ಶರತ್ ಕಲ್ಕೋಡ್ ಕಾದಂಬರಿ- ಐರಾವತವನ್ನೇರಿ 7

‘ನಾನು ನಿಮ್ಮ ಕಾಲ್ ರಿಸೀವ್ ಮಾಡದಿದ್ರೆ ತೋಟದಲ್ಲಿ ಕೃಷಿ ಮಾಡ್ತಾ ಇದ್ದೇನೆ ಅಂದುಕೊಳ್ಳಿ’ ಎನ್ನುವ ಶರತ್ ಕಲ್ಕೋಡ್ ಸಾಹಿತ್ಯ ಕೃಷಿಯಷ್ಟೇ ಮಣ್ಣಿನೊಡನಾಡುವುದನ್ನೂ ಪ್ರೀತಿಸಿದ್ದಾರೆ. ಸಾಹಿತ್ಯ ಕೃಷಿಯ ಬಗ್ಗೆ ಮಾತ್ರ ಓದುಗರಿಗೆ ಗೊತ್ತಿರುವ ಇವರು ಮಲೆನಾಡಿನ ಮಡಿಲಿನವರು.

ಕನ್ನಡ ಸ್ನಾತಕೋತ್ತರ ಪದವಿ ನಂತರ ತಮ್ಮ ಬರವಣಿಗೆಯ ಶಕ್ತಿಯನ್ನೇ ನಂಬಿ ಪತ್ರಿಕೋದ್ಯಮಕ್ಕೆ ಎಂಟ್ರಿ ಕೊಟ್ಟವರು. ಸಂತೋಷ, ತರಂಗ, ಸುಧಾ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.

ಮಾಸ್ತಿ ಪ್ರಶಸ್ತಿ ವಿಜೇತ ಶರತ್ ಕಲ್ಕೋಡ್ ಅವರ ಹೊಸ ಕಾದಂಬರಿ ಇಂದಿನಿಂದ ಪ್ರತಿ ದಿನವೂ ಪ್ರಕಟವಾಗುತ್ತದೆ.

ಮೊದಲ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಎರಡನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

ಮೂರನೆಯ ಕಂತು ಇಲ್ಲಿದೆ- ಕ್ಲಿಕ್ಕಿಸಿ

ನಾಲ್ಕನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಐದನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

ಆರನೆಯ ಕಂತು ಇಲ್ಲಿದೆ-ಕ್ಲಿಕ್ಕಿಸಿ

7

ಉರಿಯುವ ಮನೆಯಲ್ಲಿಗಳ ಹಿರಿದದ್ದೇ ಲಾಭ!!

ಇಲ್ಲಿ ನೋಡಿದರೆ ತೇಲಪ್ಪ, ಮಾಡಿಗೆ ಹೆಂಚು ಹೊದಿಸಿ ಸುಟ್ಟಿಟ್ಟಗೆ ತಂದು ಗೋಡೆ ಕಟ್ಟುವ ಕಾರ್ಯ ಆರಂಭಿಸಿದ್ದಾನೆ! ಸಹಿಸಲು ಸಾಧ್ಯವೇ? ಶೇಖರಪ್ಪ ಮತ್ತು ತರ್ಲೆಗಾರರ ಕೋಪ ನೆತ್ತೇಗಿರಿತು.

‘ದೂರು ಸಲ್ಲಿಸಿದರೂ ಕ್ಯಾರೇಯೆನ್ನುವವರಿಲ್ಲವೆಂದ್ಮೇಲೆ ನಾವೂ ಯಾಕೆ ಸುಮ್ಮನೆ ಕೂರಬೇಕು? ಅಳತೆ ಮಾಡಿ, ಬಾಂದ್ ಕಲ್ಹಾಕಿ ಸೈಟೋ, ಮನೆನೋ ನಿರ್ಮಿಸಬಾರದು?’ ಒಬ್ಬ ಹಾಕಿದ ಲಾಪಾಯಿಂಟಿಗೆ ನೆರೆದವರೆಲ್ಲ, ‘ಹೌದು… ಅದೇ ಕರೆಕ್ಟ್’ ತಲೆದೂಗಿದರು.

ಕೂಡಲೇ ಇನ್ನೊಬ್ಬ, ‘ಒಂದ್ವೇಳೆ ಸರ್ಕಾರದವರು ಬಂದು ಕಿತ್ಹಾಕಿದರೂ ಅನ್ನಿ, ನಮ್ಮದರ ಜೊತೆ ತೇಲಪ್ಪಂದೂ ಕೀಳಬೇಕಲ್ಲ. ಅಲ್ಲಿಗೂ ನಮ್ಮ ಹಠವೇ ಗೆದ್ದಂತಾಗುತ್ತಲ್ಲವೇ!?’ ಸೋತೂಗೆದ್ದಂತಾಗುವ ಈ ಪ್ಲಾನನ್ನು ಒಕ್ಕೊರಲಿಂದೆಲ್ಲರೂ ಹೌದೌದೆಂದು ಸಮ್ಮತಿಸಿ ಯೋಜನೆ ಕಾರ್ಯಗತಗೊಳಿಸಲು ಅಖಾಡ ಸನ್ನದ್ಧವಾಯಿತು.

ನಾಣೀಭಟ್ಟರೂ ಈ ಹೋರಾಟದಲ್ಲಿ ಧುಮುಕಿಯೇ ಬಿಟ್ಟರು! ಸಿಕ್ಕಿದರೆ ಒಂದು ಸೈಟ್! ಉರಿಯುವ ಮನೆಯಲ್ಲಿಗಳ ಹಿರಿದದ್ದೇ ಲಾಭ!! ತೇಲಪ್ಪ ಕಟ್ಟುತ್ತಿದ್ದ ಮನೆ ಪಕ್ಕದಲ್ಲೇ ತಮ್ಮ ಸೈಟಿನ ಬಾಂದ್ ನೆಡಲು ಹೇಳಿದರು, ಒಂದು ವೇಳೆ ‘ಏನಿದು ಭಟ್ಟರೇ?’ ತೇಲಪ್ಪ ಕೇಳಿದರೆ, ನಿನ್ನ ಹಿತ ದೃಷ್ಟಿಯಿಂದಲೇ ಮಾಡಿದ್ದು ಮಾರಾಯಾ? ನೆರೆಯವನಾಗಿ ನಾನು ಇರುವುದು ಒಳ್ಳೇಯದೋ? ಬೇರೆಯವರು ಬರುವುದು ಒಳ್ಳೇಯದು? ಬೇಕಾದರೆ ಆ ಸೈಟ್ ನಿನಗೆ ಮಾರಲು ನಾನು ರೆಡಿ! ಒಟ್ಟಿನಲ್ಲಿ ನಿನ್ನ ಹಿತ, ವಿಶ್ವಾಸ ನನಗೆ ಮುಖ್ಯ’ ಅಂತ್ಹೇಳಿ ಸಂಕಷ್ಟದಿಂದ ಪಾರಾಗುವುದು ನಾಣೀಭಟ್ಟರ ಹುನ್ನಾರ! ಒಂದೇ ಕಲ್ಲಿಗೆ, ಎರಡು ಹಕ್ಕಿ ಹೊಡೆವ ತಮ್ಮ ಜಾಣತನಕ್ಕೆ ತಾವೇ ಬೀಗಿದರು!!

ಬೆಳಗಾಗುತ್ತಲೇ ನವಿಲೇಬ್ಯಾಣದ ತುಂಬ ಜನವೋಜನ! ಕತ್ತಿ, ಹಾರೆ, ಸಬ್ಬಲ್ಲು, ಕೊಡಲಿ, ಪಿಕಾಸಿ, ಗೂಟ- ಒಬ್ಬೊಬ್ಬರ ಕೈಯಲ್ಲಿ ಒಂದೊಂದು ಹತಾರಿ. ಕೆಲವರ ತಲೆ ಮೇಲೆ ಸೈಜ್‌ಗಲ್ಲು. ತೇಲಪ್ಪ ಕಟ್ಟುತ್ತಿದ್ದ ಮನೆ ಅಕ್ಕಪಕ್ಕದಲ್ಲಿ ಮೂವತ್ತು-ನಲವತ್ತರ ಸೈಟ್‌ಮಾಡಿ ಬಾಂದ್‌ಕಲ್ ನೆಟ್ಟರು.

ದಿನವೀಡಿ ನಡೆದ ಈ ಕಾರ್ಯ ಗಮನಿಸಿದ ಹಲವರು ಮಾರನೇದಿನ ತಾವೂ ಅಳತೆ ಮಾಡಿ, ಬಾಂದ್ ನೆಟ್ಟು ತಮ್ಮ ಸೈಟ್ ಹಕ್ಕು ಸ್ಥಾಪಿಸಿ ಸಂಭ್ರಮಿಸಿದರು. ಹೆದ್ದಾರಿ ಪಕ್ಕ ನಡೆಯುತ್ತಿದ್ದ ಈ ಹಗರಣ ಅಧಿಕಾರಿಗಳ ಕಣ್ಣಿಗೆ ಬೀಳದಿರಲು ಸಾಧ್ಯವೇ? ಫಾರೆಸ್ಟ್ ಗಾರ್ಡ್, ರೆವಿನ್ಯೂ ಇನ್‌ಸ್ಪೆಕ್ಟರ್ ತಡ ಮಾಡದೇ ಇಲಾಖಾ ಮೇಲಾಧಿಕಾರಿಗಳಿಗೆ ಮೊಬೈಲ್ ಹಚ್ಚಿ ‘ನವಿಲೇಬ್ಯಾಣದಲ್ಲಿ ಭಾರೀ ಗಲಾಟೆ, ಹೊಡೆದಾಟ ಆಗುವ ಸಂಭವವಿದೆ’ ಎಚ್ಚರಿಸಿದರು.

ವಿಷಯ ತಿಳಿದ ಎಂಎಲ್‌ಎ ಸಾಹೇಬರು, ಜಿಲ್ಲಾಧಿಕಾರಿಗೆ ಫೋನ್ ಮಾಡಿ, ತಮಗೆ ಬಿಡುವಿಲ್ಲವೆಂದೂ, ಆದಷ್ಟು ಬೇಗ ಸಮಸ್ಯೆ ಬಗೆಹರಿಸಿಯೆಂದರು. ಸನ್ನಿವೇಶದ ಗಂಭೀರತೆ ಅರಿತ ತಾಲೂಕಿನ ಮುಖ್ಯಾಧಿಕಾರಿಗಳೂ, ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ, ಖುದ್ದು ಸ್ಥಳ ಪರಿಶೀಲಿಸುವುದಾಗಿಯೂ, ಆ ತನಕ ಯಾವುದೇ ರೀತಿ ಕೆಲಸಕಾರ್ಯ ಮುಂದುವರಿಸಬಾರದೆಂದು ಆದೇಶಿಸಿದರು.

ಕೊನೆಗೊಂದು ದಿನ:

ಜಿಲ್ಲಾಧಿಕಾರಿಗಳು ಸ್ಥಳಪರಿಶೀಲನೆಗೆ ಬರುವ ದಿನಾಂಕ ನಿರ್ಧರಿಸಿ, ಅಂದು ಊರಿನ ಸಮಸ್ತ ನಾಗರಿಕರು ಹಾಜರಿರಬೇಕೆಂದು ಆದೇಶಿಸಿದರು. ನಿಗದಿತ ದಿನ ಜಿಲ್ಲಾಧಿಕಾರಿಗಳು, ಜಿಲ್ಲಾಪೊಲೀಸ್ ವರಿಷ್ಠರೊಂದಿಗೆ ಲೇಟಾಗಿ ಆಗಮಿಸಿದಾಗ ಮಟಮಟ ಮಧ್ಯಾಹ್ನ. ಅವರ ಜೊತೆ ತಾಲೂಕು ಮಟ್ಟದ ಅರಣ್ಯ, ರೆವಿನ್ಯೂ ಅಧಿಕಾರಿಗಳೂ, ನೌಕರರೂ ಅಲ್ಲದೆ ಪಂಚಾಯ್ತಿ ಅಧ್ಯಕ್ಷ, ಸದಸ್ಯರು, ಸಿಬ್ಬಂದಿ, ಊರಿನ ನಾಗರಿಕರೂಂದಿಗೆ ದನ ಕಾಯುವವರು, ಪೋಲಿ ಹುಡುಗರು, ಸಮಸ್ತರೂ ಜಮಾಯಿಸಿದರು.

ಕೆಲವರಂತೂ ತೇಲಪ್ಪನ ಕೊಟ್ಟೆ ಏರಿಸಿಯೇ ಬಂದಿದ್ದರು. ಅಧಿಕಾರಿಗಳು ಹೆಚ್ಚಿನವರು ಮಾಸ್ಕ್ ಧರಿಸಿದ್ದರೆ, ಊರಿನವರು ಕೆಲವರು (ಕಾಟಾಚಾರಕ್ಕೆ) ಮುಖಕ್ಕೆ ಕರ್ಚೀಫ್, ಮತ್ತೆ ಹಲವರು ಹೆಗಲ ಮೇಲಿದ್ದ ಟವಲ್ಲನ್ನೇ ಮೂಗಿಗೆ, ಬಾಯಿಗೆ ಅಡ್ಡ ಹಿಡಿದಿದ್ದರು(ಕೊರೊನಾಕ್ಕಿಂತ ಪೊಲೀಸರ ಭಯ!).

ನವಿಲೇಬ್ಯಾಣದಲ್ಲಿ ತಲೆಯೆತ್ತಿದ್ದ ವಿವಾದಿತ ಕಟ್ಟಡದ ನಿರ್ಮಾಣ ಹಾಗೂ ಬಾಂದ್‌ಕಲ್ಲು ನೆಟ್ಟ ಜಾಗ ಪರಿಪರಿಶೀಸಿ ಜಿಲ್ಲಾಧಿಕಾರಿಗಳು, ಮುಂದೆ ಸಾಗಿ ನಂದಿ, ಹಲಸು, ಮಾವು ಧೂಪ ನೋಡಿ ಗೋಳಿಮರದ ಕೊಂಬೆ ರಂಬೆಗಳಲ್ಲಿ ಕಟ್ಟಿ, ಬಿಟ್ಟು ಹೋದ ಹೆಜ್ಜೇನಿನ ಖಾಲಿತಟ್ಟು ವೀಕ್ಷಿಸಿ, ಮುಂದುವರಿದು ರಾಕ್ಷಸಾಕಾರದಲ್ಲಿ ಬೆಳದು ನಿಂತಿದ್ದ ಬಿದಿರುಮೆಳೆ, ಅದರ ಉದ್ದಕ್ಕೂ ಬೆಳೆದ ಸೀಗೆಬಲ್ಲೆಬುಡದ ಕೆಂಜಿಗೆವುಡಿ ಮರೆಯಲ್ಲಿ ಅಡಗಿದ್ದ ಹುಲಿಕಡ್ಜಲಕೊಟ್ಟೆ ಕಂಡು ‘ಏನದು?’ಎಂದು ವಿಚಾರಿಸಿ, ಹುಳಗಳ ವರ್ಣಮಯಕೊಟ್ಟೆ ಕಲಾಗಾರಿಕೆ, ಕೌಶಲಕ್ಕೆ ತಲೆ ತೂಗಿದರು. ಸುತ್ತಮುತ್ತ ನೆರೆದಿದ್ದ ಅಧಿಕಾರಿವರ್ಗ, ನಾಗರಿಕರನ್ನೂ ಕೂಡಿ ಮತ್ತೆ ಮರಳಿ ವಿವಾದಗ್ರಸ್ತ ಸ್ಥಳದತ್ತ ಹೆಜ್ಜೆ ಹಾಕುತ್ತಿದ್ದಂತೆ…

ಕಿಡಿಗೇಡಿಗಳು ಯಾರೋ ಕಡ್ಜಲಕೊಟ್ಟೆಗೆ ಧಬಧಬನೆ ಕಲ್ಲು ಬೀರಬೇಕೇ…!?

ತಗೋಳ್ಳಿ, ಕಡ್ಜಲಗಳು ಹುಲಿಯಂತೆ ಕೆರಳಿ ಭೋರ್ಗರೆಯುತ್ತಾ ಹಿಂಡುಹಿಂಡಾಗಿ ಬೀಡೆದ್ದು, ಸಿಕ್ಕಸಿಕ್ಕವರಿಗೆ ಮುಖಮಾರಿ ನೋಡದೇ ಬಾರಿಸತೊಡಗಿದವು. ‘ಅಯ್ಯಯೋ ಬೀಡೆದ್ದು ಹೊಡೀತಾವಲ್ಲೋ…’ ‘ರಾಮ…ರಾಮ…’ ‘ಅಯ್ಯೋ ಶಿವನೇ…’ ‘ತಲೆ ಮೇಲೆ ಟವಲ್ ಬೀಸಿಕೊಳ್ರೋ…’ ‘ಇವೆಲ್ಲಿದ್ದವೋ…?’ ‘ಕೊಟ್ಟೆಗೆ ಕಲ್ಲು ಹೊಡೆದಿದ್ದು ಯಾರು ಮಾರಾಯಾ…?’ ಕಂಗೆಟ್ಟು ಚದುರಿ ಓಡುತ್ತಾ ಎಲ್ಲರೂ ದಿಕ್ಕಾಪಾಲಾದರು.

ಜಿಲ್ಲಾಧಿಕಾರಿಜೊತೆ ಅಧಿಕಾರಿಗಳೂ ‘ಓಡಿ ಸಾರ್… ಬೇಗ ಓಡಿ…’ ‘ಅವುಗಳ ಹೊಡೆತಕ್ಕೆ ಸಿಕ್ರೆ ಸಾಯೋದೇಸೈ’ ‘ಕಾರೋ, ವ್ಯಾನೋ ಮೊದಲು ಸಿಕ್ಕಿದ್ದನ್ನ ಹತ್ತಿ ಜಾಗಖಾಲಿ ಮಾಡಿ ಸಾರ್…’ ಸಲಹೆ, ಸೂಚನೆ ಬೊಬ್ಬೆ ಹೊಡೆಯುತ್ತಾ. ಕೈಯಲ್ಲಿದ್ದ ಫೈಲ್‌ ಎದೆಗವಚಿಕೊಂಡು ಸಿಕ್ಕಿಸಿಕ್ಕಿದ ವಾಹನವೇರಿ ಎವೆಯಿಕ್ಕುವುದರದಲ್ಲೇ ಮಾಯವಾದರು.

ಜನರು ಕುಂಯೋರ‍್ರೋ ಅರುಚುತ್ತಾ, ಮನೆ ಕಡೆ ಕಾಲು ಕಿತ್ತರು. ಜನಜಂಗುಳಿ ಗೌಜು ಗದ್ದಲದಿಂದ ಮೊರೆಯುತ್ತಿದ್ದ ಬ್ಯಾಣ, ಕ್ಷಣಾರ್ಧದಲ್ಲೇ ಲಾಠೀ ಛಾರ್ಜಾದ ಸಿಟಿಮಾರ್ಕೆಟಿನಂತೆ ಬಣಬಣ…….!

ಕೊಟ್ಟೆಗೆ ಕಲ್ಲು ಬೀರಿ ಹುಲಿಕಡ್ಜಲಗಳನ್ನು ಕೆಣಕಿ ಹುಚ್ಚೆಬ್ಬಿಸಿದವರು ಯಾರು?

*’ನಾನು ಮನೆ ಕಟ್ಟಬಾರದು ಅಂತ ಹೊಟ್ಟೆಕಿಚ್ಚಿನವರು ಮಾಡಿದ ಕೆಲಸ. ಅವರ‍್ಯಾರು ಅಂತ ಗೊತ್ತು. ಸುಮ್ಮನೇ ಬಿಡೋ ಮಗ ಅಲ್ಲಾ ನಾನು. ಮನೆ ಕಟ್ಟೇಕಡ್ತೀನಿ. ಅದೇನೇನು ಕಡಿತಾರೋ ನೋಡೇಬಿಡ್ತೀನಿ…’ ಕೆರಳಿದ ತೇಲಪ್ಪನಿಗೆ ಸೇಡು ತೀರಿಸಿಕೊಳ್ಳುವ ಛಲ.

*’ತೇಲಪ್ಪನದೇ ಚಿತಾವಣೆ. ಹುಳಗಳು ಕಚ್ಚಿದರೆ, ವಿಚಾರಣೆ ಪಚಾರಣೆ ನಡೆಸದೇ ಬಂದವರೆಲ್ಲಾ ಹೆದ್ರಿ ಓಡ್ತಾರಲ್ಲಾಂತ ಹುನ್ನಾರು. ಯಾರಿಗೋ ಕುಡಿಸಿ ಮಾಡ್ಸಿಸಿದ ಕೆಲಸ, ಏನ್ ಮಾಡೋಕೂ ಹೇಸುವವನ್ನಲ್ಲ…’ ವಿರೋಧಿ ಬಣದವರ ಆಪಾದನೆ.

*’ಎರಡೂ ಪಾರ್ಟಿ ಬಡ್ಡೀಮಕ್ಕಳು, ಇನ್ನಷ್ಟು ಕಚ್ಚಾಡಿಕೊಳ್ಳುತ್ತಿರಲಿ, ಮಜಾ ತೆಗೆದುಕೊಳ್ಳೋಕ್ಕಾಗುತ್ತೆ ಅಂತ ಕಿತಾಪತಿಗಳ್ಯಾರದೋ ಕೈಚಳಕ…’ ಈ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲವೆಂಬುದು ಕೆಲವರ ಅಂಬೋಣ!

*’ಎಡಬಿಡದೇ ಅಪಾರ ಹಾನಿಗೈಯುತ್ತಿರುವ ಮಾನವನ ಸ್ವಾರ್ಥಕ್ಕೆ, ಕೆರಳಿ ನಿಸರ್ಗ ಕಡ್ಜಲರೂಪದಲ್ಲಿ ನೀಡಿದ ಎಚ್ಚರಿಕೆ, ಇದರಿಂದ ಪಾಠ ಕಲಿಯದಿದ್ದರೆ ಮುಂದಿನ್ನೂ ಅಪಾಯ ಕಟ್ಟಿಟ್ಟ ಬುತ್ತಿ! ನೋಡಿ ಬೇಕಾದ್ರೆ…’ ಪರಿಸರ ಪ್ರೇಮಿಗಳ ವಾದ.

* ಚಳುವಳಿಗಾರ ಶೇಖರಪ್ಪ ನಡೆಸಿದ ಹುನ್ನಾರ….

*ದೇವಸ್ಥಾನಕ್ಕೆ ಬಂದು ಗೋಪಾಲಸ್ವಾಮಿ ದರ್ಶನ ಪಡೆದು, ತೀರ್ಥಪ್ರಸಾದ ಸ್ವೀಕರಿಸುವ ಭಕ್ತರಿಗೆ, ಅರ್ಚಕ ಶೇಷಪುರಾಣಿಕರು ವ್ಯಾಖ್ಯಾನಿಸುವ ಬಗೆಯೇ ಬೇರೆ:

‘ಎಲ್ಲಾ ಈ ಭಗವಂತನ ಲೀಲೆಕಣ್ರೀ. ಸಿಕ್ಕಸಿಕ್ಕದವ್ರೆಲ್ಲಾ ಗೋಮಾಳ ಗೆಬರಿ ನುಂಗೋಕೆ ಹೊರಟ ದುಷ್ಟರನ್ನ ಸ್ವಾಮಿ ಸುಮ್ನೆ ಬಿಡ್ತಾನಾ? ಎಷ್ಟಂದರೂ ಅವನೂ ಗೋಪಾಲಕನಲ್ಲವೇ? ಗೋವನ್ನ, ಗೋಮಾಳ ರಕ್ಷಿಸೋದು ಆದ್ಯ ಕರ್ತವ್ಯ ತಾನೇ? ಅದಕ್ಕೆ ಹುಲಿಕಡ್ಜಲ ರೂಪದಲ್ಲಿ ಬಂದು ಯದ್ವಾತದ್ವಾ ಹೊಡ್ದು ಬುದ್ಧಿ ಕಲಿಸಿದ್ದು. ಗೀತೆಲ್ಲೀ ಅವ್ನೇ ಹೇಳ್ಲಿಲ್ವಾ? ಧರ್ಮ ಸಂಸ್ಥಾಪನಾರ್ಥಯಾ, ಸಂಭವಾಮಿ ಯುಗೇಯುಗೇ ಅಂತಾ…’

****

ವಾರ ಕಳೆಯುವುದರೊಳಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಮ್ಮೂರಿಗೆ ಎರಡು ಆದೇಶ ಜಾರಿಯಾದವು.

ಮೊದಲ ಆದೇಶ, ದೂರುದಾರಾರು ಸಲ್ಲಿಸಿದ್ದ ಮನವಿ ಅರ್ಜಿಗೆ ಉತ್ತರ:

‘ಪರ್ಮಿಟ್‌ಯಿಲ್ಲದೇ ಮದ್ಯದ ವ್ಯಾಪಾರ ನಡೆಸುತ್ತಿರುವ ಬಗ್ಗೆ ನೀವು ಸಲ್ಲಿಸಿರುವ ದೂರು ತಲುಪಿ ಪರಿಶೀಲಿಸಲಾಗಿದೆ. ಕೂಡಲೇ ಮದ್ಯದ ವ್ಯಾಪಾರ ತಡೆ ಹಿಡಿಯುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಆದೇಶಿಸಲಾಗಿದೆ, ಅಲ್ಲದೇ ಸೂಕ್ತ ವಿಚಾರಣೆ ನಡೆಸಿ, ವರದಿ ಸಲ್ಲಿಸಲು ಹೇಳಲಾಗಿದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು.’

ಎರಡನೇ ಆದೇಶ ಜಾರಿಯಾದದ್ದು ಬ್ಯಾಣದಲ್ಲಿ ನೆಟ್ಟ ಬೋರ್ಡ್ ಬರಹ:

ಇದು ನಿಷೇಧಿತ ಪ್ರದೇಶ

‘ನವಿಲೇಬ್ಯಾಣ ಈ ಮೊದಲೇ ನಕಾಶೆಯಲ್ಲಿ ನಮೂದಿತ ಸುರಕ್ಷಿತ ಗೋಮಾಳ ಪ್ರದೇಶ. ಈಗಾಗಲೇ ಅತಿಕ್ರಮಿಸಿ ಕಟ್ಟುತ್ತಿರುವ ಕಟ್ಟಡ, ಸೈಟ್, ಬಾಂದ್ ಕಲ್ಲು ಕೂಡಲೇ ತೆರವು ಗೊಳಿಸಬೇಕು. ಮುಂದೆ ಯಾರೂ ಆತಿಕ್ರಮಿಸಬಾರದು. ಆಜ್ಞೆ ಮೀರಿ ಅತಿಕ್ರಮಿಸುವವರನ್ನು ಶಿಕ್ಷೆಗೆ ಗುರಿಪಡಿಸಲಾಗುವುದು!

****

ಜಿಲ್ಲಾಧಿಕಾರಿಗಳ ಎರಡೂ ಆದೇಶಗಳ ಜೆರಾಕ್ಸ್ ನೊಂದಿಗೆ ಸೂಟ್‌ಕೇಸ್ ಹಿಡಿದು, ರಾತ್ರೋ ರಾತ್ರಿ ತೇಲಪ್ಪ ಬೆಂಗಳೂರಿಗೆ ಹೋಗುವ ಐರಾವತವನ್ನೇರಿದ…

{ ಮುಗಿಯಿತು }

‍ಲೇಖಕರು Avadhi

May 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: