ಪ್ರಸನ್ನ ಸಂತೇಕಡೂರು ಕೇಳುತ್ತಾರೆ- ಯಾವುದು ಸಾಧನೆ?…

ಪ್ರಸನ್ನ ಸಂತೇಕಡೂರು

ಇತ್ತೀಚೆಗೆ ಯಾವುದಾದರೂ ಸಾಹಿತ್ಯದ ಕಾರ್ಯಕ್ರಮಗಳಿಗೆ ಹೋದಾಗ ಕೆಲವು ಪರಿಚಯದವರು ಆಗಾಗ ಕೇಳುವ ಪ್ರಶ್ನೆ ಎಂದರೆ ನೀವು ವಿಜ್ಞಾನಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುವಿರೋ ಅಥವಾ ಲೇಖಕನಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತಿರೋ? ಎಂದು.
ಮೊನ್ನೆ ಚಿಂತನ ಚಿತ್ತಾರ ಪ್ರಕಾಶನದ ಡಿ. ನಿಂಗರಾಜು ಚಿತ್ತಣ್ಣನವರ್ ಫೇಸ್ಬುಕಿನಲ್ಲಿ ಕತೆಗಾರ ಪ್ರಸನ್ನ ಸಂತೇಕಡೂರು ಅಂತ ಬರೆದಿದ್ದೇನೆ ನಿಮ್ಮ ಆಕ್ಷೇಪಣೆ ಏನು ಇಲ್ಲ ಅಲ್ವ? ಅಂತ ಕೇಳಿದ್ದರು.

ಇನ್ನು ಕೆಲವರು “ಸು” ಕಾದಂಬರಿ ಓದಿದ ಮೇಲೆ ಸು ನಿಮ್ಮ ಸಹೋದ್ಯೋಗಿಯಾಗಿದ್ದವರು. ಕ್ಯಾನ್ಸರ್ ಸಂಶೋಧನೆಯಲ್ಲಿ ಬಹುದೊಡ್ಡ ಸಾಧನೆಮಾಡಿದ್ದಾರೆ ಎಂದು ತಿಳಿದು ಬರುತ್ತದೆ. ನೀವು ಏನನ್ನಾದರೂ ಕಂಡುಹಿಡಿದಿದ್ದೀರಾ? ಎಂದು ಕೇಳುತ್ತಿರುತ್ತಾರೆ. ಈ ರೀತಿ ಹಿಂದೆ ಆತ್ಮೀಯರಾದ ಕವಯತ್ರಿ ಲಲಿತಾ ಸಿದ್ಧಬಸವಯ್ಯನವರು ಒಮ್ಮೆ ಕೇಳಿದ್ದರು. ಈ ರೀತಿ ಪ್ರಶ್ನೆಗಳು ಬಂದಾಗ ನಾನು ಸಾಗಿ ಬಂದ ದಾರಿಯನ್ನು ನಾನೇ ಹಿಂತಿರುಗಿ ನೋಡುತ್ತಿರುತ್ತೇನೆ.

ನಾನು ಇಪ್ಪತ್ತು ವರ್ಷಗಳ ಕೆಳಗೆ ಬಿಎಸ್ಸಿ ಮಾಡುತ್ತಿದ್ದಾಗ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಬಾರ್ಬರಾ ಮ್ಯಾಕ್ಲಿಂಟಾಕಳ ರೀತಿ ಏನನ್ನಾದರೂ ಮಹತ್ತರವಾದದ್ದನ್ನು ಕಂಡುಹಿಡಿಯಬೇಕು ಎಂದು ಬಹಳ ಅನಿಸುತಿತ್ತು. ಬಾರ್ಬರಾ ಮ್ಯಾಕ್ಲಿಂಟಾಕ್ ಹಾರುವ ವಂಶವಾಹಿನಿಗಳನ್ನು ಮುಸುಕಿನ ಜೋಳದಲ್ಲಿ ಕಂಡುಹಿಡಿದವರು. ಅದೇ ಬಾರ್ಬರಾ ಮ್ಯಾಕ್ಲಿಂಟಾಕ್ ರಿಂದ ಸ್ಪೂರ್ತಿ ಪಡೆದ ಎಲಿಜಬೆತ್ ಬ್ಲಾಕ್ಬರ್ನ್ ಎಂಬ ವಿಜ್ಞಾನಿ ತನ್ನ ಶಿಷ್ಯೆ ಕರೋಲ್ ಡಬ್ಲ್ಯೂ ಗ್ರೇಡರ್ ಮತ್ತು ಜ್ಯಾಕ್ ಡಬ್ಲ್ಯೂ ಸ್ಟಾಕ್ ಎಂಬ ಇನ್ನೊಬ್ಬ ವಿಜ್ಞಾನಿ ಜೊತೆ ಸೇರಿ ಟೆಲೊಮಿರ್ ಮತ್ತು ಟೆಲೊಮರೆಸ್ ಎಂಬ ಕಿಣ್ವವನ್ನು ಕಂಡುಹಿಡಿದು ಮೂವರು ಜೊತೆಯಾಗಿ ೨೦೦೯ ರಲ್ಲಿ ವೈದ್ಯಕೀಯ ಶಾಸ್ತ್ರದ ನೊಬೆಲ್ ಪ್ರಶಸ್ತಿ ಪಡೆದರು.

ಈ ಇಪ್ಪತ್ತು ವರ್ಷಗಳಲ್ಲಿ ನಾನು ಏನು ಮಾಡಿದ್ದೇನೆ ಎಂದು ಹಿಂತಿರುಗಿ ನೋಡಬೇಕೆಂದು ಕೊಂಡು ಈ ದಿನ ಏನನ್ನೋ ಹುಡುಕುವಾಗ ಇರಾನ್ ದೇಶದ ಕೆಲವು ವಿಜ್ಞಾನಿಗಳು ಪ್ರಕಟಿಸಿರುವ ಈ ವಿಜ್ಞಾನ ಪ್ರಬಂಧ ನೋಡಿದೆ. A Abak, S Amini, E Sakhinia, A Abhari. MicroRNA-221: biogenesis, function and signatures in human cancers. Eur Rev Med Pharmacol Sci
. 2018 May;22(10):3094-3117.

ಈ ಮೇಲಿನ ವಿಜ್ಞಾನ ಪ್ರಬಂಧದಲ್ಲಿ ಒಂದು ಚಿತ್ರ ನೋಡಿದೆ. ಅದನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಆ ಚಿತ್ರದಲ್ಲಿ MTDH (Astrocyte Elevated Gene-1 (AEG-1)) , SND1 ಮತ್ತು Ago2 ಎಂಬ ಮೂರು ಬೇರೆ ಬೇರೆ ಪ್ರೋಟೀನುಗಳು ಒಂದೇ ಹತ್ತಿರ ಇರುವುದನ್ನು ಕಾಣಬಹುದು. ಇವು ಮಾನವನ ಪ್ರತಿಯೊಂದು ಜೀವಕೋಶಗಳಲ್ಲಿರುವ ವಂಶವಾಹಿನಿಗಳ ಕಾರ್ಯವನ್ನು ನಿಯಂತ್ರಿಸಲು ಇರುವ ಬಹುಮುಖ್ಯ ಪ್ರೋಟೀನುಗಳು.

ಈ ಮೂರು ಪ್ರೋಟೀನುಗಳು ಒಂದಕ್ಕೊಂದು ಅಂಟಿಕೊಂಡು ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ ಎಂದು ಮೊಟ್ಟ ಮೊದಲು ತೋರಿಸಿದ್ದು ನಾನು ಮತ್ತು ನನ್ನ ಸಹೋದ್ಯೋಗಿ ಬೆಯೊಂಗ್ ಯೂ ಎಂಬ ದಕ್ಷಿಣ ಕೊರಿಯಾದ ವಿಜ್ಞಾನಿ. ಇದು ನಮ್ಮ ಮಾರ್ಗದರ್ಶಕರಾಗಿದ್ದ ಡಾ. ದೇವಾನಂದ ಸರ್ಕಾರ್ ಅವರ ದೂರದೃಷ್ಟಿಯ ಸಾಧನೆ ಎಂದು ಕೂಡ ಹೇಳಬಹುದು. ಇದು ಇಂದು ಸಾರ್ವತ್ರಿಕ ಸತ್ಯವಾಗಿ ಜಗತ್ತಿನ ಯಾವುದೇ ವಿಜ್ಞಾನಿಗಳು ಆ ಪ್ರಯೋಗ ಮಾಡಿದರೆ ಈ ಮೂರು ಪ್ರೋಟೀನುಗಳು ಜೊತೆಗಿದ್ದು ಕಾರ್ಯ ಮಾಡುವುದನ್ನು ಕಾಣಬಹುದು. ನಮ್ಮ ಕೊಡುಗೆಯ ಆಧಾರದ ಮೇಲೆ ಹಲವಾರು ಜನ ವಿಜ್ಞಾನಿಗಳು ಇದನ್ನು ಒಪ್ಪಿಕೊಂಡು ಲೇಖನಗಳನ್ನು ಪ್ರಕಟಿಸಿದ್ದಾರೆ. ಈ ಮೇಲಿನ ಚಿತ್ರದಲ್ಲಿರುವ ಅನಿಸಿಕೆಗೂ ನಮ್ಮ ಸಂಶೋಧನೆಯೇ ಆಧಾರ.

ಹಾಗಾದರೆ ನಮ್ಮ ಈ ಸಂಶೋಧನೆ ಏಕೆ ವಿಜ್ಞಾನ ಜಗತ್ತಿನಲ್ಲಿ ಬಹುಮುಖ್ಯ ಮತ್ತು ಮಹತ್ತರವಾದಾಗಿದೆ ಎಂದು ಹೇಳುವುದಾದರೆ ಕ್ರೈಗ್, ಸಿ ಮೆಲ್ಲೋ ಮತ್ತು ಆ್ಯಂಡ್ರ್ಯೂ ಝಕಾರಿ ಫೈರ್ ಎಂಬ ವಿಜ್ಞಾನಿಗಳು ಆರ್.ಎನ್.ಎ ಹಸ್ತಕ್ಷೇಪ(discovering RNA interference (RNAi)) ಎಂಬ ಮಹತ್ತರವಾದ ಸಂಶೋಧನೆ ಮಾಡಿದ್ದಾರೆ. ಜೊತೆಗೆ ಅವರು ೨೦೦೬ರಲ್ಲಿ ನೊಬೆಲ್ ಪ್ರಶಸ್ತಿ ಕೂಡ ಪಡೆದಿದ್ದಾರೆ. ಇವರು ಕಂಡುಹಿಡಿದ RNA interference (RNAi) ಹೇಗೆ ಕಾರ್ಯ ನಿರ್ವಹಿಸುತ್ತದೆ ಅದರಲ್ಲಿರುವ ಕಿಣ್ವಗಳು ಯಾವುವು ಎಂದು ಗ್ರೆಗೊರಿ ಹನೊನ್ (Gregory Hannon) ಎಂಬ ಇನ್ನೊಬ್ಬ ವಿಜ್ಞಾನಿ ಮತ್ತು ಅವನ ಶಿಷ್ಯರು ಹಲವಾರು ಸಂಶೋಧನೆಗಳ ಮೂಲಕ ಕಂಡುಹಿಡಿದರು.

ಈ RNA interference (RNAi) ಸಾಮಾನ್ಯ ಸಂಶೋಧನೆಯಲ್ಲ. ಇದರಿಂದ ಬೇಡವಾದ ವಂಶವಾಹಿನಿಗಳ ಕಾರ್ಯವನ್ನೇ ನಿಲ್ಲಿಸಬಹುದು. ಅಥವಾ ಅವುಗಳ ಕಾರ್ಯವನ್ನು ನಿಲ್ಲಿಸಿ ಅವುಗಳ ವರ್ತನೆಯನ್ನ ಅಧ್ಯಯನ ಮಾಡಬಹುದು. ಇದು ಹೊಸ ಹೊಸ ವಂಶವಾಹಿನಿಗಳ ಕಾರ್ಯವನ್ನು ಅರ್ಥಮಾಡಿಕೊಳ್ಳಲೂ ಕೂಡ ಸಹಾಯ ಮಾಡುತ್ತದೆ.

ಈ ಸಂಶೋಧನೆಗಳ ಮುಂದುವರೆದ ಭಾಗವಾಗಿ ನಮ್ಮ ಸಂಶೋಧನೆಯ ಮೂಲಕ Astrocyte Elevated Gene-1 (AEG-1) ಅಥವಾ MTDH SND1 ಮತ್ತು Ago2 ಎಂಬ ಎರಡು ಬೇರೆ ಪ್ರೋಟೀನುಗಳ ಜೊತೆ ಸೇರಿ RNA interference (RNAi) ನಲ್ಲಿ ಬಹುಮುಖ್ಯ ಕಾರ್ಯವನ್ನು ಮಾಡುತ್ತದೆ ಎಂದು ಮೊದಲ ಬಾರಿಗೆ ತೋರಿಸಿದೆವು. ಈಗ RNA-induced Silencing Complex (RISC) ಎಂದು ಹುಡುಕಿದರೆ ನಮ್ಮ ಸಂಶೋಧನೆ ಎದ್ದು ಕಾಣುತ್ತದೆ. ಇದು ಭೂಮಿಯಲ್ಲಿ ಮನುಷ್ಯ ಇರುವವರೆಗೂ ಈ ಪ್ರೋಟೀನುಗಳ ಕಾರ್ಯ ಇರುತ್ತದೆ ಎಂದು ಹೇಳಬಹುದು. ಈ ಪ್ರೋಟೀನುಗಳು ಕ್ಯಾನ್ಸರ್ ಜೀವಕೋಶಗಳಲ್ಲಿ ತಮ್ಮ ಕಾರ್ಯವನ್ನು ಇನ್ನು ಹೆಚ್ಚು ಮಾಡಿಕೊಂಡಿರುತ್ತವೆ. ಈ ಸಂಶೋಧನೆಯನ್ನು ನಾವು ಹೆಪಟಾಲಜಿ ಎಂಬ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟಿಸಿದ್ದೇವೆ.

೧) Increased RNA-induced silencing complex (RISC) activity contributes to hepatocellular carcinoma.
Yoo BK, Santhekadur PK, Gredler R, Chen D, Emdad L, Bhutia S, Pannell L, Fisher PB, Sarkar D.
Hepatology. 2011 May;53(5):1538-48.
೨) Multifunction protein staphylococcal nuclease domain containing 1 (SND1) promotes tumor angiogenesis in human hepatocellular carcinoma through novel pathway that involves nuclear factor κB and miR-221.
Santhekadur PK, Das SK, Gredler R, Chen D, Srivastava J, Robertson C, Baldwin AS Jr, Fisher PB, Sarkar D.
J Biol Chem. 2012 Apr 20;287(17):13952-8.
೩) RISC assembly and post-transcriptional gene regulation in Hepatocellular Carcinoma.
Santhekadur PK, Kumar DP. Genes Dis. 2019 Sep 17;7(2):199-204.
೪) Is circulating exosome carry Staphylococcal nuclease domain-containing protein 1, a component of RNA-induced silencing complex? Shiragannavar VD, Sannappa Gowda NG, Santhekadur PK.
Genes Dis. 2020 May 15;8(2):115-116.

ಈ ಸಂಶೋಧನೆಯ ಮಹತ್ವ ಮುಂದೆ ಹೆಚ್ಚು ಹೆಚ್ಚು ವಿಜ್ಞಾನಿಗಳಿಗೆ ತಿಳಿಯುತ್ತದೆ. ಈ ಸಂಶೋಧನೆಗಾಗಿಯೇ ನನಗೆ ಅಮೆರಿಕಾದಲ್ಲಿ ಕೆಲವು ಪ್ರಶಸ್ತಿಗಳು ಸಿಕ್ಕವು.

• Aflac-Incorporated Scholar-in-Training Award from American Association of Cancer Research (102nd Annual Meeting, Orlando, Florida, USA) 2011.
• Young Investigator award from American Association of Indian Scientists in Cancer Research. (102nd Annual Meeting, Orlando, Florida, USA) 2011.
• “Excellence in Cancer Research” Award (3rd Prize) poster presentation VCU Massey Research Retreat, VCU, Richmond, VA, USA, 2010.

ಇದನ್ನ ಮುಂದುವರೆಸುವುದಕ್ಕಾಗಿಯೇ ಭಾರತ ಸರ್ಕಾರ ರಾಮಲಿಂಗಸ್ವಾಮಿ ಫೆಲೋಶಿಪ್ ಕೂಡ ನೀಡಿದೆ (Prestigious Ramalinga swami Re-entry Fellowship by the Ministry of Department of Biotechnology, The Government of India, 2018). ಇದು ನನ್ನ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಹೇಳಬಹುದು. ಇದು ನಮ್ಮ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಕೊಡುವ ಪ್ರಶಸ್ತಿಗಳಿಗಿಂತ ತುಂಬಾ ದೊಡ್ಡ ಪ್ರಶಸ್ತಿ. ಹಾಗಂತ ನಾವು ಸಾಹಿತ್ಯದ ಸಾಧನೆಯನ್ನ ವಿಜ್ಞಾನದ ಸಾಧನೆಯ ಜೊತೆ ತೂಗಲು ಬರುವುದಿಲ್ಲ. ಸಾಹಿತ್ಯದ ಸಾಧನೆಯೂ ಏನು ಕಡಿಮೆಯಲ್ಲ. ಹಾಗೆ ನೋಡಿದರೆ ವಿಜ್ಞಾನದ ಸಾಧಕರಿಗಿಂತ ಸಾಹಿತ್ಯದಲ್ಲಿ ಸಾಧನೆ ಮಾಡಿರುವವರು ಹೆಚ್ಚು ಹೆಚ್ಚು ಸಾಮಾನ್ಯ ಜನರಿಗೆ ಪರಿಚಯವಾಗಿರುತ್ತಾರೆ ಮತ್ತು ತಲುಪುತ್ತಾರೆ ಕೂಡ. ಹೆಚ್ಚು ಪ್ರಚಾರ ಕೂಡ ಸಾಹಿತಿಗಳಿಗೆ ಬೇಗ ಸುಲಭವಾಗಿ ಸಿಗುತ್ತದೆ.

ವಿಜ್ಞಾನವೋ ಸಾಹಿತ್ಯವೋ ಒಂದು ಹೊತ್ತಿನ ಊಟಕ್ಕೂ ಪರದಾಡಬೇಕಾದವನು, ಶಾಲೆಯಿಂದ ಮನೆಗೆ ಬಂದು ಊಟ ಮಾಡುತ್ತಿದ್ದಾಗ ನಮ್ಮ ಹುಲ್ಲಿನ ಮನೆಗೆ ಬೆಂಕಿ ಬಿದ್ದು ನನ್ನ ಅಜ್ಜಿಯ ಜೊತೆ ಸುಟ್ಟುಹೋಗಬೇಕಾದವನು ಜೊತೆಗೆ ಕೇವಲ ನಾಲ್ಕಾಣೆ ಉಳಿಸಿದರೆ ನನ್ನ ಮಗನ ಓದಿಗೆ ಸಹಾಯವಾಗುಗುತ್ತದೆ ಎಂದು ನಮ್ಮ ಪಕ್ಕದ ಊರು ಒಡ್ಡಿನಕೊಪ್ಪದಿಂದ ನಮ್ಮ ಊರಿಗೆ ನಡೆದುಕೊಂಡು ಬರುತ್ತಿದ್ದ ನನ್ನ ಅಮ್ಮನ ಹೋರಾಟದ ಫಲವಾಗಿ ಬದುಕು ಇಲ್ಲಿಯ ತನಕ ಕರೆದುಕೊಂಡು ಬಂದು ನಿಲ್ಲಿಸಿದೆ. ಈಗ ಬದುಕನ್ನು ಹಿಂತಿರುಗಿ ನೋಡಿದರೆ ಅಂತ ಅಜ್ಜಿಯ ಮೊಮ್ಮಗನಾಗಿ ಹುಟ್ಟಿದ್ದು ಅಂತ ತಾಯಿಯ ಮಗನಾಗಿ ಹುಟ್ಟಿದ್ದೇ ಒಂದು ದೊಡ್ಡ ಸಾಧನೆ ಎಂದು ಅನಿಸುತ್ತದೆ.

‍ಲೇಖಕರು Admin

December 23, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: