ದೇವ.. ದೇವಾ

ನಾ ಕಂಡಂತೆ ದೇವರು..

ಶೋಭಾ ಪಾಟೀಲ್

ಬಾಲ್ಯದಲ್ಲಿದ್ದಾಗ ದೇವರೆಂದರೆ ಕೇಳಿದ್ದೆಲ್ಲ ಕೊಡುವವನು, ತಪ್ಪು ಮಾಡಿದರೆ ಕ್ಷಮಿಸಿ ಬಿಡುವವನು, ಎಲ್ಲವೂ ಅವನ ಇಚ್ಛೆಯಂತೆ ನಡೆಯುವದೆಂದು ತಿಳಿದಿದ್ದೆ. ಆಗ ನನ್ನೊಂದಿಗೆ ನಡೆದ ಕೆಲವು ಘಟನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಚ್ಛಿಸುವೆ.

ದೇವರೆಂದರೆ ನಮ್ಮನ್ನೆಲ್ಲ ಪರೀಕ್ಷೆಯಲ್ಲಿ ಪಾಸು ಮಾಡುವವ ಎಂಬುದು ತಲೆಯಲ್ಲಿ ಆಗ ಎಷ್ಟು ತುಂಬಿತೆಂದರೆ ಪರೀಕ್ಷೆ ಹತ್ತಿರ ಬಂದಂತೆ ಗೆಳತಿಯರೆಲ್ಲ ಸೇರಿ ಓದುವದನ್ನು ಬಿಟ್ಟು, ಕಂಡ ಕಂಡ ದೇವರಿಗೆ ನಮಸ್ಕಾರ ಮಾಡುತ್ತಾ ತಿರುಗುತಿದ್ದೆವು. ಬರು ಬರುತ್ತಾ ಬೇಡಿಕೆಗಳೂ ಹೆಚ್ಚುತ್ತಾ ಹೋದಂತೆ ಆಯಾ ಬೇಡಿಕೆಗಳಿಗೆ ಒಬ್ಬಬ್ಬ ದೇವರಿರುತ್ತಾನೆ ಎಂಬ ವಿಚಾರಗಳು ಗೊತ್ತಾದವು. ವಿದ್ಯೆಗೆ, ಹಣಕ್ಕೆ (ಭಯಕ್ಕೆ, ಮಾನಸಿಕ ಕಾಯಿಲೆಗಳಿಗೆ ಮಸೀದಿಗೆ ಹೋಗುವ ಪದ್ದತಿ ನಮ್ಮೂರಲ್ಲಿ ಇದೆ) ಹೀಗೆ ದೇವರುಗಳ ಪಟ್ಟಿ ಬೆಳೆಯುತ್ತಾ ಹೋಯಿತು.

ಘಟನೆ ೧.

ಬೇಸಿಗೆ ರಜೆಗೆ ಸಂಬಂಧಿಯೊಬ್ಬರ ಹಳ್ಳಿಗೆ ಹೋಗಿದ್ದೆ. ಮನೆಯಲ್ಲಿ ನಾವೆಲ್ಲ ಮಕ್ಕಳು ಊಟಕ್ಕೆ ಸಾಲಾಗಿ ಕುಳಿತಿದ್ದೆವು. ಆ ಮನೆಯ ಯಜಮಾನಿ (ಅಜ್ಜಿ) ಅಡಿಗೆ ಮನೆ ಬಾಗಿಲಿಗೆ ಬಂದವಳೇ ಹಾ ಹಾ ಹೋ ಹೋ ಎಂದು ಎರಡು ಕೈ ಮೇಲೆತ್ತಿ ಜೋರಾಗಿ ನಡಗ ತೊಡಗಿದಳು. ಎಲ್ಲ (ಆ ಮನೆಯ ಸೊಸೆಯಂದಿರು) ಅಜ್ಜಿಯ ಪಾದ ಹಿಡಿದರು, ನನಗೋ ಅವಳು ಮಾಡುವುದು ನೋಡಿ ಭಯವಾಗಿ ಹೊರಗೆ ಹೋಗಲು ಅದೇ ಬಾಗಿಲಿರುವುದರಿಂದ ನಾನು ಜೋರಾಗಿ ಅಜ್ಜಿಯನ್ನು ತಳ್ಳಿ ಹೊರಗೆ ಓಡಿದೆ. ನನ್ನ ತಳ್ಳುವಿಕೆಗೆ ಆ ದಷ್ಟ ಪುಷ್ಟ ಅಜ್ಜಿ ದಪ್ಪನೆ ಬಿದ್ದಳು.

ನಾನು ಎದ್ದೆನೋ ಬಿದ್ದೆನೋ ಎನ್ನುತ್ತಾ ಮನೆಯಿಂದ ಸುಮಾರು ದೂರ ಓಡಿ ಹೋಗಿದ್ದೆ. ಆಮೇಲೆ ನನ್ನೆಲ್ಲ ಓರಿಗೆಯವರು ಕರೆಯಲು ಬಂದರು ಹಾಗೂ ಅಜ್ಜಿ ಮೈಮೇಲೆ ದೇವರು ಬಂದಿತ್ತೆಂದು ಹೇಳಿದರು.

ಮೈಮೇಲೆ ದೇವರು ಬರುತ್ತಾನೆಂದು ಆಗಲೇ ಗೊತ್ತಾಯಿತು. ನನ್ನ ತಲೆಯಲ್ಲಿ ಹುಳಬಿಟ್ಟ ಹಾಗೆ ಆಯಿತು. ಏಕೆಂದರೆ ನಾನು ಪಾಸ್ ಆಗುತ್ತೇನೋ ಇಲ್ಲವೋ ಎಂದು ದೇವರಿಗೆ ಕೇಳಬೇಕಿತ್ತು. (ಆಗ ನಾನು ೪ನೇ ಕ್ಲಾಸ್) ಮತ್ತೆ ದೇವರು ಯಾವಾಗ ಬರುತ್ತಾನೆ ಎಂದು ಮನೆಯಲ್ಲಿದ್ದವರಿಗೆಲ್ಲ ಕೇಳುವುದೇ ನನ್ನ ಕೆಲಸವಾಯಿತು. ಒಂದು ನಿಮಿಷ ಹೊರಗೆ ಹೋಗಿ ಬಂದರೂ ದೇವರು ಬಂದಿತ್ತಾ ಎಂದು ನಾನು ಪದೇ ಪದೇ ಕೇಳುವುದನ್ನು ನೋಡಿ ನನ್ನ ಕಿರಿ ಕಿರಿಗೆ ಏನೋ.. ಹಾ೦! ಬಂದಿತ್ತು ನೀನು ಪಾಸ್ ಆಗುವೆ ಎಂದು ಹೇಳಿದರು.

ನನಗೆ ಸಂಶಯ ಬಂದು, ಆ ಅಜ್ಜಿಗೆ, ಯಾವಾಗ ಬಂದಿತ್ತು? ನೀನು ಎಲ್ಲಿದ್ದಾಗ ಬಂದಿತ್ತು? ಏನು ಹೇಳಿತು? ಎಷ್ಟು ಮಾರ್ಕ್ಸ್ ಬೀಳುತ್ತೆ ಅಂತ ಹೇಳಿತು? ಎಂದು ಪ್ರಶ್ನೆ ಹಾಕತೊಡಗಿದೆ. ಆಗ ಅಜ್ಜಿ ಸಿಟ್ಟಿನಿಂದ ದೇವರು ಬಂದಾಗ ನನಗೆ ಏನು ಗೊತ್ತಾಗುವುದಿಲ್ಲ ಎಂದು ಬೈದಳು.

ನನಗೆ ಹಿಗ್ಗೋ ಹಿಗ್ಗು. ನಾನಿದ್ದಾಗ ದೇವರು ಬರಲಿಲ್ಲವಲ್ಲ ಏಕೆಂದರೆ ದೇವರು ಬಂದಾಗ ದೇವರ ವರ್ತನೆ ಭಯಂಕರವಾಗಿತ್ತು.

ಘಟನೆ ೨.

ಒಮ್ಮೆ ನನ್ನ ಕಂಪಾಸ್ ಬಾಕ್ಸ್ ಕಳೆದುಕೊಂಡೆ. ಅದರಲ್ಲಿ ಬೆಲೆಬಾಳುವ ವಸ್ತುಗಳು ಏನು ಇರಲಿಲ್ಲ. (ಗುಂಜಿ, ಹಣ್ಣಿನ ಗಿಡದ ಬೀಜಗಳು, ಸ್ಟ್ಯಾಂಪ್ಸ್ ಪೇಪರ್, ಚಿತ್ರ ವಿಚಿತ್ರ ಸಣ್ಣ ಸಣ್ಣ ಕಲ್ಲುಗಳು) ಹೀಗೆ ನನ್ನ ಅತ್ಯಮೂಲ್ಯವಾದ ವಸ್ತುಗಳನ್ನು ಕಳೆದು ಕೊಂಡ ಬಗ್ಗೆ ತುಂಬಾ ನೋವಿನಲ್ಲಿದ್ದಾಗ ಗೆಳತಿಯೊಬ್ಬಳು ದೇವಸ್ಥಾನ ಒಂದರಲ್ಲಿ ಕಳೆದ ವಸ್ತು ಸಿಗುವ ಬಗ್ಗೆ ಜ್ಯೋತಿಷ್ಯ ಹೇಳುತ್ತಾರೆ ಎಂದು ಕರೆದುಕೊಂಡು ಹೋದಳು. ಅದಕ್ಕಾಗಿ ೨೦ ಪೈಸೆ ತರಬೇಕೆಂದು ಹೇಳಿದ್ದಳು.

ಒಂದು ಸಣ್ಣದಾದ ಕತ್ತಲೆ ಇರುವ ಒಂದು ಥರ ವಾಸನೆ ಇರುವ ಗುಡಿ. ಸುಮಾರು ಜನ ಅಲ್ಲಿ ಕುಳಿತಿದ್ದರು. ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿ ಕಣ್ಣು ಮುಚ್ಚಿ ಲೆಕ್ಕ ಹಾಕಿ ಎಲ್ಲರಿಗೂ ಪರಿಹಾರ ಹೇಳುತಿದ್ದ, ನಮ್ಮ ಸರದಿ ಬಂದಾಗ ಹಣ ಇಡಲು ಹೇಳಿದ. ಲೆಕ್ಕ ಹಾಕಿ ಕಂಪಾಸ್ ವಾರದೊಳಗೆ ಸಿಗುವುದೆಂದು ಹೇಳಿ ಕಲ್ಲು ಸಕ್ಕರೆ ಕೊಟ್ಟು ಎಲ್ಲರಿಗೂ ಹಂಚಿ ಎಂದ. ನಾವಿಬ್ಬರೂ ಕಾಂಪಸ್ ಬಾಕ್ಸ್ ಸಿಕ್ಕಷ್ಟೆ ಖುಷಿಯಿಂದ ಮನೆಗೆ ಬಂದೆವು. ಎಲ್ಲ ವಿಷಯವನ್ನು ಅಣ್ಣನಿಗೆ ಹೇಳಿ ಕಲ್ಲು ಸಕ್ಕರೆಯ ತುಂಡೊಂದನ್ನು ಅವನಿಗೆ ಕೊಟ್ಟೆ , ಅವನು ನನ್ನ ಕೈಯಲ್ಲಿದ್ದ ಎಲ್ಲಾ ಕಲ್ಲು ಸಕ್ಕರೆ ಕಿತ್ತು ರಸ್ತೆಗೆ ಎಸೆದ. ತಿಂಗಳಾದರೂ ನನ್ನ ಕಾಂಪಸ್ ಬಾಕ್ಸ್ ಸಿಗಲೇ ಇಲ್ಲ. ಗೆಳತಿ ಕಾಂಪಸ್ ಬಾಕ್ಸ್ ಸಿಗದಿರುವುದಕ್ಕೆ ನಮ್ಮ ಅಣ್ಣ ಪ್ರಸಾದ ಬೀದಿಗೆ ಎಸೆದದ್ದೇ ಕಾರಣ ಎಂದು ಹೇಳುತ್ತಲೇ ಇದ್ದಳು.

ಘಟನೆ ೩.

ರಜೆ ಬಂದಾಗ ಅಮ್ಮಮ್ಮನ ಊರಿಗೆ ಹೋಗುವುದು ಮಾಮೂಲು. ಅಲ್ಲಿ ಅಮ್ಮಮ್ಮನ್ನದು ವಿಪರೀತ ಮಡಿ. ಮನೆಯೊಳಗೆ ಬರುವಾಗಲೂ ಕಾಲು ತೊಳೆದುಕೊಂಡೇ ಬರಬೇಕು. ಮನೆಯೊಳಗೆ ಚೇಳು, ಹುಳ ಬಂದರೆ ನೀವು ಕಪ್ಪು (ಮಾಂಸ) ತಿನ್ನುವವರನ್ನು ಮುಟ್ಟಿ ಬಂದು ದೇವರ ಕೋಣೆಗೆ ಹೋಗಿದ್ದೀರೆಂದು ಅಮ್ಮಮ್ಮನ ಬೈಗುಳ.

ಹೀಗಾಗಿ ನಾವ್ಯಾರೂ [ಮಕ್ಕಳು] ದೇವರ ಕೋಣೆಗೆ ಹೋಗುತ್ತಿರಲಿಲ್ಲ. ದೇವರ ಕೋಣೆಯಲ್ಲಿರುವ ಬೆಳ್ಳಿಯ (ವೀರಭದ್ರ) ದೇವರ ದೊಡ್ಡದಾದ ಮುಖ , ಖಡ್ಗ, ತ್ರಿಶೂಲ, ಹಾವು ಹೀಗೆ ಚಿತ್ರ ವಿಚಿತ್ರ ದೇವರುಗಳು. ವಿಶೇಷ ದಿನಗಳಲ್ಲಿ ಭಯಂಕರವಾದ ಪೂಜೆ. ನಗಾರಿ, ಜಾಗಟೆ, ಘಂಟೆ, ಧೂಪ ದೀಪ, ಆರತಿ, ಮಂತ್ರ ಘೋಷಣೆ, ಕರ್ಪೂರ ಇವುಗಳ ಸೇವೆಗಾಗಿ ಮಕ್ಕಳೆಲ್ಲ ಅಲ್ಲಿರಲೇ ಬೇಕಿತ್ತು.

ಆ ವೀರಭದ್ರ ದೇವರು ನನ್ನನ್ನೇ ನೋಡುತ್ತಿರುವಂತೆ ನನಗೆ ಅನಿಸುತಿತ್ತು. ನಾನು ಹಿಂದೆ ನಿಲ್ಲಲಿ , ಪಕ್ಕಕೆ ನಿಲ್ಲಲಿ, ಎಲ್ಲಿಂದ ನೋಡಿದರು, ನನ್ನನ್ನೇ ನೋಡುತ್ತಿದೆ ಎಂದು ಅನಿಸುತ್ತಿದ್ದರಿಂದ ಭಯವಾಗಿ ಪೂಜೆ ನಡೆದಾಗ ನಾನು ಹಿಂದೆ, ಮುಂದೆ ಅಡ್ಡಾಡುತ್ತಿದ್ದೆ. ಎಲ್ಲರೂ ನನಗೆ ಸುಮ್ಮನೆ ನಿಲ್ಲುವಂತೆ ಕಣ್ಣು ಸನ್ನೆ ಮಾಡುತ್ತಿದ್ದರು.

ನನಗೆ ಬೇಗ ಪೂಜೆ ಮುಗಿದರೆ ಸಾಕು ಎನಿಸುತಿತ್ತು. ಅದಕ್ಕಾಗಿ ಯಾವಾಗಲೂ ದೇವರ ಕೋಣೆಯ ಬಾಗಿಲು ಮುಚ್ಚುತ್ತಲೆ ಇರುತ್ತಿದ್ದೆ. ಕೊನೆಗೊಮ್ಮೆ ಕಳ್ಳನೊಬ್ಬ ಬೆಳ್ಳಿಯ ದೇವರನ್ನೆಲ್ಲ ಕದ್ದು, ಕೊನೆಗೆ ಸಿಕ್ಕು, ಕೋರ್ಟಿನ ಮೂಲಕ ಒಂದು ಚೌಕಾದ ಕಬ್ಬಿಣದಂತಹ ವಸ್ತು ಕೊಟ್ಟು, ಅದು ಬೆಳ್ಳಿಯನ್ನೆಲ್ಲಾ ಕರಗಿಸಿದ್ದು ಎಂದು ಹೇಳಿದ. ಆಮೇಲಿಂದ ಅಮ್ಮಮ್ಮನ ದೇವರ ಭಕ್ತಿ, ಮಡಿವಂತಿಕೆ ಕಡಿಮೆ ಆಯಿತಾದರೂ ದೇವರ ಕೋಣೆಯಲ್ಲಿ ಆ ಚೌಕಾಕಾರದ ವಸ್ತು ಸಿಂಪಲ್ ಆಗಿ ಪೂಜಿಸಲ್ಪಡತೊಡಗಿತು.

ಡಿಗ್ರಿ ಓದುವಾಗ ಹರಿಹರನ ರಗಳೆ ಪಾಠ ನಡೆದಾಗ ಒಬ್ಬ ವಿಧ್ಯಾರ್ಥಿ ದೇವರೆಂದರೆ ಏನು? ಎಂದಾಗ ಇಡೀ ಕ್ಲಾಸಿನಲ್ಲಿದ್ದವರೆಲ್ಲ ಜೋರಾಗಿ ನಕ್ಕರು. ಆಗ ಕನ್ನಡ ಪ್ರಾಧ್ಯಾಪಕರು ದೇವರ ಬಗ್ಗೆ ಅಷ್ಟೇ ಸುಂದರ ವಾಗಿ ವಿಶ್ಲೇಷಿಸಿ ನಮ್ಮ ನಂಬಿಕೆಗೆ ಬಿಟ್ಟ ವಿಷಯ ಎಂದರು. ಆದರೆ ಈಗ ದೇವರೆಂದರೆ ಅವರವರ ಭಾವಕ್ಕೆ……ಅಂದು ಕೊಳ್ಳುತ್ತೇನೆ.

‍ಲೇಖಕರು sakshi

July 25, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: