‘ಶೇಷಗಿರಿ’ಯೆಂಬ ರಂಗಪಟ್ಟಣ

ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು.

ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು ಕೇಳುಗರಿಗೆ ಒಂದು ರೀತಿಯ ಕಾಲಕೋಶ. ಈ ಹಾಡುಗಳ ಸಿ ಡಿ ಯನ್ನು ‘ಲಹರಿ’ ಹಾಗೂ ‘ಅವಧಿ’ ಜಂಟಿಯಾಗಿ ಹೊರತಂದಿದೆ.

ಈಗ ಸಿರಿ ಪಾದ ಹೆಸರಿನಲ್ಲಿ ಶ್ರೀಪಾದ್ ಭಟ್ ತಮ್ಮ ವಿಶೇಷ ರಂಗ ಅನುಭವವನ್ನು ಮುಂದಿಡಲಿದ್ದಾರೆ.

ಚಿಕ್ಕಂದಿನಲ್ಲಿ ನೀವು ಈ ಆಟ ಆಡಿಯೇ ಇರುತ್ತೀರಾ. ಗಾಜಿನ ಗೋಳದ ಆಟ ಅಥವಾ ಕೆಲೊಡೋಸ್ಕೋಪ್ ನೋಟ. ಮುರಿದ ಕನ್ನಡಿಯ ಚೂರುಗಳನ್ನು ತ್ರಿಕೋನ ಪಟ್ಟಿಕೆಗಳಾಗಿ ನಿಲ್ಲಿಸಿ ಬಟ್ಟೆಯೊಂದನ್ನು ಸುತ್ತಿ ಅದರೊಳಗೆ ಒಡೆದ ಬಳೆಯ ಚೂರುಗಳನ್ನು ಹಾಕಿ ತುಸು ಅಲ್ಲಾಡಿಸಿ ಬೆಳಕಿಗೆತ್ತಿ ನೋಡಿದರೆ ಆಹ್! ಎಂಥ ವರ್ಣಮಯ ವಿನ್ಯಾಸ ಕಾಣುತ್ತದಲ್ಲಿ! ಕಲೆ ಮತ್ತು ಮಾಂತ್ರಿಕತೆ ಒಂದಾಗುವ ಚಂದವನ್ನು ನೀವು ಗಮನಿಸಿರುವಿರಿ.

ಮುರಿದ ಸಂಗತಿಗಳೆಲ್ಲ ಅಲ್ಲಿ ಕೈ ಕೈಹಿಡಿದು ಜೊತೆ ಜೊತೆಯಾಗಿ ಕನ್ನಡಿಯೊಳಗೆ ಒಬ್ಬರನ್ನೊಬ್ಬರು ಪ್ರತಿಫಲಿಸಿಕೊಳ್ಳುತ್ತ ‘ಸಾವಿರ ಹೋಳಿ’ಗಳನ್ನು ಸೃಷ್ಟಿಸುತ್ತವೆ. ಅದದೇ ವಿನ್ಯಾಸ ನೋಡಿ ಬೇಸರ ಬಂತೆಂದರೆ ಗಾಜಿನ ಗೋಳವನ್ನು ಒಂದಿಷ್ಟು ಅಲ್ಲಾಡಿಸಿ ಮತ್ತೆ ನೋಡಿದರಾಯ್ತು, ಹೊಸ ವಿನ್ಯಾಸ!! ಮುರಿದಷ್ಟೂ ಕಟ್ಟಿಕೊಳ್ಳುವುದು ಅದರ ಬಗೆ!!!

ಕೆಲೊಡೋಸ್ಕೋಪ್ ಅಂದರೇನೇ ‘ವ್ಯೂ ಬ್ಯೂಟಿಫುಲ್ ಫಾರ್ಮ್ಸ್’ಅಂತ. ಸುಂದರ ವಿನ್ಯಾಸಗಳ ನೋಟ. ಬಿಡಿ ಬಿಡಿಯಾದ ಸಂಗತಿಗಳೆಲ್ಲವನ್ನೂ ಸೇರಿಸಿದರೆ ‘ಕನೆಕ್ಟ್’ ಮಾಡಿದರಾಯ್ತು ಒಂದು ಹೊಸ ಅರ್ಥ ಕಾಣಬರುವದು. ಮತ್ತೆ ಅವು ಸ್ಥಿರವಾದವು ಅಂತಾದರೆ ಜಡಗಟ್ಟುತ್ತವೆ; ಆ ಚಂದಕ್ಕೆ ಕಾರಣವಾದ ಚೂರುಗಳನ್ನು ಮತ್ತೆ ಅಲ್ಲಾಡಿಸಬೇಕು, ಆಗ ಅವು ಅಹಂಕಾರ ಕಳೆದುಕೊಂಡು ಅಲಂಕಾರವಾಗುತ್ತವೆ.

ಆ ಊರು ಅಂಥದೊಂದು ಗಾಜಿನ ಪಟ್ಟಿಕೆಗಳ ಕಟ್ಟುಗಳಿಂದ ನಿರ್ಮಿತವಾಗಿತ್ತು. ಒಳಗಡೆಯ ಪ್ರತಿಫಲನ ಮತ್ತು ಹೊರಗಡೆಯ ಬೆಳಕಿನ ಸಹಾಯದಿಂದ ಬಣ್ಣಬಣ್ಣದ ವಿನ್ಯಾಸಗಳಲ್ಲಿ ರೂಪುಗೊಳ್ಳುವ ಬಣ್ಣದ ಬಳೆಗಳ ಚೂರಿನಂತೆ ನಾನದರಲ್ಲಿ ತೂರಿ ಹೋಗಿದ್ದೆ.

ಧಾವಂತವಿಲ್ಲದೇ ಮೆಲ್ಲನೆ ಚಲಿಸುವ ವರದಾನದಿ, ಅದರ ದಂಡೆಯಲಿ ತೋಪು, ತೋಟ, ಗದ್ದೆಗಳ ಹಸಿರು, ಸಾವಿರದ ಜನವಸತಿ, ಯಾರೂ ಏರಬಹುದಾದ ಮತ್ತು ಏರಲು ಆಸೆಪಡುವ ಪುಟ್ಟಮಕ್ಕಳು ಬಿಡಿಸುವ ಕಡ್ಡಿಗುಡ್ಡದಂತಹ ಬಾಲಬೆಟ್ಟ. ಮರಿಗುಡಿಗಳು, ಬೈತಲೆಯಂತಹ ರಸ್ತೆಗಳಿರುವ ಊರು ಅದು. ಅಲ್ಲಿ ನೀವು ತುಸು ಒಳಬಂದರೆ…

ಸಹಕಾರಿ ಸಂಘಗಳು, ಪೋಸ್ಟ್ ಆಫೀಸು, ಬ್ಯಾಂಕ್, ಪುಟ್ಟ ಆಸ್ಪತ್ರೆ, ಸುತ್ತಣ ಹಳ್ಳಿಯ ಮಕ್ಕಳಿಗೂ ನೆರವಾದ ಶಾಲೆ, ಪ್ರೌಢಶಾಲೆ, ಫಿಶರೀಸ್ ಹೊಂಡಗಳು, ನಾಯಿ, ಕುರಿ, ಕೋಳಿ ಸಾಕಣೆಯಂತಹ ಕಿರು ಉದ್ಯೋಗಗಳು ಇರುವ ನೂರರ ಹತ್ತಿರದ ಮನೆಗಳ ಊರು ಕಾಣುತ್ತದೆ ನಿಮಗೆ. ಇನ್ನೂ ಒಳಹೊಕ್ಕರೆ…

ಅಲ್ಲಿ ನಿಮಗೆ ಭಡ್ತಿ ಪಡೆದರೆ ಊರನ್ನು ಬಿಟ್ಟು ಹೋಗಬೇಕಾಗುತ್ತದೆ ಎಂದು ಪ್ರಮೋಷನ್ ಪಡೆಯದೇ ಅದೇ ಊರಿನಲ್ಲಿ ಗಟ್ಟಿಯಾಗಿ ನಿಂತು ಆದರ್ಶ ಯುವಕ ಸಂಘವನ್ನೂ ರಂಗತಂಡವನ್ನೂ ಕಟ್ಟಿದ ಪ್ರಭು ಗುರಪ್ಪ ಅನ್ನುವ ಪೋಸ್ಟ್ ಮಾಸ್ಟರ್ ಕಾಣುತ್ತಾರೆ. ಊರಿನಲೆಲ್ಲೆಡೆ ಮರಗಿಡಗಳನ್ನು ಬೆಳೆಸಿದ, ಹೋರಾಟಗಳ ಮೂಲಕ ಹಲವು ಸೌಲಭ್ಯಗಳನ್ನು ಊರಿಗೆ ಒದಗಿಸಿದ, ಹಿರಿಯರು, ಯುವಕರು ಕಾಣಸಿಗುತ್ತಾರೆ.

ಕೆ ವಿ ಸುಬ್ಬಣ್ಣನವರಿಂದ ರಂಗಪ್ರೀತಿಯ ದೀಕ್ಷೆಯನ್ನು ಪಡೆದ ‘ಗಜಾನನ ಯುವಕ ಸಂಘ’ ಎಂಬ ರಂಗ ತಂಡವೊಂದು ಭೇಟಿಯಾಗುತ್ತದೆ. ಅದು ನಿಮ್ಮನ್ನು ಊರ ಮಧ್ಯದಲ್ಲಿರುವ ಬಯಲು ರಂಗ ಮಂದಿರವನ್ನೂ ಮತ್ತು ಸುಮಾರು ೭೦೦ ಮಂದಿ ಸೇರಬಹುದಾದ ಪೂರ್ಣಾವಧಿ ರಂಗ ಮಂದಿರವನ್ನೂ ತೋರಿಸುತ್ತದೆ.

ಆ ರಂಗ ಮಂಚದ ಮೇಲೆ ಈಗ ಆ ಊರಿನ ಎರಡನೇ ತಲೆಮಾರಿನ ಯುವಕರು ಬಣ್ಣ ಹಚ್ಚಿದ್ದಾರೆ. ತಂಟೆಗಳಿಲ್ಲದ, ಸೌಹಾರ್ದತೆಯ ಬದುಕಿನ ಹಲವು ಜಾತಿ ಧರ್ಮಗಳನ್ನು ಒಟ್ಟಿಗೇ ಸಾಕುತ್ತಿರುವ, ಡೊಳ್ಳಿನ ತಂಡ, ಭಜನಾ ತಂಡ, ಕೌದಿ ಕಲೆಯಂತಹ ಅಪರೂಪದ ಪರಂಪರಾಗತ ಕಲೆಯನ್ನು ಒಡಲಲಿರಿಸಿಕೊಂಡ ಆ ಊರಿನ ಹೆಸರು ಶೇಷಗಿರಿ. ಹಾವೇರಿಯಿಂದ ೩೦ ಕಿ ಮೀ ದೂರ, ಹಾನಗಲ್ ತಾಲೂಕಿನಿಂದ ೧೫ ಕಿ ಮೀ ಒಳಗಿರುವ ಪುಟ್ಟಹಳ್ಳಿಯದು.

 ಆ ಊರಿನಿಂದ ತುಸು ದೂರದ ‘ಕಚವಿ’ ಎಂಬ ಊರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕನಾಗಿ ಬಂದ ನನಗೆ ಅತ್ಯುತ್ಸಾಹಿಯೂ ಸಂಘಟನಾ ಕುಶಲಿಯೂ ಆದ ನಾಗರಾಜ ಧಾರೇಶ್ವರ ಎನ್ನುವ ಶಿಕ್ಷಕರ ಗೆಳೆತನ ಲಭಿಸಿತು. ಪ್ರೋತ್ಸಾಹಶಾಲಿ ಶಿಕ್ಷಕ ಸಮೂಹದ ಜತೆ ಆ ಶಾಲೆಯಲ್ಲಿ ನಾವೆಲ್ಲ ಸೇರಿ ಮಕ್ಕಳ ನಾಟಕ ತಂಡವೊಂದನ್ನು ಕಟ್ಟಿದೆವು. ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸರದಾರ ವೀರನಗೌಡ ಪಾಟೀಲರ, ಮಹಿಳಾ ವಿದ್ಯಾಪೀಠ ಸ್ಥಾಪಿಸಿದ ನಾಗಮ್ಮನವರ ಊರದು. ಇವೆಲ್ಲ ಸ್ಫೂರ್ತಿಗಳು ನಮ್ಮೊಡನಿದ್ದವು. ನಮ್ಮ ಶಾಲಾ ಮಕ್ಕಳ ತಂಡ, ಊರ ಮಧ್ಯದಲ್ಲಿ ಬೀದಿ ನಾಟಕ ಆಡುತ್ತಿತ್ತು.

ಶನಿವಾರ ರವಿವಾರಗಳಂದು ಬೇರೆ ಬೇರೆ ಊರುಗಳ ಶಾಲಾ ಆವರಣದಲ್ಲಿ ಚಿಕ್ಕ ಚಿಕ್ಕ ನಾಟಕ ಪ್ರದರ್ಶನ ನೀಡುತ್ತಿತ್ತು, ‘ದೇವರ ಕಾಡು’ ಎಂಬ ವಿಜ್ಞಾನ ನಾಟಕ ಪ್ರಯೋಗಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದಿತ್ತು. ಹೀಗೆ ಮಕ್ಕಳೇ ನಮ್ಮ ಮುಖವಾಗಿದ್ದ ಕಾಲವದು. ನಮ್ಮ ಮಕ್ಕಳ ಪ್ರಯೋಗವನ್ನು ನೋಡಿದ ಅಂತಹ ದಿನದಲ್ಲೊಂದು ದಿನ ಹಾವೇರಿಯ ಕವಿ, ನಾಟಕಕಾರ ಸತೀಶ ಕುಲಕರ್ಣಿಯವರು ಶೇಷಗಿರಿಯನ್ನು ನನಗೆ ಪರಿಚಯಿಸಿದರು.

ಬಾಂಧವ್ಯಕ್ಕೊಂದು ನೆವವೂ ದೊರೆತಂತೆ ಅದೇ ಸಮಯದಲ್ಲಿ ಸಮುದಾಯ ಧಾರವಾಡ ರಾಜ್ಯ ಮಟ್ಟದ ಬೀದಿ ನಾಟಕ ಸ್ಪರ್ಧೆಯನ್ನು ಧಾರವಾಡದಲ್ಲಿ ಆಯೋಜಿಸಿತ್ತು. ಅದಕ್ಕಾಗಿ ಬೀದಿ ನಾಟಕವೊಂದನ್ನು ಸಿದ್ಧಪಡಿಸಲು ನಾನು ಅಧಿಕೃತವಾಗಿ ಶೇಷಗಿರಿಗೆ ಬರಬೇಕಾಯಿತು. ಸ್ನೇಹಿತ ನಾಗರಾಜ ಧಾರೇಶ್ವರರೊಡನೆ ನಾನು ಶೇಷಗಿರಿಗೆ ರಂಗ ಸಂಬಂಧಿಯಾಗಿ ಕಾಲಿಟ್ಟಿದ್ದು ಹೀಗೆ. ೧೯೯೭-೯೮ರ ಸಮಯದಲ್ಲಿ.

ಕೆಲವು ತಾಣಗಳು ಹೀಗೆ, ಏನೆಂದು ವರ್ಣಿಸಲಾಗದ ಹೊಕ್ಕುಳ ಕಂಪನಕ್ಕೆ ಕಾರಣವಾಗುತ್ತವೆ. ಹಲವು ಕಾಲದಿಂದ ಅವು ನಮಗೆ ಪರಿಚಿತವೇನೋ ಎಂಬಂತೆ, ನಮ್ಮ ಯಾವುದೋ ಜೀವಕೋಶದಲ್ಲಿ ಅದರ ಸ್ಮೃತಿ ಇರುವುದೇನೋ ಅಂತೆಲ್ಲ ಅನಿಸುವದಲ್ಲ ಹಾಗೆ. ಶೇಷಗಿರಿಗೆ ಅಪ್ಯಾಯಮಾನವೆನಿಸಿ ಹೋಯ್ತು. ಆ ಊರಿನ ಆತ್ಮಕತೆಯೊಳಗೆ ನನಗೂ ಚಿಕ್ಕ ಪಾಲು ದಕ್ಕಿತು.

ಮುಕ್ಕಾಲುಭಾಗ ಅನಕ್ಷರಸ್ಥರಿರುವ, ಕೃಷಿ ಕೂಲಿ ಕಾರ್ಮಿಕ ಕಲಾವಿದರ ತಂಡವದು. ‘ಬಂಡಾಯ ಕತೆಯ ನಾಟಕ ನಾವು ಕೆಲವು ಮಾಡೀವಿ’ ಅಂತ ತಂಡವನ್ನು ಪರಿಚಯಿಸುವಾಗ ಮುಖ್ಯಸ್ಥರಾಗಿರುವ ಗುರಪ್ಪನವರು ಹೇಳಿದ್ದರು. ಹೀಗಾಗಿ ಅವರಿಗೆ ತಿಳಿದಿರುವ ಭಾಷೆಯಿಂದಲೇ ರಂಗಚಟುವಟಿಕೆ ಶುರುಮಾಡಲು ಈ ಅವಕಾಶವನ್ನು ಸರಿದೂಗಿಸಿಕೊಂಡೆ. ಅಲ್ಲೊಂದು ಸೊಸೈಟಿಯ ಗೋದಾಮು ಇದೆ. ನಮ್ಮ ತಾಲೀಮಿಗೆ ಅದುವೇ ಸ್ಥಳವಾಯ್ತು.

ರಾತ್ರಿಯ ಹೊತ್ತು ಅಕ್ಕಿ ಮೂಟೆಗಳನೆಲ್ಲ ಪಕ್ಕಕ್ಕಿಟ್ಟು ನಾವು ತಾಲೀಮು ನಡೆಸಿದ್ದು ‘ನ್ಯಾಯದ ಬಾಗಿಲು’ ಎಂಬ ಕಾಫ್ಕಾನ ಕತೆಯನ್ನಾಧರಿಸಿ ಎಂ ಸಿ ರಾಮು ಅವರು ಸಿದ್ಧಪಡಿಸಿದ ನಾಟಕವನ್ನು. ‘ನನಗೆ ಓದೋಕೆ ಬರಲ್ಲ ಹಾಗಾಗಿ ಡೈಲಾಗ್ ಇಲ್ಲದ ಪಾತ್ರವನ್ನೇ ಕೊಡಿ’ ಅಂತ ಹೇಳಿ ಬಂದ ಕಲಾವಿದರೇ ಹೆಚ್ಚು. ಆದರೆ ಆ ಕಲಾವಿದರಲ್ಲಿರುವ ಸಹಜ ಸ್ಫೂರ್ತಿಯಿಂದ ಪಾತ್ರವನೆತ್ತುವ, ಒಳಗಿನ ಸಾತ್ವಿಕತೆಯಿಂದ ಪಾತ್ರವನ್ನು ಕೆತ್ತುವ, ಹಸಿ ಹಸಿಯಾದ ಎನರ್ಜಿಯಿಂದ ರಂಗವಾತಾವರಣವನ್ನು ಬೆಚ್ಚಗಾಗಿಸುವ ಶಕ್ತಿಗೆ ನಾನು ಮಾರು ಹೋಗಿದ್ದೆ.

ಆ ಪ್ರಯೋಗ ಕಂಡ ಯಶಸ್ಸಿನಿಂದ ಉಲ್ಲಸಿತಗೊಂಡ ನಾವು ಹಲವು ನಾಟಕಗಳನ್ನು ಆ ನೆಲದಲ್ಲಿ ಉಸಿರಾಡಿದೆವು. ಸೊಸೈಟಿ ಗೋದಾಮಿನಿಂದ ನಮ್ಮ ರಂಗವಾಸ್ತವ್ಯ ಊರ ಮಧ್ಯದಲ್ಲಿ ಕಟ್ಟಿಕೊಂಡ ಬಯಲು ರಂಗಮಂದಿರಕ್ಕೆ ವರ್ಗಾಯಿಸಲ್ಪಟ್ಟಿತು. ಅನಿವಾರ್ಯವಾಗಿ ಹಗಲಿನಲ್ಲಿಯೂ ತಾಲೀಮು ಮಾಡಬೇಕಾಗಿ ಬಂದರೆ ಅದು ಊರ ಹೊರಗಿನ ತೋಟದಲ್ಲಿ, ನದಿ ದಂಡೆಯಲ್ಲಿ, ಗುಡಿ ತಂಪಿನಲ್ಲಿ ಹೀಗೆ ಎಲ್ಲೆಂದರಲ್ಲಿ ಓಡಾಡುತ್ತ ರೂಪಧಾರಣೆ ಹೊಂದುತ್ತಿತ್ತು.

ರಾತ್ರಿ ಹೊತ್ತು, ಹೊಲಗದ್ದೆಗಳ ಕೆಲಸವೆಲ್ಲ ಮುಗಿದ ಮೇಲೆ ಕಲಾವಿದರೆಲ್ಲ ಸೇರುವುದು. ಅವರೇ ನಾಟಕ ವಾಚನ ಮಾಡಲು ಕಷ್ಟವಾದ್ದರಿಂದ ಗಟ್ಟಿಯಾಗಿ ನಾನು ವಾಚಿಸಿದ ನಂತರ ಅವರು ಅದನ್ನು ಕೇಳಿಸಿಕೊಂಡು ಪುನರುಚ್ಛರಿಸುವುದು ಹೀಗೆ ನಮ್ಮ ನಾಟಕ ಚಟುವಟಿಕೆಗಳು ಸಾಗುತ್ತಿದ್ದವು. ಹೀಗೆಯೇ ಶ್ರೀರಂಗರ ಶೋಕಚಕ್ರ, ಭಾಸನ ಕರ್ಣಭಾರ, ಹಶ್ಮಿಯವರ ಹೇಳಿ ನೀವ್ಯಾರ ಕಡೆ, ಕುವೆಂಪು ದರ್ಶನ, ಇವನಮ್ಮವ ಮುಂತಾದ ನಾಟಕಗಳು ಘಟಿಸಿದವು, ಶಾಂತಕವಿಗಳ ಉಷಾಹರಣ ಅಲ್ಲಿ ನಡೆಯುವವರೆಗೂ.

ಕನ್ನಡದ ಮೊದಲ ನಾಟಕಕಾರರು ಶಾಂತ ಕವಿಗಳು ಉರ್ಫ್ ಸಕ್ರಿಬಾಳಾಚಾರ್ಯ. ನಾನು ಕೆಲಸ ಮಾಡುತ್ತಿದ್ದ ಶಾಲೆ ಕಚವಿ ಎಂಬ ಹಳ್ಳಿಯ ಪಕ್ಕದ ಊರು ಶಾಂತ ಕವಿಗಳದು. ಸಾತೇನಹಳ್ಳಿ ಅಂತ ಅದರ ಹೆಸರು. ಅವರೂ ಶಾಲಾ ಶಿಕ್ಷಕರಾಗಿದ್ದುದು, ಕನ್ನಡ ಅಭಿಮಾನ ಮತ್ತು ನಾಟಕ ಕ್ರಿಯೆಯ ಕಾರಣಕ್ಕಾಗಿ ಮರಾಠಿ ಅಧಿಕಾರಿಗಳ ಅವಕೃಪೆಗೆ ಪಾತ್ರರಾಗಿ ಎಲ್ಲೆಲ್ಲಿಗೋ ವರ್ಗವಾದರೂ ನಾಟಕ ಕರ್ಮವನ್ನು ಮಾತ್ರ ಬಿಡಲಿಲ್ಲ.

ಅವರು ಎಮ್ಮೆಯ ಮೇಲೆಯೂ ಕುಳಿತು ತಾಲೀಮು ಜಾಗಕ್ಕೆ ಬರುತ್ತಿದ್ದ ಬಗ್ಗೆ ಕತೆಗಳುಂಟು. ಹೀಗೆ ಅವರ ಕುರಿತು ಕೇಳಿ, ಓದಿ ತುಂಬ ಅವರ ಪ್ರಭಾವಕ್ಕೆ ಒಳಗಾದ ಕಾಲವದು. ಮರಾಠಿ ತನ್ಮೂಲಕ ವಿದೇಶಿ ನಾಟಕಗಳ ಪಾರಮ್ಯದ ಸಂದರ್ಭದಲ್ಲಿ ಕನ್ನಡ ರಂಗಭೂಮಿಯ ಹುಡುಕಾಟ ಆರಂಭಿಸಿ, ನೆಲ ಮೂಲದ ಅಭಿವ್ಯಕ್ತಿಯಾದ ದೊಡ್ಡಾಟದ ತಂತ್ರಗಳನ್ನು ಬಳಸಿದ ನಾಟಕಗಳನ್ನೂ ಮತ್ತು ಅವುಗಳ ಪ್ರಯೋಗಕ್ಕಾಗಿ ನಾಟಕ ಮಂಡಳಿಯನ್ನೂ ಕಟ್ಟಿದ ಪ್ರಥಮರು ಅವರು. ಕರ್ನಾಟಕ ನಾಟಕ ಪಿತಾಮಹ ಅನಿಸಿಕೊಂಡವರು.

ಕನ್ನಡ ಸಮ್ಮೇಳನಕ್ಕಾಗಿ ಮನೆ ಮನೆಗಳಲ್ಲಿ ಭಿಕ್ಷೆ ಎತ್ತಿ ಅದನ್ನು ಸಂಘಟಿಸಿದವರು. ಅವರ ಮೊದಲ ನಾಟಕವೇ ಉಷಾಹರಣ. ಕನ್ನಡ ಮತ್ತು ಕರ್ನಾಟಕ, ಭಾಷೆ ಮತ್ತು ರಂಗಭೂಮಿ ಕುರಿತ ಚರ್ಚೆಯನ್ನು ಹುಟ್ಟು ಹಾಕಬಲ್ಲ ಆ ನಾಟಕದ ವಸ್ತು ಸಾರ್ವಕಾಲಿಕ ಮೌಲ್ಯವಾದ ಯುದ್ಧ ಮತ್ತು ಪ್ರೀತಿಯನ್ನು ಆಧರಿಸಿದ್ದು. ಕರ್ನಾಟಕ ನಾಟಕ ಅಕಾಡೆಮಿಯು ಹೊಸ ನಾಟಕ ಮತ್ತು ಯುವರಂಗ ನಿರ್ದೇಶಕರ ಉತ್ಸವವನ್ನು ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಸಹಯೋಗದಲ್ಲಿ ಸಂಘಟಿಸಿದಾಗ ನಾನು ಈ ನಾಟಕದ ಬೆನ್ನು ಹಿಡಿದೆ.

ಶೇಷಗಿರಿಯಲ್ಲಿ ನಡೆದ ಬಹುಸಂಭ್ರಮದ ರಂಗಘಟನೆಯದು. ನನ್ನ ಹಲವು ರಂಗ ಒಡನಾಡಿಗಳು ಆ ಊರಿನಲ್ಲಿ ಬಂದುಳಿದರು. ಹಳ್ಳಿಯ ಅನೇಕ ಮನೆಗಳು ರೊಟ್ಟಿ ಉಣಿಸಿ ಬಂದವರನ್ನು ಸಂತೈಸಿದವು. ವಿಶ್ವನಾಥ ಹಿರೇಮಠ ಮತ್ತು ನರಸಿಂಹ ಕೋಮಾರರಂತಹ ಸಂಗೀತ ಶಿಕ್ಷಕರು, ರಂಗ ಒಡನಾಡಿಗಳಾದ ಶ್ರೀನಿವಾಸ ನಾಯ್ಕ, ದಾಮೋದರ, ರಾಜೇಶ್ವರಿ, ಸತೀಶಗಟ್ಟಿ, ಪ್ರಶಾಂತ, ಶೀತಲ ಇವರೆಲ್ಲ ಹಗಲು ರಾತ್ರಿ ಸಾಥ್ ನೀಡಿದರು.

ಕಿರಣ ಭಟ್ ಅದರ ವಸ್ತ್ರ ವಿನ್ಯಾಸ ಮಾಡಿದ್ದರು. ಶತಮಾನಗಳಷ್ಟು ಹಿಂದೆ ರಚಿತವಾದ ಆ ನಾಟಕವನ್ನು ಅದರ ಮಾಂತ್ರಿಕ ಭಾಷೆಯೊಂದಿಗೆ ಇಂದಿನ ರಂಗಸ್ಥಳದಲ್ಲಿಡಲು ಶ್ರಮಿಸಿದೆವು. ತಳಹದಿಯ ರಂಗಭೂಮಿಯ ಕುರಿತು ಅರಿವು ಮೂಡಿಸಿಕೊಳ್ಳುವ, ರಂಗಪ್ರಯೋಗಗಳ ಆಧುನಿಕತೆಯನ್ನು ಮುರಿದು ಕಟ್ಟುವ ಪ್ರಯತ್ನದ ಅಂಗವಾಗಿಯೂ ಅದನ್ನು ರೂಪಿಸಲಾಯಿತು. ಬಯಲಾಟ, ಕಂಪನಿ ಸ್ವರೂಪ ಮತ್ತು ಆಧುನಿಕ ನಾಟಕಗಳ ಅನುಭವವನ್ನು ಸಂಲಗ್ನಗೊಳಿಸಲಾಗಿತ್ತು.

ಎಲ್ಲಕ್ಕಿಂತ ಮುಖ್ಯವಾಗಿ ಈ ನಾಟಕವು, ಆಡುವವರ ಸ್ವಂತ ನೆಲದ ರಚನೆ ಮತ್ತು ಭಾಷೆಯನ್ನು ಒಳಗೊಂಡಿತ್ತು. ಹೀಗಾಗಿ ಅದು ‘ಅವರ’ ನಾಟಕವೆನಿಸಿತ್ತು. ಬೆಂಗಳೂರಿನ ಉತ್ಸವದಲ್ಲಿಯ ಅದರ ಮೊದಲ ಪ್ರಯೋಗ ನೋಡಿದ ಕೀ ರಂ ನಾಗರಾಜರು ಮಾರನೇ ದಿನ ದ ರಾ ಬೇಂದ್ರೆಯವರು ಶಾಂತಕವಿಗಳ ಕುರಿತು ಬರೆದ ಕವನವೊಂದನ್ನು ಪ್ರತಿ ಮಾಡಿ ತಂದು ನನ್ನ ಕೈಯಲ್ಲಿರಿಸಿ ಹರಸಿದರು! ಹೀಗೆ, ಬೆಂಗಳೂರಿನ ಯಶಸ್ವಿ ಪ್ರದರ್ಶನದ ನಂತರ ನಾಟಕ, ಮುಂಬಯಿ ಕನ್ನಡ ನಾಟಕೋತ್ಸವಕ್ಕೆ ಆಯ್ಕೆಯಾಯ್ತು.

ಹಾವೇರಿಯ ಜಿಲ್ಲಾ ಕೇಂದ್ರವನ್ನೂ ಸರಿಯಾಗಿ ನೋಡದ, ಇಂಗ್ಲಿಷ್, ಹಿಂದಿ ಭಾಷೆಯ ಸಿನೆಮಾಗಳನ್ನೂ ನೋಡದ ನಟರ ಸಮೂಹ ನಮ್ಮೊಂದಿಗಿತ್ತು. ನನ್ನನ್ನೂ ಒಳಗೊಂಡಂತೆ ಮೊದಲ ಸಾರಿ ಮುಂಬಯಿಗೆ ಹೊರಟಿರುವ ತಂಡ ನಮ್ಮದು. ಹೀಗಾಗಿ ಹಲವು ಬಗೆಯ ತವಕ ತಲ್ಲಣಗಳಿಂದಲೇ ನಮ್ಮ ತಯಾರಿ ಆರಂಭವಾಯಿತು. ನಾಗರಾಜ ಧಾರೇಶ್ವರರು ಸಂಘಟನೆಯ ನೇತೃತ್ವ ವಹಿಸಿದ್ದರು, ಸತೀಶ ಕುಲಕರ್ಣಿಯವರೂ ಜತೆ ಸೇರಿದರು.

ತಯಾರಿಯ ಕೆಲವು ಸ್ಯಾಂಪಲ್ಸ್ ಹೇಳ್ತೇನೆ ಕೇಳಿ. ಮೊದಲಿಗೆ ಮುಂಬಯಿಗೆ ಹೋಗುವ ಟ್ರೈನ್, ಹಾವೇರಿಯಲ್ಲಿ ೩ ನಿಮಿಷ ನಿಲ್ಲುತ್ತದೆ ಅನ್ನುವ ಮಾಹಿತಿ ಪಡೆಯಲಾಯಿತು. ನಂತರ ಒಂದಿಷ್ಟು ನಾಟಕದ ಲಗೇಜ್ ಸಮೇತ ನಿಂತ ರೇಲ್ವೆಯನ್ನು ೨ ನಿಮಿಷದೊಳಗೆ ಒಳಹೊಕ್ಕು ಹೊರಬರುವ ತಾಲೀಮು ನಡೆಸಲು ಕೆಲವು ಕಲಾವಿದರನ್ನು ಹಾವೇರಿಗೆ ಕರೆದೊಯ್ದು ನಿಂತಿದ್ದ ರೇಲನ್ನು ಹತ್ತಿ ಇಳಿಸಲಾಯ್ತು!

ಹೀಗೆ ಹಲವು ತಯಾರಿಗಳ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ರೈಲನ್ನು ಹತ್ತಿದ ಕೂಡಲೇ ಕಲಾವಿದರಿಗೆ ತಾವೀಗ ಮುಂಬಯಿಯಲ್ಲಿದ್ದೇವೆ ಅನಿಸಿ ಹರಕು ಮುರುಕು ಹಿಂದಿ ಕನ್ನಡ ಪದಗಳ ಮಾನಹರಾಜಿಗೆ ಶುರುಮಾಡಿಯಾಗಿತ್ತು. ಅಂತೂ ಪ್ರದರ್ಶನದ ಹಿಂದಿನ ದಿನ ಮುಂಬಯಿ ತಲುಪಿದೆವು. ನಮ್ಮ ಜತೆ ಕಲಾವಿದರಲ್ಲದೇ ಈಗಾಗಲೇ ಮುಂಬಯಿಗೆ ಹೋಗಿಬಂದ ಅನುಭವ ಇರುವ ಒಂದಿಬ್ಬರು ಸ್ನೇಹಿತರೂ ಇದ್ದರು.

ಮಧ್ಯಾಹ್ನದ ಊಟದ ಬಿಡುವಿನ ನಂತರ ಸಂಜೆ ೪ರ ಸುಮಾರು ಎಲ್ಲರೂ ರಂಗಮಂದಿರ ನೋಡಿ ಬರಲು ಹೋಗುವುದೆಂದೂ, ಅಲ್ಲಿ ತಾಲೀಮು ನಡೆಸುವುದೆಂದೂ ತೀರ್ಮಾನಿಸಿ, ಕಲಾವಿದರಿಗೆ ಎಲ್ಲಿಯೂ ಹೊರಹೋಗದಂತೆ ತಾಕೀತು ಮಾಡಿ ನಾವೆಲ್ಲ ತುಸು ವಿಶ್ರಾಂತಿಗೆ ಒರಗಿದ್ದೇ ತಡ, ಸುಮಾರು ಹತ್ತು ಮಂದಿ ನಟರು ವಸತಿಕೇಂದ್ರದಿಂದ ಗಾಯಬ್ ಆಗಿದ್ದರು..!

ಮುಂಬಯಿಯನ್ನು ಆಗಲೇ ಒಮ್ಮೆ ನೋಡಿಬಂದ ಗೆಳೆಯನೊಡನೆ ಗುಟ್ಟಾಗಿ ಅವರು, ನಾವೆಲ್ಲ ವಿಶ್ರಾಂತಿಯಿಂದ ಏಳುವದರೊಳಗೆ ಒಮ್ಮೆ ವಿದ್ಯುತ್ ‌ಚಾಲಿತ ರೈಲನ್ನು ಹತ್ತಿಳಿಯಲು ಹೊರಬಿದ್ದಿದ್ದರು. ಆತನೇನೋ ಅವರಿಗೆ ಸಾಕಷ್ಟು ಎಚ್ಚರಿಕೆ ಕೊಟ್ಟೇ ಕರೆದೊಯ್ದಿದ್ದ. ಒಂದು ರೈಲನ್ನು ಸ್ಟೇಷನ್ ನಿಂದ ಒಮ್ಮೆಲೇ ಎಲ್ಲರೂ ಹತ್ತುವುದು ಮತ್ತು ಮುಂದಿನ ನಿಲುಗಡೆ ಬಂದ ತಕ್ಷಣ ಇಳಿಯುವುದು ಮತ್ತೆ ಆ ಕಡೆಯಿಂದ ವಾಪಾಸು ಬರುವ ರೈಲನ್ನು ಒಮ್ಮೆಲೇ ಹತ್ತಿ ಈ ಸ್ಟೇಷನ್ನಿನಲ್ಲಿ ಇಳಿಯುವುದು ಅಂತ ಅವರು ತೀರ್ಮಾನಿಸಿದ್ದರು.

ಅರ್ಧಗಂಟೆಯೊಳಗೆ ಮುಗಿಯಬಹುದಾದ ರೋಚಕ ಪಯಣಕ್ಕೆ ಅವರು ಸಿದ್ಧರಾಗಿ ಹೊರಟಿದ್ದರು. ಆದರೆ ಅವರು ಊಹಿಸಿದ್ದಕ್ಕಿಂತ ನೂರುಪಟ್ಟು ವೇಗವಾಗಿ, ಸಾವಿರ ಜನ ಸಂದೋಹದಿಂದ ಒಡಗೂಡಿ ರೈಲು ಚಲಿಸಿತ್ತು. ಹತ್ತಿದ ನಿಮಿಷಗಳಲ್ಲಿಯೇ ಇಳಿಯುವ ನಿಲ್ದಾಣ ಬಂದಾಗಿದ್ದು ಅದು ಕೆಲವರಿಗೆ ಮಾತ್ರ ತಿಳಿದು ಅವರು ಇಳಿದುಕೊಂಡರೆ, ಹಲವರಿಗೆ ತಿಳಿಯದೇ ಮುಂದೆ ಸಾಗುತ್ತ, ಗಾಬರಿಯಲ್ಲಿ ಯಾರ್ಯಾರೋ ಎಲ್ಲೆಲ್ಲೋ ಇಳಿದಿದ್ದರು.

ಕೈಯಲ್ಲಿ ಫೋನಿಲ್ಲ, ಮಾತನಾಡಲು ಭಾಷೆಯಿಲ್ಲ. ಇಲ್ಲಿ, ರಾತ್ರಿ ೭ ಗಂಟೆಯಾದರೂ ಕಲಾವಿದರ ಪತ್ತೆಯಾಗದೇ ಕಂಗಾಲಾದ ನಾವುಗಳು. ಮಾರನೇ ದಿನ ಉಷಾಹರಣ ನಾಟಕದ ಬದಲಾಗಿ ಕಲಾವಿದರಹರಣದಿಂದ ಮುಖಭಂಗಿತವಾಗಬಹುದಾದ ಭೀಕರ ಸಂದರ್ಭ ನೆನೆನೆನೆದು ಹೈರಾಣಾಗಿದ್ದೆವು. ಅಂತೂ ಹೇಗೆ ಹೇಗೋ ಅವರನ್ನೆಲ್ಲ ರಾತ್ರಿ ಹತ್ತರ ಹೊತ್ತಿಗೆ ಒಟ್ಟು ಕಲೆಹಾಕಿ, ತಾಲೀಮಿನ ಮನೆ ಹಾಳಾಗಲಿ, ಬದುಕಿದೆವಲ್ಲ ಬಡಜೀವವೇ ಅಂತ ನಿಟ್ಟುಸಿರಿಟ್ಟು ಮಲಗಿದೆವು.

ಮಾರನೇ ದಿನ ಮಾಟುಂಗದಲ್ಲಿ ಮುಂಜಾನೆಯಿಂದ ಪ್ರಯೋಗದ ತಯಾರಿ ನಡೆಸಿ ಕಲಾವಿದರನ್ನು ಊಟಕ್ಕೆ ಬಿಟ್ಟ ಸಮಯ. ಉಷಾಹರಣದ ‘ಕೃಷ್ಣ’ ನಾಪತ್ತೆಯಾಗಿದ್ದ! ಊಹೆಯ ಮೇಲೆ ಹುಡುಕಿ ಹೊರಟರೆ ಆತ ಮಾಟುಂಗ ರೇಲ್ವೆ ಸ್ಟೇಷನ್ನಿನ ಪೊಲೀಸರ ಅತಿಥಿ ಆಗಿದ್ದ! ಆದದ್ದಿಷ್ಟೇ, ರೈಲ್ವೆ ಪ್ಲ್ಯಾಟ್ ಫಾರ್ಮಿನ ಹೊರಗಿನ ರಸ್ತೆಯ ಮೇಲೆ ಬಟ್ಟೆಗಳನ್ನು ವ್ಯಾಪಾರ ಮಾಡುವುದನ್ನು ನೋಡಿದ್ದ ಆತ, ಕಡಿಮೆ ಬೆಲೆಗೆ ಸಿಗುವ ಅಂಗಿಯೊಂದನ್ನು ತಂದು ಬಿಡುವ ಉಮೇದಿಯಲ್ಲಿ ಪ್ಲ್ಯಾಟ್ ಫಾರ್ಮಿನ ಒಳಗೇ ನಡೆದಿದ್ದ.

ಅಲ್ಲಿ ಇಲ್ಲಿ ಕಳ್ಳನಂತೇ ಕೆಕರಾಯಿಸುತ್ತಿದ್ದ, ಪ್ಲ್ಯಾಟ್ ‌ಫಾರ್ಮಿನ ಟಿಕೇಟ್ ಸಹ ಇಲ್ಲದ ಅವನನ್ನು ಹಿಡಿದು ಪೊಲೀಸರು ಒಳಗೆ ಕುಳ್ಳಿರಿಸಿದ್ದರು! ಆ ಕೃಷ್ಣನೂ ಜೈಲಿನಲ್ಲಿಯೇ ಹುಟ್ಟಿದ್ದನಂತೆ. ಆದರೆ ಆತನಿಗೆ ಹೊರಬರುವ ವಿದ್ಯೆ ತಿಳಿದಿತ್ತು. ಈ ನಮ್ಮ ನಕಲಿ ಕೃಷ್ಣನಿಗೆ ಆ ವಿದ್ಯೆ ಎಲ್ಲಿಂದ ಬರಬೇಕು? ಅಂತೂ ಅವನನ್ನು ಬಿಡಿಸಿಕೊಂಡು ತಂದು ವೇದಿಕೆ ಹತ್ತಿಸಲಾಯಿತು.

ನಾಟಕ ಮುಗಿದ ಮಾರನೇ ದಿನ ಕಲಾವಿದರಿಗೆ ಹಬ್ಬವೋ ಹಬ್ಬ. ಕಡಿಮೆ ಬೆಲೆಯ ಬಟ್ಟೆಕೊಳ್ಳಲು ನಮ್ಮ ಸೈನ್ಯ ಮಾರ್ಕೆಟ್ಟಿಗೆ ನುಗ್ಗೇ ಬಿಟ್ಟಿತು. ಯಾರಾದರೂ ತಪ್ಪಿಸಿಕೊಂಡಾರೆಂದು ಎಲ್ಲರ ಹಿಂದೆ ಹಿಂದೆ ಓಡಾಡುತ್ತಿದ್ದ ನಮಗೆ ಒಂದೆಡೆ ಬಟ್ಟೆ ರಾಶಿಯ ಮುಂದೆ ನಮ್ಮ ‘ಬಾಣಾಸುರ’ ಕಂಡ. ಆತ ಒಂದಿಷ್ಟು ಬಟ್ಟೆಯನ್ನು ಕಂಕುಳಲ್ಲಿ ಕವುಚಿಕೊಂಡು, ಇನ್ನೊಂದು ಬಟ್ಟೆ ಹಿಡಿದು ಅಂಗಡಿಯವನೊಂದಿಗೆ ಮೈ ಕೈ ಅಲ್ಲಾಡಿಸಿ ಮಾತನಾಡುತ್ತಿದ್ದ.

ವ್ಯಾಪಾರಕ್ಕೆಂತ ಭಾಷೆ? ವ್ಯಾಪಾರವೇ ಒಂದು ಭಾಷೆ. ನಮ್ಮ ಬಾಣಾಸುರನಿಗೆ ಸ್ವಲ್ಪ ದೊಡ್ಡ ಸೈಜಿನ ಅಂಗಿ ಬೇಕಿತ್ತು ಅದಕ್ಕೆ ಆತ “ತೋಡಾ ಅಗಲ್ ದೇವೋ”  ಅಂತ ಹಿಂದಿ ಕನ್ನಡದ ಸಂಧಿ ಮಾಡ್ತಿದ್ದ!! ಅಂತೂ ಮುಂಬಯಿ ಜತೆ ಶೇಷಗಿರಿ ದೋಸ್ತಿ ಬೆಳೆಸಿತ್ತು. ಮುಂದೆ ಕರ್ನಾಟಕ ಸಂಘದ ಭರತ ಪೊಲಿಪು ಮತ್ತವರ ಬಳಗದ ಪ್ರೀತಿಯಿಂದಾಗಿ ತಂಡ ಇನ್ನೂ ಎರಡು ಸಾರಿ ಮುಂಬಯಿಯಲ್ಲಿ ತನ್ನ ಪ್ರದರ್ಶನ ನೀಡಿತು.

ರಂಗ ಪ್ರಯೋಗಗಳೇ ಹಾಗೆ. ಅವು ಚಿನ್ನದ ಮಂಟಪದಲಿಟ್ಟ ಮಣ್ಣಿನ ಗಣಪನಂತೇ. ಮಂಟಪ ಚಿನ್ನದ್ದೇ ಆದರೂ ಮೂರ್ತಿ ಮಣ್ಣಿನದಾಗಿರಬೇಕು; ಹೊಸ ಹೊಸದಾಗಿ ಅದನ್ನು ಮುರಿದು ಕಟ್ಟಲಿಕ್ಕಾಗುವುದು. ರಂಗ ಪರಂಪರೆಯ ಮಂಟಪದಲ್ಲಿ ಹೊಸಕಾಲದಲ್ಲಿಯ ಈ ನಾಟಕ ಪ್ರಯೋಗ ತನ್ನ ಮಣ್ಣಿನ ಗುಣದಿಂದಾಗಿ ಸಾಕಷ್ಟು ಯಶಗಳಿಸಿದ್ದು ಮಾತ್ರವಲ್ಲ, ಯುವಕ  ಸಂಘ ಆ ಹಳ್ಳಿಯಲ್ಲಿ ಖರೀದಿಸಿಟ್ಟುಕೊಂಡಿದ್ದ ೪ ಎಕರೆ ಜಮೀನಿನಲ್ಲಿ ರಂಗಮಂದಿರ ನಿರ್ಮಾಣ ಮಾಡಿಕೊಳ್ಳುವುದಕ್ಕೂ ಕಾರಣವಾಯಿತು.

ಆಗಿನ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಕಪ್ಪಣ್ಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಆಯುಕ್ತರಾಗಿದ್ದ ವಿಠ್ಠಲಮೂರ್ತಿಯವರ ದೆಸೆಯಿಂದಾಗಿ ಸರ್ಕಾರದಿಂದ ೨೫ ಲಕ್ಷ ರೂ. ದೊರೆತರೆ, ರಂಗಪ್ರಿಯರಾಗಿರುವ, ಆ ವಲಯದ ಶಾಸಕರೂ ಆಗಿರುವ ಸಿ ಎಂ ಉದಾಸಿಯವರು ರಂಗಮಂದಿರಕ್ಕೆ ತಗಲುವ ಉಳಿದ ವೆಚ್ಚವನ್ನು ಸರ್ಕಾರದಿಂದ, ಸ್ನೇಹಿತರಿಂದ ಕೊಡಿಸಿದರು. ಸುಮಾರು ೯೦ ಲಕ್ಷ ವೆಚ್ಚದ ರಂಗಮಂದಿರ ನಿರ್ಮಾಣಗೊಂಡಿತು. ನಾಟಕ ನೋಡಲು ಬೇರೆ ಬೇರೆ ಊರಿನ ಜನ ಬರುತ್ತ ಬರುತ್ತ ಅದೊಂದು ಹಲವರ ಪ್ರಿಯತಾಣವಾಗತೊಡಗಿತು.

ಹುಲ್ಲಿನ ಮತ್ತು ಹೂವಿನ ಎರಡೂ ಬಗೆಯ ಕಾಯಕಗಳಲ್ಲಿ, ಎರಡಾಗದಂತೆ ನೋಡಿಕೊಂಡ ಬಗೆಗೆ ಹಲವರ ಪ್ರೀತಿ ದಕ್ಕಿದೆ. ರಂಗಮಂದಿರದ ಬೆಳವಣಿಗೆಗೆ ಎಷ್ಟೆಲ್ಲ ಜನ ನೆರವಾಗುತ್ತಲೇ ಬಂದರು! ತಹಶೀಲ್ದಾರರೊಬ್ಬರು ರಂಗಮಂದಿರದೊಳಗೆ ಪ್ರತಿಧ್ವನಿ ಬರದಂತೆ ನೋಡಿಕೊಳ್ಳಲು ಮಿಲ್ಲಿನ ರೀಪುಗಳನ್ನು ಕೊಡಿಸಿದರೆ, ನಾಟಕ ನೋಡಲು ಬಂದ ಇಂಜನಿಯರ್‌ ಒಬ್ಬರು ನಾಟಕಗಳನ್ನು ನೋಡುವಾಗ ಪದೇ ಪದೇ ಹೋಗುತ್ತಿದ್ದ ವಿದ್ಯುತ್ತಿನ ತೊಂದರೆ ನೋಡಿ ಜನರೇಟರ್ ಕೊಡಿಸಿದರು, ಶಿಕ್ಷಕರೊಬ್ಬರು ಒಂದಿಷ್ಟು ಖುರ್ಚಿಗಳನ್ನು ನೀಡಿದರು… ಹೀಗೆ.

ಹತ್ತು ವರ್ಷದ ಕೆಳಗೆ ರಂಗಮಂದಿರದ ಉದ್ಘಾಟನೆ ಸಂದರ್ಭದಲ್ಲಿ ರಾಜಕೀಯ ನಾಯಕರೊಬ್ಬರು “ಮೇಷ್ಟ್ರೇ, ಕೆಲವು ವರ್ಷದ ನಂತರ ಇದು ಗೋವಿನಜೋಳ ತುಂಬುವ ಗೋದಾಮಾಗುತ್ತದೆ ನೋಡಿ” ಅಂದಿದ್ದರು. ಆದರೆ ರಂಗಮಂದಿರ ಕೇವಲ ಆ ಊರಿನ ಆಸ್ತಿಮಾತ್ರವಾಗದೇ ನಾಡಿನ ಆಸ್ತಿಯಾಗಿ ರೂಪಧಾರಣೆ ಮಾಡಿತ್ತು. ಹಲವು ರಂಗಪ್ರಯೋಗಗಳು, ಮಕ್ಕಳ, ದೊಡ್ಡವರ, ಕಾಲೇಜು ವಿದ್ಯಾರ್ಥಿಗಳ ಶಿಬಿರಗಳು, ಉತ್ಸವಗಳು, ಸಾಹಿತ್ಯಿಕ ಚಟುವಟಿಕೆಗಳು, ಮಹಿಳಾ ದಿನಾಚರಣೆಗಳು ಹೀಗೆ ನಿರಂತರ ಚಟುವಟಿಕೆಗಳಾಗುತ್ತಿವೆ ಅಲ್ಲಿ. ಎಷ್ಟೋ ರಂಗತಂಡಗಳು ತಮ್ಮ ತಿರುಗಾಟದ ನಾಟಕಗಳ ತಯಾರಿಯನ್ನು ಅಲ್ಲಿಯೇ ಉಳಿದು ಸಿದ್ಧಪಡಿಸಿಕೊಂಡು ನಡೆದಿವೆ. ಗಾಂಧಿ ೧೫೦ರ ರಂಗತಾಲೀಮುಗಳೂ ತಿಂಗಳುಗಟ್ಟಲೆ ಇಲ್ಲಿಯೇ ನಡೆದಿವೆ. ನೂರಾರು ಕಲಾವಿದರು ಅಲ್ಲಿ ಉಳಿದು ಹೋಗುತ್ತಾರೆ.

ಶೇಷಗಿರಿಯಲ್ಲಿ ‘ರಂಗಪ್ರಿಯ’ ಅನ್ನುವ ಚಿಕ್ಕ ಹೋಟೆಲೊಂದಿದೆ. ಹಿರಿಯ ಕಲಾವಿದ ಸಿದ್ದಪ್ಪ ರೊಟ್ಟಿ ಎನ್ನುವವರು ಅವರ ಮನೆಯ ಆವರಣದಲ್ಲಿಯೇ ಇದನ್ನು ನಡೆಸುತ್ತಿದ್ದಾರೆ. ರಂಗಮಂದಿರದಲ್ಲಿ ನಡೆವ ಚಟುವಟಿಕೆಯ ಸಮಯದಲ್ಲಿ ಊಟ ತಿಂಡಿ ನೀಡುವವರು ಅವರೇ. ಉಳಿದ ಸಮಯದಲ್ಲಿ ಊರಿನವರೇ ಅವರ ಗಿರಾಕಿಗಳು. ಈ ರಂಗಪ್ರಿಯನ ಹೋಟೆಲು ೨೪ ಘಂಟೆಯೂ ತೆರೆದಿರುತ್ತದೆ. ಹೇಗಂತೀರಾ?

ಅವರ ಮನೆಯ ಹೊರಾಂಗಣವೇ ಹೋಟೆಲ್ ಆಗಿರುವುದರಿಂದ ಆತ ಮಧ್ಯರಾತ್ರಿಯ ಮೇಲೆ ಮಲಗಿದ್ದರೂ ಅಲ್ಲಿ ಹೊರಗೆ ಆತ ಇಟ್ಟಿರುವ ಚಹ, ಬಿಸ್ಕೇಟ್ ಇತ್ಯಾದಿಗಳನ್ನು ಜನರು ಸ್ವೀಕರಿಸಿ, ಅಲ್ಲಿಯೇ ಇದ್ದ ಟೇಬಲ್ಲಿನ ಹುಂಡಿಯೊಳಗೆ ಹಣ ಇಟ್ಟು ಹೋಗುತ್ತಾರೆ! ಒಮ್ಮೆ ಅಲ್ಲಿಗೆ ಬಂದು ಹೋದ ಕಲಾವಿದರು ಈ ಬಾಂಧವ್ಯ ಮರೆಯಲಾರರು! ಹಾವೇರಿಯ ಸುತ್ತಮುತ್ತಲಿನಲ್ಲಿ ಎಲ್ಲಾದರೂ ಅವರು ಹಾದು ಹೋಗುವುದಿದ್ದಲ್ಲಿ ಮರೆಯದೇ ಶೇಷಗಿರಿಯ ಈ ‘ರೊಟ್ಟಿ’ ಅಂಗಡಿಗೆ ಬಂದು ಅವರನ್ನು ಮಾತನಾಡಿಸಿ ಮಂಡಕ್ಕಿ ತಿನ್ನದೇ ಹೋಗುವುದಿಲ್ಲ. ಕಾಯಕವನ್ನು ಮಾಯಕವಾಗಿಸುವ ಈ ತಾಕತ್ತಿಗೆ ಏನನ್ನಬಹುದು?

ಸುಮಾರು ೨೨ ವರ್ಷಗಳ ದೀರ್ಘಾವಧಿಯ ಮಣ್ಣಿನ ನಂಟಿದು, ಅಂಟಿದ ಪರಿ ಇಂತದು. ಅಂದು ಉಷಾಹರಣ, ಕರ್ಣಭಾರ ನಾಟಕಗಳಾಗುವಾಗ ತಾಲೀಮು ನೋಡಲು ಬರುತ್ತಿದ್ದ ಚಿಳ್ಳೆಪಳ್ಳೆಗಳು ಈಗ ಎರಡನೇ ತಲೆಮಾರಿನ ಕಲಾವಿದರಾಗಿ ಊರಿನಲ್ಲಿ ಬೆಳೆಯುತ್ತಿದ್ದಾರೆ. ಅಕ್ಕಪಕ್ಕದ ಕಾಲೇಜು ಹುಡುಗರು ಅವರ ಬಿಡುವಿನ ವೇಳೆಯಲ್ಲಿ ಇಲ್ಲಿ ಬಂದು ತಂಗುತ್ತಾರೆ.

ಹೊಸಹುಡುಗರೆಲ್ಲ ಸೇರಿ ನಟಿಸಿದ, ಗಣೇಶ್ ಎಂ ನಿರ್ದೇಶನದ ವಾಲಿವಧೆ ನಾಡಿನಲ್ಲೆಲ್ಲೆಡೆ ತಿರುಗಾಟ ಕಂಡಿದೆ. ಗಾಜಿನ ಗೋಳವೂ ಈಗ ಹೊಸ ರೂಪಕ್ಕೆ ಕಾದಿದೆ. ಹೊಸ ಹೊರಳಿಕೆಯ ಅನುಭವದ ರೂಪಣೆಗಾಗಿ, ಹೊಸಬಂಧದ ವಿನ್ಯಾಸ ರೂಪಿಸಲು ಹೊಸ ಬಣ್ಣಗಳ ದ್ರವ್ಯಕ್ಕೆ ಕಾದಿದೆ.

‘ಶಾಂತಕವಿಗಳ ವಿಶ್ರಾಂತಿ’ಯನ್ನು ಬರೆದ ಬೇಂದ್ರೆಯವರ ಸಾಲುಗಳು ಇಂತಿವೆ…
ನಟ ತೆರೆಯ ಮರೆಯಾದ…
ನುಡಿಗಳ ಹಾಡುಗಳ ಹಾಡಿ…
ತೀರಿದರೂ ತಣಿವಿಲ್ಲ
ಮೈಮರೆಯೆ ಕೂಡಿದರೂ
ಮನದಣಿಯಲಿಲ್ಲ ಕಡೆಗೂ…

ಯಾವತ್ತಾದರೂ ಶೇಷಗಿರಿಗೆ ಹೋಗಿ. ಅಲ್ಲಿ ನಿಮಗಾಗಿ ಸಿದ್ದಪ್ಪ ರೊಟ್ಟಿಯವರ ರಂಗಪ್ರಿಯ ಹೋಟೆಲಿನಲ್ಲಿ ಮಸಾಲೆ ಮಂಡಕ್ಕಿ ಕಾಯುತ್ತಿರುತ್ತದೆ; ಮತ್ತು ರಂಗ ಮಂದಿರದ ಮೆಟ್ಟಿಲ ಮೇಲೆ ನಿಮ್ಮನ್ನು ಸ್ವಾಗತಿಸಲು ಪ್ರಭು ಗುರಪ್ಪನವರು ನಿಂತಿರುತ್ತಾರೆ.

‍ಲೇಖಕರು ಶ್ರೀಪಾದ್ ಭಟ್

September 19, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. SUDHA SHIVARAMA HEGDE

    ಎಷ್ಟು ಆರ್ದೃವಾದ ಬರಹ. ಬೆಸುಗೆ ನಮ್ಮೊಡಲಿನೊಳಗಿನದಾದಾಗ ಮಾತ್ರವೇ ಹೀಗೆ ಬರಹಗಳು ಹೊಮ್ನುತ್ತವೆ. ಶೇಷಗಿರಿಗೆ ಒಮ್ಮೆ ಭೇಟಿಯಿತ್ತವರ್ಯಾರೂ ಆ ಊರನ್ನು, ಅಲ್ಲಿಯವರ ರಂಗಪ್ರೀತಿಯನ್ನೂ, ಸಿದ್ದಪ್ಪನವರ ಆತಿಥ್ಯವನ್ನು, ಗುರಪ್ಪನವರ ಸೌಜನ್ಯವನ್ನು ಮರೆಯಲಾರರು.

    ಪ್ರತಿಕ್ರಿಯೆ
  2. Ahalya Ballal

    ಶೇಷಗಿರಿ ಎಂಬ ಅದ್ಭುತ ರಂಗಕ್ರಿಯೆ ಅದೆಷ್ಟು ಆಯಾಮಗಳಲ್ಲಿ ತೆರೆದುಕೊಂಡಿದೆ ಇಲ್ಲಿ. ಅಲ್ಲಿ ಸುಮಾರು ಮೂರು ದಿನಗಳನ್ನು ಕಳೆದ ನೆನಪು ಹಸಿರಾಗಿದೆ. ಇಷ್ಟೆಲ್ಲಾ ಹಿನ್ನೆಲೆ ಇದೆಯಂತ ಆಗ ಗೊತ್ತಿರಲಿಲ್ಲ. ಓದಿ ತುಂಬಾ ತುಂಬಾ ಖುಶಿ ಆಯ್ತು.

    ಇನ್ನು ತಂಡದ ಮುಂಬಯಿ ಪಯಣದ ಸಿದ್ಧತೆ, ಅಲ್ಲಿಯ ಸಾಹಸಗಳು …ಹಹಹ…

    “ರಂಗ ಪ್ರಯೋಗಗಳೇ ಹಾಗೆ. ಅವು ಚಿನ್ನದ ಮಂಟಪದಲಿಟ್ಟ ಮಣ್ಣಿನ ಗಣಪನಂತೇ. ಮಂಟಪ ಚಿನ್ನದ್ದೇ ಆದರೂ ಮೂರ್ತಿ ಮಣ್ಣಿನದಾಗಿರಬೇಕು; ಹೊಸ ಹೊಸದಾಗಿ ಅದನ್ನು ಮುರಿದು ಕಟ್ಟಲಿಕ್ಕಾಗುವುದು.” ಕ್ಷಣಿಕತೆಯನ್ನು, ಅದರ ಶಕ್ತಿಯನ್ನು ಎಷ್ಟು ಚಿತ್ರವತ್ತಾಗಿ ಸೆರೆಹಿಡಿದಿರಿ.

    ಇಂದಿನ ಕೆಲಸಗಳನ್ನು ಸ್ವಲ್ಪವಾದರೂ ಮುಗಿಸಿ ಆರಾಮಾಗಿ ಸಂಜೆಗೆ ಓದೋಣ ಅಂದುಕೊಂಡಿದ್ದೆ, ಆದರೆ ಶೇಷಗಿರಿ ಬಿಡಬೇಕಲ್ಲ…
    ಕೂಡಲೇ ಓದಿಸಿಕೊಂಡೇಬಿಡ್ತು. 🙂 🙂

    ಪ್ರತಿಕ್ರಿಯೆ
  3. ಕಿರಣ ಭಟ್

    ‘ಉಷಾಹರಣ’ ಮರೆಯದ ನೆನಪು. ಮೊದಲ ಬಾರಿಗೆ ನಾವು Trolley ಉಪಯೋಗಿಸಿದ್ದೆವು.
    ಸೆಟ್ಟಿಂಗ್ ನ ಡಿಸೈನ್ ಮಾಡಿಕೊಟ್ಟರೆ,, ದಾಮೋದರ ನಾಯ್ಕ ” ಕಿರಣ ಸರ್ ಚಿತ್ರ ಬಿಡಿಸ್ಕೊಟ್ಬಿಡ್ತಾರೆ ಸೆಟ್ ಮಾಡೋದು ಹೇಗೆ?” ಅಂತ ಗಲಾಟೆ ಮಾಡ್ತಿದ್ದ. ಅದನ್ನ ಛಾಲೇಂಜ್ ಆಗಿ ತಗೊಂಡು ತುಂಬ ಚೆಂದದ ಸೆಟ್ ಗಳನ್ನ ನಿರ್ಮಾಣ ಮಾಡಿದ.
    ಮುಂದೆ ಈ ಊರ ಕೆಲ ಹುಡುಗ್ರು ನಮ್ಮ ಚಿಂತನ ರೆಪರ್ಟರಿಯ ಜೊತೆಗೂ ಸೇರಿಕೊಂಡ್ರು. ಆ ಊರ, ಹುಡುಗರ ಜೊತೆ ಸುಂದರ ನೆನಪುಗಳಿವೆ.
    ಆ ಹಳ್ಳಿಯನ್ನ ‘ ರಂಗಪಟ್ಟಣ’ ವಾಗಿಸಿದ್ದು ನೀನೇ ಶ್ರೀಪಾದ.

    ಪ್ರತಿಕ್ರಿಯೆ
  4. Kavya Kadame

    ಇಡೀ ಊರೇ ಒಂದು ಟೀಮ್ ಆಗಿ ನಿಲ್ಲುವ, ಮಹತ್ವದ್ದನ್ನು ಕಟ್ಟಲು ಶ್ರಮಿಸುವ ಕಥೆಗಳನ್ನು ಕೇಳಲೇ ಒಂದು ಉತ್ಸಾಹ. ಶಾಂತಕವಿಗಳ ಕುರಿತ ಮಾಹಿತಿ ಕುತೂಹಲಕರವಾಗಿದೆ. ನಾಟಕದ ಲಗೇಜ್ ಜೊತೆಗೆ ರೈಲನ್ನು ಬೇಗ ಹತ್ತಿ ಇಳಿಯುವುದಕ್ಕೆ ಮಾಡಿದ ತಾಲೀಮು, ಮುಂಬೈನಲ್ಲಿ ನಟರ ಫಜೀತಿಗಳು, ತೋಡಾ ಅಗಲ್ ದೇವೋ.. ಮುಂತಾದ ಸಂಗತಿಗಳು ನಗು ಉಕ್ಕಿಸಿದವು.

    ನೀವು ಹೇಳಿದ ಚಿನ್ನದ ಮಂಟಪದಲ್ಲಿಟ್ಟ ಮಣ್ಣಿನ ಗಣಪನ ಉಪಮೆ ಬಹಳ ಕಾಲ ಮನಸ್ಸಿನಲ್ಲಿ ಉಳಿಯುವಂಥದು. ಇದನ್ನು ಸೃಜನಶೀಲತೆಯ ಎಲ್ಲ ಆಯಾಮಗಳಿಗೂ ಆಮದು ಮಾಡಿಕೊಳ್ಳಬಹುದೇನೋ. ಮತ್ತು ಧನ್ಯವಾದ ನಿಮಗೆ, ಮನೆಯಲ್ಲೇ ಕಲೈಡೋಸ್ಕೊಪ್ ತಯಾರಿಸುವ ಗುಟ್ಟನ್ನು ಬಿಟ್ಟುಕೊಟ್ಟಿದ್ದಕ್ಕೆ! 

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: