ಶಿವನ ಜಟೆಯ ಅರ್ಧ ಚಂದಿರನಂತೆ ಕಾಣತೊಡಗಿದ..

ನಾನು ಮತ್ತು ಗ್ರಹಣ

ಸಿದ್ಧರಾಮ ಕೂಡ್ಲಿಗಿ

ಸೂರ್ಯ ಗ್ರಹಣದ ದಿನವಾದ ಇಂದು ಬೆಳಿಗ್ಗೆಯೇ ಎದ್ದವನೇ ನಮ್ಮೂರ ಸಿದ್ಧಯ್ಯನಗುಡ್ಡಕ್ಕೆ ಹೋಗಲು ಸಿದ್ಧನಾದೆ. ನನ್ನ ಕೆಮರಾ ಬ್ಯಾಗ್, ಕಪ್ಪು ಕಾಜು, ನನ್ನ ಕಪ್ಪು ಕನ್ನಡಕ ತೆಗೆದುಕೊಂಡು ಹೊರಟಾಗ ಮನೆಯಾಕೆ ಕರೆದಳು “ಹಸಿವಾಗ್ತೈತಿ ಅಲ್ಲೇ ತಿನ್ರಿ ” ಎಂದು ಒಂದಷ್ಟು ಕುರುಕಲು ಹಾಗೂ ಬಿಸ್ಕಿಟ್ ಕೊಟ್ಟಳು. ನೀರಿನ ಬಾಟಲ್ ತೆಗೆದುಕೊಂಡು ಹೊರಟೆ.

ಬೆಳಿಗ್ಗೆ 8-10ಕ್ಕೆ ಬೈಕ್ ನ್ನು ಗುಡ್ಡದ ಕೆಳಗೆ ಬಿಟ್ಟು ಮೇಲೇರತೊಡಗಿದೆ. ಒಂದು ನೊಣವೂ ಸಹ ಅಲ್ಲಿರದೇ ನಿರ್ಜನವಾಗಿತ್ತು. ಸುತ್ತಲೂ ಸುಂದರವಾದ ದೃಶ್ಯವನ್ನು ಸವಿಯುತ್ತಲೇ ಮೇಲೇರಿದೆ. ಮೇಲೆ ತುತ್ತತುದಿಗೆ ಹೋದವನೇ ಸೂಕ್ತವಾದ ಜಾಗವನ್ನು ಪರಿಶೀಲಿಸಿದೆ. ಅಲ್ಲೊಂದು ಎತ್ತರವಾದ ಕಲ್ಲು, ನಾನು ಕುಳಿತುಕೊಂಡೆ ಆರಾಮವಾಗಿ ಕ್ಲಿಕ್ ಮಾಡಬಹುದಿತ್ತು. ಸರಿಯಾಗಿ ಕುಳಿತುಕೊಂಡು ನನ್ನ ಕಪ್ಪು ಕನ್ನಡಕ ಹಾಕಿಕೊಂಡು ಕೆಮರಾವನ್ನು ಸೂರ್ಯನಿಗೆ ಮುಖ ಮಾಡಿ ನಿಲ್ಲಿಸಿದೆ. ಮೊದಲಿಗೆ ಕ್ಲಿಕ್ ಮಾಡಿದಾಗ ಸೂರ್ಯ ಒಂದು ಸೇಬುಹಣ್ಣಿನಂತೆಯೇ ಕಂಡ. ಒಂದಷ್ಟು ಕ್ಲಿಕ್ ಮಾಡಿ ಸುತ್ತಲಿನ ಪರಿಸರ ಸೌಂದರ್ಯವನ್ನು ನೋಡುತ್ತಿದ್ದೆ. ಪಕ್ಕದಲ್ಲಿಯೇ ಮನೆಯಾಕೆ ಕೊಟ್ಟ ಕುರುಕಲು ತಿಂಡಿ, ಬಿಸ್ಕಿಟ್, ನೀರಿನ ಬಾಟಲ್ ಇದ್ದವು.

ಬೆಳಿಗ್ಗೆ 9 ಗಂಟೆಯ ನಂತರ ನನ್ನ ಒತ್ತಡ ಏರತೊಡಗಿತು. ಸೂರ್ಯನೂ ನಿಧಾನವಾಗಿ ಅರ್ಧ ಚಂದ್ರನಂತೆ ಕಾಣಿಸತೊಡಗಿದ. ಒಮ್ಮೆ ತೂಗುಬಿಟ್ಟ ಕೊಕ್ಕೆಯಂತೆ, ಶಿವನ ಜಟೆಯ ಅರ್ಧ ಚಂದಿರನಂತೆ ಕಾಣತೊಡಗಿದ. ಚಂದ್ರ ಸೂರ್ಯನನ್ನು ನಿಧಾನವಾಗಿ ಮರೆ ಮಾಡತೊಡಗಿದ. ಒಮ್ಮೆ ಕೆಮರಾದಿಂದ ಹೊರಬಂದು ಸುತ್ತಲೂ ನೋಡಿದೆ. ನನ್ನ ಹೊರತು ಅಲ್ಲಾರೂ ಇಲ್ಲ. ಇಡೀ ನಿಸರ್ಗ ಸ್ತಭ್ದವಾಗಿತ್ತು. ಒಣಹುಲ್ಲು ಗಾಳಿಗೆ ತೊನೆದಾಡುತ್ತಿತ್ತು. ಸಮಯ 9-24ಕ್ಕೆ ಸಮೀಪವಾಗತೊಡಗಿದಂತೆ ನನಗೆ ಕುತೂಹಲ ಹಾಗೂ ಸೂರ್ಯನ ಬಗ್ಗೆ ಆಸಕ್ತಿ. ನಾನಂತೂ ಅದರಲ್ಲೇ ಮುಳುಗಿಹೋಗಿದ್ದೆ. ಒಂದರ್ಥದಲ್ಲಿ ಸೂರ್ಯ ನಾನೂ ಒಂದಾಗಿದ್ದೀವೇನೋ ಎಂಬ ಭಾವ.

ನಮ್ಮಲ್ಲಿ ಕಂಕಣ ಗ್ರಹಣ ಇಲ್ಲವಾದ್ದರಿಂದ ಭಾಗಶ:ವಾದರೂ ಪೂರ್ಣ ಭಾಗಕ್ಕೆ ಸ್ವಲ್ಪವೇ ಅಂತರದಲ್ಲಿ ಚಂದ್ರ ಸೂರ್ಯನನ್ನು ಮರೆ ಮಾಡಿದ್ದ.ಅದೊಂದು ಅದ್ಭುತ ದೃಶ್ಯ. ಆಗಸದಲ್ಲಿ ನಡೆದ ನಾಟಕೀಯ ದೃಶ್ಯ. ಒಮ್ಮೆ ಕೆಮರಾದಿಂದ ಹೊರಬಂದು ಬೇರೆಕಡೆ ನೋಡಿದೆ. ಸಂಜೆಯ ವಾತಾವರಣದಂತಿತ್ತು. ಸುತ್ತಲೂ ಯಾವ ಹಕ್ಕಿಗಳೂ ಕಂಡುಬರಲಿಲ್ಲ. ಮೈನಾ ಹಕ್ಕಿಯೊಂದು ಮಾತ್ರ ಕೂಗುತ್ತ ಹಾರಿಹೋದದ್ದು ಬಿಟ್ಟರೆ ಮತ್ತಾವ ಘಟನೆಗಳು ಅಲ್ಲಿರಲಿಲ್ಲ. ಇಡೀ ಸಿದ್ದಯ್ಯನ ಗುಡ್ಡವೇ ಗ್ರಹಣಕ್ಕೊಳಗಾದಂತೆ ಮಂಕಾದಂತಿತ್ತು ಅಥವಾ ಅದೂ ಸಹ ಸೂರ್ಯನನ್ನು ನನ್ನೊಂದಿಗೆ ನೋಡುತ್ತಿತ್ತೋ ಏನೋ ಯಾರಿಗ್ಗೊತ್ತು. ಒಂದಷ್ಟು ದೃಶ್ಯಗಳನ್ನು ಕ್ಲಿಕ್ ಮಾಡಿದೆ. ನಂತರ ಇದೇ ಸೂಕ್ತ ಸಮಯವೆಂದು ಕುರುಕಲು ತಿಂಡಿಯನ್ನು ತಿಂದು, ಬಿಸ್ಕಿಟ್ ತಿಂದು ನೀರು ಕುಡಿದೆ.

ನಿಧಾನವಾಗಿ ಚಂದ್ರ ಸೂರ್ಯನಿಂದ ಸರಿಯತೊಡಗಿದ. ಈಗ ಸೂರ್ಯ ಹೊರಬಂದಂತೆ ಕಾಣತೊಡಗಿದ. ಬೆಳಕು ಪ್ರಖರವಾಗಿತ್ತು. ಸಮಯ ನೋಡಿದೆ ಆಗಲೇ 10ಗಂಟೆ. ನಾನು ಕಾಲೇಜಿಗೆ ಹೊರಡುವ ಸಮಯ. ಬೇಗನೇ ಎಲ್ಲವನ್ನೂ ಪ್ಯಾಕ್ ಮಾಡಿದವನೇ ಸೂರ್ಯನನ್ನು ಅವನಪಾಡಿಗೆ ಅವನನ್ನು ಬಿಟ್ಟು ಗುಡ್ಡವನ್ನು ನಿಧಾನವಾಗಿ ಇಳಿಯತೊಡಗಿದೆ. ಆಗಲೂ ಯಾರೂ ಕಾಣಲಿಲ್ಲ. ಕೆಳಗೆ ಲಾರಿ, ಬಸ್ಸು ಇತರ ವಾಹನಗಳು ರಸ್ತೆಯಲ್ಲಿ ಆಟಿಕೆಯ ವಸ್ತುಗಳಂತೆ ಹೊರಟಿದ್ದವು.

ಕೆಳಬಂದವನೇ ನೇರವಾಗಿ ಮನೆಗೆ ಹೋಗಿ, ಅಲ್ಲಿಂದ ಕಾಲೇಜಿಗೆ ತೆರಳಿದೆ. ಅತ್ಯಂತ ಕಡಿಮೆ ವಿದ್ಯಾರ್ಥಿಗಳಿದ್ದ ನನ್ನ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಗ್ರಹಣದ ಕುರಿತು ಮಾಹಿತಿಯನ್ನು ನೀಡಿದೆ. ನನ್ನ ಜೀವಿತಾವಧಿಯ ಕೊನೆಯ ಪೂರ್ಣ ಸೂರ್ಯಗ್ರಹಣವೊಂದಕ್ಕೆ ಸಾಕ್ಷಿಯಾಗಿದದ್ದನ್ನು ಮಕ್ಕಳಿಗೆ ತಿಳಿಸಿ ವಿವರಿಸಿದೆ.

 

‍ಲೇಖಕರು avadhi

December 27, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Poorvi

    wah sundara chitragalu hagu olle anubhava. Neeve punyavantru . Bengaloorinalli navidda jagadalli poorthi manju musukida vathavaranavittu swalpavoo kanisalilla.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: