
ಮಳೆಯೆಂದರೆ ಹಾಡು, ಮಳೆಯೆಂದರೆ ಬದುಕು, ಮಳೆಯೆಂದರೆ ಭಾವ. . . ಮಳೆಯೆಂದರೆ ಮನಮುತ್ತೋ ಆಪ್ತ ಭಾವಗಳ ಸಂತೆ. ಧೋ ಸುರಿಯೋ ಮಳೆಗೆ ನವಿಲಾಗೋ ಮನಸ್ಸಿಗೆ, ಮಳೆ ನಿಂತ ಮೇಲಿನ ನಡಿಗೆ ಸಾಧ್ಯವೇ ಇಲ್ಲ! ಇನ್ನೇನು ಎರಡು-ಮೂರು ದಿನಕ್ಕೆ ಮಳೆಗಾಲ ಮುಗಿಯುತ್ತದೆ ಎನ್ನುವಾಗಲೇ ಯಾಕೋ ಸಲ್ಲದ ರಗಳೆಯಾಗುತ್ತದೆ.
ತೀರಾ ಆಪ್ತವಾಗಿದ್ದ ಹಾಡೊಂದು ಇದ್ದಕ್ಕಿಂದ್ದಂತೆ ನಿಂತರೆ ಅದೊಂದು ಕಸಿವಿಸಿ ಶುರುವಾಗುತ್ತದಲ್ಲ ಹಾಗಿದ್ದೊಂದು ಚಡಪಡಿಕೆ.. ಇನ್ನು ಮಳೆ ಬರುವುದಿಲ್ಲ ಎಂದು ಗೊತ್ತಾದ ಮರುಕ್ಷಣ ಆಟಿಕೆ ಬೇಕೆಂದು ಅಳುವ ಮಗುವಿನಂತೆ ಮನಸ್ಸು ರಚ್ಚೆ ಹಿಡಿಯುತ್ತದೆ. ಸಾಂತ್ವನಿಸಲು ಸಾಧ್ಯವಿಲ್ಲದಂತೆ ಮುಸುಕೆಳೆದು ಮಲಗಿಬಿಡುತ್ತೇನೆ ನಾನು. ಎದುರಾಗುವ ನಾಳೆಯಲ್ಲೊಂದು ಅಚ್ಚರಿ ಕಾದಿರುತ್ತದೆ ಎಂಬ ಸುಳಿಹೂ ಇಲ್ಲದಂತೆ ನಿದ್ದೆ ಆವರಿಸಿಕೊಂಡುಬಿಡುತ್ತದೆ.
ದಿನಮಣಿ ಕಣ್ತೆರೆಯುವ ಹೊತ್ತಿಗೆ ಮುದ್ದು ಮುಖ ಮಾಡಿ ಬೆಚ್ಚಗಿನ ಶಾಲು ಸುತ್ತಿಕೊಂಡು ಮನೆಯ ಬಾಗಿಲ ಮುಂದೆ ನಿಲ್ಲುವ ಚಳಿಗಾಲವನ್ನು ಒಳಗೆ ಕರೆಯದಿರುವುದಾದರೂ ಹೇಗೆ? ಹೀಗೆ ಕರೆಯದೇ ಬಂದ ಚಳಿಗಾಲ ನಿಧಾನವಾಗಿ ತನ್ನೊಳಗನ್ನು ತೆರೆದುಕೊಳ್ಳುತ್ತದೆ.
ಮುಂದಿನದ್ದು ಶಿಶಿರ ಪರ್ವ. ಜೋರು ನಿದ್ದೆಯ ಮಧ್ಯದಲ್ಲೆಲ್ಲೋ ಸಿಡಿಲ ಸದ್ದಿಗೆ ಎಚ್ಚರಾಗುವುದಿಲ್ಲ, ಪೇಪರಿನ ತುಂಬೆಲ್ಲಾ ’ವರುಣನ ಆರ್ಭಟಕ್ಕೆ ಜನ ತತ್ತರ’ ಎಂಬ ಸುದ್ದಿ ಬಿತ್ತರವಾಗುವುದಿಲ್ಲ ಹಾಗೂ ಸಂಜೆಯ ಹೊತ್ತಿಗೆ ಹಲಸಿನ ಹಪ್ಪಳ ಸುಟ್ಟ ಘಮ ಮನೆಯನ್ನಾವರಿಸುವುದಿಲ್ಲ.. ಹಬ್ಬ ಹರಿದಿನಗಳೆಲ್ಲವೂ ಮುಗಿದು ಅಮ್ಮನೂ ಮಾತಿಗೆ ಕೂರುವಷ್ಟು ಆರಾಮು ಈಗ, ಎರಡನೇ ಕುಯ್ಲಿಲ್ಲದಿದ್ದರೆ ಅಪ್ಪನೊಂದಿಗೆ ಪೇಟೆ ಸುತ್ತುವುದಕ್ಕೂ ಅಡ್ಡಿ ಇಲ್ಲ! ಅರ್ಧ ವಾರ್ಷಿಕ ಪರೀಕ್ಷೆ ಮುಗಿದ ಖುಶಿಯಲ್ಲಿ ತಮ್ಮ, ಸ್ಕೂಲ್ ಡೇಗೆ ಡ್ಯಾನ್ಸ್ ಶುರು ಮಾಡಿರುವ ಚಿಕ್ಕಮ್ಮನ ಮಗಳು ಮತ್ತು ಮಳೆ ನಿಂತ ಕಾರಣ ದುಃಖದಿಂದ ಹೊರಬರಲಾರದೇ ರೂಮಿನ ಮೂಲೆ ಸೇರಿರುವ ನಾನು..
ಮನೆ-ಮನಸ್ಸನ್ನೆಲ್ಲಾ ತುಂಬಿಕೊಂಡಿರುವ ಬಿಗು ಕಡಿಮೆಯಾಗಲು ಹಿತ್ತಲಿನಲ್ಲಿ ಗೂಡು ಕಟ್ಟಲು ಬಂದ ಬೆಳ್ಳಕ್ಕಿಯದ್ದೊಂದು ನೆಪ ಸಾಕು.. ಬಣ್ಣ ಬೆಳ್ಳಗಿರುವುದರಿಂದ ಅದು ಬೆಳ್ಳಕ್ಕಿ! ಒಂದೊಂದೇ ಕಡ್ಡಿ ತಂದು ಅದು ಮನೆ ಕಟ್ಟಿಕೊಳ್ಳುವಾಗ ಅಟ್ಟದ ಕಿಟಕಿಯಿಂದ ನೋಡುವ ನಂಗೆ ವಿಸ್ಮಯದ ಲೋಕವೊಂದು ತೆರೆದುಕೊಳ್ಳುತ್ತಾ ಹೋಗುತ್ತದೆ.
ಉಗ್ರಾಣ ತುಂಬಿರುವ ಹೊಸ ಅಡಿಕೆ, ಹೂ ಬಿಟ್ಟು ನಿಂತಿರುವ ಮಾವಿನ ಮರ, ದೂರದಿಂದಲೇ ಕೂಗಿ ಕುಟುರ್ ಎನ್ನುವ ಅದೊಂದು ಜಾತಿಯ ಹಕ್ಕಿ.. ರೈನ್ ಕೋಟನ್ನು ಮೂಲೆಗೆ ತಳ್ಳಿ, ಕೊಡೆಗಳನ್ನೆಲ್ಲಾ ಬೀರುವಿನ ಹಿಂದೆ ಸೇರಿಸಿದರೆ ಅಲ್ಲಿಗೆ ಮಳೆಗಾಲಕ್ಕೊಂದು ಸಾಂಪ್ರದಾಯಿಕ ವಿದಾಯ! ಅರ್ಧ ಹಾಡಿ ಮರೆತ ರಾಗದ ದನಿಯೊಂದು ಹೊಸತಾಗಿ ಶುರುವಾದಂತೆ ಚಳಿಗಾಲ.. ಚಿಕ್ಕಪ್ಪ ಅಮೆರಿಕದಿಂದ ತಂದ ಬೆಚ್ಚಗಿನ ಸ್ವೆಟರ್ ತೊಟ್ಟು ತಿರುಗಾಟಕ್ಕೆ ಹೊರಟರೆ ಮರಳಿ ಮನೆ ಸೇರಲು ಅಮ್ಮನ ದೋಸೆಯ ಕೂಗು ಕಿವಿ ತಲುಪಬೇಕು.
ಹಾದಿಯಲ್ಲೆಲ್ಲೋ ಸಿಕ್ಕ ಕೆಂಪು-ಹಳದಿ-ನೀಲಿ ಹೂಗಳನ್ನು ತಂದು ಕಿರೀಟದಂತೆ ಹೆಣೆದು, ಬಾಲ ಅಲ್ಲಾಡಿಸಿಕೊಂಡು ಹಿಂದಿಂದೆ ಬರುವ ಕೆಂಪಿಯ ತಲೆಗೆ ಮುಡಿಸಿದರೆ ಇಬ್ಬರಿಗೂ ಅದೇನೋ ಆನಂದ. ಬೆಳಗ್ಗೆಯಿಂದ ಸಂಜೆಯವರೆಗೆ ತೇಜಸ್ವಿಯೋ ಕಾಡಿನ ಕಥೆಯೊ, ವಸುಧೇಂದ್ರರ ಐ.ಟಿ ಲೋಕದ ಕಥೆಯೋ ಅಥವಾ ಯಾವತ್ತೋ ಸಂಗ್ರಹಿಸಿಟ್ಟ ಪೇಪರಿನ ತುಂಡೋ ಯಾವುದಾದರೂ ಆದೀತು; ಮುಳುಗಿ ಹೋಗಲು!
ಸಂಜೆಗಿಷ್ಟು ಮಂಡಕ್ಕಿ ಉಸಲಿ, ಇಲ್ಲದಿದ್ದರೆ ಅವಲಕ್ಕಿ ಹಾಗೂ ಕಷಾಯದ ಬದಲು ಕಾಫಿ ದೇವಸ್ಥಾನದ ಕಾರ್ತಿಕಕ್ಕೆ ಮತ್ತದೇ ಅಜ್ಜಿಯ ಸೀರೆಯಿಂದ ಹೊಲಿದ ಉದ್ದಲಂಗ ಹಾಕಿ ಹೊರಟರೆ ಪನಿವಾರದ ನಂತರವೇ ಮನೆಯ ದಾರಿ ನೆನಪಾಗುವುದು.. ಆ ದೀಪಗಳ ಸಾಲು, ಭಜನೆ, ಮಂಗಳಾರತಿ ಎಲ್ಲವೂ ಮನೆಸೇರಿದ ನಂತರವೂ ನನ್ನೊಳಗೆ ಅನುರಣಿಸುತ್ತಲೇ ಇರುತ್ತದೆ.
ಅಂಗಳದ ಪಡಿಮಂಚದಲ್ಲಿ ಮಲಗಿ ಕಾಣಿಸೋ ಪ್ರತಿ ನಕ್ಷತ್ರಕ್ಕೊಂದು ಕನಸ ಪೋಣಿಸಿದರೆ ರಾತ್ರಿಯೊಂದು ಪೂರ್ಣಗೊಂಡಂತೆ!ಹೀಗೆ ಅಪ್ಪಣೆಯಿಲ್ಲದೇ ತೆರೆದ ಬಾಗಿಲಿನಿಂದ ಒಳಬಂದ ಚಳಿಗಾಲವೆಂಬುದು ಯಾವುದೋ ಹಂತದಲ್ಲಿ ಬದುಕಲ್ಲೊಂದು ಗುಲ್-ಮೊಹರ್ ನನ್ನು ಅರಳಿಸಿಬಿಡುತ್ತದೆ.

ಮಳೆಗಾಲ ಪೂರ್ತಿ ಮಾಡಿದ್ದರಲ್ಲಿ ಒಂದಂಶವನ್ನು ತೆಗೆದು ಮತ್ಯಾವುದೋ ಖಾಲಿತನವನ್ನು ಹುಟ್ಟಿಸುತ್ತದೆ. ಆ ಖಾಲಿತನವನ್ನು ಸರಿಹೊಂದಿಸುವ ಭರದಲ್ಲಿ ಮುಗಿದದ್ದೇ ತಿಳಿಯದಂತೆ ಹಾಗೇ ಸುಮ್ಮನೆ ಸರಿದುಹೋಗುತ್ತದೆ. ಇನ್ನಷ್ಟು ಬೇಕಿತ್ತು ಎಂಬ ಹಪಾಹಪಿಯನ್ನು ಕಡೆಗೂ ಉಳಿಸಿಬಿಡುತ್ತದೆ.
ಶಿಶಿರವೆಂದರೆ ದೀಪೋತ್ಸವದ ಕತ್ತಲು ಮತ್ತು ಧನುರ್ಮಾಸದ ಬೆಳಗು! ಶಿಶಿರವೆಂದರೆ ಆಚೆಬೀದಿಯ ಕಿರಿಸ್ತಾನರ ಮನೆಯ ಕ್ರಿಸ್ಮಸ್ ಗಿಡ ಮತ್ತು ಚಾಕಲೇಟ್ ಕೇಕ್. ಶಿಶಿರವೆಂದರೆ ಮಳೆಗಾಲ ಮುಗಿದ ಮೇಲಿನ ಬದುಕು ಮತ್ತು ರಾಗವಿರದೇ ಗುನುಗುನಿಸಬಹುದಾದ ಒಂದು ಪದ್ಯ.. ಶಿಶಿರವೆಂದರೆ ಕಥೆಯೊಂದು ಹರಳುಗಟ್ಟುವ ಕಾಲ ಮತ್ತು ಬದುಕು ಘಟಿಸುವ ಹೊತ್ತು.
ಶಿಶಿರವೆಂದರೆ ಅಲ್ಲೆಲ್ಲೋ ದಾರಿಯಲ್ಲಿ ನೆನಪಾಗಿಯೂ ಮರೆತಂತೆ ನಟಿಸಿ ಬಿಟ್ಟು ಬಂದ ಹೂಮಾಲೆ ಮತ್ತು ಅವನ ನೆನಪು.. ಹೀಗೆ ಶಿಶಿರವೆಂದರೆ ಎಲ್ಲವೂ ಆಗಿಯೂ ಏನೂ ಆಗದಿರುವಂತೆ ನಿಂತುಬಿಡುವ ಕಾಲ!






0 Comments