ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶಾಂತಿಯನ್ನರಸುತ್ತಾ..

ಅಲಕಾ ಜಿತೇಂದ್ರ

ಬುದ್ಧ
ಜಗಕೆ ಶಾಂತಿಯನರುಹಿದವ
ಕುಳಿತಿರುವನಂತೆ ಅಲ್ಲೆಲ್ಲೋ
ಧ್ಯಾನಸ್ಥನಾಗಿ
ಪುಟ್ಟ ದೀಪ ಹಿಡಿದು ಹೊರಟೆ
ಅವನಿಗರ್ಪಿಸಲು

ಬೆಳಕು ಉಜ್ವಲವಾಗಿತ್ತು.

ಹೂವಿನ ಘಮ
ಮುಂದೆ ಸಾಗಿದೆ
ಸುಂದರ ಹಾದಿಯ ನೆನೆದು
ಒಂದನೇ ಹೆಜ್ಜೆಗೆ
ಬಡಿಯಿತು ನೆತ್ತರ ವಾಸನೆ.
ಹಿಂತಿರುಗಿ ನೋಡಿದೆ
ರಕ್ತದ ಕಲೆಗಳು
ಇತಿಹಾಸದ ಪುಟಗಳಲಿ
ಜಗವನಾಳಿದ ಮಹಾಸಾಮ್ರಾಜ್ಯಗಳ
ಕೋಟೆಯ ಗೋಡೆಗಳಿಂದ
ಜಿನುಗುತ್ತಿತ್ತು ನೆತ್ತರು.
ವಿಜಯ ಕಹಳೆಯ ತೂರಿ
ಕಿವಿಗಪ್ಪಳಿಸಿತು
ಒಂದು ಆಕ್ರಂದನ

ಬೆಳಕು ಕ್ಷೀಣಿಸಿತು.

ಭಗವಂತನ ನೆನೆದು
ಮುಂದಡಿ ಇಟ್ಟೆ
ಸುತ್ತಲೂ ಹರಡಿತ್ತು
ನೂರಾರು ಚಿತ್ರಗಳು
ಯುದ್ಧಕ್ಕೆ ಸನ್ನದ್ಧನಾದ
ಬಿಲ್ಲ ಹೆದೆಯೇರಿಸಿದ ರಾಮ,
ಕುರುಕ್ಷೇತ್ರದೆಡೆಗೆ ರಥವ
ಭರದಿ ಓಡಿಸುತ್ತಿರುವ ಕೃಷ್ಣ,
ಗದೆಯನೆತ್ತಿ ಹೂಂಕರಿಸಿ
ತೊಡೆತಟ್ಟಿ ನಿಂತ ಹನುಮ
ಅಬ್ಬಾ..
ಎಷ್ಟು ಹುಡುಕಿದರೂ ಕಾಣಲೇ ಇಲ್ಲ
ಮಂದಹಾಸದ ಅಭಯ
ನೀಡುವ ರಾಮ?
ಮುದ್ದುಮುಖದ
ಕೊಳಲನೂದುವ ಕೃಷ್ಣ?
ಎದೆಯೊಳಗೆ ರಾಮನ
ಧರಿಸಿದ ಭಕ್ತ ಹನುಮ?
ಭಯಾನಕ ರೂಪೀ
ದೇವಿಯರ ನಡುವೆ
ಎಲ್ಲಿದ್ದಾರೆ ಪುಸ್ತಕ, ವೀಣೆ ಹಿಡಿದ,
ವಾತ್ಸಲ್ಯ, ಮಮತೆ ನೀಡುವ
ದೇವಿಯರು?

ಬೆಳಕು ಕ್ಷೀಣಿಸಿತು.

ನಾಯಕರಿದ್ದಾರಲ್ಲ ದಾರಿತೋರಲು
ಮುಂದಿನ ಹೆಜ್ಜೆ ಇಟ್ಟೆ.
ಅರೆ, ಬೇರೆ ಬೇರೆ ನಾಯಕರಿಗೆ
ಬೇರೆ ಬೇರೆ ಸಾಲು
ಒಡೆದು ಆಳುವ ಸೂತ್ರಧಾರಿಗಳು
ಬಿಕರಿಗಿಟ್ಟಿದ್ದಾರೆ ದ್ವೇಷದ ಬೀಜ
ಭೇಟಿಗೆ ಆಧಾರ, ನೋಟಿನ ಭಾರ
ಎಲ್ಲರ ಕೈಸವರಿದ ಗಾಂಧೀನೋಟೊಂದು
ನನ್ನ ಕೈಸೇರಿತು.
ದಿಟ್ಟಿಸಿ ನೋಡಿದೆ
ಬೆನ್ನು ತಿರುಗಿಸಿ, ತಲೆತಗ್ಗಿಸಿ,
ನಡೆದೇ ಬಿಟ್ಟರು
ಶೂನ್ಯದೆಡೆಗೆ
ಗಾಂಧಿ.

ಬೆಳಕು ಕ್ಷೀಣಿಸಿತು.

ನಿಧಾನವಾಗಿ
ಮತ್ತೊಂದು ಹೆಜ್ಜೆ ಇಟ್ಟೆ
ನೂರಾರು ಬಣ್ಣಗಳು
ಹರಡಿವೆ ಎಲ್ಲೆಡೆ
ಹೆಕ್ಕಿ ಒಂದೊಂದೇ ಬಣ್ಣ
ಬಿಡಿಸಲೇ ಸುಂದರ ಚಿತ್ತಾರ?
ನಾ ಮುಂದು, ತಾ ಮುಂದು
ಜಗಳಕ್ಕೆ ನಿಂತವು ಬಣ್ಣಗಳು
ನಾ ಸರಿ, ನೀ ತಪ್ಪು
ಹೊಡೆದಾಡಿದವು ಕೇಸರಿ, ಬಿಳಿ, ಹಸಿರು.
ಕಪ್ಪನ್ನು ಬಿಳಿ ಆಕ್ರಮಿಸಿತು
ನೀಲಿಯು ಗುಲಾಬಿಯ ಹೊಸಕಿತು
ಗಾಢ ಬಣ್ಣಗಳು
ದುರ್ಬಲಿಗಳ ತುಳಿದವು
ನಾ ಮೇಲು, ನೀ ಕೀಳು
ಬಣ್ಣ ಮಾಸಿದ ರಣರಂಗ

ಭಾರದ ಹೆಜ್ಜೆ ಇಟ್ಟೆ

ಬೆಳಕು ನಂದಿತು
ಸುತ್ತಲೂ ಕತ್ತಲು
ಬುದ್ಧ ಕಾಣಲಿಲ್ಲ
ಅಲ್ಲಲ್ಲ, ಬುದ್ಧ ಅಲ್ಲಿ
ಇರಲೇ ಇಲ್ಲ.

‍ಲೇಖಕರು Avadhi

16 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading