'ಸಿಟಿ ಬಸ್ಸುಗಳಲ್ಲಿ' ಎಂದಿದ್ದಕ್ಕೆ ಅವರು ಗೊಳ್ಳನೆ ನಕ್ಕಿದ್ದರು..

ಸಿಟಿ ಬಸ್ಸು – ಸ್ಫೂರ್ತಿಯ ಸೆಲೆ!

~ಎಸ್.ಜಿ.ಶಿವಶಂಕರ್

ಒಮ್ಮೆ ನನ್ನ ಹಿತಶತೃವೊಬ್ಬರು ನನ್ನನ್ನು ಕೆಣಕಿದ್ದರು  ‘ನಿಮಗೆ ಬರೆಯಲು ಸ್ಫೂರ್ತಿ ಎಲ್ಲಿ ಬರುತ್ತದೆ?’ ಎಂದು ಪ್ರಶ್ನಿಸಿದ್ದರು. ‘ಸಿಟಿ ಬಸ್ಸುಗಳಲ್ಲಿ’ ಎಂದಿದ್ದಕ್ಕೆ ಅವರು ಗೊಳ್ಳನೆ ನಕ್ಕಿದ್ದರು – ನನ್ನನ್ನು ಅಣಕಿಸಲೆಂಬಂತೆ! ಅದರಿಂದ ನನಗೇನು ಅವಮಾನವಾಗಲಿಲ್ಲ! ಲೇಖಕನಾಗುವ ಪ್ರಕ್ರಿಯೆಯಲ್ಲಿ ಮಾನ ಅವಮಾನಗಳ ಹಂತವನ್ನೇ ಬಹಳ ಹಿಂದೆಯೇ ದಾಟಿ ಬಂದಿದ್ದೇನೆ!

ಪ್ರತಿ ಬಾರಿಯೂ ಸಂಪಾದಕರಿಂದ ಬರುವ ವಿಷಾದದ ಪತ್ರಗಳನ್ನು ‘ಅವಮಾನ’ ಎಂದು ಭಾವಿಸಿದ್ದರೆ ನಾನು ಅದೆಷ್ಟೋ ವರ್ಷಗಳ ಹಿಂದೆಯೇ ಇತಿಹಾಸದ ಪುಟ ಸೇರಬೇಕಿತ್ತು! ಆಗ ಯಾರಾದರೂ ಅಪ್ಪಿ ತಪ್ಪಿ ಇಂತಾ ಲೇಖಕರು ನಿಧನರಾದರು ಎಂದು ವಿಷಾದದ ಸುದ್ದಿಯನ್ನು ಕನಿಷ್ಠ ಸ್ಥಳೀಯ ಪತ್ರಿಕೆಗಳಲ್ಲಾದರೂ ಹಾಕುತ್ತಿದ್ದರೋ ಇಲ್ಲವೋ ಹೇಳಲಾಗದು.ನನ್ನ ಸ್ನೇಹಿತರಿಗೆ ನಾನು ಹೇಳಿದ್ದರಲ್ಲಿ  ವ್ಯಂಗ್ಯವಾಗಲೀ, ಸುಳ್ಳಾಗಲೀ ಇರಲಿಲ್ಲ! ಬದಲಿಗೆ ಅದು ಅಕ್ಷರಶಃ ಸತ್ಯವಾಗಿತ್ತು!

ಜೀವನ ಹೇಗೆ ವೈವಿಧ್ಯವೋ ಹಾಗೆಯೇ ಸ್ಫೂರ್ತಿಯ ತಾಣಗಳೂ ವೈವಿದ್ಯ!  ಸೂರ್ಯೋದಯ  ಸೂರ್ಯಾಸ್ತಮ  ರಮ್ಯ   ಪರಿಸರ, ಏಕಾಂತ, ಪ್ರೇಮ, ಶೋಕ-ಮುಂತಾದುವು ಕವಿಗಳಿಗೆ, ಲೇಖಕರಿಗೆ ಸ್ಫೂರ್ತಿಯ ತಾಣಗಳಂತೆ. ಇನ್ನು ಕೆಲವರಿಗೆ ಐಡಿಯಾಗಳು ಅಚಾನಕ್ ಬರುತ್ತವಂತೆ! ಟಾಯ್ಲೆಟ್ಟಿನಲ್ಲಿ, ಸ್ನಾನದ ಮನೆಗಳಲ್ಲಿ ಹೀಗೆ ಎಲ್ಲಿಲ್ಲಿಯೋ ಸ್ಫೂರ್ತಿ ಮತ್ತು ಐಡಿಯಾಗಳು ಹೊಳೆಯುತ್ತವೆಯಂತೆ  ಆರ್ಕಿಮಿಡಿಸನಿಗೆ  ಸ್ನಾನದ ತೊಟ್ಟಿಯಲ್ಲಿಯೇ ರಾಜನ ಕಿರೀಟದಲ್ಲಿನ ಕಲಬೆರೆಕೆ ಕಂಡು ಹಿಡಿಯುವ ಉಪಾಯ ಹೊಳೆದು ‘ಯುರೇಕಾ..ಯುರೇಕಾ..’ ಎಂದು ಸಂಭ್ರಮದಿಂದ ಬೆತ್ತಲೆಯಾಗಿಯೇ ಸ್ನಾನದ ಮನೆಯಿಂದ ಓಡಿ ಬಂದನಂತೆ!

ಈ ಕತೆಯನ್ನು ಇಡೀ ಜಗತ್ತೇ ಓದಿದೆ, ಸಣ್ಣ ಮಕ್ಕಳೂ ಕೂಡ ಓದಿ ಇಲ್ಲವೇ ಕೇಳಿ, ಓದಿ ಮುಸಿಮುಸಿ ನಕ್ಕಿದ್ದಾರೆ! ಹೀಗಿರುವಾಗ ನನ್ನ ಸ್ಫೂರ್ತಿಯ ತಾಣವನ್ನೇಕೆ ಕನಿಷ್ಠ ಎಂದು ನನ್ನ ಮಿತ್ರರು ಭಾವಿಸಿದರು ಎಂದು ನನಗಿನ್ನೂ ಅರ್ಥವಾಗಿಲ್ಲ! ಹೋಗಲಿ ನೀವಾದರೂ ನನ್ನ ಮಾತನ್ನು ಒಪ್ಪುವಿರಿ ಎಂಬ ಭರವಸೆಯಿಂದಲೇ ಲೇಖನವನ್ನು ಮುಂದುವರಿಸುವೆ.

ಸಿಟಿ ಬಸ್ಸುಗಳಲ್ಲಿ ನನಗೆ ಬದುಕಿನ ವಿವಿಧ ಸ್ತರಗಳ ಜನರ ವಿಭಿನ್ನ ರುಚಿಗಳು, ಅಭಿರುಚಿಗಳು, ಶುಚಿಗಳು, ಕಚಗುಳಿಗಳು ತೆರೆದುಕೊಳ್ಳುತ್ತವೆ. ಸಭ್ಯ ಸಜ್ಜನರಿಂದ ಹಿಡಿದು, ದುರ್ಜನ, ದುರ್ಗುಣಿಗಳು, ಸಾಮಾನ್ಯ ಜನರು, ಅಸಮಾನ್ಯ ಜನರು, ವಿವಿಧ ವೃತ್ತಿಯ ಜನರು, ವಿವಿಧ ಆಕೃತಿಯ ಜನರು ಕಾಣಸಿಗುತ್ತಾರೆ ಎಂದರೆ ಅದರಲ್ಲಿ ಹೊಸತೇನೂ ಇಲ ಎಂದು ನಿಮಗನ್ನಿಸುವುದು ಸಹಜ. ಇವರ ಜೊತೆಗೆ ವಿದ್ಯಾರ್ಥಿಗಳು, ಪಡ್ಡೆಗಳು, ಶೋಡಷಿಯರು, ಪಿಂಚಿಣಿದಾರರು, ಗೃಹಿಣಿಯರು, ಕೆಲಸಕ್ಕೆ ಧಾವಂತಪಡುವ ಉದ್ಯೋಗಿಗಳು, ನಿರಾಳರಾಗಿರುವ ನಿರುದ್ಯೋಗಿಗಳು-ಹೀಗೆ ಪಟ್ಟಿಯನ್ನು ದೊಡ್ಡದು ಮಾಡುವ ಜನರು ಕಾಣಸಿಗುತ್ತಾರೆ.

ಸಿಟಿ ಬಸ್ಸಿಗಳಲ್ಲ್ಲಿ ನನಗೆ ವಿಶ್ವ ದರ್ಶನವಾಗುತ್ತದೆ! ಈ ಕಾರಣಕ್ಕೇ ಸಿಟಿ ಬಸ್ಸುಗಳೇ ನನ್ನ ಪ್ರಿಯವಾದ ಸ್ಫೂರ್ತಿಯ ತಾಣಗಳು! ನನಗೆ ಅತ್ಯಂತ ಪ್ರಿಯವಾದ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಸುವುದಕ್ಕೆ ನನ್ನ ಮನೆಯವರಿಂದ ವ್ಯಾಪಕವಾದ ವಿರೋಧವಿದೆ. ಕೆಲವೊಮ್ಮೆ ಉಗ್ರ ಪ್ರತಿಭಟನೆಯನ್ನೂ ಮಾಡಿದ್ದಾರೆ. ನನ್ನ ನೆರೆಯವರು ನನ್ನನ್ನು ‘ಕಂಜೂಸ್’ ಎಂದು ಕರೆಯುತ್ತಾರೆ. ಕಾರಣ ಮನೆಯಲ್ಲಿ ಎರಡು ವಾಹನಗಳಿವೆ. ಮೊದಲನೆಯದು ಎಪ್ಪತ್ತರ ದಶಕದ ಫಿಯಟ್ ಕಾರು! ಅದು ನಾನು ಕಾರ್ಖಾನೆಯಲ್ಲಿ ಉದ್ಯೋಗಲ್ಲಿದ್ದಾಗ ಕೊಂಡಿದ್ದು! ಕಾರು ಹೊಂದಿರುವ ಇಂಜಿನಿಯರುಗಳಿಗೆ ಅಲೋಯನ್ಸ್ ಕೊಡುತ್ತಿದ್ದ ಕಾರಣಕ್ಕೆ ಕೊಂಡಿದ್ದು.

ಅದನ್ನು ಅಲೋಯನ್ಸ್ ಕಾರು ಎಂದೇ ಕಾರ್ಖಾನೆಯವರು ಕರೆಯುತ್ತಿದ್ದುದು. ಅದರದ್ದು ರಾವಣನ ಹೊಟ್ಟೆ! ಲೀಟರು ಪೇಟ್ರೋಲಿಗೆ ಎಂಟು ಕೀಲೋಮೀಟರು ಕ್ರಮಿಸಿದರೆ ಹೆಚ್ಚು! ಅದಕ್ಕೇನಾದರೂ ಕಾಯಿಲೆ ಕಸಾಲೆ ಇದ್ದರಂತೂ ಸಂಕಟಪಡುತ್ತಾ ಐದು ಕಿಲೋಮೀಟರಿಗೆ ಸುಸ್ತಾಗಿಬಿಡುತ್ತದೆ! ಇದರ ಬಗೆಗೆ ನನಗೇನೂ ಮೋಹವಿಲ್ಲ! ಅದನ್ನು ಮಾರಿಬಿಡೋಣ ಎಂದರೆ ಅದಕ್ಕೆ ಈಗ ಸಿಗುವ ಬೆಲೆ ಕೇವಲ ಹತ್ತು ಸಾವಿರವಂತೆ! ಇನ್ನು ಎರಡೆನೆಯ ವಾಹನವೆಂದರೆ ಸ್ಕೂಟರು.

ಅದು ‘ಹಮಾರಾ ಬಜಾಜ್’! ಇದನ್ನು ಸತತ ಮೂವತ್ತು ವರ್ಷ ಒಂದೇ ಸಮನೆ ಓಡಿಸಿದ್ದೇನೆ. ಒಂದು ಕಾಲದಲ್ಲಿ ನನ್ನ ಸಂಸಾರವೇ  ಅದರಲ್ಲಿ ಪ್ರಯಾಣಿಸುತ್ತಿತ್ತು. ನಗರದ ಘೋಷಿತ ಮತ್ತು ಅಘೋಷಿತ ರೋಡು ಹಂಪುಗಳ ಮೇಲೆ ಸ್ಕೂಟರನ್ನು ಹತ್ತಿ ಇಳಿಸಿದ್ದರಿಂದ ಅದರದ್ದೂ ಮತ್ತು ನನ್ನದೂ ಸೊಂಟ ಮುರಿದಿದೆ. ಈಗ ದಿನದ ಇಪ್ಪತ್ನಾಲ್ಕು ಗಂಟೆಯೂ ಬೆನ್ನು ನೋವು ನನ್ನನ್ನು ತನ್ನ ಮಡಿಲಲ್ಲಿ ಮಲಗಿಸಿಕೊಂಡು ಲಾಲಿ ಹಾಡುತ್ತಿದೆ.

ಅದನ್ನಾದರೂ ಮಾರೋಣವೆಂದರೆ ಅದರ ಮಾರುಕಟ್ಟೆಯ ಬೆಲೆ ಕೇವಲ ಎರಡು ಸಾವಿರವಂತೆ! ಅದರ ಬೆಲೆಗೆ ನನ್ನ ಮೊಮ್ಮಗನಿಗೆ ಒಂದು ಸೈಕಲ್ಲೂ ಬರುವುದಿಲ್ಲ!ನನ್ನ ಒಡೆತನದಲ್ಲಿರುವ ಈ ಎರಡೂ ವಾಹನಗಳನ್ನು ನಾನು ಸುತಾರಾಂ ಇಷ್ಟಪಡುತ್ತಿಲ್ಲ! ಈ ಕಾರಣಗಳಿಂದಾಗಿ ಸಿಟಿ ಬಸ್ಸುಗಳೇ ನನಗೆ ತುಂಬಾ ಪ್ರಿಯವಾದ ವಾಹನಗಾಳು! ಇದಕ್ಕೂ ಮಿಗಿಲಾಗಿ ನನ್ನ ಲೇಖನಗಳಿಗೆ ಸ್ಫೂರ್ತಿಯ ಚಿಲುಮೆಗಳಾಗಿವೆ! ಇಲ್ಲಿ ಕಾಣುವ ಜೀವ ವೈವಿಧ್ಯ ಇನ್ನೆಲ್ಲಿ ಕಂಡೀತು?

ನನ್ನ ಲೇಖನದಿಂದ ಪ್ರೇರಿತರಾಗಿ ಸಿಟಿ ಬಸ್ಸನ್ನು ಏರಲು ಹೋಗಬೇಡಿ! ಸಿಟಿ ಬಸ್ಸುಗಳಲ್ಲಿ ನಮ್ಮದಿಯಿಂದ ಪ್ರಯಾಣಿಸುವುದು ಎಲ್ಲರಿಗೂ ಸಾಧ್ಯವಿಲ್ಲ! ಇದು ಸ್ಥಿತಪ್ರಜ್ಞನಿರಿಗಷ್ಟೇ ಸಾಧ್ಯ! ಇದನ್ನು ಎಚ್ಚರಿಕೆಯಿಂದ ಗಮನಿಸಿ. ಶಾಲಾ-ಕಾಲೇಜು, ಆಫೀಸುಗಳ ಸಮಯದಲ್ಲಿ ವಿಪರೀತ ರಶ್ ಇರುವುದರಿಂದ ಈ ಸಮಯದಲ್ಲಿ ಸಿಟಿ ಬಸ್ಸು ಹತ್ತದಿರುವುದೇ ಉತ್ತಮ. ಬಸ್ಸು ಹಿಡಿಸುವುದಕ್ಕಿಂತ ಹೆಚ್ಚಿಗೆ ಜನ ತುಂಬಿಕೊಳ್ಳುವುದರಿಂದ ಪ್ರಯಾಣ ತ್ರಾಸದಾಯಕ. ಆ ಸಮಯದಲ್ಲೇ ಸಿಟಿ ಬಸ್ಸು ಹತ್ತಲೇಬೇಕಾದರೆ ಮುಂದೆ ನಿಂತಿರುವ ಜನರ ಕಾಲು ತುಳಿಯುವುದೂ, ಹಿಂದೆ ನಿಂತಿರುವ ಜನರಿಂದ ಕಾಲು ತುಳಿಸಿಕ್ಕೊಳ್ಳುವುದು ಅನಿವಾರ್ಯವಾಗುತ್ತದೆ.

ಇನ್ನು ಪುಟ್ಟ ಮಕ್ಕಳಿಂದಲೂ ಒದೆಸಿಕ್ಕೊಳ್ಳುವುದೂ ಅನಿವಾರ್ಯವ! ಇವರ ಜೊತೆಗೆ ಹತ್ತು ಹದಿನೈದು ಕೆಜಿ ತೂಕದ ಬ್ಯಾಗುಗಳನ್ನು ಬೆನ್ನ ಮೇಲೆ ಹೊತ್ತ ಶಾಲಾ ಮಕ್ಕಳೂ ಸ್ಪರ್ಧಿಸುತ್ತಾರೆ! ಅವರ ಬ್ಯಾಗುಗಳು ನಮ್ಮ ಹೊಟ್ಟೆ ಮತ್ತು ಎದೆಗೆ ತಿವಿಯುತ್ತ ಹಿಂಸಿಸುತ್ತವೆ. ಇದಕ್ಕೆ ಗೊಣಗಬೇಡಿ! ಇದರ ಜೊತೆಗೇ ಕಂಡಕ್ಟರ್ ಬೇರೆ ‘ಮುಂದೆ ಹೋಗಿ, ಮುಂದೆ ಹೋಗಿ’ ಎಂದು ತಾರಕ ಸ್ವರದಲ್ಲಿ ಹಾಡುತ್ತಿರುತ್ತಾನೆ. ಸೂಜಿ ಮೊನೆಗೂ ಜಾಗವಿಲ್ಲದ ಜನದಟ್ಟಣೆಯಲ್ಲಿ ಕಂಡಕ್ಟರ್  (ಈಗ ಕಂಡಕ್ಟರಣಿಯರೂ ಇದ್ದಾರೆ) ಚಿತ್ರದುರ್ಗದ ಕೋಟೆಯಲ್ಲಿ ಹೈದರಾಲಿಯ ಸೈನಿಕರು ಕಳ್ಳಗಿಂಡಿಯಿಂದ ತೂರಿಬಂದಂತೆ ಬಂದು ಟಿಕೇಟ್ ಮತ್ತು ಚಿಲ್ಲರೆಗೆ ಹೆಣಗಿಸುತ್ತಾನೆ.

ಜೇಬಿಗೇ ಕೈಹಾಕಲು ಸಾಧ್ಯವಿಲ್ಲದಿರುವ ಜನದಟ್ಟಣೆಯಲ್ಲಿ ನಿಮ್ಮದೇ ಜೇಬಿಗೆ ಕೈಹಾಕುಲು ನೀವು ಯಮ ಸಾಹಸ ಮಾಡಬೇಕಾಗುತ್ತದೆ! ಹಲವಾರು ಸಲ ನಾನು ಬಸ್ಸಿನ ಹಿಂದಿನ ಬಾಗಿಲಿಂದ ಹತ್ತಿ ಬಸ್ಸಿನ ಮದ್ಯಭಾಗದವರೆಗೂ ನಿಲ್ಲಬೇಕಾಗಿದ್ದ ಸಂದರ್ಭಗಳು ಬಂದಿವೆ. ಕೆಲವೊಮ್ಮೆ ಹಿಂದಿನಿಂದ ಜನ ನೂಕುತ್ತಲೇ ಮುಂದಿನ ಬಾಗಿಲಿಂದ ಹತ್ತಿ ಬರುವ ಮಹಿಳೆಯರಿಗೆ ತೀರಾ ಸನಿಹವೇ ನಿಲ್ಲಬೇಕಾಗಿ ಬರುತ್ತದೆ. ಹಾಗಿ ನಿಂತಾಗ ನಿಂತ ಜಾಗದಲ್ಲೇ ನಿಲ್ಲಲ್ಲು ಯಮಸಾಹಸ ಪಡಬೇಕಾಗುತ್ತದೆ. ಕಾರಣ ರಸ್ತೆಯಲ್ಲಿನ ಘೋಷಿತ ಮತ್ತು ಅಘೋಷಿತ ರಸ್ತೆಯ ಉಬ್ಬುಗಳಲ್ಲಿ ಚಾಲಕ ಬ್ರೇಕ್ ಹಾಕಿದಾಗ ಮುಂದಿನ ಮಹಿಳೆಯರ ಮೇಲೆ ಬೀಳದಂತಿರಲು ಸರ್ಕಸ್ ಮಾಡಬೇಕು! ಅಂತ ದುರ್ಘಟನೆಯೇನಾದರೂ ಘಟಿಸಿದರೆ ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

‘ಕ್ಷಮಿಸಿ’ ಎಂದರೂ ದೂರ್ವಾಸ ದೃಷ್ಟಿ ಬೀರುವ ಇವರು, ತಾವೇನಾದರೂ ಪುರುಷರ ಮೇಲೆ ವಾಲಿದರೆ ನಾಚಿ, ಹುಳ್ಳಗೆ ನಕ್ಕು ಸುಮ್ಮನಾಗುತ್ತಾರೆ. ನೋಡಿ ಹೇಗಿದೆ ನ್ಯಾಯ! ಹಾಗೆಂದ ಮಾತ್ರಕ್ಕೇ ನಾನು ಸ್ತ್ರೀ ದ್ವೇಷಿ ಎಂಬ ಆತುರದ ತೀರ್ಮಾನಕ್ಕೆ ಬರಬೇಡಿ. ಸಿಟಿ ಬಸ್ಸು ಮತ್ತು ಸ್ಫೂರ್ತಿಯ ವಿಷಯದಿಂದ ಈ ಲೇಖನ ಪ್ರಾರಂಭಿಸಿದೆ ಅಲ್ಲವೆ? ಕ್ಷಮಿಸಿ ವಿಷಯಾಂತರವಾಯಿತೇನೋ? ಈಗ ನೇರವಾಗಿ ಸ್ಫೂರ್ತಿಯ ವಿಷಯಕ್ಕೇ ಬಂದುಬಿಡುತ್ತೆನೆ. ನನಗೆ ಬರೆಯುವ ಹುಚ್ಚಿದೆ. ಅಪ್ಪಿ-ತಪ್ಪಿ ಬರೆದ ಕೆಲವು ಕತೆ, ಕವನ, ಇಂತಾ ಲಲಿತ ಪ್ರಭಂದಗಳು ಕೆಲವೊಮ್ಮೆ ಸಂಪಾದಕರ ಅನುಕಂಪದಿಂದ ನಿಯತಕಾಲಿಕೆಗಳಲ್ಲಿ ಪ್ರಕಟವಾಗುವುದೂ ಉಂಟು.

ಈ ಕಾರಣದಿಂದ ನನಗೆ ಲೇಖಕನ ಹಣೆಪಟ್ಟಿ ಅಂಟಿಕೊಂಡಿದೆ. ನಮ್ಮಂತವರಿಗೆ ಬರೆಯಲು ಸ್ಫೂರ್ತಿಯ ಅವಶ್ಯ ಎಂದು ಬಹಳ ಜನ ಭಾವಿಸಿದ್ದಾರೆ, ಹಾಗೆಂದು ನಾನೂ ಸಹ ಅಂದುಕೊಂಡಿದ್ದೇನೆ.ಸ್ಫೂರ್ತಿಯ ವಿಷಯ ಬಂದಾಗ ಚಿತ್ರಕಾರರು ಅದೃಷ್ಟವಂತರು. ಅವರನ್ನು ಕಂಡರೆ ನನಗೆ ಅಸೂಯೆಯಾಗುತ್ತದೆ. ಸುಂದರ ಹೆಣ್ಣೊಂದನ್ನು ರೂಪದರ್ಶಿಯಾಗಿ ಕೂರಿಸಿಕೊಂಡೋ ಇಲ್ಲಾ ತಮಗೆ ಬೇಕಾದ ಭಂಗಿಗಳಲ್ಲಿ ನಿಲ್ಲಿಸಿಯೋ ಚಿತ್ರ ರಚಿಸುತ್ತಾರೆ. ಬಡಪಾಯಿ ಲೇಖಕರಿಗೆ ಇಂತ ಯಾವ ಭಾಗ್ಯವೂ ಇಲ್ಲ!

ಬೇರೆ ಲೇಖಕರಿಗಿಂತ ನಾನು ಭಿನ್ನ! ಹೇಗೆನ್ನುತ್ತೀರೋ..? ನೋಡಿ ಸಾಮಾನ್ಯವಾಗಿ ಲೇಖಕರು ಸ್ಫೂರ್ತಿಗೆ ಸಿಗುವ ಜನನಿಬಿಡ ಪ್ರಕೃತಿ ತಾಣಗಳನ್ನು ಅರಸಿದರೆ ನಾನು ಸಿಟಿ ಬಸ್ಸುಗಳನ್ನು ಅರಸುತ್ತೇನೆ! ಸಿಟಿ ಬಸ್ಸುಗಳಲ್ಲೇನಿರುತ್ತೆ..ಮಣ್ಣು ಎನ್ನುತ್ತೀರಾ..? ಅಲ್ಲೇ ಸ್ವಾಮಿ ಇರುವ ಸ್ವಾರಸ್ಯ! ನೂರಾರು ಸ್ಫೂರ್ತಿಗಳು ಅಲ್ಲಿಂದಲೇ ನನಗೆ ದೊರಕಿರುವುದು!

ಒಮ್ಮೆ ಲೇಡೀಸ್ ಕ್ಲಬ್ಬಿನ ಇಬ್ಬರು ಮಹಿಳಾಮಣಿಯರು ತಾವು ತಯಾರಿಸಿದ ವಿಶೇಷ ರುಚಿಯನ್ನು ತಿನ್ನಲ್ಲೊಪ್ಪದ್ದ ಗಂಡಂದಿರನ್ನೂ, ಕುಟುಂಬದ ಇತರೆ ಸದಸ್ಯರನ್ನೂ ಹೇಗೆ ಬಗ್ಗು ಬಡಿಯಬೇಕೆಂದು ಪರಸ್ಪರ ವಿಚಾರ ವಿನಿಮಯ ಮಾಡಿಕ್ಕೊಳ್ಳುತ್ತಿದ್ದರು! ಇದೇನು ಸಾಮಾನ್ಯ ವಿಷಯವೇ..? ಇಡೀ ಮನುಕುಲವನ್ನೇ ಇಂತಾ ಗಂಡಾತರದಿಂದ ಎಚ್ಚರಿಸುವ, ಸಮಯೋಚಿತವಾದ ‘ಗಂಡಸರೇ ಎಚ್ಚರಿಕೆ!’ ಲೇಖನವೊಂದನ್ನು  ಬರೆಯಲು ನನಗೆ ಭಯಂಕರ ಸ್ಫೂರ್ತಿ ಸಿಕ್ಕಿತು.

ಇನ್ನು ಕೆಲವು ಸಂದರ್ಭಗಳಲ್ಲಿ ಕಾಲೇಜು ತರುಣಿಯರು ಮತ್ತು ತರುಣರ ಮಾತುಗಳಲ್ಲಡಗಿದ್ದ ಪ್ರೇಮ ಪ್ರಕರಣವನ್ನೂ ಅವರ ಧೋರಣೆ ಮತ್ತು ನಂಬಿಕೆಗಳನ್ನು ಆಧರಿಸಿ ಸುಧೀರ್ಘ ಲೇಖನ ಬರೆದೆ!ಹೀಗೆ ಸಿಟಿ ಬಸ್ಸುಗಳಲ್ಲಿ ಪ್ರಯಾಣಿಸಿವಾಗ ಕಾಲೇಜು ಯುವಕ ಯುವತಿಯರು ಉಪಯೋಗಿಸುವ ಹೊಸ ಪದಪುಂಜಗಳಾದ ‘ಸಖತ್’,’ಬೊಂಬಾಟ್’,ಚೊಂಬು, ಪಡ್ಡೆ’, ‘ಬಢತ್ತದು, ‘ಪಡ್ಡೆ’  ‘ಸ್ಕೆಚ್ಚು’, ಮಾಲು, ‘ಡವ್’-ಇಂತ ನೂರಾರು ಪದಗಳನ್ನು ಕೇಳಿ ಅರ್ಥಮಾಡಿಕೊಂಡು ಅವುಗಳ ಬಗ್ಗೆ ‘ಯುವಜನರ ಭಾಷೆ’ ಎಂಬ ಲೇಖನವನ್ನು ಬರೆದಿದ್ದು ನೆನಪಿದೆ ( ಪ್ರಕಟವಾದದ್ದು ನೆನಪಿಲ್ಲ!).

ಅಪರೂಪಕ್ಕೆ ಪುಟ್ಪಾತಿನಲ್ಲಿ ನಡೆಯುತ್ತಿದ್ದ ಪಾದಚಾರಿಗಳನ್ನು ಸಿಟಿ ಬಸ್ಸುಗಳು ಅಟ್ಟಿಸಿಕೊಂಡು ಹೋಗಿ ಮಟ್ಟ ಹಾಕಿದ ಘಟನೆಗಳಿಂದ ಪ್ರೇರಿತನಾಗಿ ‘ಕರೆಯದೆ ಬಂದ ವಿಧಿ’ ಎಂಬ ಕಣ್ಣೀರಿಳಿಸುವ ನೀಳ್ಗತೆಯನ್ನು ಬರೆದು ಎಲ್ಲ ಪತ್ರಿಕೆಗಳಿಗೂ ಕಳಿಸಿದ್ದೆ. ‘ಸ್ಥಳಾಭಾವದಿಂದ ಪ್ರಕಟಿಸಲಾಗುತ್ತಿಲ್ಲ’ ಎಂದು ಎಲ್ಲ ಪತ್ರಿಕೆಗಳ ಸಂಪಾದಕರೂ ತಿರುಗಿ ಕಳಿಸಿದರು. ಸಂಪಾದಕರ ಎಲ್ಲ ‘ವಿಷಾದ’ ಪತ್ರಗಳನ್ನು ಜತನದಿಂದ ಕಾಪಾಡಿದ್ದೇನೆ.’ಅತಿ ಹೆಚ್ಚು ಸಲ ತಿರಸ್ಕೃತವಾದ ಕತೆ’ ಎಂದು ಗಿನ್ನಿಸ್ ದಾಖಲೆ ಸೃಷ್ಟಿಸುವುದು ಎಂಬ ನಂಬಿಕೆ ನನ್ನದು!

ಬದುಕು ಸ್ಪರ್ಧಾತ್ಮಕವಾದದ್ದು . ಇಲ್ಲಿ ಬಲವಿರುವರು ಮಾತ್ರ್ರ ಬದುಕಬಲ್ಲರು ಎಂಬುದನ್ನು ನಾನು ಸಿಟಿ ಬಸ್ಸುಗಳಿಂದಲೇ ಕಲಿತದ್ದು ಎಂದರೆ ನಿಮಗೆ ಅಚ್ಚರಿಯಾಗಬಹುದು. ಸಿಟಿ ಬಸ್ಸುಗಳ ಚಾಲಕರು ನಿಗದಿತ ಸ್ಟಾಪುಗಳಲ್ಲಿ ನಿಲ್ಲಿಸುವುದೇ ಅಪರೂಪ! ಸ್ಟಾಪುಗಳಿಂದ ನೂರು ಇನ್ನೂರು ಅಡಿ ಮುಂಚೆ ಅಥವಾ ನಂತರ ನಿಲ್ಲಿಸುವುದು ಮಾಮೂಲು. ಅದರಿಂದ ಅವರಿಗೆ ಮಹದಾನಂದ ಸಿಗುವಂತೆ ಭಾಸವಾಗುತ್ತದೆ. ಬಸ್ಸಿನಿಂದ ಇಳಿದವರೂ ನಡೆಯಬೇಕು, ಹತ್ತುವವರು ತಾವು ನಿಂತಲ್ಲಿಂದ ಓಡಿ ಬಸ್ಸು ಹತ್ತಬೇಕು! ಇಲ್ಲದಿದ್ದರೆ ಬಸ್ಸು ಕಣ್ಣೆದುರೇ ಬುರ್ರನೆ ಹೋಗುತ್ತದೆ! ವಯಸ್ಸಿನ ಬೇಧವಿಲ್ಲದೆ ಎಲ್ಲರೂ ಒಲಂಪಿಕ್ ಓಟದಲ್ಲಿ ಭಾಗವಹಿಸುವವರಂತೆ ಓಡಲೇಬೇಕು! ಇಲ್ಲದಿದ್ದರೆ ಬಸ್ಸು ಸಿಗದು!

ಬದುಕು ಸ್ಪರ್ಧಾತ್ಮಕ ಎಂದು ಮನದಟ್ಟಾದದ್ದು ಇಂತಾ ಘಟನೆಗಳಿಂದಲೇ!  ಈ ಸಂದೇಶವನ್ನು ನನ್ನ ಬರಹಗಳಲ್ಲಿ ಧಾರಾಳವಾಗಿ ಬಳಸಿದ್ದೇನೆ!ಬಸ್ಸಿನಲ್ಲಿರುವ ಹಿರಿಯ ಮತ್ತು ಅತಿ ಕಿರಿಯ ಜೀವಗಳನ್ನು ಲೆಕ್ಕಕ್ಕೆ ತಾರದೆ, ರಸ್ತೆಯ ಉಬ್ಬುಗಳನ್ನು ಲೆಕ್ಕಿಸದೆ, ತಾನು ಕಾರು ರೇಸಿನಲ್ಲಿ ಭಾಗವಹಿಸುತ್ತಿರುವೆನೆಂಬಂತೆ ಚಾಲಕರು ಬಸ್ಸು ಓಡಿಸಿದಾಗ ಜೀವ ಬಾಯಿಗೆ ಬರದೆ ಇದ್ದೀತೆ..? ಬದುಕೆಷ್ಟು ಕ್ಷಣಿಕ? ಅನಿರೀಕ್ಷಿತವಾಗಿ ಹೀಗೇ ಸಾವು ಬರಬಹುದಲ್ಲವೆ ಎಂಬ ಯೋಚನೆ ನನಗೆ ಸಿಟಿ ಬಸ್ಸಿನಲ್ಲೇ ಬಂದು ರೋಮಾಂಚನಗೊಂಡಿದ್ದು ಉಂಟು!

ಒಂದೆರಡು ಪಿಕ್ಪಾಕೆಟ್ ಪ್ರಸಂಗಳೂ, ಚಿಲ್ಲರೆಗಾಗಿ ನಡೆದ ಚಿಲ್ಲರೆ ಜಗಳಗಳೂ, ಮಾತು ಬಂದರೂ ಮಾತಾಡದಂತೆ ನಟಿಸಿ, ಪ್ರಿಂಟಿಸಿದ ಕರಪತ್ರ ನೀಡಿ ಹಣ ಸಂಗ್ರಹಿಸುವವರೂ, ಕಣ್ಣಿದ್ದರೂ ಕುರುಡರಂತೆ ಭಿಕ್ಷೆ ಬೇಡುವವರೂ ನನಗೆ ಸ್ಫೂರ್ತಿ ನೀಡಿದ್ದಾರೆ.ಒಮ್ಮೊಮ್ಮೆ ಪರಿಚಯದವರು ಬಸ್ಸಿನಲ್ಲಿ ಸಿಕ್ಕಿ, ‘ಇದೇನ್ಸಾರ್ ನೀವಿಲ್ಲಿ..?’ ಎಂದು ಅವಮಾನಿಸುವಂತೆ ಅಚ್ಚರಿ ಸೂಚಿಸಿದಾಗ, ನಾನು ಬಸ್ಸಿನಲ್ಲಿಪ್ರಯಾಣಿಸಬಾರದೆಂದು ಇವರ ಅಭಿಪ್ರಾಯವೆ ಎಂದು ಗೊಂದಲಕ್ಕೊಳಗಾಗಿದ್ದೇನೆ. ಆದರೂ ಮುಯ್ಯಿ ತೀರಿಸುವಂತೆ ‘ಸಿಟಿ ಬಸ್ಸಿನಲ್ಲಿ ಯಾರು ಬೇಕಾದರೂ ಹಣ ಕೊಟ್ಟು ಪ್ರಯಾಣಿಸಬಹುದು’ ಎಂದು ಮಾತಿನಲ್ಲೇ ಚುಚ್ಚಿದ್ದೇನೆ.

ಈಗ ನಿಮಗೊಂದು ಸಂದೇಹ ಕಾಡುತ್ತಿರಬಹುದು! ಸಿಟಿ ಬಸ್ಸಿನ ಬಗ್ಗೆ ಇವರಿಗೇಕೆ ಮೋಹ..ಇವರಿಗೇನಾದರೂ ಇಲಾಖೆಯವರು ಜಾಹೀರಾತು ಭತ್ಯೆ ನೀಡುತ್ತಿದ್ದಾರೆಯೇ? ಇಲ್ಲಾ ಇವರೇ ಏಜೆಂಟರೆ..? ಇವಕ್ಕೆ ನನ್ನ ಉತ್ತರ ಸಿದ್ಧವಾಗಿದೆ. ಸಿಟಿ ಬಸ್ಸುಗಳ ಬಗ್ಗೆ ನಾನು ಖಂಡಿತಾ ಇಲಾಖೆಯವರ ಪರ ಪ್ರಚಾರ ಮಾಡುತ್ತಿಲ್ಲ. ಬದಲಿಗೆ ಸಿಟಿ ಬಸ್ಸುಗಳಿಂದ ಸ್ಫೂರ್ತಿ ಪಡೆದ ಅಪರೂಪದ ಲೇಖಕ ಎಂದು ಸಾರಸ್ವತ ಲೋಕ ನನ್ನನ್ನು ಗುರುತಿಸಲಿ ಎಂಬ ಉದ್ದೇಶ ನನ್ನದು ಎಂದು ವಿನಮ್ರನಾಗಿ ನಿವೇದಿಸುತ್ತಿದ್ದೇನೆ!

ಇಷ್ಟೆಲ್ಲಾ ಓದಿದ ಮೇಲೆ  ‘ಸಿಟಿ ಬಸ್ಸು- ಸ್ಫೂರ್ತಿಯ ಸೆಲೆ’ ಎಂಬ ನನ್ನ ಉದ್ಘೋಷವನ್ನು ನೀವು ನಂಬುತ್ತೀರಿ ಅಲ್ಲವೆ..? ಅಂದ ಹಾಗೆ ನೀವೂ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತೀರಾ..? ಹಾಗಿದ್ದರೆ ಎಂದಾದರೊಮ್ಮೆ ಭೇಟಿಯಾಗಿ ವಿಚಾರ ವಿನಿಮಯ ಮಾಡಿಕೊಳ್ಳೋಣ! ಏನನ್ನುತ್ತೀರಿ..?

 

‍ಲೇಖಕರು avadhi

March 2, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Santhoshkumar LM

    ‘ಕ್ಷಮಿಸಿ’ ಎಂದರೂ ದೂರ್ವಾಸ ದೃಷ್ಟಿ ಬೀರುವ ಇವರು, ತಾವೇನಾದರೂ ಪುರುಷರ ಮೇಲೆ ವಾಲಿದರೆ ನಾಚಿ, ಹುಳ್ಳಗೆ ನಕ್ಕು ಸುಮ್ಮನಾಗುತ್ತಾರೆ. ನೋಡಿ ಹೇಗಿದೆ ನ್ಯಾಯ! ಹಾಗೆಂದ ಮಾತ್ರಕ್ಕೇ ನಾನು ಸ್ತ್ರೀ ದ್ವೇಷಿ ಎಂಬ ಆತುರದ ತೀರ್ಮಾನಕ್ಕೆ ಬರಬೇಡಿ……
    🙂 🙂 ತುಂಬಾ ಚೆನ್ನಾಗಿದೆ, ನಕ್ಕು ಸಾಕಾಯ್ತು:)

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: