-ವಿಜಯಶ್ರೀ ಹಾಲಾಡಿ
ಶೋಕ ಕಾವ್ಯ!
ಹೊಕ್ಕುಳಿನ ಆಳದಿಂದ
ಹೊರಟ ನೋವೊಂದು
ನರಮಂಡಲದವರೆಗೆ ದಾಟಿ
ಚೆಲುವಿನ ಸಂಜೆಯನ್ನು
ಬರಿದುಗೊಳಿಸಿ
ಶೂನ್ಯ ಆವರಿಸುತ್ತದೆ!
ಮೈ ಬಿಸಿಯಾಗಿ
ಮನಸು ಭಾರವಾಗಿ
ತುಟಿ ನಡುಗಿ
ಊಟ ತಿಂಡಿ ನಿದ್ದೆ
ಸತಾಯಿಸಿ
ಆಗಸ ಬೋರಲು ಬಿದ್ದು
ಕಂಬನಿ ಮಳೆ
ಸುರಿಯುತ್ತದೆ
ಖಾಲಿ ಖಾಲಿ…
ಬೆಟ್ಟ ಗುಡ್ಡ ಕಾಡು
ಹಸಿರು ಹೂ ನದಿ ನೀರು
ಯಾವುದೂ ಏನೂ
ಬೇಕಾಗದೆ
ಹುಚ್ಚು ಹೆಚ್ಚಿಕೊಂಡಂತೆ
ಹಿಂಸೆ ವ್ಯಾಪಿಸುತ್ತದೆ!
ಅವರು ಇವರು
ಮಾತು- ಕತೆಯಾಡುವವರು
ಅಳುವವರು ನಗುವವರು;
ಜಗ ಸಿಟ್ಟು ತರಿಸಿ
ಬಾಗಿಲು ಮುಚ್ಚಿ
ಕೋಣೆಯೊಳಗೆ ಹೊಕ್ಕು ಕೂತು
ವೇದನೆಯೇ ಉಸಿರಾಗುತ್ತದೆ!
……
ನೀವೆಣಿಸಿದಂತೆ
ಇದು ಮೇಘದೂತದ
ವಿರಹವಲ್ಲ
ದುಷ್ಯಂತನ ವಿದ್ರೋಹವೂ
ಅಲ್ಲ
ಮೆನೋಪಾಸ್!
ಅವಳು ಅನುಭವಿಸುವ
ಶೋಕ ಕಾವ್ಯ!






0 Comments