ಸಮುದ್ಯತಾ ಕಂಜರ್ಪಣೆ
ನಿನ್ನೆ ಚಾಕಲೇಟು ನೀಡಿದ ಆಂಟಿ,
ಆಟವಾಡಲು ಕರೆದ ನೆರೆಬೀದಿಯ ಅಕ್ಕ,
ಕೆನ್ನೆ ಚಿವುಟಿದ ತಾತ
ಕಾಣಿಸಲಿಲ್ಲ ಇಂದು
ಕಲ್ಲು ಮಣ್ಣು ಧೂಳು ಬೆಂಕಿಯಷ್ಟೇ
ಬಾಗಿಲು ಕಿಟಕಿ ತೆಗೆದಾಗ ಕಂಡದ್ದು
ರಾತ್ರಿ ಹಗಲೆನ್ನದೆ ತುಂಬಿದ ಚೀರಾಟ
ಕತ್ತಲಲ್ಲೂ ಬೀದಿಯೆಲ್ಲ ಹೊಳೆಯುವಷ್ಟು
ಬೆಂಕಿಯ ಜ್ವಾಲೆ
ಕಿಟಕಿಯಿಂದ ಇಣುಕಿ ನೋಡುತ್ತಿತ್ತು
ಮಗು..
ಮುರಿದ ಸೈಕಲ್, ಟೆಡ್ಡಿಬೇರಿನ ಕತ್ತಿನ ರಿಬ್ಬನ್, ಸುಟ್ಟ ಕಾರಿನ ಚಕ್ರ ಜೊತೆಗೆ ಉರಿಯುತ್ತಿದ್ದ ಕೈ ಕಾಲು ಸಹ..
ಬಾ ಒಳಗೆ… ಮಗುವ ಕರೆದು ಕಿಟಕಿ ಮುಚ್ಚಿದಳು ಅಮ್ಮ..
ನಿಟ್ಟುಸಿರು ದಿನ ನಿತ್ಯದ ಕತೆ…
ಒಪ್ಪ ಓರಣವಾದ ಕೋಣೆ,
ಜೋಡಿಸಿಟ್ಟ ಬಣ್ಣದ ಪೆನ್ಸಿಲ್ಲುಗಳು
ಮಂಚದ ಮೇಲೆ ಸಾಲಾಗಿ ಕೂತ ಗೊಂಬೆಗಳು
ಚೀಲದಲಿ ತುಂಬಿದ್ದ ಗೊಂಬೆ ಬಟ್ಟೆಗಳು
ಏನಿವತ್ತು..? ಎಲ್ಲ ಜೋಡಿಸಿದ್ದೀ ?
ಗೊಂಬೆಗಳ ನಡುವೆ ಕುಳಿತ
ಗೊಂಬೆಯ ಕೇಳಿದಳು ಅಮ್ಮ..
ಪ್ಯಾಕಿಂಗ್ ಮಾಡುತ್ತಿದ್ದ ಮಗು ತಿರುಗಿ ಹೇಳಿತು…
ನೀನೂ ಎಲ್ಲ ಒಂದೇ ಕಡೆ ಜೋಡಿಸ್ಕೋ…
ನಾಳೆ ನಮ್ಮ ಮನೆಯಲ್ಲೂ
ಕಲ್ಲು ಮಣ್ಣು ಧೂಳಿನ ನಡುವೆ
ಆಟ ಸಾಮಾನು ಕಳೆದು ಹೋದರೆ
ಹುಡುಕೋದು ಹೇಗೆ…?
ಗೊಂಬೆಗಳ ನಡುವೆ ಕುಳಿತ
ಗೊಂಬೆ – ಸಾಲುಗಳು ಮನಮುಟ್ಟಿದವು.
ಓ…!! ಮಕ್ಕಳನ್ನೂ ತಟ್ಟಿದ ತಲ್ಲಣ.. ಸೂಕ್ಷ್ಮವಾಗಿ ಕಟ್ಟಿರುವಿರಿ ಕವಿತೆಯನ್ನು…