ಶಿಶಿರ ಅಂಗಡಿ ಓದಿದ ʼಬೆಂಗಳೂರು ಕಲರ್ಸ್ʼ

ಜಯನಗರದ ಹುಡುಗಿ ಬೆಂಗಳೂರಿನ ಚರಿತ್ರೆಯನ್ನು ತಿಳಿದು, ತಿಳಿಸಿದ ಕೃತಿ..

ಶಿಶಿರ ಅಂಗಡಿ

ಅನೂಹ್ಯ ಅಂತ್ಯ!!! ಇದನ್ನು ಓದಲು ಪ್ರಾರಂಭಿಸಿದಾಗ ಕೃತಿಯ ಕೊನೆಯ ಸಾಲುಗಳು ಹೀಗಿರಬಹುದು ಎಂದು ಊಹಿಸಿರಲಿಲ್ಲವಾದರೂ, ಕಥೆಗಳು ಸಾಗುತ್ತಾ ಸಾಗುತ್ತಾ, ಆ ಒಂದು ಪಾತ್ರದ‌ ಪೋಷಣೆ ನೋಡುತ್ತ ಹೋದಂತೆ ಅಂತ್ಯದಲ್ಲಿ ಇದೇ ಆಗಬಹುದು ಎಂಬುದು ಕಾಡುತ್ತಾ ಹೋಯಿತು, ಮತ್ತೆ ಹಾಗೇ ಆಯಿತು ಕೂಡ.

ನಂಗೆ ಎಲ್ಲ ಗೊತ್ತಿದೆ ಎಂದು ಹೇಳುವವರಿಗೆ ನಿಜವಾಗಿಯೂ ಏನೂ ಗೊತ್ತಿರಲ್ಲ ಎಂಬ ಮಾತಿದೆ, ಆ ದೃಷ್ಟಿಯಲ್ಲಿ, ತನಗೇನು ಗೊತ್ತಿಲ್ಲ ಎಂಬುದನ್ನು ಅರಿತು, ಒಪ್ಪಿಕೊಂಡು, ಗೊತ್ತುಮಾಡಿಕೊಳ್ಳುತ್ತೇನೆ ಎಂದು ಸಂಕಲ್ಪಿಸುವುದೇ ಅರಿವಿನ ಮೊದಲ ಹೆಜ್ಜೆ..
ಅದೇ ದಾರಿಯಲ್ಲಿ ಮೇಘನಾ ಸಾಗಿದ್ದಾರೆ, ನಮ್ಮನ್ನೂ ಕೊಂಡೊಯ್ದಿದ್ದಾರೆ..

ಇದ್ರಲ್ಲಿ ಮುಖ್ಯವಾಗಿ ಮೂಲ ಬೆಂಗಳೂರಿಗರು – ಬೇರೆಡೆಯಿಂದ‌ ಬಂದ ವಲಸಿಗರು, ಅವರುಗಳ ಮನೋಭಾವನೆಗಳು, ಅಸಹಾಯಕತೆ, ಅನಿವಾರ್ಯತೆ, ಅನಾದರತೆ, ಆಕರ್ಷಣೆ, ಬೆಂಗಳೂರಿನ ಬಗ್ಗೆ ಅಭಿಪ್ರಾಯಗಳು, ಅದಕ್ಕೆ ಕಾರಣಗಳು, ಅದಕ್ಕೆ ಸ್ಪಷ್ಟನೆಗಳು.. ಹೀಗೆ ಅವರ ಚಿಂತನೆಗಳು ಹೇಗಿರುತ್ತೆ ಎಂಬುದನ್ನು ಹೇಳ್ತಾ ಹೋಗ್ತಾರೆ.

ನಮ್ಮಂತಹ ನೈಂಟೀಸ್(೯೦’ರ) ಜನರೇಷನ್ನಿನವರಿಗೆ ಇದರಲ್ಲಿನ ಕಥೆಗಳು ಬಹುಬೇಗ ಕನೆಕ್ಟ್ ಆಗುವ ಕಾರಣ ಅಂದ್ರೆ ನಿರೂಪಣೆಯಲ್ಲಿ ಬಳಸಿದ ಭಾಷೆ.. ಪಕ್ಕಾ ಆಡುಭಾಷೆ, ಕಂಗ್ಲೀಷು.. ಈ ತಲೆಮಾರಿನ ನಾವುಗಳು ಮಾತಾಡಿದಷ್ಟೇ ಸಹಜವಾದ ಭಾಷೆಯನ್ನು ಉಪಯೋಗಿಸಿದ್ದಾರೆ. ಇದೇ ಕಾರಣಕ್ಕೆ ಕಥೆಗಳು ಬೇಗ ಓದಿಸಿಕೊಂಡು ಹೋಗುತ್ತದೆ, ಮತ್ತು ನೆನಪಲ್ಲುಳಿಯುತ್ತದೆ.

‘ಬೆಂಗಳೂರನ್ನು ನಾವು ಯಾವ ಲೆನ್ಸ್ ಹಾಕೊಂಡು ನೋಡುತ್ತೀವೊ ಆ ರೀತಿ ಕಾಣುತ್ತೆ’ ಇದೇ ಅರ್ಥದ ಡೈಲಾಗನ್ನು ಅಪ್ಪನ ಮೂಲಕ ಮಗಳು ಶಾಲ್ಮಲಾಳಿಗೆ ಹೇಳಿಸಿದ್ದಾರೆ. ಇದು ನನಗೂ ಯಾವಾಗಲೂ ಅನ್ನಿಸ್ತಿರುತ್ತೆ. ಒಂಥರಾ ಏಕಪಾತ್ರಾಭಿನಯ ಮಾಡಿದಂತೆ, ನಾವು ಯಾವ ಪಾತ್ರದಲ್ಲಿ ಇರುತ್ತೇವೊ ಬೆಂಗಳೂರು ಎಂಬುದು ಅದಕ್ಕೆ ತಕ್ಕಂತೆ ಬಿಂಬಿತವಾಗುತ್ತದೆ. ಗಡಿಬಿಡಿಯಲ್ಲಿ ಎಲ್ಲೊ ಹೊರಟಾಗ ಸಹಜವಾಗಿ ಸಿಗ್ನಲ್ ಬಿದ್ದು ಗಾಡಿ ನಿಂತರೂ ಬೆಂಗಳೂರು ಟ್ರಾಫಿಕ್ಗೆ ಬೈಯ್ಯುತ್ತೇವೆ.

ತಿಂಡಿಪ್ರಿಯರಾಗಿ ಬೆಂಗಳೂರಿನ ಐಕಾನಿನ್ ಹೊಟೇಲುಗಳಿಗೆ ಅಲ್ಲಿನ ಟ್ರೇಡಮಾರ್ಕ್ ತಿಂಡಿಗಳನ್ನು ಬ್ಯಾಟಿಂಗ್ ಮಾಡುವಾಗ ಬೆಂಗಳೂರನ್ನು ಇಷ್ಟಪಡುತ್ತೇವೆ. ಹಬ್ಬ ಹರಿದಿನಗಳಂದು ಫಟ್ ಅಂತ ಸಿಂಗರಿಸಿಕೊಂಡು ಚಂದವಾಗುವ ಬೆಂಗಳೂರು, ಮರುದಿನ ಅದೇ ಜಾಗ ಕಸದ ತೊಪ್ಪೆಯಾಗಿರುತ್ತದೆ. ವರ್ಷಪೂರ್ತಿ ಅನೇಕ ಆಚರಣೆಗಳು, ಉತ್ಸವಗಳು ನಡೆಯುತ್ತಲೇ ಇರುತ್ತವೆ, ಹಾಗೇ ಕೆಲವು ಗದ್ದಲ‌ ಗಲಭೆಗಳೂ ಕೂಡ. ರಂಗಭೂಮಿ, ಕಲೆ, ಸಾಹಿತ್ಯ, ಚಲನಚಿತ್ರ, ಕ್ರೀಡೆ ಹೀಗೆ ಮನತಣಿಸಲು, ಮನರಂಜಿಸಲು ಸಾಕಷ್ಟು ಅವಕಾಶಗಳಿದ್ದ ಹಾಗೆ ಜೀವನದ ದಾರಿತಪ್ಪಿಸಲೂ ಅಷ್ಟೇ ಅವಕಾಶಗಳಿವೆ.

ಹೀಗೆ ಒಂದು ಊರು ಎಂದಮೇಲೆ ಇಷ್ಟದ್ದು, ಇಷ್ಟ ಆಗದ್ದು ಎಲ್ಲವೂ ಇರುವುದು ಸಹಜ. ಇಷ್ಟ ಆಗದಿದ್ದರೂ ಕಷ್ಟವಾದರೂ ಕೋಟ್ಯಂತರ ಜನ ಬೆಂಗಳೂರಲ್ಲಿ ಬದುಕುತ್ತಿದ್ದಾರೆ ಅಂದ್ರೆ ಅಷ್ಟು ಜನರಿಗೆ ಬೆಂಗಳೂರು ಬದುಕು ಕೊಟ್ಟಿದೆ ಎಂದೇ ಅರ್ಥವಲ್ಲವೇ, ಅದಕ್ಕಾದರೂ ಬೆಂಗಳೂರನ್ನು ಪ್ರೀತಿಸಿ ಎಂಬಂತಿದೆ ಮೇಘನಾರ ಆಶಯ.

ಮಟನ್ ಮಾದೇವಿಯೇ ಈ ಬೆಂಗಳೂರು ಚರಿತ್ರೆಯ ಹುಡುಕುವಿಕೆಗೆ ಮುನ್ನುಡಿ ಬರೆದದ್ದು, ಆಕೆಯಿಂದ ಬೈಸಿಕೊಂಡ ಬೆಂಗಳೂರು ಹಾಗೂ ಶಾಲ್ಮಲಾ, ಇಬ್ಬರೂ ಒಪ್ಪಂದ ಮಾಡ್ಕೊಂಡು ಬೆಂಗಳೂರಿನ ಕಥೆಯನ್ನು ಶಾಲ್ಮಲಾ ಹೇಳ ಹೊರಟರೆ, ಬೆಂಗಳೂರಿನ ಚರಿತ್ರೆ ಶಾಲ್ಮಲಾಳ ವ್ಯಕ್ತಿತ್ವವನ್ನು ತೆರೆದಿಟ್ಟಿತು.. ಮುಂದಿನ ಕಥೆಗಳು ಪ್ರಮುಖ ಘಟ್ಟಕ್ಕೆ ತಿರುವು ತೆಗೆದುಕೊಂಡು ಬೆಂಗಳೂರಿನ ಚರಿತ್ರೆಯ ಮೇಲೆ ಕೇಂದ್ರೀಕೃತವಾದರೂ, ಮಾದೇವಿಯನ್ನು ಪಾತ್ರಧಾರಿ ಮರೆಯಲಿಲ್ಲ ಎಂದು ತೋರಿಸುವ ಮೂಲಕ‌ ಲೇಖಕಿ ಇನ್ನೊಮ್ಮೆ ಮಾದೇವಿಯನ್ನ ನೆನಪಿಸುತ್ತಾರೆ, ಅದೂ ಅವಳ ಕೈಯಲ್ಲಿ ಬೈಸಿಕೊಳ್ಳುವುದಕ್ಕೋಸ್ಕರವೇ..

ಬೆಂಗಳೂರಿನ ಕಥೆ ಶುರುಮಾಡುವ ಮುನ್ನ ಪ್ರಮುಖ ನಾಲ್ಕು ಪಾತ್ರಧಾರಿಗಳು ಅಂದರೆ ಹತ್ತು ವರ್ಷಗಳ ಕಾಲ ಶಾಲೆಯಲ್ಲಿ ಒಟ್ಟಿಗೆ ಓದಿದ ನಾಲ್ವರು ಸ್ನೇಹಿತರ ಕಥೆಯನ್ನು ಕಟ್ಟಿಕೊಡುತ್ತಾರೆ.. ಅದನ್ನು ಓದುವಾಗ ನನಗೆ ನನ್ನ ಶಾಲಾದಿನಗಳ ಸ್ನೇಹಿತರ ನೆನಪು, ಅವರು ಈಗ ಏನೇನಾಗಿದ್ದಾರೆ ಎಂಬುದು ಕಣ್ಣಮುಂದೆ ಬಂತು.. Wavelength ಮ್ಯಾಚ್ ಆಗುವ, ಅವರವರು ಎಷ್ಟೇ ಬಿಜಿ ಇದ್ದರೂ ಸಮಯಕ್ಕೆ ಕೈಜೋಡಿಸುವ ಸ್ನೇಹಿತರಿದ್ದರೆ ಅಂಥವರೇ ಅದೃಷ್ಟವಂತರು.

ಅವರುಗಳಿಂದ ಬೆಂಗಳೂರು ಬಗ್ಗೆ‌ ಇರುವ ಕಥೆಗಳನ್ನು ಹೇಳಿಸುತ್ತಾ, ಐತಿಹಾಸಿಕ ಸಂಗತಿಗಳನ್ನು ಪರಿಚಯಿಸುತ್ತಾ, ಮಲಪ್ರಾಚೀನ ಶಾಸನಗಳನ್ನು ಹುಡುಕುತ್ತ ಹೋಗಿ ಬೆಂಗಳೂರನ್ನು ಆಳಿದ ರಾಶವಂಶಗಳು, ನಡೆದ ಯುದ್ಧಗಳ ಬಗ್ಗೆ‌‌, ಬೆಂಗಳೂರಿನ ಮಾರ್ಕೇಟ್ ಏರಿಯಾಗಳ ಬಗ್ಗೆ ಹೇಳುವಷ್ಟರಲ್ಲಿ ಕೆಂಪೆಗೌಡರು ಜೈಲಿಗೆ ಹೋಗಿ ಬರುವ ಪ್ರಸಂಗವೂ ಸೇರಿದೆ. ಆಗಿನ ಕೋಟೆಯ ಸ್ಥಳಗಳು ಈಗ ಏನೇನಾಗಿ ನಿಂತು ಇತಿಹಾಸದ ಕಥೆ ಹೇಳುತ್ತಿವೆ, ಊರನ್ನು ಕಟ್ಟಿ, ಆಡಳಿತ ವ್ಯವಸ್ಥೆಯನ್ನು ಹುಟ್ಟುಹಾಕಲು ಪಟ್ಟ ಶ್ರಮ, ಅವರ ಪ್ಲಾನಿಂಗ್ ಎಂಡ್ ಎಕ್ಸಿಕ್ಯೂಷನ್ ಎಲ್ಲವನ್ನೂ ವಿವಿಧ ಕಥೆಗಳು ಕಥೆಗಾರ್ತಿ ಹೇಳುತ್ತ ಹೋಗುತ್ತಾರೆ. ಒಂದು ಹಂತದಲ್ಲಿ ಬೆಂಗಳೂರು ಮಾರಾಟವಾಗಿದ್ದೂ ಇದೆ ಎಂದರೆ ಅಚ್ಚರಿ ಪಡಬೇಕಾಗಿಲ್ಲ.

ಮೂರು ವಿಭಿನ್ನ ಶೈಲಿಯ ಪ್ರೇಮ ಕಥೆಗಳು ಆ ಪಾತ್ರಧಾರಿಗಳ ಜೀವನದಲ್ಲಿ ಆಗುತ್ತದೆ.. Broken marriage, one way love, ಹೇಳಿಕೊಳ್ಳದ two way love ಹೀಗೆ ಸಾಗುತ್ತಾ, ಕೊನೆಯ ಹಂತದಲ್ಲಿ ಒನ್ ವೆ ಇದ್ದಿದ್ದು ಸಿನೀಮಿಯ ರೀತಿಯಲ್ಲಿ ಟು ವೇ ಆಗುತ್ತದೆ‌.

ನಾಲ್ವರು ಸ್ನೇಹಿತರು ಚರಿತ್ರೆಯ ಅರಸಿ ಹೋಗುವಾಗ ಸಹಜವಾಗಿ ಸಿಗುವ ವ್ಯಕ್ತಿಗಳು, ಅವರು ತಮ್ಮ ಕುಟುಂಬದ ವ್ಯಕ್ತಿಗಳಿಂದ ಇವರಿಗೆ ಸಹಾಯ ಮಾಡಿಸೋದು, ಅಂಥವರೊಂದಿಗೆ ಇವರು ಕನೆಕ್ಟ್ ಆಗೋದು, ಅವರ ಸಂಭಾಷಣೆಗಳು ಬೆಂಗಳೂರಿಗೆ ಇರುವ ಸಹಾಯ ಮಾಡುವ ಗುಣವನ್ನು ಹೇಳುವಂತಿದೆ.. ಹಂತಹಂತವಾಗಿ ಹೇಗೆ ಬೆಂಗಳೂರು ಸುಲ್ತಾನರ, ಮೊಘಲರ ಪಾಲಾಯಿತು, ಬ್ರಿಟಿಷರ ಆಡಳಿತಕ್ಕೆ ಒಳಪಟ್ಟು ಹೇಗೆ ತನ್ನ ತನವನ್ನು ಕಳೆದುಕೊಂಡು ಪರಿತಪಿಸಿತು.. ಯಾಕೆ ಬೆಂಗಳೂರು ಬಹು ಭಾಷಿಗರ ಬೀಡಾಗಿದೆ, ಯಾಕೆ ಬೆಂಗಳೂರಲ್ಲಿ ಜನಸಂಖ್ಯೆಯ ದಟ್ಟಣೆ ಇದೆ ಎಂಬುದನ್ನು ಕೊನೆಯ ಹಂತದ ಕಥೆಗಳಲ್ಲಿ ಮನಕಲುಕುವಂತೆ ತೆರೆದಿಡುತ್ತಾರೆ. ಕೊನೆಯ ಕಥೆಯಲ್ಲಂತೂ ದಕ್ಷಿಣ ಬೆಂಗಳೂರನ್ನು ವರ್ಣಿಸಿದ ರೀತಿ ಬೆಂಗಳೂರನ್ನು ತುಸು ಹೆಚ್ಚೇ ಪ್ರೀತಿಸುವಂತೆ ಮಾಡುತ್ತದೆ.

ಕಾಲ್ ಮಿ ಚಿನ್ನ, ಚಾಚಾ, ಪಕ್ಕದ್ಮನೆ ಅಂಕಲ್,‌ ಪಕ್ಕದ್ಮನೆ ಆಂಟಿ, ಸೂಪರ್ ಸ್ಟಾರ್ ರವಿ ಇವರದೆಲ್ಲ ನೆನಪಿನಲ್ಲುಳಿಯವಂತದ್ದು.. ಕೆಂಪಮ್ಮ ಕಥೆ ಹೇಳಲು ಶುರುಮಾಡಿದಾಗಲಂತೂ ಥ್ರಿಲ್ಲರ್ ಓದುತ್ತಿರುವಂತೆ ಒಂದು ಕ್ಷಣ ಅನ್ನಿಸಿತು..

ಇದರಲ್ಲಿ ಮೇಘನಾರ ತುಂಟತನ ಇದೆ, ಮುಗ್ಧತೆ ಇದೆ, ಛಲ ಇದೆ, ಪ್ರೀತಿ ಇದೆ, ಜೀವನೋತ್ಸಾಹ ಇದೆ… ತಂದೆ ಮಗಳ‌ ಸಂಭಾಷಣೆ ಬಂದಾಗಲೆಲ್ಲ, ಶ್ರೀ ಹಾಲ್ದೊಡ್ಡೇರಿ ಸುಧೀಂದ್ರರೇ ನೆನಪಾಗುತ್ತಾರೆ, ಮೇಘನಾ ಸುಧೀಂದ್ರ ನೆನಪಾಗುತ್ತಾರೆ. ಪುಸ್ತಕದುದ್ದಕ್ಕೂ ಅಪ್ಪನನ್ನು ಜೀವಂತವಾಗಿಸಿರುವ ಮೇಘನಾ, ಕೊನೆಯಲ್ಲಿ ಶಾಶ್ವತವಾಗಿಸುತ್ತಾರೆ..

ಒಂದೇ ಸಲಕ್ಕೆ ಓದು ಮುಗಿಸುವಂತಿದ್ದರೂ, ಮತ್ತೆ ಮತ್ತೆ ಓದಿ, ಭಾವಿಸಬೇಕು ಅಂತ ಅನ್ನಿಸುತ್ತೆ ಮೇಘನಾರ ಬರಹಗಳು. ಇಷ್ಟೆಲ್ಲ ಓದಿದ ಮೇಲೆಯೂ ಅನ್ನಿಸಿದ್ದು, ಬೆಂಗಳೂರ‌ ಬಗ್ಗೆ ನಾವು ತಿಳಿದಿದ್ದು ಸಿಂಧುವಿನಲ್ಲಿ ಒಂದು ಬಿಂದುವಿನಷ್ಟು ಮಾತ್ರ ಅಂತ.. ಲೇಖಕಿಗೂ ಅದೇ ಭಾವ ಇರುವುದು ತೋರುತ್ತದೆ. ಹಾಗಾಗಿ ಮೇಘನಾ ಅವರೇ ಇನ್ನಷ್ಟು ಈ ಬಗ್ಗೆ ಬರೆಯಲಿ ಎಂಬ ಆಶಯದೊಂದಿಗೆ..

ಇಷ್ಟು ಚುಟುಕಾಗಿ ಬೆಂಗಳೂರಿನ ಕುರಿತು ಹತ್ತು ಹಲವು ವಿಷಯಗಳನ್ನು ತಿಳಿಸಿದ್ದಷ್ಟೇ ಅಲ್ಲದೇ ತಂದೆ-ತಾಯಿ ಮಕ್ಕಳ ಸಂಬಂಧ, ಸುಂದರವಾದ ಸ್ನೇಹದ ಬಾಂಧವ್ಯಗಳನ್ನು ಅನುಭವಿಸಲು ಅವಕಾಶ ಮಾಡಿಕೊಟ್ಟ ಬೆಂಗಳೂರು ಕಲರ್ಸನ್ನು ಕಲರ್‌ಫುಲ್ಲಾಗಿ ಬರೆದಿದ್ದಕ್ಕೆ ಧನ್ಯವಾದಗಳು ಮೇಘನಾ..

ಸಾವಣ್ಣ ಪ್ರಕಾಶನ ಈ ಪುಸ್ತಕವನ್ನು ಪ್ರಕಟಿಸಿಸಿದೆ. ಬೆಂಗಳೂರನ್ನು ಪ್ರೀತಿಸುವವರೂ, ದ್ವೇಷಿಸುವವರೂ, ಸ್ನೇಹ ಸಂಬಂಧಗಳಿಗೆ ಬೆಲೆ ಕೊಡುವವರೂ ಓದಬಹುದಾದ ಪುಸ್ತಕ..

‍ಲೇಖಕರು Admin

December 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: