ಶಾಲೆ, ಶೌಚಾಲಯ, ಋತುಚಕ್ರ ಮತ್ತು ಮನೋಭಾವಗಳು

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು.

ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.

ಸಾಮಾಜಿಕ ವಿಷಯಗಳ ಬಗ್ಗೆ ಆಳನೋಟವನ್ನು ಹೊಂದಿರುವ ಶರ್ಮಾ ಅವರ ಜೊತೆ ಮಾತಿಗೆ ಕುಳಿತರೆ ಜಗತ್ತಿನ ಒಂದು ಸುತ್ತು ಬಂದಂತೆ..

ಪ್ರತೀ ವಾರ ಇವರು ಮಕ್ಕಳ ಹಕ್ಕುಗಳ ಬಗ್ಗೆ ನಾವು ಕೇಳರಿಯದ ಸಂಗತಿಗಳನ್ನು ನಮ್ಮ ಮುಂದೆ ಇಡಲಿದ್ದಾರೆ.. 

‘ನಾನು ಶಾಲೆ ಬಿಟ್ಟಿದ್ದು ಅಲ್ಲಿ ಶೌಚಾಲಯ ಇರಲಿಲ್ಲ ಅನ್ನೋ ಕಾರಣಕ್ಕೇನೂ ಅಲ್ಲ ಬಿಡಿ…’ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಒಂದು ಹಳ್ಳಿಯಲ್ಲಿ ಪ್ರೌಢಶಾಲೆ ಮಟ್ಟದಲ್ಲಿ ಕಲಿಕೆ ಬಿಟ್ಟಿದ್ದ ಹೆಣ್ಣುಮಕ್ಕಳ ಸಮೀಕ್ಷೆ ನಡೆಸುತ್ತಿದ್ದಾಗ ಒಬ್ಬ ಹದಿವಯಸ್ಕ ಬಾಲಕಿ ಖಡಾಖಂಡಿತವಾಗಿ ಹೇಳಿದಳು.  ಚೈಲ್ಡ್‌ ರೈಟ್ಸ್‌ ಟ್ರಸ್ಟ್‌ ಸಂಸ್ಥೆಯ ಮೂಲಕ ‘ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ರ ಜಾರಿ’ ಕುರಿತು ಆ ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಶಾಲೆ ಬಿಡಲು ಕಾರಣಗಳ ಆಯ್ಕೆಗಳು – ಅಸಮರ್ಪಕ ಶಾಲಾ ಕಟ್ಟಡ, ಶೌಚಾಲಯ ವ್ಯವಸ್ಥೆ ಅಭಾವ, ಶಿಕ್ಷಕ ಶಿಕ್ಷಕಿಯರ ಸಂಖ್ಯೆಯಲ್ಲಿ ಕೊರತೆ, ಗ್ರಂಥಾಲಯದ ಕೊರತೆ, ಪ್ರಯೋಗಾಲಯದ ಕೊರತೆ. , ಆಟದ ಮೈದಾನದ ಕೊರತೆ, ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ, ಮನೆಯಿಂದ ಶಾಲೆ ಎಷ್ಟು ದೂರ, ಹೆಚ್ಚೆನಿಸುವ ಶಾಲಾ ಶುಲ್ಕ ಮತ್ತು ಇತರ ಖರ್ಚುಗಳು, ಶಾಲೆ ಕೊಡುವ ಸೌಲಭ್ಯ, ಇತ್ಯಾದಿಗಳ ಕುರಿತು ಕೇಳಲಾಗಿತ್ತು.

ಅನೇಕ ಮಕ್ಕಳು ಶಾಲೆ ಬಿಡಲು ಕಾರಣವೆಂದು ನಾವು ಗುರುತಿಸಿಟ್ಟುಕೊಂಡಿದ್ದ ವಿಚಾರಗಳಲ್ಲಿ ಕೆಲವನ್ನು ಗುರುತಿಸಿ ಅದಕ್ಕೆ ಎಂದೋ, ಇದಕ್ಕೆ ಎಂದೋ, ಇವನ್ನು ಬಿಟ್ಟು, ಮನೆಯಲ್ಲಿ ಬಡತನವೆಂದೋ, ಪೋಷಕರಿಗೆ ಇಷ್ಟವಿರಲ್ಲವೆಂದೋ, ತನಗೇ ವಿದ್ಯೆ ತಲೆಗೆ ಹತ್ತುತ್ತಿರಲಿಲ್ಲವೆಂದೋ, ಮನೆಯಲ್ಲಿ ಅಡುಗೆ ಮಾಡುವವರು, ಮಕ್ಕಳನ್ನು ನೋಡುವವರು ಇಲ್ಲವೆಂದೋ, ಚಿಕ್ಕವಯಸ್ಸಿಗೆ ಮದುವೆ ಮಾಡಿಬಿಟ್ಟರೆಂದೋ, ಕೆಲಸ ಮಾಡಲು ಹೋಗಲೇಬೇಕಿತ್ತೆಂದೋ, ಶಾಲೆ ದೂರವೆಂದೋ ಹೇಳಿಬಿಟ್ಟು ಸರ್ವೇಕ್ಷಣೆಯ ಕಾಗದಗಳನ್ನು ತುಂಬಿಸುತ್ತಿದ್ದರು.

ಒಂದಷ್ಟು ಹೆಣ್ಣುಮಕ್ಕಳು ಕಹಿ ಸತ್ಯಗಳಾಗಿದ್ದ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿರಲಿಲ್ಲವೆಂದೂ ಹೇಳಿದ್ದರು. ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸರಿಯಿಲ್ಲದ ಕಾರಣ ಹೆಣ್ಣುಮಕ್ಕಳು ಶಾಲೆ ಬಿಡುತ್ತಾರೆ ಎನ್ನುವುದೂ ಕೂಡ ನಮ್ಮ ಸಮೀಕ್ಷೆಯ ಪ್ರಮೇಯಗಳಲ್ಲಿ ಒಂದಾಗಿದ್ದು ಅದಕ್ಕೆ ಹತ್ತಿರವಾದ ಉತ್ತರಗಳು ಬರುತ್ತಿದ್ದಾಗ ನಮ್ಮ ತಲೆದೂಗುತ್ತಿತ್ತು. ನಮ್ಮ ವರದಿಯ ರೂಪ ಕಣ್ಣಮುಂದೆ ಬರುತ್ತಿತ್ತು. 

ಇಷ್ಟರ ಮಧ್ಯ ಅದೊಂದು ಹುಡುಗಿ, ‘ಶೌಚಾಲಯ ಇಲ್ಲ ಅಂತ ಮಾತ್ರಕ್ಕೆ ನಾನೇನು ಶಾಲೆ ಬಿಡಲಿಲ್ಲ’ ಎಂದಾಗ ನಮಗೆ ಅಯೋಮಯವಾಗಿತ್ತು. ಮತ್ತೆ ಇನ್ಯಾಕೆ…? 

‘ಅದು ಅಲ್ಲಿನ ಕೆಲವು ಶಿಕ್ಷಕರ ನಡವಳಿಕೆ ಮತ್ತು ನಮ್ಮನ್ನು ಕುರಿತು ಅವರಿಗಿರುವ ಮನೋಭಾವ’. 

ಊಹು! ನಮಗೆ ಸ್ಪಷ್ಟವಾಗಲಿಲ್ಲ! ಸಮೀಕ್ಷೆ ನಡೆಸುತ್ತಿದ್ದ ನಮ್ಮ ತಂಡದ ಉಮಾ ಮತ್ತು ನಳಿನಾಗೆ ಏನೋ ಗೊತ್ತಾಗುತ್ತಿತ್ತು. ಅವರ ಕಣ್ಸನ್ನೆಯನ್ನು ಅರ್ಥ ಮಾಡಿಕೊಂಡ ನಾವು ಮುಂದಿನ ಸ್ಯಾಂಪಲ್‌ ಮನೆ ಹುಡುಕಿಕೊಂಡು ಹೋದೆವು. ಉಮಾ ಮತ್ತು ನಳಿನಾ ಆ ಹುಡುಗಿಯೊಡನೆ ಮಾತು ಮುಂದುವರೆಸಲು ಅಲ್ಲೇ ಕುಳಿತರು.  

ಸಂಜೆ ಆ ದಿನದ ಸಮೀಕ್ಷೆ ಕೆಲಸಗಳನ್ನು ಮುಗಿಸಿ ವಿಚಾರ ವಿಮರ್ಶೆ, ಕಲಿಕೆಗಳನ್ನು ಗುರುತಿಸಲು ಕುಳಿತಾಗ ನಾವೆಲ್ಲಾ ಕುತೂಹಲದಿಂದ ಉಮಾ ಮತ್ತು ನಳಿನಾ ಅವರ ಮಾತಿಗಾಗಿ ಕಾಯುತ್ತಿದ್ದೆವು. 

‘ಶಾಲೆ ಬಿಡಲು ಶೌಚಾಲಯ ಇಲ್ಲ ಅಥವಾ ಅದು ಸರಿಯಿಲ್ಲ ಅನ್ನೋದೊಂದೇ ಕಾರಣ ಅಲ್ಲ… ಅಲ್ಲಿನ ಕೆಲವು ಶಿಕ್ಷಕರ ನಿಲುವು, ನಡವಳಿಕೆ, ಹೆಣ್ಣುಮಕ್ಕಳು ಮುಟ್ಟಾಗುವುದನ್ನು ಕುರಿತು ಅವರಿಗಿದ್ದ ವಕ್ರವಾದ ಸ್ವಭಾವ, ಅಸಹ್ಯವಾದ, ಬೇಡದ ಮಾತುಗಳು ಅವರನ್ನು ಶಾಲೆಯಿಂದ ಹೊರ ತಳ್ಳಿದೆ’.

ಜಗತ್ತಿನ ಬಹುತೇಕ ಶಾಲೆಗಳಲ್ಲಿ ಶಿಕ್ಷಕರು, ಪೋಷಕರು, ಶಿಕ್ಷಣ ನಿರ್ವಹಣೆ ನಡೆಸುವವರೆಲ್ಲರೂ ಚಿಂತಿಸುವುದು, ಮಾತನಾಡುವುದು ಮತ್ತು ಕ್ರಮ ಕೈಗೊಳ್ಳುವುದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವತ್ತಲೇ ಇರುತ್ತಿತ್ತು. ಅಂದರೆ, ಓದುವುದು, ಬರೆಯುವುದು, ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಭಾಷೆಗಳನ್ನು ಕಲಿಯುವುದಕ್ಕೆ ಮಾತ್ರ ಗಮನ. ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ ಇರಬೇಕು. ಸರಿ ಅವು ಇರುತ್ತವೆ. ಅವುಗಳ ಬಳಕೆ ಯಾರಾದರೂ ಮಾಡಿದರೆ ಮಾಡಬಹುದು. ಇಷ್ಟರ ಮೇಲೆ ಇರಲೇಬೇಕಾದುದು ಎಂದರೆ ಶೌಚಾಲಯ. ಅದೂ ಇರುತ್ತದೆ. ಬಳಕೆಯ ವಿಚಾರಕ್ಕೆ ಬಂದಾಗ ನೂರಾರು ನೆಪಗಳು, ಪ್ರಶ್ನೆಗಳು. 

ನನ್ನ ಕೆಲಸದ ಸಂದರ್ಭದಲ್ಲಿ ನೂರಾರು ಶಾಲೆಗಳನ್ನು ಭೇಟಿ ಮಾಡಿದ್ದೇನೆ. ಅವು ಮಕ್ಕಳ ಹಕ್ಕುಗಳನ್ನು ಕುರಿತು ಮಾಹಿತಿ ನೀಡಲು, ಯಾವುದಾದರೂ ಜಂಟಿ ಕಾರ್ಯಕ್ರಮ ನಡೆಸಲು, ತರಬೇತಿ ಕೊಡಲು ಇಲ್ಲವೇ ಒಮ್ಮೊಮ್ಮೆ ಅಧಿಕೃತವಾಗಿ ತನಿಖೆ, ಪರಿಶೀಲನೆ ಮಾಡಲೂ ಹೋಗುವುದಾಗಿತ್ತು. 

ಕೆಲವು ವರ್ಷಗಳ ಹಿಂದೆ ಬೆಂಗಳೂರು ನಗರದ ಹೊರವಲಯದ ಪ್ರಾಥಮಿಕ ಶಾಲೆಯ ಇಬ್ಬರು ವಿದ್ಯಾರ್ಥಿನಿಯರು ಶಾಲೆಗೆ ಹತ್ತಿರದ ಒಂದು ಹಳ್ಳದಲ್ಲಿ ಮುಳುಗಿ ಸತ್ತು ಹೋಗಿದ್ದರು. ಪ್ರಕರಣದ ವರದಿಯಲ್ಲಿ ಅವರು ನೀರಿನ ಹತ್ತಿರ ಹೋಗಿದ್ದರು, ಆಗ ಬಿದ್ದು ಸತ್ತಿರಬಹುದು ಎಂದಷ್ಟೇ ಇತ್ತು. ಯಾಕೆ ನೀರಿಗೆ ಹೋಗಿದ್ದರು ಎಂಬ ಪ್ರಶ್ನೆಯ ಜಾಡು ಹಿಡಿದು ಹೊರಟಾಗ ತಿಳಿದದ್ದು ಅವರು ಕಕ್ಕಸ್ಸು ಮಾಡಿ ಅಂಡು ತೊಳೆದುಕೊಳ್ಳಲು ಕಲ್ಲು ಕ್ವಾರಿಯಲ್ಲಿ ತುಂಬಿದ್ದ ಹಳ್ಳದ ನೀರಿಗೆ ಹೋಗಿದ್ದರು ಎಂಬುದು. ಅರೆ ಅಲ್ಲಿಗೆ ಯಾಕೆ ಹೋಗಬೇಕಿತ್ತು, ಶಾಲೆಯಲ್ಲಿ ಶೌಚಾಲಯ ಇಲ್ಲವೆ ಎಂದರೆ ‘ಇದೆ’. ಹಾಗಾದರೆ ಹಳ್ಳಕ್ಕೆ ಯಾಕೆ ಹೋದರು, ಶಾಲಾ ಶೌಚಾಲಯದಲ್ಲಿ ನೀರಿಲ್ಲವೆ, ಶೌಚಾಲಯ ಬಳಸಲು ಯೋಗ್ಯವಿಲ್ಲವೆ? ನೀರಿದೆ ಮತ್ತು ಅಲ್ಲಿ ಶೌಚಾಲಯ ಸುಸ್ಥಿತಿಯಲ್ಲಿದೆ. ಹಾಗಾದರೆ ಮಕ್ಕಳೇಕೆ ಹಳ್ಳಕ್ಕೆ ಹೋದರು…? 

‘ನಾವೆಲ್ಲಾ ಅಲ್ಲಿಗೇ ಹೋಗೋದು’ ಮಕ್ಕಳ ಸಹಜವಾದ ಮಾತು. ‘ಕಕ್ಕಸ್ಸು ಕೋಣೆ ನಮಗಲ್ಲ. ಟೀಚರ್‌ ಹತ್ರ ಬೀಗದ ಕೈ ಇರುತ್ತೆ. ಅವರು ಬೇಕು ಅಂದ್ರೆ ಬೀಗ ತೆಗೆದು ಹೋಗ್ತಾರೆ’. 

ಸರಿ. ಈಗ ಮಕ್ಕಳ ಸಾವಿಗೆ ಕಾರಣ ಯಾರು ಮತ್ತು ಏನು? ಉತ್ತರ ನಿಚ್ಚಳವಾಗಿ ಕಂಡಿತ್ತು. 

ಅನೇಕ ಕಡೆ ಶಾಲೆಗಳಲ್ಲಿ ಶೌಚಾಲಯ ಇರುತ್ತದೆ. ಖಂಡಿತ ಇರುತ್ತದೆ. ಅದು ಶಾಲಾ ತರಗತಿಗಳಿಂದ ಒಂದಷ್ಟು ದೂರದಲ್ಲಿ. ಗಂಡು ಮಕ್ಕಳು ಮತ್ತು ಹೆಣ್ಣು ಮಕ್ಕಳಿಗೆಂದು ಪ್ರತ್ಯೇಕವಾಗಿ ಇರಬೇಕು ಎನ್ನುವ ಕಡ್ಡಾಯ ನಿರ್ದೇಶನ ಪಾಲನೆ ಅಲ್ಲಿ ಇಲ್ಲಿ ಆಗಿರುತ್ತದೆ. ಅನೇಕ ಕಡೆ ಶೌಚಾಲಯಗಳಿಗೆ ಸೂರು ಇರುವುದಿಲ್ಲ. ಆಕಾಶಕ್ಕೆ ತೆರೆದಿರುವಂತೆ ಇರುತ್ತದೆ. ಇನ್ನು ಕೆಲವು ಕಡೆ ಸೂರು ಇರುತ್ತದೆ, ಬಾಗಿಲು ಹಾಕಿಕೊಂಡರೆ ಒಳಗೆ ಕಾರ್ಗತ್ತಲು! ಬೆಳಕಿನ ಒಂದು ಕಿರಣವೂ ಇಣುಕುವ ಸಾಧ್ಯತೆಯೇ ಇಲ್ಲ.

ಸೂರು ಇಲ್ಲದ ಕಡೆ ಅಕ್ಕಪಕ್ಕದಲ್ಲಿ ಮಹಡಿ ಮನೆಗಳಿದ್ದರೆ ಅಥವಾ ಯಾವುದಾದರೂ ಮರದ ಟೊಂಗೆ ಶೌಚಾಲಯದ ಮೇಲೆ ಬಾಗಿದ್ದರೆ ಅವುಗಳ ಮೇಲಿಂದ ಶೌಚಾಲಯದೊಳಗೆ ಇಣುಕಿ ನೋಡುವ ಸಾಧ್ಯತೆಯೂ ಇರುತ್ತದೆ. ಮುಟ್ಟಿದರೆ, ತಳ್ಳಿದರೆ ಒಡೆದು ಹೋಗುವ ಬಾಗಿಲು, ಒಳಗಿನಿಂದ ಚಿಲಕ ಹಾಕಿಕೊಳ್ಳುವ ವ್ಯವಸ್ಥೆ ಇಲ್ಲದಿರುವುದು ಅಥವಾ ಅದು ಎಂದೋ ಕಿತ್ತು ಹೋಗಿರುವುದು, ನೀರು ತೆಗೆದುಕೊಂಡು ಶೌಚಾಲಯಕ್ಕೆ ಹೋಗಬೇಕು. ಎಲ್ಲ ಕಡೆಯೂ ಶೌಚಾಲಯಕ್ಕೆ ನೀರು ಬರಲು ಕೊಳಾಯಿ ವ್ಯವಸ್ಥೆ ಇರುವುದಿಲ್ಲ. ಇಷ್ಟರ ಮೇಲೆ ಶಾಲಾ ಮಕ್ಕಳಿಗೆ ಶೌಚಾಲಯವೆಂದರೆ ಅದು ಎರಡೂವರೆ ಅಡಿ ಉದ್ದ ಎರಡೂವರೆ ಅಡಿ ಅಗಲ ಇದ್ದರೆ ಸಾಕು ಎಂದು ಯಾರು ಹೇಳಿಕೊಟ್ಟರೋ ಏನೋ. ಒಳ ಹೋದವರು ತಿರುಗಲಿಕ್ಕೂ ಆಗದಂತೆ ಇರುತ್ತವೆ… 

ಇಷ್ಟರ ಮೇಲೆ ಶೌಚಾಲಯವೆಂದರೆ ಕೇವಲ ಮೂರು ಗೋಡೆ (ಇದ್ದರೆ ಮೇಲೊಂದು ಸೂರು) ಒಂದು ಬಾಗಿಲು, ಕೆಳಗೊಂದು ಗುಂಡಿ. ಬಹಳ ಹೆಣ್ಣುಮಕ್ಕಳು ಹೇಳಿದಂತೆ, ಒಳಗೆ ತಮ್ಮ ಬಟ್ಟೆಗಳನ್ನು ನೇತುಬಿಡಲು ಒಂದು ಕೊಕ್ಕೆ ಅಥವಾ ಶೆಲ್ಫ್‌ ಇರುವುದಿಲ್ಲ. ಋತುಚಕ್ರದ ದಿನಗಳಲ್ಲಿ ಬಳಸಿದ ನ್ಯಾಪ್‌ಕಿನ್‌ ವಿಸರ್ಜಿಸಲು ಬುಟ್ಟಿಯಾಗಲೀ ಕಾಗದವಾಗಲೀ ಇರುವುದಿಲ್ಲ. ಶೌಚಾಲಯಕ್ಕೆ ಹೋಗಿಬಂದ ಮೇಲೆ ಕೈ ತೊಳೆದುಕೊಳ್ಳಲು ಸೋಪು, ನೀರು ಸಮರ್ಪಕವಾಗಿರುವುದಿಲ್ಲ. 

ಇಷ್ಟರ ಮೇಲೆ ತರಗತಿಯ ನಡುವ ಅಕಸ್ಮಾತ್‌ ಶೌಚಾಲಯಕ್ಕೆ ಹೋಗಿ ಬರುವ ಸಂದರ್ಭ ಬಂದದ್ದೇ ಆದರೆ ಶಿಕ್ಷಕರ ಅನುಮತಿ ಕೇಳುವುದು, ಅವರ ವ್ಯಂಗ್ಯ, ಟೀಕೆ ನೆನೆದು ಶೌಚಾಲಯಕ್ಕೆ ಹೋಗಲು ಕೇಳದೆ ತಡೆದುಕೊಳ್ಳುವ ಮಕ್ಕಳ ಪಾಡು ಸೇರುತ್ತದೆ.

ಇವೆಲ್ಲದರೊಡನೆ ಸರ್ಕಾರೀ ಶಾಲೆಯ ಶೌಚಾಲಯವೆಂದರೆ ಊರಿನ ಒಂದಷ್ಟು ಜನರಿಗೆ ಅದೆಷ್ಟು ಪ್ರೀತಿಯೋ ಏನೋ. ಒಬ್ಬ ಮುಖ್ಯ ಶಿಕ್ಷಕರು ಅಲವತ್ತುಕೊಂಡದ್ದು ಈಗಲೂ ನೆನಪಿದೆ, ‘…ಶಾಲೆ ಮುಗಿಯಿತು ಎಂದು ನಾವು ಹೊರಗೆ ಹೋದರೆ ಸಾಕು, ಶಾಲಾವರಣ ಎಲ್ಲ ರೀತಿಯ ಬೇಡದ ಚಟುವಟಿಕೆಗಳಿಗೆ ಮೀಸಲೂ ಎಂದೇ ಕೆಲವರು ಭಾವಿಸಿರುವಂತಿದೆ. ಇನ್ನು ಶಾಲೆಯ ಶೌಚಾಲಯ ಸಾರ್ವಜನಿಕರ ಆಸ್ತಿಯೆಂಬಂತೆ. ಬೀಗ ಹಾಕಿದರೆ, ಬೀಗ ಮುರಿದು ಬಾಗಿಲು ಒಡೆದು ಮುರಿದು ಹೋಗುತ್ತಾರೆ. ಒಳಗೆಲ್ಲಾ ಹೇತು ನೀರು ಬಿಡದೆ ತೊಳೆಯದೆ ಹೋಗುತ್ತಾರೆ. ಜೊತೆಗೆ ಅದ್ಯಾಕೋ ಗೊತ್ತಿಲ್ಲ, ಕಕ್ಕಸ್ಸಿನ ಬೇಸಿನ್‌ಗೆ ಕಲ್ಲು ತುಂಬುತ್ತಾರೆ, ದೊಡ್ಡ ಕಲ್ಲು ತಂದು ಒಡೆದು ಹಾಕುತ್ತಾರೆ… ಅವುಗಳನ್ನು ರಿಪೇರಿ ಮಾಡಿಸಿ ಮಾಡಿಸಿ ನಮಗೆ ಸಾಕುಬೇಕಾಗುತ್ತದೆ. ಯಾರು ಮಾಡಿದರು ಎಂದು ಕಂಡುಕೊಳ್ಳೋಕೆ ಆಗೋದೇ ಇಲ್ಲ…’ 

ಶಾಲೆಗಳಲ್ಲಿ ಶೌಚಾಲಯಗಳನ್ನು ಕಟ್ಟಿಸುವುದಕ್ಕೆ ಕೆಲವರಿಗೆ ಬಹಳ ಪ್ರೀತಿ. ಹಳೆಯ ಶೌಚಾಲಯ ಇರುವಾಗಲೇ ಹೊಸತೊಂದು ಕಟ್ಟಿಸುವ ಕೆಲಸಗಳನ್ನು ನಾನು ನೋಡಿದ್ದೇನೆ. ಯಾರೋ ಪ್ರಾಯೋಜಕರು ಬಂದಿದ್ದರು, ಅವರು ಕಟ್ಟಿಸುತ್ತಿದ್ದಾರೆ. ಹಳೇದು? ಅದು ಬಿದ್ದು ಹೋಗುತ್ತೆ. ಅರೆ ಅದನ್ನೇ ದುರಸ್ತಿ ಮಾಡಿಸಿದ್ದರೆ… ಅವು ದುರಸ್ತಿ ಮಾಡುವ ಸ್ಥಿತಿಯಲ್ಲೇ ಇರುವುದಿಲ್ಲ. 

ಹಲವು ವರ್ಷಗಳ ಹಿಂದೆ ಒಂದು ಶಾಲೆಯಲ್ಲಿ ಶೌಚಾಲಯ ಕಟ್ಟಿಸಲು ನಮ್ಮದೊಂದು ಸಂಸ್ಥೆಯಿಂದ ಪ್ರಾಯೋಜನೆ ಸಿಕ್ಕಿತ್ತು. ಶೌಚಾಲಯದ ಅಗಲ ಉದ್ದ, ಇಂಗು ಗುಂಡಿಯ ಆಳ ಇತ್ಯಾದಿ ಎಲ್ಲವೂ ಯೋಜನೆಯಂತೆ ನಡೆಯಲು ಒಪ್ಪಿಗೆ ಕೊಡಲಾಗಿತ್ತು ಮತ್ತು ಸ್ಥಳೀಯ ಗುತ್ತಿಗೆದಾರರು ಕಟ್ಟಿಸಿದರು. ಶೌಚಾಲಯ ಉದ್ಘಾಟನೆಯಾದ ಕೆಲವೇ ತಿಂಗಳುಗಳಲ್ಲಿ ನಮಗೆ ಕರೆ ಬಂದಿತು. ಶೌಚಾಲಯದ ಸಮಸ್ಯೆ. ಹೋಗಿ ನೋಡಿದಾಗ ಗೊತ್ತಾಗಿದ್ದು ಗುಂಡಿ ತುಂಬಿ ಹೋಗಿದೆ.

ಶಾಲೆಯವರು ಅಷ್ಟರಲ್ಲಾಗಲೇ ಎರಡು ಬಾರಿ ಗುಂಡಿ ಖಾಲಿ ಮಾಡಿಸಿದ್ದೆವು ಎಂದು ಹೇಳಿದರು. ನನಗೇನೋ ಅನುಮಾನ ಬಂದು ಗುಂಡಿಯ ಬಾಯಿ ತೆಗೆಸಿ ಹತ್ತು ಅಡಿಯ ಸರ್ವೆ ಕೋಲು ಒಳಗೆ ಬಿಡಿಸಿದೆ. ಕೋಲು ಅರ್ಧದಿಂದ ಕೆಲವು ಇಂಚುಗಳು ಮಾತ್ರ ಹೋಯಿತು. ಅಲ್ಲಿನ ಮಣ್ಣಿನ ಗುಣಲಕ್ಷಣಗಳಂತೆ ಕನಿಷ್ಟ ಎಂಟರಿಂದ ಹನ್ನೆರೆಡು ಅಡಿ ಆಳದ ಗುಂಡಿ ಎಂದೂ ಆರರಿಂದ ಎಂಟು ರಿಂಗ್‌ಗಳನ್ನು ಹಾಕಲೇಬೇಕೆಂಬ ನಿಬಂಧನೆಯಾಗಿತ್ತು. ಆದರೆ… ಈಗ. ಕಾರಣ ತಿಳಿಯಿತು! 

*** 
ತೀರಾ ಇತ್ತೀಚಿನವರೆಗೂ ಋತುಚಕ್ರದ ಬಗ್ಗೆ ವಿಚಿತ್ರವಾದ ರಹಸ್ಯವನ್ನು ಸಮಾಜ ಕಾಪಾಡಿಕೊಂಡು ಬಂದಿತ್ತು. ಅದರೊಂದಿಗೆ ಇಲ್ಲದ ತಪ್ಪು ಕಲ್ಪನೆಗಳು, ನಂಬಿಕೆಗಳು. ಹೀಗಾಗಿ ಒಂದಷ್ಟು ಶೋಷಣೆ, ಹಿಂಸೆ, ಬೇಸರ, ಅಸಹ್ಯ, ತಿರಸ್ಕಾರ, ತಾರತಮ್ಯ, ಕೀಳರಿಮೆ, ಒಂದೇ ಎರಡೇ? – ಮಕ್ಕಳು ಶಾಲೆ ಬಿಡಲು ಕಾರಣಗಳಲ್ಲಿ ಋತುಚಕ್ರ ಅಥವಾ ಮುಟ್ಟು ಎಂಬುದೂ ಒಂದು ಕಾರಣ ಎಂದು ಸ್ಥಳೀಯ ಮಟ್ಟಗಳಿಂದ ಹಿಡಿದು ಜಾಗತಿಕವಾಗಿ ನಡೆದಿರುವ ಅನೇಕ ಅಧ್ಯಯನಗಳು ಸ್ಪಷ್ಟಪಡಿಸಿವೆ.

ನಮ್ಮ ಸರ್ವೇಕ್ಷಣೆಯ ಸಮಯದಲ್ಲಿ ನಮ್ಮೆದುರು ಹೇಳಿದ ಆ ಬಾಲಕಿಯ ಮಾತು, ವಾಸ್ತವವಾಗಿ, ‘ಋತುಚಕ್ರ ನಿರ್ವಹಣೆ ಕುರಿತು ಸಮರ್ಪಕವಾದ ನೀತಿ, ವಿಧಾನ, ಅರಿವು ಇಲ್ಲ ಎನ್ನುವುದು’. ಎಂದರೆ ಋತುಚಕ್ರದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಬೇಕಾಗಿರುವ ಶುದ್ಧವಾದ ಮತ್ತು ಖಾಸಗಿಯಾಗಿರಲು, ಸುರಕ್ಷಿತವಾದ ಸ್ಥಳಾವಕಾಶವಿಲ್ಲ. ಜೊತೆಗೆ ಅನೇಕ ವಯಸ್ಕರಿಗೆ ಋತುಚಕ್ರದಲ್ಲಿರುವ ಹೆಣ್ಣುಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳಬೇಕು, ಏನು ಮಾತಾಡಬೇಕು, ಏನು ಮಾತನಾಡಬಾರದು, ಯಾವುದು ಹಾಸ್ಯ, ಯಾವುದು ಹಾಸ್ಯವಲ್ಲ, ಮುಖ್ಯವಾಗಿ ಯಾವುದು ಸಹ್ಯ ಮತ್ತು ಸಹ್ಯವಲ್ಲ ಎಂದು ತಿಳಿಯದಿರುವುದು. 

ಶಾಲೆಯೊಂದರ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ, ‘ಶುಚಿ ಯೋಜನೆಯ ಹೆಸರಿನಲ್ಲಿ ಶಾಲೆಯಲ್ಲಿ ಉಚಿತವಾಗಿ ನ್ಯಾಪ್‌ಕಿನ್‌ ಕೊಡುತ್ತಾರೆ. ಆದರೆ ಹುಡುಗಿಯರು ಮುಂದಾಗಿ ಹೋಗಿ ಅದನ್ನು ತೆಗೆದುಕೊಳ್ಳುವುದಿಲ್ಲ. ಕಾರಣ ಅದನ್ನು ಕೊಡುವ ಜವಾಬ್ದಾರಿ ಇರುವವರು ಒಬ್ಬ ಗಂಡು ಶಿಕ್ಷಕರು. ಶಾಲೆಯಲ್ಲಿ ಒಬ್ಬರೂ ಮಹಿಳಾ ಟೀಚರ್‌ಗಳಿಲ್ಲ. ಆ ಶಿಕ್ಷಕರ ಹತ್ತಿರ ನ್ಯಾಪ್‌ಕಿನ್‌ ಕೇಳುವುದೇ ಒಂದು ಮುಜುಗರ, ಮತ್ತು ಅವರ ದಾಸ್ತಾನು ಕೋಣೆಯ ಬಳಿ ಹೋಗಿ ಕಾಯುವುದು ಇನ್ನೊಂದು ಹಿಂಸೆ, ಅವರು ಕೊಟ್ಟರು ಎಂದು ಒಂದು ರೀತಿ ಜಗಜ್ಜಾಹೀರು ಮಾಡುವ ರೀತಿ, ಅವರು ನಗುವುದು, ವ್ಯಂಗ್ಯ ಮಾಡುವುದು, ದೂರ ನಿಂತುಕೋ, ವಾಸನೆ ಅಂತೆಲ್ಲಾ ಹೇಳುವುದು ಜೀವ ತೆಗೆಯುವಂತಹದ್ದು’.

ಆ ದಿನಗಳಲ್ಲಿ ಒಂದಷ್ಟು ಹುಡುಗಿಯರಿಗೆ ಹೊಟ್ಟೆನೋವು ಬಂದರೆ ಏನು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಯಾರಿಗೆ ಹೇಳಿಕೊಳ್ಳಬೇಕು.‌ ನಾವು ನೋವಿನಲ್ಲೇ ಇದ್ದು, ಒದ್ದಾಡಿಕೊಂಡು ಮನೆಗೆ ಹೋಗಬೇಕಷ್ಟೆ. ಬಿಸಿನೀರು ತುಂಬಿದ ಬಾಟಲಿ ಇಟ್ಟುಕೊಳ್ಳಿ ಅಂತ ಹೇಳಿದರೂ, ಶಾಲೆಯಲ್ಲಿ ಬಿಸಿನೀರು, ಬಾಟಲಿ ಕೊಡುವವರಾರು, ಕೊಟ್ಟರೂ, ಮಲಗಿಕೊಂಡು ಬಾಟಲಿಗೆ ತೆಳುವಾದ ಬಟ್ಟೆ ಸುತ್ತಿಕೊಂಡು ಹೊಟ್ಟೆಯ ಮೇಲೆ ಅದನ್ನು ಉರುಳಿಸಲು ಸಹಾಯ ಮಾಡುವವರು ಯಾರು, ಅದಕ್ಕ ಪ್ರತ್ಯೇಕವಾದ ಜಾಗ ಎಲ್ಲಿದೆ? 

ಶೌಚಾಲಯದ ಸಮಸ್ಯೆಗಳು, ಶಿಕ್ಷಕರ ನಡವಳಿಕೆ  ಇವುಗಳಿಂದ ಬೇಸತ್ತು  ಸಾಕಷ್ಟು ಸಂಖ್ಯೆಯಲ್ಲಿ ಬಾಲಕಿಯರು ಋತುಚಕ್ರದ ಸಮಯದಲ್ಲಿ ಶಾಲೆಗೆ ಬರುವುದೇ ಇಲ್ಲ. ಈ ಕುರಿತು ಒಬ್ಬ ವಿದ್ಯಾರ್ಥಿನಿ ವಿವರಿಸಿದ್ದಳು. ‘ಕೆಲವು ಶಿಕ್ಷಕರು ಹಾಜರಾತಿ ಕೂಗುವಾಗ ಹಾಜರಾಗದ ಹುಡುಗಿಯನ್ನು ಗುರುತಿಸಿ ವಿಚಿತ್ರವಾದ ಆನಂದ ಪಡೀತಿದ್ರು. ‘… ಓ! ಅವಳು ಬಂದಿಲ್ಲವಾ, ಇನ್ನು ಮೂರ್ನಾಕು ದಿನ…’ ಅದು ಅವರಿಗೆ ವಿಕೃತ ಹಾಸ್ಯ. ಹೆಣ್ಣುಮಕ್ಕಳೆಲ್ಲರಿಗೆ ಜೀವ ಹಿಂಡಿದಂತಾದರೆ, ತರಗತಿಯಲ್ಲಿ ಹುಡುಗರಿದ್ದರೆ ಅವರಿಗೂ ಆ ವಿಕೃತಾನಂದದಲ್ಲಿ ಪಾಲು. ಕೆಲವು ಹುಡುಗರಿಗೆ ಅದೇನೆಂದು ಗೊತ್ತಿಲ್ಲದಿದ್ದರೂ ಏನೋ ಒಂದು ಹೇಳಿ ಕಿಚಾಯಿಸುವುದು.  ಆ ಹುಡುಗರಿಗೆ ಶಿಕ್ಷಕರು ಏನು ಸಂದೇಶ ಕೊಡುತ್ತಿರುತ್ತಾರೆ?ʼ  

***

ಹೆಣ್ಣುಮಕ್ಕಳು ಶಾಲೆ ಬಿಡಲು ಕಾರಣ ಶೌಚಾಲಯ ಇಲ್ಲದಿರುವುದು ಎಂದು ಅನೇಕ ಕಡೆ ಚರ್ಚೆಗಳು ನಡೆದಿರುತ್ತವೆ. ನಾವು ಈ ವಿಚಾರವನ್ನೂ ಜೊತೆಗಿಟ್ಟುಕೊಂಡು ಕಿರು ಅಧ್ಯಯನ ನಡೆಸಲು ಹೋದವರು ಶಾಲೆ, ಶೌಚಾಲಯ, ಹೆಣ್ಣುಮಕ್ಕಳು, ಋತುಚಕ್ರ, ವ್ಯವ‍ಸ್ಥೆಗಳು, ನಡವಳಿಕೆಗಳು, ಮಾನಸಿಕ ಹಿಂಸೆ, ಪರ್ಯಾಯ ವ್ಯವ‍ಸ್ಥೆಗಳು, ವೈಜ್ಞಾನಿಕ ಚಿಂತನೆ, ಅರಿವು ಮೂಡಿಸುವುದು ಎಂದೆಲ್ಲಾ ವಿಸ್ತಾರವಾದ ಕ್ಷೇತ್ರದತ್ತ ಹೆಜ್ಜೆ ಹಾಕಿದೆವು.  

ಇದಕ್ಕೆ ನಮಗಿದ್ದ ಆಧಾರ, ಆರೋಗ್ಯ, ಕುಡಿಯುವ ನೀರಿನ ಸೌಲಭ್ಯವನ್ನು ಶಾಲೆಗಳಲ್ಲಿ ಮಾಡಿಕೊಡಲೇಬೇಕು ಎನ್ನುವ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ೨೦೦೯ರಲ್ಲಿನ ಸಲಹೆಗಳು ಹಾಗೂ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ಮಕ್ಕಳೆಲ್ಲರಿಗೆ ಖಾತರಿ ಪಡಿಸಿರುವ ಮಕ್ಕಳ ಖಾಸಗಿತನದ ಹಕ್ಕು, ತಾರತಮ್ಯಗೊಳಿಸದಿರುವುದು, ಮಕ್ಕಳ ಆರೋಗ್ಯ ಮತ್ತು ಮಕ್ಕಳ ಗೌರವ ಘನತೆಗಳನ್ನು ಕಾಪಾಡಬೇಕು ಎನ್ನುವ ನಿರ್ದೇಶನಗಳು. 

ಈ ದಿಶೆಯಲ್ಲಿ ಕೇಂದ್ರ ಸರ್ಕಾರ ಕೆಲವು ವರ್ಷಗಳ ಹಿಂದಿನಿಂದಲೇ ನೀರು ಮತ್ತು ನೈರ್ಮಲ್ಯ ಯೋಜನೆಯಡಿ ಪ್ರಚಾರ, ಶಿಕ್ಷಣ, ಮಾಹಿತಿ ಮತ್ತು ಶಾಲೆಗಳಲ್ಲಿ ‘ಶುಚಿʼ ಎಂಬ ಹೆಸರಿನಲ್ಲಿ ನ್ಯಾಪ್‌ಕಿನ್‌ ಹಂಚಿಕೆ ನಡೆಸುತ್ತಿದೆ. ಒಂದೆಡೆ ಇವನ್ನು ಸ್ವಾಗತಿಸುತ್ತಲೇ ಅತೀವವಾಗಿ ಬಳಸಿ ಬಿಸಾಡುವ ನ್ಯಾಪ್‌ಕಿನ್‌ಗಳ ಮೇಲಿನ ಒತ್ತಾಸೆಯಿಂದಾಗಿ ಇನ್ನೊಂದಷ್ಟು ತೊಂದರೆಗಳು ಕಂಡುಬಂದಿವೆ. ಉದಾ. ಶಾಲಾ ಶೌಚಾಲಯದ ಗುಂಡಿಯಲ್ಲೇ ಬಳಸಿದ ನ್ಯಾಪ್‌ಕಿನ್‌ ಹಾಕಿಬಿಡುವುದು. ಅಥವಾ ಬಳಸಿದ ನ್ಯಾಪ್‌ಕಿನ್‌ ಅನ್ನು ಸುರಕ್ಷಿತವಾಗಿ ವಿಸರ್ಜಿಸುವ ವ್ಯವಸ್ಥೆ ಇಲ್ಲದಿರುವುದು.

ಒಂದಷ್ಟು ಕಡೆ ನ್ಯಾಪ್‌ಕಿನ್‌ ಬಳಸಿದ ಮೇಲೆ ಅದನ್ನು ಸುಡಲು ಅತ್ಯಂತ ಹೆಚ್ಚಿನ ತಾಪಮಾನ ಕೊಡುವ ಯಂತ್ರಗಳನ್ನಿಟ್ಟರೂ (ಇನಸಿನಿರೇಟರ್‌), ಅದನ್ನು ನಿರ್ವಹಿಸಲು ತಿಳಿಯದೆ ಕೆಡುವುದು (ವಿದ್ಯುತ್‌ ಇಲ್ಲದಿರುವುದು), ಸುಡಬೇಕು ತಾನೆ ಎಂದು ಶಾಲೆಯ ಬಯಲಿನ ಒಂದು ಮೂಲೆಯಲ್ಲಿ ನ್ಯಾಪ್‌ಕಿನ್‌ಗಳನ್ನು ಹಾಕಿ ಬೆಂಕಿ ಹಾಕಿ ಇನ್ನಷ್ಟು ಪ್ಲಾಸ್ಟಿಕ್‌ ಸುಟ್ಟು ವಿಷದ ಹೊಗೆ ಕಕ್ಕುವುದು… ಇನ್ನೂ ಒಂದಷ್ಟು ತೊಡಕುಗಳು. 

ಕೇವಲ ಶೌಚಾಲಯ ಕಟ್ಟಿಸಿಬಿಟ್ಟರೆ ಹೆಣ್ಣುಮಕ್ಕಳು ಶಾಲೆಗೆ ಬಂದು ನಿಲ್ಲುವುದಿಲ್ಲ. ಇಲ್ಲಿ ಇನ್ನೂ ಆಗಬೇಕಿರುವುದು ಶಾಲಾ ವ್ಯವಸ್ಥೆಯಲ್ಲಿರುವವರೆಲ್ಲರ ಮನೋಭಾವದ ಬದಲಾವಣೆ ಮತ್ತು ಮಕ್ಕಳಲ್ಲಿ, ಗಂಡು ಮಕ್ಕಳನ್ನೂ ಒಳಗೊಂಡು, ಸಮುದಾಯದಲ್ಲೂ ಋತುಚಕ್ರವನ್ನು ಕುರಿತು ವೈಜ್ಞಾನಿಕವಾದ ಅರಿವು ಬೆಳೆಸುವುದು. ಈ ದಿಶೆಯಲ್ಲಿ ನಮಗೆ ಹೆಜ್ಜೆ ಇಡಲು ಬೆಂಬಲವಾಗಿ ನಿಂತವರು ಸಿಂಧು ನಾಯಕ್‌ ಮತ್ತು ಡಾ. ಮೀನಾಕ್ಷಿ ಭರತ್‌ ಮತ್ತಿತರರು.

ರಿಜುವನೇಟ್‌ ಇಂಡಿಯಾ ಮೂವ್‌ಮೆಂಟ್‌ ಮತ್ತು ಗ್ರೀನ್‌ ದ ರೆಡ್‌ ಎಂಬ ಸಂಸ್ಥೆಗಳ ಮೂಲಕ ಮೊದಲು ನಮ್ಮ ತಂಡದ ಸದಸ್ಯರಿಗೆ ಋತುಚಕ್ರದ ವೈಜ್ಞಾನಿಕ ವಿಚಾರಗಳು, ಶೌಚಾಲಯಗಳ ನಿರ್ವಹಣೆ, ಮಕ್ಕಳೊಡನೆ ಸಾಮೂಹಿಕವಾಗಿ ಮಾತನಾಡಲು ಮತ್ತು ವೈಯುಕ್ತಿಕವಾಗಿ  ಆಪ್ತಸಮಾಲೋಚನೆ ನಡೆಸುವ ವಿಧಾನಗಳು, ಶಿಕ್ಷಕ ವರ್ಗಕ್ಕೆ ತರಬೇತಿ, ಸಮುದಾಯದಲ್ಲಿ ಅರಿವು ಕಾರ್ಯಕ್ರಮಗಳನ್ನು ನಡೆಸಲು ಬೇಕಾದ ಮಾಹಿತಿ, ಆರೋಗ್ಯ ಇಲಾಖೆಯವರನ್ನು ಒಳಗೊಂಡು ನಡೆಸಬೇಕಾದ ಪ್ರಚಾರಾಂದೋಲನ, ಹೀಗೆ ಒಂದಕ್ಕೊಂದು ಸೇರುತ್ತಾ ‘ಸುಸ್ಥಿರ ಮುಟ್ಟು ನಿರ್ವಹಣೆʼ ಎಂಬಲ್ಲಿಗೆ ಮುಟ್ಟಿದೆವು.

ನಮ್ಮ ತಂಡದ ಉಮಾ, ಅಶ್ವಿನಿ, ನಳಿನಿ, ಸತೀಶ್‌ ಜಯರಾಂ, ನಾಗಸಿಂಹ, ಕಾಂತರಾಜು, ರಾಮಕೃಷ್ಣ, ಮೊದಲಾದವರೊಡನೆ ಹಲವಾರು ದಿನಗಳ ಚರ್ಚೆ, ತರಬೇತಿ, ಅಧ್ಯಯನವೇ ಮೊದಲಾದವುಗಳಿಂದ ಸಿದ್ಧರಾಗಿ ‘ಸುಸ್ಥಿರ ಮುಟ್ಟು ನಿರ್ವಹಣೆʼ ಆಂದೋಲನಕ್ಕೆ ೨೦೧೭ರಲ್ಲಿ ಹೊರಟೇ ಬಿಟ್ಟೆವು. ತಂಡದ ಎಲ್ಲ ಗೆಳತಿಯರು ಮರುಬಳಸಬಹುದಾದ ಕೈಯಲ್ಲೇ ತಯಾರಿಸಿದ ಬಟ್ಟೆಯ ನ್ಯಾಪ್‌ಕಿನ್‌ಗೆ ಮತ್ತು ಮುಟ್ಟು ಬಟ್ಟಲನ್ನು ಬಳಸಲು ಮುಂದಾದರು.

ಉಳಿದ ಪುರುಷರೆಲ್ಲ ನಮ್ಮ ನಮ್ಮ ಮನೆಗಳಲ್ಲಿ ಮುಟ್ಟು ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಬಹಿರಂಗವಾಗಿ ಮಾತನಾಡುವ ಧೈರ್ಯ ಮಾಡಿದೆವು. ಸಮುದಾಯಗಳತ್ತ ಮೊದಲು ಹೆಜ್ಜೆ ಇಟ್ಟಾಗ ಕೆಲವು ಮಹಿಳೆಯರು, ಹುಡುಗಿಯರು ಮುಸಿ ಮುಸಿ ನಕ್ಕರು, ಗಂಡಸರು ಜೋರಾಗೇ ನಕ್ಕರು, ಅಷ್ಟೇ ಅಲ್ಲ, ನಿಮಗ್ಯಾಕ್ರೀ ಈ ಹೆಂಗಸರ ವಿಚಾರ ಎಂದು ಅಲ್ಲಿ ಇಲ್ಲಿ ಹಂಗಿಸಿದರೂ ಕೂಡಾ. ನಾವು ಅಂದುಕೊಂಡಂತೆ ಮೊದಲೇ ಶಾಲೆಗಳತ್ತ ಹೋಗಲಿಲ್ಲ. ಬದಲಿಗೆ ಸಮುದಾಯದತ್ತ ನಡೆದೆವು.  

ಶಿಡ್ಲಘಟ್ಟ ತಾಲೂಕಿನ ೧೨೫ ಹಳ್ಳಿಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರನ್ನು ಒಳಗೊಂಡು ಸಮುದಾಯಗಳ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರೊಡನೆ ಮಹಿಳೆಯರ ಆರೋಗ್ಯ ಅದರಲ್ಲೂ ಋತುಚಕ್ರ ಮತ್ತು ಅದಕ್ಕೆ ಸಂಬಂಧಿಸಿದ ಶುಚಿತ್ವ, ಚಿಕಿತ್ಸೆ ಮೊದಲಾದವುಗಳಿಗೆ ಸಂಬಂಧಿಸಿದಂತೆ ಮುನ್ನೂರಕ್ಕೂ ಹೆಚ್ಚು ಸಮಾಲೋಚನೆ, ಪ್ರಾತ್ಯಕ್ಷಿಕೆ, ಬೀದಿ ನಾಟಕವೇ ಮೊದಲಾದವುಗಳ ಮೂಲಕ ತಲುಪಲಾಯಿತು.

ಶುಚಿತ್ವ, ಆರೋಗ್ಯದ ವಿಚಾರಗಳ ಜೊತೆ ಮಾರುಕಟ್ಟೆಯಲ್ಲಿ ಸಿಗುವ ಬಳಸಿ ಬಿಸಾಕುವ ನ್ಯಾಪ್‌ಕಿನ್‌ಗಳಿಂದಾಗುತ್ತಿರುವ ಅನಾಹುತವೂ ನಮ್ಮ ಮುಖ್ಯ ವಿಚಾರವಾಗಿತ್ತು. ಬಹುತೇಕ ಮಹಿಳೆಯರು ಬಳಸುವ ಬಟ್ಟೆಯನ್ನೇ ಹೇಗೆ ಶುದ್ಧವಾಗಿಟ್ಟುಕೊಳ್ಳಬೇಕು, ಬಿಸಿಲಿನಲ್ಲಿ ಒಣಗಿಸಬೇಕು ಎನ್ನುತ್ತಲೇ ಬಟ್ಟೆಯಲ್ಲಿ ಮಾಡಿದ ಮರುಬಳಕೆ ಮಾಡಬಹುದಾದ ನ್ಯಾಪ್‌ಕಿನ್‌ ಮತ್ತು ಮುಟ್ಟಿನ ಬಟ್ಟಲನ್ನು ತೋರಿಸಿ, ಅದನ್ನು ಬಳಸುವುದರಿಂದ ಆಗುವ ಅನುಕೂಲಗಳು ಹಾಗೂ ಪರಿಸರಕ್ಕೆ ಅದು ಹೇಗೆ ಸಹಕಾರಿ ಎಂಬ ಅನುಭವ ಜನ್ಯ ಮಾಹಿತಿ ಹಂಚಿಕೊಳ್ಳತೊಡಗಿದೆವು. 

ಮೊದಮೊದಲು ಮುಂದೆ ಬಂದು ಮರುಬಳಕೆ ನ್ಯಾಪ್‌ಕಿನ್‌ ಮತ್ತು ಮುಟ್ಟಿನ ಬಟ್ಟಲನ್ನು ಬಳಸಲು ಸಿದ್ಧರಾದವರು ಆರೋಗ್ಯ ಕಾರ್ಯಕರ್ತೆಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಮಹಿಳಾ ವೈದ್ಯರು. ಮುಂದಿನ ಕೆಲವೇ ದಿನಗಳಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಹಿಳೆಯರು, ತರುಣಿಯರು ತಾವೇ ಮುಂದಾಗಿ ಬಂದು ಮರುಬಳಕೆ ನ್ಯಾಪ್‌ಕಿನ್‌ಗಳನ್ನು ಹಣ ಕೊಟ್ಟು ಖರೀದಿಸಲಾರಂಭಿಸಿದರು.

ಸಮುದಾಯದಲ್ಲಿ ಶುಚಿತ್ವ ಮತ್ತು ಆರೋಗ್ಯ ಹಾಗೂ ಋತುಚಕ್ರ ಕುರಿತಂತೆ ಯಾವುದೇ ಕುಹಕ, ವ್ಯಂಗ್ಯವಿಲ್ಲದೆ ಗಂಭೀರವಾಗಿ ಮಾತನಾಡುವ ಸಾಧ್ಯತೆ ಸ್ಪಷ್ಟವಾಗಿ ಕಾಣಲಾರಂಭಿಸಿತು. ಇವುಗಳ ಮಧ್ಯದಲ್ಲೇ ನಮ್ಮ ತಂಡ ಶಾಲೆಗಳಲ್ಲಿ ತನ್ನ ಸಮಾಲೋಚನೆಗಳನ್ನು ನಡೆಸಲಾರಂಭಿಸಿತು. ೨೦ ಪ್ರೌಢಶಾಲೆಗಳಲ್ಲಿ ಸುಸ್ಥಿರ ಮುಟ್ಟಿನ ನಿರ್ವಹಣೆ, ಶೌಚಾಲಯದ ಬಳಕೆ, ಮರುಬಳಕೆ ನ್ಯಾಪ್‌ಕಿನ್‌ ಮೊದಲಾದವುಗಳನ್ನು ಶಿಕ್ಷಕ ವರ್ಗದ ಜೊತೆಜೊತೆಯಲ್ಲೇ ನಡೆಸಲಾಯಿತು. ಪರಿಣಾಮ ಸುಮಾರು ೧೨೦೦ಕ್ಕೂ ಹೆಚ್ಚು ಹೆಣ್ಣುಮಕ್ಕಳು ಮರುಬಳಕೆ ನ್ಯಾಪ್‌ಕಿನ್‌ಗಳನ್ನು ಬಳಸಲು ಮುಂದಾದರು. 

೨೦೧೯ರ ಮೇ ೨೮ರಂದು ನಡೆದ ಸುಸ್ಥಿರ ಮುಟ್ಟಿನ ನಿರ್ವಹಣೆ ದಿನಾಚರಣೆಯನ್ನು ಶಿಡ್ಲಘಟ್ಟದಲ್ಲಿ ಏರ್ಪಡಿಸಿದ್ದೆವು. (ಈ ಅಂತಾರಾಷ್ಟ್ರೀಯ ದಿನದ ಆಯ್ಕೆ ಬಹಳ ಸೂಕ್ತವಾಗಿದೆ. ಸಾಮಾನ್ಯವಾಗಿ ೨೮ ದಿನಗಳ ಋತುಚಕ್ರವಿದ್ದು ಸ್ರಾವ ೫ ದಿನಗಳು ಇರುವುದು ಎಂದು ಸೂಚಿಸುವುದು ಇದು). ಈ ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರಾದ ಜಯಲಕ್ಷ್ಮಿ, ವೆಂಕಟಲಕ್ಷ್ಮೀ, ಗಾಯತ್ರಿ ಹಾಗೂ ಆಶಾ ಕಾರ್ಯಕರ್ತೆಯರಾದ ಮುನಿನಾರಾಯಣಮ್ಮ, ನಂಜಮ್ಮ, ಶೈಲಾ ಸಭೆಯೆದುರು ಬಂದು ಮರುಬಳಕೆ ನ್ಯಾಪ್‌ಕಿನ್‌ ಹಾಗೂ ಮುಟ್ಟಿನ ಬಟ್ಟಲು ತಮ್ಮ ಬದುಕಿನ ವಿಧಾನವನ್ನೇ ಹೇಗೆ ಬದಲಿಸಿದೆ ಮತ್ತು ಋತುಚಕ್ರದ ದಿನಗಳಲ್ಲಿ ತಾವೀಗ ಯಾವುದೇ ಸಂಕೋಚವಿಲ್ಲದೆ, ಆತಂಕವಿಲ್ಲದೆ ಎಲ್ಲ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೇವೆ ಎಂದು ಅನುಭವ ಹಂಚಿಕೊಂಡರು. ಸಭೆಯಲ್ಲಿ ಬಾಲಕಿಯರು, ತರುಣಿಯರು, ಮಹಿಳೆಯರಲ್ಲದೆ ಸಾಕಷ್ಟು ಸಂಖ್ಯೆಯಲ್ಲಿ ಪ್ರೌಢಶಾಲಾ ಗಂಡುಮಕ್ಕಳು, ಶಿಕ್ಷಕರು, ವೈದ್ಯರು, ಗ್ರಾಮಪಂಚಾಯತಿ ಸದ್ಯರನ್ನು ಒಳಗೊಂಡ ಪುರುಷರು ಇದ್ದರು.

ಮರುಬಳಕೆ ಬಟ್ಟೆಯ ನ್ಯಾಪ್‌ಕಿನ್‌ ಅನ್ನು ನಾವೇ ತಯಾರಿಸಬಹುದು. ಅದನ್ನು ಕಲಿಯಲು ನೀವು ಸಿದ್ಧರಿದ್ದೀರಾ ಎಂದು ರಿಮ್‌ನ ಸಿಂಧು ನಾಯಕ್‌ ಸಭೆಯಲ್ಲಿ ಪ್ರಸ್ತಾವನೆ ಇಟ್ಟರು. ಅದಕ್ಕೆ ಪ್ರತಿಕ್ರಿಯಿಸಿ ಹೊಲಿಗೆ ತರಬೇತಿ ಪಡೆದಿದ್ದ ಮಹಿಳೆಯರು ಮುಂದಾದರು. ರಿಮ್‌ ಮೂಲಕ ಕೆಲವು ಹೊಲಿಗೆ ಯಂತ್ರಗಳು, ಇಂಟರ್‌ ಲಾಕಿಂಗ್‌ ಯಂತ್ರ ಮತ್ತು ಕಚ್ಚಾ ವಸ್ತುಗಳು ಮೊದಲ ಕೊಡುಗೆಯಾಗಿ ಬಂದಿತು.

‘ರಕ್ಷಾʼ ಎಂಬ ಹೆಸರಿನಡಿಯಲ್ಲಿ ವಂಟೂರು ಗ್ರಾಮದಲ್ಲಿ ಪವಿತ್ರಾ, ಲಕ್ಷ್ಮೀ, ಚೈತ್ರ ಮತ್ತು ಕಮಲಮ್ಮನವರ ನೇತೃತ್ವದಲ್ಲಿ ಬಟ್ಟೆಯ ನ್ಯಾಪ್‌ಕಿನ್‌ ತಯಾರಾಗಿ ಮಾರಾಟವಾಗುತ್ತಿದೆ. (ಸದ್ಯ, ಕೋವಿಡ್‌ನಿಂದಾಗಿ ಕಚ್ಚಾವಸ್ತು ಸಿಗದ ಕಾರಣ ಅವರು ಮುಖಗವಸುಗಳನ್ನು ಹೊಲಿಯುತ್ತಿದ್ಧಾರೆ.) ಇನ್ನಷ್ಟು ಆರ್ಥಿಕ ಸಹಾಯ ದೊರಕಿದರೆ ಅವರು ಇನ್ನೂ ಹೆಚ್ಚಿನ ಉತ್ಪಾದನೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

‘ರಕ್ಷಾʼ ಕೇಂದ್ರದ ಆರಂಭದ ದಿನ ಊರಿನ ಹಿರಿಯ ಪುರುಷರು ಕೆಲವರು ಬಂದಿದ್ದರು. ಹೊಲಿಗೆ ಕೇಂದ್ರದ ಉದ್ಘಾಟನೆ ಎಂದು ಅಂದುಕೊಂಡಿದ್ದವರೇ ಹೆಚ್ಚು. ಅವರೆದುರು ಮರುಬಳಕೆ ಬಟ್ಟೆ ನ್ಯಾಪ್‌ಕಿನ್‌ಗಳ ಉದ್ಘಾಟನೆ ಎಂದಾಗ ಕೆಲವರು ಸಂಕೋಚ ಪಟ್ಟರೂ, ನ್ಯಾಪ್‌ಕಿನ್‌ಗಳನ್ನು ಕೈಯಲ್ಲಿ ಹಿಡಿದು ನೋಡಿ ಹೀಗೂ ಇರುತ್ತದೇನು ಎಂದು ಆಶ್ಚರ್ಯಪಟ್ಟರು. 

ಈ ಮರುಬಳಕೆ ಹತ್ತಿಯ ಬಟ್ಟೆಯ ನ್ಯಾಪ್‌ಕಿನ್‌ಗಳು ಮತ್ತು ಮುಟ್ಟಿನ ಬಟ್ಟಲು ಈಗ ಕೇವಲ ಅನುಕೂಲದ ವಿಚಾರವಾಗಿಲ್ಲ, ಬದಲಿಗೆ ಸ್ತ್ರೀಯರ ಗೌರವದ ಮಾತಾಗಿದೆ. ಅಷ್ಟೇ ಅಲ್ಲ, ಸುಸ್ಥಿರ ಅಭಿವೃದ್ಧಿ ಗುರಿ ೫ರಲ್ಲಿ ಸ್ಪಷ್ಟ ಪಡಿಸಿರುವಂತೆ ಮಹಿಳೆಯರ ಸಶಕ್ತತೆಗೆ ಹಾಗೂ ಗುರಿ ೩ರಲ್ಲಿರುವಂತೆ ಆರೋಗ್ಯ, ಅದರಲ್ಲೂ ಲೈಂಗಿಕ ಆರೋಗ್ಯವನ್ನು ಉತ್ತಮಪಡಿಸುವುದು, ಮಾನಸಿಕ ನೆಮ್ಮದಿ ಮತ್ತು ನಿರಾಳತೆಯನ್ನು ತರುವಲ್ಲಿ ಜಗತ್ತಿನಾದ್ಯಂತ ಪ್ರಮುಖ ವಿಚಾರವಾಗಿದೆ. ಹಾಗೆಯೇ ಗುರಿ ೪ ಹೇಳುವಂತೆ ಗುಣಮಟ್ಟದ ಶಿಕ್ಷಣ ಪಡೆಯಲು ಹೆಣ್ಣುಮಕ್ಕಳಿಗೆ ನೆರವಾಗುತ್ತಿದೆ. ಗುರಿ ೬ರಂತೆ ನೀರು ಮತ್ತು ನೈರ್ಮಲ್ಯವನ್ನು ಸಾಧಿಸುವಲ್ಲಿ ಮುಂದಾಗಿದೆ. 

***
೨೦೧೯ರ ಹೊತ್ತಿಗೆ ಕೇಳಿ ಬರುತ್ತಿರುವುದು ಮಾಸಿಕ ಋತುಚಕ್ರ ಕುರಿತು ಸಾಕಷ್ಟು ಅರಿವು ಮೂಡಿದೆ. ಬಹುತೇಕ ಶಾಲಾ ಶೌಚಾಲಯಗಳು ಸುಸ್ಥಿತಿಯಲ್ಲಿವೆ. ಮುಟ್ಟಿನ ಕಾರಣದಿಂದ ಶಾಲೆ ತಪ್ಪಿಸುವುದು, ಬಿಡುವುದು ನಿಂತಿದೆ ಎಂದು ಶಾಲಾ ಶಿಕ್ಷಕ ಶಿಕ್ಷಕಿಯರು ಹೇಳುತ್ತಾರೆ. 

‍ಲೇಖಕರು Avadhi

June 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Koushik Kintoo

    ಹೆಣ್ಣು ಮಕ್ಕಳಿಗಾಗಿ ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಪ್ರತ್ತಯೇಕ ಕೊಠಡಿ ವ್ಯವಸ್ಥೆ ಬೇಕೆ ಬೇಕು.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ Koushik KintooCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: