ಜಯಲಕ್ಷ್ಮಿ ಪಾಟೀಲ್ ಅಂಕಣ- ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ…

ಜಯಲಕ್ಷ್ಮಿ ಪಾಟೀಲ್ ತಮ್ಮ ‘ಮುಕ್ಕು ಚಿಕ್ಕಿಯ ಕಾಳು’ ಕಾದಂಬರಿ ‘ನೀಲ ಕಡಲ ಬಾನು ಮತ್ತು ಹನಿಯೊಡೆಯುತಿದೆ’ ಕವನ ಸಂಕಲನಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಈಗಿನ ವಿಜಯಪುರ ಆಗಿನ ಬಿಜಾಪುರದಿಂದ ಹೊರಟ ಪ್ರತಿಭೆ ಮುಂಬೈನಲ್ಲಿ ತಮ್ಮ ಪ್ರತಿಭೆಯ ಗುರುತು ಮೂಡಿಸಿ ಈಗ ಬೆಂಗಳೂರಿನಲ್ಲಿ ನೆಲೆಯೂರಿದ್ದಾರೆ.

ಸಾ ದಯಾ ಅವರ ನಾಟಕದ ಮೂಲಕ ರಂಗ ಪ್ರವೇಶಿಸಿದ ಇವರು ಬೆಂಗಳೂರಿನಲ್ಲಿ ಅದರೊಂದಿಗೆ ಕಿರುತೆರೆ ಹಾಗೂ ಸಿನಿಮಾಗಳಿಗೂ ತಮ್ಮ ವಿಸ್ತರಿಸಿಕೊಂಡರು.

ಮುಕ್ತಮುಕ್ತ, ಮೌನ, ಕಿಚ್ಚು, ಮುಗಿಲು, ಬದುಕು, ಬೆಳಕು ಇವರಿಗೆ ಹೆಸರು ತಂದುಕೊಟ್ಟಿತು. ಚಲನಚಿತ್ರ ಸೆನ್ಸಾರ್ ಮಂಡಳಿ, ದೂರದರ್ಶನ ಚಲನಚಿತ್ರ ಪೂರ್ವ ವೀಕ್ಷಣಾ ಮಂಡಳಿ ಸಮಿತಿಗಳ ಸದಸ್ಯರಾಗಿದ್ದರು.

‘ಈ ಹೊತ್ತಿಗೆ’ ಮೂಲಕ ಸಾಕಷ್ಟು ಕೃತಿ ಸಮೀಕ್ಷೆಗಳನ್ನು ನಡೆಸಿದ್ದಾರೆ. ‘ಜನದನಿ’ ಮಹಿಳಾ ಸಬಲೀಕರಣದಲ್ಲಿ ಈಗ ಮೈಲುಗಲ್ಲು. ‘ಹಂಗು, ಗುಂಗು ಎರಡೂ ಮಿತಿಯಲ್ಲಿದ್ದರೆ ಬದುಕು ಚೆನ್ನ’ ಎನ್ನುವುದು ಇವರ ಧ್ಯೇಯವಾಕ್ಯ.

‘ಅವಧಿ’ಗೆ ಸುರಪರಿಚಿತರಾದ ಜಯಲಕ್ಷ್ಮಿ ಪಾಟೀಲ್ ಇಂದಿನಿಂದ ತಮ್ಮ ಬದುಕಿನ ನಿಲುದಾಣಗಳ ಬಗ್ಗೆ ಬರೆಯುತ್ತಿದ್ದರು.

ಈ ಮಧ್ಯೆ ಒಂದು ಪುಟ್ಟ ವಿರಾಮದ ನಂತರ ಮತ್ತೆ ಜಯಲಕ್ಷ್ಮಿ ಪಾಟೀಲ್ ಅವರು ತಮ್ಮ ಅಂಕಣ ಮುಂದುವರೆಸುತ್ತಿದ್ದಾರೆ-

29

ಮೊನ್ನೆ ಅಂದರೆ ೨೦ ಮೇ ೨೦೨೨, ಶುಕ್ರವಾರದಂದು ನಾನು ಅಭಿನಯಿಸಿದ ‘ಸಕುಟುಂಬ ಸಮೇತ’ ಚಿತ್ರ ಬಿಡುಗಡೆಯಾಯ್ತು. ಸರಳ ಸಹಜ ಸುಂದರ ಸಿನಿಮಾ ಇದು. ಸಿನಿಮಾ ನೋಡಿದವರಿಗೆಲ್ಲ ಇಷ್ಟವಾಗ್ತಿದೆ, ವಿಮರ್ಶೆಗಳು ಕೂಡ ಚಿತ್ರದ ಬಗ್ಗೆ ತುಂಬಾ ಧನಾತ್ಮಕವಾಗಿಯೇ ಬರ್ತಿರೋದು ಖುಷಿ ಕೊಡ್ತಿದೆ. ‘ಸಕುಟುಂಬ ಸಮೇತ’ ಹೆಸರಿಗೆ ತಕ್ಕಂತೆ ಕುಟುಂಬ, ಕುಟುಂಬದ ಒಡನಾಡಿಗಳೊಡನೆ ಕುಳಿತು ನೋಡಿ ಆನಂದಿಸಬಹುದಾದ ಸಿನಿಮಾ.

ರಾಹುಲ್ ಪಿಕೆ ಅವರ ಚೊಚ್ಚಿಲ ನಿರ್ದೇಶನದ ಚಿತ್ರವಿದು. ರಾಹುಲ್ ಪಿಕೆ ಮತ್ತು ಪೂಜಾ ಸುಧೀರ್ ಅವರು ಜಂಟಿಯಾಗಿ ಈ ಚಿತ್ರಕಥೆ ಹಾಗೂ ಸಂಭಾಷಣೆ ರಚಿಸಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಪರಮವಾಃ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರದ ಸಂಗೀತ ಮಿಧುನ್ ಮುಕುಂದನ್ ಅವರದು. ನಾಯಕ ನಟನಾಗಿ ಭರತ್ ಜಿ ಬಿ, ನಾಯಕಿಯಾಗಿ ಸಿರಿ ರವಿಕುಮಾರ್, ಅಚ್ಯುತಕುಮಾರ್-ರೇಖಾ ಕೂಡ್ಲಿಗಿ, ಕೃಷ್ಣ ಹೆಬ್ಬಾಳೆ-ಪುಷ್ಪಾ ಬೆಳವಾಡಿ, ಶಂಕರ್ ಮೂರ್ತಿ, ರಮೇಶ್ ಗುರುರಾಜ್ ರಾವ್, ರಘುನಂದನ್ ಶೇಷಣ್ಣ ಮತ್ತಿತರರು ನಟಿಸಿರುವ ಈ ಚಿತ್ರದಲ್ಲಿ ನಾಯಕನ ಸೋದರತ್ತೆಯ ಊರ್ಫ್ ಒಂಥರಾ ಕಿರಿಕ್ ಪಾರ್ಟಿ ಪಾತ್ರ ನನ್ನದು. ಈ ಚಿತ್ರದಲ್ಲಿ ನಟಿಸಿದ್ದು ಒಂದು ಸುಂದರ ಅನುಭೂತಿ.

ಸಿನಿಮಾ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸುತ್ತಿರುವ ಈ ಹೊತ್ತಿನಲ್ಲಿ, ನನಗೆ ನಾನು ಪಿಯೂಸಿ ಓದುತ್ತಿರುವಾಗಿನ ತುಂಬಾ ಅಪರೂಪದ ಆ ದಿನ ನೆನಪಾಗುತ್ತಿದೆ. ಕನಸಿನಲ್ಲಿಯೂ ಕಂಡಿರದ, ಆ ದಿನಗಳಲ್ಲಿ ಊಹಿಸಲೂ ಸಾಧ್ಯಾವಾಗದ್ದೊಂದು ದಿನ ಎದುರಾಗಿತ್ತು ಮತ್ತದು ಬಲು ಸಿಹಿಯಾಗಿತ್ತು.
ನನ್ನೆದೆಯ ಪುಟ್ಟ ಪೆಟ್ಟಿಗೆಯಲ್ಲಿ ಭದ್ರವಾಗಿ ಮುಚ್ಚಿಟ್ಟುಕೊಂಡಿದ್ದ ನಟಿಸುವ ಆಸೆಗೆ ಸಣ್ಣದೊಂದು ತಂಗಾಳಿ ಸೋಕಿ, ಮೃದುವಾಗಿ ಅದರ ನೆತ್ತಿ ಮೂಸಿ, ನೇವರಿಸಿ ನೆನಪಿಸಿತ್ತು. ಅದು ಶಂಕರ್ ನಾಗ್ ಅವರನ್ನು ನಾನು ಕಣ್ಣಾರೆ ನಮ್ಮನೆಯಲ್ಲಿಯೇ ಕಂಡ ದಿನ.
ನಾನಾಗ ಪಿಯುಸಿ ಸೆಕೆಂಡ್ ಇಯರ್ ಓದ್ತಿದ್ದೆ. ಅವತ್ತು ಶಂಕರ್ ನಾಗ್ ತಮ್ಮ ‘ಸಂಕೇತ್’ ರಂಗ ತಂಡದೊಂದಿಗೆ ನಮ್ಮನೆಗೆ ಅಂದ್ರೆ ಬಿಜಾಪುರದ ನನ್ನಜ್ಜಿಯ ಮನೆಗೆ ಊಟಕ್ಕೆ ಬರುವವರಿದ್ರು! ಮನೆಯಲ್ಲಿ ಸಡಗರವೋ ಸಡಗರ.

ಬೆಂಗಳೂರಿನಿಂದ ಬಿಜಾಪುರಕ್ಕೆ ‘ನೋಡಿ ಸ್ವಾಮಿ ನಾವಿರೋದು ಹೀಗೆ’ ನಾಟಕವಾಡಲು ಬಂದ ಅವರನ್ನೆಲ್ಲ ಅಶೋಕ್ (ಬಾದರದಿನ್ನಿ) ಮಾಮಾ ಮನೆಗೆ ಊಟಕ್ಕೆ ಕರೆದಿದ್ದ. ಮನೆಯಲ್ಲಿ ಬೆಂಗಳೂರಿನವರಿಗೆ ಏನಿಷ್ಟವಾಗುತ್ತೋ ಏನೋ, ಏನು ಅಡುಗೆ ಮಾಡುವುದು ಎಂಬ ಹೆಣ್ಣುಮಕ್ಕಳ ಚಿಂತೆಗೆ ಅಶೋಕ್ ಮಾಮಾ, “ರೊಟ್ಟಿ, ಪಲ್ಯ, ಶೇಂಗಾ ಚಟ್ನಿ, ಅನ್ನ, ಸಾರು ಮಾಡ್ರಿ. ಹಂಗ ಕಟಿ ರೊಟ್ಟೀನೂ ಮಾಡಿಡ್ರಿ. ನಮ್ಮೂರಿಗ್ ಬಂದಾರ, ನಮ್ಮಲ್ಲಿ ಊಟದ್ದೂ ರುಚಿ ನೋಡ್ಲಿ ಅವ್ರು” ಎಂದ. ಆದರೂ ಹೆಣ್ಣುಮಕ್ಕಳಿಗೆ ಆತಂಕ, ಅಕಸ್ಮಾತ್ ಅವರಿಗೆ ಜೋಳದ ರೊಟ್ಟಿ ಅದೂ ಕಟಿರೊಟ್ಟಿ ಸೇರದಿದ್ದರ…. ಎಂದು. ಆದ್ದರಿಂದ ಯಾವುದಕ್ಕೂ ಚಪಾತಿಯೂ ಮಾಡುವುದು ಎಂದು ನಿರ್ಧರಿಸಿದರು.

ದಿನ ನಿತ್ಯದ ಊಟದ ಜೊತೆಗೆ ಮತ್ತೊಂದಿಷ್ಟು ವ್ಯಂಜನಗಳನ್ನ ತಯಾರಿಸುವ ಭರಾಟೆ ಶುರುವಾಯಿತು. ಒಂಥರಾ ಹಬ್ಬದ ಸಡಗರ ಮನೆಯಲ್ಲಿ. ಈ ಕಡೆ ನಿಂತವರಿಗೆ ಆ ಕಡೆಯವರು ಕಾಣುವಂಥಾ ತೆಳ್ಳನೆಯ ಜೋಳದ, ಸಜ್ಜಿಯ ರೊಟ್ಟಿಗಳನ್ನು ಮಾಡಿ ಅವುಗಳನ್ನು ಕಟಿಯಾಗಲು (ಖಡಕ್ ಆಗಲು) ಆರಿಟ್ಟು, ಶೇಂಗಾದ ಹೋಳಿಗೆ ಮಾಡಿ, ಒರಳಲ್ಲಿ ಇನ್ನಷ್ಟು ಶೇಂಗಾದ ಚಟ್ನಿ, ಕಾರೆಳ್ಳ ಚಟ್ನಿಗಳನ್ನು ಕುಟ್ಟಿಟ್ಟುಕೊಳ್ಳಲಾಯಿತು.

ಆಗಷ್ಟೇ ಅವ್ವನದ್ದೊಂದು ಬಿಳಿಯ ಗೆಜ್ಜೆಸಿಲ್ಕ್ ಸೀರೆಯೊಂದರಿಂದ ಪರಕಾರ ಹೊಲಿಸಿಕೊಂಡಿದ್ದೆ, ಆದರೆ ಅದಕ್ಕೆ ತಕ್ಕ ಜಂಪರ್ ಇನ್ನೂ ಹೊಲಿಸಿರಲಿಲ್ಲ. ಶಂಕರ್ ನಾಗ್ ಅವರು ನಮ್ಮನೆಗೆ ಬರುವ ದಿನ ಅದನ್ನು ಉಟ್ಟುಕೊಳ್ಳುವುದು ಎಂದು ನಿರ್ಧರಿಸಿ ಉಟ್ಟು, ಸ್ಕರ್ಟ್ ಒಂದರ ಮೇಲಿನ ಟಾಪನ್ನು ಅದರ ಜೊತೆ ತೊಟ್ಟೆ. ಯಾಕೋ ಮ್ಯಾಚ್ ಆಗ್ತಿಲ್ಲ ಅನಿಸಿತ್ತಾದರೂ ಅದೇ ಲಂಗವನ್ನ ಉಡಬೇಕೆನ್ನುವ ಹಠವಿತ್ತಾದ್ದರಿಂದ ಹೆಚ್ಚು ಯೋಚಿಸಲಿಲ್ಲ. ಬೆಳಿಗ್ಗೆ ಎದ್ದು ಸ್ನಾನ ತಿಂಡಿ ಮುಗಿಸಿ, ರೆಡಿಯಾಗಿ 90 ನಂಬರ್ ಮನೆಯಿಂದ 23 ನಂಬರ್ ಮನೆಗೆ ಓಡಿದ್ದೆ.
(90 ನಂಬರ್ ಮನೆ ನನ್ನ ತಂದೆತಾಯಿಯ ಮನೆ. 23 ನಂಬರ್ ಮನೆ ನನ್ನಜ್ಜಿಯ ಮನೆ. ನನ್ನ ಸೆಕೆಂಡ್ ಪಿಯೂಸಿ ಹೊತ್ತಿಗಾಗಲೇ ಅವ್ವ ಬಂದು ಬಿಜಾಪುರದಲ್ಲಿ ಇರತೊಡಗಿದ್ದನ್ನ ಈಗಾಗಲೇ ಹೇಳಿರುವೆ. ಆದರೂ ನನಗೆ ನನ್ನಜ್ಜಿಯ ಮನೆಯೇ ನಮ್ಮ ಮನೆ ಅನ್ನುವಷ್ಟು ಆಪ್ತವಾಗಿತ್ತು.)

ಮನೆಯಲ್ಲಿ ಅವರೆಲ್ಲ ಬರುವ ಮೊದಲು ಕೆಲಸ ಮಾಡಿ ಮುಗಿಸಿ ರೆಡಿಯಾಗಿರಬೇಕೆನ್ನುವ ಆತುರ ಎಲ್ಲರಿಗೂ. ನನಗೆ ಚಪಾತಿ ಮಾಡಲು ಹೇಳಿದಾಗ ಅದಾಗಲೇ ಹೊಸ ಲಂಗ ತೊಟ್ಟು ರೆಡಿಯಾಗಿ ಬಂದಿದ್ದ ನನಗೆ ನಿಜಕ್ಕೂ ಅಳು ಬರುವ ಹಾಗಾಗಿತ್ತು. ಹೇಳಿದ ಕೆಲಸ ಮಾಡದಿದ್ದರೆ ಅವರೆಲ್ಲ ಬಂದಾಗ ಎಲ್ಲಾ ಮಕ್ಕಳನ್ನು ಹೊರ ಅಟ್ಟುವುದಾಗಿ ಹಿರಿಯರು ಧಮ್ಕಿ ಕೊಟ್ಟಿದ್ದರಿಂದ, ಶಂಕರ್ ನಾಗ್ ಅವರನ್ನು ನೋಡುವ ಆಸೆಯ ಎದುರು, ಚಪಾತಿ ಮಾಡುವ ಚಾಲೇಂಜ್ ದೊಡ್ಡದೆನಿಸಲಿಲ್ಲವಾದ್ದರಿಂದ ಮನಸಿಲ್ಲದ ಮನಸ್ಸಿನಿಂದ ಒಪ್ಪಿ ಅಡುಗೆ ಮನೆ ಹೊಕ್ಕೆ. ಆಗೆಲ್ಲ ಗ್ಯಾಸ್ ಒಲೆ ಬರೀ ಹಾಲು ಕಾಯಿಸಲು ಮತ್ತೆ ಟೀ ಮಾಡಲಷ್ಟೆ ಉಪಯೋಗಿಸಲ್ಪಡುತಿತ್ತು ನಮ್ಮನೇಲಿ. ಹೀಗಾಗಿ ಉಳಿದೆಲ್ಲ ಅಡುಗೆಯನ್ನ ಉರುವಲು ಒಲೆಯ ಮೇಲೆ ಮಾಡುತ್ತಿದ್ದರು. ಚಪಾತಿ ಮಾಡತೊಡಗಿದೆ.

ನನಗೇ ಅಚ್ಚರಿಯಾಗುವಂತೆ ಅಂದು ಅಷ್ಟೂ ಜನಕ್ಕೂ ದುಂಡಗೆ ಮತ್ತು ಅತ್ಯಂತ ಮೃದುವಾದ ಚಪಾತಿಗಳನ್ನು ಮಾಡಿದ್ದೆ.
ಇಡೀ ಸಂಕೇತ್ ತಂಡವನ್ನು ಹೊತ್ತ ಬಸ್ ನಮ್ಮನೆಗೆ ಅಂದ್ರೆ 23 ನಂಬರ್ ಮನೆಗೆ ಬಂತು. ಶಂಕರ್ ನಾಗ್, ಅರುಂಧತಿ ನಾಗ್, ರಮೇಶ್ ಭಟ್ ಮತ್ತು ಉಳಿದ ಎಲ್ಲರೂ ಪಡಸಾಲೆಯಲ್ಲಿ ಜಮಾಯ್ಸಿ ಹರಟೆ ಹೊಡೀತಾ ಇದ್ದ್ರೆ ಅಡುಗೆ ಮನೆಯಲ್ಲಿ ಚಪಾತಿ ಮಾಡುತ್ತಿದ್ದ ನನಗೆ ಎದ್ದು ಮರೆಯಿಂದಾದ್ರೂ ಇಣುಕಿ ನೋಡಬೇಕು ಅನ್ನುವ ತವಕ. ಆದರೆ ನನ್ನ ಸಂಕೋಚ ಮತ್ತು ಮಾಡುತ್ತಿದ್ದ ಚಪಾತಿ ಎರಡೂ ನನ್ನನ್ನ ಅಡುಗೆ ಮನೆಯಲ್ಲೇ ಕಟ್ಟಿ ಹಾಕಿದ್ದವು.

ಅರು ಮ್ಯಾಮ್ (ಅರುಂಧತಿ ನಾಗ್) ಅಡುಗೆ ಮನೆಗೆ ಬಂದವರು ಅಲ್ಲಿನ ಅವಸ್ಥೆ ಮತ್ತು ಗಡಿಬಿಡಿಗಳನ್ನ ನೋಡಿ, “ಅಯ್ಯೋ ನೀವೆಲ್ಲ ಇಲ್ಲೇ ಕೂತಿದ್ರೆ ಹೇಗೆ? ಬನ್ನಿ ನಮ್ಮ ಜೊತೆನೂ ಸ್ವಲ್ಪ ಹೊತ್ತು ಕೂತ್ಕೊಳ್ಳಿ.” ಅವರು ಕರೆದ ತಕ್ಷಣ ಅದಕ್ಕೇ ಕಾದಿದ್ದವಳಂತೆ ಏಳಲು ಹೊರಟ ನನ್ನನ್ನು ನನ್ನ ಮುತ್ತಜ್ಜಿಯ ಬಿರುಗಣ್ಣು ತಡೆಯಿತು. ಹರೆಯದ ಮಕ್ಕಳು ಹಾಗೆಲ್ಲ ಧೈ ಅಂತ ಹೋಗಿ ಗಂಡಸರೆದುರು ನಿಲ್ಲೋದು ಚೆನ್ನಾಗಿರಲ್ಲ ಅನ್ನೋದು ಅವರ ಭಾವನೆ. ಸಪ್ಪೆ ಮುಖ ಹಾಕ್ಕೊಂಡು ಮತ್ತೆ ಒಲೆ ಮುಂದೆ ಕುಕ್ಕರಿಸಿದೆ. ಕಣ್ತುಂಬಿದ ನೀರು ಒಲೆಯ ಹೊಗೆಯಿಂದಲಾಗಿತ್ತಾ…? ಅರು ಮ್ಯಾಮ್ ಅದನ್ನು ಗಮನಿಸಿದರೋ ಏನೋ ಗೊತ್ತಿಲ್ಲ. “ನೀನ್ಯಾಕೆ ಇಲ್ಲೆ ಕೂತೆ? ಬಾ ಹೊರಗೆ” ಅಂದ್ರು.

ಮುತ್ತಜ್ಜಿಯ ಆಜ್ಞೆ ಮೀರಿ ನಿಧಾನಕ್ಕೆ ಅಡುಗೆ ಮನೆ ಬಾಗಿಲಿನ ಗೋಡೆಗಾನಿಸಿ ನಿಂತು ಮರೆಯಿಂದಲೇ ಪಡಸಾಲೆಯಲ್ಲಿ ಇಣುಕಿದೆ. ಡೈನಿಂಗ್ ಟೇಬಲ್ಲಿನ ಕುರ್ಚಿಯೊಂದರಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಶಂಕರ್ ನಾಗ್ (ಅಂದವರು ಬಿಳಿ ಜುಬ್ಬಾ ಹಾಕಿದ್ದರು.) ಅವರಿಗೆ ಅಶೋಕ್‍ಮಾಮಾ ನಮ್ಮನೆಯ ಸದಸ್ಯರೆಲ್ಲರನ್ನು ಪರಿಚಯಿಸುತ್ತಿದ್ದ. ಇಣುಕಿ ನೋಡುತ್ತಿದ್ದುದು ಗಮನಕ್ಕೆ ಬಂದವರಂತೆ ಶಂಕರ್‍ನಾಗ್ ನನ್ನ ನೋಡಿ ಮೃದುವಾಗಿ ನಕ್ಕರು ಅಷ್ಟೆ. ಅಷ್ಟೇ ನನ್ನ ಅವರ ಪರಿಚಯ. ಅಷ್ಟಕ್ಕೇ ಧನ್ಯೆ ನಾ! ಇಣುಕಿದ್ದು ಅಜ್ಜಿಗೆ ಗೊತ್ತಾದ್ರೆ ಅಷ್ಟೇ ನನ್ನ ಕತೆ ಅನ್ಕೊಂಡು ಒಳ ಸರಿದು ಚಪಾತಿ ಲಟ್ಟಿಸಲು ಕುಳಿತೆ.

ಅಂದಿನ ಅಡುಗೆಯಲ್ಲಿ ಅಷ್ಟೂ ಜನಕ್ಕೆ ಚಪಾತಿ ಮಾಡಿದ್ದು ನಾನೇ ಅಲ್ಲವೇ? ಹೀಗಾಗಿ ಮುಖ ಸರೀ ಎಣ್ಣೆ ಬಸಿಯುತ್ತಿತ್ತು. ಅವರೆಲ್ಲ ನನ್ನ ಅವತಾರ ಕಂಡು ಎಲ್ಲಿ ನನ್ನನ್ನ ಕೆಲಸದವಳು ಅನ್ಕೊಳ್ತಾರೇನೋ ಅನ್ನೊ ದಿಗಿಲು ನನಗೆ. ಎಲ್ಲರ ಊಟವಾದ ನಂತರ ಫೋಟೊ ಸೆಶನ್‍ ಹೊತ್ತಲ್ಲೇ ಎಲ್ಲ ಕಲಾವಿದರನ್ನ ಸರಿಯಾಗಿ ನೋಡಲು ಸಾಧ್ಯವಾಗಿದ್ದು.

ಫೋಟೊಗಾಗಿ ಎಲ್ಲ ಪಿಳ್ಳೆಗಳಿಗೂ ಶಂಕರ್‍ನಾಗ್ ಪಕ್ಕದಲ್ಲಿ ಕೂಡಬೇಕೆಂಬ ಆಸೆ. ನಂಗೂ ಸಹ. ಆದ್ರೆ ನಮ್ಮನೆಯಲ್ಲಿ ಹುಡುಗಿಯರು ಹೀಗನ್ಕೊಳ್ಳೋದೇ ವಿಪರೀತ, ಇನ್ನದನ್ನ ಬಾಯ್ಬಿಟ್ಟು ಆಡಲಾದೀತೇ? ಹೋಗಿ ಕೂರೋಕಾದೀತೇ? ಸುಮ್ನೆ ಮುಖ ಸಪ್ಪೆ ಹಾಕ್ಕೊಂಡು ದೂರ ನಿಂತಿದ್ದೆ ಗ್ರುಪ್ ಫೋಟೊ ಹೊತ್ತಲ್ಲಿ. ಆಗ ರಮೇಶ್ ಭಟ್ ನನ್ನನ್ನ ಕರದ್ರು, ‘ಬನ್ನಿ ಇಲ್ಲಿ ಚೂರು ಜಾಗ ಇದೆ’. ಸಿಕ್ಕಿದ್ದೇ ಚಾನ್ಸ್ ಅಂತ ಹೋಗಿ ಕೂತೆ. ಈಗ ಆ ಗ್ರುಪ್ ಫೋಟೊ ಸಿಗ್ತಿಲ್ಲ, ಸಿಕ್ಕಿದ್ದು ಇದು, ಕಲಾ ಮಾಧ್ಯಮದ ಕಲಾವಿದರಾದ ರಾಜೇಂದ್ರ ಗೂಗ್ವಾಡ್ ಅವರ ಬಳಿ ಇತ್ತು. ಈ ಫೋಟೊದಲ್ಲಿರುವ ಎಣ್ಣೆಮುಖದ, ಬಿಳಿ ಪರಕಾರ, ಕೆಂಪು ಪೋಲಕದ ಹುಡುಗಿ ನಾನು.

ಅಂದು ಮನೆಯಿಂದ ಹೊರಡುವಾಗ ಅವರಲ್ಲಿ ಕೆಲವರು, ಕರಿ ಎಳ್ಳು ಹಚ್ಚಿ, ಅರಿಶಿಣ ಹಾಕಿ ತೆಳ್ಳಗೆ ಮಾಡಿದ್ದ ಸಜ್ಜಿ ರೊಟ್ಟಿಗಳನ್ನು ಮುರಿದು, “ಆಗಾಗ ಹಪ್ಪಳದಂತೆ ಕುರುಕುರು ತಿಂತಾ ಇರಬಹುದು” ಎನ್ನುತ್ತಾ ಕಿಸೆ ತುಂಬಿಕೊಂಡಿದ್ದು ನಮಗೆಲ್ಲ ಮಜಾ ಅನಿಸಿತ್ತು ಮತ್ತು ಬಹು ಕಾಲ ನೆನೆ ನೆನೆದು ನಗುವಂತೆ ಮಾಡಿತ್ತು.
ಬಿಜಾಪುರದ ಖ್ಯಾತ ‘ಕಲಾ ಮಾಧ್ಯಮ’ ತಂಡವು ‘ಸಂಕೇತ್’ ತಂಡವನ್ನು ಕರೆಸಿತ್ತು ಮತ್ತು ನಮ್ಮ ಕಾಲೇಜಿನ ಆವರಣದ ಬಲಬದಿಯಲ್ಲಿನ ಕಟ್ಟಡದಲ್ಲಿದ್ದ ಸ್ಟೇಜ್ ಮೇಲೆ ನಾಟಕ ಪ್ರದರ್ಶನವಿತ್ತು. ಅಂದು ಸಂಜೆ ಮನೆಯವರೆಲ್ಲ ನಾಟಕ ನೋಡಲು ಹೋಗಿದ್ದೆವು. ನಾಟಕ ಆರಂಭವಾಯಿತು. ಸ್ಟೇಜ್ ಮೇಲೆ ಒಂದು ಅಷ್ಟಗಲದ ಸೆಟ್ ಹಾಕಲಾಗಿತ್ತು.

ಒಂದು ಬದಿಯಲ್ಲಿ ಮನೆಯ ರೀತಿ, ನಂತರದ ದೃಶ್ಯದಲ್ಲಿ ಅದನ್ನು ತಿರುಗಿಸಿ ಇಟ್ಟರೆ ಆ ಬದಿಯಲ್ಲಿ ಆಫೀಸ್! ಇಂಥದ್ದೊಂದು ದೊಡ್ಡ ಸೆಟ್ ಪ್ರಾಪರ್ಟಿಯನ್ನ ಹೇಗಪ್ಪಾ ಅಷ್ಟು ದೂರದಿಂದ ತಂದಿದ್ದಾರೆ ಮತ್ತು ಪ್ರತೀ ಸಲ ಅಷ್ಟು ಸುಲಭದಲ್ಲಿ ತಿರುಗಿಸಿ ತಿರುಗಿಸಿ ಇಡ್ತಿದ್ದಾರೆ ಎಂದು ಬೆರಗುಗೊಂಡಿದ್ದೆ ನಾನು. ಶಂಕರ್ ನಾಗ್ ಅವರು ಆಡಿಯನ್ಸ್ ಕಡೆ ನೋಡಿ ಡೈಲಾಗ್ ಹೇಳುವಾಗಲೆಲ್ಲ ನನ್ನನ್ನೇ ನೋಡ್ಕೊಂಡು ಹೇಳ್ತಿರೋದು ಅನ್ನೊ ಭ್ರಮೆಯಲ್ಲಿ ನಾನು ಉಳಿದವರಿಗಿಂತ ಸ್ಪೆಷಲ್ಲು ಅನ್ನುವ ಹುಚ್ಚು ಖುಷಿ ಅನುಭವಿಸಿದ್ದೆ. ನಾಟಕ ಮುಗಿಸಿ ಅವರೆಲ್ಲ ಹೋದ ಮೇಲೆ ಅದೆಷ್ಟೋ ದಿನ ಮನಸ್ಸಿಗೆ ಭಣಭಣ ಫೀಲಿಂಗು. ಮುಂದೆಲ್ಲ ಪೇಪರ್‍ನಲ್ಲಿ ಶಂಕರ್‍ನಾಗ್ ಬಗ್ಗೆ ಏನೇ ಸುದ್ದಿ ಬಂದರೂ ನನಗೇನೋ ತುಂಬಾ ಗೊತ್ತಿರೋರು ಅನ್ನುವ ಹಾಗೆ ಆಪ್ತತೆಯಿಂದ ಆ ಸುದ್ದಿಗಳನ್ನು ಓದುತ್ತಿದ್ದೆ.

ಇದಾಗಿ ಮೂರನೆಯ ವರ್ಷದ ಸೆಪ್ಟೆಂಬರ್ 30ಕ್ಕೆ (1990) ಶಂಕರ್ ನಾಗ್ ಆಕ್ಸಿಡ್ಂಟಲ್ಲಿ ಹೋಗ್ಬಿಟ್ರಂತೆ ಅನ್ನುವ ಸುದ್ದಿಯನ್ನ ಮನೆಯವರೆಲ್ಲ ನಂಬದೆ, ಇದು ಸುಳ್ಳು ಸುದ್ದಿ ಇರಬಹುದು, ಸತ್ತವರು ಅವರ ಡ್ರೈವರ್ ಇರಬಹುದು ಎಂದು ಮಾತಾಡಿಕೊಳ್ಳುತ್ತಾ, ಅವರು ನಮ್ಮ ಮನೆಗೆ ಬಂದುಹೋದ ದಿನವನ್ನು, ಅಂದು ನಾವು ಕಂಡ ಅವರ ಸರಳ, ಅಷ್ಟೇ ಗಂಭೀರ ಸ್ವಭಾವವನ್ನು, ನಾಟಕವನ್ನು ನೆನಪಿಸಿಕೊಂಡು ಕಣ್ಣು ತುಂಬಿಕೊಡಿದ್ದೆವು. 35 ವರ್ಷಗಳಾದವು ಶಂಕರ್ ನಾಗ್ ಅವರು ಇಲ್ಲವಾಗಿ. ಇದ್ದಿದ್ದರೆ, ಬೆಂಗಳೂರಿಗಾಗಿ, ಕರ್ನಾಟಕಕ್ಕಾಗಿ ಅವರು ಕಂಡ ಕನಸುಗಳು ಬಹುಶಃ ನನಸಾಗ್ತಿದ್ವೋ ಏನೋ…

|ಇನ್ನು ಮುಂದಿನ ವಾರಕ್ಕೆ|

‍ಲೇಖಕರು Admin

May 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. akshata

    Really great experience . ಈ ನೆನಪುಗಳೆಲ್ಲ ಇಡೀ ಜನ್ಮ ನೆನಪಿನಳ್ಳುಳಿಯುವಂತವು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: