-ಕಮಲಾಕರ ಕಡವೆ
೧ ತಿಪ್ಪೆಯ ಗುಡ್ಡ ನಾಲಿಗೆ ಚಾಚಿದಾಗ
ಹುಬ್ಬಳ್ಳಿಯ ಹೊರವಲಯದಲ್ಲಿ
ಕಾರವಾರ ರಸ್ತೆ ತೊಡಗುವಲ್ಲಿ,
ಮುಂಜಾನೆ ಮಂಜು ಕವಿದಂತಿದೆ.
ರಸ್ತೆಯ ತಿರುವು ದಾಟಿದರೆ,
ಅದು ಮಂಜಲ್ಲ.
ಉಸಿರಾಡುತ್ತಿರುವ ತಿಪ್ಪೆಯ ಗುಡ್ಡ.
ಮಳೆಯಲ್ಲಿ ನೆನೆದ ಹಳೆಯ ದಿನಪತ್ರಿಕೆಗಳು,
ತರಕಾರಿ ಸಿಪ್ಪೆಗಳು, ಆಸ್ಪತ್ರೆಯ ಕೈಗವಸುಗಳು,
ಮುರುಕು ಗೊಂಬೆ, ಗಂಟು ಹಾಕಿದ ನೀಲಿ ಕ್ಯಾರಿಬ್ಯಾಗುಗಳು.
ನಾಯಿಯೊಂದು ಗುಡ್ಡವನ್ನೇರುತ್ತದೆ,
ಕಾಗೆಯೊಂದು ಹಿಂಬಾಲಿಸುತ್ತದೆ.
ಒದ್ದೆ ದಿನಪತ್ರಿಕೆಯ ಕೆಳಗೆ ಕಣ್ಣಿಗೆ ಕಾಣದ ಏನೋ ಚಲನೆ.
ಕೋಲು ಹಿಡಿದ ಮಹಿಳೆಯೊಬ್ಬಳು
ಲೋಹದಿಂದ ಗಾಜನ್ನು, ಕಾಗದದಿಂದ ಪ್ಲಾಸ್ಟಿಕನ್ನು
ಬೇರ್ಪಡಿಸುತ್ತಿದ್ದಾಳೆ.
ಎಂದೋ ಸಿಹಿ ತಾಜಾತನದ ಭರವಸೆ ಕೊಡುತ್ತಿದ್ದ
ಹಸಿರು ಮತ್ತು ಕಂದು ಬಣ್ಣದ ಬಾಟಲಿಗಳಲ್ಲಿ
ಈಗ ಮಳೆಯಷ್ಟೇ ತುಂಬಿದೆ.
ಮಳೆ ಎಲ್ಲದರೊಳಗೆ ಹೊಕ್ಕುತ್ತದೆ;
ಎಸೆದ ಹಾಸಿಗೆಯೊಳಗೆ
ಪಾದವಿಲ್ಲದ ಬೂಟಿನೊಳಗೆ.
ಮಧ್ಯಾಹ್ನದ ಹೊತ್ತಿಗೆ ಬೆಟ್ಟದ ಆಕಾರ ಬದಲಾಗುತ್ತದೆ;
ತಳದಲ್ಲಿ ಹೂತುಹೋದ ತರಕಾರಿ ಮೆತ್ತಗಾಗಿ,
ಒಳಗೆ ಹುಳ ಉಬ್ಬಿ ದಪ್ಪಗಾಗುತ್ತದೆ.
ಹಕ್ಕಿಯೊಂದು ಆ ಹುಳುವನ್ನು ತನ್ನ ಮರಿಗಳಿಗೆ ಕೊಂಡೊಯ್ಯುತ್ತದೆ,
ಮರಿಗಳು ಹುಬ್ಬಳ್ಳಿಯ ಮೇಲೆ ಹಾರಾಡುತ್ತವೆ.
ಕೆಳಗೆ ನಗರವು ಹೊಸ ಕ್ಯಾರಿಬ್ಯಾಗುಗಳನ್ನು ಹೊಸ ವಿಲೇವಾರಿ
ಸೂಚನೆಗಳೊಂದಿಗೆ ಮರುಸೃಷ್ಟಿಸಿಕೊಳ್ಳುತ್ತಿದೆ.
ಪ್ಲಾಸ್ಟಿಕ್ ಚಮಚ ಹಾಗೂ ಬ್ಯಾಟರಿಗಳು ದೀರ್ಘಕಾಲ ಕಾಯುತ್ತವೆ,
ಒಣಗಿದ ಮರದ ಬಳಿ ರೆಫ್ರಿಜರೇಟರ್ ಗೆ ತುಕ್ಕು ಹಿಡಿಯುತ್ತಿದೆ.
ಬೇಲಿಯ ಬಳಿ ಮಹಿಳೆಗೆ ಒಂದು ಪುಟ್ಟ
ಕೆಂಪು ಬೂಟು ಸಿಗುತ್ತದೆ.
ಅದನ್ನು ಕೋಲಿನಿಂದ ಎತ್ತುತ್ತ
ಅದನ್ನು ಹಾಕಿಕೊಂಡು ಓಡಿದ, ಬಿದ್ದ
ಮಗುವನ್ನು ಅವಳು ಕಲ್ಪಿಸಿಕೊಳ್ಳುತ್ತಾಳೆ.
ಪಕ್ಕಕ್ಕಿಡುತ್ತಾಳೆ ಬೂಟನ್ನು
ಅಕಾರಣ.
ಹಾಗಾಗಿಯೇ ಹಾಗೆ ಮಾಡುತ್ತಾಳೆ.
ಗುಡ್ಡ ಚಲಿಸುತ್ತದೆ;
ಬೇಗೆಯಾಳದಿಂದ ದಪ್ಪನೆಯ, ಕಪ್ಪನೆಯ ನಾಲಿಗೆಯನ್ನು ಹೊರಚಾಚಿ
ನಗರದ ಕರುಳನ್ನು ಮೆಲ್ಲುತ್ತದೆ.
ಟೈರಿನ ಕೆಳಗೆ ಕಾಯುತ್ತಿರುವ ಪಠ್ಯಪುಸ್ತಕದಲ್ಲಿ
“ನನ್ನ ನೆಚ್ಚಿನ ಪ್ರಾಣಿ ಹುಲಿ”
ಎನ್ನುವ ವಾಕ್ಯವನ್ನು ಮಳೆ ಅರೆತಿಂದಿದೆ.
ಹುಲಿಯ ಪಟ್ಟೆಗಳು ಕರಗಿ ಮಣ್ಣಾಗುತ್ತದೆ,
ಆ ಮಣ್ಣು ಚರಂಡಿ ಮೂಲಕ ನದಿಗೆ ಹರಿದು
ಸಮುದ್ರ ಸೇರುತ್ತದೆ.
ತನಗೆ ಒಂದು ನಗರವೇ ಉಡುಗೊರೆಯಾಗಿ ಸಿಕ್ಕಿದೆ
ಎಂಬುದು ಆ ಸಮುದ್ರಕ್ಕೆ ತಿಳಿದಿರುವುದಿಲ್ಲ.
**
೨ ಮಳೆ ಗುಳುಂ ಮಾಡಿದ ನಗರ
ನಗರದಲ್ಲಿ ಮಳೆ ಸುರಿದು ಸುರಿದು
ಕಾಣೆಯಾಗುತ್ತದೆ ಚರಂಡಿಯೊಳಗೆ,
ಪೈಪುಗಳಲ್ಲಿ, ರಸ್ತೆಯಡಿಗೆ.
ನಗರದ ಕೆರೆಗಳ ಬೆನ್ನ ಮೇಲೆ
ಎದ್ದು ನಿಂತಿವೆ ಗಗನಚುಂಬಿ ಸೌಧಗಳು.
ಜನ ಹಿಂದೆ ನೀರು ಸೇದುತ್ತಿದ್ದ ಬಾವಿಯ ಮೇಲೆ
ನಾಲ್ಕು ಕಾರುಗಳನ್ನು ಪಾರ್ಕ್ ಮಾಡಲಾಗಿದೆ.
ಆದರೆ, ನೀರಿನ್ನೂ ಮರೆತಿಲ್ಲ ಹಳೆಯ ದಾರಿಗಳನ್ನು.
ಕಾಂಕ್ರೀಟ್‌ಗೆ ಅಪ್ಪಳಿಸಿ,
ಗೋಡೆಯುದ್ದಕ್ಕೂ ಹರಿಯುತ್ತದೆ, ಬಿರುಕೊಂದನ್ನು ಹುಡುಕುತ್ತ.
ಒಳನುಗ್ಗುತ್ತದೆ.
ಬೆಳಗಿನ ಜಾವ ಮೂರು ಗಂಟೆಗೆ
ಮಲಗುವ ಕೋಣೆಯ ಕೆಳಗೆಲ್ಲೋ ನೀರಿನ ಸದ್ದು ಕೇಳಿ
ಎಚ್ಚರಾಗುತ್ತಾನೆ ಟೌನ್ ಪ್ಲಾನರ್.
ನಿಶ್ಚಲ ಮಲಗಿ ಆಲಿಸುತ್ತಾನೆ. ಹೆಂಡತಿಗೂ ಎಚ್ಚರಾಗುತ್ತದೆ.
ಇಬ್ಬರೂ ಆಲಿಸುತ್ತಾರೆ.
ಅದೇ ಸದ್ದು ಮತ್ತೆ: ಪಾತಾಳದಲ್ಲಿ ನಿಧಾನ ಗುಡುಗು,
ಕಲ್ಲು ಕಲ್ಲು ಕಟೆಯುವ ಸದ್ದು,
ಸಾವಿರ ಹೆಗ್ಗಣಗಳು ಸುರಂಗ ತೋಡುತ್ತಿರುವಂತೆ.
ಬೆಳಗ್ಗೆ ಇಂಜಿನಿಯರ್‌ಗಳು ಬರುತ್ತಾರೆ, ಬಿಚ್ಚಿಡುತ್ತಾರೆ
ಬ್ಲೂಪ್ರಿಂಟ್‌ಗಳನ್ನು, ತೋರಿಸುತ್ತಾರೆ ಕೊಳವೆಗಳನ್ನು, ಒಣಗಿದ ಗ್ರಿಡ್ ನ್ನು,
ಸೀಲ್ ಮಾಡಿದ ಅಡಿಪಾಯಗಳನ್ನು, ಒಪ್ಪಿಗೆಯ ಮುದ್ರೆಗಳನ್ನು,
ಸಹಿಗಳನ್ನು.
ಅವನು ತಲೆಯಾಡಿಸುತ್ತಾನೆ.
ಆ ರಾತ್ರಿ ಮತ್ತೆ ಮರಳುತ್ತದೆ ಮಳೆ.
ಕಟ್ಟಡದ ಕೆಳಗೆ, ಕತ್ತಲಲ್ಲಿ ಹೆಗ್ಗಣಗಳು ಚಲಿಸುತ್ತವೆ.
ದಡಗಳೇ ಇಲ್ಲದ ನದಿಯೊಂದರ
ಕನಸು ಕಾಣುತ್ತಾನೆ ಟೌನ್ ಪ್ಲಾನರ್.
ಅವನ ತಲೆಯ ಕೆಳಗೆ ಹರಿದಂತೆ.
ಬಾಗಿಲುಗಳನ್ನು, ಬೇರುಗಳನ್ನು, ಹಳೆಯ ನಾಣ್ಯಗಳನ್ನು, ಹಿತ್ತಾಳೆ ಪಾತ್ರೆಗಳನ್ನು,
ಪಾಟಿಚೀಲಗಳನ್ನು ಕೊಚ್ಚಿಕೊಂಡು ಹೋದಂತೆ.
ಎಚ್ಚರಾಗಿ ನೋಡುತ್ತಾನೆ,
ಪಾದಗಳು ನೆನೆದಿವೆ.






0 Comments