ಶರತ್ ಕಲ್ಕೋಡ್ ಕಾದಂಬರಿ ಐರಾವತವನ್ನೇರಿ 3 – ಸ್ಮಶಾನ ಕುರುಕ್ಷೇತ್ರ!

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

3

‘ಮನುಷ್ಯ ಹೀಗೇ ಪರಿಸರ ನಾಶ ಪಡಿಸುತ್ತಾ ಹೋದರೆ, ತನ್ನ ವಿನಾಶಕ್ಕೆ ತಾನೇ ಕಾರಣವಾಗಬೇಕಾಗುತ್ತದೆ. ಭೂಮಿ ಮೇಲೆ ಮನುಷ್ಯ ಬದುಕಲು ಎಷ್ಟು ಹಕ್ಕಿದೆಯೋ, ಅಷ್ಟೇ ಹಕ್ಕು ಪ್ರಾಣಿ, ಪಕ್ಷಿ, ಗಿಡಮರಗಳಿಗೂ ಇದೆ, ಅವುಗಳ ಉಳಿವೇ ನಮ್ಮ ಉಳಿವು,’ ಅಂತ ಹೇಳಿ ಪಶ್ಚಿಮ ಘಟ್ಟ ಸಂರಕ್ಷಣೆಗಾಗಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ, ಮಾಧವ ಗಾಡ್ಗೀಳ್, ಕಸ್ತೂರಿರಂಗನ್ ವರದಿಗಳ ಬಗ್ಗೆ ಹಾಗೂ ಕಳೆದ ಮಳೆಗಾಲ ಕೊಡುಗು, ಮಲೆನಾಡ ಹಲವು ಭಾಗಗಳಲ್ಲಾದ ಭೂಕುಸಿತದ ಬಗ್ಗೆ ಶಕ್ತಿಮೀರಿ ವಿವರಿಸಿದೆ. ಆದರೆ ಯಾವುದೂ ಪ್ರಯೋಜನವಾಗಲಿಲ್ಲ ನೋಡಿ,’ಎಂದೆ.

ಅನಂತಭಟ್ಟರೂ ನಮ್ಮೂರ ಕಾಡುಮೇಡು ನಾಶವಾಗುತ್ತಿರುವುದು ಕಂಡು ನಿಟ್ಟುಸಿರುಗರೆಯುವವರೇ. ವೇದ, ಉಪನಿಷತ್. ರಾಮಾಯಣ, ಮಹಾಭಾರತಕಾಲದಿಂದ ಹಿಡಿದು ಇಂದಿನವರೆಗೂ ಮಲೆನಾಡಿನ, ನವಿಲೇಬ್ಯಾಣದ ಇತಿಹಾಸ ಬಿಚ್ಚಿಡಬಲ್ಲವರು. ವೇದೋಪನಿಷತ್‌ ಕಾಲದ ಋಷಿಮುನಿಗಳು ಹಿಮಾಲಯದಲ್ಲಿ ಮಾತ್ರವಲ್ಲ; ಮಲೆನಾಡಲ್ಲೂ ಸಂಚರಿಸುತ್ತಿದ್ದರೆಂದು ಪುರಾವೆ ನೀಡಬಲ್ಲರು.

‘ಶೃಂಗೇರಿ ನರಸಿಂಹಪರ್ವತವೆಂದರೆ ಸಾಮಾನ್ಯವೇ? ಸ್ವಾಮಿ ಅವತರಿಸಿದ ಬಳಿಕ ನೆಲೆಸಿದ್ದು ಅಲ್ಲೇಅಲ್ಲವೇ? ಹೊರನಾಡ ಅನ್ನಪೂರ್ಣೇಶ್ವರಿ ಇನ್ನೇನು? ಪುರಾಣ ಪ್ರಸಿದ್ಧ ಋಷ್ಯಶೃಂಗ ಮುನಿ ನೆಲಸಿದ್ದು ಕಿಗ್ಗದಲ್ಲಲ್ಲವೇ? ಆ ಮಹಾಮಹೀಮ ಓಡಾಡಿದ್ದೇ ಮಲೆನಾಡು! ಜಗತ್ತಿಗೇ ಚವನಪ್ರಾಶ ನೀಡಿದ ಚವನಮುನಿ, ಹಿಮಾಲಯದಲ್ಲಿ ವಾಸಿಸುತ್ತಿದ್ದರೂ, ನೆಲ್ಲಿಕಾಯಿಗಾಗಿ ಬರುತ್ತಿದ್ದದ್ದು ನಮ್ಮ ನವಿಲೇಬ್ಯಾಣಕ್ಕೇ! ಯಾಕೆಂದರಿಲ್ಲಿ ತುಂಬಿ ತುಳುಕುತ್ತಿದ್ದದ್ದು ಬರೀ ನೆಲ್ಲಿಮರ!

ಮೊನ್ನೆಮೊನ್ನೆತನಕ ಸುತ್ತಮುತ್ತ ಊರ ಬಾವಿ ತಳದಲ್ಲಿ ಬ್ಯಾಣದ ನೆಲ್ಲಿಮರದ ಹಲಗೆ ಹಾಸದೇ ಇರುತ್ತಿರಲಿಲ್ಲ. ಹಾಗಾಗಿ ಯಾರ ಹಳೇಮನೆಗೆ ಹೋಗಿ ಕುಡಿವ ನೀರು, ತಂಪಾಗಿ, ಸಿಹಿಯಾಗಿತ್ತೆಂದರೆ ಅದರ ತಳದಲ್ಲಿ ನವಿಲೇಬ್ಯಾಣದ ನೆಲ್ಲಿ ಹಲಗೆ ಹಾಸಿದ್ದಾರೆಂದೇ ಲೆಕ್ಕ! ಈಗ ಔಷಧಿಗೆ ಬೇಕೂಂದ್ರೂ ಒಂದೇಒಂದು ಮರಯಿರಲಿ, ನೆಲ್ಲಿಕಾಯಿ ಸಿಕ್ಕುತ್ತಾ?’ ನಿಟ್ಟುಸಿರುಗರೆದು, ಮುಂದುವರಿಸಿದರು:

‘ತ್ರೇತ್ರಾಯುಗದಲ್ಲಿ ರಾಮಸೀತೆ, ಲಕ್ಷ್ಮಣ ವನವಾಸ ಮಾಡಿದ್ದೂ, ಹನುಮ ಓಡಾಡಿದ್ದು ಇಲ್ಲೇ. ಅದಕ್ಕೆ ಸೀತೆ ಅಡಿಗೆ ಮಾಡಿದ ಕಟ್ಟಿನಮಡಿಕೆಯೇ ಸಾಕ್ಷಿ. ಮಹಾಭಾರತದ ಪಾಂಡವರು ವನವಾಸ ಮಾಡಿದ್ದಕ್ಕೂ ಇಲ್ಲಿ ಕುರುಹುವುಂಟು. ಕವಲೆದುರ್ಗದ ಭೀಮನ ಗದಾತೀರ್ಥಕ್ಕಿಂತ ಬೇರೆ ಪುರಾವೆ ಬೇಕೆ? ಕುಂದಾದ್ರಿ ಜೈನರ ಕ್ಷೇತ್ರತಾನೇ? ಕವಲೇದುರ್ಗ ಕೆಳದಿ ಅರಸರ ರಾಜಧಾನಿಯಲ್ಲವೇ? ಆಗುಂಬೆಘಾಟಿ ಮಾಡಿದ್ದು ಟಿಪ್ಪೂ ತಾನೇ? ಮೈಸೂರು ಅರಸರ ಆಳ್ವಿಕೆ ಪ್ರತೀಕವಾಗಿ ಆಗುಂಬೆಯಲ್ಲಿ ಪೂರ್ಣಯ್ಯನ ಛತ್ರ ಇತ್ತಲ್ಲವೇ? ಅಲ್ಲೇ ಶಂಕರ್‌ನಾಗ್ ‘ಮಾಲ್ಗುಡಿ ಡೇಸ್’ ಸಿರೀಯಲ್ ತೆಗೆದಿದ್ದಲ್ಲವೇ? ಅದರ ಕುರುಹುಂಟನಾ ಈಗ? ದರಿದ್ರದವು ಸರ್ವನಾಶ ಮಾಡಿದವು…’

-ಹೀಗೆ ಅನಂತಭಟ್ಟರ ಕಂತೆಯಲ್ಲಿ ನವಿಲೇಬ್ಯಾಣದ ವೇದ, ಪುರಾಣ, ಇತಿಹಾಸದ ಕಂತೆಕಂತೆ ದಾಖಲೆಯುಂಟು. ಅಲ್ಲದೇ ಪೂಜೆ. ಹೋಮ, ಯಾಗಾದಿಗಳಿಗೆ ಅವರು ಬಳಸುತ್ತಿದ್ದ ಅತ್ತಿ, ಗೋಳಿ, ಶಮ್ಮಿ, ಯೆಕ್ಕೆ, ದೂರ್ವೇ, ಹಲಸು ಮುಂತಾದ ಲವಾಜಮೆಗಳ ತಾಣವೂ ನವಿಲೇಬ್ಯಾಣವೇ!

‘ಜಗತ್ತಿರುವುದೇ ತನಗಾಗಿ ಅಂತ ಮನುಷ್ಯ ಅತಿರೇಕಕ್ಕೆ ಹೋಗಿದ್ದಾನೆ. ಪ್ರಕೃತಿ, ದೇವರು-ದಿಂಡರು, ಗುರು-ಹಿರಿಯರು ಯಾವುದೂ ಲೆಕ್ಕಕ್ಕೇಯಿಲ್ಲ. ಎಲ್ಲ ಇರುವುದು ತನ್ನ ಸ್ವಾರ್ಥಕ್ಕಾಗಿ ಎಂದುಕೊಂಡಿದ್ದಾನೆ. ವಿನಾಶಕಾಲೇ ವಿಪರೀತ ಬುದ್ಧಿ, ಒಂದಲ್ಲೊಂದಿನ ಅದಕ್ಕೆ ತಕ್ಕ ಬೆಲೆ ತೆರಲೇಬೇಕಾಗುತ್ತದೆ ನೋಡು, ಭಗವಂತ ಹೇಳಲಿಲ್ಲವೇ? ‘ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮೀ ಯುಗೇಯುಗೇ’ ಅಂತ. ದಶಾವತಾರಿ ಆ ಭಗವಂತ ಯಾವ ರೂಪದಲ್ಲಿ ಬಂದು ಈ ಜಗತ್ತನ್ನ ಉದ್ಧರಿಸುತ್ತಾನೋ ಹೇಳೋಕ್ಕಾಗಲ್ಲ, ಅಲ್ಲವೇ!?’

****

ಒಂದು ಕಾಲದಲ್ಲಿ ನವಿಲೇಬ್ಯಾಣಕ್ಕೆ, ದೀಪಾವಳಿ ಹಬ್ಬದ ಹೊರತು. ಬೇರೆ ಸಮಯ ಯಾರೂ ಜಾನುವಾರು ಬಿಡುತ್ತಿರಲಿಲ್ಲ. ಸುತ್ತ ನಿಸರ್ಗ ನಿರ್ಮಿತ ಕತ್ತಾಳೆವಡ್ಡೇ ಭದ್ರಕೋಟೆ. ಅಕಸ್ಮಾತ್ ಜಾನುವಾರು ಮೇಯುತ್ತಿದ್ದರೆ ಅವನ್ನು ಹೊಡೆದುಕೊಂಡು ಹೋಗಿ ದೊಡ್ಡಿಗೆ ಕಟ್ಟುತ್ತಿದ್ದರು. ಆ ಬಗ್ಗೆ ಯಾರೂ ಚಕಾರವೆತ್ತುತ್ತಿರಲಿಲ್ಲ! ಶ್ರಾಯಕ್ಕನುಗುಣವಾಗಿ ಬದಲಾಗುತ್ತಿದ್ದ ಬ್ಯಾಣ ನೋಡುವುದೇ ಒಂದು ಚಂದ, ಮುಂಗಾರು ಬಿದ್ದರೆ ಸಾಕು, ಹುಲ್ಲು ಚಿಗುರೊಡೆದು ಇಡೀ ಬ್ಯಾಣಕ್ಕೆ ಬ್ಯಾಣವೇ ಹಸುರಹಾಸು.

ಮಳೆಗಾಲದಲ್ಲಿ ಕವಿಯುವ, ಮರುಕ್ಷಣದಲ್ಲೇ ಸರಿಯುವ ಮೋಡ. ಮರೆಯಿಂದ ಸೂರ್ಯ ಚೆಲ್ಲುವ ಫ್ಲಡ್‌ಲೈಟ್! ಕೆಲವೊಮ್ಮೆ ಇದ್ದಕ್ಕಿದಂತೆ ಮುಸುಕಿ ಹಾಡಹಗಲೇ ಕತ್ತಲು ಕವಿಸುವ ಕಾವಳದ ಪರದೆ. ಎಲ್ಲಕ್ಕಿಂತ ಹೆಚ್ಚಾಗಿ ತುಂತುರು, ಜಿನಗು, ಜಡಿಮಳೆ, ಗಾಳೀಯ ಭೋರ್ಗರಿತಕ್ಕೆ ಮೈಯೊಡ್ಡಿ ಮೋಟ್ಟುದ್ದದ ಹುಲ್ಲು ದಿನದಿನವೂ ಬೆಳೆಬೆಳೆದು, ಪಸರಿಸುವ ಅಚ್ಚಹಸುರು!

ಚಳಿಗಾಲ ಸುರಿವ ಹಿಮರಾಶಿಯಲ್ಲಿ ಅಡಗಿ, ಸೂರ್ಯ ಕಿರಣ ರಾಚುತ್ತಿದ್ದಂತೆ ಮಂಜು ಕರಗಿ ನಳನಳಿಸುವುದು ಪರಿ ಬೇರೊಂದು ಬಗೆ! ಹುಲ್ಲು ಹಾಸಿನ ಮೇಲೆ ಜೇಡ ನೇಯ್ದ ಬಲೆಯಲ್ಲಿ ಪ್ರತಿಫಲಿಸುವ ವರ್ಣರಂಜಿತ ಸೂರ್ಯ ಕಿರಣ! ಕಡುಬೇಸಿಗೆಯಲ್ಲಿ ಎದೆಯೆತ್ತರ ಬೆಳೆದ ಒಣಕರಡ. ಬೀಸು ಗಾಳಿಗೆ ಬಳಕುತ್ತಾ, ಬಾಗುತ್ತಾ, ಅವು ತೊಯ್ಯುವ ಪರಿ ದೂರದಿಂದ ನೋಡುವವರಿಗೆ ಕಣ್ಣಿಗೆ ತೆರೆತುಂಬುವ ತೆರೆತೇಯುವ ಕರಡದ ಕಡಲು!

ಕಾರ್ತಿಕಮಾಸದ ನವಿಲೇಬ್ಯಾಣದ ಸೊಬಗೇ ಬೇರೇ! ಸುತ್ತಮುತ್ತಲ ಗದ್ದೆಗಳಲ್ಲಿ ಬೆಳೆದ ಭತ್ತದ ತೆನೆ ಮೆಲ್ಲುತ್ತಾ, ಆಗಸದಲ್ಲೋಡುವ ಬೆಳ್ಮುಗಿಲ ಕಂಡು ಕೇಕೇ ಹಾಕುತ್ತಾ ಹಿಂಡು ಹಿಂಡಾಗಿ ಬ್ಯಾಣಕ್ಕೆ ಬಂದು ಗರಿ ಗೆದರಿ, ನಲಿಯುವ, ಮೈಮರೆಯುವ, ನರ್ತಿಸುವ… ‘ನವಾಲೆ ಬಂತಪ್ಪಾ ನವಾಲೆ… ಸೋಗೆಯ ಬಣ್ಣದ ನವಾಲೆ…!’ (ಉದುರಿಬಿದ್ದ ಗರಿಹೆಕ್ಕಿ, ಪಠ್ಯ ಪುಸ್ತಕ ಪುಟಗಳ ನಡುವೆ ಹುದುಗಿಸಿ ಮರಿ ಹಾಕೀತೇ? ಹಪಿಸುವ ಎಳೆಯರ ದಂಡು!) ನವಿಲುಗಳ ಸಂಭ್ರಮದ ಸಂಕೇತವಾಗಿ ಬ್ಯಾಣಕ್ಕೆ ಆ ಹೆಸರು ಬಂದಿರಬಹುದೇ!? (ನೋಡುಗರಿಗೆ ಅಪರೂಪವಾಗಿ ಈಗಲೂ ದೊರೆಯುವುದುಂಟು ಈ ಸೌಭಾಗ್ಯ!)

ದಶಕಗಳ ಹಿಂದೆ ಬೇಸಿಗೆ ಕೊನೆದಿನಗಳಲ್ಲಿ ನವಿಲೇಬ್ಯಾಣದ ಕರಡವನ್ನೇ ಸುತ್ತಲ ಗ್ರಾಮಸ್ಥರು ಕಡಿದು, ತಲೆಹೊರೆ ಹೊತ್ತು ಬ್ಯಾಣದಾಚೆ ನಿಲ್ಲಿಸಿದ್ದ ಎತ್ತಿನ ಗಾಡಿಗಳಿಗೆ ತುಂಬಿ ಕೊಂಡು ಹೋಗುತ್ತಿದ್ದದ್ದು ಸಾಮಾನ್ಯ ದೃಶ್ಯ. ಕರಡ ಹೇರುಹೇರಿದ ಎಂಟು-ಹತ್ತು ಗಾಡಿಗಳು ತುಂಬಿ ತಳುಕುತ್ತಾ, ವಾಲುತ್ತಾ ಸಾಲುಸಾಲಾಗಿ ಸಾಗುವ ದೃಶ್ಯ ಕಣ್ಣಿಗೊಂದು ಹಬ್ಬ.

ಹೀಗೆ ಹೇರಿಕೊಂಡ ಹೋದ ಕರಡ ಕೆಲವರು ಕುತ್ರಿಕಟ್ಟಿ, ಮಳೆಗಾಲದಲ್ಲಿ ಕೊಟ್ಟಿಗೆಯ ಜಾನುವಾರು ಕಾಲಡಿ ತಳಿಯುತ್ತಿದ್ದರು. ಮತ್ತೆ ಕೆಲವರು ಮನೆ ಮಾಡಿಗೆ ಹೊಚ್ಚುತ್ತಿದ್ದರು. ಹೆಂಚು ಬಳಕೆ ಕಡಿಮೆಯಿದ್ದ ಕಾಲವದು. ಮಲೆನಾಡ ಹೆಚ್ಚಿನ ಮನೆ ಅಡಿಕೆಸೋಗೆ ಇಲ್ಲಾ ಕರಡದ ಹೊದಿಕೆಯವು. ಮಳೆ, ಚಳಿಗಾಲದಲ್ಲಿ ಬೆಚ್ಚಗೆ, ಬೇಸಿಗೆಯಲ್ಲಿ ತಂಪಾಗಿರುತಿತ್ತು. ವರ್ಷ, ಎರಡು ವರ್ಷಕ್ಕೊಮ್ಮೆ ಮಾಡು ಹಿರಿದು ಹೊಸದಾಗಿ ಹೊಚ್ಚುವುದು ವಾಡಿಕೆ.

ಕರಡವೆಲ್ಲಾ ಕುಯ್ದಾದ ಮೇಲೆ ಊರವರ ಸಮಕ್ಷಮದಲ್ಲಿ ಬ್ಯಾಣದ ಕೂಳೆಗೆ ಗರಕು (ಬೆಂಕಿ) ಹಾಕುತ್ತಿದ್ದರು. ಹೀಗೆ ಮಾಡುವುದರಿಂದ ಬರುವ ಸಾಲಿನ ಹುಲ್ಲು ಸಮೃದ್ಧವಾಗಿ ಬೆಳೆಯುವುದೆಂಬದು ವಾಡಿಕೆ. ಅದು ಸತ್ಯವೂ ಹೌದು!

ಇಡೀ ಬ್ಯಾಣದ ಅಂಚಿನಲ್ಲಿದ್ದದ್ದು ಒಂದೇಒಂದು ಕಾಲುದಾರಿ. ಬೀಡಿ ಸೇದುವ ದಾರಿಹೋಕರು ಇಲ್ಲಾ ಕಿಡಿಗೇಡಿಗಳು ಗೀರಿದ ಬೆಂಕಿ ಕಡ್ಡಿ ಉರಿ ತಾಗಿ ಒಣಗಿದ ಕರಡ ಕರಾಳ ಹೊಗೆ ಕಾರುತ್ತಾ ಹತ್ತಿ ಉರಿಯುತ್ತಿತ್ತು, ‘ಅಯ್ಯೋಯ್ಯೋ ಬ್ಯಾಣಕ್ಕೆ ಬೆಂಕಿ ಬಿದಿದೆ…’, ‘ನಂದಿಸೋಕೆ ಬನ್ರೋ…’ ‘ಯಾರೋ ಪಾಪಿ ಬೆಂಕಿ ಹಾಕಿದ್ದು…? ಅವ್ರ ಕುಲ ನಾಶ್ನಾಗಿ ಹೋಗ್ಲಿ…’ ಒಂದೇ, ಎರಡೇ ನಾರಾರು ಬಗೆ ಹಿಡಿಶಾಪ! ಕೈಗೆ ಸಿಕ್ಕ ಲಕ್ಕಿ, ಕುನ್ನೇರಲೆ, ಹುಳುಚಪ್ಪು, ಮತ್ತಿ ಗಿಡಮರಗಳ ಹರೆಗೆಲ್ಲು ಅಂಕಲು ಮುರಿದು ಧಗಧಗಿಸುವ ಬೆಂಕಿ ಆರಿಸಲು ಉರಿ ಬಿಸಿಲಲ್ಲೇ ಹೋರಾಡುತ್ತಿದ್ದರು.

ಆದರೆ ಅಗ್ನಿದೇವನ ಕೆನ್ನಾಲಿಗೆ ಮುಂದೆ ಹುಲಮಾನವ ಸಾಹಸ ಯಾವ ಲೆಕ್ಕ? ನಾಲ್ಕು ಹಗಲು, ಮೂರು ರಾತ್ರಿ, ಉರಿಯುತ್ತಾ. ಹಸುರು ನಳನಳಿಸುತ್ತಿದ್ದ ಇಡೀ ನವಿಲೇಬ್ಯಾಣ ಸುಟ್ಟು ಕರಕಲೋಕರಕಲು. ವಾರ ಕಳೆದರೂ ಅಲ್ಲಲ್ಲಿ ಹೊಗೆ. ಅರೆಬೆಂದ ಹಾವು, ಮೊಲ, ಜಿಂಕೆ, ಹಂದಿ, ಹುರಸಲ, ಕೆಂಬೂತ, ಪೊದೆ, ಗೂಡಿನಲ್ಲಿದ್ದ ಕೇಳರಿಯದ ನೂರಾರು ಬಗೆ ಪ್ರಾಣಿ-ಪಕ್ಷಿಗಳ ಅವಸಾನ, ಸ್ಮಶಾನ ಕುರುಕ್ಷೇತ್ರ!

‍ಲೇಖಕರು Avadhi

May 24, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: