ಕಾಡಿದ ‘ಯತ್ರ ನಾರ್ಯಸ್ತು ಪೂಜ್ಯಂತೆ’

ಪ್ರೊ ಕೆ ಫಣಿರಾಜ್

ಇವತ್ತು ಉಡುಪಿಯ ಎಂ.ಜಿ.ಯಂ. ಕಾಲೇಜಿನ ನೂತನ ರವೀಂದ್ರಮಂಟಪ ಸಭಾಂಗಣದಲ್ಲಿ ‘ಕಲಾಟ’ ತಂಡದ ಉದ್ಘಾಟನಾ ರಂಗಪ್ರದರ್ಶನ ‘ಯತ್ರ ನಾರ್ಯಸ್ತು ಪೂಜ್ಯಂತೆ’ ಪ್ರದರ್ಶನವಾಯ್ತು. ಇದು ಯುವ ಕಲಾವಿದೆ ಕೀರ್ತನ ಉದ್ಯಾವರ ಅವರ ಮೊದಲ ಏಕವ್ಯಕ್ತಿ ಪ್ರದರ್ಶನ. ನಿರ್ದೇಶಿಸಿದವರು ಯುವ ನಿರ್ದೇಶಕ ಪ್ರಶಾಂತ್ ಶೆಟ್ಟಿ ಕೋಟ.
ಯೌವನಿಗರಿಗೆ ಇರುವ ಹುಡುಕಾಟ ಹಾಗು ಉತ್ಸಾಹಗಳನ್ನು ರಂಗಪ್ರದರ್ಶನ ಪ್ರಕಟಿಸಿತು.

ಸುಧಾ ಆಡುಕಳ ಅವರು ಕೇರಳದಲ್ಲಿ ಘಟಿಸಿದ 19ನೇ ಶತಮಾನದ ‘ನಂಗಲಿ’ ಪ್ರಕರಣದ ಕುರಿತು ಬರೆದಿರುವ ಕತೆಯನ್ನು ಆಧರಿಸಿ ಈ ರಂಗಪ್ರದರ್ಶನವನ್ನು ಕಟ್ಟಲಾಗಿದೆ.

‘ಮೊಲೆ ತೆರಿಗೆ’ಯ ವಿರುದ್ಧ ಬಂಡೆದ್ದು, ತನ್ನ ಮೊಲೆಗಳನ್ನೇ ಕತ್ತರಿಸಿಕೊಂಡು ವ್ಯವಸ್ಥೆಗೆ ಸವಾಲೊಡ್ಡಿದ ನಂಗಲಿ ಎಂಬ ಮಹಿಳೆಯ ಬದುಕಿನ್ನು 21ನೇ ಶತಮಾನದ ವೈಚಾರಿಕ ಸಂದರ್ಭದಲ್ಲಿ ನಿರೂಪಿಸುವ ‘ವರ್ತಮಾನ ವಿಚಾರ ನಿರೂಪಣಾ ಕ್ರಮ’ವನ್ನು (Present time interpretative narrative) ಪ್ರದರ್ಶವು ಆಯ್ದುಕೊಂಡಿದೆ.

ಮಧ್ಯಮ ವರ್ಗದ ಶಿಕ್ಷಿತ ಗೃಹಿಣಿಯ ಪ್ರಸ್ತುತ ಬದುಕಿನ ಸ್ಥಿತಿಯ ಮೂಲಕ ‘ನಂಗಲಿ‌ ಕಥನ’ವನ್ನು ಅರ್ಥೈಸುವ ಸವಾಲಿನ ನಿರೂಪಣಾ ವಿಧಾನವನ್ನು ನಿರ್ದೇಶಕರು ಹಾಗು ನಟಿ ಆಯ್ದುಕೊಂಡಿರುವುದು ಸಾಹಸವೇ ಸರಿ. ಯೌವನಿಗರು ಇಂಥಾ ಆಟ ಆಡುವುದರಲ್ಲಿ ಖುಷಿ ಪಡುವುದು ಸ್ವಾಗತಾರ್ಹ; ಅಂಥಾ ಖುಷಿಯನ್ನು ಕೀರ್ತನಾ, ಪ್ರಶಾಂತ್ ಬಳಗವು ತಮ್ಮ ಪ್ರಸ್ತುತಿಯಲ್ಲಿ ಸುಲಲಿತವಾಗಿ ಪ್ರಕಟಿಸಿದರು. ಅವರ ಉತ್ಸಾಹ ಹಾಗು ವಿಶ್ವಾಸಗಳು ಚೇತೋಹಾರಿಯಾಗಿದ್ದವು.

ಇಷ್ಟು ಹೇಳಿ ಕೈತೊಳೆದುಕೊಳ್ಳುವುದು ಸುಲುಭ. ಈ ಪ್ರಯತ್ನವು ಬರೀ ಹರೆಯದವರ ಉತ್ಸಾಹಿ ಪ್ರಯೋಗವಾಗದೇ, ರಂಗ ಸಾಧ್ಯತೆಗಳ ವಿಸ್ತರಣೆಯಾಗ ಬೇಕು ಎಂಬ ಉದ್ದೇಶದಲ್ಲಿ, ನನ್ನ ಮಿತ ಜ್ಞಾನದಲ್ಲಿ ಕಂಡ ಪ್ರದರ್ಶನ ಮಿತಿಗಳನ್ನು ಹೇಳುತ್ತೇನೆ:
(1) ಗತ ಕಥನವನ್ನು ಪ್ರಸ್ತುತಕ್ಕೆ ಅನ್ವಯಿಸಿ ಅರ್ಥಧಾರಿಕೆ ಮಾಡಲು ಸಾಕಾಷ್ಟು ಭೌದ್ಧಿಕ ಪರಿಶ್ರಮ ಅಗತ್ಯವಿರುತ್ತದೆ.

ಹಿಂದಿನ ಕಾಲ ದೇಶಗಳ ಸಂದರ್ಭದ ವಿದ್ಯಮಾನಗಳನ್ನು ಇಂದಿಗೆ ಅರ್ಥೈಸುವಾಗ, ಹಿಂದಿಗೂ ಇಂದಿಗೂ ಆಗಿರುವ ಚಾರಿತ್ರಿಕ ಬದಲಾವಣೆಗಳಲ್ಲಿ ತೋರಿಕೆಯದು ಯಾವುದು? ಕ್ರಾಂತಿಕಾರಕತೆಯಲ್ಲಿ ಆಗಿರುವುದು ಏನು? ಅದಕ್ಕಿರುವ ಸಾಮಾಜಿಕ ಬೇರುಗಳೇನು? ಅಡ್ಡಿಗಳು ಈಗಲೂ ಇದ್ದರೆ, ಆಗಿರುವ ಸಾಮಾಜಿಕ ಕಣ್ಕಟ್ಟುಗಳು ಯಾವುವು? ಎಂಬ ಮೀಮಾಂಸೆ ನಡೆಸಿ ರಂಗಪಠ್ಯ ರಚಿಸಿಕೊಳ್ಳಬೇಕಾಗುತ್ತದೆ. ಅದು ಧೀರ್ಘ ಕಾಲ ಬೇಡುವ ಕಷ್ಟದ ಕೆಲಸ- ಸುಲುಭ ಮಾರ್ಗಗಳಿಲ್ಲ. ಸುಲುಭ ಮಾರ್ಗವೆಂದರೆ, ಇಂದಿನ ಕಂಣಲ್ಲಿ, ಮಧ್ಯದ ಚಾರಿತ್ರಿಕ ಸಂಘರ್ಷಗಳು ಇರಲಿಲ್ಲವೆಂಬಂತೆ, ಹಿಂದಿನದ್ದನ್ನು ಒಂದು ಪ್ರತ್ಯೇಕ ಘಟನಾವಳಿಯಾಗಿ ನೋಡುವುದು.

ಈ ರಂಗಪ್ರಸ್ತುತಿಯು ಆ ಸುಲುಭ ಮಾರ್ಗ ಅನುಸರಿಸಿದೆ.
(2) ಇಂದು, ಸಿನೆಮಾ ಮಾಧ್ಯಮದಲ್ಲಿ, ಕಾಲ ದೇಶಗಳನ್ನು ಕಲಸಿ ಪ್ರದರ್ಶಿಸುವ ತಂತ್ರಜ್ಞಾನದ ಬಳಕೆ ಇದೆ. ಇದೇ ಬಗೆಯ ವಸ್ತುಗಳನ್ನು ಇಟ್ಟುಕೊಂಡು, ದೃಷ್ಯಾತ್ಮಕವಾಗಿ ಕ್ಯಾಮೇರ ಹಾಗು ಸಂಕಲನ ಬಳಸಿ, ಕಾಲ ದೇಶಗಳನ್ನು ಕಲೆಸುವ ಒಂದು ನಿರೂಪಣಾ ವಿಧಾನವನ್ನು ಅನೇಕ ಮಹಿಳಾ ವಾದಿ ನಿರ್ದೇಶಕರು ಬಳಸುತ್ತಿದ್ದಾರೆ- ಅದರ ಕಲಾ ವಿಚಾರ ವಿಮರ್ಶೆ ಬೇರೆಯದೇ ಆಗಿದೆ. ಆದರೆ, ರಂಗ ಪ್ರದರ್ಶನವು ಅದನ್ನು ಉದಾಹರಣೆಯಾಗಿ ಇಟ್ಟುಕೊಳ್ಳುವುದು ಸೂಕ್ತವಲ್ಲ.

ರಂಗಪ್ರದರ್ಶನಕ್ಕೆ ತನ್ನದೇ ಪ್ರತ್ಯೇಕವೂ ಸ್ವಾಯತ್ತವೂ ಆದ ವ್ಯಾಕರಣವಿದೆ; ಅದಕ್ಕೆ ತನ್ನದೇ ಘನತೆಯು ಸಿನೆಮಾ ಕಲೆಯ ತಾಂತ್ರಿಕ ಮೇಲಾಟದ ನಂತರವೂ ಇದೆ. ರಂಗದಲ್ಲಿ ಕಾಲ ದೇಶಗಳ ಸ್ಥಿತ್ಯಾಂತರಗಳನ್ನು ತೋರಲಿಕ್ಕೆ ಅದರದ್ದೇ ತಂತ್ರಗಳಿವೆ. Drama ಎಂದರೆ Action-ನಾಟಕ ಎಂದರೆ, ರಂಗ ಆಯಾಮದಲ್ಲಿ ಆಂಗೀಕಾಭಿನಯದ ಉತ್ಕಟತೆ, ಆಹಾರ್ಯವು ಸಾತ್ವಿಕತೆಯ ಪ್ರಕಟಣೆಗೆ ಪೂರಕ. ಆದರೆ, ಇತ್ತೀಚಿನ ರಂಗ ಪ್ರದರ್ಶನಗಳಲ್ಲಿ ನಾವು ಸಿನೆಮಾದ ದೃಷ್ಯ ವ್ಯಾಕರಣದ ಅನುಕರಣೆ ಕಾಣುತ್ತಿದ್ದೇವೆ.

ಸಿನೆಮಾದ ಮಿಡ್ ಲಾಂಗ್, ಕ್ಲೋಸಪ್, ಎಕ್ಸ್ಟ್ರೀಮ್ ಕ್ಲೋಪ್ಗಳ ದೃಷ್ಯಕಟ್ಟುಗಳನ್ನು ರಂಗಪ್ರದರ್ಶದಲ್ಲಿ ತರುವ ರಂಗ ಪ್ರದರ್ಶನಕ್ಕೆ ತರುವ ರಂಗಸಜ್ಜಿಕೆ, ಅಭಿನಯ ಶೈಲಿಗಳನ್ನು ಕಾಣುತ್ತಿದ್ದೇವೆ.ಸಧ್ಯ ಕಾಣುವಂತೆ ಅದು ರಂಗಪ್ರದರ್ಶನ ಶಕ್ತಿಯನ್ನು ಕುಂದಿಸುವಂತೆ ಕಾಣುತ್ತಿದೆಯೇ ಹೊರತು ಹೆಚ್ಚಿಸುವಂತೆ ಕಾಣುತ್ತಿಲ್ಲ.

ಸಿನೆಮಾ ಭಾಷೆಗೆ ವ್ಯಾಕರಣ ಬರೆದ ಸರ್ಗೀ ಐಸೆನ್ಸ್ಟೈನ್ ತಾನು ರಂಗದಿಂದ ಏನು ಕಲಿತೆ ಎಂದು ಬರೆದಿರುವರುವರು. ಅವರು ರಂಗದ ಆಧ್ಯಾಂತ ಸಾಧ್ಯತೆಗಳನ್ನು ಸಿನೆಮಾದಲ್ಲಿ ಕಟ್ಟುವುದು ಹೇಗೆ ಮತ್ತು ರಂಗದಲ್ಲಿ ದುರ್ಬಲವಾದದ್ದನ್ನು ಸಿನೆಮಾದಲ್ಲಿ ಹೇಗೆ ಸಶಕ್ತಗೊಳಿಸಬಹುದು ಎಂದು ಚಿಂತಿಸಿದವರು. ಈ ಪಾಠಗಳು ಇಂದಿಗೂ ಪ್ರಸ್ತುತ ಎಂದೇ ಭಾವಿಸುವೆ. ಕಾಲಕಾಲಕ್ಕೆ, ತಮ್ಮ ಕಾಲದೇಶಗಳಿಗೆ ಅನುಗಣವಾಗಿ ಅಸಂಗತ ರಂಗ, ರಿಕ್ತರಂಗ, ಎಪಿಕ್ ರಂಗ, ಖಾಲಿ ರಂಗಗಳ ಸಿದ್ಧಾಂತಗಳ ಬಗ್ಗೆ ಚಿಂತಿಸಿದವರು, ಸಿನೆಮಾದ ಹೊರತಾಗಿ ರಂಗದ ಅನ್ಯನ್ಯತೆಯ ಬಗ್ಗೆ ಯೋಚಿಸಿದವರು.

ಇವತ್ತಿನ‌ ಪ್ರದರ್ಶನದ ರಂಗಪ್ರಸ್ತುತಿಯಲ್ಲಿ, ನಾಟಕೀಯತೆಗಿಂತ, ಸಿನೆಮಾ ದೃಷ್ಯಕಟ್ಟಿನ ಅನುಕರಣೆ ಹೆಚ್ಚಾಗಿ ಕಂಡಿತು.
ಪ್ರಯೋಗಗಳನ್ನು ಮಾಡುತ್ತಿರಬೇಕು. ಸರಿ ತಪ್ಪುಗಳು ವ್ರತವಾಗಕೂಡದು- ಎಂಬ ಅರಿವಿನಲ್ಲೇ, ಹೊಳೆದ ಎರಡು ಮಿತಿಗಳನ್ನು ಆಡಿರುವೆ.

‍ಲೇಖಕರು Admin

May 23, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: