
ಎಸ್ ಪಿ ಜಯಲಕ್ಷ್ಮಿ
ನೇಸರನ ತೆಕ್ಕೆಯಲಿ ಎಳೆಗಿರಣ ಪ್ರೀತಿಯಲಿ,
ನಕ್ಕೀತು ಪ್ರೀತಿ ಕಮಲ..
ಚಂದ್ರನಾ ಚಂದ್ರಿಕೆಯಲಿ, ಜೊನ್ನ ಅಮಲಿನಲಿ
ಅರಳೀತು ನೀಲ ಕಮಲ..
ನಿಶೆಯ ಹಾಸಿನಲಿ, ಚಂದ್ರಮನ ತೆಕ್ಕೆಯಲಿ
ಹೊಳೆಹೊಳೆದೀತು ಚಿಕ್ಕೆ ತಾರೆ.
ಸಂಜೆ ಸೂರ್ಯಾಸ್ತದಲಿ ಬೆಡಗು ಬಣ್ಣಗಳಲ್ಲಿ
ಕೆಂಪಾದೀತು ಪೃಥವಿ ಕದಪು…
ನೀ ನಗಲು, ನಗುವ ನಿನ್ನ ತೆಕ್ಕೆಯ ನಾನಾಂತಿರಲು
ನಿನ್ನ ಕಂಗಳ ದಿಟ್ಟಿಯಲಿ ನೂರು ಜೇನ ಪಿಸುಗಿರಲು
ನಾನರಳದಿರುವೆನೇ ಗೆಳೆಯಾ…
ಅರಳಿ ಬಿರಿಯುತ್ತ, ಸುತ್ತ ನಗೆಸುಮವ ಚೆಲ್ಲುತ್ತ
ಸೃಷ್ಟಿ ಉಳುಮೆಗೆ ಬಸಿರ ಬಯಸದಿರುವೆನೇ
ಗೆಳೆಯಾ…
ನೀ ಸೂರ್ಯ, ನೀ ಚಂದ್ರ
ನಾ ಪೃಥಿವಿ, ನಾ ಕಮಲ
ನಾ- ನೀನು ಅಳಿಯುತ್ತ, ಸುಖ ಸೂರೆಗೈಯ್ಯುತ್ತ
ಈ ಸೃಷ್ಟಿ ಪೊರೆಯುತ್ತ, ಸುತ್ತ ಸುಖ ಹಂಚುತ್ತ
ಓ ನನ್ನ ಗೆಳೆಯಾ,
ಹೂವು ಹಾವಾಗದಾ ಹಾಗೆ
ಪೃಥಿವಿ ಬಿರಿಯದ ಹಾಗೆ
ಗ್ರಹಣ ಹಿಡಿಯದ ಹಾಗೆ
ನಿಃಶ್ಯಬ್ಧ ರಾತ್ರಿಗಳು, ಧ್ಯಾನಸ್ಥ ಹಗಲುಗಳು
ಒಂದಕೊಂದಿಂಬಾಗಿ
ಶಿವಶಿವೆಗೆ ವರವಾಗಿ
ಸುತ್ತೆಲ್ಲ ಬಿತ್ತಾಗಿ, ಬಿತ್ತು ಬೆಳೆಯಾಗಿ
ಮುತ್ತು ಸುರಿಯಲಿ ಗೆಳೆಯಾ
ಹೊತ್ತು ತೂಗಲಿ ಇನಿಯಾ….






0 Comments