ಶಾಲ್ಮಲಾ ಎಂದೊಡನೆ ನೆನಪಾಗುವುದು ಗುಪ್ತಗಾಮಿನಿ…

ಸೌಮ್ಯಶ್ರೀ ಎ ಎಸ್

ಪತ್ರಿಕೆಯೊಂದರ ಹುಟ್ಟು ಅತ್ಯಂತ ಸೂಕ್ಷ್ಮವೂ, ಸೃಜನಶೀಲವೂ ಆದ ಪ್ರಕ್ರಿಯೆ. ಒಂದು ಬರಹ ಹುಟ್ಟುವುದು ವಿಶೇಷವಾದ ಘಳಿಗೆಯಾದರೆ ಅಂಥಹಾ ಹತ್ತಾರು ಬರಹಗಳನ್ನೊಳಗೊಂಡ ಪತ್ರಿಕೆಯೊಂದು ಜನ್ಮತಾಳುವುದು ಮತ್ತೂ ವಿಶೇಷವಾದ ಘಳಿಗೆ. ನಮ್ಮ ಸಚಿವಾಲಯವೀಗ ಅಂಥಾದ್ದೇ ಸೂಕ್ಷ್ಮ, ಸೃಜನಶೀಲ, ವಿಶೇಷ ಘಳಿಗೆಗೆ ಸಾಕ್ಷಿಯಾಗುತ್ತಿದೆ. ಅದರ ಹೆಸರು ಶಾಲ್ಮಲಾ.

ಸರ್ಕಾರದಿಂದ ಪ್ರತಿಯೊಬ್ಬ ಪ್ರಜೆಗೂ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಶಾಸನಬದ್ಧವಾಗಿ ತಲುಪಿಸುವ ಕಾರ್ಯಾಂಗ ಶಕ್ತಿ ಸೌಧ, ವಿಧಾನಸೌಧ‌. ಇಡೀ ರಾಜ್ಯದ ಸರ್ಕಾರಿ ಚಟುವಟಿಕೆಗಳ ಮೂಲ ಹಾಗೂ ಮುಖ್ಯ ಸ್ಥಾನವಾದ ಸಚಿವಾಲಯದ ಉದ್ಯೋಗಿಗಳಿಗೆ ಔದ್ಯೋಗಿಕ ಬದುಕಿನಾಚೆಗೂ ಹರಡಿಕೊಂಡಿರುವ ತಮ್ಮ ಸದಭಿರುಚಿಯ ಹಂಚಿಕೊಳ್ಳಲಿಕ್ಕೆ ವೇದಿಕೆಯೊಂದನ್ನು ಸಿದ್ಧಪಡಿಸಿ ಅದಕ್ಕೆ ಶಾಲ್ಮಲಾ ಎನ್ನುವ ಚಂದದ ಹೆಸರಿಡಲಾಗಿದೆ.

ಶಾಲ್ಮಲಾ ಎಂದೊಡನೆ ನೆನಪಾಗುವುದು ಗುಪ್ತ ಗಾಮಿನಿ. ದಿನಂಪ್ರತಿಯ ಕಾರ್ಯಭಾರಗಳ ನಡುವೆ ಸಚಿವಾಲಯದ ಉದ್ಯೋಗಿಗಳ ಅಂತರಾಳದಾಳಕ್ಕೆ ತಳ್ಳಲ್ಪಟ್ಟಿರುವ ಬರಹವೆಂಬ ಗುಪ್ತಗಾಮಿನಿಯ ಹೊರಗೆಡವುವ ಹರಿವಿನ ಪಾತ್ರವೇ ಈ ಶಾಲ್ಮಲಾ. ಇದರಲ್ಲಿ ಅನೇಕ ಸಹೃದಯರು ತಮ್ಮದೇ ದುಗುಡ, ನೆನಪು, ಕಳವಳ, ಅನುಭವಗಳನ್ನೆಲ್ಲಾ ಬಿಳಿಯ ಹಾಳೆಯ ಮೇಲೆ ಕಾವ್ಯದ ಮಳೆಯನ್ನಾಗಿ ಸುರಿಸಿದ್ದಾರೆ. ಬದುಕು ದಯಪಾಲಿಸಿದ ನೂರೆಂಟು ಭಾವಗಳು ಕಥೆ, ಕಾವ್ಯ, ಲೇಖನಗಳಾಗಿ ಬರವಣಿಗೆಯ ರೂಪ ಪಡೆದಿವೆ.

ಸರ್ಕಾರಿ ನೌಕರರು ಎಂದರೆ ಕೆಲಸಕಷ್ಟೇ ಸೀಮಿತವಲ್ಲ. ಅವರೊಳಗಿನ ಸೃಜನಶೀಲತೆ ಕೆಲಸದೊತ್ತಡದಲ್ಲಿ ಮುಸುಕಾಗಿದೆಯೇ ಹೊರತು ಪ್ರಭೆಯನ್ನು ಕಳೆದುಕೊಂಡಿಲ್ಲ. ಅದು ಶಾಲ್ಮಲಾದ ಪ್ರತೀ ಪುಟ ಪುಟದಲ್ಲೂ ಸಾಬೀತಾಗಿದೆ. ರಾಜ್ಯದ ನಾನಾ ಭಾಗಗಳಿಂದ ಬಂದಿರುವಂತೆಯೇ ಸಚಿವಾಲಯದ ಉದ್ಯೋಗಿಗಳೂ ಸೃಜನಶೀಲತೆಯ ನಾನಾ ಭಾಗಗಳಾಗಿರುವ ಕಲೆ, ಸಾಹಿತ್ಯ, ನಾಟಕ, ಮುಂತಾದ ರಂಗಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿಸಿದ್ದಾರೆ. ಕಾರ್ಯಭಾರದ ಅಧಿಕ ಒತ್ತಡವನ್ನು ನೀಗಿಸಿಕೊಂಡು ಕಛೇರಿಯಿಂದ ನಿರ್ಗಮಿಸಿದ ನಂತರದ ಅಳಿದುಳಿದ ಘಳಿಗೆಗಳನ್ನು ಸಾಹಿತ್ಯ ಕಲೆಗಾಗಿ ಮೀಸಲಿರಿಸಿದ ಉದಾಹರಣೆಗಳಿವು.

ಹೀಗೆ ಬೆಳಕಿಗೆ ಬಾರದೆ ತೆರೆಯ ಹಿಂದೆಯೇ ಮರೆಯಾಗಿ ಕಾಲವಾದಂತೆ ಕಾಣದಾಗುತ್ತಿರುವ ಹಲವಾರು ಪ್ರತಿಭಾವಂತರಿಗೆ ಮನ್ನಣೆ ದೊರೆಯುವಂತಾಗಲಿ ಎಂಬ ದೃಷ್ಟಿಯಿಂದ ಪ್ರತಿಭೆಗಳನ್ನು ಗುರ್ತಿಸಿ ಅನಾವರಣ ಮಾಡುವ ಸಣ್ಣ ಪ್ರಯತ್ನವೇ ಶಾಲ್ಮಲಾ. ಸಧ್ಯಕ್ಕಿದು ಅಂಬೆಗಾಲಿಡುತ್ತಿರುವ ಮಗುವಾದರೂ ಮುಂದೆ ನಡಿಗೆ ಕಲಿತು, ಓಟ ಸಾಗಿ, ರೆಕ್ಕೆ ಮೂಡಬೇಕಿದೆ. ಈ ಹೊತ್ತಿಗಾಗಲೇ ಶಾಲ್ಮಲಾ ಎರಡನೇ ಸಂಚಿಕೆಗೆ ಸಿದ್ಧವಾಗುತ್ತಿದೆ.

ಮುದ್ರಿತ ಮತ್ತು ಡಿಜಿಟಲ್‌ ಎರಡೂ ರೂಪದಲ್ಲೂ ಪ್ರಕಟವಾಗುವ ಪತ್ರಿಕೆಯನ್ನು ಓದುಗರಿಗೆ ಮುಟ್ಟಿಸುವತ್ತ ನಾವೆಲ್ಲ ಹೆಜ್ಜೆ ಹಾಕುತ್ತಿದ್ದೇವೆ. ಸಚಿವಾಲಯಕ್ಕೆ ಅಷ್ಟೇ ಸೀಮಿತವಾಗಿರುವ ಮುದ್ರಣ ಮುಂದಿನ ದಿನಗಳಲ್ಲಿ ಸಕಲ ಮನೆ ಮನಗಳನ್ನು ತಲಪುವಂತಾಗಲಿ ಎಂಬುದು ಎಲ್ಲ ಸಹೃದಯರ ಹಾರೈಕೆ. ಈಗಾಗಲೇ ಡಿಜಿಟಲ್‌ ಪತ್ರಿಕೆ ಎಲ್ಲರಿಗೂ ಸಿಗುವಂತಾಗಿದೆ. ಭವಿಷ್ಯದಲ್ಲಿ ಇಡಿ ರಾಜ್ಯದ ಜನತೆಗೆ ಓದಲು ಸಿಗುವಂತಾಗುವ ನಿಟ್ಟಿನಲ್ಲಿ ಅಡಿ ಇಡುತ್ತಿದ್ದೇವೆ.

ಫೈಲುಗಳ ಮಧ್ಯೆಯೂ ಒಂದು ಕವನ ಇರಬಹುದು..

ಸದಾಶಿವ್ ಸೊರಟೂರು

ಮನೆಯಿಂದ ಹೊರಡುವಾಗ ‘ಮಮ್ಮಿ ನಾನು ಬರ್ತೀನಿ..’ ಅಂತ ಮಗು ಕಣ್ ತುಂಬಿಕೊಳ್ಳುತ್ತೆ. ಆಫೀಸ್ಗೆ ಬಂದು ಕೂತರೂ ಒಂದು ಸಂಕಟ. ದುಃಖದಿಂದ ಅದ್ದಿ ತೆಗೆದಂತೆ ಒಂದು ಅದ್ಬುತ ಸಾಲು ಎದೆಯೊಳಗೆ ಮೂಡುತ್ತದೆ. ‌ಅರೇ ಇದೊಂದು ಒಳ್ಳೆ ಕವನ ಆಗುತ್ತಲ್ಲ ಅಂತ ಯೋಚಿಸುವ ಹೊತ್ತಿಗೆ ಪೋನ್ ಕಿರುಚುತ್ತದೆ. “ಏನ್ರೀ ಇನ್ನೂ ಫೈಲ್ ರೆಡಿಯಾಗಿಲ್ವ..ಇನ್ ಅರ್ಧ ಗಂಟೆಯಲ್ಲಿ ಫೈಲ್ ರೆಡಿ ಆಗಬೇಕು” ಅನ್ನುವ ಆದೇಶ. ಆ ಸಾಲು ಕವನವಾಗದೆ ಹೊರಟೆ ಹೋಗುತ್ತದೆ.

ಅಧಿಕಾರಿಗಳಿಗೂ ನೂರು ಒತ್ತಡ. ಒಂದೊಳ್ಳೆ ಕಥೆ ಬರೆಯುವ ಮೂಡಿನಲ್ಲಿದ್ದಾಗ ಧಿಡೀರನೆ ಹೊಸ ಪ್ರಾಜೆಕ್ಟ್ ಬಂದು ಕೂರುತ್ತದೆ.ಒಂದೇ ತಿಂಗಳಲ್ಲಿ ಕಂಪ್ಲೀಟ್ ಮಾಡ್ಬೇಕು. ಫೈಲ್ ಸರಿಯಾಗಿಲ್ಲ, ಅಯ್ಯೊ ಸೈನ್ ಆಗಿಲ್ಲ. ಇವತ್ತೇ ಡೆಡ್ ಲೈನ್, ನಾಳೆಯಿಂದ ಸೆಷನ್, ಬಾಸ್ ಸ್ಕ್ರಿಕ್ಟ್, ಅಮ್ಮಗೆ ಹುಷಾರಿಲ್ಲ, ಮಗಳ ಮದುವೆ, ಎಂಟಾದರೂ ಮುಗಿಯದ ಎಕ್ಸಾಟ್ರಾ ಡ್ಯೂಟಿ…ಉಫ್ ಸಾಕಾಗಿ ಹೋಗುತ್ತೆ.

ಓದುವ ಆಸೆ, ಬರೆಯುವ ಆಸೆ, ಬರೆದದ್ದನ್ನು ಪ್ರಕಟಿಸುವ ಆಸೆ, ನನ್ನ ಬರಹ ಯಾರಾದ್ರೂ ಓದಲಿ ಅನ್ನುವ ಆಸೆ. ಆದರೆ ಟೈಮ್ ಇಲ್ಲ. ಹೇಗೊ ರಾತ್ರಿ ಸಮಯ ಉಳಿಸಿ ಬರೆದ್ರೆ ಪ್ರಕಟ ಆಗುತ್ತಾ ಅನ್ನುವ ಅನುಮಾನ. ಪತ್ರಿಕೆಗಳು ಈಗಾಗಲೇ ಹೆಸರು ಮಾಡಿರುವವರ ಹಿಂದೆ ಬಿದ್ದಿವೆ. ನಾವು ಹೆಸರು ಮಾಡಲು ಎಷ್ಟು ದುಡಿಯಬೇಕು ಗೊತ್ತಿಲ್ಲ. ಹೀಗೆ ಬರೆದುಕೊಂಡಿದ್ದನ್ನು ಓದ್ತೀನಿ ಅಂದ್ರೆ ಕೇಳುವ ಕಿವಿಗಳಿಗೂ ಕಛೇರಿ ಹೊತ್ತಿಲ್ಲಿ ಬ್ಯೂಸಿ.

ಇಷ್ಟು ಬಿಡುವಿರದ ಕೆಲಸಗಳ ನಡುವೆಯೂ ಓದುವವರಿದ್ದೇವೆ, ಬರೆಯುವವರಿದ್ದೇವೆ ಅಂತ ಯೋಚಿಸುವಾಗ ತಣ್ಣಗೆ ಎದೆಯೊಳಗಿನಿಂದ ಮೂಡಿ ಬಂದ ಕಲ್ಪನೆ ‘ಶಾಲ್ಮಲಾ’. ಬೆಂಗಳೂರಿನ ಶಕ್ತಿಸೌಧದ ಬಹುಮಹಡಿಗಳ ಕಟ್ಟಡದ ಎಲ್ಲಾ ನೌಕರರ ದನಿಯಾಗುವ, ಮಾತಾಗುವ, ಅಕ್ಷರವಾಗುವ, ಕಥೆಯಾಗುವ, ಕವನವಾಗುವ, ಆಪ್ತ ಬರಹವಾಗುವ ಒಂದು ಮಾಧ್ಯಮವಾಗಿ ಒಂದು ಮ್ಯಾಗಜೀನ್ ಇದ್ದರೆ ಹೇಗೆ ಎಂದು ಯೋಚಿಸಿದಾಗ ಹೊಳೆದ ಹೊಳವು ‘ಶಾಲ್ಮಲಾ’

ಶಾಲ್ಮಲಾ ಬಯಲುನಾಡಿನಲಿ ಬೆರಳಿನ ಗಾತ್ರದಲ್ಲಿ ಹುಟ್ಟಿ ಹೊರಡುವ ನದಿ. ಹರಿದರಿದು ಮಲೆನಾಡು ಸೇರಿ ಮೈದುಂಬಿ ಸುಖವಾಗಿ ಸಮುದ್ರ ಸೇರಿ ನೆಮ್ಮದಿಯ ನಿಟ್ಟುಸಿರು ಬಿಡುತ್ತದೆ. ಅವರಿಗೆ ಇದಕ್ಕಿಂತ ಚೆಂದದ ಮತ್ತು ಸೂಕ್ತವಾದ ಹೆಸರು ಬೇರೆ ಇಲ್ಲ ಅನಿಸಿರಬೇಕು. ಅವರೇನು ಬರವಣಿಗೆಯಲ್ಲಿ ಫಳಗಿದ ಪಂಟರಲ್ಲ. ಹಾಗಂತ ಪಂಟರು ಇಲ್ಲ ಅಂತಲ್ಲ. ಬರೆಯಲು ಆರಂಭಿಸುತ್ತಿರುವ ಎಳೆಯರು, ಗೆಳೆಯರು, ಹಿರಿಯರಿಗೆ ಶಾಲ್ಮಲಾದಂತೆ ಸಣ್ಣಗೆ ಹುಟ್ಟಿ ಅನುಭವ ಪಡೆದು, ಓದಿ ಓದಿ. ಮಲೆನಾಡಿನಂತೆ ಚೆಂದಾಗಿ ಬೆಳೆದು ಮುಂದೆ ಎಂದೊ ಒಂದಿನ ವಿಶಾಲ ಸಾಗರದಂತಹ ಸಾಹಿತ್ಯವಲಯ ಸೇರುವ ಸಣ್ಣ ಆಸೆ. ನೌಕರರ ಸಂಕಟ, ಬೇಸರ, ಖುಷಿ, ತಲ್ಲಣ, ಹೊಸತನ, ಕೋರಿಕೆ, ಆಸೆ ಇಂತಹ ನೂರೆಂಟು ಭಾವಗಳಿಗೆ ಮುಖವಾಣಿಯಾಗುವ ಪ್ರಾಮಾಣಿಕ ಪ್ರಯತ್ನ ಈ ಪತ್ರಿಕೆಯದು.

ಶಾಲ್ಮಲಾ ಮಾಸಿಕವಾಗಿ ಬರುವ ಯೋಜನೆಯಲ್ಲಿ ಸಿಂಗಾರಗೊಳ್ಳುತ್ತಿದೆ. ಪ್ರತಿ ಪ್ರತಿಭೆಗೂ ಅವಕಾಶ ಒದಗಿಸುವ, ಅದನ್ನು ಪ್ರೋತ್ಸಾಹಿಸುವ, ಅವರ ಬರಹವನ್ನು ಓದುಗರ ಮುಂದೆ ಇಡುವ ಆಶಯವಿದೆ. ಮುದ್ರಿತ ಮತ್ತು ಡಿಜಿಟಲ್ ಎರಡೂ ರೂಪದಲ್ಲಿ ಬರುವ ಪತ್ರಿಕೆ ಇದು. ಮೊದಮೊದಲು ನಮ್ಮ ನೌಕರರಗಾಗಿಯೇ ಸಿದ್ದವಾಗುತ್ತಿದೆಯಾದರೂ ಮುಂದಿನ ದಿನಗಳಲ್ಲಿ ನಾಡಿದ್ಯಾದಂತ ಓದಲು ಸಿಗುವಂತೆ ಮಾಡುವ ಯೋಚನೆಯೂ ಇದೆ.

ಅತೀವ ಒತ್ತಡದ ಮಧ್ಯೆ ದುಡಿಯುವ ನೌಕರರು ತಮ್ಮದೇ ಸಂಕಟವನ್ನು, ತುಡಿತವನ್ನು, ತಲ್ಲಣಗಳನ್ನು, ನಲಿವನ್ನು ಬರೆದುಕೊಂಡು ಹಗುರಾಗಲಿ. ಸದಾ ಫೈಲ್ ಗಳ ಮಧ್ಯೆಯೇ ಹುದುಗಿದ ಕಣ್ಣುಗಳಿಗೆ ಒಂದು ಕವನ, ಕಥೆ, ಚುಟುಕು, ಸಾಂತ್ವನದ ಬರಹ ಬಿದ್ದು ಅವರನ್ನು ‌ಹಿತವಾಗಿ ಪೊರೆಯಲಿ. ನಾಳೆ ಪತ್ರಿಕೆ ಹೆಮ್ಮರವಾಗಿ ಬೆಳೆದು ಬಿಸಿಲುಣ್ಣುವವರಿಗೆ ನೆರಳಲಾಗಲಿ..

‍ಲೇಖಕರು Admin

May 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: