ಶೇಕ್ಸ್ ಪಿಯರ್ ನಾಟಕ ಪ್ರದರ್ಶನ :’ ಏನೂ ಇಲ್ಲದ ಕುರಿತು ಏನೋ ಇದೆ ‘

ಮೊನ್ನೆ ಮಂಗಳವಾರ ,ಜುಲೈ ಹನ್ನೆರಡರಂದು ವ್ಯೂರ್ತ್ಸ್ ಬುರ್ಗಿನಲ್ಲಿ ಶೇಕ್ಸ್ ಪಿಯರ್ ನ ‘ Much Ado About Nothing’ ನಾಟಕ ಪ್ರದರ್ಶನ ಇತ್ತು. TNT Theatre ADG Europe ತಂಡದವರು TNT Theatre Britain ನವರು Paul Stebbings ನಿರ್ದೇಶಿಸಿ ಸಿದ್ಧಪಡಿಸಿದ ಈ ನಾಟಕವನ್ನು ವ್ಯೂರ್ತ್ ಬುರ್ಗಿನ ಐತಿಹಾಸಿಕ ಅರಮನೆ ‘ರೆಸಿಡೆನ್ಜ್ ‘ ನ ಹಿಂಭಾಗದ ತೋಟದಲ್ಲಿ ಪ್ರದರ್ಶಿಸಿದರು.ನಮ್ಮ ಗೆಸ್ಟ್ ಹೌಸ್ ಸೌಹಾರ್ದ ತಂಡದ ಅಂಗೆಲಿಕಾ ಅವರು ಇಮೈಲ್ ಮಾಡಿ ನಾಟಕ ಪ್ರದರ್ಶನದ ಸುದ್ದಿ ತಿಳಿಸಿದಾಗ ,ಒಂದು ಇಂಗ್ಲಿಶ್ ನಾಟಕ ನೋಡುವ ಅವಕಾಶ ದೊರೆತುದಕ್ಕೆ ಸಂಭ್ರಮಗೊಂಡು ನಮಗೆ ಎರಡು ಟಿಕೆಟ್ ಕಾದಿರಿಸಲು ಹೇಳಿದೆ.ಅವಸರದಲ್ಲಿ ಶೇಕ್ಸ್ ಪಿಯರ್ ನಾಟಕ ‘ Much Ado About Nothing’ ಸಂಪಾದಿಸಿಕೊಂಡು ,ಓದಿಮುಗಿಸಿ ,ಮಾನಸಿಕವಾಗಿ ಸಿದ್ಧವಾದೆ.ನಾನು ಮತ್ತು ಕೋಕಿಲ ,ರೆಸಿಡೆನ್ಜ್ ಬಳಿ ಬಂದಾಗ ಅಂಗೆಲಿಕಾ ನಮಗಾಗಿ ಕಾಯುತ್ತಿದ್ದರು.ಅವರ ಜೊತೆಗೆ ಅವರ ಒಬ್ಬ ಗೆಳತಿ,ನಮ್ಮ ಗೆಸ್ಟ್ ಹೌಸ್ ಕೂಟದ ಡಾ.ಹೆಲ್ಲಿ, ಇಲ್ಲಿನ ವಿವಿಯ ಜೀವವಿಜ್ಞಾನ ಸಂಸ್ಥೆಯಲ್ಲಿ ಸಂಶೋಧನಾ ಯೋಜನೆಯೊಂದರಲ್ಲಿ ಮೀನುಗಳ ಬಗ್ಗೆ ಹೊಸ ಶೋಧ ಮಾಡುತ್ತಿರುವ ಜಪಾನಿನ ಪ್ರಾಧ್ಯಾಪಕಿ ಯೂಕೋ ಇದ್ದರು.ಹೀಗೆ ನಾವು ಆರು ಜನ ನಾಟಕ ಪ್ರದರ್ಶನ ನಡೆಯುವ ಬಯಲು ತೋಟದ ಬಳಿ ಬಂದಾಗ ಸಾಕಷ್ಟು ಜನರು ಸೇರಿದ್ದರು.ಬಯಲಿನಲ್ಲಿ ಸರಳ ಸಣ್ಣ ರಂಗಮಂದಿರ ನಿರ್ಮಿಸಿದ್ದರು.ನಾಟಕ ಆರಂಭ ಆಗುವ ಮೊದಲೇ ಜನ ಆಕಾಶ ನೋಡುತ್ತಿದ್ದರು.ಮೋಡ ದಟ್ಟವಾಗಿ ಕವಿದಿತ್ತು.ಹವಾ ಮುನ್ಸೂಚನೆಯಂತೆ ಆ ರಾತ್ರಿ ಗುಡುಗು ಸಹಿತ ಜೋರಾಗಿ ಮಳೆ ಬರುತ್ತದೆ ಎಂದು ಜನರು ಆಡಿಕೊಳ್ಳುತ್ತಿದ್ದರು.ನಾನು ಪಕ್ಕದವರಲ್ಲಿ ಹೇಳಿದೆ :’ Much Ado About Nothing’. ನಾಟಕಕ್ಕೆ ಮೊದಲೇ ಕಾಮೆಡಿ ಆರಂಭ ಆಗಿತ್ತು !

ಶೇಕ್ಸ್ ಪಿಯರ್ ೧೫೯೮ರಲ್ಲಿ ರಚಿಸಿದ ಎಂದು ಹೇಳಲಾದ ಈ ನಾಟಕವು ಕತ್ತಲೆ ಮತ್ತು ಬೆಳಕು ,ಸುಪ್ತ ಬಯಕೆಗಳು ಮತ್ತು ಬಹಿರಂಗ ಪ್ರಣಯ , ಹೇಳಲಾಗದ ಮತ್ತು ಹೇಳಿಕೊಳ್ಳುವದರಲ್ಲಿ ಖುಷಿಪಡುವ ಪ್ರವೃತ್ತಿಗಳ ವಿಚಿತ್ರ ಜಗತ್ತನ್ನು ಅನಾವರಣ ಮಾಡುತ್ತದೆ.ಈ ನಾಟಕವು’ ಕಾಮೆಡಿ ‘ ಎಂಬ ಹಣೆಪಟ್ಟಿ ಹೊಂದಿದ್ದರೂ ,ಅದು ನಿಜವಾಗಿ ‘ಕಾಮೆಡಿ’ ಮತ್ತು ‘ಟ್ರಾಜೆಡಿ’ಗಳ ಗುಣಗಳನ್ನು ಒಟ್ಟಿಗೆ ಉಳ್ಳದ್ದು. ನಗು ಮತ್ತು ಅಳು ಈ ನಾಟಕದಲ್ಲಿ ಆರಂಭದಿಂದಲೇ ಜೊತೆಜೊತೆಗೆ ಸಾಗುತ್ತವೆ.ಮೊದಲನೆಯ ದೃಶ್ಯದಲ್ಲಿ ಲೆಯೋನತೊ ಹೇಳುವ ನಾಣ್ನುಡಿಯಂತಹ ಮಾತು : ‘ ಅಳುವಿನಲ್ಲಿ ನಗುವುದಕ್ಕಿಂತ ನಗುವಿನಲ್ಲಿ ಅಳುವುದು ಎಷ್ಟು ಮಟ್ಟಿಗೆ ಉತ್ತಮ?’ ಹಾಗಾಗಿಯೇ ಈ ನಾಟಕ ಏನು ಎನ್ನುವ ಚರ್ಚೆಗಳು ಸಾಕಷ್ಟು ನಡೆದಿವೆ.ಇದರ ಪ್ರದರ್ಶನದ ದೃಷ್ಟಿಯಿಂದ ಇದರ ಬಗ್ಗೆ ಭಿನ್ನ ಭಿನ್ನ ನಿಲುವುಗಳು ಪ್ರಕಟವಾಗಿವೆ.ಪ್ರೇಕ್ಷಕರ ದೃಷ್ಟಿಕೋನದಿಂದ ಇದನ್ನು ಹೇಗೆ ಗ್ರಹಿಸಬಹುದು ಎನ್ನುವ ಚರ್ಚೆ ಇದೆ.ಕೇವಲ ತಮಾಷೆ ಮಾತ್ರ ಅಲ್ಲದ ಕಾಮೆಡಿಯೇ ? ಸುಖಾಂತ್ಯಗೊಳ್ಳುವ ಟ್ರಾಜೆಡಿಯೇ ? ಒಂದು ಕುತೂಹಲಕಾರಿ ಪ್ರಸಂಗವೇ ?ಸಾಂಕೇತಿಕ ನಾಟಕ ಮತ್ತು ನೃತ್ಯ ರಂಗಭೂಮಿಯ ವಿಚಿತ್ರ ಬೆರಕೆಯೇ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಎಲ್ಲವೂ ಹೌದು. ಶೇಕ್ಸ್ ಪಿಯರ್ ತನ್ನ ಟ್ರಾಜೆಡಿಗಳಲ್ಲಿ ಹಾಸ್ಯ ಪಾತ್ರಗಳನ್ನುವಿದೂಷಕರನ್ನು ತಂದಿದ್ದಾನೆ.ಟ್ರಾಜಿಕ್ ಪಾತ್ರಗಳ ಮೂಲಕ ತಮಾಷೆಯ ಮಾತುಗಳಿಗೆ ಪ್ರತಿಕ್ರಿಯೆ ಕೊಡಿಸಿದ್ದಾನೆ.ಆದೆ ರೀತಿ ಅವನ ಕಾಮೆಡಿಗಳು ಎನ್ನುವ ನಾಟಕಗಳು.ಅವು ತಮಾಷೆಯ ನಡುವೆಯೇ ಬದುಕಿನ ಕರಾಳತೆಯನ್ನೂ ಹೇಳುತ್ತವೆ.ಹೀಗಾಗಿ ಆತನ ಈ ನಾಟಕ ‘ Much Ado About Nothing’ ನ್ನು ‘ಡಾರ್ಕ್ ಕಾಮೆಡಿ’ ಎಂದು ಕರೆಯಲಾಗಿದೆ.ಪ್ರೀತಿ ಮತ್ತು ಬದುಕು -ಎರಡೂ ಕರಾಳವಾಗುತ್ತವೆ ,ಅಲ್ಲಿ ಏನೂ ಇಲ್ಲದಾಗ.ಏನೋ ಇದೆ ಎನ್ನುವುದು ಏನೂ ಇಲ್ಲ ಎನ್ನುವುದಕ್ಕಿಂತ ಹೆಚ್ಚು ತೃಪ್ತಿ ಕೊಡುತ್ತದೆ.

ವ್ಯೂರ್ತ್ಸ್ ಬುರ್ಗಿನ ಮೊನ್ನೆಯ ಪ್ರದರ್ಶನ ಈ ನಾಟಕಕ್ಕೆ ಈ ಎಲ್ಲ ಅರ್ಥಗಳನ್ನು ಕೊಡುವಲ್ಲಿ ಹೆಚ್ಚು ಯಶಸ್ವಿ ಆಯಿತು. ನಿರ್ದೇಶಕ ಪೌಲ್ ಸ್ಟೆಬ್ಬಿಂಗ್ಸ್ ಅದಕ್ಕೆ ಹೊಸ ಅರ್ಥಗಳನ್ನು ಕೊಟ್ಟು ,ಪ್ರೇಕ್ಷಕರು ನಗುತ್ತಾ ಖುಷಿ ಪಡುತ್ತಲೇ ,ಅದನ್ನು ಹೊಸ ರೀತಿಯಲ್ಲಿ ನೋಡಲು ಕಲಿಸಿದ. ಈ ನಾಟಕದಲ್ಲಿನ ವಿಭಿನ್ನ ಪ್ರವೃತ್ತಿಗಳನ್ನು ಒಂದುಗೂಡಿಸುವ ಸಮನ್ವಯ ತರುವ ಸರಳ ಹಾಸ್ಯನಾಟಕವನ್ನಾಗಿಸದೆ ,ಅದರಲ್ಲಿನ ಅತಿರೇಕಗಳನ್ನು ಶೋಧಿಸುವುದರ ಕಡೆಗೆ ಹೆಚ್ಚು ಒತ್ತು ಕೊಡಲಾಗಿತ್ತು.ಶೇಕ್ಸ್ ಪಿಯರ್ ನಾಟಕದ ಡಾನ್ ಪೆಡ್ರೋ -ಸ್ಪಾನಿಶ್, ಕ್ಲೌಡಿಯೋ -ಇಟಾಲಿಯನ್,ಡಾಗ್ ಬೆರಿ ಹಾಗೂ ಬಿಯತ್ರಿಸ್ -ಇಂಗ್ಲಿಶ್ .ಹೆರೋ- ಕ್ಲಾಸಿಕ್ಸ್ ನಿಂದ ತೆಗೆದುಕೊಂಡ ಪಾತ್ರ.ಈ ನಾಟಕದಲ್ಲಿ ಯುದ್ಧವಿದೆ ,ಆದರೂ ಯಾರೂ ಗಾಯಗೊಳ್ಳುವುದಿಲ್ಲ.ಇದರಲ್ಲಿ ಒಬ್ಬ ಖಳನಾಯಕ ಇದ್ದಾನೆ,ಆದರೆ ನಾಟಕದ ಮಧ್ಯದಲ್ಲೇ ಕಣ್ಮರೆಯಾಗುತ್ತಾನೆ.ಈ ನಾಟಕದ ಅನೇಕ ದೃಶ್ಯಗಳಲ್ಲಿ ಏನೂ ನಡೆಯುವುದೇ ಇಲ್ಲ. ಇಂತಹ ಅನೇಕ ವಿಚಿತ್ರ ಅನ್ನಿಸುವ ಅಂಶಗಳನ್ನು ಈ ನಾಟಕದ ಮೊನ್ನೆಯ ಪ್ರದರ್ಶನದಲ್ಲಿ ಒಟ್ಟಿಗೆ ತರಲಾಗಿತ್ತು.ಬದುಕಿನಂತೆ ನಾಟಕದಲ್ಲೂ ಇವೆಲ್ಲ ಒಟ್ಟಿಗೆ ಇರಬಹುದು ಎಂದು ತೋರಿಸಲಾಗಿತ್ತು.ಏನೋ ನಡೆಯುತ್ತದೆ ಎಂದು ಭಾಸವಾಗುತ್ತದೆ ,ಆದರೆ ಏನೂ ನಡೆಯುವುದಿಲ್ಲ .ಏನೂ ನಡೆಯುವುದಿಲ್ಲ ಎಂದು ಕಾಣಿಸುತ್ತದೆ ,ಆದರೆ ಏನೋ ನಡೆಯುತ್ತಿರುತ್ತದೆ.ಈ ನಾಟಕವನ್ನು ನಿರ್ದಿಷ್ಟ ಕಾಲ ಮತ್ತು ಸ್ಥಳದಲ್ಲಿ ಇಡುವ ಬದಲು ,ಇದು ಎಲ್ಲಿಯೂ ನಡೆಯಬಹುದಾದ ನಾಟಕ ಎನ್ನುವ ಹಾಗೆ ಪ್ರದರ್ಶನ ಇತ್ತು.ತಂತ್ರಗಾರಿಕೆ,ವಂಚನೆ,ಸುಳ್ಳು ಹೇಳುವುದು,ಬೇಹುಗಾರಿಕೆ -ಇವೆಲ್ಲ ನಮ್ಮ ಸುತ್ತಮುತ್ತ ದಿನನಿತ್ಯ ಒಟ್ಟಿಗೆ ನಡೆಯುತ್ತಿರುತ್ತವೆ. ಪತ್ತೇದಾರಿ ಕೆಲಸಮಾಡದೆ ಯಾವುದೂ ನಿಜ ಎಂದು ಹೇಳಲಾಗುವುದಿಲ್ಲ.ಬಹಿರಂಗವಾಗಿ ಹೇಳುವುದು ಬಹಳಬಾರಿ ,ಸುಳ್ಳು ಅಥವಾ ವಂಚನೆ ಆಗಿರುತ್ತದೆ.ನಾವು ‘ಒಳ್ಳೆಯ’ ಎಂದು ಭಾವಿಸಿ ಕೊಂಡವರೂ ಹೀಗೆ ಇರುತ್ತಾರೆ.ನಾಟಕದಲ್ಲಿ ಹೆರೋ ಕೂಡ ಸುಳ್ಳು ಹೇಳುತ್ತಾಳೆ.ಇದು ಕೇವಲ ಆಕಸ್ಮಿಕ ಅಲ್ಲ.ಬದುಕು ಮತ್ತು ನಾಟಕ ನಡೆಯುವುದೇ ಹೀಗೆ.

ಈ ನಾಟಕದಲ್ಲಿ ಬಿಯತ್ರಿಸ್ ಒಬ್ಬಳು ಹೆಣ್ಣು ಆಗಿ ,ಭ್ರಷ್ಟ ಗಂಡಸರ ಜಗತ್ತಿನಲ್ಲಿ ಬಂಡಾಯಗಾರಳಾಗಿ ಬಹಿರಂಗವಾಗಿ ಆ ವ್ಯವಸ್ಥೆಯ ವಿರುದ್ಧ ಮಾತಾಡುತ್ತಾಳೆ.ತನ್ನ ನೋವುಗಳ ಸಹಿತ ತಾನು ಬೇರೆಯಾಗಿಯೇ ಇರಲು ಬಯಸುತ್ತಾಳೆ.ಆಕೆ ಬೆನೆಡಿಕ್ ನಲ್ಲಿ ‘ಕ್ಲೌಡಿಯೋ ನನ್ನು ಕೊಲ್ಲು’ ಎಂದು ಹೇಳುವುದು ಅವಳ ಶಕ್ತಿ ಮತ್ತು ನಿಯಂತ್ರಣದ ಒಂದು ಅಪೂರ್ವ ಕ್ಷಣ. ಬೆನೆಡಿಕ್ ನು ಬಿಯತ್ರಿಸ್ ಳ ಮಾತಿಗೆ ಬೆಲೆ ಕೊಡುವುದು ಅವಳು ತನ್ನ ಪ್ರೇಮಿ ಎನ್ನುವ ಕಾರಣಕ್ಕೆ ಅಲ್ಲ,ಬದಲಾಗಿ ಅವಳೊಬ್ಬಳು ಬಂಡಾಯ ಗಾರ್ತಿ ಎನ್ನುವುದಕ್ಕಾಗಿ.ಸ್ನೇಹಿತರ ನಡುವೆ ಯುದ್ಧ ,ಆದರೆ ಯಾರೂ ಸಾಯುವುದಿಲ್ಲ. ಈ ನಾಟಕ ಸಮನ್ವಯ ಸಾಧಿಸುತ್ತದೆ ಎಂದುಕೊಂಡರೆ ,ಅದು ಸುಖಾಂತ್ಯ ಎಂದು ಭಾವಿಸಿದರೆ ,ಅದು ನಕ್ಕು ಹಗುರಾಗಿಸುವ ಕಾಮೆಡಿ ಎಂದು ತಿಳಕೊಂಡರೆ ,ಅಲ್ಲಿಗೆ ನಾವು ಪ್ರೇಕ್ಷಕರು ಪಡೆದದ್ದು ‘ಏನೂ ಇಲ್ಲ’ ಎಂದಷ್ಟೇ ಹೇಳಬೇಕಾಗುತ್ತದೆ. ಅಲ್ಲಿ -ರಂಗದಲ್ಲಿ, ಮತ್ತು ಇಲ್ಲಿ -ನಮ್ಮ ದಿನನಿತ್ಯದ ರಂಗಗಳಲ್ಲಿ ,’ಏನೋ ಇದೆ ‘ ಎಂದು ಕಿವಿ ಕಣ್ಣು ಕೊಟ್ಟರೆ ನಾಟಕ ನೋಡಿದ್ದು ಸಾರ್ಥಕ.

ನಾಟಕ ಪ್ರದರ್ಶನ ತುಂಬಾ ಲವಲವಿಕೆಯಿಂದ ಕೂಡಿತ್ತು.ನಟನಟಿಯರು ರಂಗದ ಮೇಲೆ ಅಷ್ಟೇ ಅಲ್ಲ,ನಮ್ಮ ಪ್ರೇಕ್ಷಕರ ನಡುವೆ ಓಡಾಡಿಕೊಂಡು ನಮ್ಮನ್ನೂ ನಾಟಕದ ಹೊರಗಿನವರು ಎಂದು ಅನ್ನಿಸದಂತೆ ಮಾಡಿದರು.ಸಂಜೆ ಏಳು ಗಂಟೆಗೆ ನಾಟಕ ಆರಂಭ ಆಯಿತು.ಸುಮಾರು ಏಳೂವರೆ ಕಳೆದಾಗ ಸಣ್ಣಗೆ ತುಂತುರು ಮಳೆಯ ಹನಿ ಬೀಳಲಾರಂಭಿಸಿತು.ಬಯಲಿನಲ್ಲಿ ಮಳೆಯಲ್ಲಿ ನಾವು ನಾಟಕ ನೋಡುವವರು.ಯಾರೂ ಎದ್ದು ಹೋಗಲಿಲ್ಲ.ನಾವು ಕೊಡೆ ತಂದಿರಲಿಲ್ಲ. ನಾಟಕದ ಪಾತ್ರಗಳ ಇಂಗ್ಲಿಶ್ ಸಂಭಾಷಣೆ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಮಾತುಗಳ ದನಿ ಮತ್ತು ಧ್ವನಿ ನಮ್ಮೆಲ್ಲರನ್ನೂ ತೋಯಿಸುತ್ತಿದ್ದುದರಿಂದ ಮಳೆಯ ಹನಿಗಳಿಗೆ ನಾವು ಅಂಜಲಿಲ್ಲ.ಎಂಟೂ ಕಾಲು ಗಂಟೆಗೆ ವಿರಾಮ ಸಾರಿದಾಗ ಗುಡುಗು ಮಳೆ ಜಾಸ್ತಿಯಾಯಿತು.ಆಶ್ರಯ ಪಡೆಯಲು ಪಕ್ಕದಲ್ಲಿ ಕಟ್ಟಡಗಳು ಇರಲಿಲ್ಲ .ಅಷ್ಟರಲ್ಲಿ ಒಂದು ಘೋಷಣೆ :’ಪ್ರೇಕ್ಷಕರಿಗೆ ರೈನ್ ಕೋಟ್ ಕೊಡಲಾಗುವುದು’ ಎಂದು.ನಾವು ಉಚಿತವಾಗಿ ತೆಳು ಪ್ಲಾಸ್ಟಿಕ್ ನ ಒಂದೊಂದು ರೈನ್ ಕೋಟ್ ಪಡಕೊಂಡೆವು.ಮತ್ತೆ ನಾಟಕ ಆರಂಭವಾಯಿತು.ಎಲ್ಲ ಪ್ರೇಕ್ಷಕರು ರೈನ್ ಕೋಟು ಧಾರಿಗಳಾಗಿ ,ನಾಟಕದ ಪಾತ್ರಗಳಂತೆ ಕಾಣಿಸುತ್ತಿದ್ದರು.ಮತ್ತೆ ಮುಂದುವರಿಯಿತು ವರುಣನ ಆರ್ಭಟ.ಜೋರಾದ ಗುಡುಗು ಮತ್ತು ಧಾರಾಕಾರ ಮಳೆ.ಆದರೆ ನಾಟಕದ ರಂಗವು ಒಂದು ದೊಡ್ಡ ಮರದ ಅಡಿಯಲ್ಲಿ ಇದ್ದುದರಿಂದ ನಟರು ಒದ್ದೆಯಾಗಲಿಲ್ಲ.ಅವರ ಮಾತು ಮತ್ತು ಅಭಿನಯದಲ್ಲಿ ಮಳೆಯ ಯಾವ ಆತಂಕದ ಕುರುಹೂ ಇರಲಿಲ್ಲ.ನಾವು ರೈನ್ ಕೋಟುಧಾರಿಗಳು ನಾಟಕದ ಪಾತ್ರಗಳೋ ಎನ್ನುವಂತೆ ‘ಏನೋ ಇದೆ’ ಎಂದು ಕೇಳುತ್ತಾ ನೋಡುತ್ತಾ ಹೋದೆವು.ನಾಯಕಿ ಹೆರೋ ಳ ಮದುವೆಯ ಸಿದ್ಧತೆ.ಆಗ ಅವಳು ‘ಮಳೆಯಲ್ಲಿ ಮದುಮಗಳು’ ಆದಳು. ನಾಟಕ ಮುಗಿದಾಗ ರೈನ್ ಕೋಟು ಇದ್ದರೂ ನಾವು ಸ್ವಲ್ಪ ಒದ್ದೆಯಾಗಿದ್ದೆವು.ಕಾಮೆಡಿ ಮತ್ತು ಟ್ರಾಜಿಡಿ ಒಟ್ಟಿಗೆ ಹೇಗೆ ಸಂಭವಿಸುತ್ತದೆ ಎನ್ನುವುದು ಆಗ ನಮಗೆ ನಿಜವಾಗಿ ಅನುಭವಕ್ಕೆ ಬಂತು.

‘ಡಾರ್ಕ್ ಕಾಮೆಡಿ’ಯಲ್ಲಿ ಏನೋ ಇದೆ, ‘ವೈಟ್ ಟ್ರಾಜೆಡಿ’ ಯಲ್ಲಿ ಏನೂ ಇಲ್ಲವೇ ?

 

‍ಲೇಖಕರು G

July 26, 2011

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Badarinath Palavalli

    ರೈರವರ ಈ ಬರಹ ಉಪಯುಕ್ತ. ಇಂತಹ ಬರಹಗಳು ನಮ್ಮನ್ನು ಆಸ್ಥೆಯಿಂದ ನೋಡಲೂ ಅರ್ಥೈಸಿಕೊಳ್ಳಲು ಸಹಕಾರಿ.

    ಪ್ರತಿಕ್ರಿಯೆ
  2. Dr. Basappa Y. Bangari 94483 77922

    It is a great pleasure to read Prof. Vivek Rai’s experience of theatre in Germany. He has created a strong itch to read Shakespears’s famous play “Much Ado About Nothing” for second time. I do expect Prof. Vivek Rai’s such experiences in future.

    ಪ್ರತಿಕ್ರಿಯೆ
  3. ಎ ಪಿ ಸುಬ್ರಹ್ಮಣ್ಯ೦

    ಸರ್, ಈ ನಾಟಕ ಕನ್ನಡದಲ್ಲಿ ಆಗಿದೆಯೇ, ಈಗ ಎಲ್ಲಾದರೂ ಪ್ರದರ್ಶನದಲ್ಲಿರುವುದು ತಿಳಿದಿದೆಯೇ ? ನಮ್ಮ ದೇಶ, ರಾಜ್ಯ, ತಾಲೂಕು, ಹಳ್ಳಿ,, ಹೀಗೆ ಪ್ರತಿ ಸ್ಥಳದಲ್ಲೂ “ಏನೋ ನಡೆಯುತ್ತದೆ ಎಂದು ಭಾಸವಾಗುತ್ತದೆ ,ಆದರೆ ಏನೂ ನಡೆಯುವುದಿಲ್ಲ .ಏನೂ ನಡೆಯುವುದಿಲ್ಲ ಎಂದು ಕಾಣಿಸುತ್ತದೆ ,ಆದರೆ ಏನೋ ನಡೆಯುತ್ತಿರುತ್ತದೆ” ನಡೆಯುತ್ತಿದೆಯಲ್ಲಾ, ಇದಕ್ಕೆ ಸ್ಥಳೀಯವಾಗಿ ವ್ಯಾಖ್ಯಾನ ಸಿಗಬೇಕು. ವ೦ದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: