ಜಿ ಎನ್ ನಾಗರಾಜ್ ಅಂಕಣ: ಕೆರೆ ನಿರ್ಮಾಣದಲ್ಲೊಂದು ನೆಗೆತ, ಸರಣಿ ಕೆರೆಗಳು ಎಂಬ ಮಹತ್ವದ ಶೋಧ

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ.

ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ ಕುರಿತ ಕೃತಿ ತಮಿಳಿಗೂ ಅನುವಾದಗೊಂಡಿದೆ.

ಜಿ ಎನ್ ನಾಗರಾಜ್ ಕೃಷಿ ಇಲಾಖೆಯ ಅತ್ಯುನ್ನತ ಹುದ್ದೆಯಲ್ಲಿದ್ದು, ನರಗುಂದ ನವಲಗುಂದ ರೈತ ಹೋರಾಟದ ಸಮಯದಲ್ಲಿ ರೈತರ ಪರ ನಿಂತವರು. ಆ ಕಾರಣಕ್ಕಾಗಿಯೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯ ಅಂಗಳಕ್ಕೆ ತಮ್ಮನ್ನು ಶಾಶ್ವತವಾಗಿ ಸಮರ್ಪಿಸಿಕೊಂಡವರು.

ಸಾಮಾಜಿಕ ಜಾಲ ತಾಣಗಳಲ್ಲಿ ಇವರು ಎತ್ತುವ ಪ್ರಶ್ನೆಗಳು ವಿಚಾರ ಮಥನಕ್ಕೆ ನೀಡುವ ಆಹ್ವಾನವೇ ಸರಿ. ಆ ವಿಚಾರ ಮಥನವನ್ನು ಇನ್ನಷ್ಟು ದೊಡ್ಡ ಕ್ಯಾನವಾಸ್ ನಲ್ಲಿ ಇಡುವ ಪ್ರಯತ್ನವೇ ಈ ಅಂಕಣ.

ಕರ್ನಾಟಕದ ಯಾವುದೇ ಚಳವಳಿಗೆ ಇವರ ಕಣ್ಣೋಟ ಅತ್ಯಮೂಲ್ಯವಾದದ್ದು. ಇವರ ಅಪಾರ ವಿದ್ವತ್ತನ್ನು ‘ಅವಧಿ’ಯ ಅಂಗಳದಲ್ಲಿ ತಂದಿರಿಸುತ್ತಿದ್ದೇವೆ.

ಕೆರೆಗಳು ಭಾರತದಲ್ಲಿ ಮಾತ್ರವೇ ಅಲ್ಲದೆ ಶ್ರೀಲಂಕಾ, ಬರ್ಮಾ, ಥಾಯ್ಲೆಂಡ್, ಮಲೇಷಿಯಾ,ಇಂಡೋನೇಷ್ಯಾಗಳಲ್ಲಿಯೂ ನೀರಾವರಿಯ ಮುಖ್ಯ ಸಾಧನ. ಅದರಲ್ಲೂ‌ ಶ್ರೀಲಂಕಾದ ಕೆರೆ ನೀರಾವರಿಯನ್ನು ವಿಶ್ವಸಂಸ್ಥೆಯ ಒಂದು ಅಂಗವಾದ ಯುನೆಸ್ಕೋ, ವಿಶ್ವದ ಪ್ರಮುಖ ಪಾರಂಪರಿಕ ವ್ಯವಸ್ಥೆ ಎಂದು ಘೋಷಿಸಿದೆ.

ಭಾರತದಲ್ಲಿ, ಇಡೀ ದಕ್ಷಿಣ ಭಾರತವೆಂಬ ಪರ್ಯಾಯ ದ್ವೀಪದಲ್ಲಿ ಕೆರೆ ವ್ಯವಸ್ಥೆ ಕೃಷಿಯ ಮುಖ್ಯ ಅಂಗಗಳಲ್ಲೊಂದಾಗಿತ್ತು. ಭಾರತದಲ್ಲಿ ಅತ್ಯಂತ ಹೆಚ್ಚು ಕೆರೆಗಳಿರುವ ರಾಜ್ಯ ಹಿಂದಿನ ಆಂಧ್ರಪ್ರದೇಶ. ದೇಶದಲ್ಲಿರುವ ಕೆರೆಗಳಲ್ಲಿನ ಕಾಲು ಭಾಗ ಈ ಎರಡು ರಾಜ್ಯಗಳಲ್ಲಿವೆ. ಕರ್ನಾಟಕದ ವಡ್ಡರ ಭಾಷೆ ತೆಲುಗು ಎಂಬುದಕ್ಕೂ ಇದಕ್ಕೂ ಸಂಬಂಧವಿರಬೇಕು. ಅತಿಹೆಚ್ಚು ಕೆರೆಗಳನ್ನು ಕಟ್ಟುತ್ತಾ ಪರಿಣತರಾದ ತೆಲುಗು ಭಾಷಿಕ ವಡ್ಡರನ್ನು ಕರ್ನಾಟಕಕ್ಕೆ ಕರೆಸಿಕೊಂಡಿರಬೇಕು. ಬದಾಮಿಯ ಮೊದಲ ಕೋಟೆಗಳನ್ನು, ಗುಹಾಲಯಗಳನ್ನು ಕಟ್ಟುವ ಕಾಲದಲ್ಲಿಯೇ ಗಣನೀಯ ಸಂಖ್ಯೆಯ ಕಲ್ಕುಟಿಗರು ತೆಲುಗು ಭಾಷೆಯವರೇ ಎಂದು ಷ. ಶೆಟ್ಟರ್ ಶೋಧಿಸಿದ್ದಾರೆ. ಅದರ ಜೊತೆಗೇ ಕೆರೆ ಕಟ್ಟೋಣದ ಕೆಲಸದ ಪರಿಣತರೂ ಅಲ್ಲಿಯವರೇ ಹೆಚ್ಚು ಎಂಬುದರಲ್ಲಿ ಆಶ್ಚರ್ಯವೇನಿಲ್ಲ.

ಕೆರೆಗಳ ಸಂಖ್ಯೆಯಲ್ಲಿ ನಂತರದ ಸ್ಥಾನಗಳು ತಮಿಳುನಾಡು ಹಾಗೂ ಕರ್ನಾಟಕಗಳದು.‌ ಗುಜರಾತು, ರಾಜಾಸ್ಥಾನ,  ಬಂಗಾಲಗಳಲ್ಲಿಯೂ ಕೆರೆ ನೀರಾವರಿ ಇದೆ.

ಕರ್ನಾಟಕದಲ್ಲಿ ಕೆರೆಗಳ ಬಗ್ಗೆ ಮೊದಲ ಆಳ್ವಿಕೆಗಾರರಾದ ಕದಂಬ, ಗಂಗರು, ಬಾದಾಮಿ ಚಾಲುಕ್ಯರ ಕಾಲದಲ್ಲಿ, ರಾಷ್ಟ್ರಕೂಟರ ಕಾಲದಲ್ಲಿಯೂ ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರ ಶಾಸನಗಳಲ್ಲಿ ಕಾಣುತ್ತಿದ್ದುದು, ಒಂಬತ್ತನೆಯ ಶತಮಾನದ ನಂತರ ಬಹಳ ಹೆಚ್ಚು ಕಾಣಲಾರಂಭಿಸಿವೆ. ಉತ್ತರ ಕರ್ನಾಟಕದಲ್ಲಿ ಕಲ್ಯಾಣದ ಚಾಲುಕ್ಯರ  ಕಾಲದಲ್ಲಿ, ದಕ್ಷಿಣ ಕರ್ನಾಟಕದಲ್ಲಿ ಹೊಯ್ಸಳರ ಕಾಲದಲ್ಲಿ.

ಈ ರಾಜವಂಶಗಳ ಕಾಲದಲ್ಲಿ ಎಂಬ ಮಾತನ್ನು ವಿಶೇಷವಾಗಿ ಗಮನಿಸಿ. ಒಬ್ಬ ರಾಜನ ಶಾಸನಗಳಲ್ಲಿ ಕೆರೆಯ ಪ್ರಸ್ತಾಪ ಬಂದಿದೆ ಎಂದರೆ ಅದನ್ನು ಆ ರಾಜ ಅಥವಾ ಅವನ ಅಧಿಕಾರಿಗಳು ಕಟ್ಟಿಸಿದರು ಎಂದರ್ಥವಲ್ಲ. ಬ್ರಾಹ್ಮಣರಿಗೋ, ದೇವಾಲಯಗಳಿಗೋ ಇಡಿಯಾಗಿ ಹಳ್ಳಿಯನ್ನು ಅಥವಾ ಒಂದಷ್ಟು ಭೂಮಿಯನ್ನು ದಾನ ಮಾಡಿದ ಸಂದರ್ಭದಲ್ಲಿ ಆ ಊರಿನ ಕೆರೆಗಳನ್ನು ‌ಆ ಶಾಸನದಲ್ಲಿ ದಾಖಲಿಸಲಾಗಿದೆ ಅಷ್ಟೇ. ಅಂದರೆ ಆ ಕೆರೆಗಳು ಈ ಶಾಸನ ಬರೆವ ಮೊದಲೇ ಕಟ್ಟಲ್ಪಟ್ಟು ಉಪಯೋಗದಲ್ಲಿದ್ದವು ಎಂದರ್ಥ. ಆ ಕೆರೆಗಳಡಿಯ ಭೂಮಿಯನ್ನು ರಾಜ ಅಥವಾ ಅವನ ಅಧಿಕಾರಿಗಳು ದಾನವಾಗಿ ಕೊಟ್ಟಿದ್ದಾರೆ. ಹೀಗೆ ದಾನ ನೀಡುವಾಗ ಕೆರೆಗಳ ನಿರಾವರಿಯಿಂದ ಉತ್ತಮ ಬೆಳೆ ಪಡೆಯುತ್ತಿದ್ದ ಭೂಮಿಯನ್ನೇ ಹೆಚ್ಚಾಗಿ ದಾನ‌ ಮಾಡಲು ಆರಿಸಿಕೊಳ್ಳಲಾಗುತ್ತಿತ್ತು‌ ಎಂದೂ ಅರ್ಥ. ಆ ಕೆರೆಗಳನ್ನು ಕಟ್ಟಿದವರು, ಕಟ್ಟಿಸಿದವರು ಯಾರು, ಹೀಗೆ ಗದ್ದೆಗಳನ್ನು ದಾನ ಮಾಡುವ ಮೊದಲು ಅವು ಯಾರಿಗೆ ಸೇರಿತ್ತು ಎಂಬೀ ಪ್ರಶ್ನೆಗಳದು ಬೇರೆಯೇ ಕತೆ.
ಅಂತಹ ಕೆಲವು ಉದಾಹರಣೆಗಳನ್ನು ನೋಡೋಣ:

ಬೆಂಗಳೂರು ಬಳಿಯ ಹೊಸಪೇಟೆ ತಾಲ್ಲೂಕಿನ ಪೊನ್ನಳ್ಳಿಯನ್ನು ಗಂಗರಾಜನು ಕ್ರಿಶ 777ರಲ್ಲಿ ದಾನ ನೀಡುವಾಗ ಅದರ ಸುತ್ತ ಐದು ಕೆರೆಗಳಿದ್ದುವೆಂದು ದಾಖಲಿಸಲಾಗಿದೆ.

ಕಲ್ಯಾಣದ ಚಾಲುಕ್ಯರ ರಾಜನು ಕ್ರಿಶ 707ರಲ್ಲಿ ಶಿಗ್ಗಾಂವ್ ಶಾಸನದಲ್ಲಿ ದಾನವಾಗಿತ್ತ ಗುಡಿಗೆರೆ ಎಂಬ ಗ್ರಾಮದ ಸುತ್ತಾ ಇದ್ದ 8 ಕೆರೆಗಳನ್ನು, ಅವುಗಳ ಬಳಕೆಯ ಹೆಸರುಗಳ ಸಹಿತವಾಗಿ ದಾಖಲಿಸಲಾಗಿದೆ.

ಕೃಷ್ಣರಾಜನಗರ – ಎಡತೊರೆ  ಬಳಿಯ ಒಂದು ಊರಿನಲ್ಲಿ ಕ್ರಿಶ 819ರಲ್ಲಿ ಇದ್ದ 14 ಕೆರೆಗಳನ್ನು, ಅವುಗಳ ಬಳಕೆಯ ಹೆಸರು, ಅವು ಊರಿಗೆ ಯಾವ ದಿಕ್ಕುಗಳಲ್ಲಿದ್ದವು ಎಂಬ ಮಾಹಿತಿಯೊಂದಿಗೆ ನಮೂದಿಸಲಾಗಿದೆ.

ಹೀಗೆ ಎಂಟನೆಯ ಶತಮಾನದಲ್ಲಿ ಹೆಚ್ಚಾದ ಕೆರೆಗಳ ದಾಖಲೆಗಳು, ಹತ್ತನೆಯ ಶತಮಾನದ ವೇಳೆಗೆ ಸಂಖ್ಯೆ ಇದ್ದಕ್ಕಿದ್ದಂತೆ ಮತ್ತಷ್ಟು ಹೆಚ್ಚಾಯಿತು. ಅಷ್ಟೇಅಲ್ಲ ಅವುಗಳ ಗಾತ್ರವೂ ಹೆಚ್ಚಾಯಿತು.

ಬಾಣ ವಂಶದ ದೊರೆ ವಿಜಯಾದಿತ್ಯನು ಕೋಲಾರದ ಬಳಿ ಕಟ್ಟಿಸಿದ ವಿಜಯಾದಿತ್ಯಮಂಗಲ ಕೆರೆಯು ಮುಂದೆ ಕ್ರಿಶ 950ರಲ್ಲಿ, 1155ರಲ್ಲಿ ಬಿರುಕು ಬಿಟ್ಟಾಗ ಮತ್ತೆ ಪುನರುಜ್ಜೀವನಗೊಳಿಸಲಾಗಿದೆ. ಅದರ ಏರಿ 5,100 ಅಡಿ ಉದ್ದ ಇದ್ದು ಕೆರೆ 580 ಎಕರೆಗೆ ನೀರುಣಿಸುತ್ತಿತ್ತು. ಈಗ ಈ ಕೆರೆ ಇನ್ನೂ ಉಪಯೋಗದಲ್ಲಿದ್ದು ನಗರಕ್ಕೆ ನೀರು ಸರಬರಾಜು ಮಾಡಲು ಉಪಯೋಗಿಸಲಾಗುತ್ತಿದೆ.

ತುಮಕೂರು ಕೆರೆಯು ಎಂಟುನೂರು ಎಕರೆಗೆ ನೀರು ಒದಗಿಸುವುದಾಗಿದ್ದು ಕ್ರಿಶ 955ಕ್ಕೆ ಮೊದಲೇ ಅಸ್ತಿತ್ವದಲ್ಲಿತ್ತು.
ಹೀಗೆ ಹತ್ತನೆಯ ಶತಮಾನದ ನೂರಾರು ಕೆರೆಗಳು ಇನ್ನೂ ಉಪಯೋಗದಲ್ಲಿವೆ.

ಮುಂದೆ 11 ಮತ್ತು 12ನೆಯ ಶತಮಾನವಂತೂ ಕೆರೆ ನಿರ್ಮಾಣದ ಸುವರ್ಣಯುಗ ಎಂದು ವರ್ಣಿಸಲಾಗಿದೆ. ಕೆರೆಗಳ ನಿರ್ಮಾಣದ ತಂತ್ರಜ್ಞಾನದಲ್ಲಿ ಉಂಟಾದ ಬೆಳವಣಿಗೆಗಳು, ದೊಡ್ಡ ಪ್ರಮಾಣದಲ್ಲಿ ನಿರ್ಮಾಣದ ಪರಿಣತಿ ಹಾಗೂ ಅನುಭವ ಪಡೆದ ಕೆಲಸಗಾರರು ಸಾವಿರ ಸಾವಿರ ಸಂಖ್ಯೆಯಲ್ಲಿ ತಯಾರಾಗಿದ್ದು ಒಂದೆಡೆ ಕೆರೆಗಳನ್ನು ಕಟ್ಟುವ ಸಾಧ್ಯತೆಗಳನ್ನು ಹೆಚ್ಚಿಸಿದವು.

ಮತ್ತೊಂದೆಡೆ ದೇಶದಲ್ಲಿ ಹಲವು ಬೆಳವಣಿಗೆಗಳಾಗುತ್ತಿದ್ದವು. ಭಾರತದ ನಗರಗಳ ಬೆಳವಣಿಗೆಯ ಇತಿಹಾಸದಲ್ಲಿ ಅತ್ಯಂತ ವಿಸ್ತಾರವಾದ ನಗರೀಕರಣ ಪ್ರಕ್ರಿಯೆ ಹತ್ತನೆಯ ಶತಮಾನದಲ್ಲಿ ಆರಂಭವಾಗಿತ್ತು. ಸಾಮ್ರಾಜ್ಯಗಳ ಆಡಳಿತದ ರಚನೆಯಲ್ಲಿ ಗಣನೀಯ ಬದಲಾವಣೆ ಉಂಟಾಗುತ್ತಿತ್ತು. ವಿವಿಧ ಪ್ರದೇಶಗಳಲ್ಲಿ ಸಾಮ್ರಾಜ್ಯದ ಅಧಿಕಾರಿಗಳ ಬದಲಾಗಿ ಕಿರು ರಾಜವಂಶಗಳು, ಸಾಮಂತರು, ಮಾಂಡಲಿಕರು, ನಾಡಗಾವುಂಡರು, ಊರ ಗಾವುಂಡರು ಎಂಬ ವಿವಿಧ ಸ್ತರಗಳ ಆಡಳಿತಗಾರರ ಬೆಳವಣಿಗೆ, ಈ ಸ್ತರಗಳ ಶ್ರೀಮಂತಿಕೆ ಹೆಚ್ಚಾಗುತ್ತಿತ್ತು. ಈ ಬೆಳವಣಿಗೆಗಳ ಪರಿಣಸಮವಾಗಿ ದೇವಾಲಯಗಳ ಹೆಚ್ಚಳ, ಪುರೋಹಿತಶಾಹಿಯ ವಿವಿಧ ಸ್ತರಗಳ ಹೆಚ್ಚಳ, ಅಕ್ಕಿ, ಹಣ್ಣು, ತರಕಾರಿ, ಹೂವುಗಳ ಹೆಚ್ಚು ಬೇಡಿಕೆ ಉಂಟಾಯಿತು. ಇವುಗಳೆಲ್ಲದರಿಂದ ಕೆರೆಗಳನ್ನು ಕಟ್ಟುವ ಒತ್ತಡ ಬಹಳ ಬಹಳ ಹೆಚ್ಚಾಯಿತು.
ಈ ಲೇಖನಮಾಲೆಯ ವ್ಯಾಪ್ತಿಯ ದೃಷ್ಟಿಯಿಂದ ಗಮನ ಕೆರೆಗಳ ತಂತ್ರಜ್ಞಾನದ ಬೆಳವಣಿಗೆಗಳ ಕಡೆಗೆ. ನಮ್ಮ ದೇಶದ ಇತಿಹಾಸಕಾರರು, ತಂತ್ರಜ್ಞರು, ತಂತ್ರಜ್ಞಾನದ ಇತಿಹಾಸಕಾರರ ಗಮನ ಈ ದಿಕ್ಕಿನಲ್ಲಿ ಹರಿದಿಲ್ಲ. ವಿವಿಧ ಹಂತಗಳಲ್ಲಿ ಕೆರೆಯ ತಂತ್ರಜ್ಞಾನ ಹೇಗೆ ಬೆಳೆಯಿತು ಎಂಬ ಬಗ್ಗೆ ಅಧ್ಯಯನ ಮಾಡಲಾಗಿಲ್ಲ. ದೇವಾಲಯಗಳ ಬಗ್ಗೆ ದ್ರಾವಿಡ ಶೈಲಿ, ನಾಗರ ಶೈಲಿ, ಕೇವಲ ಗರ್ಭಗುಡಿ ಮಾತ್ರವಾಗಿದ್ದ ರಚನೆಗಳಿಗೆ ಯಾವಾಗ, ಯಾವ ಮುಖಮಂಟಪ, ಯಾವ ರೀತಿಯ ಶಿಖರದ ಪರಿಕಲ್ಪನೆ ಯಾವ ಸಾಮ್ರಾಜ್ಯಗಳಲ್ಲಿ ಬೆಳೆಯಿತು ಎಂಬ ಬಗ್ಗೆ ಸಾವಿರಾರು ಇತಿಹಾಸಕಾರರು ಬೆವರು ಸುರಿಸಿದ್ದಾರೆ. ಉತ್ಖನನಗಳನ್ನು ನಡೆಸಿದ್ದಾರೆ. ಆದರೆ  ವಿವಿಧ ಹಂತದಲ್ಲಿ ಕಟ್ಟಲ್ಪಟ್ಟ ಕೆರೆಗಳ ಬಗ್ಗೆ ಅವುಗಳಲ್ಲಿ ಬಳಕೆಯಾದ ತಂತ್ರಜ್ಞಾನದ ಬಗ್ಗೆ ಅದೇ ಆಳವಾದ ಆಸಕ್ತಿಯಿಂದ ಅಧ್ಯಯನಗಳು ನಡೆದಿಲ್ಲ. ಸಾವಿರಾರು ವರ್ಷಗಳ ಕಾಲ ಕೆರೆಗಳಿಂದ ಪ್ರಯೋಜನ ಪಡೆದ ರಾಜ, ಸಾಮ್ರಾಟರಿಗೂ, ಪುರೋಹಿತರಿಗೂ ದೇವಾಲಯಗಳೇ ಆಸಕ್ತಿಯ ಕೇಂದ್ರ. ಆದರೆ ವೈಜ್ಞಾನಿಕ, ವೈಚಾರಿಕ ದೃಷ್ಟಿಕೋನದ ಪ್ರಜಾಪ್ರಭುತ್ವದಲ್ಲಿಯೂ ಕೂಡಾ ಜನರ ಬದುಕಿನ ಈ ಪ್ರಧಾನ ಅಂಶದ ಬಗ್ಗೆ ಗಮನ ಗಣನೀಯವಾಗಿ ಹರಿದಿಲ್ಲ ಎಂಬುದು ವಿಷಾದಕರ.

ಬಹಳ ಸುತ್ತು ಬಳಸಿದ ಮಾರ್ಗ ಹಿಡಿದು  ಹಿಂದಿನ ಲೇಖನದಲ್ಲಿ ವಿವರಿಸಿದ ಕೆರೆ ತಂತ್ರಜ್ಞಾನದ ಅಂಗಗಳಾದ ಏರಿ, ಕೋಡಿ, ತೂಬುಗಳ ರಚನೆ ಈ ಕಾಲಘಟ್ಟದಲ್ಲಿ  ಹೆಚ್ಚು ಉತ್ತಮಗೊಂಡಿದೆ ಎಂದಷ್ಟೇ ಹೇಳಬಹುದು. ಸಣ್ಣ ಕೆರೆಗಳಿಂದ ದೊಡ್ಡ ಕೆರೆಗಳತ್ತ, ಹೆಚ್ಚು ತೂಬುಗಳು, ಕೋಡಿಗಳಿರುವ ಕೆರೆಗಳು ಕಟ್ಟಲ್ಪಟ್ಟಿವೆ‌.

ಹತ್ತೊಂಬತ್ತನೆಯ ಶತಮಾನದಲ್ಲಿ ಕೆರೆಗಳನ್ನು ಗಮನಿಸಿದ, ಅಧ್ಯಯನ ಮಾಡಿದ ಯುರೋಪಿಯನ್ ತಂತ್ರಜ್ಞರಿಗೆ ಕೆರೆಯ ಹಲವು ಅಂಶಗಳು ಅಚ್ಚರಿ ಮೂಡಿಸಿದವು. ಅವುಗಳಲ್ಲಿ ಒಂದು – ಇಷ್ಟೊಂದು ಎತ್ತರ ಮತ್ತು ಗಾತ್ರದ ಮಣ್ಣಿನ ಏರಿಗಳು ಬೇರೆಲ್ಲ ಮಣ್ಣಿನ ರಚನೆಗಳಂತೆ ಏಕೆ ರಚನೆಯಾದ ಕೆಲ ವಾರ, ತಿಂಗಳುಗಳಲ್ಲಿ “ಸೆಟ್” ಆಗುವುದಿಲ್ಲ. ಮಣ್ಣಿನ ದೊಡ್ಡ, ಸಣ್ಣ ಹೆಂಟೆಗಳು, ಗಡ್ಡೆಗಳು ಪುಡಿ ಪುಡಿಯಾಗಿ, ಅವುಗಳ ನಡುವಿನ ಗಾಳಿ ಹೊರಹೋಗಿ ಮಣ್ಣು ಕುಸಿಯುವುದಕ್ಕೆ ಸೆಟ್ ಆಗುವುದು ಎನ್ನುತ್ತಾರೆ. ಹೀಗೆ ಸೆಟ್ ಆಗುವಾಗ ಒಂದೊಂದೆಡೆ ಒಂದೊಂದು ರೀತಿ ಆಗಿ ಹಳ್ಳ ದಿಣ್ಣೆ ಏರ್ಪಡುತ್ತದೆ, ಬಿರುಕುಗಳು ಮೂಡುತ್ತವೆ. ಮನೆ ಮುಂತಾದವನ್ನು ಕಟ್ಟುವಾಗ ಹೀಗಾಗುವುದನ್ನು ತಪ್ಪಿಸಲು ಧಮ್ಮಸು ಮಾಡುವುದು, ತುಳಿಯುವುದು ಇತ್ಯಾದಿ ಮಾಡುತ್ತಾರೆ. ಆದರೆ ಇಷ್ಟೊಂದು ಬೃಹತ್ ಆಕಾರದ ಮಣ್ಣಿನ ರಚನೆ ಮಾಡುವಾಗ ಹೀಗೆ ಅಸಮವಾಗಿ ಸೆಟ್ ಆಗಿ ಏರಿ ಏರುಪೇರಾಗುವ ಸಂಭವವನ್ನು ಹೇಗೆ ತಪ್ಪಿಸಲಾಗುತ್ತಿತ್ತು ಎಂದು ಅವರಿಗೆ ಬಹಳ ಆಶ್ಚರ್ಯ. ಅದರ ಬಗ್ಗೆ ಬಹಳ ಊಹೆಗಳು. ಅದರಲ್ಲಿ ಹತ್ತಾರು ಆನೆಗಳಿಂದ ಪದೇಪದೆ ತುಳಿಸಿ ಗಟ್ಟಿ ಮಾಡಲಾಗುತ್ತಿರಬಹುದು. ಏಕೆಂದರೆ ಏರಿಗಳ ಮಣ್ಣಿನ ಪ್ರಮಾಣ ಅಷ್ಟೊಂದು. ಆದರೆ ಕೆರೆಗಳ ಕಟ್ಟಲಾಗುತ್ತಿದ್ದ ಗ್ರಾಮ, ಕುಗ್ರಾಮಗಳಲ್ಲಿನ ನೂರಾರು ಕೆರೆ ನಿರ್ಮಾಣಕ್ಕಾಗಿ ಬೇಕಾಗುವ ವರ್ಷಕಾಲದಷ್ಟು ಸಮಯ ಆನೆಗಳನ್ನು ಒದಗಿಸುವುದು ಎಂತಹಾ ಸಾಮ್ರಾಟರಿಗಾದರೂ ಸಾಧ್ಯವೇ?

ಈ ಬಹಳ ಮುಖ್ಯ, ಸೂಕ್ಷ್ಮ ಸಮಸ್ಯೆಗೆ ಪರಿಹಾರ ಕಂಡುಹಿಡಿದವರು ವಿವಿಧ ರೀತಿಯ ಮಣ್ಣಿನ ಗುಣಗಳನ್ನು ವಿವಿಧ ಪರಿಸ್ಥಿತಿಗಳಲ್ಲಿ ಅದರ ವರ್ತನೆಯನ್ನು  ನೂರಾರು ವರ್ಷ, ತಲೆಮಾರುಗಳ ಕಾಲ ಕಂಡ ಮಣ್ಣೊಡ್ಡರು. ಏರಿಗಾಗಿ ಗುರುತು ಮಾಡಿದ ಪ್ರದೇಶದಲ್ಲಿ ಸಣ್ಣ ಕಟ್ಟೆ ಕಟ್ಟಿ ನೀರು ತುಂಬಿ, ನೀರಿನೊಳಕ್ಕೆ ಜೇಡಿಮಣ್ಣು ಹಾಕುತ್ತಾ ಅದರಲ್ಲಿ ಮಣ್ಣಿನ ಹೆಂಟೆ ಮತ್ತು‌ ಗಡ್ಡೆಗಳು ಕರಗಿ ಹೋಗುವಂತೆ ಮಧ್ಯೆ ಗಾಳಿ ತುಂಬಿಕೊಳ್ಳಲು ಅವಕಾಶವಾಗದಂತೆ ಮಾಡುತ್ತಿದ್ದರು. ಆದ್ದರಿಂದ ಅದು ನಂತರ ಸೆಟ್ ಆಗುತ್ತಾ ಕುಸಿಯುವ ಸಂಭವ ಉದ್ಭವಿಸುತ್ತಿರಲಿಲ್ಲ ಎಂದು ಬ್ರಿಟಿಷ್ ಮೊದಲಾದ ದೇಶಗಳ ತಂತ್ರಜ್ಞರು ಅಧ್ಯಯನ ಮಾಡಿ ದಾಖಲಿಸಿದ್ದಾರೆ.

ಇದು ಒಂದು ಅಂಶವಷ್ಟೇ. ಈ ಇಂಜನಿಯರ್‌ಗಳ ತಲೆಗೆ ಕೆಲಸ ಕೊಟ್ಟ ಮತ್ತೊಂದು ಅಂಶ ಏರಿಗಳ ಬುಡದಲ್ಲಿ ಅಗಲವಾಗಿದ್ದು ಮೇಲೆ ಕಿರಿದಾಗುವುದಕ್ಕೆ ಬೇಕಾದ ಇಳಿಜಾರು ಹಾಗೂ ಹತ್ತಾರು ಮೈಲು ಉದ್ದದ ಪ್ರಧಾನ ಕಾಲುವೆಗಳನ್ನು ಅಗೆಯುವಾಗ ಒಂದೇ ಸಮನಾದ ಇಳಿಜಾರನ್ನು ಹೇಗೆ ಕಂಡುಕೊಳ್ಳುತ್ತಿದ್ದರು ಎಂಬುದು. ‌ಆಧುನಿಕ ಕಾಲದಲ್ಲಿ ವಿವಿಧ ಸರ್ವೇ, survey ಉಪಕರಣಗಳನ್ನು ಬಳಸಿ ತಿಂಗಳುಗಟ್ಟಲೆ ಸರ್ವೇ ಮಾಡಿ ಕಾಲುವೆ ರೂಪಿಸುತ್ತಾರೆ. ಆಗ ಹೇಗೆ? ಅದು ಇನ್ನೂ ಬಗೆಹರಿದಿಲ್ಲ. ಕೇವಲ ರಸಮಟ್ಟವೊಂದೇ ಅವರ ಸಾಧನವಾಗಿತ್ತು. ಈ ಒಡ್ಡರು ಬಳಸುತ್ತಿದ್ದ ಉಪಕರಣಗಳೋ ಕಬ್ಬಿಣ ಯುಗದ  ಆದಿಯಿಂದ ಬಂದ ಹಾರೆ, ಪಿಕಾಸಿ, ಸಲಿಕೆ ಜೊತೆಗೆ ಬಿದಿರಿನ ಬುಟ್ಟಿ ಇಷ್ಟೇ. ಯುರೋಪಿನಲ್ಲಿ ಹಲವು ಕಾಲದಿಂದ ಉಪಯೋಗಿಸುತ್ತಿದ್ದ ಸಣ್ಣ ಕೈಬಂಡಿಗಳೂ ಇಲ್ಲಿ ಲಭ್ಯವಿರಲಿಲ್ಲ. ಕೇವಲ ಅನುಭವ, ಕೌಶಲ್ಯ ಮತ್ತು ಬುದ್ಧಿವಂತಿಕೆಯಿಂದ ಈ ಕೆರೆಗಳನ್ನು ಕಟ್ಟಿದ ಈ ಒಡ್ಡರ ಜಾಣ್ಮೆ ಮೆಚ್ಚಬೇಕಾದ್ದೇ!

ಆದರೆ ಈ ಕಾಲಘಟ್ಟದಲ್ಲಿ ಆದ ಬಹಳ ಮುಖ್ಯ ಮತ್ತು ದೊಡ್ಡ ಬೆಳವಣಿಗೆಯೆಂದರೆ ಒಂದು ತೊರೆ, ಹಳ್ಳಕ್ಕೆ ಅಡ್ಡಕಟ್ಟೆ ಹಾಕುವಾಗ ಬಿರುಮಳೆಗಳ ಸಂದರ್ಭದಲ್ಲಿ ನೀರಿನ ಪ್ರವಾಹ ಏರಿ ಬಂದು ಏರಿ ಒಡೆಯುವುದನ್ನು ತಪ್ಪಿಸಲು ಈ ತೊರೆ, ಹಳ್ಳ ಇನ್ನೂ ಸಣ್ಣದಾಗಿ ಹರಿಯುವ ಆರಂಭ ಘಟ್ಟದಲ್ಲಿಯೇ ಅಡ್ಡಗಟ್ಟೆ ಹಾಕುವುದು ಪರಿಣಾಮಕಾರಿ ಪರಿಹಾರ ಎಂದು ಕಂಡುಕೊಂಡಿದ್ದು. ಹೀಗೆ ಒಂದರ ಮೇಲೊಂದು ಸರಣಿಯಂತೆ ಕೆರೆಗಳನ್ನು ಕಟ್ಟಿದರೆ ಈ ತೊರೆ ಹಳ್ಳವಾಗಿ ಹೆಚ್ಚೆಚ್ಚು ನೀರು ಶೇಖರವಾಗುತ್ತಾ ದೊಡ್ಡ ದೊಡ್ಡ ಕೆರೆಗಳನ್ನು ಕಟ್ಟುವುದೂ ಸಾಧ್ಯ ಎಂಬುದನ್ನು ಕಂಡುಹಿಡಿದುಕೊಂಡರು. ಇದರಿಂದಾಗಿ ಒಂದು ತೊರೆಯ, ಹಳ್ಳದ ಮಧ್ಯದಲ್ಲೆಲ್ಲೋ ಕಟ್ಟಿದ ಒಂದು ಕೆರೆಗೆ ಇದ್ದಕ್ಕಿದ್ದಂತೆ ಊಹಿಸಲಾಗದಷ್ಟು ನೀರು ಬಂದು ಕೆರೆ ಒಡೆಯುವುದನ್ನು ತಪ್ಪಿಸಿತು.

ತೊರೆ ಅಥವಾ ಹಳ್ಳಗಳು ಆರಂಭದಲ್ಲಿ ಸಣ್ಣ ಸಣ್ಣ ಕೆರೆಗಳು, ನಂತರ ಮಧ್ಯಮ ಗಾತ್ರದ ಕೆರೆಗಳು, ಸರ್ವಕಾಲಿಕ ಉಪನದಿಗಳಿಗೆ ಇವು ಸೇರುವುದಕ್ಕೆ ಸ್ವಲ್ಪ ಮೊದಲು ದೊಡ್ಡ ಕೆರೆಗಳು ಹೀಗೆ ಒಂದು ಸರಪಣಿ ಏರ್ಪಟ್ಟಿತು. ಒಂದು ಕೆರೆಯಿಂದ ಹೆಚ್ಚಾದ ನೀರು ಮತ್ತೊಂದು ಕೆರೆಗೆ ಅದರ ಕೋಡಿಯಿಂದ ಹರಿವ ನೀರು ಮಗದೊಂದು ಕೆರೆಗೆ ಹೀಗೆ ಒಂದು ಕಡೆ ಕೆರೆಯ ಭದ್ರತೆ, ಮತ್ತೊಂದು ಕಡೆ ನೀರಿನ ಪೂರ್ಣ ಉಪಯೋಗ ಎರಡೂ ಸಿದ್ಧಿಸಿತು.

ಕಾವೇರಿ, ಕೃಷ್ಣಾ, ತುಂಗಭದ್ರಗಳಂತಹ ಸರ್ವಕಾಲ ನದಿ ಉಪನದಿಗಳಿಗೆ ಅಣೆಕಟ್ಟು ಕಟ್ಟುವುದಕ್ಕೆ ಬೇಕಾದ ಆಧುನಿಕ ಇಂಜನಿಯರಿಂಗ್ ತಂತ್ರಜ್ಞಾನ ಅಂದು ಲಭ್ಯವಿರಲಿಲ್ಲ. ಆದರೆ ನದಿ, ಉಪನದಿಗಳಿಗೆ ನೀರುಣಿಸುವ ಹಲವು ತೊರೆ, ಹಳ್ಳಗಳಿಗೆ ಅವುಗಳ ಉಗಮಗೊಂಡ ಬೆಟ್ಟ ಗುಡ್ಡಗಳಿಂದ ಆರಂಭವಾಗಿ ಉದ್ದಕ್ಕೂ ನೂರಾರು ಕೆರೆಗಳನ್ನು ಕಟ್ಟುತ್ತಾ ಬಂದರೆ ಆ ಉಪನದಿಗಳಿಗೇ ಅಣೆಕಟ್ಟು ಕಟ್ಟಿದಷ್ಟು ಪ್ರಯೋಜನ ಕೃಷಿಗೆ ಲಭ್ಯವಾಗುತ್ತಿತ್ತು.

ಈ ಕೆರೆಗಳ ಸರಣಿಯುದ್ದಕ್ಕೂ ಎರಡು ಕೆರೆಗಳ ಮಧ್ಯೆ ಗದ್ದೆಗಳು, ತೆಂಗು, ಅಡಿಕೆ, ಮಾವು, ಬಾಳೆಗಳ ತೋಟಗಳು ಕಂಗೊಳಿಸುತ್ತಿದ್ದವು. ಈ ಗದ್ದೆ, ತೋಟಗಳಿಗೆ ಕಟ್ಟಿದ ನೀರು ಕೂಡಾ ಜನಿದು ಕೆಳಗಿನ ಕೆರೆಗಳನ್ನು ಸೇರುತ್ತವೆ. ಜೊತೆಗೆ ಈ ಜಾಲದ ಉದ್ದಕ್ಕೂ ಬಾವಿಗಳಲ್ಲಿ ಅಂತರ್ಜಲದ ಮಟ್ಟ ಮೇಲೆಯೇ ಇರುತ್ತದೆ. ಅವುಗಳಿಂದಲೂ ಕೂಡಾ ನೀರಾವರಿ ಹೆಚ್ಚುತ್ತದೆ.

ಇಪ್ಪತ್ತನೆಯ ಶತಮಾನದಲ್ಲಿ ಈ ರೀತಿಯ ತಂತ್ರಜ್ಞಾನಕ್ಕೆ watershed ಜಲಾನಯನ ತಂತ್ರಜ್ಞಾನ ಎನ್ನುತ್ತಾರೆ. ಇದು ನಿಮಗ್ಯಾರಿಗೂ ಗೊತ್ತಿಲ್ಲದ ಒಂದು ಹೊಸ ತಿಳುವಳಿಕೆ ಎಂಬ ವೇಷದಲ್ಲಿ ಬಂತು. ಆದರೆ ಸರಣಿ  ಕೆರೆಗಳನ್ನು ಕಟ್ಟಿದವರು ತಮಗೇ ಅರಿವಿಲ್ಲದೆ ಇದರ ಹಲವು ಅಂಶಗಳನ್ನು ಪ್ರಯೋಗಿಸಿ ತೋರಿಸಿದ್ದರು.

ಕೆರೆ ನಿರ್ಮಾಣದ ಆರಂಭದಲ್ಲಿ ಅವುಗಳನ್ನು ಕಟ್ಟಲು ಒಂದು ಹಳ್ಳಿ ಅಥವಾ ಸುತ್ತಲಿನ ಕೆಲವು ಹಳ್ಳಿಗಳ ಕುಲಗಳ ಮುಖ್ಯಸ್ಥರು, ಊರ ಗಾವುಂಡರು, ಆ ಊರಿನ ಸ್ವತಂತ್ರವಾಗಿ ಭೂಮಿ ಹೊಂದಿದ್ದ ರೈತರು ಕುಲದ/ಗ್ರಾಮದ ಪಂಚಾಯ್ತಿ ಸೇರಿ ಕೆರೆ ಕಟ್ಟಲು ತೀರ್ಮಾನಿಸುತ್ತಿದ್ದರು. ಹಲವೊಮ್ಮೆ ಹೆಚ್ಚು ಭೂಮಿಯಿದ್ದ ಭೂಮಾಲಕ ತಾನೊಬ್ಬನೇ ತೀರ್ಮಾನ ತೆಗೆದುಕೊಳ್ಳುತ್ತಿದ್ದುದು ಕೆರೆಗೆ ಹಾರ, ಕೆರೆ ಹೊನ್ನಮ್ಮ ಮೊದಲಾದ ಲಾವಣಿಗಳಿಂದ ತಿಳಿದುಬರುತ್ತದೆ.
“ಕಲ್ಲನಕೇರಿ ಮಲ್ಲನಗೌಡ ಕೆರಿಯೊಂದ ಕಟ್ಟಿಸ್ಯಾನು” ಎಂಬಂತೆ.

ಈ ರೀತಿಯ ಕೆರೆಗಳ ಕಟ್ಟೋಣ ಅವರವರ ಮ‌ನಸ್ಸಿಗೆ ಬಂದಂತೆ ಇರುತ್ತಿದ್ದವೇ ವಿನಃ ಸರಣಿ ರೂಪದಲ್ಲಿ ಇರುತ್ತಿರಲಿಲ್ಲ. ಆದರೆ ಕೆರೆಗಳ ಸರಣಿಯೇ ಕೆರೆಗಳ ಭದ್ರತೆಗೆ ದಾರಿ ಎಂದು ಕಂಡುಕೊಂಡ ಒಡ್ಡರು ಈ ಊರ ಗಾವುಂಡರಿಗೆ ಇದರ ಮನವರಿಕೆ ಮಾಡತೊಡಗಿದರು. ಇದು ಎರಡು ರೀತಿಯಲ್ಲಿ ಕಾರ್ಯರೂಪಕ್ಕೆ ಬಂದಂತೆ ಜಾನಪದಗೀತೆ, ಪ್ರತೀತಿಗಳು ಹಾಗೂ ಶಾಸನಗಳ ಜೋಡಿ ಓದಿನಿಂದ ತಿಳಿದುಬರುತ್ತದೆ.

ಒಂದು ಒಂದು ಹಳ್ಳ ಅಥವಾ ಸಣ್ಣ ಉಪನದಿಗೆ ಒಂದು ಜಾಗದಲ್ಲಿ ಕೆರೆ ಕಟ್ಟಿದ ಒಡ್ಡರು ತಾವಾಗಿಯೇ ಆ ಹಳ್ಳದ ದಾರಿಗುಂಟ ಇರುವ ಇತರ ಊರುಗಳ ಗೌಡರುಗಳನ್ನು ಭೇಟಿ ಮಾಡಿ, ಅವರಿಗೆ ಕೆರೆ ಕಟ್ಟುವುದರ ಪ್ರಯೋಜನವನ್ನು ವಿವರಿಸಿ ಮನವೊಲಿಸಿ ಅವರ ಊರಿನಲ್ಲಿ ಕೆರೆ ಕಟ್ಟಿಸಲು ಪ್ರೇರೇಪಿಸುವುದು.

ಇದರ ಉದಾಹರಣೆಯನ್ನು ಕೆರೆ ಹೊನ್ನಮ್ಮ ಲಾವಣಿಯಲ್ಲಿ ನೋಡುತ್ತೇವೆ. ಊರ ಮುಂದೆ ಮೂರು ಸಾವಿರ ಒಡ್ಡರು ಬಂದು ಬೀಡು ಬಿಟ್ಟಿದ್ದಾರೆ. ಕೆರೆ ಹೊನ್ನಮ್ಮ ದೂರದಿಂದ ನೀರನ್ನು ಹೊತ್ತು ತರುವಾಗ ಕುಡಿಯುವ ನೀರನ್ನು ಕೇಳುತ್ತಾರೆ. ಅವಳಿಂದ ಊರಿನ ನೀರ ಬವಣೆ ತಿಳಿಯುತ್ತದೆ. ಅವಳ ಮೂಲಕವೇ ಅವಳ ಮಾವನಾದ ಊರಗೌಡನನ್ನು ಭೇಟಿ ಮಾಡಿ ಕೆರೆ ಕಟ್ಟುವ ಬಗ್ಗೆ ಮಾತಾಡಿ, ಕೂಲಿ ಒಪ್ಪಂದ ಮಾಡಿಕೊಂಡು ಕೆರೆ ಕಟ್ಟುತ್ತಾರೆ.

ಮತ್ತೊಂದು ವಿಧಾನ ಒಂದು ಕೆರೆಯ ಭದ್ರತೆಗೆ ಕೆರೆ ಸರಣಿಯ ಪ್ರಯೋಜನವನ್ನು ಊರ ಗೌಡರುಗಳಿಗೆ ವಿವರಿಸಿದಾಗ ಅವರು ಆ ಸರಣಿಯಲ್ಲಿ ಬರುವ ಊರುಗಳ ಗಾವುಂಡರುಗಳನ್ನೆಲ್ಲಾ ಕೂಡಿಸಿ, ಚರ್ಚಿಸಿ ಸರಣಿ ಕೆರೆಗಳನ್ನು ಕಟ್ಟಿಸಲು ಯೋಜಿಸುವುದು. ಇದು ಈ ಗಾವುಂಡತನ ಊರಿನಿಂದಾಚೆಗೆ ನಾಡಗಾವುಂಡತನಕ್ಕೆ, ಸ್ಥಳೀಯ ಕಿರು ರಾಜವಂಶಗಳಿಗೆ ದಾರಿ ಮಾಡಿಕೊಟ್ಟಿತೇ? ಒಂದು ಸಾಧ್ಯತೆ. ಏಕೆಂದರೆ ಈ ರೀತಿ ಕೆರೆಗಳ ಸರಣಿ, ವಿಫುಲ ಸಂಖ್ಯೆಯ ಕೆರೆಗಳ ನಿರ್ಮಾಣದ ಸಮಯದಲ್ಲಿಯೇ ಕೆರೆಗಳು ಬಾಹುಳ್ಯವಿರುವ ಮಲೆನಾಡು, ಅರೆ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ ಧಾರವಾಡ, ದಾವಣಗೆರೆ ಮೊದಲಾದ ಜಿಲ್ಲೆಗಳ ಪ್ರದೇಶದಲ್ಲಿ ಗುತ್ತರು, ಸಿಂಧರು, ಹಾನಗಲ್ಲ ಕದಂಬರು, ಶಿಲಾಹಾರರು, ಕೆಳದಿ, ಇಕ್ಕೇರಿ ಮೊದಲಾದ ರಾಜಮನೆತನಗಳು ಉದ್ಭವಿಸಿವೆ.

ಇದೇ ರೀತಿಯಲ್ಲಿ ಕೆಲವು ಮಾಂಡಲಿಕರು – ಅಂತಹ ಒಬ್ಬ ಭವನ ಗಂಧವಾರಣ ಹತ್ತಾರು ಕೆರೆಗಳನ್ನು ಕಟ್ಟಿಸಿದ್ದಾನೆ. ನೊಕ್ಕಯ್ಯ ಎಂಬ ಪಟ್ಟಣಶೆಟ್ಟಿ ಕೂಡಾ ಹಲವರು ಕೆರೆಗಳನ್ನು ಕಟ್ಟಿಸಿ ಹೆಸರಾಗಿದ್ದಾನೆ.

ಇಂತಹ ಕೆರೆಗಳ ಸರಣಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲಿಯೂ ವ್ಯಾಪಕವಾಗಿ ಕಾಣುತ್ತದೆ.‌ ಬೆಂಗಳೂರು ಬಳಿಯ ಅರ್ಕಾವತಿ, ಪಾಲಾರ್, ಪೆನ್ನಾರ್, ವೃಷಭಾವತಿ ಉಪನದಿಗಳನ್ನಂತೂ ಈ ಕೆರೆಗಳ ಜಾಲ ಪೂರ್ತಿಯಾಗಿ ಆವರಿಸಿತ್ತು.

ಆದರೆ ಹಲವಾರು ಎಡೆಗಳಲ್ಲಿ ಗರ್ಭಿಣಿ ಸ್ತ್ರೀಯರನ್ನು ಕೆರೆಗೆ ಹಾರ ಕೊಡುತ್ತಿದ್ದ ಕ್ರೌರ್ಯ ಹೇಗೆ, ಏಕೆ ಹಲವೆಡೆ ಕಾಣಿಸುತ್ತದೆ.
ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್ ಡೌನ್ ಎಂಬ ಇಂಗ್ಲಿಷ್ ಶಿಶುಗೀತೆಗೂ, ಮಾಯದಂತ ಮಳೆ ಬಂದಾಗ ನಾ ನಿಲ್ಲುವಳಲ್ಲ ಎಂದ ಮದಗದ ಕೆರೆಯ ಗಂಗಮ್ಮನಿಗೂ ಏನು ಸಂಬಂಧ? ಮುಂದಿನ ಲೇಖನದಲ್ಲಿ.

‍ಲೇಖಕರು avadhi

July 1, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: