ಅದು ಒಂದ ಮನೀ ಮನಷ್ಯಾ ಇದ್ದಂಗ..

ಮಾಲಾ ಮ ಅಕ್ಕಿಶೆಟ್ಟಿ

ಅದ ಮನೀಗೀ ಬರೋದು ಯಾರಿಗೂ ಇಷ್ಟ ಇರಲಿಲ್ಲ. ಬ್ಯಾಡ ಬ್ಯಾಡ ಅಂದ್ರು ಅವ, ಈ ಸಣ್ಣ ಹುಡುಗ ಹೇಳ್ಯಾನ ಅಂದ ತಂದಿದ್ದ. ಮನಿಯೋರಿಗೆಲ್ಲ ಆ ಮನಷ್ಯಾ ಸಣ್ಣ ಹುಡುಗನ ಮಾತ ಕೇಳತಾನಂತ ಅನಸಿರಲಿಲ್ಲ. ಅದ ಮಾತ್ರ ಮನೀಗೆ ಬಂದ ಬಿಟ್ಟಿತ್ತ. ಎಲ್ಲಾರೂ ಆ ಹುಡುಗನ್ನ ಬೈದ ಬೈದ ಬುಟ್ಟಿ ತುಂಬಿ, ಒಲ್ಲದ ಮನಸ್ಸಿನಿಂದ ಅದನ್ನ ಸ್ವೀಕರಿಸಿದ್ರ. ತಂದ ಎಲ್ಲಾ ಕಾರಬಾರ ಅಂದಕೊಂಡ ಹುಡುಗ ಅದರ ಜವಾಬ್ದಾರಿ ಹೊತ್ತ. ಹೊಸದಾಗಿ ಮನೀಗೆ ಬಂದ ಅದೂ ಎಲ್ಲಾರ ಜೊತಿ ಚೆಂದಂಗನ ಹೊಂದಾಣಿಕೆ ಮಾಡಕೊಂಡಿತ್ತ. ಯಾಕಂದ್ರ ಸಾಕು ಪ್ರಾಣಿಗೊಳ್ ಅಂದ್ರ ಹಂಗ ಅಲ್ಲಾ… ಅದಕ್ಕ ಚೆಂದಂದ “ತಿಪ್ಯಾ” ಅಂತಾ ಹೆಸರೂ ಇಟ್ರು.             

ದಿನಗೊಳ್ ಉರಿಳಿದಾಂಗ ನಾಯಿ ಎಲ್ಲಾರ ಪ್ರೀತಿ ಗಳಸಾಕತ್ತಿ. ಅದಕ್ಕಂತ ಬೇರೆ ಸೋಪ್, ಪೌಡರ್, ಟಾವೆಲ್, ಹಣಿಗಿ ಖರೀದಿನೂ ಮಾಡಿದ್ರ. ಮ್ಯಾಲ ಅದರ ಆರೋಗ್ಯಕ್ಕ ಒಳ್ಳೆದ ಅಂತ ಇರೋವ ಬಿಸ್ಕಿಟಗಳನ್ನ ತಂದ ತಿನ್ನಸಾಕ ಸುರು ಮಾಡಿದ್ರ. ಮನಿಮಂದಿ ಜಳಕಾ ಮಾಡೂದ ಮರತರೂ ಇದಕ್ಕ ಜಳಕ ತಪ್ಪತ್ತಿರಲಿಲ್ಲ. ನಾಯಿ ಸೋಪ್ ಹಚ್ಚಿ, ಗಸಾ ಗಸಾ ತಿಕ್ಕಿ, ನಾಲ್ಕ ಬಕೇಟ್ ನೀರ ಹಾಕಿ, ಮೊದಲ ಬೆಳ್ಳಗಿದ್ದ ನಾಯಿನ್ನ, ಮತ್ತ ಬೆಳ್ಳಗ ಆ ಸಣ್ಣ ಹುಡುಗ ಮಾಡಿ, ಲಕಲಕ ಹೊಳೆವಂಗ ಮಾಡತಿದ್ದ. ಅದಕ್ಕಂತ ಇದ್ದ ಬೊಗೊನ್ಯಾಗ ಎರಡ ಹೊತ್ತಿನ ಅಡಗಿ, ಅಂದ್ರ ಅನ್ನ, ರೊಟ್ಟಿ ಹಾಕಿ ನೀರ ಕೊಡತಿದ್ರ.

ನಾಯಿನರ ಮನಷ್ಯಾರ ಏನ ತಿಂತಾರ ಅದನ್ನೆಲ್ಲಾ ತಿನ್ನತಿತ್ತ. ಅನ್ನ, ರೊಟ್ಟಿ, ಚಪಾತಿ ಜೊತಿ ಪಲ್ಯೆ, ಅವಲಕ್ಕಿ, ಉಪ್ಪಿಟ್ಟ, ಹಾಲ, ಮೊಸರ, ಮಜ್ಜಗಿ, ಚುರಮರಿ, ಸಂಡಿಗಿ, ಹಪ್ಪಳ ಎನ ಹೇಳೊದ ಅದರ ಲಿಸ್ಟ, ಎಲ್ಲಾ ಅಂದ್ರ ಎಲ್ಲಾ ತಿಂತಿತ್ತ ಅದ. ಮ್ಯಾಲ ಸಂಜೀಕ ಚಹಾ ಕೂಡ ಕುಡಿತಿತ್ತ. ಹುಡುಗ ತನ್ನ ಟೂಷನ್ ಕ್ಲಾಸಗ ಹೋಗಾಕ ಬ್ಯಾಸರಾ ಮಾಡಕೊಂಡ್ರೂ, ಮುಂಜಾನೆ ಮತ್ತ ಸಂಜೀಕ, ಇದನ್ನ ವಾಕಿಂಗ ಕರಕೊಂಡ ಹೋಗಾಕ ಬ್ಯಾಸರಾ ಮಾಡಕೊತಿರಲಿಲ್ಲ. ಹೀಂಗಾಗಿ ಅದ ಬರೀ ನಾಯಿ ಅನ್ನಸದ, ಮನ್ಯಾಗಿನ ಒಬ್ಬ ಸದಸ್ಯ ಆಗಿ ಬಿಟ್ಟಿತ್ತ. 

ಇನ್ನ ಹುಡುಗನ ಅಪ್ಪಾರಿಗೆ ನಾಯಿ, ನರಿ, ಬೆಕ್ಕ ಒಟ್ಟ ಅಂದ್ರ ಒಟ್ಟ ಸೇರತಿರಲಿಲ್ಲ. ಆದರ ಎಲ್ಲಾರೂ ಅದಕ್ಕ ಹೊಂದಕೊಂಡಿದ್ದನ್ನ ನೋಡಿ, ಇವರೂ ಹೊಂದಕೊಂಡ್ರ. ಎಷ್ಟ ಇವರ ನೆಗ್ಲೆಟ್ ಮಾಡಿದ್ರೂ ಅದ ಅವರ ಕಾಲಾಗ ಕಾಲಾಗ ಬಂದ ಪ್ರೀತಿ ತೋರಸತಿತ್ತ. ಇತ್ತ ಹುಡುಗನ ತನ್ನ ಸಾಲಿಗೆ, ಇಬ್ಬರ ಅಕ್ಕಗೊಳ್ ಕಾಲೇಜ್ ಹೋಗತಿದ್ರ ಮತ್ತ ಅವ್ವ ಇನ್ನೂ ಕೆಲಸದಿಂದ ರಿಟೈರ್ಡ ಆಗಿರಲಿಲ್ಲ.

ಹೀಂಗಾಗಿ ಹುಡುಗನ ಅಪ್ಪ ಅಷ್ಟ ರಿಟೈರ್ಡ ಆಗಿದ್ರ, ಎಲ್ಲಾರೂ ಬರೋವರ್ಗೆ ಕಾಯತಿದ್ರ, ಮ್ಯಾಲ ಆ ನಾಯಿ ತಿಪ್ಯಾನ್ನ ಜವಾಬ್ದಾರಿ ಇವರ ಮ್ಯಾಲ ಇತ್ತ. ಅದಕ್ಕ ವೇಳ್ಯಾಕ ಸರಿಯಾಗಿ ಅನ್ನ, ರೊಟ್ಟಿ ನೀರ ಮತ್ತ ಬಿಸ್ಕಿಟ ಹಾಕತಿದ್ರ. ಭಾಳ ಒದರಾಕತ್ತಿತಂದ್ರ ಎರಡ ಬಿಸ್ಕಿಟ್ ಜಾಸ್ತಿ ಕೊಟ್ಟ, ಓಣ್ಯಾಗ ಒದರೋದನ್ನ ತಪ್ಪಸತಿದ್ರ. ಆದರ ಇವರ ಎಲ್ಲಾ ಯಾವಾಗ ಬರತಾರೋ, ನಾಯಿ ನೋಡಕೊತಾರೋ ಅಂತ ಒಂದ ಸವನ ಕಾಯತಿದ್ರ. ಆದ್ರ ಹೇಂಗೆಂಗ ದಿನಾ ಹೋಗಾಕತ್ತುವೋ ಹಂಗಂಗ ಸಾಹೇಬ್ರಗೂ ನಾಯಿ ಮ್ಯಾಲ ಕಳ್ಳ ಕೂಡಾಕತ್ಯ. ನಾಯಿ, ಬೆಕ್ಕ ಅಂದ್ರ ದೂರ ಹೋಗಾವ್ರ ಅದರ ಕಾಳಜಿ ಮಾಡಾಕತ್ರ.             

ನಾಯಿಗಂತನ, ಸಾಹೇಬ್ರ ತಮ್ಮ ಮನೀ ಹೊರಗ ಜಿನ್ನೆ ಕೆಳಗ, ಅದಕ್ಕ ಮನೀ ಕಟ್ಟಿಸಿದ್ರ. ಯಾಕಂದ್ರ ಮಳೆಗಾಲದಾಗ ನಾಯಿ ನೆನದ ಒದರಾತಿತ್ತ. ಅದಕ್ಕೂ ಒಂದ ಮನೀ ಕಟ್ಟಿಸಿ, ಅದರೊಳಗ ಒಂದ ಜಮಖಾನ ಹಾಸಿ, ಅದರ ಮ್ಯಾಲ ಕುಡ್ರೂವಂಗ ಮಾಡಿದ್ರ. ಒಂದ ಸರಪಳಿನೂ ಕಟ್ಟಿದ್ರ. ಭಾಳ ಒದರಾಕತ್ತಿತಂದ್ರ ಸರಪಳಿ ಬಿಚ್ಚಿ, ಹೊರಗ ಅಡ್ಡಾಡಿ ಬರಾಕ ಎಲ್ಲಾರೂ ಅನುಕೂಲ ಮಾಡಿ ಕೊಡತಿದ್ರ. ಈ ನಾಯಿ ತಿಪ್ಯಾ ಅದ ಚಾನ್ಸ ಅಂದ ಎಲ್ಲಾ ಓಣಿ ತಿರಗಾಡಿ ಬರತ್ತಿತ್ತ.

ಅದನ್ನ ರೂಢಿನೂ ಮಾಡಕೊತ್ತ. ಹಿಂಗ ಬಿಟ್ಟಾಗ ಮನಿ ಮಂದಿಗೆಲ್ಲಾ ಬಸ್ ಸ್ಟ್ಯಾಂಡವರೆಗೂ ಬಿಟ್ಟ, ಬಸ್ ಹತ್ತಿಸಿ ಬರಾಕತ್ಯ. ಒಂದ ಸಲ ಹುಡುಗನ ಅವ್ವನ್ನ ಹತ್ತಸಾಕ ಹೋಗಿ, ತಾನೂ ಬಸ್ ಹತ್ತಿ, ಕೆಳಗ ಇಳಿವಾತ್ತಾತ. ಬಸ್ ಡ್ರೈವರ್ ಅವ್ವಗ ಒಮ್ಮೆ ಕೆಳಗ ಇಳಿದ, ಬಸ್ಸ ಹೋಗೊವಾಗ ಹತ್ರಿ ಅಂದ, ನಾಯಿನ್ನ ಗಾಡಿಯಿಂದ ಇಳಿಸಿದ್ರ. ಇಂಥಾ ಆವಾಂತರ ಅದ ಮಾಡತಿತ್ತ. ಮನ್ಯಾಗಿನ ಮಂದಿನ್ನ ಬಸ್ ಹತ್ತಿಸೇನ ಮನೀಗಿ ವಾಪಸ್ ಬರತಿತ್ತ.       

ನಾಯಿ ಅಂದ್ರ ಹಂಗ. ಮನಷ್ಯಾ ಕೈ ಕೊಡಬಹುದ, ಆದರ್ ನಾಯಿ ಕೈ ಕೊಡಾಂಗಿಲ್ಲ. ಅದಕ್ಕ ಅದ ತನ್ನ ನಂಬಿಕೆಗೆ ಪ್ರಸಿದ್ಧ ಅದ. ಎರಡ ಹೊತ್ತಿನ ಕೂಳ ಹಾಕಿದ್ರ ಸಾಕ, ಹಾಕಿದವರನ್ನ ಪೂರ್ತಿ ನಂಬತೈತಿ ಮತ್ತ ಅವರಿಗೆ ಪ್ರಾಮಾಣಿಕವಾಗಿ ನಡಿತೈತಿ. ಎಷ್ಟೋ ಜನರಿಗೆ ನಾಯಿಗೆ “ನಾಯಿ” ಅಂದ್ರ ಸಿಟ್ಟ ಬರತೈತಿ, ಯಾಕಂದ್ರ ಅವರಿಗೆ ಅದು ಬರೀ ನಾಯಿ ಅಲ್ಲ, ಒಂದ ಮನೀ ಮನಷ್ಯಾ ಇದ್ದಂಗ.       

ಬರಬರತ ನಾಯಿಗೆ ಹೊರಗ ಅಡ್ಡಾಡೋ ರೂಢಿ ಹೆಂಗ ಹತ್ತಿತಂದ್ರ, ಅದ ತನ್ನ ಮನ್ಯಾಗ ಕುಡ್ರಲ್ಲದನ, ಹೊರಗ ಸುತ್ತಾಕ ಹಟ ಮಾಡಾಕತ್ತಿತ್ತ. ಬಿಡಲಿಲ್ಲಂದ್ರ ರಾತ್ರೆಲ್ಲಾ ಒದರೀ, ಬರೀ ಮನೀ ಮಂದಿಗಲ್ಲದ, ಓಣ್ಯಾಗಿನ ಮಂದಿಗೆ ಬ್ಯಾಸರ ಆಗೊವಂಗ ಮಾಡಾಕತ್ತು. ಒಬ್ಬರಂತೂ ಬಂದ ನಾಯಿ ಒದರೂದಕ್ಕ ಕಂಪ್ಲೇಂಟ್ ಮಾಡಿದ್ರ. ಹೀಂಗಾಗಿ ಒಲ್ಲದ ಮನಸ್ಸಿನಿಂದ, ಮನ್ಯಾಗಿನವರ ಅದನ್ನ ಹೊರಗ ಬಿಡಾಕತ್ರ. ನಾಯಿ ಮಾತ್ರ ತನಗ ಎಲ್ಲಿ ಬೇಕ ಅಲ್ಲಿ ಸುತ್ತಾಡಿ, ತನಗ ಹಸು ಆದಾಗ ಮನೀಗ ಬಂದ, ತಿಂದ ಹೋಗತ್ತಿತ್ತ.

ಒಂಥರಾ ಅದ ಸಾಕು ನಾಯಿ ಹೋಗಿ, ಬೀದಿ ನಾಯಿ ಆಗಿತ್ತ. ಅಂದನಿಂದ ಸ್ನಾನ, ಪೌಡರ್ ಎಲ್ಲಾ ಬಂದ ಆತ. ಆದ್ರ ಮನೀಗೆ ಬಂದಾಗ ಮಾತ್ರ ಊಟ ತಪ್ಪಲ್ಲದ ಸಿಗತಿತ್ತ. ಎಲ್ಲರ ಊರಿಗೆ ಹೋಗೊ ಪ್ರಸಂಗ ಬಂದ್ರ, ಆಜು ಬಾಜು ಮನ್ಯಾವ್ರಗೆ ಊಟಾ ಹಾಕ್ರಿ ಅಂತ ಹೇಳಿ ಹೋಗತಿದ್ರ.     

ಹಿಂಗ ವರ್ಷಗೊಳ್ ಕಳೆದವು. ಸುಮಾರ ಎಳ ವರ್ಷದ್ದ ಆಗಿರಬೇಕ ಅದ. ನಾಯಿ ಬಾಳ ನಿಸ್ತೇಜ್ ಆಗಿ, ಸೊರಗಿ, ಕುಂಟಕೋತ ಬರಾಕತ್ತಿತ್ತ. ಬೀದಿ ನಾಯಿಗೊಳ್ ಒಂದಕ್ಕೊಂದ ಬಡದಾಡೊವಾಗ ಇದಕ್ಕ ಕಚ್ಚಿದ್ದವ. ಇಂಜೆಕ್ಷನ್ ಕೊಡಸಿದ್ರೂ, ಯಾಕೊ ರೋಗಿಹಂಗ ಕಾಣಿಸಿ, ಜೊಲ್ಲ ಸುರ್ಯಾಕತ್ತಿತ್ತ. ಸಾಹೇಬ್ರ ಎಲ್ಲಾರ ಜೊತಿ ಮಾತಕತಿ ಮಾಡಿ, ನಾಯಿನ್ನ ಕಾರ್ಪೊರೇಷನ್ ದವರಿಗೆ ಕರದ ಕೊಡುನು ಅಂತ ಎಲ್ಲಾರ ಮನ ಒಲಿಸಿದ್ರ. ಯಾಕಂದ್ರ ಯಾರೂ ಅಷ್ಟ ಈಜೀಯಾಗಿ ಒಪ್ಪಲ್ಲ ಅಂತ ಅವರಿಗೆ ಗೊತ್ತತ್ತ. ಮ್ಯಾಲ ಓಣ್ಯಾಗಿನ ಜನರ ಕಾಟ ಭಾಳ ಆಗಿತ್ತ. ಇದ ಒದರೂದ ಬಿಟ್ಟಿರಲಿಲ್ಲ. ಮಗ ಬ್ಯಾಡ ಬ್ಯಾಡ ಅಂದ ಒಂದ ಸವನ ಅತ್ತಿದ್ದರನೂ ಸಾಹೇಬ್ರ ಕೇಳಿರಲಿಲ್ಲ.

ಜೊತೆಗೆ ತಿಪ್ಯಾ ಬೇರೆ ನಾಯಿಗೊಳ್ ಜೊತೆ ಸೇರಿ, ಬೇರೆ ಎನರ ರೋಗ ಬಂದೆತಿ ಅನ್ನಸಿತ್ತ ಅವರಿಗೆ. ಅದ ರೋಗದಿಂದ ಯಾರನ್ನರ ಕಡಿರ್ಬಾದ ಕಡದ, ಎನರ ಹೆಚ್ಚು ಕಡಿಮೆ ಆಂದ್ರ, ಜನ ಇನ್ನೂ ಶಾಪ ಹಾಕಿ ಒದರತಾರ ಅಂತ ಅವರಿಗೆ ಗೊತ್ತಿತ್ತ. ಸಾಹೇಬ್ರನು ಮನಸ್ಸನ್ಯಾಗ ಯಾರಗೂ ಹೇಳಲ್ಲದನ ಕೊರಗಿದ್ರ. ಹೇಂಗೊ ಮಾಡಿ ಒಟ್ಟ ಎಲ್ಲಾರಗೂ ಒಪ್ಪಿಸಿದ್ರ. ಕಡಿಗೆ ಕಾರ್ಪೋರೇಷನ್ ದವರ ಬಂದ, ಅದಕ್ಕ ಇಷ್ಟ ಇರೋ ಪದಾರ್ಥದಾಗ ಇದನ್ನ ಹಾಕ್ರಿ ಅಂದ ಎರಡ ಗುಳಿಗಿ ಕೊಟ್ರ. ಅವು ಕೊಲ್ಲೊ ಗುಳಿಗಿ ಆಗಿದ್ವ. ಹುಡುಗ ಹೋಗಿ ಕುಂದಾ ತಂದ, ಬಿಕ್ಕಿ ಬಿಕ್ಕಿ ಅಳಕೋತ ವಿಷದ ಗುಳಿಗಿ ಕುಂದಾದಾಗ ಹಾಕಿ, ತಿಪ್ಯಾ ಮುಂದ ಇಟ್ಟ.

ಅದ ಎಷ್ಟ ಸೊರಗಿತ್ತ ಅಂದ್ರ, ಶಕ್ತಿಹೀನ ಆಗಿತ್ತ. ತಿನ್ನಾಕೂ ಅದರ ಕೈಯಿಂದ ಆಗಲಿಲ್ಲ. ಎಳೇ ಹುಡುಗನ ಕಣ್ಣಾಗ ದಳಾದಳಾ ನೀರ ಸೂರ್ಯಾತಿತ್ತ. ಎಷ್ಟ ಪ್ರೀತಿಯಿಂದ ಅದನ್ನ ಕರಕೊಂಡ ಬಂದಿದ್ದ, ಇಗ ಅದಕ್ಕ ವಿಷ ಹಾಕೊದಾ ಅಂದ ಅಳು ನಿಲ್ಲಸಲಿಲ್ಲ. ನಂತ್ರ ಕಾರ್ಪೊರೇಷನ್ ದವರ ಅದನ್ನ ತಳ್ಳು ಗಾಡ್ಯಾಗ ಹಾಕೊಂಡ ಹೋದ್ರ. ಇಡೀ ಓಣ್ಯಾಗಿನ ಜನ ನೋಡಿದ್ರ, ಅವರಿಗೂ ಟಿಪೂನ್ನ ಸ್ಥಿತಿ ನೋಡಿ ಪಾಪ ಅನಸಿತ್ತ. ಕಾರ್ಪೊರೇಷನ್ ದವರ ಅದನ್ನ ಕೊಲ್ಲತಾರೋ, ಏನ ಹಂಗ ಬಿಟ್ಟ ಬಿಡತಾರೋ ಗೊತ್ತಾಗಲಿಲ್ಲ.

ಮೂರ ದಿನಾ ಹುಡುಗನ ಜೊತೆ ಎಲ್ಲರೂ ಅದನ್ನ ಕಳಸಿದ್ದಕ್ಕ ನೋವ ಉಂಡಿದ್ರ. ಹುಡುಗ ಅಳೊದನ್ನ ನೋಡಿ ಇವರ ಕಣ್ಣಗೂ ನೀರ ಇತ್ತ. ನಾಲ್ಲನೇ ದಿನಾ ಆಶ್ಚರ್ಯ ಕಾದಿತ್ತ. ನಾಯಿ ವಾಪಸ್ ಬಂತ. ಮನೀ ಒಳಗ ಬರಲ್ಲದನ ಹೊರಗ ನೋಡಕೊತ ಕುಂತಿತ್ತ. ಹೋಗೊವಾಗ ರೋಗಿ ಹಂಗ ಇದ್ದದ್ದ, ಆರೋಗ್ಯವಂತ ನಾಯಿ ಆಗಿ ಬಂದಿತ್ತ. ಹುಡುಗನ ಮನ್ಯಾವರಕಿಂತ ಮೊದಲ ಓಣ್ಯಾಗಿನ ಜನಾನ ಅದಕ್ಕ, ಬ್ರೆಡ್, ಚಪಾತಿ ಕೊಟ್ರ. ಇದ ಕೊಟ್ಟದನ್ನ ತಿಂದ, ಹಂಗ ಮಾಲೀಕರನ್ನ ನೋಡಾತಿತ್ತ. ಸಿಟ್ಟ ಭಾಳ ಬಂದಿತ್ತ ಅದಕ್ಕ. ತುಸು ಸಿಟ್ಟ ಕಡಿಮೆ ಆದ ನಂತರ, ಮನೀಗ ಬಂತ. ರೊಟ್ಟಿ, ಅನ್ನ ತಿಂತ. ಮನ್ಯಾಗಿನವರ ಒಂದ ನಿರ್ಣಯ ಮಾಡಿದ್ರ. ಇನ್ನ ಎಂದೂ ತಿಪ್ಯಾನ್ನ ಹೊರಗ ಹಾಕಲ್ಲ, ಸಾಯೋವರೆಗೆ ಮನ್ಯಾಗ ಇರಲಿ, ಜನ ಏನರ ಅನ್ನಲಿ ಅಂತ.         

ಜನರ, ನಾಯಿ ಬಗ್ಗೆ ಕಂಪ್ಲೇಂಟ್ ಕೇಳಿ ಕೇಳಿ ಬ್ಯಾಸತ್ತ, ಮಾಲೀಕರು ನಾಯಿನ್ನ ಹೊರಗ ಹಾಕಾಕ ನೋಡಿದ್ರ ಆದ್ರ ಅದ ಸಾಧ್ಯ ಆಗಲಿಲ್ಲ. ಪುಣ್ಯ ಎನಂದ್ರ ಕಾರ್ಪೊರೇಷನ್ ದವರು ಅದನ್ನ ಸಾಯಿಸಲ್ಲದನೇ ಹಂಗ ದೂರ ಬಿಟ್ಟ ಬಂದಿದ್ರ. ಅದ ಮನೀ ಹುಡಕೊಂಡ ವಾಪಸ್ ಬಂದಿತ್ತ. ನಂಬಿಕಿ ಅಂದ್ರ ಇದ ನೋಡ್ರಿ. ಇದಕ್ಕ ಮಾಲೀಕರ ಮ್ಯಾಲ ಎಷ್ಟ ನಂಬಿಕೆ ಅಂದ್ರ ತುಸು ಸಿಟ್ಟ ಮಾಡಿಕೊಂಡು ಮತ್ತ ವಾಪಸ್ ಬಂದಿತ್ತ.

ಇತ್ತ ಎಲ್ಲಾರೂ ಅದನ್ನ ಸಾಕೆವಿ, ಜವಾಬ್ದಾರಿಯಿಂದ  ಸಾಯೋವರೆಗೂ ನೋಡಕೊಳ್ಳೊನ ಅಂದ ಅದರ ಉಸಾಬರಿ ಮಾಡಾಕತ್ರ. ಆದ್ರ ಅದ ಹೊರಗ ಅಡ್ಡಾಡೊದ ಮಾತ್ರ ಬಿಡಲಿಲ್ಲ. ಜನಾನೂ ಬ್ಯಾಸಾರಾ ಮಾಡಕೊದ ಬಿಟ್ರ. ಕಣಿಕರ ಇವರಿಗೂ ಇತ್ತ. ಯಾಕಂದ್ರ ತಿಪ್ಯಾ ಇಡೀ ಓಣಿ ಕಾಯತಿತ್ತ. ಯಾರರ ಹೊಸಬ್ರ ಬಂದ್ರ, ಒಂದ ಸವನ ಒದರತಿತ್ತ. ಓಣಿಗಿ ಗುರ್ಖಾನ ಅವಶ್ಯಕತೆನ ಇರಲಿಲ್ಲ.     

ತಿಪ್ಯಾಗ ಆಗ ೧೨ ವರ್ಷ ಆಗಿದ್ವ, ಆ ಸಣ್ಣ ಹುಡುಗನೂ ಯೌವ್ವನಾವಸ್ಥೆ ತಲಪಾತಿದ್ದ. ಈ ಮಧ್ಯೆ ಸಾಹೇಬ್ರ ಆವಾಗಾವಾಗ ಆರಾಮ ಇಲ್ಲದ ದವಾಖಾನೆಗೆ ಎಡಮಿಟ್ ಆಕ್ಕಿರ. ಹಿಂಗ ಒಂದ ಸತಿ ಎಡಮಿಟ್ ಆದಾಗ, ಗಣೇಶ ಚತುರ್ಥಿ ಇತ್ತ. ಸುಮಾರ ೧೦ ದಿವಸ ದವಾಖಾನ್ಯಾಗ ಇದ್ರ. ಗಣಪತಿ ಕಳಸಾಕ, ಡಾಕ್ಟರ್ ಪರ್ಮಿಶನ್ ತೊಗೊಂಡ ಮನೀಗೆ ಬಂದಿದ್ರ. ಗಣಪತಿ ಕಳಸಿ, ರಾತ್ರಿ ಊಟ ಆದ ನಂತರ, ಕಾರ್ ಒಳಗ ಕುಡಾಕ ಸಾಹೇಬ್ರ ಹೋಗೋವಾಗ, ತಿಪ್ಯಾ ಅವರನ್ನ ನೋಡಿ, ಬಾಲಾ ಅಲ್ಲಾಡಿಸಿ, ಮಂದಹಾಸ ಬೀರತ್ತ. ಕಾರ್ ನ್ಯಾಗ ಹಿಂಗ ಕುತಕೊಳ್ಳುದ್ದಕ್ಕ, ತಿಪ್ಯಾ ಜೋರಾಗಿ ಒಂಥರಾ ಒದರಿತ.

ಹೀಂಗ್ಯಾಕ ಇದ ಒದರಿತ ಅಂತ ಎಲ್ಲಾರೂ ಸಿಟ್ಟಾದ್ರ. ಅದ ಸಾಮಾನ್ಯ ಒದರೊದ ಆಗಿರಲಿಲ್ಲ. ತನ್ನೆಲ್ಲಾ ಉಸಿರನ್ನ ಒಂದ ಸತಿ ಜೋರ ಒದರಾಕ ಉಪಯೋಗ ಮಾಡಿತೆನೋ ಅನ್ನುವಂಗ ಆಗಿತ್ತ. “ಏಏ” ಅಂತ ಅವ್ವರ ಗದರಿಸಿದ್ರ. ಎನಾತ ಇದಕ್ಕ ಅಂತ ಆ ನವ ಯುವಕ ಮತ್ತ ಅವನ ಅಕ್ಕಾ ಸಮೀಪ ಬಂದ ನೋಡಿದ್ರ, ತಿಪ್ಯಾ ಬಾಯಿ ದೊಡ್ಡದ ಮಾಡಿ, ಕಣ್ಣ ನೆಟ್ಟಗ ನಿಲ್ಲಿಸಿತ್ತ. ಕೈ ಕಾಲ ಸ್ವಲ್ಪೂ ಅಲಗಾಡಲಿಲ್ಲ. ತಿಪ್ಯಾ ತಿಪ್ಯಾ ಅಂತ ಕರದರ ಎನೂ ಉತ್ತರಿಲ್ಲ. ಆವಾಗ ಇಬ್ಬರಿಗೂ ಅನ್ನಸಿತ ತಿಪ್ಯಾ ಜೀವಾ ಬಿಟ್ಟಿತಂತ. ಸಾಹೇಬ್ರ ಏನಾತ ಅಂತ ಕೇಳಿದ್ರ, ಎನೂ ಇಲ್ಲ ಅಂತ ಸುಮ್ಮನಾದ್ರ.       

ತಿಪ್ಯಾನ್ನ ಸಾವು ಎಲ್ಲಾರಗೂ ದುಃಖದ ಜೊತಿ ಆಶ್ಚರ್ಯ ತಂದಿತ್ತ. ರೋಗದಿಂದ ನರಳುವಾಗ ಸಾಯಲ್ಲದ ತಿಪ್ಯಾ ಆರೋಗ್ಯಯುತ ಇದ್ದಾಗ ಹೆಂಗ ಸತ್ತಿತು ಅಂತ? ಅದ ಸಾಯತೇತಿ ಅಂತ ಯಾರೂ ಅನ್ನಕೊಂಡಿರಲಿಲ್ಲ. ಅದ ಅಷ್ಟೊತನ ಸಾಹೇಬ್ರ ಮನೀಗೆ ಬರೊದನ್ನ ಕಾಯಾತಿತ್ತೆನೋ ಅನ್ನುವಂಗ, ಅವರನ್ನ ನೋಡಿ, ಒಮ್ಮೆಲೆ ಜೋರಂಗ ಆವಾಜ್ ಮಾಡಿ ಒದರಿ ಪ್ರಾಣ ಬಿಟ್ಟಿತ್ತ. ಸಾಹೇಬ್ರನ್ನ ನೋಡಿ ಜೀವಾ ಬಿಟ್ಟಿದ್ದನ್ನ ನೋಡಿದ್ರ, ತಿಪ್ಯಾ ಎನ ಇಚ್ಛಾ ಮರಣಿಯೇನ ಅನ್ನೊ ಭಾಸ ಎಲ್ಲಾರಿಗೂ ಆಗಿತ್ತ.

‍ಲೇಖಕರು Avadhi

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ಮೇಲೆ ನನ್ನ ಬುಶ್ ಫೋಟೋ ನೋಡಿ
    ಅದು ಹೇಗೆಂದು ಆಶ್ಚರ್ಯವೂ, ಸಂತೋಷವೂ ಆಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: