ ಕೊಟ್ಟಿದೀರಲ್ಲ. ಪದೇ ಪದೇ ನಿಮಗೆ ಮೆಸೇಜ್ ಕಳಿಸ್ತಾನೇ ಇರ್ತೀವಿ. ʻನಿಮ್ಮ ಕಾರ್ಡ್ ನಂಬರ್, ಪಿನ್ ನಂಬರ್, ಸಿವಿವಿ ನಂಬರ್ ಇಂತವನ್ನೆಲ್ಲಾ ಕೇಳ್ಕೊಂಡು ಬ್ಯಾಂಕಿನವರು ಯಾರೂ ಫೋನ್ ಮಾಡಲ್ಲ. ಹಾಗೆ ನಿಮಗೆ ಯಾರದ್ದಾದ್ರೂ ಕರೆ ಬಂದ್ರೆ ಯಾವುದೇ ಮಾಹಿತಿ ಕೊಡ್ಬೇಡಿʼ ಅಂತ. ಓದು, ಬರಹ ಗೊತ್ತಿಲ್ದೇ ಇರೋವ್ರು ಯಾಮಾರಿದ್ರೆ ʻಅಯ್ಯೋʼ ಅನ್ಬೋದು. ಹೀಗೆ ಇಂಜಿನಿಯರ್ ಆಗ್ತಿರೋ ಹುಡುಗಿ ಯಾಮಾರಿದ್ರೆ ಹೇಗೆ?” ಬೇಸರದಿಂದಲೇ ಕೇಳಿದೆ.

“ಈಗೇನ್ಮಾಡೋದು?” ಏನೋ ನಿರೀಕ್ಷೆಯಿಂದ ನನ್ನ ಮುಖ ನೋಡಿದರು. “ನಿಮಗೆ ಕರೆ ಮಾಡಿದ್ದ ನಂಬರಿಗೆ ಫೋನ್ ಮಾಡಿದ್ರಾ?” ಕೇಳಿದೆ. “ಫೋನ್ ನಾಟ್ ರೀಚಬಲ್ ಆಗಿದೆ” ಅವರ ಉತ್ತರ “ಮಣ್ಣು ತಿನ್ನಿ” ಅಂತ ಟಿ. ಎನ್ ಸೀತಾರಾಂ ಹೇಳೋ ಹಾಗೆ ಹೇಳಕ್ಕಾಗ್ಲಿಲ್ಲ. “ಮೊದಲು ಕಾರ್ಡ್ ಬ್ಲಾಕ್ ಮಾಡ್ಸಿ, ಹೊಸ ಕಾರ್ಡಿಗೆ ಅರ್ಜಿ ಕೊಡಿ. ನಿಮ್ಮ ಸಮಾಧಾನಕ್ಕೆ ಪೋಲೀಸ್ ಸ್ಟೇಷನ್ನಿನಲ್ಲಿ ಒಂದು ಕಂಪ್ಲೇಂಟ್ ಕೊಡಿ. ಅವರಲ್ಲಿ ಸೈಬರ್ ಕ್ರೈಂ ಡಿಪಾರ್ಟಮೆಂಟ್ ಅಂತ ಇದೆ.

ಅವರಿಗೇನಾದ್ರೂ ಡೀಟೇಲ್ಸ್ ಬೇಕಿದ್ರೆ ನಮ್ಮನ್ನ ಕೇಳ್ತಾರೆ. ನಾವು ಕೊಡ್ತೀವಿ. ದುಡ್ಡು ವಾಪಸ್ಸು ಬರೋ ಆಸೆ ಇಟ್ಕೋಬೇಡಿ. ಹಾಗೇನಾದ್ರೂ ಅವರು ಆ ಕಳ್ಳನ್ನ ಹುಡುಕಿ ನಿಮ್ಮ ದುಡ್ಡು ವಾಪಸ್ ಬಂದ್ರೆ ಲಾಟರಿ ಹೊಡೆದ ಹಾಗೆ. ಇನ್ಮುಂದಾದ್ರೂ ಹುಷಾರಾಗಿರಿ” ಎಂದೆ. “ಅಷ್ಟೇನಾ?” ಎಂದರು. “ಅಷ್ಟೇ” ಎಂದೆ. ನಿರಾಸೆಯಿಂದ ಹೊಸ ಕಾರ್ಡಿನ ಅರ್ಜಿಯನ್ನು ತೆಗೆದುಕೊಂಡು ಅವರು ಎದ್ದರು.

ನೀವ್ಯಾಕೆ ಮಾಡಿದ್ರಿ?

ಎಷ್ಟೋ ಬಾರಿ ಬೇರೆ ಶಾಖೆಯ ಗ್ರಾಹಕರು ಬಂದು ನಮ್ಮಲ್ಲಿ ದೂರು ಕೊಟ್ಟರೂ ನಿರಾಕರಿಸದೆ ಅವರು ನಮ್ಮ ಬ್ಯಾಂಕಿನ ಗ್ರಾಹಕರು ಎನ್ನುವ ದೃಷ್ಟಿಯಿಂದ ಅವರ ದೂರುಗಳನ್ನು ದಾಖಲಿಸಿದ್ದೇನೆ. ಆಗಿನ್ನೂ ಕರೆಕೇಂದ್ರಗಳು ಅಷ್ಟೊಂದು ಜನಪ್ರಿಯವಾಗಿರಲಿಲ್ಲ. ಹೀಗೇ ಒಮ್ಮೆ ಸುರತ್ಕಲ್ ಶಾಖೆಯ ಗ್ರಾಹಕರೊಬ್ಬರ ದೂರನ್ನು ದಾಖಲಿಸಿದ್ದೆ. ನಂತರ ಅದು ಪರಿಹಾರಕ್ಕಾಗಿ ಆ ಶಾಖೆಗೆ ದೂರು ನಿರ್ವಹಣಾ ಕೇಂದ್ರದಿಂದ ಹೋಗಿತ್ತು. ಆ ಶಾಖೆಯಿಂದ ಯಾರೋ ನನಗೆ ಫೋನ್ ಮಾಡಿ “ನೀವೇಕೆ ದೂರು ದಾಖಲಿಸಿದಿರಿ. ನಿಮ್ಮ ಶಾಖೆಗೇ ಹೋಗು ಎಂದು ಕಳಿಸಬೇಕಿತ್ತು” ಎಂದು ಸಿಟ್ಟಿನಲ್ಲಿ ಕೇಳಿದರು.

“ಸುರತ್ಕಲ್ನಲ್ಲಿ ಓದುತ್ತಿದ್ದ ಹುಡುಗ ಈಗ ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ನಿಮ್ಮಲ್ಲಿ ದೂರು ದಾಖಲಿಸಲು ರಜೆ ಹಾಕಿಕೊಂಡು ದುಡ್ಡು ಖರ್ಚು ಮಾಡಿಕೊಂಡು ಬರಬೇಕಿತ್ತೇ? ಗ್ರಾಹಕ ನಮ್ಮ ಬ್ಯಾಂಕಿನವನೇ ಅಲ್ಲವೇ? ಯಾವ ಶಾಖೆಯಾದರೇನು. ನೀವು ಮಾಡೋ ಕೆಲಸ ನಾನು ಮಾಡಿದೀನಿ ಅಷ್ಟೇ. ನಾನು ಅವನಿಗೆ ಆ ಮಾತು ಹೇಳಿ ವಾಪಸ್ಸು ಕಳಿಸಿದ್ದರೆ ನೀವು ನನ್ನನ್ನು ಕೇಳಬೇಕಿತ್ತು. ಕೆಲಸ ಮಾಡಿಕೊಟ್ಟದ್ದಕ್ಕಲ್ಲ. ಈಗ ಅವನ ಸಮಸ್ಯೆಯನ್ನು ಬಗೆಹರಿಸಿ” ಖಾರವಾಗೇ ಉತ್ತರಿಸಿದೆ. ಅವರಿಗೂ ತಮ್ಮ ಮಾತಿನ ಅನುಚಿತತೆಯ ಬಗ್ಗೆ ಅರಿವಾಯಿತೇನೋ “ಹಾಗಲ್ಲಾ…” ಎಂದೇನೋ ಸಮಝಾಯಿಷಿ ನೀಡಲು ಬಂದರು. ಫೋನ್ ಕೆಳಗಿಟ್ಟೆ.

ಪೆನ್ನು ಕೆಳಗಿಡುವ ಮುನ್ನ…

ಇಂತಹ ಎಷ್ಟೆಷ್ಟೋ ಪ್ರಸಂಗಗಳನ್ನು ನಾನು ಎದುರಿಸಿದ್ದರೂ, ಎಲ್ಲವನ್ನೂ ಹೇಳ ಹೊರಟರೆ ಚರ್ವಿತ ಚರ್ವಣವಾಗುತ್ತದೆ ಎಂದು ಇಲ್ಲಿಗೆ ನಿಲ್ಲಿಸುತ್ತಿದ್ದೇನೆ. ನಾನು ಆ ಜಾಗದಲ್ಲಿ ಕುಳಿತ ಐದು ವರ್ಷಗಳಲ್ಲಿ ಅದೆಷ್ಟು ಬಗೆಯ ಜನರನ್ನು ನೋಡುವ, ಅರಿಯುವ ಸದವಕಾಶ ಸಿಕ್ಕಿತು! ಅದೆಷ್ಟು ಅನುಭವಗಳು ನನ್ನಲ್ಲಿ ದಾಖಲಾದವು. ಅಧಿಕಾರದ ದೃಷ್ಟಿಯಿಂದ ನನಗಿದ್ದ ಮಿತಿಯಲ್ಲಿ ನಾನು ಬ್ಯಾಂಕಿಗೂ, ಗ್ರಾಹಕರಿಗೂ ನ್ಯಾಯವನ್ನು ಒದಗಿಸಿದ್ದೇನೆಂಬ ವಿಶ್ವಾಸವಿದೆ.

ಮುಂದೆ ನಾನು ಸ್ಥಳೀಯ ವ್ಯವಹಾರಗಳ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸ್ವ.ಸ.ಯಂ.ನ ಹಿನ್ನೆಲೆಯಲ್ಲಿ ನಡೆಯುವ ಹಲವು ವಿಷಯಗಳ ಬಗ್ಗೆ ತಿಳಿಯಿತು. ಹಾಗೆಯೇ ಜನರು ಎಸಗುವ ಹಲವು ಬಗೆಯ ಅಪರಾಧಗಳ ಬಗ್ಗೆಯೂ ಸಾಕಷ್ಟು ವಿಷಯಗಳು ತಿಳಿದವು. ಆ ಮಾಹಿತಿಗಳನ್ನು ಚರ್ಚಿಸುವುದು ಉಚಿತವಲ್ಲವಾದ್ದರಿಂದ ಇಲ್ಲಿಗೇ ನನ್ನ ಲೇಖನಿಯನ್ನು ಕೆಳಗಿಡುತ್ತಿದ್ದೇನೆ.

। ಇಲ್ಲಿಗೆ ಈ ಸರಣಿ ಮುಗಿಯಿತು ।

ಮುಂದಿನ ವಾರದಿಂದ ದರ್ಶನ್ ಜಯಣ್ಣ ಅವರ ನನ್ನ ಅಪ್ಪ ಸರಣಿ

ಮಿಸ್ ಮಾಡ್ಬೇಡಿ

‍ಲೇಖಕರು Avadhi

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: