ಶಿವಾನಂದ ಕಳವೆ ಓದಿದ ‘ಪಂಚಮವೇದ’

ಪಂಚಮವೇದದ ಹಸಿರು ಪಯಣ

ಶಿವಾನಂದ ಕಳವೆ

ಪುಸ್ತಕದ ಹೆಸರು: ಪಂಚಮವೇದ

ವೇದಾ

ನಿರೂಪಣೆ: ಭಾರತಿ ಹೆಗಡೆ

ಪುಸ್ತಕದ ಬೆಲೆ: ರೂ.೨೫೦

ಪುಟಗಳು: ೨೪೮

ಪ್ರಕಾಶನ: ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ,

ಕೃಷಿ ಜ್ಞಾನ ವರ್ಗಾವಣೆಯ ಹಳೆಯ ಸ್ವರೂಪವನ್ನೊಮ್ಮೆ ನೆನಪಿಸಿಕೊಳ್ಳಬೇಕು. ಅಜ್ಜ ಮಗನಿಗೆ, ಮೊಮ್ಮಗನಿಗೆ ಮಾತಿನ ಮೂಲಕ ಕೆಲವು ಸಂಗತಿಗಳನ್ನು ಸಾಂದರ್ಭಿಕವಾಗಿ ಆಗಾಗ ಹೇಳುತ್ತಿದ್ದರು. ಭತ್ತದ ಬಿತ್ತನೆಗೆ ಉತ್ತಮ ಬೀಜ ಆಯ್ಕೆ, ಕೊಯ್ಲಿನ ಸರಿಯಾದ ಸಮಯ, ಕಳೆ ನಿಯಂತ್ರಣಕ್ಕೆ ಪೂರಕ ಉಳುಮೆಯ ತಂತ್ರ ಪ್ರಾಯೋಗಿಕವಾಗಿ ಕಲಿಸುತ್ತಿದ್ದರು. ತೋಟಗಾರಿಕೆ, ಕೃಷಿ ಜ್ಞಾನ ಸಂವಹನಕ್ಕೆ ಯೋಗ್ಯವಾದ ಸ್ಥಳೀಯ ಭಾಷೆ, ಅಜ್ಜನ ಜೊತೆಗಿನ ಒಡನಾಟದಲ್ಲಿ ತಲೆಮಾರಿನಿಂದ ತಲೆಮಾರಿಗೆ ಜ್ಞಾನ ಪ್ರವಹಿಸುತ್ತಿತ್ತು.

ಕೃಷಿಯನ್ನೇ ನಂಬಿ ನೂರಾರು ವರ್ಷಗಳಿಂದ ಬದುಕಿದ ಕುಟುಂಬಗಳು ಪರಂಪರೆಯ ನೀತಿಗಳನ್ನು ಅಳವಡಿಸಿಕೊಂಡು ತಮ್ಮ ಭೂಮಿಗೆ ತಕ್ಕುದಾದ ಬೇಸಾಯ ಕ್ರಮ ಅಳವಡಿಸಿಕೊಂಡಿದ್ದವು. ಸಾರಿಗೆ ಸಂಪರ್ಕ, ಸಾಕ್ಷರತೆಯಲ್ಲಿ ಸುಧಾರಣೆ ನಂತರದಲ್ಲಿ ಜ್ಞಾನ ಪಡೆಯುವ ರೀತಿಗಳು ಕೊಂಚ ಬದಲಾದವು. ಓಡಾಟದಲ್ಲಿ ನೋಡಿ ಕಲಿತಿದ್ದು, ಸೀಮಿತ ಪರಿಸರದ ಒಡನಾಟದ ಹೊರತಾದ ಹೊಸ ಲೋಕ ತೆರೆದುಕೊಂಡಿತು. ಹೊಸ ಕೃಷಿ ಬೆಳೆಗಳು ಭೂಮಿಗೆ ಬಂದವು. ಕೃಷಿ ವಿಜ್ಞಾನ ಶಾಖೆ ಕೃಷಿ ನಿರ್ವಹಣಾ ತಂತ್ರಗಳನ್ನು ಪ್ಯಾಕೇಜ್ ಆಫ್ ಪ್ರ್ಯಾಕ್ಟೀಸ್ ಮೂಲಕ ಹಂಚುವ ಸಾಧ್ಯತೆಗಳು ತೆರೆದವು. ಕೃಷಿ ಶಿಕ್ಷಣದ ಮೂಲಕ ಹೊಸ ಸಂಶೋಧನೆಗಳು ಪ್ರಯೋಗಾಲಯದಿಂದ ಭೂಮಿಗೆ ಇಳಿದಂತೆ ಬಹು ದೊಡ್ಡ ಬದಲಾವಣೆಗಳು ಘಟಿಸಿದವು. ಹೊಸತು, ಹಳತರ ಜ್ಞಾನ ಸಂಘರ್ಷಗಳಲ್ಲಿ ಸಮನ್ವಯದ ಬೇರೆ ಬೇರೆ ಸ್ವರೂಪಗಳು ಕಾಣಿಸಿದವು.

ಕೃಷಿ ಕುಟುಂಬವೇ ಕೃಷಿಯನ್ನು ಒಂದು ನೆಲೆಯಲ್ಲಿ ನಿಂತು ನಡೆಸುವುದಕ್ಕೂ, ಹೊಸ ತಲೆಮಾರಿನ ಜನ ತಮ್ಮದೇ ಕೃಷಿ ಕಾರ್ಯಕ್ಕೆ ಇಳಿದು ಬದುಕುವುದಕ್ಕೂ ವ್ಯತ್ಯಾಸವಿದೆ. ಭದ್ರಾವತಿ ಸನಿಹದ ಗುಡ್ಡದಹಟ್ಟಿಯಲ್ಲಿ ಅಡಿಕೆ, ತೆಂಗು, ಕಬ್ಬು, ಹೈನುಗಾರಿಕೆ, ಹಣ್ಣುಹಂಪಲು ಸೇರಿದಂತೆ ಹೊಸ ಹೊಸ ಸಾಧ್ಯತೆಗಳು ಮಸ್ಕಿ ಕುಟುಂಬದ ಕೃಷಿ ಅನುಭವ ಕಥನ ಇಲ್ಲಿದೆ. ಕೊಡಗಿನ ವೇದಾ, ರಾಯಚೂರಿನ ಮನೋಹರ ಮಸ್ಕಿ ಹುಟ್ಟಿ ಬೆಳೆದ ಪರಿಸರವೇ ವಿಭಿನ್ನ. ಗುಡ್ಡಗಾಡಿನ ಕೊಡಗಿನ ಮಲೆನಾಡು ಸೊಬಗು ವೇದಾರ ನೆಲೆಯಾಗಿದೆ. ತುಂಗಭದ್ರೆಯ ನದಿ ಕಣಿವೆಯಲ್ಲಿ ಒಂದು ಕಾಲದಲ್ಲಿ ಮಳೆ ಆಶ್ರಿತ ಬೇಸಾಯದಲ್ಲಿ ಜೋಳ, ಹತ್ತಿ, ಸೂರ್ಯಕಾಂತಿ, ಕುಸುಬಿ, ಸದಕ ಬೆಳೆಯ ಬಯಲು ರಾಯಚೂರು. ಇಂಥ ಪರಿಸರದಲ್ಲಿ ಬೆಳೆದ ಮನೋಹರ ಮಸ್ಕಿಯವರು ವೇದಾರನ್ನು ಲಗ್ನವಾದ ಬಳಿಕ ನೆಲೆಯಾಗಿದ್ದು ಭದ್ರಾವತಿಯ ಗುಡ್ಡದಹಟ್ಟಿಯಲ್ಲಿ! ಒಟ್ಟಿಗೆ ನಾಲ್ಕು ಮರ ಕಂಡರೆ ಹುಲಿ ಕಂಡಂತೆ ಭಯಪಡುವ ರಾಯಚೂರು ಎಲ್ಲಿ? ಕಾಡಿನ ಬದುಕಿನ ಕೊಡಗಿನ ಕಾಡು ಪರಿಸರ ಎಲ್ಲಿ? ಇಬ್ಬರೂ ನಾಡು ಸುತ್ತಾಡಿ, ವಿವಿಧ ಉದ್ಯಮ, ಸಹಕಾರ ಕ್ಷೇತ್ರಗಳಲ್ಲಿ ಹತ್ತಾರು ಕಡೆ ಸುತ್ತಾಡಿ ಕೊನೆಗೆ ಪಯಣ ಲಂಗರು ಹಾಕಿದ್ದು ಗುಡ್ಡದಹಟ್ಟಿಯಲ್ಲಿ! ಇಲ್ಲಿ ಬದುಕು ಆರಂಭಿಸಿದಾಗ ಕೃಷಿಯ ಸಾಧ್ಯತೆಗಳು ತೆರೆದವು.

ರಾಜಕೀಯ, ಸಹಕಾರ, ಸಮಾಜಕಾರ್ಯವೆಂದು ಮನೋಹರ ಮಸ್ಕಿ ಕಾಲಿಗೆ ಚಕ್ರ ಕಟ್ಟಿಕೊಂಡವರು. ಒಂದೊಂದು ವಿಷಯ ಹಿಡಿದುಕೊಂಡು ಮುಳುಗೇಳುವವರು. ಮಸ್ಕಿಯವರ ಚಕ್ರಕ್ಕೆ ಇವತ್ತೂ ವೇಗ ನಿಯಂತ್ರಕ ಅಳವಡಿಕೆಯಾಗಿಲ್ಲ, ಪ್ರಯಾಣ ಇದ್ದೇ ಇದೆ. ಇವುಗಳ ಮಧ್ಯೆ ಗುಡ್ಡದಹಟ್ಟಿಯಲ್ಲಿ ತೋಟಗಾರಿಕೆಯಲ್ಲಿ ಬೇರು ಬಿಡುವ ಸಾಧ್ಯತೆಯನ್ನು ದಂಪತಿಗಳು ಯೋಚಿಸಿದರು. ಸುತ್ತಾಟ, ಕೃಷಿ ಸಾಧಕರ ಒಡನಾಟ, ಓದು ಜೊತೆಗೆ ಪರಂಪರೆಯ ಅನುಭವಗಳ ಆಧಾರದಲ್ಲಿ ಪಂಚಮವೇದ ಪರಿಸರದಲ್ಲಿ ಬೇಸಾಯದ ಹೆಜ್ಜೆಗಳು ಶುರುವಾದವು. ಇವತ್ತು ಸಸ್ಯ ವೈವಿಧ್ಯದ ಜೊತೆಗೆ ಸಾವಯವ ಡೇರಿಯ ಹೈನುಗಾರಿಕೆಯ ಪ್ರಯೋಗದಲ್ಲಿ ಪಳಗಿದ್ದಾರೆ. ದಶಕಗಳ ಕೃಷಿ ಅನುಭವವನ್ನು ಕೃಷಿಕರಿಗೆ ವಿವಿಧ ವೇದಿಕೆಗಳಲ್ಲಿ ಹಂಚುತ್ತಿದ್ದ ವೇದಾರ ಅನುಭವಗಳು ಇದೀಗ ಪುಸ್ತಕವಾಗಿ ಕೈಯಲ್ಲಿದೆ.

ಹಲವರು ನಗರ ಬಿಟ್ಟು ಈಗೀಗ ಕೃಷಿ ಪರಿಸರದ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಮೂಲತಃ ಹಳ್ಳಿಯಲ್ಲಿದ್ದು ಕೃಷಿ ನಿರ್ವಹಿಸಿದವರ ಮಾತುಗಳಿಗಿಂತ ಹೊಸ ಹೊಸ ಪ್ರಯೋಗದಲ್ಲಿನಿರತ ಪಂಚಮವೇದದ ಮಾತುಗಳು ಇವರಿಗೆಲ್ಲ ಮುಖ್ಯವಾಗುತ್ತವೆ. ಪ್ರತಿಯೊಂದನ್ನು ಕಾರ್ಯ ಕಾರಣದ ಹಿನ್ನೆಲೆಯಲ್ಲಿ ನೋಡುತ್ತಾ ಸೋಲುಗಳಿಂದಲೂ ಪಾಠ ಆಲಿಸುತ್ತಾ ಹೋಗುವುದರಲ್ಲಿ ಕೃಷಿಯ ಕಲಿಕೆಯಿದೆ. ಇಲ್ಲಿ ತೆಂಗಿನ ನೀರಾ, ಹಸು ಸಾಕಣೆ ಪ್ರಯೋಗಗಳು ಸೇರಿದಂತೆ ಹಲವು ಹೊಸ ವಿಚಾರಗಳಿವೆ. ಹೊಸ ಹೊಸ ಕೆಲಸಗಳನ್ನು ಹುಡುಕಿ ಹುಡುಕಿ ಮೈಮೇಲೆ ಹಾಕಿಕೊಳ್ಳುತ್ತಾ ಎಂಥ ಒತ್ತಡದ ಬದುಕಿನ ಮಧ್ಯೆಯೂ ಕೃಷಿಗೆ ಸಮಯ ನೀಡುವ ಅವಕಾಶ ಹೇಗೆ? ಪಂಚಮವೇದದ ದಿನಚರಿ ವಿಶೇಷವಿದೆ. ಅಡಿಕೆ ತೋಟಕ್ಕೆ ನೀರುಣಿಸುತ್ತ, ಮನೆಗೆ ಬಂದ ಅತಿಥಿಗಳಿಗೆ ಉಪಚರಿಸುತ್ತ, ಕರು ಹಾಕಲು ಬಂದ ದೊಡ್ಡಿಯ ಹಸುಗಳ ಬಗ್ಗೆ ನಿಗಾವಹಿಸುತ್ತ, ಕೃಷಿ ಮೌಲ್ಯವರ್ಧನೆಯ ತಂತ್ರಜ್ಞಾನ ಹುಡುಕುತ್ತ ಸದಾ ಚಟುವಟಿಕೆಯಲ್ಲಿರುವ ವೇದಾ ಇಡೀ ಕೃಷಿ ಕೃತಿಯ ಉದ್ದಕ್ಕೂ ಕಾಡುತ್ತಾರೆ.

ಹೈಟೆಕ್ ತಂತ್ರಜ್ಞಾನ ಬಳಸುವ ಉತ್ಸಾಹದ ಜೊತೆ ಜೊತೆಗೆ ನಾಟಿ, ಪಾರಂಪರಿಕ, ಸಾವಯವ ನೆಲೆಯಲ್ಲಿ ಕೃಷಿಯ ಹೆಜ್ಜೆ ಇಡುವ ಸಮನ್ವಯತೆಯ ಮನಸ್ಸು ಇವರದು. ಒಟ್ಟಾರೆ ಕೃಷಿಯ ಲಾಭ ಎಷ್ಟು? ಎಲ್ಲರ ಪ್ರಶ್ನೆ ಇರಬಹುದು. ಇವರ ತೋಟಗಾರಿಕೆಯ ಪ್ರಯೋಗದಲ್ಲಿ ಲಾಭದ ಲೆಕ್ಕಕ್ಕಿಂತ ಆಸಕ್ತಿಯಿಂದ ನಡೆಸಿದ ಪ್ರಯೋಗ ಫಲ ಮುಖ್ಯವಾಗುತ್ತದೆ. ಒಂದು ಬೆಳೆಯನ್ನು ಹೀಗೂ ಬೆಳೆಯಬಹುದು, ನೀರಾದಿಂದ ಬೆಲ್ಲ ತಯಾರಿಸುತ್ತಾ ಮೌಲ್ಯವರ್ಧನೆ ಹೀಗೂ ಮಾಡಬಹುದು, ಕೆಲವು ಹೊಳವುಗಳಿವೆ. ಪರಿಸರದಲ್ಲಿ ಹೊಸ ಹೊಸ ಜಾತಿಯ ಸಸ್ಯ ನಾಟಿ ಮಾಡಿದಾಗ ಸಿಕ್ಕ ಫಲ ಅನುಭವಗಳು ಬಹಳ ಮುಖ್ಯ. ಓರ್ವ ಮಹಿಳೆ ಮನಸ್ಸು ಮಾಡಿದರೆ ತನ್ನ ಕೃಷಿ ಪರಿಸರ ಹೇಗೆ ಬದಲಿಸಬಹುದು? ನಿರ್ವಹಿಸಬಹುದು? ಕಣ್ಣೆದುರಿನ ನಿದರ್ಶನವಿದೆ.

ಪಂಚಮವೇದದ ಅನುಭವ ದಾಖಲಿಸಿದ ಪುಸ್ತಕ ಓದುತ್ತಿದ್ದೇವೆ. ಆದರೆ ಒಂದೂವರೆ ದಶಕಗಳಿಂದಲೂ ಇವರನ್ನು ಹತ್ತಿರದಿಂದ ನಾನು ಗಮನಿಸಿದ್ದೇನೆ. ಪಂಚಮವೇದ ಸುತ್ತಲಿನ ತೋಟ, ಬೆಟ್ಟ, ಕಲ್ಲುಹೊಂಡ, ಹೊಲಗಳು ಹಿಂದೆ ಹೇಗಿದ್ದವೆಂಬ ಚಿತ್ರ ನೆನಪಿದೆ. ಈಗ ಎಲ್ಲೆಡೆ ಹಸಿರು ತುಂಬಿದೆ. ೧೫ ವರ್ಷಗಳ ಹಿಂದೆ ಕೃಷಿ ಪ್ರವಾಸ ನಡೆಸುತ್ತ, ವಿವಿಧ ತೋಟ ಸುತ್ತಾಡುತ್ತ ಕನಸು ಮೊಳೆತ ಕಾಲಘಟ್ಟದಲ್ಲಿ ಸಂಗ್ರಹಿಸಿದ ಹಲವು ಸಸ್ಯಗಳು ಇಲ್ಲಿ ಫಲ ನೀಡುತ್ತಿವೆ. ತೋಟದ ಸುತ್ತ ಏನೆಲ್ಲ ಗಿಡ ನೆಟ್ಟಿದ್ದಾರೋ ಅವುಗಳಲ್ಲಿ ಹೆಚ್ಚಿನವು ಬಹುತೇಕ ನಾವು ಒಟ್ಟಿಗೆ ಕೃಷಿ ಪ್ರವಾಸದಲ್ಲಿ ತಂದಿದ್ದು, ಇಲ್ಲವೇ ಶಿರಸಿಯ ಅರಣ್ಯ ಇಲಾಖೆಯ ನರ್ಸರಿಗಳಿಂದ ಸಂಗ್ರಹಿಸಿ ಪೂರೈಸಿದ್ದು. ಒಮ್ಮೆ ತಮ್ಮ ಜಮೀನಿನಲ್ಲಿ ಕಾಡು ಗಿಡ ಬೆಳೆಸುವ ಉಮೇದಿ ಇವರಿಗೆ ಬಂತು. ಅರಣ್ಯ ನರ್ಸರಿ ಸುತ್ತಾಡಿ ಸಳ್ಳೆ, ರಾಮಪತ್ರೆ, ಸೀತಾ ಅಶೋಕ, ಕದಂಬ, ಬಿಳಿಮತ್ತಿ, ಹೆಬ್ಬಲಸು, ಕರ್ಪೂರ, ದಾಲ್ಚಿನ್ನಿ, ನಾಗಲಿಂಗ, ನಾಗಸಂಪಿಗೆ ಮುಂತಾದವನ್ನು ರವಾನಿಸಿದೆ. ಮಳೆ ಕಡಿಮೆ, ಕಲ್ಲಿನ ನೆಲ… ಗಿಡಗಳು ಬದುಕಿ ಉಳಿಯುವ ಅನುಮಾನವಿತ್ತು.

ಸಸಿ ನೀಡಿದ ಹತ್ತು ವರ್ಷಗಳ ನಂತರ ಮೊನ್ನೆ ಮೊನ್ನೆ ಇವರು ನೆಟ್ಟ ಸಸಿಗಳ ಜಾಗ ಸುತ್ತಾಡಿದೆವು. ನಮ್ಮೂರಲ್ಲಿ ಕಾಡಲ್ಲಿ ಮಳೆ ಆಶ್ರಿತವಾಗಿದ್ದವು, ಅಲ್ಲಿ ತೆಂಗಿನ ತೋಟದಲ್ಲಿ ಯಥೇಚ್ಛ ನೀರು ಕುಡಿಯುತ್ತಾ ೨೦ ಅಡಿಯೆತ್ತರ ಬೆಳೆದಿದ್ದವು. ಹೆಬ್ಬಲಸು ಸಸ್ಯವಂತೂ ಫಲ ಕೊಟ್ಟು ಅದರ ಕೆಳಗಡೆ ಬಿದ್ದ ಬೀಜದಿಂದ ಸಸಿ ಹುಟ್ಟಿತ್ತು. ಮುರುಗಲು (ಕೋಕಂ) ಫಲಗಳಂತೂ ಗಿಡ ತುಂಬಿದ್ದವು. ಅಚ್ಚರಿಯೆಂದರೆ ನಮ್ಮ ಶಿರಸಿ ಭಾಗದಲ್ಲಿ ಏಪ್ರಿಲ್-ಮೇ ತಿಂಗಳಲ್ಲಿ ಹಣ್ಣಾಗುವ ಇದು ಜನವರಿ/ಫೆಬ್ರುವರಿಯಲ್ಲಿಯೇ ಈ ಪ್ರದೇಶದಲ್ಲಿ ಹಣ್ಣಾಗಿದ್ದು ಗಮನಕ್ಕೆ ಬಂದಿತು. ಸಾಮಾನ್ಯವಾಗಿ ಒಂದೆರಡು ಮಳೆ ಸುರಿದರೆ ಹಣ್ಣಿನಲ್ಲಿ ಹುಳವಾಗಿ ಹಾಳಾಗುವ ಸಮಸ್ಯೆಯಿದೆ. ಇಲ್ಲಿ ಬೇಗ ಹಣ್ಣಾದ ಅನುಕೂಲತೆ ಕೃಷಿಯೋಗ್ಯವಾಗಿಸುವ ಸಾಧ್ಯತೆಯಾಗಿದೆ.

ಲೇಖಕಿ ಭಾರತಿ ಹೆಗಡೆ ವೇದಾ ಹಾಗೂ ಮನೋಹರ ಮಸ್ಕಿ ಪಯಣದ ವಿವಿಧ ಘಟ್ಟಗಳನ್ನು ಕಲಾತ್ಮಕವಾಗಿ ಸೊಗಸಾದ ಭಾಷೆಯಲ್ಲಿ ನಿರೂಪಿಸಿದ್ದಾರೆ. ಕುಟುಂಬದ ಜೊತೆಗೆ ಒಡನಾಡಿ, ಸುತ್ತಾಡಿದ ಪರಿಶ್ರಮ ಕಾಣುತ್ತದೆ. ಹಳ್ಳಿ, ಕೃಷಿ ಬದುಕಿಗೆ ರಚನಾತ್ಮಕ ದಾರಿ ತೋರಿಸಿ ಹುರುಪು ತುಂಬುವ ಕಾರ್ಯ ಇವತ್ತು ಮುಖ್ಯವಿದೆ. ಹೊಸ ಹೊಸ ಪ್ರಯೋಗ, ಕೃಷಿ ಉದ್ಯಮ ಪ್ರಯತ್ನಗಳು ಬೆಳಕಾಗುವ ಅವಕಾಶ ಮುಖ್ಯ. ಈ ಹಿನ್ನೆಲೆಯಲ್ಲಿ ಲೇಖಕಿ ಭಾರತಿ ಹೆಗಡೆ ಮಹತ್ವದ ಕಾರ್ಯ ಮಾಡಿದ್ದಾರೆ. ಇವುಗಳ ಜೊತೆಗೆ ಬರಹಗಾರ್ತಿ ಸುಧಾ ಶರ್ಮಾ ಇಡೀ ಕೃತಿಗೆ ಆಕರ್ಷಕ ರೂಪ ನೀಡಲು ತೆರೆಮರೆಯಲ್ಲಿ ಬಹಳ ಪರಿಶ್ರಮ ವಹಿಸಿದ್ದಾರೆ. ಇವರೆಲ್ಲರ ನೆರವಿನಿಂದ ಕೃತಿ ಮೂಡಿದೆ. ಮನೋಹರ ಮಸ್ಕಿ, ವೇದಾ ಹಾಗೂ ಕುಟುಂಬದ ಎಲ್ಲರ ಕೃಷಿ ಪ್ರೀತಿಗೆ ಅಭಿನಂದನೆಗಳು.

‍ಲೇಖಕರು avadhi

July 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: