ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಶುದ್ಧವೆಂದರೆ ಮೊದಲು ಕೈಗೆಟುಕದಿರುವುದೇ?..'

ಗೋಡೆ

ಮೋಹನ್ ವಿ ಕೊಳ್ಳೇಗಾಲ

ಆ ಗೋಡೆಯ ಆ ಬದಿಗೆ ದೇವರಮನೆ
ಈ ಬದಿಗೆ ಬಚ್ಚಲ ಮನೆ
ಒಂದು ಕಡೆ ಕುಂಕುಮಾರ್ಚನೆ
ಅರಿಶಿಣವನುಜ್ಜಿಕೊಂಡು
ದೇವರ ಪಟವೆಲ್ಲಾ ಸಿಕ್ಕಿಸಿಕೊಂಡಿದೆ
ಇನ್ನೊಂದೆಡೆ ಬರಿ ಹೊಲಸು
ಕ್ಷಮಿಸಿ, ಹೊಲಸೆಂದರೇನು?
ಹೊಲಸೆಂದವರಾರು?
ಹುಟ್ಟಿನಿಂದ ಬಂದ ಮೇಲೆ ಅದೂ ಕೃಪೆಯೆ
ಹೇಳಿದ ನಾಲಗೆ ಹೊಲಸಷ್ಟೆ
ಅದೇನೇ ಇರಲಿ ಬಚ್ಚಲ ಮನೆಯ
ಗೋಡೆಯೆದೆಗೆ ದಿನವೂ ಜಳಕ
ತಣ್ಣೀರು ಬಿಸಿನೀರನ್ನೆರಚಿಕೊಳ್ಳುವ ಪುಳಕ
ಅಜ್ಜಿ ಹೇಳಿದ್ದಳು ‘ದೇವರ ಮನೆಯದು ಶುದ್ಧಗೋಡೆಯಂತೆ’
ಶುದ್ಧವೆಂದರೆ ಮೊದಲು ಕೈಗೆಟುಕದಿರುವುದೇ?
ಬಂದವರೆಲ್ಲಾ ಮೊದಲು ಹೆಜ್ಜೆ ಇಟ್ಟದ್ದು
ಬಚ್ಚಲ ಮನೆಗೆ ಶುದ್ಧವಾಗಲು!
ಕೈಕಾಲಿಗೆ ಮೆತ್ತಿಕೊಂಡ ಪಾಪವೆಲ್ಲಾ ಇಲ್ಲೇ ಅಳಿದು
ಅಲ್ಲಿಗೆ ಹೋದಮೇಲೆ ಆ ಗೋಡೆ ಪರಿಶುದ್ಧ
ಇಲ್ಲದಿದ್ದರೆ ಮೈಲಿಗೆ
ಉದರಬಾಧೆಗೆ ದೇವರೂ ಅಸಹಾಯಕ
ಮತ್ತದೇ ಬಚ್ಚಲ ಗೋಡೆ ನಗುವುದು
ಇದೇ ಗೋಡೆ ಸಾಗಿ ಹಿಗ್ಗಿಕೊಂಡಿತ್ತು ನಿದ್ದೆಮನೆಗೆ
ಅಲ್ಲೋ ಬರೀ ಎಡವಟ್ಟು ಮೈಥುನಗಳು
ಗೋಡೆ ಮೇಲೆ ಅಸ್ಪಷ್ಟ ವೀರ್ಯ
ಒಳಗೊಳಗೆ ಅತ್ತ ಒಂದಷ್ಟು ಹೆಣ್ಣು ಮುಖಗಳು
ಜಾತಿ ಧರ್ಮದಿಂದ ಅಸ್ಪೃಶ್ಯಗೊಳಿಸಿ
ಒಂದೇ ಜಾತಿ ಬೆವರ ಹನಿಸಿ
ಅವರನ್ನೇ ಹಾಸಿಗೆ ಮೇಲೆ ಕೂರಿಸಿಕೊಂಡಿದ್ದರು
ಹೊಟ್ಟೆಯೊಳಗೆ ಬೆಳೆದಮೂರ್ತ ಪಿಂಡ
ಹೊರಗಿದ್ದ ಬಚ್ಚಲ ಮನೆಯಿಂದ ಬಂದಿದ್ದ ಗೋಡೆ
ಅರಿಶಿಣವನುಜ್ಜಿಕೊಂಡು ಪುನೀತವಾಗಿ
ನಿದ್ದೆಮನೆಯ ಕ್ರೌರ್ಯ ಕಂಡು
ಮೈಥುನಕ್ಕೆ ಎಲ್ಲ ಮರೆತ ದಾರ್ಷ್ಯ ನೋಡಿ
ಚಾಚಿಕೊಂಡಿತ್ತು ಹಿತ್ತಲಿಗೆ
ಹಿತ್ತಲಪ್ರಾಣಿಗಳನ್ನೂ ಬಿಡಲೊಲ್ಲದು
ಶುದ್ಧಾಶುದ್ಧ ಹೊಲಸೊಳಿತು ಬಂದದ್ದು ಜೀವಭಾವದಿಂದಲ್ಲ
ಒಳ್ಳೆಯದಂದುಕೊಂಡ ಜನಗಳಿಗೆ ಎದೆಕೊಟ್ಟದ್ದು
ಕೆಟ್ಟದಾಗಿಹೋಯಿತು
ಅರಿಶಿಣ ಕುಂಕುಮ ಗೋಡೆ ಬದಿಯ ಶುದ್ಧದಿಂದ
ಈ ಬದಿ ಅಶುದ್ಧವಾಗಿ ಮನೆಯ ಹೊರಗೆ ಕುಳಿತಿತು
ಶುದ್ಧಗೊಳಿಸುವ ಕಾಯಕ ಹೊತ್ತು!
ಶುದ್ಧಾಶುದ್ಧ ಶ್ರೇಷ್ಟ ನಿಕೃಷ್ಟ ಅಸ್ಪೃಶ್ಯ ಭಾವಗಳಿಗೆ
ಈ ಗೋಡೆಯೇ ಕಾರಣ!

‍ಲೇಖಕರು avadhi

2 March, 2013

5 Comments

  1. radha s talikatte

    kavitheya ending superr

  2. -ರವಿ ಮೂರ್ನಾಡು

    ಕವಿತೆಯಲ್ಲಿ ಆಚರಣೆ , ಮನುಷ್ಯ ಶುದ್ದತೆ ಮತ್ತು ಮಾನವ ದೌರ್ಬಲ್ಯಗಳ ಅರಗಿಸಿಕೊಳ್ಳಲಾಗದ ಸ್ಪಷ್ಟ ಸಂದೇಶವಿದೆ. ನಿಮ್ಮ ಚಿಂತನೆ ಖುಷಿ ಆಯಿತು. ಆದರೆ ಸಾಲು ಸಾಲಿಗೆ ಓದುಗನನ್ನು ಬೆಚ್ಚಿ ಬೀಳಿಸುವ ಅಥವಾ ಸಲಿಸಾಗಿ ಚಿಂತನೆಗೆ ಅಚ್ಚುವ ನಿರೂಪಣೆಯ ಅಗತ್ಯವಿತ್ತು. ಪ್ರತಿಮೆಯ ಆದಿಗೆ ಕಣ್ಣಾಯಿಸಿದಾಗ ಮುಂದಿನ ಹಂತಕ್ಕೆ ಆಚನಾಕ್ಕಾಗಿ ಕುತೂಹಲ ಮೂಡಿಸುವ ಆಸೆ ಹುಟ್ಟಿಸಬೇಕು. ಅಥವ ಅಸಾಮಾನ್ಯ ಪದ, ಕಲ್ಪನೆ, ಸಂವೇಧನೆಯ ಕೊರೆತ ಇರಲೇಬೇಕು. ಆಗ ಕಾವ್ಯ ತನ್ನಿಂತಾನೆ ಧ್ವನಿಸುತ್ತದೆ. ಇದು ಪ್ರಕಟಿಸಿದ ಮಾತ್ರಕ್ಕೆ ಮುಗಿಯಿತು ಎಂದು ತಿಳಿದುಕೊಳ್ಳಬೇಡಿ. ನಿಮ್ಮ ಅಸಾಮಾನ್ಯ ತಂತ್ರಗಾರಿಕೆಗೆ ಈ ಕವಿತೆಯಲ್ಲಿ ಕೆಲವಷ್ಟು ಜಾಗ ಖಾಲಿ ಬಿದ್ದಿವೆ. ಅದನ್ನು ತುಂಬಿಸಬೇಕಾಗಿ ಪ್ರಾರ್ಥನೆ.

    • Mohan V Kollegal

      ಸಲಹೆಗೆ ವಂದನೆಗಳು ರವಿಯಣ್ಣ… ಮುಂದಿನ ಬಾರಿ ನಿಮ್ಮ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇನೆ. 🙂

  3. Raju Shankar

    Nice Mohan. Kavite kanuva gode bagge all, kanada gode bagge. chennagidhe…

  4. Beluru Raghunaandan

    Kavite chennagide mohan

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading