ಕನ್ನಡಕ್ಕೆ: ಕೆ.ವಿ. ತಿರುಮಲೇಶ್
(ಮೂಲ ಇಂಗ್ಲಿಷ್: ಮ್ಯಾಥ್ಯೂ ಅರ್ನಾಲ್ಡ್)
ಉಳಿದವರು ನಮ್ಮ ಪ್ರಶ್ನೆಗೊಳಗಾಗುವರು. ನೀ ಮಾತ್ರ ಮುಕ್ತ.
ನಾವು ಮತ್ತೆ ಮತ್ತೆ ಕೇಳುತ್ತೇವೆ; ನೀನು ನಸುನಗುತ್ತೀ
ಅರಿವಿನಾಚೆಗಿನ ಅರಿವಾಗಿ ಇರುತ್ತೀ. ಯಾಕೆಂದರೆ ತಾರೆಗಳಿಗಷ್ಟೆ
ತನ್ನ ರಾಜಗಾಂಭೀರ್ಯವ ತೆರೆದು ತೋರಿಸುವ ಅತೀ ಉತ್ತುಂಗ
ಪರ್ವತ,ತನ್ನ ಭದ್ರಪಾದಗಳನ್ನು ಸಮುದ್ರದಲ್ಲಿ ನೆಟ್ಟು, ಸ್ವರ್ಗಾತಿಸ್ವರ್ಗವನು
ವಸತಿಗೃಹವಾಗಿಸಿ, ಮೋಡಮುಸುಕಿದ ತಳದ ಅಂಚನ್ನಷ್ಟೇ
ನಶ್ವರತೆಯ ವ್ಯರ್ಥ ಅನ್ವೇಷಣೆಗೆ ಬಿಟ್ಟುಕೊಡುತ್ತದೆ. ಮತ್ತು
ನಕ್ಷತ್ರಗಳನ್ನೂ ಸೂರ್ಯನ ಹೊನಲುಗಳನ್ನೂ ಬಲ್ಲವನಾಗಿದ್ದ ನೀನು
ಸ್ವಂತ ಕಲಿತವನು, ಸ್ವಂತ ಅರಿತವನು, ಸ್ವಂತ ಮಾನಿತನು,
ಸ್ವಂತ ರಕ್ಷಿತನು, ಭೂಮಿಯ ಮೇಲೆ ನಡೆದಿ,ಯಾರೂ ಊಹಿಸದೆ.
ಅದೇ ಚೆನ್ನಲ್ಲವೇ!ಅಮರ ಚೇತನ ಸಹಿಸಲೇಬೇಕಾದ ಸಕಲ
ನೋವುಗಳೂ, ಜರ್ಜರಗೊಳಿಸುವ ಸಕಲ ದೌರ್ಬಲ್ಯಗಳೂ,
ಬಗ್ಗಿಸುವ ಸಕಲ ದುಃಖಗಳೂತಮ್ಮ ಏಕೈಕದನಿಯನ್ನು ಕಂಡು-
ಕೊಳ್ಳುವುವು ಆ ನಿನ್ನ ವಿಜಯೀ ಲಲಾಟದಲ್ಲಿ.







sonnet..chennaagide..!!